Article

ಮುಕ್ತಗೊಂಡ 'ಸ್ನಾನ' 

ಅಂಕಿತ ಪುಸ್ತಕ ಹೊರತಂದ ರಥ, ಕ್ಷೇತ್ರ, ಸ್ನಾನ ಮೂರು ಕಿರು ಕಾದಂಬರಿಯನ್ನೊಳಗೊಂಡ ಎಂ. ವ್ಯಾಸರ 'ಸ್ನಾನ' ಹೊತ್ತಿಗೆಯು ಇತ್ತೀಚೆಗೆ ಮರು ಓದುವಂತಾಯಿತು. ಇದು ಎಂ. ವ್ಯಾಸರು ಮೆಚ್ಚಿಕೊಂಡ ವಿಶೇಷ ಕೃತಿಯಾಗಿದೆ.ಈ ಕೃತಿಯ ಮುನ್ನುಡಿಯಲ್ಲಿ ರವಿ ಬೆಳಗೆರೆ 'ಸಿದ್ಧಾಂತಗಳ ಚರ್ಚೆ ಎಲ್ಲೋ ಒಂದು ಕಡೆ ಕತೆಯ ಆಚೆ ಹೋಗಿ ನಿಲ್ಲುತ್ತದೆ' ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಸ್ವತಃ ಎಂ. ವ್ಯಾಸರ ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ಕಂಪನಗಳು ಓದುಗರಿಗೆ ನಿಜಕ್ಕೂ ಕೇಳಿಸುತ್ತವೆಯೇ ಎಂಬ ಜಿಜ್ಞಾಸೆಯಲ್ಲಿ ಕಾದಂಬರಿಯ ಹುಟ್ಟಿನ ಬಗ್ಗೆ 'ನಿಮಗೊಂದು ಪತ್ರ' ದಲ್ಲಿ ಅವರೇ ವಿವರಿಸಿದ್ದಾರೆ. ಎರಡಕ್ಷರ ಶೀರ್ಷಿಕೆಯ ಪರಂಪರೆ ಕಾದಂಬರಿಗೂ ವಿಸ್ತರಿಸಿದೆ.

ರಥ ಕಾದಂಬರಿ ನೆನಪಿನ ಸರಪಳಿಯಲ್ಲಿ ಬಂಧಿಸಿ ಎಳೆದುಕೊಂಡು ಹೋಗುವುದರಲ್ಲಿ ಹೆಣ್ಣಿನ ಸ್ವಗತ ಪಾತ್ರವೇ ನಿರೂಪಣಾ ತಂತ್ರವಾಗಿದೆ.!. ಗಂಡಿಗೆ ಸಂಭೋಗ ಆ ಕ್ಷಣಕ್ಕಷ್ಟೆ ಅಂತ್ಯ ಆದರೆ ಹೆಣ್ಣಿಗೆ ಆ ಕ್ಷಣದಿಂದ ಪ್ರಾರಂಭ, ಅಂತ್ಯವಿಲ್ಲದ್ದು...ಜೈವಿಕ ಭೌತಿಕ ಅಳಿಸಲಾಗದ ಸಂವೇದನೆ...! ಕಥಾ ನಾಯಕಿ ಸುಶೀಲಾ ತನ್ನ ಸಂಯೋಗದ ಅನುಭವವನ್ನು ಬಾಲ್ಯದ ನೆರೆಮನೆ ಸಂಗಾತಿ ರವಿಗೆ ಸ್ವಗತವಾಗಿ ಕಥೆ ಹೇಳುವ ಪ್ರಥಮ ನಿರೂಪಣೆಯಲ್ಲಿ ಬೇಗುದಿ ಬಿಚ್ಚಿಕೊಳ್ಳುತ್ತದೆ. ಮಕ್ಕಳಾಟದಂತೆ ಗಂಡ ಹೆಂಡತಿ ಕ್ರಿಯೆಯ ಪರಿಣಾಮದಿಂದ ಹೊರಬರಲಾಗದ ಮಾನಸಿಕ ದ್ವಂದ್ವವನ್ನು ರವಿಯಲ್ಲಿ ಹಂಚಿಕೊಳ್ಳುವ ಸುಶೀಲಾಳ ಸೂಕ್ಷ್ಮ ಸಂವೇದಿನೀ ಭಾವ ಕ್ರಮಿಸುವ 'ರಥ' ಹೃದಯಂಗಮವಾಗಿದೆ. ಈ ಕಾದಂಬರಿಯನ್ನು ಹಗಲು ಒಂದು ರಾತ್ರಿಯೊಳಗೆ ಎಂ. ವ್ಯಾಸರು ಬರೆದಿರುವುದು ಅಚ್ಚರಿ ಎನಿಸುತ್ತದೆ. ಹೊತ್ತುಕೊಂಡ ಭಾವದೊತ್ತಡ ಹೇಗಿರಬಹುದು ಎಂಬ ಜಿಜ್ಞಾಸೆ ಮೂಡುತ್ತದೆ. ಮುರಿದ ಸೇತುವೆಯಡಿ ಜರುಗಿದ ಕ್ರಿಯೆಯ ನೆನಪಿನ ರಥ ಬದುಕಿನುದ್ದಕ್ಕೂ ಮುಂದುವರೆಯದೆ ಕಚೇರಿಯಲ್ಲಿ ಜೊತೆಯಾದ ಸಹದ್ಯೋಗಿಯ ಒಡನಾಟದಲ್ಲಿ ಥಟ್ಟನೆ ನಿಂತುಬಿಡುವ ಅನುಭವ ಸುಶೀಲಳಿಗಾದಾಗ ಅವಳ ವರ್ತಮಾನ ಬದುಕು ಇನ್ನು ಸಂಭ್ರಮದಲ್ಲಿ ತೊನೆಯುತ್ತದೆ ಎನ್ನುವುದು ಕಾದಂಬರಿಯ ಅಂತ್ಯ ...!? 

ಸ್ತ್ರೀ ಭೋಗದ ವಸ್ತು ಎನ್ನುವುದು ಅನಾದಿ ಕಾಲದಿಂದಲೂ ನಡೆದು ಕೊಂಡು ಬಂದಿದೆ. ಇದನ್ನು ಸುಳ್ಳು ಮಾಡಲು ಸ್ತ್ರೀ ಸ್ವಾತಂತ್ಯ್ರದ ಹೆಸರಿನಲ್ಲಿ ಪ್ರಗತಿಪರರು ಪ್ರತ್ಯೇಕತೆ ಸಾಧಿಸಿದರೂ ಕಾಮ ಕ್ಷೇತ್ರದಿಂದ ಹೊರತಾಗಿಲ್ಲ. ಮಕ್ಕಳು ಬೇಡ ಎಂದು ಸಿಡಿದಿಲ್ಲ. ಎಲ್ಲರೂ ಸನ್ಯಾಸಿನಿಯರಾಗಿದ್ದರೆ ಅದೊಂದು ಬಂಡಾಯ ಸಮಾಜ ಎನಿಸಿಕೊಳ್ಳುತ್ತಿತ್ತು. ಬರೀ ಮಾತಿನ ಶಬ್ದ ಸ್ಫೋಟ...! ಎಂ. ವ್ಯಾಸರು ಗರ್ಭಾಶಯವನ್ನೇ ಮೂಲವಾಗಿಟ್ಟುಕೊಂಡು 'ಕ್ಷೇತ್ರ' ಎಂದು ಹೆಸರಿಸಿ ಅದರ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಅಸಂಗತವನ್ನೇ ಕಲಾತ್ಮಕವಾಗಿ ಸಾಹಿತ್ಯಕರಣ ಗೊಳಿಸಿದ್ದಾರೆ. ಮನುಷ್ಯ ಸಂಬಂಧಗಳಿಗೆ ನೈತಿಕ ಅನೈತಿಕದ ಕಟ್ಟುಪಾಡುಗಳೆಂದೂ ಅಡ್ಡಿಯಾಗಲಾರವು ಎನ್ನುವ ಸಂದರ್ಭದಲ್ಲಿ ವಂಶವಾಹಿನಿಯ ದೃಷ್ಟಿಯಲ್ಲಿ ಅನಿವಾರ್ಯ ಪ್ರಸಂಗವನ್ನು ಸಂಯಮತೆಯಲ್ಲಿ ಪ್ರತಿಪಾದಿಸಿದ್ದಾರೆ.

ಅನಂತ ಶರ್ಮನಿಗೆ ಇಬ್ಬರು ಗಂಡು ಮಕ್ಕಳು, ರವಿ ನೈತಿಕ ಮಗ ತಾಯಿಯನ್ನು ಕಳೆದುಕೊಂಡವನು. ಇನ್ನೊಬ್ಬ ನಾಗಭೂಷಣ, ಆಶ್ರಯಕ್ಕೆ ಬಂದ ಹೆಣ್ಣಿನ ಶೋಷಿತ ಮಗ. ಇಬ್ಬರ ವಿಚಾರಧಾರೆಗಳು ಭಿನ್ನ, ದ್ವೇಷದಲ್ಲಿಯೇ ಬೆಳೆದು ದೊಡ್ಡವರಾದವರು. ರವಿ ಮದುವೆಯಾದ ಮೀನಾಕ್ಷಿಗೆ ದೈಹಿಕ ಹಿಂಸೆ ನೀಡುತ್ತಾ ಬರಲಾಗಿದೆ. ಅಪ್ಪನ ಮೇಲೆ ನಾಗಭೂಷಣನ ಮೇಲೆ ಸೇಡು ತೀರಿಸಿಕೊಳ್ಳುವಂತೆ ವಿಲಕ್ಷಣ ರಾಮಾಯಣ ಪಾತ್ರಗಳ ಸೃಷ್ಟಿಸಿ ಬೇಯುತ್ತಿದ್ದವನು ಕಡೆಗೆ ಅಪಘಾತದಲ್ಲಿ ಮರಣಿಸುತ್ತಾನೆ. ವಿಧವೆ ಮೀನಾಕ್ಷಿ ಪ್ರತಿಭಾವಂತೆ, ವಂಶವಾಹಿನಿ ಬೆಳೆಯದ ದುಃಖ ಮಾವ ಸೊಸೆಯಲ್ಲಿ ಕುಟುಕುತ್ತಿದ್ದಂತೆ ದೂರದಲ್ಲಿ ರಂಗ ಪ್ರದರ್ಶನ ನೀಡುತ್ತಾ ನೆಲೆಸಿದ ನಾಗಭೂಷಣನ ಭೇಟಿಗೆ ಬಂದ ಮಾವ ತನ್ನ ಹಾದರ ಸತ್ಯವನ್ನೇ ತೆರೆದಿಡುತ್ತಾನೆ. ಅಮ್ಮನ ಅನೈತಿಕತೆಗೆ ಕ್ರೋಧಿತನಾಗಿದ್ದ ನಾಗಭೂಷಣ ಅನಿವಾರ್ಯ ಸನ್ನಿವೇಷಕ್ಕೆ ರಾಜಿಯಾಗಿ ಅಪ್ಪನ ಊರಿಗೆ ಬರುತ್ತಾನೆ. ಅಲ್ಲಿರುವ ಮೀನಾಕ್ಷಿಯ ಗುಣಸೌಂದರ್ಯದ ಸೆಳೆತದಲ್ಲಿ ಕ್ಷೇತ್ರವು ಯಶ್ವಸಿ ಫಲ ಪಡೆಯುತ್ತದೆ. ಕಾಮವನ್ನು ಸಂಸ್ಕರಿಸಿ ಪವಿತ್ರಗೊಳಿಸಿ ಸಂಬಂಧವನ್ನು ದೈವಿ ಹಂತಕ್ಕೆ ಕೊಂಡೊಯ್ಯಲು ಎಂ. ವ್ಯಾಸರಿಗೆ ಮಾತ್ರ ಸಾಧ್ಯ.ಹಾದರವು ಪವಿತ್ರ ಎನ್ನುವ ಅವರ ನಿರುಪಣಾ ಶೈಲಿಯೇ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾಗಿದೆ.

'ಸ್ನಾನ' ಮೈಲಿಗೆಯ ಸಂಕೇತವೆನಿಸಿದರೂ ಆಧ್ಯಾತ್ಮಿಕ ಸೂಕ್ಷ್ಮತೆಯನ್ನು ಗುರುತಿಸಬಹುದಾದ ಕಥಾ ಹಂದರ...! ಕುಂಡಲಿನಿ ಯೋಗದ ಸಾರವನ್ನು ಸತ್ಯನ ಪಾತ್ರದಲ್ಲಿ ಸಾಕ್ಷಾತ್ಕರಿಸಿದ್ದಾರೆ. ಮಠದ ಸ್ವಾಮಿಗಳಾದವರ ಆಂತರಿಕ ತುಮುಲ ತಲ್ಲಣಗಳ ಚಿಕಿತ್ಸಾತ್ಮಕ ವಿವರಣೆಗಳು ಕುತೂಹಲಕಾರಿಯಾಗಿವೆ. ಮಠದ ಭಕ್ತರ ಒತ್ತಾಸೆ, ಸ್ವಾಮಿಯ ಸಾಮಾಜಿಕ ಪಾತ್ರ ನಿರ್ವಹಣೆ, ಗುರುಗಳ ಉತ್ತರಾಧಿಕಾರಿಯಾಗಿ ಮರಿಗುರುಗಳ ನೇಮಕ ಸಹಜವೇ.,! ಸೆಕ್ಸ್ ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲಿಯೇ ತನ್ನ ವಿರಾಟ ಸ್ವರೂಪವನ್ನು ತೋರಿಸುತ್ತದೆ. ಆದರೆ ಬಾಲ್ಯದಲ್ಲಿಯೇ ಸನ್ಯಾಸತ್ವದ ದಾರಿಗೆ ತಳ್ಳಿದಾಗ ಕಾಮನೆಗಳು ಉಸಿರುಗಟ್ಟುವ ಸ್ಥಿತಿಯನ್ನನುಭವಿಸುತ್ತವೆ. ಬಾಲ್ಯದಿಂದಲೂ ಸಹಪಾಠಿಯಾಗಿದ್ದ ದೇವಿಕಾ ದೊಡ್ಡವಳಾಗಿ ಮದುವೆಯಾಗಿದ್ದರೂ ಗಂಡನ ಸಾವಿನಿಂದ ಪ್ರಥಮ ಮಿಲನವಿಲ್ಲದೆ ಸ್ವಾಮಿ ಮಠದ ಪಕ್ಕದ ಮನೆಯಲ್ಲಿಯೇ ಸನ್ಯಾಸಿನಿಯ ಬಾಳಾಗಿರುವುದು ಇಬ್ಬರ ಸಮಾನಾಂತರ ದೈಹಿಕ ಸ್ಥಿತಿಗಳು ಗಮನಾರ್ಹವಾಗಿವೆ. ಸ್ವಾಮಿಗೆ ಸಿಕ್ಕ ಧ್ಯಾನ ತರಬೇತಿ ಕ್ರಿಯೆ ಮಾತ್ರ ದೇವಿಕಾಗಿಲ್ಲವಷ್ಟೆ...! ಭೌತಿಕವಾಗಿ ಕಾಮನೆಗಳ ಸಂಯಮತೆಯೊಂದಿಗೆ ಸತ್ಯ ಮಠದಲ್ಲಿ ಬೇಯುತ್ತಿರುವಾಗಲೇ ದೇವಿಕಾಳ ಸಾಮಿಪ್ಯದ ಯೋಚನೆಯಲ್ಲಿ ಸಂದರ್ಭವು ಮುಖಾಮುಖಿಯಾಗುತ್ತದೆ. ಬಾಲ್ಯದ ಸ್ನೇಹಿತೆ ವಿಧವೆ ದೇವಿಕಾ ಸ್ವಾಮಿಯ ಸಂಪರ್ಕದಲ್ಲಿ ಅರಳುತ್ತಾಳೆ ಆದರೆ ದೈಹಿಕ ಕ್ರಿಯಾ ಕರ್ಮಗಳ ಧ್ಯಾನ ಯೋಗ ಸ್ವಾಮಿ ಸತ್ಯ ಅವರಿಗೆ ತಿಳಿಯದೇ ಮೂಲಾಧಾರ ಚಕ್ರದ ಶಕ್ತಿ ತನ್ನಷ್ಟಕ್ಕೆ ಮೇಲ್ಮುಖವಾಗಿ ಚಲನೆಗೈದ ಅಂಶವನ್ನು ಎಂ. ವ್ಯಾಸರು ತುಂಬಾ ಸೂಕ್ಷ್ಮವಾಗಿ ವಿಶದಪಡಿಸುತ್ತಾರೆ. ಸಹಸ್ರಾರು ಚಕ್ರಕ್ಕೆ ಚಿತ್ತವು ಕ್ರಮಿಸದಂತೆ ಮಾಯೆ ಆವರಿಸುವ ಪರಿಯೇ ಅವರ ಬಾಹ್ಯ ವರ್ತನೆ ಮತ್ತು ತಲ್ಲಣಗಳಾಗಿರುತ್ತವೆ. ದೇವಿಕಾಳ ಮಿಲನದಲ್ಲಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪುರ ಚಕ್ರದಿಂದ  ಶಕ್ತಿ ಮೇಲೇರಿದ ಅನುಭಾವ ಸ್ವತಃ ಸ್ವಾಮಿ ಅವರಿಗೆ ಸತ್ಯ ತಿಳಿದಿರುವುದಿಲ್ಲ. ಗೊಂದಲದಲ್ಲಿ, 'ಇದು ಹೀಗಲ್ಲ...ನನಗೆ ಗೊತ್ತಿಲ್ಲ...ಬಿಟ್ಟು ಬಿಡು ದೇವೀ...' ಎನ್ನುತ್ತಾರೆ. ನಿಜವಾದ ಸ್ವಾಮಿತ್ವ ಪ್ರಾಪ್ತಿಯಾಗುವುದೇ ಈ ಹಂತದಲ್ಲಿ. ಇಷ್ಟು ದಿನ ತಮ್ಮ ಪ್ರವರದ ಆಲೋಚನೆಯಲ್ಲಿ ( ಮೊದಲ ಗುರುಗಳ ಹಾದರಕ್ಕೆ ಹುಟ್ಟಿದ ಸಂಗತಿ ), ಮನಸ್ಸಿನ ತಳಮಳದಲ್ಲಿ ಬದುಕು ಭ್ರಮೆಯಾಗಿ ತೋರಿದರೂ ಬ್ರಹ್ಮಚರ್ಯದ ಫಲ, ಅಂತಿಮ ದರ್ಶನ ಸಾಧ್ಯವಾದುದು ದೇವಿಕಾಳೊಂದಿನ ಮಿಲನ ಕ್ರಿಯೆ ಸಂದರ್ಭದಲ್ಲಿ ಎನ್ನುವುದು ಎಂ. ವ್ಯಾಸರ ಪ್ರಬುದ್ಧ ಜೀವನ ದರ್ಶನದ ದಿವ್ಯ ಗ್ರಹಿಕೆಯಾಗಿರುತ್ತದೆ. ಅವರೇ ಒಂದೆಡೆ ಹೇಳಿಕೊಂಡಿರುವಂತೆ ಇದು ಅವರ ಜೀವಮಾನದ ಶ್ರೇಷ್ಠ ರಚನೆ ಕೂಡಾ,..!? ಸಾಹಿತ್ಯ ಲೋಕ ಅವರನ್ನು ಸಂಪೂರ್ಣವಾಗಿ ಮರೆತು ಬಿಟ್ಟ ಈ ಸಂದರ್ಭದಲ್ಲಿ ಕೃತಿಯೊಂದರ ಮರು ಓದು ಸ್ಮರಣೆಗೆ ಅವಕಾಶವಾಗಲೆಂದು ಆಶಿಸುತ್ತೇನೆ.

ಕೃತಿಯ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ಷಿತಿಜ್ ಬೀದರ್