Article

ಮೂರು ತಲೆಮಾರಿನ ಜೀವನ ಘಟನಾವಳಿ ‘ಬಯಲೆಂಬೊ ಬಯಲು’

ಪ್ರೊ. ಎಚ್.ಟಿ.ಪೋತೆ ಅವರ ಸಾಹಿತ್ಯ ರಚನೆಯ ಪ್ರಧಾನ ಭೂಮಿಕೆ ಡಾ. ಅಂಬೇಡ್ಕರ್ ಅವರ ಚಿಂತನೆಗಳಿಂದ ಆವೃತ್ತವಾಗಿರುತ್ತದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಅವರ ‘ಬಯಲೆಂಬೊ ಬಯಲು’ ಕಾದಂಬರಿ ಓದಿ ಮುಗಿಸಿದಾಗ ಅಸ್ಪ್ರಶ್ಯ ಕುಟುಂಬದ ಮೂರು ತಲೆಮಾರಿನ ಜೀವನದ ಘಟನಾವಳಿಗಳ ಒಂದು ಸುತ್ತು ಹಾದು ಬಂದ ಅನುಭವವಾಯಿತು. ಮೂರು ತಲೆಮಾರುಗಳ ಸಾಮಾಜಿಕ ಚಿತ್ರಣ ಕಣ್ಣಿಗೆ ಕಟ್ಟುವಂತೆ, ಓದುಗರನ್ನು ತೀವೃ ಕುತೂಹಲದಿಂದ ಓದುವಂತೆ ಮಾಡಿದ್ದಾರೆ. ರಾಮಪ್ಪನ ತಲೆಮಾರು ಮತ್ತು ಹನುಮಂತನ ತಲೆಮಾರಿನ ಜೀವನದ ಸಂಗತಿಗಳಲ್ಲಿ ಬಹಳಷ್ಟು ವ್ಯತ್ಯಾಸವಾಗಿರುವದನ್ನು ಕಾಣುತ್ತೇವೆ. ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಶಿಕ್ಷಣದ ಅರಿವು ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಹೇಗೆ ಎಲ್ಲರೂ ಗೌರವಿಸುವ ವ್ಯಕ್ತಿಯನ್ನಾಗಿ ರೂಪಿಸಿದೆ ಎಂಬುದನ್ನು ತಿಳಿಸಿಕೊಡುತ್ತದೆ ಈ ಕಾದಂಬರಿ.       
 
        ಉತ್ತರ ಕರ್ನಾಟಕದ ವಿಜಯಪುರ ಜವಾರಿ ಭಾಷೆಯಲ್ಲಿ ಸರಳವಾಗಿ ಘಟನೆಗಳನ್ನು ನಿರೂಪಿಸಿದ್ದಾರೆ. ಯಾವುದೇ ವೈಭವೀಕರಣ, ಬಿರಿಸು ಪದ ಆತ್ಮರತಿಗೆ ಇಲ್ಲಿ ಆಸ್ಪದವಿಲ್ಲದಂತೆ ಲೇಖಕರು ಎಚ್ಚರಿಕೆ ವಹಿಸಿದಂತೆ ಕಾಣುತ್ತದೆ. ಇದು ಅವರ ಆತ್ಮಕಥನದಂತೆ ಕಂಡರೂ ಅವರೇ ಹೇಳಿದಂತೆ ಕೆಲವಡೆ ಕಲ್ಪಿತವಾಸ್ತವಗಳನ್ನು ಸೇರಿಸಿದ್ದಾರೆ. ಹಾಗಂತ ಇಡೀ ಕಾದಂಬರಿ ಕಲ್ಪನೆಯಲ್ಲಿ ಹುಟ್ಟಿದ ಕಥನವಲ್ಲ, ಜೊತೆಗೆ ತಾವು ಕಂಡುಂಡ ನೋವು-ನಲಿವುಗಳನ್ನು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಈ ಬರೆಹದಲ್ಲಿ ತರುವ ಮೂಲಕ ಮತ್ತು ಸಂಘರ್ಷವನ್ನು ಸಾತ್ವಿಕರೂಪದಲ್ಲಿ ಹೇಳುವ ಕ್ರಮದಿಂದಲೇ ಡಾ.ಪೋತೆ ಅವರು ಎಲ್ಲ ವರ್ಗದ ಓದುಗರಿಗೂ ಆಪ್ತರಾಗುತ್ತಾರೆ. ಎಲ್ಲರನ್ನೂ ತಮ್ಮ ಪ್ರೀತಿ ಮತ್ತು ಅಂತಃಕರಣಗಳಿಂದ ಕಾಣುವ ಗುಣದ ಹನುಮಂತ (ನಮ್ಮ ಲೇಖಕರೂ ಕೂಡಾ) ಕೂಡು ಕುಟುಂಬವನ್ನು ಮೂರನೇ ತಲೆಮಾರಿಗೂ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಹಾಗೆ ನೋಡಿದರೆ ಈ ಬಯೋಪಿಕ್ ಕಾದಂಬರಿಯ ವಸ್ತು ಕೇವಲ ಪೋತೆ ಅವರ ಕುಟುಂಬಕ್ಕೆ ಸಂಬಂಧಿಸಿದ್ದು ಎಂದರೆ ತಪ್ಪಾದೀತು. ಶೋಷಿತ ಸಮುದಾಯದ ಕುಟುಂಬಗಳ ಚರಿತೆಯೂ ಇದೆ ಆಗಿದೆ. ಅವರ ಬದುಕಿನ ಸ್ಥಿತಯೂ ಭಿನ್ನವೇನೂ ಇಲ್ಲ. ಆದರೆ ಇಲ್ಲಿ ಸಫಲತೆಯನ್ನು ಕಾಣುವುದು ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳ ಹಿನ್ನೆಲೆಯಲ್ಲಿ ಬದುಕುವ ಪರಿಯನ್ನು ಹೇಳಿಕೊಡುವುದೇ ಆಗಿದೆ.

       ಭಾರತದಂತಹ ವಿಶಾಲ ದೇಶದಲ್ಲಿ ಧರ್ಮ, ಜಾತಿ, ವರ್ಗವ್ಯವಸ್ಥೆಯು ಹೇಗೆ ತನ್ನ ವಿರಾಟ ಸ್ವರೂಪವನ್ನು ತೋರಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವಂತಹುದೇ ಆಗಿದೆ. ಚೋಮನ ದುಡಿಯ ಚೋಮನ ಬಯಕೆ ಭೂಮಿಯ ಮಾಲೀಕನಾಗಬೇಕು ಎನ್ನುವುದು. ಈ ಕಥನದಲ್ಲೂ ರಾಮಣ್ಣನಿಗೂ ಇದೇ ಮಹದಾಸೆ ಆಗಿದೆ. ತಾನು ಭೂಮಿಯನ್ನು ಸ್ವಂತದ್ದಾಗಿ ಮಾಡಿಕೊಳ್ಳಬೇಕು, ಹಾಗೆ ಮಾಡಿಕೊಳ್ಳುವಲ್ಲಿ ಚೋಮನಗಿಂತಲೂ ಮುಂದಕ್ಕೆ ಹೋಗಿ ಭೂಒಡೆಯನಾಗಿ ಸಫಲನಾಗುತ್ತಾನೆ. ಈ ಸಫಲವಾಗುವದಿದೆಯಲ್ಲಿ ಆತನು ನೋವು-ಅನುಭವಿಸಿದ ಸಂಕಟಗಳ ಒಟ್ಟು ಮೊತ್ತವೇ ಆಗಿದೆ. ಇದೇ ನೋವು, ಅವಮಾನ ಎಲ್ಲವುಗಳು ತಿಪ್ಪಣ್ಣನಿಗೂ, ಮುಂದೆ ಬಾಲ್ಯ ಮತ್ತು ಯೌವ್ವನದಲ್ಲಿ ಹನುಂತನಿಗೂ ರವಾನೆಯಾಗುತ್ತವೆ. ಹಾಗೆಯೇ ಎಲ್ಲವನ್ನೂ ಮೆಟ್ಟಿನಿಲ್ಲುವ, ಎದುರಿಸುವ ಸಾಮಥ್ರ್ಯ ಮೂರು ತಲೆಮಾರಿನವರಿಗೂ ಬರುತ್ತದೆ. ಶೋಷಣೆಯನ್ನು ಅನುಭವಿಸಿ ಬದುಕುವದು ಒಂದಡೆಯಾದರೆ ಇನ್ನೊಬ್ಬರಿಗೆ ಹೇಗೆ ಬದುಕುಬೇಕೆನ್ನುವ ಹೇಳಿಕೊಡುವ ಬುಧ್ಧಿವಂತಿಕೆ ರಾಮಣ್ಣನಿಂದ ತಿಪ್ಪಣ್ಣನಿಗೆ, ಅದೂ ಮುಂದೆ ಹನುಮನಿಗೂ ಬರುತ್ತದೆ, ಇದೆಲ್ಲವೂ ಶಿಕ್ಷಣದಿಂದ ಸಾಧ್ಯ ಎನ್ನುವುದು.
  
     ಇಪ್ಪತ್ತೆರೆಡು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಬಯಲೆಂಬೊ ಬಯಲು ಕಾದಂಬರಿಯು ತಳವರ್ಗದ ಕುಟುಂಬವೊಂದರ ಮೂರು ತಲೆಮಾರುಗಳ ಬದುಕಿನ ಪಯಣವನ್ನು ವಿವರಿಸುತ್ತದೆ. ಅಜ್ಜ ರಾಮಪ್ಪ, ತಂದೆ ತಿಪ್ಪಣ್ಣ ಮತ್ತು ನಿರೂಪಕ ಹನುಮಂತ ಅವರ ಜೀವನಗಾಥೆಯನ್ನು ಭಾರತದ ಸಾಮಾಜಿಕ ವ್ಯವಸ್ಥೆಯ ಎಲ್ಲ ಸೂಕ್ಷ್ಮಗಳನ್ನು ಈ ಬಯೋಪಿಕ್ ಕಾದಂಬರಿಯಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಪ್ರೊ. ಮಲ್ಲೇಪುರಂ ವೆಂಕಟೇಶ ಅವರ ಮುನ್ನುಡಿ ಹಾಗೂ ಕೊನೆಯಲ್ಲಿ ವಿದ್ವಾಂಸರು ಬರೆದ ಅಭಿಪ್ರಾಯಗಳಿವೆ, ಪ್ರಕಟಣಾ ಮುನ್ನ ಓದಿದ ಮೇಲೆ ಬರೆದ ಅನಿಸಿಕೆಗಳಾಗಿವೆ. ಪ್ರಕಟಣೆಯ ನಂತರದಲ್ಲೂ ಸಾಲು ಸಾಲು ವಿಮರ್ಶೆಗಳು  ಬಂದವು. 
   
      ಆತ್ಮಕಥನದ ಮಾದರಿಯಲ್ಲಿ ಅನೇಕ ಕಾದಂಬರಿಗಳು ಬಂದಿವೆ. ಕೆಲವು ಆತ್ಮಕಥನಗಳು ಕಾದಂಬರಿಯ ಸ್ವರೂಪವನ್ನೇ ಹೋಲುತ್ತವೆ. ಮರಾಠಿ ಮೂಲದ ಉಚಲ್ಯಾ ಇದಕೊಂದು ಸೂಕ್ತ ನಿದರ್ಶನ ಎನ್ನಬಹುದು. ಕನ್ನಡದಲ್ಲೂ ದಲಿತ ಲೇಖಕರಲ್ಲಿ ಮುಖ್ಯರಾದ ದೇವನೂರ ಮತ್ತು ಸಿದ್ಧಲಿಂಗಯ್ಯನವರ ಆತ್ಮ ಕಥನಗಳು ಕಾದಂಬರಿಯ ಸ್ವರೂಪವೇ ಆಗಿವೆ. ಇವೆಲ್ಲವುಗಳಿಗಿಂತ ಭಿನ್ನವಾಗಿ ಎಚ್.ಟಿ.ಪೋತೆ ಅವರು ಕಥನ ಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.  ತಮ್ಮ ಬದುಕಿನ ವೃತ್ತಾಂತದ ಜೊತೆಗೆ ತಂದೆ ಮತ್ತು ತಾತನ ಬದುಕಿನ ಬಹುಮುಖ್ಯವಾದ ಸಂಗತಿಗಳನ್ನು ಓದುಗರೆದುರು ಬಿಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹೀಗೆ ಮಾಡುವಾಗ ಮೂರು ತಲೆಮಾರಿನ ಧಾರ್ಮಿಕ ಸ್ಥಿತ್ಯಂತರ, ಸಾಮಾಜಿಕ ಸ್ಥಿತಿ ಮತ್ತು ಆರ್ಥಿಕ ವ್ಯವಸ್ಥೆಯನ್ನು ಕಲ್ಪಿತಗೊಳಿಸದೇ ನೈಜಚಿತ್ರಣ ಕೊಟ್ಟಿದ್ದಾರೆನ್ನುವದಕ್ಕೆ ಹಲವಾರು ಘಟನೆಗಳನ್ನು ಸಾಕ್ಷೀಕರಿಸುತ್ತಾರೆ. 
   
      ರಾಮಪ್ಪ ಸಾತ್ವಿಕವಾಗಿ ತನ್ನ ಮನೆತನದ ಹಿತವನ್ನು ಬಯಸಿಕೊಂಡು ಬದುಕಿದವನು, ತಾನು ಬೆಳೆದು ತನ್ನವರನ್ನು ಬೆಳೆಯಬೇಕೆಂಬ ಹಂಬಲವಿಟ್ಟುಕೊಂಡು ತನ್ನ ತಮ್ಮನನ್ನು, ಆತನ ಮಕ್ಕಳನ್ನು ಸಾಕಿ ಬೆಳಿಸಿದ, ಎಲ್ಲರ ಸಂಸಾರವು ಒಂದು ಕಡೆ ನೆಲೆನಿಲ್ಲುವಂತೆ ಮಾಡಿದ ರಾಮಪ್ಪ, ತನ್ನ ತಮ್ಮ ಲಗಸಪ್ಪ ಮ್ಯಾಲಿನಕೇರಿ ಹೆಣಮಗಳನ್ನು ಓಡಿಸಿಕೊಂಡ ಬಂದ ಸುದ್ದಿ ತಿಳಿದು ಅವನಿಗೆ ತಿಳಿಹೇಳಿ, ಸರಿದಾರಿಗೆ ತರುವ ಚಾಕಚಕ್ಯತೆಯೂ ಅವನಲ್ಲಿತ್ತು, ತನ್ನ ಸಂಪತ್ತನ್ನು  ಹೆಚ್ಚುಮಾಡುತ್ತಲೇ ಸಂಬಂಧಿಗಳಾದಿಯಾಗಿ ಎಲ್ಲರೂ ಮೆಚ್ಚುವಂತೆ ಮಾಡಿದ್ದ. ಇದು ಸಮುದಾಯವನ್ನು ಅಪ್ಪಿಕೊಂಡು ಬದುಕುವ ನೋಟವಾಗಿದ್ದರೆ, ತಿಪ್ಪಣ್ಣನದು ಸಮಾಜಮುಖಿಯಾದ ಬದುಕು, ತನ್ನೊಟ್ಟಿಗೆ ಇತರ ವರ್ಗದವರನ್ನು ಬೆಳೆಯಲಿ ಎಂಬ ಮಹದಾಸೆ, ಪ್ರೀತಿಸುವ ಗುಣ, ಅಂಬೇಡ್ಕರ್ ಅವರ ಶಿಕ್ಷಣ ಪ್ರೇಮವನ್ನು ಧಾರಾಳವಾಗಿ ತನ್ನ ಸಮುದಯ ಮತ್ತು ಸಮಾಜದಲ್ಲಿ ಬಿತ್ತಿದರು. ಮೊರನೇ ತಲಾಮಾರಿನಲ್ಲಿ ನಿರೂಪಕ ಹನುಮಂತ ಶಿಕ್ಷಣವನ್ನು ನೆಚ್ಚಿಕೊಂಡು ಪದವಿಪಡೆದು ಗೌರವ ಪಡೆಯುವ ಕಥಾನಕ ವಿವಿಧ ಸಂಗತಿಗಳನ್ನು ಬಯಲುಗೊಳಿಸುತ್ತ ನಿರೂಪಿಸಿದೆ.
       

ಗ್ರಾಮ ಭಾರತದ ಅನಾವರಣ: 
      ಸಂಪೂರ್ಣ ಕಾದಂಬರಿ ಭಾರತದ ಗ್ರಾಮಪರಂಪರೆಯನ್ನು ಪ್ರತಿನಿಧಿಸುತ್ತದೆ. ಬಹುತೇಕ ಹಳ್ಳಿಗಳಲ್ಲಿರುವಂತೆ ಜಾತಿ, ಸಮುದಾಯಗಳ ಒಳಜಗಳ, ದ್ವೇಷ, ನಾಡಿನ ಹಿರಿಯ ಕತೆಗಾರರಲ್ಲೊಬ್ಬರಾದ ಡಾ.ಎಚ್.ಟಿ.ಪೋತೆ ಅವರು ತಮ್ಮ ಆತ್ಮಚರಿತ್ರೆಯನ್ನು ವಿಭಿನ್ನಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮೂರು ತಲೆಮಾರುಗಳ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕೊಡುವ ಮೂಲಕ  ಶೋಷಿತ ಸಮುದಾಯದ ದಲಿತ ಪ್ರಜ್ಞೆಯನ್ನೇ ಮೂಲ ದೃವ್ಯವಾಗಿಟ್ಟುಕೊಂಡು ಗ್ರಾಮ ಜೀವನದ ಚಿತ್ರಣವನ್ನು ನೀಡಿರುವದನ್ನು ಕಾಣುತ್ತೇವೆ. ಹಳ್ಳಿಗಳಲ್ಲಿ ಕಾಣುವ ಸಹಜವಾಗಿರುವದನ್ನೇ ವಸ್ತುವನ್ನಾಗಿಸಿ. ಕಣ್ಣಾರೆ ಕಂಡ ಜೀವಾನುನಭವವನ್ನು ಪೋತೆ ಅವರು ದಾಖಲಿಸುವಲ್ಲಿ ಸಮರ್ಥರಾಗಿದ್ದಾರೆ. ಎಲ್ಲ ಊರುಗಳಲ್ಲಿರುವಂತೆ ಅಸ್ಪೃಶ್ಯತೆಯ ದಟ್ಟಛಾಯೆ ಇರುವದನ್ನು ಹೇಳುವ ಕತೆಗಾರ ದಲಿತರ ಸಂಕಟ ನೋವು ಅವರಲ್ಲಿನ ಹೋರಾಟ ಪ್ರಜ್ಞೆಯ ಮೂಲಕ ಆಗುವ ಬದಲಾವಣೆಯನ್ನು ಹೇಳುತ್ತಾ ಮುಕ್ತವಾಗಿ ಸಮಾಜದೊಂದಿಗೆ ಬೆರೆಯಬೇಕು ಎಂಬ ಆಶಯ ಕಂಡು ಬರುತ್ತದೆ. ಭಾಷೆಯು ಹಳ್ಳಿಯವರಾಡುವ ಮುಗ್ಧತೆ ತುಂಬಿದ ಭಾಷೆ. ಇಂಡಿ ತಾಲ್ಲೂಕಿನ ಗಡಿ ಭಾಗದ ಹಳ್ಳಿಯ ಭಾಷೆಯನ್ನು ಲಗತ್ತಿಸುವ ಲೇಖಕರು ತಮ್ಮೂರಿನ ಭಾಷಾ ಸಂಬಂಧವನ್ನು ಕಲಬುರಗಿಯ ಪ್ರದೇಶದಲ್ಲಿ ನೆಲೆ ನಿಂತರೂ ಸೂಕ್ತವಾಗಿ ಭಾಷೆಯನ್ನು ಅನಾವರಣಗೊಳಿಸಿರುವುದು ವಿಜಾಪುರದ ಗ್ರಾಮೀಣ ಭಾಷೆಯನ್ನೇ. ಮೂರನೇ ತಲೆಮಾರಿನ ಹನುಮಂತ ಮಾತ್ರ ಉನ್ನತ ಶಿಕ್ಷಣ ಪಡೆದು ಪಟ್ಟಣದಲ್ಲೇ ಬಿಡಾರ ಹೂಡಿದರೂ ಈ ಕಾದಂಬರಿಯೊಳಗಡೆ ಅಪ್ಪಟ ಗ್ರಾಮೀಣ ಭಾಷೆಯನ್ನು ಅರಳಿಸುವ ಕುಸುರಿಗಾರಿಕೆ ಲೇಖಕನದ್ದು.


ಆಕರ್ಷಕ ಶೀರ್ಷಿಕೆ: 
      ಬಯಲೆಂಬೋ ಬಯಲು ಕಾದಂಬರಿಯ ಹೆಸರು ಸೂಚಿಸುವಂತೆ ಇಲ್ಲಿ ಎಲ್ಲವೂ ಬಯಲಾಗಿದೆ. ಲೇಖಕರು ನೋವುಂಡ ಸಮಾಜದಿಂದ ಬೆಳೆದು ಬಂದವರು. ಅಂತಹ ಅನೇಕ ಘಟನಾವಳಿಗಳು ಲೇಖಕರ ಬದುಕಿನ ಜೊತೆಗೆ ಬಂದವುಗಳು ಅವುಗಳೆಲ್ಲವೂ ಎಳೆಎಳೆಯಾಗಿ ಯಾವುದೇ ಹಮ್ಮುಬಿಮ್ಮಿಲ್ಲದೆ ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಹಾಗಂತ ಕಾದಂಬರಿಯ ಹೆಸರೇ ಹೇಳುತ್ತದೆ. ಇನ್ನೂ ಒಳಗಡೆ ಹೋದಂತೆಲ್ಲಾ ಅದ್ಯಾಯಗಳಿಗೆ ಕ್ರಮಾಂಕ ಕೊಡುವ ಗೋಜಿಗೆ ಹೋಗದೇ ಆ ಭಾಗದಲ್ಲಿ ಬರುವ ವಿಷಯಾನುಸಾರ ಸೂಕ್ತವಾದ ಆಕರ್ಷಕವಾದ ಪದಬಂಧವನ್ನೇ ಕೊಡುತ್ತಾರೆ.  ಮುಖ್ಯ ಶೀರ್ಷಿಕೆಗೆ ಉಪ ಶೀರ್ಷಿಕೆಯೆನ್ನುವಂತೆ ಎರಡು ಹೆಸರುಗಳು ಸಹೃದಯನ ಎದೆಬಾಗಿಲು ತಟ್ಟಿ ಓದುವಂತೆ ಹೇಳುತ್ತವೆ. ಎಲ್ಲಾ ಅಧ್ಯಾಯಗಳು ಪ್ರವೇಶಿಸುವ ಮುನ್ನ (ಗ್ರಾಮ ಪ್ರವೇಶಿಸಲು ಅಗಸಿಬಾಗಿಲು ಇದ್ದಂತೆ) ಶೀರ್ಷಿಕೆಯನ್ನು ನೋಡಿ ಮುಂದುವರೆಯಬೇಕೆನಿಸುತ್ತದೆ. ಇದು ಓದುಗನ್ನು ಸೆಳೆಯಲು ಕಾದಂಬರಿಯಲ್ಲಿರುವ ಶೈಲಿ ಅಥವಾ ತಂತ್ರ ಎಂದೆನ್ನಕೊಳ್ಳಬಹುದು. ಬಹುತೇಕ ಕಾವ್ಯಮಯವಾಗಿರುವ ತಲೆಬರಹಗಳು ಓದುಗನನ್ನು ಸೆಳೆಯುತ್ತವೆ. ಕೆಲವು ಶೀರ್ಷಿಕೆಗೆ ಉಪ ಶೀರ್ಷಿಕೆಗಳು ಹೀಗಿವೆ; ಕಾಣದ ಕಡಲಿಗೆ ಹಂಬಲಿಸದೆ ಮನ, ಭೇದ ಭಾವ ಮಾಡ್ದೇನೆ.. ಸೂರ್ಯ ಬೆಳಕ ನೀಡ್ಯಾನ, ಮರಿಡ ತೂಗ್ಯಾವೆ.. ಹಕ್ಕಿ ಹಾಡ್ಯಾವೆ, ನುಂಗಿಕೊಂಡ ನೋವೆಲ್ಲ ನಂಜಾದವೋ!, ನೀ ಹೋದ ಮರುದಿನ ಮೊದಲ್ಹಂಗೆ ಆಗ್ಯಾದೋ ಬದುಕು, ಇತ್ಯಾದಿ...

     ವಿಮರ್ಶಕರು ಈ ಕಾದಂಬರಿಯನ್ನು ತಳಸಮುದಾಯದ ಮೀಮಾಂಸೆ ಎಂದೂ, ಮೂರು ತಲೆಮಾರುಗಳ ಅನುಭವ ಲೋಕ ಎಂತಲೂ, ಲಲಿತ ಪ್ರಬಂಧ ಶೈಲಿಯ ಕಾದಂಬರಿ ಎಂದೂ, ಆತ್ಮಚರಿತ್ರೆಯೊಳಗಡೆ ಅನಾವರಣವಾದ ಬಯೋಪಿಕ್ ಕಾದಂಬರಿ ಎಂತಲೂ ಕರೆದಿದ್ದಾರೆ. ಪ್ರೊ,ಮಲ್ಲೇಪುರಂ ಜಿ.ವೆಂಕಟೇಶ್ ಅವರು ಇದು ಮೂರು ತಲೆಮಾರುಗಳ ಚರಿತೆಯನ್ನು ಭಿತ್ತರಿಸುವ ಮೊದಲ ಬಯೋಪಿಕ್ ಕಾದಂಬರಿ ಎಂದು ಹೇಳುವಲ್ಲಿ ತರ್ಕವಿದೆ. ಓದುಗರು ತೆಕ್ಕೆಯೊಳಗೆ ಹೊಸದೊಂದು ಅಭಿಪ್ರಾಯವು ಹೊರಬರಲಿಕ್ಕೆ ಸಾಧ್ಯವಿದೆ ಎಂಬ ಮಾತನ್ನು ಹೇಳುತ್ತ, ಡಾ. ಶ್ರೀಶೈಲ ನಾಗರಾಳ ಅವರು ಹೇಳುವಂತೆ ಮೂರು ತಲೆಮಾರುಗಳ ಮುಖ್ಯಭೂಮಿಕೆಯನ್ನು ಹೀಗೆ ಗುರ್ತಿಸಿದ್ದಾರೆ 'ಮೊದಲನೆಯ ತಲೆಮಾರಿನ ಕಾದಂಬರಿಯ ನಾಯಕ ರಾಮಪ್ಪ ಬದುಕು ಕಟ್ಟಿಕೊಳ್ಳಲು ಪಡುವ ಪ್ರಯತ್ನ, ಎರಡನೆಯ ತಲೆಮಾರಿನ ತಿಪ್ಪಣ್ಣ ಬದುಕನ್ನು ಭದ್ರಗೊಳಿಸಲು ಹೂಡುವ ಸಂಘರ್ಷವಾಗಿದ್ದರೆ ಮೂರನೇ ತಲೆಮಾರಿನ ಹನುಮಂತ ರಾಮಪ್ಪನ ಬದುಕಿನ ಬುನಾದಿಗೆ ನೆಲಕ್ಕೆ ಅನ್ನದ ಬೀಜಗಳನ್ನು ಬಿತ್ತಿದರೆ, ತಿಪ್ಪಣ್ಣ ತನ್ನ ಮಕ್ಕಳು ಮತ್ತು ಪರಿವಾರದ ಎದೆಯಲ್ಲಿ ಅಕ್ಷರ ಅರಿವಿನ ಬೀಜ ಬಿತ್ತುತ್ತಾನೆ, ಹನುಮನಲ್ಲಿ ಅವರೆಡೂ ಸಂಕಲಿತಗೊಂಡು ವರ್ತಮಾನದ ಸಂವೇದನೆಗಳ ಸ್ವರೂಪ ಪಡೆದುಕೊಳ್ಳುತ್ತದೆ' ಈ ಮಾತುಗಳೊಂದಿಗೆ ಕಾದಂಬರಿ ಕುರಿತಾಗಿ ಕೆಲವು ಅನಿಸಿಕೆಗಳನ್ನು ತಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮೇಶ ಎಸ್. ಕತ್ತಿ

Comments