Article

ಮನೆ ಮತ್ತು ಮನಗಳ ಹೆಣ್ಣ ಚಾರಿತ್ರಿಕ ಕಥನ ‘ನಾನು ಕಸ್ತೂರ್‌’

ಕಥನಕ್ಕೆ ಹಲವು ನಿರೂಪಣೆಯ ಹಾದಿಗಳಿರುವಂತೆ ಜೀವನ ಕಥನಕ್ಕೂ ಹಲವು ಬಗೆಯ ನಿರೂಪಣೆಯ ಕ್ರಮಗಳಿವೆ. ವ್ಯಕ್ತಿ ಕಥನಗಳನ್ನ ರೂಪಿಸುವ ಬರವಣಿಗೆಗಳ ಕ್ರಮಕ್ಕೂ ಮಹಾವ್ಯಕ್ತಿಗಳ ಜೀವನ ಕಥನಗಳನ್ನ ನಿರೂಪಿಸುವ ಕ್ರಮಕ್ಕೂ ವ್ಯತ್ಯಾಸಗಳಿವೆ.ಅತೀತ ಗುಣಗಳಿಂದ ಆದರ್ಶಗಳ ಆವರಣಗಳಿಂದ ತುಂಬಿಕೊಳ್ಳುವ ಮಹಾವ್ಯಕ್ತಿಗಳ ಜೀವನ ಕಥನಗಳು ಸಾಮಾನ್ಯನ ಸಮಾಜದೆದುರು ಪವಾಡ ಪುರುಷರ ಕಥೆಗಳಂತೆ ,ಕೈಗೆಟುಕದ ಕಲ್ಪನೆಗಳಂತೆ ಕಾಣುವುದೇ ಹೆಚ್ಚು.! ಜನಪ್ರಿಯವಾದ ಇಂತಹ ನಿರೂಪಣಾ ನೆಲೆಯನ್ನ ಬಿಟ್ಟು ಡಾ.ಎಚ್.ಎಸ್.ಅನುಪಮಾ ಅವರು ‘ನಾನು ಕಸ್ತೂರ್’ ಜೀವನ ಕಥನವನ್ನ ಮಹಾತ್ಮನ ನೆರಳಿನೊಂದಿಗೆ ಕೊರಳಿನೊಂದಿಗೆ ಸಾಗಿಯೂ ಸಾಮಾನ್ಯರ ಕುಟುಂಬಗಳ ಸರಳ ದನಿಗಳಲ್ಲಿಯೇ ಗಟ್ಟಿಗೊಳಿಸಿದ್ದಾರೆ.ಇದು ಒಬ್ಬ ಹೆಣ್ಣ ಕಥನವಾದರೂ ತನ್ನ ಸಾಮಾಜಿಕ ಮತ್ತು ನೈತಿಕ ನಿಲುವಿನ ವಿಧಾನಗಳಿಂದ ಭಾರತೀಯ ಮಹಿಳೆಯರ ಕುಟುಂಬ ಸಂಕೇತಕ್ಕೂ ಸಾಕ್ಷಿಯಂತಿದೆ.
ದಿಟ್ಟ ಹೆಣ್ಣೊಬ್ಬಳು ತ್ಯಾಗಮಯಿ ತಾಯಾಗುವ,ದಿವ್ಯ ಅನುಭವಗಳ ಅಜ್ಜಿಯಾಗುವ ಈ ಜೀವನ ಕಥನದ ಕೇಂದ್ರ ಕುಟುಂಬವೇ ಆದರೂ ಇದು ಆ ಕೇಂದ್ರದಿಂದ ಜಾರುತ್ತಾ ಹೋಗುವ ತಲ್ಲಣಗಳ ವಿವರಗಳಿಂದಾಗಿ ಆ ಕಾಲದ ಅಲಕ್ಷಿತ ಸ್ತ್ರೀ ಭಾವನೆಗಳ ಹಾಗೂ ಸ್ತ್ರೀ ಸಮುದಾಯಗಳ ದಟ್ಟವಾದ ಧಾರ್ಮಿಕ ಹಾಗೂ ರಾಜಕೀಯ ಸಂಕಥನಗಳ ಕಟ್ಟುಗಳಂತೆಯೂ ಕಾಣುತ್ತದೆ.
ಸಾಮಾಜಿಕ ನಡೆ ಮತ್ತು ಕುಟುಂಬ ನಡೆಗಳ ನಡುವೆ ಚಲಿಸುವ ಈ ಕಥನವು ಎರಡು ಚಿತ್ರಗಳಿಂದ ಬಾ ಮತ್ತು ಬಾಪುರನ್ನ ಸಮರ್ಥವಾಗಿ ಹಿಡಿದಿಟ್ಟಿದೆ.1) ವಿಷ್ಣುವಿನ ಪಾದ ಒತ್ತುತ್ತಿರುವ ಲಕ್ಷ್ಮಿ 2) ಶಿವನ ಅರ್ಧಾಂಗಿಯಾದ ಪಾರ್ವತಿ.
ದಿಟ್ಟ ಹುಡುಗಿಯಾದ ಕಸ್ತೂರ್ ತಾಯಾಗುವ ತನಕ ಈ ಎರಡೂ ಚಿತ್ರಗಳಿಂದಲೂ ದೂರವೇ ನಿಲ್ಲುತ್ತಾರೆ.ತಾಯಾದ ನಂತರ ಮೊದಲ ಚಿತ್ರಕ್ಕೇ ತಮ್ಮನ್ನ ಒಡ್ಡಿಕೊಂಡಿದ್ದಾರೆ.ಅಜ್ಜಿಯಾದಮೇಲೆಯೂ ಮನದೊಳಗೆ ಹಾಗೇ ಉಳಿಯಬೇಕೆನ್ನುವ ಕನಸೊತ್ತೇ ಸಾಗುತ್ತಾರೆ.ಆದರೆ ಭಾರತೀಯ ಗಂಡು ಪ್ರಧಾನ ನಿಲುವಿನ ಮೋಹದಾಸ ದಕ್ಷಿಣ ಆಫ್ರಿಕಾದಲ್ಲಿ ನೆಲೆ ನಿಲ್ಲುವ ತನಕ ಮೊದಲ ಚಿತ್ರವನ್ನೇ ಸ್ವೀಕರಿಸಿದ್ದ.ಆ ನಂತರವೇ ವಿದೇಶೀ ಹೆಣ್ಣುಗಳ ಮುಕ್ತ ಚರ್ಚೆಯಲ್ಲಿ ತನ್ನನ್ನ ತಾನು ಅರಳಿಸಿಕೊಂಡು ಮೆಲ್ಲಗೆ ವಿಷ್ಣುರೂಪದಿಂದ ಬಿಡಿಸಿಕೊಂಡು ತಾನೂ ಅರ್ಧ ಹೆಣ್ಣಾಗುವ ಸೇವೆಯನ್ನ ಬಿಡಿಸಿ ತನ್ನೊಳಗೇ ಸಖಿಯಾಗಿಸುವ ಶಿವನ ಚಿತ್ರಕ್ಕೆ ಒಲಿಯುತ್ತಾ ಹೋಗಿದ್ದಾರೆ.
ಕಸ್ತೂರರ ಜೀವನವೂ ಒಮ್ಮೆ ಗಾಂದೀಜಿಯವರ ಪ್ರಭಾವಳಿಯಂತೆ ಕಾಣುವ ಮತ್ತೊಮ್ಮೆ ಮೌನವಾಗಿ ಅನುಸರಿಸುವ ನೆರಳಿನ ರೂಪಕಗಳಂತಿವೆ. ಮನೆಯ ಮೂಲದಿಂದಲೂ ಆಶ್ರಮಗಳ ಆವರಣಗಳಿಂದಲೂ ವಿಸ್ತಾರಗೊಳ್ಳುತ್ತಾ ಹೋದ ದಿಟ್ಟ ಹೆಣ್ಣು ಕಸ್ತೂರ್ ಆಶ್ರಮಗಳ ಸೇವೆ ಮತ್ತು ತ್ಯಾಗಗಳಲ್ಲಿ ಕರಗುತ್ತಾ ಮಾತಿಲ್ಲದ ಮೌನ ಧರಿಸುತ್ತಾ ಹೋಗಿದ್ದಾಳೆ.ಇಲ್ಲಿ ಮಾತುಗಳ ದಾಖಲಿಸುವ ಚರಿತ್ರೆ ಮೌನ ಅಲಕ್ಷಿಸುವಂತೆ ಬಾ ಭಾಪೂ ಜೋಡಿಯಲ್ಲಿ ಲೇಖಕಿಯು ಯಾರೆಷ್ಟು ಗಮನಿಸಲ್ಪಟ್ಟಿದ್ದಾರೆನ್ನುವುದು ಅವರವರ ಮನೆಗಳಿಗೆ ಬರುವ ಸಂದರ್ಶಕರ ಸಂಖ್ಯೆಯೇ ಹೇಳಿಬಿಡುತ್ತದೆ.ಎಂದು ದ್ವನಿಪೂರ್ಣವಾಗಿ ಕಟ್ಟಿಕೊಡುತ್ತಾರೆ.
ಪೋರ್ ಬಂದರ್ ನ ಮೇಯರ್ ಮಗಳಾದ ಕಸ್ತೂರ್ ಆ ಹೊತ್ತಿಗೆ ದಕ್ಷಿಣಾ ಆಫ್ರಿಕಾ ಬಾಗ್ದಾದ್ ಜೊತೆ ವ್ಯಾಪಾರ ಮಾಡುತ್ತಿದ್ದ ಶ್ರೀಮಂತ ಮನೆತನದವಳು.ಗಾಂಧಿ ಪೋರ್ ಬಂದರ್ ನ ದಿವಾನರ ಮನೆತನದವರು.ಇಬ್ಬರೂ ತಮ್ಮ ಶ್ರೀಮಂತಿಕೆಯ ಮನಸ್ಥಿತಿಯನ್ನೇ ತ್ಯಜಿಸಿ ಬಡತನ ಸ್ವೀಕರಿಸಿ ನಗರ ಬಿಡಿಸಿಕೊಂಡು ಕಾಡು ಹಳ್ಳಿ ಕಡೆ ನಡೆದ ತಮ್ಮದೆಲ್ಲವನ್ನೂ ಬಿಟ್ಟು ಬಡಜನರ ಸೇವೆಯೇ ಬದುಕಾಗಿಸಿಕೊಂಡ ರೀತಿಗಳು ಸಣ್ಣವೇನಲ್ಲ.ಅವರಿಬ್ಬರ ಇಂತಹ ಮೇರು ನಿರ್ದಾರಗಳ ಹಿಂದೆಯೇ ಹಲವು ಅಗ್ನಿಕೊಂಡಗಳ ಹಾದಿಯಿತ್ತು ಎಂಬುದನ್ನೂ ಕಸ್ತೂರ್ ಕಥನ ಕಟ್ಟಿಕೊಡುತ್ತದೆ. ಮದುವೆಯಾದ ಹೊಸದರಲ್ಲಿ ಅವರು ಅಪ್ಪಟ ಭಾರತೀಯ ಗಂಡಾಗಿದ್ದರು “ ನನ್ನ ಕೇಳದೇ ಎಲ್ಲೂ ಹೋಗುವ ಹಾಗಿಲ್ಲ, ಎಲ್ಲ ಗಂಡಸರ ಜೊತೆ ಮಾತಾಡುವಂತಿಲ್ಲ,ಯಾವಾಗಲೂ ಹೇಳಿದಷ್ಟು ಕೇಳು,ಸುಮ್ನಿರು,ನಿಂಗ್ ಗೊತ್ತಾಗಲ್ಲ,ಎದುರುತ್ರ ಕೊಡ್ಬೇಡ,ಏನ್ ಗೊತ್ತಾಗುತ್ತೆ ನಿಂಗೆ?...ಇಂತವೇ ಮಾತು…
ಮೊದಲ ಮೊಗು ಹುಟ್ಟಿದ ವಾರಕ್ಕೆ ಲಂಡನ್ ಗೆ ಓದಲು ಹೊರಟ ಗಾಂಧಿ “ ಕಸ್ತೂರ್ ನಾನೀಗ ನಿನ್ನ ಪಕ್ಕ ಇದ್ದು ನಿನ್ನ ಸೇವೆ ಮಾಡಬೇಕಿತ್ತು.ಕ್ಷಮಿಸು ನನ್ನ ಜೀವವೇ . ಈ ದೇಹ ಹೊರಟಿದ್ದರೂ ನನ್ನ ಪ್ರಾಣ ಇಲ್ಲೇ ಇರುತ್ತೆ ಅನ್ನುವುದನ್ನ ಮರಿಬೇಡ.ಯಾವತ್ತಿದ್ರೂ ಮೋಹನದಾಸ ನಿನ್ನವನೇ,ನಿನ್ನ ದಾಸನೇ ನಾನಲ್ಲಿ ಯಾವ ಹೆಣ್ಣನ್ನೂ ಮುಟ್ಟಲ್ಲ ,ಹೆಂಡ ಮಾಂಸ ಮುಟ್ಟಲ್ಲ,ಅಮ್ಮನಿಗೆ ಕೊಟ್ಟ ಮಾತನ್ನೆ ನಿಂಗೂ ಕೊಡುತ್ತ ಇದೇನೆ.ಎರಡೇ ವರ್ಷ. ಬಂದು ಬಿಡ್ತೀನಿ ಕಣೆ.ಅಲ್ಲೀ ತನಕ ಈ ಮಗುವಿನ ,ನಿನ್ನ ಆರೋಗ್ಯದ ನಿಗಾ ಇಟ್ಟುಕೋ ನನಗೋಸ್ಕರ ಪ್ರಾರ್ಥಿಸು. ನೀನು ಇಲ್ಲಿ ಹೇಗಿರುತ್ತೀಯೋ ನಾನೂ ಅಲ್ಲಿ ಹಾಗೆಯೇ ಇರುತ್ತೇನೆ..”
ಇಲ್ಲಿನ ನಿನ್ನ ದಾಸನೇ ಮತ್ತು ನನಗೋಸ್ಕರ ಪ್ರಾರ್ಥಿಸು ,ಎಂಬ ಎರಡು ತುಂಡು ಸಾಲುಗಳು ಗಮನಾರ್ಹ.ಗಾಂಧಿ ಲಂಡನ್ ಓದು ಮುಗಿಸಿ ಮುಂಬಯಿಯಲ್ಲಿ ವಕೀಲಿಕೆ ಮಾಡಲಾಗದೆ ಮತ್ತೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗಲೇ ಎಂದು ಕಸ್ತೂರ್ ಕೇಳಿದರು “ ಆಗ ನಾನು ಮತ್ತೆ ಬಸುರಿ.ಮೊದಲಿನ ಬಸುರುಗಳ ವಾಂತಿ,ತಲೆಸುತ್ತು ಸುಸ್ತು ಇರಲಿಲ್ಲವಾದರೂ ನಿಶ್ಯಕ್ತಳೇ ಆಗಿದ್ದೆ. ಮೂರು ವರ್ಷ ಬಿಟ್ಟು ಹೋಗಿದ್ದವರು ಬಂದು ವರ್ಷವಾಗಿಲ್ಲ ಮತ್ತೆ ಹೋಗುವೆ ಎಂದಾಗ ಬೇಸರವೇ ಆಯಿತು.ಎಷ್ಟು ದಿನಾ ಅಂತ ನಾನು ಗಂಡ ಇಲ್ಲದ ಮನೆಯಲ್ಲಿ ಇರುವುದು? ಉಳಿದ ಹೆಂಗಸರು ಕಡವಾ ಚೌತ್ ಅದೂ ಇದೂ ಅಂತ ವ್ರತ ಮಾಡುತ್ತಾ ಗಂಡನ ಪಾದ ತೊಳೆಯುತ್ತಾ ಇರುವಾಗ ನನಗೆ ಅದ್ಯಾವುದೂ ಆಗುತ್ತಿರಲಿಲ್ಲ.ದೂರವಿರುವ ಗಂಡನಿಗೆ ಒಳ್ಳೆದಾಗಲಿ ಅಂತ ವಾರಕ್ಕೆ ಎರಡುದಿನ ಉಪವಾಸ ಮಾಡ್ತಿದ್ದೆ ನಾನು. ಹೀಗೆಂದ ಕೂಡಲೇ ಹರಿಯ ಅಪ್ಪನ ಮುಖ ಪೆಚ್ಚಾಯಿತು. ಕೊನೆಗೆ ಒಂದು ವರ್ಷಕ್ಕೆ ಮಾತ್ರ ಹೋಗಿ ಬರಬೇಕು,ಅದಲ್ಲದಿದ್ದರೆ ನನ್ನನ್ನು ಅಲ್ಲಿಗೇ ಕರೆಸಿಕೊಳ್ಳಬೇಕು. ಎಂಬ ಷರತ್ತು ಹಾಕಿ ಒಪ್ಪಿದೆ.”
ಗಾಂಧೀಯವರ ಚಾರಿತ್ರಿಕ ಮತ್ತು ರಾಜಕೀಯ ಚಿತ್ರಗಳನ್ನ ಬಲ್ಲ ನಮ್ಮೆದುರು ಈ ಕೃತಿಯು ಗಾಂಧಿಯವರ ಕೌಟುಂಬಿಕ ಕಥನವನ್ನ ತೆರೆಯುತ್ತದೆ.ಮನೆಯ ಕೇಂದ್ರದಿಂದ ಸಾಮಾಜಿಕ ವಿಸ್ತಾರ ಪಡೆದಂತೆಲ್ಲಾ ಗಾಂಧಿಯವರೂ ಆತಂರಿಕವಾಗಿಯೂ ತನ್ನ ಗಂಡ ತನದಿಂದಲೂ ಮಾಗುತ್ತಾ ಹೋದರು.ಕಸ್ತೂರ್ ಕಥನ ಅಂತಹ ಗಾಂಧಿಯತ್ತ ಬೆರಳು ತೋರುತ್ತದೆ.ದಕ್ಷಣ ಆಫ್ರಿಕಾದ ಹೆರಿಗೆಯ ಕಥನ ಇದಕ್ಕೆ ಉದಾಹರಣೆಯಂತಿದೆ.” ಮೊದಲ ಎರಡು ವಾರ ಮಗುವನ್ನು ಮೀಯಸಲು ದಾದಿ ಇದ್ದರು ನಂತರ ಎಲ್ಲವನ್ನೂ ಹರಿಯ ಅಪ್ಪ ಸಲೀಸಾಗಿ ಮಾಡತೊಡಗಿದರು.ನನಗೆ ಬಿಸಿಯಾಗಿ ಸರಳವಾದ ಅಡಿಗೆ ಮಾಡಿ ಹಾಕುತಿದ್ದರು.ಮಕ್ಕಳಿಗೆ ಅಡಿಗೆ ಮಾಡುವುದು ಅವರಿಗೆ ಉಣಿಸುವುದು ಬಟ್ಟೆ ತೊಳೆವುದು ಓದಿಸುವುದು ಎಲ್ಲವನ್ನೂ ಮಾಡುತ್ತಿದ್ದರು.ಎಲ್ಲರ ಮಲದ ಗಡಿಗೆಯನ್ನೂ ಅವರೇ ಖಾಲಿ ಮಾಡಿ ತೊಳೆಯುತ್ತಿದ್ದರು.ಇದನ್ನೆಲ್ಲಾ ನನ್ನ ಮಕ್ಕಳ ಅಪ್ಪ ಕಲಿತದ್ದು ಯಾವಾಗ?”
ಸತ್ಯಗ್ರಾಹಿಯಾಗಿಯೇ ಲೋಕದೆದುರು ಕಾಣುವ ಗಾಂಧಿ ಆ ಪದವನ್ನ ಕಲಿತದ್ದು ಅವರ ಅಮ್ಮನಿಂದ ಆ ಪದವನ್ನ ಕ್ರಿಯಾಶೀಲ ಗೊಳಿಸಿದ್ದು ಪತ್ನಿಯ ನಡೆಯಿಂದಲೇ .ಕಸ್ತೂರ್ ಬಾ ಅವರೂ ಸಮಾಜ ಮುಖಿಯಾಗಿ, ಹೋರಾಟಗಾರ್ತಿಯಾಗಿ ಹೊಸ ಹೊಸ ಸಾಹಸಕ್ಕೆ ಅಂದು ಸಿದ್ಧರಾದ ಕಥನವೂ ವಿಶಿಷ್ಟವಾದುದೇ.
ಸಮಾಜ ಮುಖಿಯಾದಮೇಲೆ ಗಾಂಧೀ ಮನೆಮೂಲ ದಾಟುತ್ತಿದ್ದಂತೆಯೇ ತಮ್ಮ ಸೇವಾ ಮೂಲದ ವಿಷ್ಣು ಚಿತ್ರವನ್ನ ದಾಟಿ ತ್ಯಾಗ ಮೂಲದ ಶಿವನ ಚಿತ್ರದತ್ತ ವಾಲಿದರು. ಇಲ್ಲಿ ಅವರು ಪತ್ನಿಯನ್ನೂ ದಂಡಿಸದೆ ಬಿಡಲಿಲ್ಲ.ಇದು ಕಸ್ತೂರ್ ಅವರ ಅಂತರಂಗ ಬದಲಾವಣೆಯ ಮನ ವಿಕಾಸವಾಗಲು ನೆಲೆಯಾದ ಘಟನೆಯೂ ಹೌದು.” ಮನೆ ಮೆಲ್ಲಗೆ ಸತ್ಯಗ್ರಹಿ ಸ್ನೇಹಿತರ ಮನೆಯಾಗಿ ವಿಸ್ತಾರವಾದಂತೆ ಮನೆಯ ನಿಯಮ ವಿಸ್ತರಾವಾಯಿತು.ಸರತಿಯಂತೆ ಎಲ್ಲರೂ ಎಲ್ಲ ಕೆಲಸ ಮಾಡಬೇಕಿತ್ತು.ಅಡುಗೆ ಮಾಡುವ ತಮಿಳು ದಂಪತಿಗಳು ಪಂಚಮರಾಗಿದ್ದರು.ಕಸ್ತೂರ್ ಅವರ ಸರದಿ ಬಂದಾಗ ಅವರ ಮಲ ತೊಳೆಯಲಾರೆನೆಂದು ನಿರಾಕರಿಸಿದಳು.ಗಾಂಧಿಗೆ ಎಷ್ಟು ಸಿಟ್ಟು ಬಂತೆಂದರೆ ದರದರ ಎಳೆದೊಯ್ದರು.ಅಳುತಿದ್ದರೂ ‘ಮನೆಯಲ್ಲಿನ ನಿಯಮ ಒಪ್ಪುವುದಾದರೆ ಇರು ಇಲ್ಲದಿದ್ರೆ ಹೊರಟು ಹೋಗು’ ಎಂದು ಕೂಗಿದರು. ಆಗ ನಾನು ದೇವದಾಸನ ಬಸುರಿ.ಕಾಣದ ದೇಶದ ತನ್ನವರಿಲ್ಲದ ಊರಿಗೆ ಕರೆತಂದು ಹೋಗು ಅನ್ನಲಿಕ್ಕೆ ನಿಮಗೆ ನಾಚಿಕೆ ಆಗಲ್ಲವೇ? ಅಂತ ತಣ್ಣಗೆ ಕೇಳಲು ಕೋಪದಿಂದ ಬುಸುಗುಡುತಿದ್ದ ಭಾಯಿ ಒಂದೇ ಸ¯ ಕ್ಕೆ ಮೌನವಾಗಿಬಿಟ್ಟರು.ಕೊನೆಗೆ ನಮ್ಮಿಬ್ಬರಿಗೂ ನಮ್ಮ ನಮ್ಮ ತಪ್ಪು ಅರಿವಾಯಿತು. ಒಳಗೆ ಹೋದೆವು. ಇಬ್ಬರೂ ಪರಸ್ಪರ ಕ್ಷಮೆ ಕೇಳಿಕೊಂಡೆವು”
ಜಾತಿ ಶ್ರೇಷ್ಟತೆಯ ಹೆಮ್ಮೆಯನ್ನ ಕೊಂದುಕೊಂಡು ಸಾಧಾರಣ ಸಾಮಾನ್ಯನಂತೆ ಬದುಕುವ ವ್ರತ ತೊಟ್ಟ ಗಾಂಧಿ ತನ್ನ ಬದುಕಿನಿಂದಲೇ ಸಂತತನವನ್ನ ಪಡಕೊಂಡರು.ಭಾಯಿ-ಭಾಪು-ಮಹಾತ್ಮ ಎಂಬೆಲ್ಲಾ ರೂಪ ಪಡಕೊಂಡರು.ಜಾತಿ ಧರ್ಮಗಳಿಗಿಂತ ಮನುಷ್ಯತ್ವ ದೊಡ್ಡದು ಎಂದು ಭಾವಿಸಿದ ಅವರು ತಮ್ಮ ಮಗನಿಗೆ ಬರೆದ ಪತ್ರದಲ್ಲಿ ಜನಿವಾರ ವಿರೋಧಿಸಬೇಕಾದ ತಮ್ಮ ನಿಲುವನ್ನ ಸ್ಪಷ್ಟವಾಗಿ ಹೇಳುತ್ತಾರೆ.” ಜನಿವಾರದ ಮೂಲಕ ಜಾತಿ ಶ್ರೇಷ್ಟತೆ ಬಿತ್ತುವ ಧರ್ಮಗುರುಗಳ ಬಗ್ಗೆ ಎಚ್ಚರದಿಂದಿರಬೇಕು.ಜನಿವಾರ ಜಾತಿಯ ಅಹಂಕಾರದ ಸಂಕೇತ ಮನುಷ್ಯತ್ವಕ್ಕೆ ದೊಡ್ಡ ತಡೆ”.ಮನೆಯೊಳಗಿನ ಕಸ್ತೂರ್ ಗೂ ಗಾಂಧಿ ಮನುಷ್ಯತ್ವ ಪ್ರೀತಿಸುವ ಜಾತ್ಯಾತೀತ ನಡೆಯನ್ನ ಕಲಿಸಿದರು.ಜೈಲನ್ನ ಆತ್ಮಶುದ್ಧಿ ಎಂದು ಸ್ವೀಕರಿಸಲು ಪ್ರೇರೇಪಿಸಿದರು.ತಮ್ಮ ಕುಟುಂಬ ಸೀಮಿತವಾದ ಪತ್ನಿಯನ್ನ ಎಲ್ಲರ ದಯೆ ಕರುಣೆ ತ್ಯಾಗಕ್ಕೆ ಸಿದ್ಧವಾದ ತಾಯಿಯಾಗಿ ಬದಲಿಸಿದರು.ಸೇವೆಯೇ ಪ್ರಧಾನವಾದ ತಮ್ಮ ಪತ್ನಿಯನ್ನ ಸಖಿಯನ್ನಾಗಿ ಕಾಣತೊಡಗಿದರು.ತಾವೂ ಅರ್ಧ ಹೆಣ್ಣಾಗಲು ಪ್ರಯತ್ನಿಸಿದರು.
ಕಸ್ತೂರ್ ಕಥನವು ಮನೆಯ ಕಥನವಾದಂತೆಯೇ ಹಲವು ಮನಗಳ ಪರಿಸರದ ಕಥನದಂತೆಯೂ ಕಾಣುತ್ತದೆ.ಈ ಪರಿಸರದ ಎಳೆಗಳಿಲ್ಲದೆ ಈ ಜೀವ ಕಥನಗಳಿಗೆ ಬೆಳಕೇ ಇಲ್ಲದಂತಾಗುತ್ತಿತ್ತೇನೋ. ಟಾಲ್ ಸ್ಟಾಯ್,ರಸ್ಕಿನ್,ವಿನೋಬಾ,ಟಾಗೂರ್,ಗೋಖಲೆ,ಜೀವನ್ ಲಾಲ್ ಮೆಹ್ತ,ಸಾರಾಬಾಯಿ,ಮಹದೇವ ದೇಸಾಯಿ,ಮಗನ್ ಲಾಲ್,ನಾರಾಯಣ ಖರೆ,ರಾಜಗೋಪಾಲಾಚಾರಿ,ಮೀರಾ ಬೆನ್... ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗಿದೆ.ಹಲವು ಮನಸುಗಳು ಒಟ್ಟಿಗೇ ಬದುಕುವುದು.ಆ ಕಾಲದಲ್ಲಿ ತಮ್ಮ ಮಗನಿಗೆ ಅಂತರ್ಜಾತಿ ವಿವಾಹ ಮಾಡಿಸುವುದು.ಮುಸ್ಲಿಂ ಧರ್ಮಕ್ಕೆ ಮತಾಂತರ ಗೊಂಡ ಮಗನನ್ನ ಕುರಿತು ‘ಇಸ್ಲಾಂ ಧರ್ಮವು ನಾನು ನಂಬಿದ ಧರ್ಮದಷ್ಟೇ ಸತ್ಯವಾದ ಧರ್ಮ’ ಎನ್ನುವುದು.ಅಸ್ಪøಷ್ಯತೆ ಆಚರಿಸುವ ಹಿಂದೂ ದೇವಾಲಯ ಪ್ರವೇಶವನ್ನೇ ನಿರಾಕರಿಸುವುದು.ಆಶ್ರಮದ ತಪ್ಪುಗಳನ್ನ ತಮ್ಮದೇ ತಪ್ಪುಗಳಂತೆ ಭಾವಿಸಿ ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಆರಂಭಿಸುವುದು.ಸಾವು ಲೆಕ್ಕಿಸದೆ ದೇಹದ ಬಾಧೆ ಲೆಕ್ಕಿಸದೆ ಹಗಲು ರಾತ್ರಿ ನಿರಂತರ ದುಡಿವ ದಂಡಿಸಿಕೊಳ್ಳುವ ಗಾಂಧಿ ಹಾದಿ ತುಂಬಾ ಕಠಿಣವಾದುದು. ಈ ಹಾದಿಯಲ್ಲಿ ಬಾಪು ಮಹಾತ್ಮನಾಗುತ್ತಲೇ ಹೋದರು.ಸಾಮಾನ್ಯರಿಗೆ ಸಹಜವಾದ ಖಾಸಗಿಗಳಿಗೆ,ಖಾಸಗಿ ಬದುಕನ್ನ ಕಳದುಕೊಳ್ಳುತ್ತಲೇ ಹೋದರು.ಮನೆಯ ಆವರಣದ ಕಸ್ತೂರ್ ಬಾ ಗೆ ಆಳದಲ್ಲಿ ಇದೊಂದು ಸಂಕಟದ ಹಾದಿಯಾಗಿದೆ.”ಅವ ಮಹಾತ್ಮ ಎಲ್ಲದನ್ನೂ ಎಲ್ಲರ ಜೊತೆ ಚಿಂತಿಸುತಿದ್ದ, ಆದರೆ ನನಗೆ ಅವರಿಗೆ ಹೇಳಬೇಕಾದ ನನ್ನದೇ ಮಾತು ವಿಚಾರ ಇರ್ತಿತ್ತು.ಅದನ್ನು ಹೇಳಲು ಅಂಥ ಒಂದು ಕ್ಷಣಕ್ಕಾಗಿ ನಾನು ವರ್ಷಗಟ್ಟಲೇ ಕಾದಿದೂ ಇದೆ. ಎಲ್ಲರಿಗಿಂತ ಭಾಪುವನ್ನು ಹೆಚ್ಚು ಕಳೆಕೊಂಡವರು ಅವರ ಮಕ್ಕಳು. ಆಶ್ರಮದ ಉಳಿದ ಮಕ್ಕಳ ಮೇಲೆ ಎಷ್ಟು ಗಮನ ಕೊಡುತ್ತಿದ್ದರೋ ಅಷ್ಟು ಕೊಟ್ಟಿದ್ದರೂ ನಮ್ಮ ಮಕ್ಕಳು ಬೆಚ್ಚಗಿರುತ್ತಿದ್ದರು.”
ಜನ ಸುಖದ ಕನಸಿಗಾಗಿ ಗಾಂಧಿ ಹಗಲಿರುಳು ದುಡಿದರು.ನೋವುಂಡರು,ಪ್ರತಿ ಮಾತುಗಳುಂಡರು,ಶಿಕ್ಷೆಗೊಳಗಾದರು.ಗಾಂಧಿ ಬೆಂಬತ್ತಿದ ಕಸ್ತೂರ್ ಮುಳ್ಳೊತ್ತ ಗಿಡ ಹೂ ನೀಡುವಂತೆ ಗಾಂಧಿಯೆಂಬ ಮಹಾತ್ಮನನ್ನ ರೂಪಿಸುತ್ತಾ ತನ್ನ ತ್ಯಾಗಗಳಿಂದಲೇ ಸಾವಿನ ಅಂಚಿನವರೆಗೂ ಕಾಣದ ಕಣ್ಣೀರಲ್ಲಿ ,ಮೌನದಲ್ಲಿ ಕರಗುತ್ತಲೇ ಹೋದರು. ಈ ನೆಲೆಯಲ್ಲಿ ಈ ಕಥನವು ಗಾಂಧಿಕಾಲದ ಹೆಣ್ಣ ಚಾರಿತ್ರಿಕ ಬೆಳವಣಿಗೆಯ ಕಥನದಂತೆಯೂ ಕಾಣಬಲ್ಲದು.ಈ ಜೀವನ ಕಥನದ ಧ್ವನಿಪೂರ್ಣ ಮುಖಪುಟವನ್ನೂ ,ಸಾಧ್ಯಂತ ಪರಿಶೀಲಿಸಿ ಪ್ರಕಟಿಸಿದ ಪ್ರಕಾಶಕ ಲಡಾಯಿ ಬಸು ಕಾಳಜಿಯನ್ನೂ ಮೆಚ್ಚಲೇ ಬೇಕು.
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಕುಮಾರ ಕಂಪ್ಲಿ