Article

ಮೃಗಶಿರ : ಬದುಕಿನ ಪ್ರವಾಸ ಮತ್ತು ಪ್ರಸವದ ಕತೆ.

ಶ್ರೀಧರ ಬಳಗಾರರ "ಮೃಗಶಿರ" ಕಾದಂಬರಿಯನ್ನು ಓದಲು ಎತ್ತಿಕೊಂಡೆ. ಓದುತ್ತಾ ಓದಂತೆ ಇದೇನು ಕಾದಂಬರಿಯೋ?  ಕಾವ್ಯವೋ? ನಾಟಕವೊ? ಇಲ್ಲ ಒಂದರೊಳಗೊಂದು ಹೆಣೆದು ಕನ್ನಡದಲ್ಲಿ  ಕಾಣಿಸುತ್ತಿರುವ ಹೊಸ ಪ್ರಕಾರವೋ? ತಿಳಿಯದಾಗಿದೆ. ಇಲ್ಲಿನ ನಿರೂಪಕರುಗಳು, ಇಲ್ಲಿನ ಪಾತ್ರಗಳು ಇದೇ ಕಾದಂಬರಿಯಲ್ಲಿ ಬರುವ  'ಸುಡುಗಾಡು ಸಿದ್ಧರ ಜಾದೂವಿನ ಪರಿಯಲ್ಲಿ ಒಂದಕ್ಕಿಂತ ಒಂದು ಓದುಗರನ್ನ ಗಾಢವಾಗಿ ಆವರಿಸುತ್ತವೆ. ಬದುಕೆಂಬುದು ಹಾಗೂ ಈ ಬದುಕಿನೊಳಗಣ ದಾಂಪತ್ಯ ಎಂಬುದು  ಸರಿ- ತಪ್ಪುಗಳ ಗಣಿತದ ಸಮೀಕರಣವಲ್ಲ.ಅದರಾಚೆಗಿನ ಉಭಯಸಂಕಟದ ಸಂದಿಗ್ಧತೆ ಎಂಬ ಸರಳ ಮತ್ತು ಆತ್ಯಂತಿಕ ಸತ್ಯವನ್ನು ಕಾಣಿಸುವ ಕಾದಂಬರಿ ಮೃಗಶಿರ.

 ಮೃಗಶಿರವೆಂದರೆ ಪ್ರಾಣಿಯ ತಲೆ ಎಂದರ್ಥ. ಹೌದು ಈ ಕಾದಂಬರಿಯನ್ನು ಓದಿದರೆ ಲೇಖಕರು ಕಾದಂಬರಿಗೆ ಇಟ್ಟಿರುವ ಶೀರ್ಷಿಕೆ ಕಾದಂಬರಿಯ ಮುಖ್ಯ ಪಾತ್ರ ಸುಬ್ರಾಯಪ್ಪನವರ ನೆಪದಲ್ಲಿ ಮನುಷ್ಯ ಬದುಕನ್ನು ನೋಡುವ ಕ್ರಮ ಅನ್ನಿಸತೊಡಗುತ್ತದೆ. ಸಾವಿರಾರು ವರ್ಷಗಳಿಂದ ಅನೇಕ ನಾಗರೀಕತೆಗಳ ದಾಟಿ ಮನುಷ್ಯ ಇವತ್ತು ಬೌದ್ಧಿಕವಾಗಿ ಯಾವ ಎತ್ತರಕ್ಕೆ ಏರಿದ್ದರೂ ಕೆಲವೊಮ್ಮೆ ಆತನು ಈ ಬದುಕಿನ ಬಗ್ಗೆ, ಇಲ್ಲಿನ ತಲ್ಲಣಗಳ ಬಗ್ಗೆ ' ಪ್ರಾಣಿಯಂತೆಯೇ ಯೋಚಿಸುತ್ತಾನೆ, ನಡೆಯುತ್ತಾನೆ.ಕಡೆಗೆ ವಾಸ್ತವ ಬದುಕನ್ನು ಎದುರಿಸಲಾಗದೆ ಮನೆ ಬಿಟ್ಟು ಹೊರಡುತ್ತಾನೆ.ಆ ಮೂಲಕ ಈ ಬದುಕಿನ ಸಂಕೀರ್ಣತೆಯನ್ನು ಕಾಣಿಸುತ್ತಾನೆ.

ಡಿ ಆರ್ ನಾಗರಾಜ್ ಅವರು ' ವಾಸ್ತವವಾದಿ' ಕತೆಗಾರರ ಬಗೆಗೆ ಒಂದು ಮಾತು ಹೇಳುತ್ತಾರೆ.'ದೊಡ್ಡ ಸಾಹಿತ್ಯಕ್ಕೆ ಕತೆಗಿಂತ ಹೆಚ್ಚಾಗಿ ವಸ್ತುವಿರುತ್ತದೆ.ವಸ್ತುವನ್ನು ಆಶಯವನ್ನಾಗಿಸುವ ಕ್ರಮವಿರುತ್ತದೆ.ಕತೆಗಾರ ಮತ್ತೆ ಮತ್ತೆ ಅದೇ ವಸ್ತುವನ್ನು ಶೋಧಿಸಿದಾಗ ಅದು ಆಶಯವಾಗುತ್ತದೆ‌.ಆದರೆ  ಕತೆಗಾರ ಮಾತ್ರ ಇವೆಲ್ಲವನ್ನು ತಾನು ಕತೆಯನ್ನು ಮಾತ್ರ ಹೇಳುತ್ತಿದ್ದೇನೆ ಎಂದು ತೀವ್ರವಾಗಿ ನಂಬಿಸಿ, ನಂಬಿ ಹೇಳುತ್ತಾನೆ'   ಹೀಗೆಯೇ 'ಮೃಗಶಿರ' ಕಾದಂಬರಿಯಲ್ಲಿ ಶ್ರೀ ಧರ ಬಳಗಾರರು ಗಡಿಮನೆ ಮತ್ತು ಹೊಸ್ಮನೆ ಗಳ ಕತೆಯನ್ನು ಮಾತ್ರ ಅನೇಕ ನಿರೂಪಕರ ಮೂಲಕ  ಹೇಳುತ್ತಿರುವಂತೆ ಮೇಲ್ನೋಟಕ್ಕೆ ಕಂಡರು ಕತೆಯು ಮನುಷ್ಯ ಬದುಕಿನ ತೀವ್ರ ವಾಸ್ತವಗಳನ್ನು ನಮ್ಮ ಮುಂದಿಡುತ್ತಿದ್ದಾರೆ.ಆ ಮೂಲಕ ಬದುಕಿನ ಅನಿಶ್ಚಿತ ಸ್ಥಿತಿಗಳ ಚಿತ್ರಣ,ಆ ಅನಿಶ್ಚಿತ ಸ್ಥಿತಿಗಳೇ ಮನುಷ್ಯನನ್ನು ಗಟ್ಟಿಗೊಳಿಸುವ ಕೇಂದ್ರಗಳು ಎನ್ನುವ ಅಂಶಗಳನ್ನು ಬಿಚ್ಚಿಡುತ್ತಾರೆ.

ಈ ಕಾದಂಬರಿಯ ಕತೆ ಸ್ವಾತಂತ್ರ್ಯ ಪೂರ್ವ ಕಾಲದ್ದು. ಕತೆ ನಡೆಯುವ ಸ್ಥಳ ಉತ್ತರ ಕನ್ನಡ ಜಿಲ್ಲೆಯೊಂದರ ಹಳ್ಳಿ ಮತ್ತು ಅದರ ಸುತ್ತಮುತ್ತಲ ಪರಿಸರ. ಹವ್ಯಾಸಿ ಲೇಖಕನೊಬ್ಬ  ಕರ್ನಾಟಕದ ಆಯ್ದ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಜೀವನ ಚರಿತ್ರೆ ಬರೆಯಲು ಪ್ರಕಾಶಕರೊಬ್ಬರಿಂದ ಆಗ್ರಹಿತನಾಗಿ ತನ್ನೂರಿನಲ್ಲಿಯೇ ಇರುವ ಸ್ವಾತಂತ್ರ್ಯ ಹೋರಾಟಗಾರ ಗಡಿಮನೆ ಸುಬ್ರಾಯಪ್ಪವರ ಜೀವನ ಚರಿತ್ರೆ ಬರೆಯಲು ಹೋಗಿ, ಸುಬ್ರಾಯಪ್ಪನವರ ಸಾರ್ವಜನಿಕ ಜೀವನ ಬರೆಯಲು, ಸುಬ್ರಾಯಪ್ಪನವರ ಬಗ್ಗೆ ಮಾಹಿತಿಗೆ ಶೋಧನೆಗೆ ತೊಡಗಿದಾಗ, ಅವರ ಸಾರ್ವಜನಿಕ ಜೀವನದ ಕತೆಗಿಂತಲೂ ಅವರ ವೈಯುಕ್ತಿಕ ಜೀವನದ ಘಟನೆಗಳೇ ಹೆಚ್ಚು ಕುತೂಹಲವೂ, ಮುಖ್ಯವೂ ಅನ್ನಿಸ ತೊಡಗಿ ಅವುಗಳ ಶೋಧನೆಯಲ್ಲಿ ತೊಡಗುತ್ತಾನೆ.

 ಸುಬ್ರಾಯಪ್ಪನವರು ಗಾಂಧಿಯ ಕರೆಗೆ ಓಗೊಟ್ಟು, ಶಿರಸಿಯಲ್ಲಿ ನಡೆದ ಗಾಂಧಿಈಜಿಯವರ ಸಾರ್ವಜನಿಕ ಸಭೆಯಲ್ಲಿ ಸ್ವತಃ ಗಾಂಧಿಯ ಕೈಯಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ತಲೆಗೆ ಟೊಪ್ಪಿ ಹಾಕಿಸಿಕೊಂಡು,ಅದರ ರೋಮಾಂಚನ ಮತ್ತು ಆವೇಶಕ್ಕೆ ಒಳಗಾಗಿ,ಆನಂತರ ಅಗ್ರಹಾರದ ಗಾಂವ್ಕಾರರ ಪ್ರಭಾವಕ್ಕೆ ಒಳಗಾಗಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು , ತಂದೆ- ತಾಯಿ ಮತ್ತು  ಕಟ್ಟಿಕೊಂಡ ಮಡದಿಯನ್ನು ತೊರೆದು ಹೋದ ನಂತರದಲ್ಲಿ ಸುಬ್ರಾಯಪ್ಪನವ ಮಡದಿ ಅನುಸೂಯ/ 'ಅಂತೆ',ಯ ಬದುಕಿನಲ್ಲಿ ನಡೆದ ಒಂದು ಆಕಸ್ಮಿಕ ಘಟನೆ ಸುಬ್ರಾಯಪ್ಪನವರ ಸಾರ್ವಜನಿಕ ಬದುಕಿನ ಘಟನೆಗಳಿಗಿಂತ ಹೆಚ್ಚು ಮಹತ್ವದ್ದಾಗಿ, ಆನಂತರ ಆಕೆ ಆ ಬದುಕನ್ನು ಧೈರ್ಯವಾಗಿ ಎದುರಿಸುವ, ಆ ಮೂಲಕ ತನ್ನ ಬದುಕನ್ನು, ಅಸ್ತಿತ್ವವನ್ನು ಕಟ್ಟಿಕೊಳ್ಳುವ ಬಗೆಯನ್ನು ಆ ಊರಿನ ಹಲವಾರು ವ್ಯಕ್ತಿಗಳ ನಿರೂಪಣೆಯ ಮೂಲಕ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ.

ಕತೆಯ ಮುಖ್ಯ ಪಾತ್ರವಾದ ಸುಬ್ರಾಯಪ್ಪ ಅವರು ಸಾಕಷ್ಟು ವರ್ಷಗಳ ನಂತರ ಮನೆಗೆ ಬಂದವರು ತನ್ನ ಮಡದಿ ತನಗೆ ಮಾಡಿರುವ ಮೋಸದ ಕಾರಣಕ್ಕೆ  ಮಡದಿಯ ಜೊತೆ ಅನ್ಯೊನ್ಯತೆಯಿಂ ಸಂಸಾರ ಸಾಗಿಸದೆ, ( ಅವಳು ತಾನು ಬೇಕಂತಲೇ ಮಾಡಿರದ ತಪ್ಪಿಗೆ ಕ್ಷಮೆ ಕೇಳಿದರೂ ಕ್ಷಮಿಸದೆ)ಮನೆಯ ಅಟ್ಟ ಹತ್ತಿ, ಮನೆಗೆ ಬಂದ ದಿನದಿಂದ  ಉಳಿದಇಡೀ ಜೀವನವನ್ನು ಅಟ್ಟದ ಮೇಲೆಯೇ ಕಳೆಯುತ್ತಾರೆ. ಇತ್ತ 'ಅಂತೆ' ಇಡೀ ಜೀವನವನ್ನು ಕೆಳಗೆ ಕಳೆಯುತ್ತಾಳೆ. ಇಬ್ಬರ ಈ ಎರಡೂ ನಡೆಗಳು ನನಗೆ ಅವರಿಬ್ಬರ ಬದುಕಿನ ಸಂಕೇತಗಳಂತೆ ಕಾಣುತ್ತವೆ. ಅಟ್ಟದ ಮೇಲೆ ಸುಬ್ರಾಯಪ್ಪ ಬದುಕನ್ನು ಆದರ್ಶವಾಗಿ ನೋಡಿ, ವಾಸ್ತವಕ್ಕೆ ಹೆದರಿ, ಹಾಗೆ ಬದುಕಲು ನೋಡಿದರೆ ಮನೆಯ ಒಳಗೆ,ಕೆಳಗೇ ಬದುಕುವ ಅನುಸೂಯಮ್ಮ ಬದುಕನ್ನು ವಾಸ್ತವವಾಗಿ ನೋಡುತ್ತಾಳೆ, ಹಾಗೆ ಬದುಕನ್ನು ಬದುಕುತ್ತಾಳೆ ಕೂಡ.

ಮೃಗಶಿರ ಕಾದಂಬರಿ ಇತ್ತೀಚಿನ ದಿನಗಳಲ್ಲಿ ನಾನು ಓದಿದ ಒಂದು ಅತ್ಯುತ್ತಮ ಕಾದಂಬರಿ ಎಂಬುದರಲ್ಲಿ ಎರಡು ಮಾತಿಲ್ಲ.ಶ್ರೀಧರ ಬಳಗಾರರ ಕತೆಗಳನ್ನಾಗಲಿ,ಅವರ ಇನ್ನೂ ಎರಡು ಕಾದಂಬರಿಗಳನ್ನು ನಾನು ಓದಿಲ್ಲ.' ಮೃಗಶಿರ' ವನ್ನು ಓದಿದ ಮೇಲೆ ಅನ್ನಿಸುತ್ತಿದೆ ಇಷ್ಟು ದಿನಗಳ ಕಾಲ ಇಂತಹ ಒಬ್ಬ ಶ್ರೇಷ್ಟ ಕಾದಂಬರಿಕಾರರನ್ನು ಓದದ ನನ್ನಂತಹ ಮೂರ್ಖ ಮತ್ತೊಬ್ಬರಿಲ್ಲ ಅಂತ. ಶ್ರೀಧರ ಬಳಗಾರರ ಭಾಷೆ ಕಾವ್ಯದ ಭಾಷೆ. ಇಡೀ ಕಾದಂಬರಿಯಲ್ಲಿ ಎಲ್ಲೂ ನಾನೂ ಗದ್ಯ ಓದುತ್ತಿದ್ದೇನೆ ಎಂದು ಅನ್ನಿಸಿಯೇ ಇಲ್ಲ. ಕಾದಂಬರಿಯಲ್ಲಿ ಅವರು ಕಟ್ಟಿಕೊಡುವ ಕಾಡಿನ ಪರಿಸರದ ವಿವರಗಳು, ಪಾತ್ರಗಳ ನಡವಳಿಕೆಯ ಸಣ್ಣ ಸಣ್ಣ ವಿವರಗಳು, ವ್ಯಕ್ತಿತ್ವದ ವಿವರಗಳು ಇವುಗಳನ್ನು ಓದುತ್ತಿದ್ದ ಹಾಗೆ ಕುವೆಂಪು, ಕಾರಂತರನ್ನು ಓದುತ್ತಿದ್ದೇನಾ ನಾನು ಅನ್ನುವ ಅನುಮಾನ ಶುರುವಾಗುತ್ತದೆ.ಈ ಕಾದಂಬರಿಯ ಶಂಕ್ರು, ಸುಬ್ರಾಯಪ್ಪ ,ಅನುಸೂಯ, ಪುಟ್ಟಣ್ಣ,ತಂಗು,ಗೋಪು ಕೃಷ್ಣ,ಬಂಟ್ ಮಾಸ್ತರು, ಮೇನಕೆ,ತಿಮ್ಮಣ್ಣಪ್ಪ ಹೀಗೆ ಒಂದೊಂದು ಪಾತ್ರವನ್ನೂ ಸೃಜಿಸವಲ್ಲಿ ಶ್ರೀಧರ ಬಳಗಾರರಲ್ಲಿನ ಜೀವನಾನುಭವ ಅದೆಷ್ಟು ಗಟ್ಟಿಯಾದದ್ದು ಎಂಬುದು ಎದ್ದು ಕಾಣುತ್ತದೆ.

ಅನಸೂಯ / ಅಂತೆ ಪಾತ್ರವಂತೂ ಕನ್ನಡ ಕಾದಂಬರಿ ಜಗತ್ತಿನ ವಿಶಿಷ್ಟ ಪಾತ್ರಗಳಲ್ಲಿ ಒಂದು. ಅವಳಲ್ಲಿನ ಜೀವನಪ್ರೀತಿ, ಬದುಕಿನ ಬಗೆಗಿನ ಸಹಿಷ್ಣುತೆ, ವಾಸ್ತವಕ್ಕೆ ಗಟ್ಟಿಯಾಗಿ  ಎದುರು ನಿಲ್ಲುವ ಛಲ, ಪರರ ಬಗೆಗಿನ ಕಳಕಳಿ, ಹೆಣ್ಣಾಗಿ ಮತ್ತೊಂದು ಹೆಣ್ಣು ಜೀವದ ಬಗೆಗಿನ ಪ್ರಾಮಾಣಿಕ ಕಳಕಳಿ ಮತ್ತು ಹೆಗಲುಕೊಡುವ ಗುಣ ಸಹಜ ತಾಯ್ತನದವು. ಕಾದಂಬರಿಯಲ್ಲಿ ಪಾಸಿಟಿವ್ ಆದ ಅಂಶಗಳು ಶೋಧಿಸುತ್ತಾ ಹೋದಷ್ಟು ಬಗಲಿಗೆ ಬಂದು ಬೀಳುತ್ತವೆ. ಈ ಕಾದಂಬರಿಯ ಲೇಖಕರಲ್ಲಿ , ಕಾದಂಬರಿಯ ಕತೆಗೆ ಮತ್ತು ಲೇಖಕರರಲ್ಲಿ ಇದ್ದಿರಬಹುದಾದ ನಾನು ಕಂಡ ಹಾಗೆ ಒಂದು ನೆಗೆಟಿವ್ ಆದ ಎದ್ದು ಕಾಣುತ್ತದೆ.ಅದೇನೆಂದರೆ ಈ   ಭಾರತೀಯ ಲೇಖಕರಲ್ಲಿ ಸಹಜವಾಗಿ ಕಾಣುವ ನೈತಿಕ ಎಚ್ಚರದ ಫಲವಾಗಿ. ಈ ಕಾದಂಬರಿಯಲ್ಲಿ ಅಂತೆ/ ಅನುಸೂಯಳನ್ನು ಅನುಮತಿಯಿಲ್ಲದೆ, ವಿವಾಹಬಾಹಿರವಾಗಿ,ಆಕಸ್ಮಿಕವಾಗಿ ಕೂಡಿ, ಅವಳ ಬದುಕಿನ ಎಲ್ಲ ತಲ್ಲಣಗಳಿಗೆ ಕಾರಣನಾಗುವ 

ಪುಟ್ಟಣ್ಣನ ಪಾತ್ರವನ್ನು ಮತ್ತು ಆದರ್ಶವಾದಿ ಸುಬ್ರಾಯಪ್ಪನನ್ನು , ಮಡದಿ ಅನುಸೂಯ ಬದುಕಿದ್ದಾಗಲೇ ಗೌಪ್ಯವಾಗಿ ಕಾಶಿಯಲ್ಲಿ ವರಿಸುವ ಮೇನಕೆಯ ಪಾತ್ರವನ್ನು ಲೇಖಕರು ಸಾಯಿಸಿರುವುದು. ನನಗ್ಯಾಕೋ ಇಲ್ಲಿ ಲೇಖಕರು ನೈತಿಕ ಎಚ್ಚರ ಮತ್ತು ಕತೆಗೆ ನ್ಯಾಯ ಒದಗಿಸುವ  ಮತ್ತು ಓದುಗರ ದೃಷ್ಟಿಯಲ್ಲಿ ಲೇಖಕನ ನೈತಿಕತೆ ಯ ಪರ ಎಂಬ ಗೊಂದಲಕ್ಕೆ ಬಿದ್ದು ಎರಡೂ ಪಾತ್ರಗಳಿಗೆ ದುರಂತದ ಅಂತ್ಯವನ್ನು ಬೇಕಂತಲೇ ಕೊಟ್ಟರೇನೋ ಅನ್ನಿಸುತ್ತದೆ? ಈ ಒಂದು ಅಂಶ ಬಿಟ್ಟರೆ ' ಮೃಗಶಿರ' ಕಾದಂಬರಿ ಕನ್ನಡ ಸಾಹಿತ್ಯದ ಬಹುಮುಖ್ಯ ಕಾದಂಬರಿಗಳಲ್ಲಿ ಒಂದು ಎಂದು ಹೇಳಬಹುದು.

ಕಡೆಯದಾಗಿ...ಒಂದು ಮಾತಿದೆ ' ತಾತ್ವಿಕ ಜಗತ್ತಿನಲ್ಲಿ ಎಂಥದೇ ಭೀಕರ ಭೂಕಂಪವಾದರೂ ಮನುಷ್ಯರನ್ನು ಅದು ಚಚ್ಚಿಸುವುದಿಲ್ಲ, ಮನುಷ್ಯ ಬದಲಾಗುವುದು ತತ್ವಗಳಿಂದ  ಅಲ್ಲ.ದಿಗ್ರ್ಭಮೆಗಳಿಂದ,ತಲ್ಲಣಗಳಿಂದ, ಜೀವನದ ಕೋಲಾಹಲಗಳು ಮನುಷ್ಯನ ಬದುಕನ್ನು ಬದಲಿಸುತ್ತವೆ' ಎಂದು ಈ ಮಾತಗಳು ಮೃಗಶಿರ ಕಾದಂಬರಿಗೆ ಹೇಳಿ ಬರೆಸಿದ ಹಾಗಿದೆ.

ಎಚ್.ಎಸ್. ರೇಣುಕಾರಾಧ್ಯ