Article

ಮೂರು ದೇಶ ನೂರು ಅನುಭವ

‌ಉತ್ಸಾಹಿ ಸದಾ ನಗು ಮುಖದ ಸಾಹಿತಿಗಳು ಹಾಗೂ ಕನಾ೯ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  ಪುರಸ್ಕೃತರಾದ ಸಿದ್ಧರಾಮ ಹೊನ್ಕಲ್ ಅವರು ಸಾಹಿತ್ಯ ದ ವಿವಿಧ ಪ್ರಕಾರಗಳಾದ ಕಾವ್ಯ ಕಥೆ,ಲಲಿತ ಪ್ರಬಂಧ, ಸಂಪಾದಕಿಯ,ಪ್ರವಾಸ ಕಥನ ಹೀಗೆ 37 ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿದ್ದಾರೆ. ಪ್ರವಾಸ ಕಥನ ಬರೆಯುವಲ್ಲಿ ತಮ್ಮದೇ ಛಾಪವನ್ನು ಮೂಡಿಸಿದ್ದಾರೆ. ಈಗಾಗಲೆ ದೇಶದ ವಿವಿಧ ಕಡೆ ಪ್ರವಾಸ ಮಾಡಿ 5 ಪ್ರವಾಸ ಕಥನಗಳನ್ನು ನಮಗೆಲ್ಲಾ ಓದಲು ಕೊಟ್ಟಿದ್ದು,ಈಗ ವಿದೇಶ ಪ್ರಯಾಣ ದ ಅನುಭವವನ್ನು ಉಣಿಸಲು 'ಮೂರು ದೇಶ ನೂರೊಂದು ಅನುಭವ' ವೆಂದು ಸಿಂಗಾಪುರ, ಮಲೇಷಿಯಾ, ಥೈಲ್ಯಾಂಡ್ ಗಳ ಸಂಸ್ಕ್ರತಿ, ಕಲೆ,ಪ್ರಕೃತಿಯ ಸೊಬಗನ್ನು ಈ ಕೃತಿಯಲ್ಲಿ ಬಿತ್ತಿದ್ದಾರೆ. 

ಅಲ್ಲಿಯ  ಸೊಬಗನ್ನು ನಾವು ಮನದಲ್ಲಿ ತುಂಬಿಕೊಂಡು ಆಕಾಶದಲ್ಲಿ ತೇಲಾಡುವಂತೆ ಕೃತಿ ರಚಿಸಿದ್ದಾರೆ, ಅದರ ಜೊತೆಗೆ ಪ್ರವಾಸದಲ್ಲಿ ಆದ ಕಹಿ ಅನುಭವ ವನ್ನು ಹೇಳಿದ್ದಾರೆ, ಮುಂದೆ ನಾವುಗಳು ಪ್ರವಾಸ ಹೋದರೆ ಹೇಗೆ ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ. ಹೊನ್ಕಲ್ ಅವರ ಪ್ರವಾಸ ಕಥನ ಓದುತ್ತಾ ಹೋದಂತೆ ನಾವು ಬೌತಿಕ ಹಾಗೂ ಮಾನಸಿಕವಾಗಿ ಅದರಲ್ಲಿ ತನ್ಮಯರಾಗಿ ಅಲ್ಲಿಯ ಚಿತ್ರಗಳು ನಮ್ಮ ಕಣ್ಣ ಮುಂದೆ ಸುಳಿದು ಆತ್ಮೀಯವಾಗಿ ಮುಂದೇನೆಂಬ ಕುತೂಹಲ ಹುಟ್ಟಿಸುತ್ತಾ ಓದು ಮುಂದೆ ಸಾಗುತ್ತದೆ. ಲೇಖಕರು ಪ್ರವಾಸ ಹೋಗುವದಕ್ಕಿಂತ ಮುಂಚೆ ಇಲಾಖೆಯ ಮೇಲಾಧಿಕಾರಿ ಗಳ ಅನುಮತಿ  ತೆಗೆದುಕೊಳ್ಳುವಾಗ ಆದ ತ್ರಾಸು ಮತ್ತು ಕಳೆದ ದಿನಗಳು ಅದರಿಂದ ಪ್ರವಾಸದ ಉತ್ಸಾಹ ಇಳಿಮುಖವಾಗಿದ್ದು ಓದುಗರಾದ ನೌಕರಸ್ಥರು ವಿದೇಶಪ್ರವಾಸ ಹೋಗಬೇಕಾದಾಗ ನೀವು ಮೊದಲೇ ಅನುಮತಿ ತೆಗೆದುಕೊಳ್ಳಬೇಕೆಂದು ಎಚ್ಚರಿಕೆ ನೀಡುತ್ತಾರೆ.

‌ಸಿಂಗಾಪುರ ಪುಟ್ಟದಾದ ದೇಶ, ಇದು ಒಂದು ನಡುಗಡ್ಡೆ, ಸ್ವಚ್ಛ ವಾದ ಪ್ರದೇಶ. ಎಲ್ಲೂ ಖಾಲಿ ನೀರಿನ ಬಾಟ್ಲಿಗಳು, ಕ್ಯಾರಿಬ್ಯಾಗಗಳು ನೋಡಲು ಕಾಣುವದಿಲ್ಲ.ಪ್ರತಿಯೊಂದು ದೇಶದ ಹೆಸರಿಗೆ ಐತಿಹಾಸಿಕ ಘಟನೆ ಇರುವಂತೆ ಈ ದೇಶಕ್ಕೆ ಸಿಂಗಾಪುರ ಎಂಬುದು ಒಂದು ಜಾನಪದ ಕತೆಯ ಮೂಲಕ ಹೇಗೆ ಬಂತೆಂದು ಸುಂದರವಾಗಿ ವಿವರಿಸಿದ್ದಾರೆ. ಈ ಪುಟ್ಟ ದ್ವೀಪದಲ್ಲಿಯೂ ಬ್ರಿಟಿಷ್ ರು ರಾಜ್ಯ ಭಾರಮಾಡಿದ್ದು 1965ರಲ್ಲಿ ಪೂರ್ಣ ಸ್ವತಂತ್ರ ಬಂದಿದೆ. ಆದರೂ ಬಹಳ ಮುಂದುವರೆದ ಈ ದೇಶ ಆಧುನಿಕ ರೀತಿಯ ಎಲ್ಲಾ ಯಂತ್ರೋಪಕರಣಗಳನ್ನು ವೈಜ್ಞಾನಿಕವಾಗಿ ಉಪಯೋಗಿಸುವದು ಕಂಡು ಬರುತ್ತದೆಂದು ಲೇಖಕರು ಹೇಳುತ್ತಾರೆ. ಗಗನ ಚುಂಬಿಸುವ ಕಟ್ಟಡಗಳು, ಸುಂದರ ಉದ್ಯಾನಗಳಿಂದ ದೇಶ ಆಕರ್ಷಕವಾಗಿ, ಸುಂದರವಾಗಿ ಕಾಣುತ್ತದೆಂದು ಹೇಳಿದ್ದಾರೆ. ಮೂರುದಿನ ಸಿಂಗಾಪೂರದ ಸೌಂದರ್ಯವನ್ನು ಕಂಡು ಸಂತೋಷದಲ್ಲಿ ತೇಲಾಡುವಾಗ ಕೊನೆಗಳಿಗೆಯಲ್ಲಿ ಸಣ್ಣ ಅವಘಡವಾಗಿ ಲೇಖಕರು 50000₹ ದಂಡ ತುಂಬಿ ಮುಂದೆ ಪ್ರಯಣಿಸುತ್ತಾರೆ, ಈ ಘಟನೆಯಿಂದ ಮನ ನೊಂದುಕೊಳ್ಳುತ್ತಾರೆ. 

‌ಮಲೇಷಿಯಾದ ರಾಜಧಾನಿ ಕೌಲಾಲಂಪುರ್ ದ ಕಡೆ ಪ್ರಯಣಿಸುತ್ತಾರೆ. ಮಲೇಷಿಯಾವನ್ನು ಬ್ರಿಟಿಷರು ಆಳುತ್ತಿದ್ದಾಗ ಮುಸ್ಲಿಂ ಸುಲ್ತಾನ್ ಬ್ರಿಟಿಷ್ ರಾಯಭಾರಿಯಾಗಿ ದೇಶ ಆಳಿದ್ದಾರೆ. ಇಲ್ಲಿ ಮುಸ್ಲಿಮ ಜನಸಂಖ್ಯೆ ಹೆಚ್ಚಾಗಿದ್ದಾರೆ. 1957ರಲ್ಲಿ ದೇಶ ಸ್ವತಂತ್ರ ವಾಗಿದ್ದು ಇಲ್ಲಿಯೂ ಗಗನ ಚುಂಬಿಸುವ ಕಟ್ಟಡಗಳು ಉದ್ಯಾನವನಗಳು ಇದ್ದದ್ದು ಲೇಖಕರು ಉಲ್ಲೇಖಿಸಿದ್ದಾರೆ. ಇಲ್ಲಿ ಭಾರತದ ಮೂಲ ತಮಿಳಿಯರು ಇದ್ದು ಹಿಂದೂ ದೇವಾಲಯಗಳು ಇದ್ದು ದಕ್ಷಿಣ ಭಾರತ ಪದ್ದತಿಯ ಭೋಜನ ಪ್ರವಾಸಿಗರಿಗೆ ದೊರೆಯುತ್ತದೆಂದು ಬರೆದಿದ್ದಾರೆ. ‌ಮಲೇಷಿಯಾದಿಂದ  ಪ್ರವಾಸಿಗರ ತಂಡ ಥೈಲ್ಯಾಂಡ್ ಗೆ ಪ್ರಯಾಣಿಸುತ್ತದೆ. ಥೈಲ್ಯಾಂಡ್ ದಲ್ಲಿ ಬೌದ್ಧ ಧರ್ಮವಿದ್ದು ಕ್ರಿ.ಶ.3 ರಲ್ಲಿ ಸಾಮ್ರಾಟ ಅಶೋಕ ರಾಜನು ಭಾರತದಿಂದ ಬೌದ್ಧ ಬಿಕ್ಕುಗಳನ್ನು ಧರ್ಮ ಪ್ರಚಾರಕ್ಕೆ ಕಳಿಸಿದ್ದರೆಂದು ತಿಳಿದು ಬರುತ್ತದೆ. ಜಗತ್ತಿನ ಅತಿ ಉದ್ದದ ಹಾಗೂ ಸುವರ್ಣ ಬುದ್ಧನ ಮೂತಿ೯ ಇರುವ ಬುದ್ಧ ವಿಹಾರವಿದ್ದು ಮಲಗಿದ ಬುದ್ಧನ ವಿಗ್ರಹ 100 ಅಡಿ ಇದ್ದು ಸುತ್ತಲೂ ಪ್ರಾಂಗಣದಲ್ಲಿ ಅನೇಕ ಬುದ್ಧ ಮೂತಿ೯ಗಳು ವಿವಿಧ ಭಂಗಿಯಲ್ಲಿದ್ದದ್ದು ಕಾಣಬಹುದೆಂದು ಲೇಖಕರು ತಿಳಿಸುತ್ತಾರೆ.

ಇಲ್ಲಿ ಪ್ರಮೀಳಾ ರಾಜ್ಯವಿದ್ದು ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರೆ ಕಾರ್ಯ ನಿರ್ವಹಿಸುವದು ಕಂಡು ಬರುವದು. ಮತ್ತು ಸರಕಾರವೇ ಇಲ್ಲಿ ವೈಶ್ಯಾವಾಟಿಕೆಗೆ ಅನುಮತಿ ಕೊಟ್ಟಿದೆ. ಸುಂದರ ನಗುವಿನ ಹಳದಿ ತರುಣಿಯರು ಪ್ರವಾಸಿಗಳಿಗೆ ಸಂತೃಪ್ತಗೊಳಿಸಲು ಸಾಲಾಗಿ ಕಾದು ಇಡೀ ದೇಶದುದ್ದಕ್ಕೂ ಕಂಡಲೆಲ್ಲಾ ನಿಂತಿರುತ್ತಾ ರೆಂದು ಲೇಖಕರು ಉಲ್ಲೇಖಿಸಿದ್ದಾರೆ.ಮೈ ಮಾರಿದ ಆ ಸಂಪತ್ತಿನಿಂದಲೇ ದೇಶದ ಪ್ರಗತಿ ಹೊಂದುತ್ತಿರುವದೆಂದು ತಿಳಿದು ಲೇಖಕ ಹೊನ್ಕಲ್ ಅವರು ಮನನೊಂದು ಕೊಂಡಿದ್ದಾರೆ, ಪ್ರತಿ ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮಸಾಜ್ ಮಾಡುವ ಸುಂದರ ತಾರುಣ್ಯ ಸೂಸುವ ಹುಡುಗಿಯರು ಕುಳಿತಿರುತ್ತಾರೆ. ಪ್ರತಿ ಹೋಟಲ್ಗಳಲ್ಲಿಯೂ ಮಸಾಜ್ ಮಾಡುವ ಪದ್ದತಿಯಿದ್ದು ತರುಣಿಯರೇ ಮಾಡುತ್ತಾರೆಂದು ಲೇಖಕರು ಸಹ ತರಬೇತಿ ಕಲಿಸುವ ಸಂಸ್ಥೆಯೊಂದರಲ್ಲಿ ಮಸಾಜ್ ಮಾಡಿಸಿ ಕೊಂಡರೆಂದು ತಿಳಿಸುತ್ತಾರೆ. ಅಲ್ಲಿಯ ಭಾಷೆ ಅರ್ಥ ವಾಗದಿದ್ದರೂ ಜಾನಪದ ನೃತ್ಯ ನೋಡಿ ಸಂತಸ ಪಟ್ಟೆವೆಂದು ಹೇಳುತ್ತಾ ಅನೇಕ ಪೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಪುಸ್ತಕದ ಕೊನೆಗೆ ಮುದ್ರಿಸಿದ್ದಾರೆ.ಆ ದೇಶ ನೋಡಲಾಗದವರು ಈ ಫೋಟೋ ನೋಡಿ ಆ ದೇಶವನ್ನು ಕಲ್ಪಿಸಿಕೊಳ್ಳಲು ಈ ಚಿತ್ರಗಳು ಸಹಕಾರಿಯಾಗಿವೆ.ಥೈಲ್ಯಾಂಡ್ ದಲ್ಲಿ ಪ್ರವಾಸೋದ್ಯಮ ಜೊತೆಗೆ ಮುತ್ತುರತ್ನಗಳ ಗಣಿಗಾರಿಕೆಯಿಂದ ಹಿಡಿದು ಸುಂದರ ಆಭರಣಗಳ ತಯಾರಿಕೆಯಲ್ಲಿ ಹಾಗೂ ಮಾರಾಟ ಮಳಿಗೆಗಳಿದ್ದು ಆಭರಣಗಳು ಸುಂದರವಾಗಿ ಆಕರ್ಷಕವಾಗಿದ್ದವು.ಆದರೆ ಹೊನ್ಕಲ್ ಅವರು ಹಣದ ತೊಂದರೆ‌ಯಿಂದ ಮುತ್ತಿನ ಆಭರಣಗಳನ್ನು ಖರೀದಿಸಲಾಗಲಿಲ್ಲವೆಂದು ಹೇಳುತ್ತಾರೆ. ಸಿಂಗಾಪುರ್ ದಲ್ಲಿ  ಹಣ ಹೋಟಲ್ ದಲ್ಲಿ ದಂಡವಾಗಿ ತುಂಬಿದ್ದು ನಾವು ಇಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ.

ಮೂರು ದೇಶಗಳ ಪ್ರಕೃತಿ ಸೌಂದರ್ಯ ಕಣ್ಣಲ್ಲಿ ತುಂಬಿಕೊಂಡು,ಸುಂದರ ಗಗನಸಖಿಯರ,ಅಲ್ಲಿಯ ಹಳದಿ ಚೆಲುವೆಯರ ನಗು ಮರೆಯಲಾಗದೆಂದು ಹೇಳುತ್ತಾ ತಾಯಿನಾಡಿಗೆ ಪ್ರವಾಸಿ ತಂಡ ಮರಳುತ್ತದೆ. ಈ ಥೈಲ್ಯಾಂಡ್ ಪ್ರವಾಸ ಅಪೂರ್ಣವಾದ ಅನುಭವ ಲೇಖಕರದ್ದಾಗಿದ್ದು ಮತ್ತೊಮ್ಮೆ ಹೋಗುವ ಹಿಂಗಿತ ಈ ಕೃತಿ ಓದಿದಾಗ ವ್ಯಕ್ತವಾಗುತ್ತದೆ.ಅದನ್ನು ಲೇಖಕ ಹೊನ್ಕಲ್ ರೇ ಹೇಳಬೇಕು.ಎಲ್ಲರೂ ಒಮ್ಮೆ ಈ ಕೃತಿ ಓದುವಷ್ಟು ಸ್ವಾರಸ್ಯಕರವಾಗಿದೆ. ಸಿದ್ಧರಾಮ ಹೊನ್ಕಲ್ ಅವರ ’ಮೂರು ದೇಶ ನೂರೊಂದು ಅನುಭವ’ ಕೃತಿ ಓದಿ ಎಲ್ಲರೂ ಆನಂದಿಸುವಂತಿದೆ. ಇವರು ಇನ್ನೂ ಅನೇಕ ವಿದೇಶಗಳಿಗೆ ಹೋಗಿ ಸುತ್ತಾಡಿ ಅದರ ಅನುಭವವನ್ನು ಓದುಗರಿಗೆ ಉಣ ಬಡಿಸಲೆಂದು ಹಾರೈಸುತ್ತೇನೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪ್ರಭಾವತಿ ದೇಸಾಯಿ