Article

’ಮೂರನೇ ಕಣ್ಣು’ ಲಲಿತ ಪ್ರಬಂಧ-ಲಘು ಹಾಸ್ಯದ ಫಿಲಾಸಫಿಕಲ್ ಬರಹಗಳು

ಅನುವಾದ ಸಾಹಿತ್ಯ, ಗಜಲ್, ಕಥೆ, ಸಂಪಾದನೆ ಈಗ ಲಲಿತ ಪ್ರಬಂಧ ಹೀಗೆ ಬಹುಮುಖಿ ಪ್ರಕಾರಗಳಲ್ಲಿ ಏನನ್ನೂ ಬರೆದರು ಓದುಗರ, ಸಾಹಿತ್ಯ ಕ್ಷೇತ್ರಿಗರ ಮನಮುಟ್ಟುವಂತೆ, ತಟ್ಟುವಂತೆ ಬರೆಯುವ ಪ್ರತಿಭಾವಂತ ಲೇಖಕ ಮಿತ್ರ ಶ್ರೀ ಚಿದಾನಂದ ಸಾಲಿಯವರ ಈ ಕೃತಿ ಈಗಷ್ಟೇ ಓದಿ ಮುಗಿಸಿದೆ. ಒಮ್ಮೆ ಮೂರ್ನಾಲ್ಕು ಪ್ರಬಂಧ ಓದಿ ಉಳಿದವು ನಾಳೆಗಿರಲಿ ಅಂತ ಪುಸ್ತಕ ಕೆಳಗಿಟ್ಟು ಹೊರ ಹೋಗಿ ಬಂದೆ. ಮನಸ್ಸು ಕೇಳಲಿಲ್ಲ. ಮುಂದಿನವು ಓದುವ ಕುತೂಹಲ. ಹಾಗಾಗಿ ಒಂದೇಟಿಗೆ ಎಲ್ಲ ಓದಿ ಮುಗಿಸಿ ನನ್ನ ಓದಿದ ಖುಷಿಯಷ್ಟೆ ಇಲ್ಲಿ ಹಂಚಿಕೊಳ್ಳಲು ಕುಂತಿರುವೆ.

ಶಿರ್ಷಿಕೆ ಬರಹ ಮೂರನೇ ಕಣ್ಣಿಗೆ ನೂರಾರು ಗಾಯ.. ಓದುತ್ತಾ ಓದುತ್ತಾ ನಕ್ಕು ಸುಸ್ತಾದೆ. ನಾನು ಶಿರ್ಷಿಕೆ ನೋಡಿ ಅಂದುಕೊಂಡಿದ್ದೆ ಬೇರೆ, ಅದು ಇರುವುದೇ ಬೇರೆ. ಈ ಕೃತಿಯಲ್ಲಿ ನನಗೆ ಅತಿ ಇಷ್ಟವಾದ ಬರಹಗಳಲ್ಲಿ ಇದು ಮುಖ್ಯ, ಇದರ ಜೊತೆಗೆ ನಿದ್ದಿ ಮಾಡಲಿಬೇಕು ಜಗದೊಳಗ, ನಿದ್ದೆಯ ಅವಾಂತರಗಳು, ಭೂಕಂಪವಾದರು ಎಚ್ಚರ ವಾಗದ ಆ ಸ್ಥಿತಿ, ತ್ಯಾಗಮಯಿ ತಂದೆಯ ನಿದ್ದೆ, ನಿದ್ಧೆಯಲ್ಲಿಯೇ ಸುಖದ ಸಾವು ಕಂಡ ಅವರು ಈಗಲೂ ಇರುವರೆಂಬ ಭಾವ ಮನಕ್ಕೆ ತಟ್ಟುತ್ತದೆ, ಬಹುಕಾಲ ಕಾಡುತ್ತದೆ.

ಸುಖದ ನೆಪದಲಿ ಬಾಲ್ಯವ ನೆನೆದು, ಬಸ್ಸು ಪ್ರಯಾಣದ ತರಹಾವರಿ ನಗೆ ಸೀನುಗಳ ಚಿತ್ರಣ, ಜಗಳಗಳು, ಮುಟ್ಟುವಿಕೆ,ತಟ್ಟುವಿಕೆಗಳು. ರಸ ನಿಮಿಷಗಳು,ಚಾದಂಗಡಿಯಲಿ ಹಸಿದ ನೋಣ, ಮಾತು ಮಾತು ಮಾತಿನ ಮಾತೆಯರ ಬಗೆಗಿನ ಹಾಸ್ಯಮಯ ದ್ರಶ್ಯಗಳು, ಅಂಗನವಾಡಿ ಶಿಕ್ಷಕಿಯು ಸೀರೆಯನು ನೆನಪಿಸಿಕೊಂಡ ಚಿತ್ರಣಗಳು, ಈಜಿನ ಕನಸಿನ ಬಾಲ್ಯದ ಸಾಹಸಗಳು, ರೋಚಕತೆ, ಬಾವಿಯಲ್ಲಿ ಬಿದ್ದು ಸತ್ತವರ ಕಥೆಗಳು, ಹಾದಿಗುಂಟ್ ಹಾಡುಗಳಲ್ಲಿ ಬರುವ ನೂರಾರು ನೆನಪುಗಳು, ಸಖಿಯೊಂದಿಗಿನ ವಿರಸ ಸರಸವಾದ ಆ ಹಾಡುಗಳು ಹೀಗೆ ಒಂದೇ ಎರಡೇ ಹೀಗೆ ನಗಿಸುತ್ತಾ ನಗಿಸುತ್ತಲೇ ಲೇಖಕ ಸಾಲಿಯವರು ಆಧ್ಯಾತ್ಮಿಕತೆ, ಚಿಂತನೆಯನು ದಾಟಿ ಫಿಲಾಸಫಿಕಲ್ ಆಗಿ ಯೋಚನೆಗೆ ಹಚ್ಚುವ ಬಹು ಮುಖ್ಯ ಬರಹಗಳಿವು. ನಗಿಸುತ್ತಲೇ ಇನ್ನೊಂದು ಮಗ್ಗುಲಲ್ಲಿ ಸತ್ಯದ ಮುಖಾಮುಖಿ ಯಾಗಿಸುವ ಇಲ್ಲಿಯ ಬರಹಗಳು ಬಹು ಯಶಸ್ವಿ ಲಲಿತ ಪ್ರಬಂಧದ ಗುಣ ಹೊಂದಿವೆ.

ಅಂದಿನ ಬಾಲ್ಯ, ಗ್ರಾಮೀಣ ಪರಿಸರ, ಓದುವ ಹಂಬಲ, ಓದಿಸಬೇಕೆಂಬ ಹೆತ್ತವರ ಕಾಳಜಿ, ಆಟಗಳು, ಬಡತನ, ಸಾಮಾಜಿಕ ಅಸಮಾನತೆಯ ನೋವುಗಳು, ಹಸಿವು, ಕಾಡುವ ಕನಸುಗಳು, ಗಂಡು ಮಗುವಿನ ಹಂಬಲ, ಹಳ್ಳಿಯ ಸ್ವಯಂ ಘೋಷಿತ ಶಾಣ್ಯಾರು ಕೇಳುವ ಒಗಟಿನಂತಹ ಪ್ರಶ್ನೆಗಳು, ಇವೆಲ್ಲ ನಮ್ಮ ಭಾಗದ ಎಲ್ಲ ಊರುಗಳ, ಹಳ್ಳಿಗಳ ಕಥೆಯ ಚಿತ್ರಣಗಳಾದ್ದರಿಂದ ನಮ್ಮ ತಲೆಮಾರಿನ ಓದುವವರಿಗೆಲ್ಲ ಇವು ತಮ್ಮದೇ ಬಾಲ್ಯಕ್ಕೆ ಕರೆದೊಯ್ಯು ವದು ಈ ಬರಹಗಳ ಯಶಸ್ವಿತನಕ್ಕೆ ಸಾಕ್ಷಿಯಾಗುತ್ತವೆ. ಅಷ್ಟು ಪರಿಣಾಮಕಾರಿಯಾಗಿ ಗ್ರಾಮೀಣ ಭಾರತವನ್ನು ಇಲ್ಲಿಯ ಬರಹಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ಈ ಬರಹಗಳ ಮಧ್ಯೆ ಕಾಣಿಸಿಕೊಳ್ಳುವ ಕಥೆ,ಉಪ ಕಥೆಗಳು,ಹಾಡು,ನುಡಿಗಳು,ಅವರ ಅಪಾರ ಓದಿನ ವ್ಯಾಪ್ತಿಗೆ ಸಿಕ್ಕ ಸಹ ಹಾಗೂ ಹಿರಿಯ ಲೇಖಕರ ಅನಿಸಿಕೆ ಗಳು ತಂದು ತುರುಕಿದಂತಿರದೆ ಸಹಜವಾಗಿ ಬಂದು ಬರಹದ ಮೌಲ್ಯವನ್ನು ಹೆಚ್ಚಿಸಿವೆ.

ಇನ್ನೂ ಮುಗಿಯದ ಆಟಕೆ ಮೊದಲಾಗಿ, ಜಾತಿ ಎಂಬ ಸೂತಕ, ಗುರು ಕರುಣೆಯ ವರತಾಕಿ ಅನ್ನುವ ಬರಹಗಳು ಗಂಭೀರವಾಗಿ ಚಿಂತಿಸುವಂತಿವೆ.

ಒಟ್ಟಾರೆ ಈ ಕೃತಿ ಬಹುಮುಖ್ಯ ಲಲಿತ ಪ್ರಬಂಧಕಾರರ ಸಾಲಿನಲ್ಲಿ ಈ ಚಿದಾನಂದ ಸಾಲಿಯವರನ್ನು ತಂದು ನಿಲ್ಲಿಸುವಂತಿವೆ.

ಇವರು ಈಗಾಗಲೇ ಕಥೆ, ಕಾವ್ಯ,ಗಜಲ್, ಅನುವಾದ ಕ್ಷೇತ್ರದಲ್ಲಿ ಗಣನೀಯವಾಗಿ ಗುರ್ತಿಸಿಕೊಂಡಿದ್ದು ನಾಡಿನ, ದೇಶದ ಗಡಿ ದಾಟಿ ಖ್ಯಾತಿ ಪಡೆದಿದ್ದಾರೆ. ಅನೇಕ ಪುರಸ್ಕಾರ ಗಳು ಇವರಿಗೆ ಸಂದಿವೆ. ಬಹುಮುಖ್ಯ ಕೃತಿಗಳು ಸಹ ಜನಮನ ತಲುಪಿವೆ. ಸ್ಟಾರ್‌ ರೈಟರಾಗಿ ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಲಾಗುತ್ತಿದೆ. ಇತ್ತೀಚಿಗಷ್ಟೆ ಹೊರಬಂದ ಈ ಕೃತಿಗೆ ಸಿರವಾರದ ಚುಕ್ಕಿ ಪ್ರತಿಷ್ಠಾನದ ಪುರಸ್ಕಾರ ಲಭಿಸಿದ್ದು ಈ ಲಲಿತ ಪ್ರಬಂಧ ಕೃತಿಗೆ ಒಂದು ಅಂಕಿತ ಬಿದ್ದ ಹಾಗಾಗಿದೆ. ಈ ಕೃತಿಯ ಮೌಲ್ಯವು ಹೆಚ್ಚಾಗಿದೆ.

ಈ ಚಿದಾನಂದ ಸಾಲಿಯವರು ಸಹಜ,ಸರಳ, ಸೌಜನ್ಯದ ಲೇಖಕ. ಇವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಬೆಳೆದೆ ಬೆಳೆಯುತ್ತಾರೆಂದು ಹಾರೈಸುವೆ.ಈ ಕೃತಿ ಕಳಿಸಿಕೊಟ್ಟು ನನ್ನ ಓದಿನ ಸಂತೋಷಕ್ಕೆ ಹಾಗೂ ಕೃತಿ ಪರಿಚಯಕ್ಕೆ ಹಚ್ಚಿದ ಅವರು ಪ್ರೀತಿಗೆ ವಂದಿಸಿ ಮುಗಿಸುವೆ. 

ಪುಸ್ತಕದ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ 

ಸಿದ್ಧರಾಮ ಹೊನ್ಕಲ್‌