Article

ಮೈಥಿಲೆಯ ವಿದ್ಯಾಪತಿ; ಶೃಂಗಾರಯೋಗ ಕವಿ

ಎಮ್. ಎಸ್. ಕೃಷ್ಣಮೂರ್ತಿ ಅವರ ‘ವಿದ್ಯಾಪತಿ’ ಕೃತಿ ಸಾಹಿತ್ಯಾಸಕ್ತರಿಗೆ ವಿಸ್ಮಯವೆನಿಸುವ ಕೃತಿಕುಮಾರವ್ಯಾಸ ತನ್ನ ಭಾರತವನ್ನು ಕುರಿತು “ಅರಸುಗಳಿಗಿದು ವೀರ, ಪರಮವೇದದ ಸಾರ ವಿರಹಿಗಳ ಶೃಂಗಾರ” ಹೀಗೆ ತನ್ನ ಕೃತಿಯ ಮಲ್ಟಿಪರ್ಪಸ್ ಕುರಿತು ಹೇಳುತ್ತಾನೆ. ಯೋಗಿಯಾದವನು ಶೃಂಗಾರವನ್ನು ನಖಶಿಖಾಂತ ಬಲ್ಲವನಾಗಿರುತ್ತಾನೆ ಎನ್ನುವುದಕ್ಕೆ ಭಾರತೀಯ ಯೌಗಿಕ ಸಾಹಿತ್ಯವನ್ನು ಒಂದು ಬಾರಿ ಕಣ್ಣಾಡಿಸಿದರೆ ಗೊತ್ತಾಗುತ್ತದೆ. ಮದುವೆ ಎಂದರೆ ಉರಿದು ಬಿಳುತ್ತಿದ್ದ ಶರೀಫರು ಕೂಡಾ “ಅರಗಿಳಿ ಸಮ ಇವಳ ನಗೆಯು ಚಲ್ವ ಸುಳಿನಾಭಿ ಕುಚಕುಂಭಗಳ ಹಂಸನಡೆಯು” ಎಂದು ಬರೆಯುತ್ತಾರೆ. ಭಾವನಾತ್ಮಕವಾಗಿ ಮನಸು ಮತ್ತು ಕಣ್ಣುಗಳನ್ನು ಪಳಗಿಸಿದಾಗ ಅಲ್ಲಿ ಕವಿ ಮೈದಾಳುತ್ತಾನೆ. ಕವಿಯಾದವನು ವಾಸ್ತವದ ವಿಷಮದ್ದನ್ನು ಯಾವಾಗಲು ಬೆಲ್ಲದ ನಡುವೆ ತೂರಿಸಿ ತಿನ್ನಿಸುತ್ತಾನೆ. ಕಣ್ಣಿಗೆ ಕಾಣುವುದು ಬೆಲ್ಲವಾದರೂ ಒಳಗಡೆಯ ಔಷಧಿ ಮಾತ್ರ ವಾಸ್ತವವಾಗಿರುತ್ತದೆ. ಹಾಗಾಗಿ ಅತ್ಯಂತ ಖಾವಿಯ ನಡುವೆಯೂ ಒಂದು ತೆರೆನಾದ ಭವದ ಒತ್ತಡದ ನಿಗ್ರಹವಿರುತ್ತದೆ. ಅದನ್ನು ಮುಖವಾಡ ಇತ್ಯಾದಿ ರ್ಯಾಡಿಕಲ್ ಮಾತುಗಳಲ್ಲಿ ಛೇಡಿಸಬಹುದು ಆದರೆ ಪ್ರಾಕೃತಿಕ ಸತ್ಯಗಳನ್ನು ಅರಿತು ಮನುಷ್ಯ ಸ್ವಭಾವವನ್ನು ಸೂಕ್ಷ್ಮವಾಗಿ ಪ್ರವೇಷಿಸಿದರೆ, ಅವರೂ ಕೂಡಾ ಮುಖವಾಡ ಧರಿಸಿದ ಮನುಷ್ಯರೆ ಅಷ್ಟೆ ಎನ್ನಬೇಕಾದೀತು. ಇದಕ್ಕೆ ಅಪವಾದವೆಂಬಂತೆಯೂ ಆಲೋಚಿಸಬಹುದು. ಶೃಂಗಾರ ಬರೆದ ಮಾತ್ರಕ್ಕೆ ಕವಿಯ ಚಾರಿತ್ರ್ಯ ಕೆಟ್ಟದ್ದು ಎಂದು ಅಥವಾ ಸಾತ್ವಿಕವಾಗಿ ಬರೆದ ಕಾರಣಕ್ಕೆ ಕವಿಯ ಚಾರಿತ್ರ್ಯ ಒಳ್ಳೆಯದು ಎಂದು ಹೇಳಲು ಆಗುವುದಿಲ್ಲ ಯಾಕೆಂದರೆ ಕಾವ್ಯವೆನ್ನುವುದೆ ಅತ್ಯಂತ ಭಾವುಕ ನಿಸರ್ಗದಲ್ಲಿ ಜನ್ಮ ತಾಳುವಂಥದ್ದು. ಅದು ಕವಿಯ ಅಭಿಲಾಷೆ ವಸ್ತುಶಃ ವಾಸ್ತವವಲ್ಲ ಹಾಗಂದ ಮಾತ್ರಕ್ಕೆ ಅದು ವಾಸ್ತವವನ್ನು ಹೊತ್ತು ತರದಷ್ಟು ನಿಶಕ್ತಿಯನ್ನೂ ಕೂಡಾ ಹೋಂದಿಲ್ಲ ಎನ್ನಲಾಗುವುದಿಲ್ಲ. ಜಿ.ಪಿ.ರಾಜರತ್ನಂ ತಮ್ಮ ಜೀವಮಾನದುದ್ದಕ್ಕೂ ಯಾವತ್ತು ಕುಡಿತಿರಲಿಲ್ಲ ಆದರೆ ಅವರ ಬಹುತೇಕ ಪದ್ಯಗಳು ಕುಡಿತದ ವಸ್ತುವನ್ನೆ ಹೊಂದಿವೆ. ಆ ಸರಸ್ವತಮ್ಮನ ಪದ, ಪುಟ್ನಂಜಿ ಪದ, ಪಡಖಾನೆ ಪದ ಹೀಗೆ ಎಲ್ಲವನ್ನು ಅವರು ಆಗು ಮಾಡುತ್ತಾರೆ. ಒಂದು ಅನುಭವವನ್ನು ಸೃಜನಶೀಲವಾಗಿ ಎದುರುಗೊಳ್ಳುವಾಗ ಕವಿಯಾದವನು ಒಂದಿಡೀ ಸಂಸ್ಕೃತಿಯನ್ನು ತಳ್ಳಾಡುತ್ತಾನೆ. ಕಾವ್ಯ ಹುಟ್ಟಿದಮೇಲೆ ಕವಿ ಸಾಯುತ್ತಾನೆ ಎನ್ನುವ ಮಾತು ಈ ನಿಟ್ಟಿನಲ್ಲಿ ಮೂಡಿ ಬಂದಿರಬಹುದೇನೋ. ಚಂಪಾ ಬೇಂದ್ರೆಯವರ ಬಗ್ಗೆ ಇದನ್ನೆ ಹೇಳುತ್ತಾರೆ. “ಈ ಕಾವ್ಯನಾಮ ಇವೆಯಲ್ಲ ಕವಿ ತನ್ನ ಮಿತಿಯನ್ನು ಮುಚ್ಚಿಕೊಳ್ಳಲಿಕ್ಕೆ ಮಾಡುವ ಪ್ರಯತ್ನ. ಅಂಬಿಕಾತನಯದತ್ತ ಎನ್ನುವ ಒಂದು ಎಮೊಷಿನಲಿಟಿ ಇಡೀ ಬೇಂದ್ರೆಯವರನ್ನು ವ್ಯಕ್ತಿಯಾಗಿಯೂ, ಕವಿಯಾಗಿಯೂ ಸುಬದ್ರವಾಗಿ ಚಿತ್ರಿಸಬಲ್ಲದು. ಅವರು ನಮ್ಮ ನಡುವಿನ ಕವಿ ಆದರೆ ಸುಮಾರು ವರ್ಷ ಕಳೆದಮೇಲೆ ಅಂಬಿಕಾತನಯ ದತ್ತ ಬದುಕುತ್ತಾನೆ ಬೇಂದ್ರೆ ಮಡಿಯುತ್ತಾನೆ. ಬೇಂದ್ರೆ ಒಳ್ಳೆ ಕವಿ ಒಳ್ಳೆ ಮನುಷ್ಯ ಅಲ್ಲ ಅಂತ ಚಂಪಾ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಕಾವ್ಯನಾಮದ ಕುರಿತಾಗಿ ನರಹಳ್ಳಿ ಬಾಲಸುಬ್ರಹ್ಮಣ್ಯನವರು. “ಕವಿಯಾದವನು ನಿಸ್ವಾರ್ಥಿ ಅದಕ್ಕೆ ತನ್ನ ಹೆಸರಿನ ಬದಲು ಕಾವ್ಯನಾಮದ ಮೊರೆ ಹೋಗುತ್ತಾನೆ ಕಾರಣ ಆತನಿಗೆ ಸ್ಪೂರ್ತಿಯಲ್ಲಿ ನಂಬಿಕೆ ಇದೆ ಹಾಗಾಗಿ ಕವಿ ತನ್ನ ಸೃಜನಶೀಲತೆಯನ್ನು ಕಾವ್ಯ ನಾಮದ ಮೇಲಾಕಿ ಕೃತಾರ್ಥನಾಗುತ್ತಾನೆ ಎಂದು ಹೇಳುತ್ತಾರೆ. ಇದನ್ನೆ ಎಂ.ಎಂ. ಕಲಬುರ್ಗಿಯವರು ವ್ಯಕ್ತಿ ನಿರಸನ ಸಿದ್ಧಾಂತಕ್ಕೆ ತಂದು ನಿಲ್ಲಿಸುತ್ತಾರೆ. ಇದಕ್ಕೆ ಕುಮಾರವ್ಯಾಸನಿಂದ ನಿದರ್ಶನ ನೀಡುತ್ತಾರೆ “ನಾನು ಲಿಪಿಕಾರ ಗದುಗಿನ ವೀರನಾರಾಯಣನೇ ಕವಿ ಎನ್ನುವ ಮಾತನ್ನು ಅವರು ಉದ್ದರಿಸುತ್ತಾರೆ. ಇಂಥ ಮಾತುಗಳು ಬೇಂದ್ರೆ ಕಾವ್ಯದ್ಲಯೂ ಬಂದಿವೆ. “ಮುನ್ನಬಗೆಯಲಿ ಹಾಡನು ನೀನೇ ಹೆತ್ತಿ. ನನ್ನ ನಾಲಿಗೆ ಬರೀ ಸೂಲಗಿತ್ತಿ’ ಎನ್ನುವ ಮಾತು ಬೇಂದ್ರೆ ಕಾವ್ಯದಲ್ಲಿಯೂ ಬರುತ್ತದೆ. ಕವಿಯ ಕಾವ್ಯ ಜೀವನ ಮತ್ತು ನೈತಿಕಾವಸ್ಥೆ ಕುರಿತು ಹೆಳಲು ಹೋಗಿ ಇಷ್ಟೆಲ್ಲ ಹೇಳಬೇಕಾಯಿತು. ಇದು ಮೈಥಿಲೆಯ ವಿದ್ಯಾಪತಿಗೂ ಪೀಠಿಕೆಯಾದೀತು. ಅಥವಾ ಯೋಗಿ ಮತ್ತು ಶೃಂಗಾರದ ನಡುವಣ ಗೆರೆ ತುಂಬಾ ತೆಳುವೆಂದು ಹೇಳಲಿಕ್ಕೆ ಕೊಡುವ ಸಮರ್ಥನೆಯೂ ಆದಿತು.

ಮಿಥಿಲೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿಯೇ ಒಂದು ವಿಶಿಷ್ಟವಾದ ಪ್ರದೇಶ. ನಮ್ಮ ಪರಂಪರೆಯ ರಕ್ತವೇ ಆದ ಸಿತೆ, ಅಶೋಕ ಮುಂತಾದ ಮಹಾನ್ ಪೌರಾಣ ಕ ಚಾರಿತ್ರಿಕ ವ್ಯಕ್ತಿತ್ವಗಳು ಆವಿರ್ಭವಿಸಿ ಭಾರತೀಯ ಪರಂಪರೆಗೆ ಕಸುವು ತುಂಬಿದ ನಾಡದು. ವಿದ್ಯಾಪತಿಯ ಜನನ ಅಲ್ಲಿಯೇ ಆಗುತ್ತದೆ. ಅಂದರೆ ಆ ಪ್ರದೇಶಕ್ಕೆ ಒಳಪಟ್ಟ ನಾಡಿನಲ್ಲಿಯೇ. ಮೈಥಿಲಿ ಭಾಷೆ ಮಾಗಧಿ ಮತ್ತು ಪ್ರಾಕೃತಗಳ ಸಮಾಗಮದಲ್ಲಿ ಜನಿಸಿದ್ದು. ಆದರೆ ಬಂಗಾಳಿ ಮತ್ತು ಹಿಂದಿಯಲ್ಲಿ ಇಂದಿಗೂ ಇದರ ಅವಶೆಷಗಳು ಇವೆ. ವಿದ್ವಾಂಸರ ಪ್ರಕಾರ ಮೈಥಿಲಿ ಹಿಂದಿಯ ಉಪಭಾಷೆಗಳಲ್ಲೊಂದು. ಯಾಕೆಂದರೆ ಅದರ ಶಬ್ದಬಂಡಾರವೆಲ್ಲ  ಹಿಂದಿಯದೇ ಆಗಿದೆ. ಮೈಥಿಲಿ ಸ್ವತಂತ್ರ ಭಾಷೆ ಎನ್ನುವ ಹಲವು ಚಳುವಳಿಗಳು ನಡೆದದ್ದುಂಟು. ಮಿಥಿಲೆಯ ದರ್ಬಾಂಗ ಜಿಲ್ಲೆಯ ವಿಸಪಿ ಅಥವಾ ಗಡವಿಸಪಿ ಗ್ರಾಮದಲ್ಲಿ ಕವಿ ವಿದ್ಯಾಪತಿ ಜನಿಸಿದ.

ಕರ್ನಾಟಕಕ್ಕು ಮಿಥಿಲೆಗು ಒಂದು ನಂಟಿದೆ. ಮಿಥಿಲೆಯಲ್ಲಿ ಆಳಿದ ನಾನ್ಯದೇವನ ವಂಶದ ರಾಜರು ಕರ್ನಾಟಕದವರೇ ಆಗಿದ್ದಾರೆ. ಕರ್ನಾಟಕದ ಹರಿಹರ ಪರಿಕಲ್ಪನೆ ಉತ್ತರದಲ್ಲಿ ಬರಲು ಈ ಸಂಬಂಧವೇ  ಇರಬೇಕು. ಕರ್ನಾಟಕದ ಅರಸರು ಕಟ್ಟಿಸಿದ ಕೆರೆಗಳು ಇಂದಿಗೂ ಅಲ್ಲಿ ಇವೆ.

ಕವಿ ವಿದ್ಯಾಪತಿಯ ಕಾಲ ಗೊಂದಲದಲ್ಲಿದ್ದರು ಕೆಲವು ಪುರಾವೆಗಳ ಸ್ಪಷ್ಟನೆ ಸರಳವಾಗಿದೆ. ಕ್ರಿ.ಶ 1360 ವಿದ್ಯಾಪತಿಯ ಕಾಲ. ಈ ಕಾಲದಲ್ಲಾಗಲೇ ಶೃಂಗಾರ ರಸ ಹಿನ್ನಡೆ ಪಡೆದು ವೀರರಸ ಮುನ್ನೆಲೆಗೆ ಬರುತ್ತಿರುವ ಕಾಲ. ವಿದ್ಯಾಪತಿ ಶೃಂಗಾರ ಮತ್ತು ವೀರದ ನಡುವಣ ದ್ವಂದ್ದದಲ್ಲಿ ಬದುಕಿದವನು. ಹಾಗಾಗಿ ವೀರತ್ವ, ವಾಸ್ತವತೆ ಮತ್ತು ಶೃಂಗಾರಗಳನ್ನು ತನ್ನ ಕಾವ್ಯದಲ್ಲಿ ಹೇರಳವಾಗಿ ಅಭಿವ್ಯಕ್ತಿಸುತ್ತಾನೆ ವಿದ್ಯಾಪತಿ. ವಿಜ್ಞಾನೇಶ್ವರನನಂತೆ ಅತ್ಯಂತ ಸ್ಥಳಿಯ ಮಾಪನಗಳನ್ನು ಈತ ಮಾಡಿದ್ದಾನೆ. ಸೃಜನಶೀಲತೆ ಮತ್ತು ವಿದ್ವತ್ತುಗಳನ್ನು ಸಮಪ್ರಮಾಣದಲ್ಲಿ ಬೆರೆಸುತ್ತ ಇತ್ತ ಕವಿತ್ವಕ್ಕೂ, ಅತ್ತ ವಾಸ್ತವಕ್ಕೂ ಮತ್ತು ತನ್ನ ಸಮಕಾಲೀನತೆಗೂ ಮೋಸಗೊಳಿಸಿದಂತೆ ಬರೆದಿದ್ದಾನೆ ವಿದ್ಯಾಪತಿ. ಕವಿ ಮನಸು ಹೊರಳಿದ ಕಡೆಯಲ್ಲೆಲ್ಲಾ ಮನುಷ್ಯ ಪ್ರೀತಿಯನ್ನೇ ಅರಸುತ್ತದೆಂಬುದಕ್ಕೆ ವಿದ್ಯಾಪತಿಗಿಂತ ಉದಾಹರಣೆ ಬೇಕಿಲ್ಲ ಅನಿಸುತ್ತೆ. 

ಇವರನ್ನು ಧಾರ್ಮಿಕ ಮಜಲಿನಲ್ಲಿ ನೋಡಬೇಕೆಂದಾಗ ಇವರೊಬ್ಬ ಶಾಕ್ತ, ಶೈವ ಮತ್ತು ವೈಷ್ಣವನಾಗಿ ಕಾಣುತ್ತಾರೆ. ಕವಿಯ ಬರವಣ ಗೆಯಿಂದ ಇದನ್ನು ಹೀಗೆ ಎಂದು ನಿರ್ಧರಿಸಲು ಆಗುವುದಿಲ್ಲ. ನಮ್ಮಲ್ಲಿ ಸುಲ್ತಾನ ಪಟೇಲ ಎಂಬ ಮುಸಲ್ಮಾನ ದೇವಿ ಆರಾಧಕರಾಗಿದ್ದರು. ಅವರನ್ನು ಶಾಕ್ತರೆಂದು ಕರೆಯಬಹುದು ಆದರೆ ಅವರು ಜನ್ಮವೆತ್ತ ಧರ್ಮವೇ ಬೇರೆಯಿದೆ. ಸಾಂಸ್ಕೃತಿಕ ಅಧ್ಯಯನ ಇಂಥಲೆಲ್ಲ ಮುಖ್ಯವೆನಿಸುತ್ತದೆ. ಸ್ವಚ್ಛಂದವಾಗಿ ಹಾರುವವರನ್ನೆಲ್ಲ ಹಾಗೆ ಬಿಡೊದಿಲ್ಲ ಸಮಾಜ. ಅದು ತನ್ನವರಿಗಾಗಿ ಹೊಂಬೇಲಿ ಹಿಡಿದುಕೊಂಡೇ ಕೂತಿದೆ. 

ವಿದ್ಯಾಪತಿಯನ್ನು ಶೈವನೆಂದು ಶಿವನಂದ ಠಾಕೂರ ಮೊದಲಾದವರು ವಾದಿಸಿದರೆ, ಆತ ಶಾಕ್ತನಿರಬಹುದು ಎಂದು ವಾದಿಸುವವರೂ ಇದ್ದಾರೆ. ರಾದ ಕೃಷ್ಣರ ಮೇಲೆ ವಿದ್ಯಾಪತಿ ಬರೆದ ಗೀತಗಳಿಂದ ಅವುಗಳಲ್ಲಿಯ ಅಧ್ಯಾತ್ಮಿಕ ಅರ್ಥಗಳಿಂದ ಆತ ವೈಷ್ಣವನೆಂದು ಬಂಗಾಳಿಗಳು ಕರೆದಿದ್ದಾರೆ. ಆದರೆ ವಿದ್ಯಾಪತಿ ರಾಧಾಕೃಷ್ಣ ಬಗ್ಗೆ ಬರೆದ ಗೀತೆಗಳೆಲ್ಲವೂ ಶೃಂಗಾರ ಗೀತೆಗಳು, ರತಿಗೀತೆ ಪ್ರೇಮಗೀತೆಗಳು. ಆದ್ದರಿಂದ ಅವುಗಳಲ್ಲಿ ಅಧ್ಯಾತ್ಮ ಅರ್ಥವನ್ನು ಅರಸುವುದು ಹುಚ್ಚುತನವೆಂದು ರಾಮಚಂದ್ರ ಶುಕ್ಲ ಅವರ ಅಭಿಪ್ರಾಯವಾಗಿದೆ. ಮುಲತಃ ವಿದ್ಯಾ ಪತಿಯೊಬ್ಬ ಸಮನ್ವಯವಾದಿ. ಎಲ್ಲ ದೇವರನ್ನು ಸಮನಾಗಿ ಗೌರವಿಸಿದ ಪೂಜಿಸಿದ. ವಿದ್ಯಾಪತಿಗೆ ಕೆಲವು ಮುಂಚಿನ ಕಾಲದಲ್ಲಿ ಕನ್ನಡದ ಬ್ರಹ್ಮ ಕ್ಷತ್ರಿಯ ಕುಲಕ್ಕೆ ಸೇರಿದ ಸೇನಾ ರಾಜರು ತಮ್ಮ ರಾಜ್ಯವನ್ನು ಸ್ಥಾಪಿಸಿ ಹರಿಹರೋ ವಾಸನೆಯನ್ನು ಬಳಕೆಗೆ ತಂದಿದ್ದರು ಇದೇ ಸೇನವಂಶದ ಅರಸನಾದ ವಿಜಯ ಸೇನ ಪ್ರದ್ಯುಮ್ನೆಶ್ವರ ದೇವಸ್ಥಾನ ಸ್ಥಾಪಿಸಿ ಅಲ್ಲಿ ಹರಿಹರ ಮೂರ್ತಿಯ ಸ್ತೋತ್ರವನ್ನು ಕೆತ್ತಿಸಿ ಈ ಶಿಲಾಶಾಸನ ಹಾಕಿಸಿದ್ದ.

“ಲಕ್ಷಮಿ ವಲ್ಲಭ ಶೈಲಜಾದಯಿತಯೋರೊದ್ವೈ ತಲೀಲಾಗೃಹಂ

ಪ್ರದ್ಯುಮ್ನೆಶ್ವರ ಶಬ್ದಲುಂಗೃನ ಮದಿಷ್ಠಾನಂ ನಮಸ್ಕುರ್ಮ ಹೇ”

ವಿದ್ಯಾಪತಿಯ ಕಾಲಕ್ಕಾಗಲೇ ಉತ್ತರ ಮತ್ತು ಪೂರ್ವ ಭಾರತದ ಪರಸ್ಪರ ಪ್ರಭಾವಗಳ ಸ್ವೀಕಾರ ಆರಂಭವಾಗಿತ್ತು. ಆಧ್ಯಾತ್ಮಿಕ ವಿನಿಮಯದ ಕಾಲವದು. ಹೀಗಾಗಿ ಅಲ್ಲಿ ಮತಾಚರಣೆಗಿಂತ ಮುಖ್ಯವಾಗಿ ಸಾಂಸ್ಕೃತಿಕ ಸಹಿಷ್ಣುತೆಯ ವಿಲೇವಾರಿ ಆಗಿನ ಕವಿಗಳಿಗೆ ಮುಖ್ಯವಾಗುತ್ತ ಬಂತು. ಹಿಗಾಗಿ ವಿದ್ಯಾಪತಿ ಈ ಸಾಂಸ್ಕೃತಿಕ ವಹಿವಾಟಿನ ಕಾಲದಲ್ಲಿ ಜೀವಿಸಿದ್ದರಿಂದ ಆತನ ಅನುಭವಗಳು ಸಮನ್ವಯತೆಗಾಗಿ ತುಡಿದಿವೆ. ಮುಖ್ಯವಾಗಿ ಕಾಲಘಟ್ಟದ ತಿರುಳನ್ನು ಲೆಕ್ಕಿಸಿದೆ ಕವಿಯನ್ನು ಮತೀಯ ಕಟಕಟಲೆಯಲ್ಲಿ ನಿಲ್ಲಿಸುವುದು ಕೂಡಾ ಒಂದು ಪೂರ್ವಗ್ರಹದ ಓದೇ ಆದೀತು.

ವಿದ್ಯಾಪತಿ ಕನ್ನಡದ ಆಶ್ರಯದ ಕವಿಗಳ ಹಾಗೆ ಒಂದೇ ರಾಜನ ಆಶ್ರಯ ಪಡೆಯಲಿಲ್ಲ. ಆದರೆ ಒಂದೇ ಮನೆತನದ ಹತ್ತಾರು ರಾಜರ ಬಳಿ ಆಶ್ರಯ ಪಡೆದಿದ್ದ. ಬಂಗಾಳದ ರಾಜ ಶಿವಸೇನ ಪಟ್ಟಕ್ಕೆ ಬಂದ ಮೂರು ವರ್ಷದಲ್ಲಿ ಮುಸ್ಲ್ಮಾನರ ಸೇನೆ ಅವನ ರಾಜ್ಯದ ಮೇಲೆ ದಾಳಿ ನಡೆಸಿತು. ಶಿವಸೇನ ಯುದ್ದಭೂಮಿಗೆ ಹೋದವನು ಮತ್ತೆ ಮರಳಿ ಬರಲಿಲ್ಲ. ಆಗ ನಿರ್ಗತಿಕನಾದ ಕವಿ ಶಿವಸೇನನ ಪತ್ನಿ ಲಖಮಾದೇವಿಯೊಂದಿಗೆ ರಾಜಬಿನೌಲಿ ಎಂಬಲ್ಲಿಗೆ ಹೋದ. ಅಲ್ಲಿಯೇ  ಲಿಖನಾವಲಿ ಎಂಬ ಗ್ರಂಥವನ್ನು ಬರೆದ. ಈ ಲಿಖಾನಾವಲಿ ಪುಸ್ತಕವೂ ಕಾಗದ ಬರೆಯುವುದು ಹೇಗೆಂದು ತಿಳಿಸುತ್ತದೆ. ಮತ್ತು ಕೆಲವು ಸಲ ತನ್ನ ಕಾಲದ ಸಾಮಾಜಿಕ ಸ್ಥಿತಿಗತಿಗಳನ್ನು ಈ ಪುಸ್ತಕದಲ್ಲಿ ಆನುಷಂಗಿಕವಾಗಿ ಬಂದು ಹೋಗಿವೆ ಇದನ್ನು ರಾಜಬನೌಲಿ ರಾಜ ಪುರಾದಿತ್ಯನ ಕೋರಿಕೆಯ ಮೇಲೆ ಬರೆದ.

ಈ ಕವಿಯ ಕುರಿತಾಗಿ ಒಂದು ಮಿಥ್ ಇವತ್ತಿಗೂ ಪ್ರಚಲಿತದಲ್ಲಿದೆ. ಅದು ಮಿಥ್ ಆಗಿದ್ದರೂ ಕೂಡಾ ಒಂದು ಮಾರಾಲಿಟಿಯನ್ನು ಹೇಳುತ್ತದೆ. “ವಿದ್ಯಾಪತಿಯ ಕಾವ್ಯ ಮಾಧುರಿಗೆ ಮಾರುಹೋಗಿ ಸಾಕ್ಷಾತ್ ಶಿವನೇ ಅವನ ಮನೆಯಲ್ಲಿ ಆಳಾಗಿ ದುಡಿಯುತ್ತಿದ್ದನಂತೆ ಆ ಆಳಿನ ಹೆಸರು ಉಗನಾ ಅವನು ಯಾವಾಗಲು ಕವಿಯ ಸೇವೆಯಲ್ಲಿಯೇ ನಿರತನಾಗಿರುತ್ತಿದ್ದ. ಒಂದು ದಿನ ಕವಿ ಆತನ ಜೊತೆ ಕವಿಯೆಲ್ಲೊ ಹೋಗುತ್ತಿದ್ದ. ದಾರಿಯಲ್ಲಿ ಆತನಿಗೆ ಬಾಯಾರಿಕೆಯಾಯಿತು. ನೀರು ತರುವಂತೆ ಆಳಿಗೆ ಹೇಳಿದ ಕೊಂಚ ಹೊತ್ತಿನಲ್ಲಿ ಆಳು ಚೊಂಬಿಗೆ ತುಂಬಾ ನೀರು ತಂದ. ಕುಡಿದ ಕೂಡಲೇ ವಿದ್ಯಾಪತಿಗೆ ಅದು ಗಂಗಾಜಲವೆಂದು ಗೊತ್ತಾಯಿತು. ಆದ್ದರಿಂದ ಆತ ಕೆಳಿದ ಉಗನಾ ನೀರು ಎಲ್ಲಿಂದ ತಂದೆ? 

                    ಇಲ್ಲೆ ಹತ್ತಿರದಿಂದ

                    ಇದು ಬಾವಿಯ ನೀರಲ್ಲ ಗಂಗಾಜಲ

ಏನೇ ಹೇಳಿದರು ಆಳಿನ ಮಾತಿನ ಮೇಲೆ ವಿದ್ಯಪತಿಗೆ ನಂಬಿಕೆ ಬರಲಿಲ್ಲ. ಕವಿ ಚಂಡಿಸಿ ಚಂಡಿಸಿ ಕೇಳಿದಾಗ ಉಗನಾ ತನ್ನ ನಿಜ ಸವ್ರೂಪವನ್ನು ಹೇಳಿದ. ಅಲ್ಲಿ ಹತ್ತಿರದಲ್ಲಿ ಎಲ್ಲಿಯೂ ನೀರು ಕಾಣದಿದ್ದಾಗ ಶಿವ ತನ್ನ ಜಟೆಯಿಮದ ನೀರನ್ನು ತಂದುಕೊಟ್ಟಿದ್ದ. ಆನಂತರ ಶಿವ ಹೇಳಿದ ನೀನು ನನ್ನ ಅಂತರಂಗದ ಭಕ್ತ. ನಾನು ನಿನ್ನನ್ನು ಅಗಲಿರಲಾರೆ ಆದರೆ ನೀನು ನನ್ನ ಗುಟ್ಟನ್ನು ಬಿಟ್ಟುಕೊಡುವುದಿಲ್ಲ ಎಂದು ಮಾತು ಕೊಡುವುದಾದರೆ ನಾನು ಇರುತ್ತೇನೆ. ಅದು ಬಯಲಾದ ಕೂಡಲೇ ಕಣ್ಮರೆಯಾಗುತ್ತೇನೆ

ವಿದ್ಯಾಪತಿ ಒಪ್ಪಿಕೊಂಡ ಉಗನಾ ಎಂದಿನಂತೆ ತನ್ನ ಬಳಿಯಲ್ಲಿಯೇ ಇದ್ದ. ಆದರೆ ವಿದ್ಯಾಪತಿ ಆತನಿಗೆ ಯಾವುದೇ ಕೆಲಸವನ್ನು ಹೇಳುತ್ತಿರಲಿಲ್ಲ. ಒಂದು ದಿನ ಆತನ ಹೆಂಡತಿ ಏನನ್ನೋ ತರುವಂತೆ ಆಳಿಗೆ ಹೇಳಿದಳು. ಅದನ್ನು ತರುವುದರಲ್ಲಿ ಕೊಂಚ ತಡವಾಯಿತು. ಅವಳ ಸಿಟ್ಟು ನೆತ್ತಿಗೇರಿತ್ತು. ಬಂದ ಕೂಡಲೇ ಕಟ್ಟಿಗೆ ಹಿಡಿದುಕೊಂಡು ಅವನನ್ನು ಹೊಡೆಯತೊಡಗಿದಳು. ಇದನ್ನು ಕಂಡು ವಿದ್ಯಾಪತಿ ಕೂಗಿಕೊಂಡ ಲೇ ಎಂತಾ ಕೆಲಸ ಮಾಡ್ತಿದ್ದಿಯಾ ಸಾಕ್ಷಾತ್ ಶಿವನನ್ನು ಹೊಡೆಯುವುದೇ?

ಸರಿ ತನ್ನ ಗುಟ್ಟು ರಟ್ಟಾದುದ ಕಂಡು ಶಿವ ಅಲ್ಲೆ ಬಯಲಾದ ವಿದ್ಯಾಪತಿ ಶಿವನ ವಿರಹದಲ್ಲಿ ಹುಚ್ಚನಂತಾದ.  ಉಗನಾ ಮರಳಿ ಬಾ ಎಂದು ಪರಿಪರಿಯಾಗಿ ಪ್ರಲಾಪ ಮಾಡಿದ. ಕವಿಯ ಶೋಕ ಶ್ಲೋಕವಾಗಿ ಮೂಡಿತು.

ಉಗನಾ ರೇ ಮೋರ ಕತ ಏ ಗೇಲಾಇ

ಕತ ಏ ಗೇಲಾ ಸಿವ  ಕೀದಹು ಭೆಲಾಇ

ಬಂಗ ನಹಿಂ ಬಟುವಾರಸಿ ಬೈಸಲಾಹ

( ಓ ನನ್ನ ಉಗನಾ ನೀನೆಲ್ಲಿಗೆ ಹೋದೆ| ಎಲ್ಲಿ ಹೋದೆ ಶಿವಾ ಏನಾಗಿ ಹೋದೆ| ನೀನಿಲ್ಲದೆ ನನಗೆ ಭಂಗಿ ಇಲ್ಲವಾಗಿದೆ) 1

ಈ ಮಿಥ್ ಈವತ್ತಿಗೂ ಬಂಗಾಳದಲ್ಲಿ ಚಾಲ್ತಿಯಲ್ಲಿದೆ. ವಿದ್ಯಾಪತಿ ತನ್ನ ಅಂತ್ಯಕಾಲದ ಹತ್ತಿರವನ್ನು ಈ ಒಂದು ಘಟನೆಯ ಮೂಲಕ ನಿರ್ಧರಿಸಿಕೊಳ್ಳುತ್ತಾನೆ.

ಶಿವಸಿಂಹ ಮಡಿದ ನಂತರ ವಿದ್ಯಾಪತಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನೆ ಆಶ್ರಯವಿಲ್ಲದೆ ಪರಿತಪಿಸುತ್ತಾನೆ ಶಿವಸೇನನ ತರುವಾಯ ಅವನ ಪತ್ನಿ ಮಿಥಿಲೆಯಲ್ಲಿ 12 ವರ್ಷ ರಾಜ್ಯಭಾರ ಮಾಡಿದಳು. ಈ ಕಾಲದಲ್ಲಿ ವಿದ್ಯಾಪತಿ ಸ್ವಲ್ಪ ಸುಖದಿಂದಯಿದ್ದನಾದರೂ ಉಗನಾ ಮತ್ತು ಶಿವಸೇನರ ವಿರಹ ಕವಿಯನ್ನು ಭಯಂಕರವಾಗಿ ಬಾಧಿಸುತಿತ್ತು. ವಿದ್ಯಾಪತಿ ಸುಮಾರು 19 ಕೃತಿಗಳನ್ನು ರಚಿಸಿದ್ದಾನೆ. ಭೂ ಪರಿಕ್ರಮಾ, ಪುರುಷ ಪರೀಕ್ಷಾ, ಲಿಖನಾವಲಿ, ಶೈವಸರ್ವಸ್ವಸಾರ, ಶೈವಸರ್ವಸ್ವಸಾರಪ್ರಮಾಣಭೂತ ಪುರಾಣ ಸಂಗ್ರಹ, ಗಂಗಾವಾಕ್ಯಾವಳಿ, ವಿಭಾಗ ಸಾರ ದಾನವಾಕ್ಯಾವಲಿ, ದುರ್ಗಾಭಕ್ತಿ ತರಂಗಿಣ , ಗಯಾಪತ್ತಲಕ, ವರ್ಷಕೃತ್ಯ, ಮಣ ಂಂಜರಿ, ಕೀರ್ತಿಲತಾ(ಅವಹಟ್ಟಿ ಭಾಷೆಯಲ್ಲಿ), ಕೀರ್ತಿಪತಾಕಾ, ಪದಾವಳಿ(ಮೈಥಿಲಿಯಲ್ಲಿ), ಶೃಂಗಾರ ಗೀತಗಳು, ಭಕ್ತಿಗೀತಗಳು, ಗೋರಕ್ಷವಿಜಯ(ನಾಲ್ಕು ಅಂಕಗಳ ನಾಟಕ, ಗೋರಕ್ಷ ಮತ್ತು ಮತ್ಸೇಂದ್ರನಾಥರಿಗೆ ಸಮಭಂಧ ಪಟ್ಟದ್ದು)

ವಿದ್ಯಾಪತಿಯ ಕಾವ್ಯ

ವಿದ್ಯಾಪತಿಯು ಸಂಸ್ಕೃತದ ಮೇರು ಪಂಡಿತ. ಆದರೆ ಆತನಿಗೆ ದೇಶಿಭಾಷೆಯ ಮೇಲಣ ಪ್ರೇಮ ಅಗಾಧವಾದುದ್ದು. ತಾನೆ ಒಂದು ಕಡೆ ಹೇಳುತ್ತಾನೆ. ಸಂಸ್ಕೃತ ಪಂಡಿತರಿಗೆ ಮಾತ್ರ ಒಪ್ಪುತ್ತದೆ. ಪ್ರಕೃತ ರಸದ ಮರ್ಮವನ್ನು ಮುಟ್ಟಲಾರದು. ದೇಸಿ ಭಾಷೆ ಸರ್ವ ಮಧುರ ಆದ್ದರಿಂದ ನಾನು ಅಹವಟ್ಟಿ ಭಾಷೆಯಲ್ಲಿ ಬರೆಯುತ್ತಿದ್ದೇನೆ. ಅಷ್ಟೇ ಅಲ್ಲ ಅವನಿಗೆ ಸಂಸ್ಕøತದ ಪಾಂಡಿತ್ಯಗಿಂತಲು ದೇಸಿಭಾಷೆಯ ಮೆಲೆ ಅಪಾರ ಪ್ರೀತಿ ಇದು ಸಂಸ್ಕೃತ ಪಂಡಿತನೊಬ್ಬನ ಕ್ರಾಂತಿಯಲ್ಲದೇ ಮತ್ತೇನು? ಮತ್ತು ತನ್ನ ದೇಸಿಭಾಷೆ ಅತ್ಯಂತ ಅನಕ್ಷರಸ್ಥ ನಾಗರಿಕನಿಗೂ ತಲುಪುವ ಕಾರಣಕ್ಕೆ ತಾನು ಧನ್ಯನೆಂದು ಹೇಳಿಕೊಂಡು ತನ್ನ ಭಾಷೆಯನ್ನು ಬಾಲಚಂದ್ರನಿಗೆ ಹೋಲಿಸಿದ್ದಾನೆ. “ವಿದ್ಯಾಪತಿಯ ಭಾಷೆ ಬಾಲಚಂದ್ರನಂತೆ ಮನೋಹರ. ಇವೆರಡಕ್ಕು ದುರ್ಜನರ ಅಪಹಾಸ್ಯ ತಗುಲದು ಚಂದ್ರ ಪರಮೇಶ್ವರನ ತಲೆಯೆ ಮೇಲೆ ಮೆರೆದರೆ ವಿದ್ಯಾಪತಿಯ ವಾಣ  ನಿತ್ಯವೂ ನಾಗರಿಕ(ಸಹೃದಯ) ಜನರ ಮನವನ್ನು ಮೋಹಿಸುತ್ತದೆ”2 ವಿದ್ಯಾಪತಿ ಕಾವ್ಯವೂ ತನ್ನ ಯೌವ್ವನವನ್ನು ಯಾವತ್ತು ಕಳೆದುಕೊಳ್ಳಬಾರದೆಂದು ಕಾವ್ಯದ ಕುರಿತಾಗಿ ಹೇಳಿದ್ದಾನೆ. ಮತ್ತು ಸೌಂದರರ್ಯದ ಮಿತಿಗಳನ್ನು ಕೂಡಾ ಅಳೆದು ನೋಡಬೇಕೆನ್ನುತ್ತಾನೆ ಜಗತ್ತಿನ ಎಲ್ಲಾ ವಸ್ತುಗಳಲ್ಲಿಯೂ ಸೌಂದರ್ಯವಿದೆ ಅದರೆ ಅದೊಂದರಿಂದಲೇ ಅದರ ಅಪರೂಪದ ವರ್ಣನೆ ಅಸಂಭವವೆನ್ನುವುದು ಅವನವಾದ. ಆ ಕಾಲದ ಕಾವ್ಯದ ಮುಖ್ಯ ಸಂಗತಿ ಎಂದರೆ ಸೌಂದರ್ಯ ಆದರೆ ಅದರ ಮಿತಿಗಳನ್ನು ಗುರುತು ಮಾಡುವುದು ಕೂಡಾ ಒಂದು ತರಹದ ಸಬಲ್ಟ್ರಾನ್ ಯೋಚನೆಯೇ. ಅದನ್ನು ತನ್ನ ಕಾಲದಲ್ಲಿ ವಿದ್ಯಾಪತಿ ಸೂಕ್ಷ್ಮವಾಗಿ ಆಗು ಮಾಡಿದ.

ಪ್ರೇಮದ ಬಗೆಗೆ ಮತ್ತದರ ಸೋಲಿನ ಬಗೆಗೆ ವಿರಹವನ್ನು ಕೂಡ ಎಂಜಾಯ್ ಮಾಡುವ ಅದ ಆ ಒಂದು ಸೂತಕವನ್ನು ಸೆಲೆಬ್ರೇಟ್ ಮಾಡುವ ಹುಮ್ಮಸ್ಸು ಕವಿಯದ್ದು. ವಿದ್ಯಾಪತಿ ಬರೆಯುತ್ತಾನೆ ಸೃಜನರ ಪ್ರೇಮವು ಚಿನ್ನವೂ ಒಂದೇ ತೂಕ. ಅದು ವಿರಹದ ಬೆಂಕಿಯಲ್ಲಿ ಬೆಂದು ಬೆಂದು ಶುದ್ಧ ಅಪರಂಜಿಯಾಗಿರುತ್ತದೆ. ಈ ಪ್ರೇಮ ಮೇಲು ನೋಟಕ್ಕೆ ಭಂಗವಾದಂತೆ ಕಾಣುತ್ತದೆ. ಪರಿಸ್ಥಿತಿ ಇಬ್ಬರನ್ನು ಬೇರ್ಪಡಿಸಿರಬಹುದು ಕಮಲನಾಳ ಕಿತ್ತರೂ ಅದರ ತಂತುಗಳು ಕೀಳವು ಅಂತೆಯೇ ಈ ಪ್ರೇಮ ಎಂದೆಂದಿಗೂ ಭಂಗಗೊಳ್ಳದು. ಇತ್ಯಾತ್ಮಕವಿರಹ, ಶೃಂಗಾರ, ಭಕ್ತಿ ಅಧ್ಯಾತ್ಮ ಮತ್ತು ಕೆಲವು ವಾಸ್ತವಿಕ ಸಂಗತಿಗಳೆಲ್ಲವೂ ಸೇರಿ ವಿದ್ಯಾಪತಿಯ ಕಾವ್ಯವನ್ನು ನಿರ್ಧರಿಸಿವೆ. ಕವಿ ಈ ಎಲ್ಲ ರಸಭಾವಗಳಲ್ಲಯೂ ಉತ್ಕøಷ್ಟತೆಯನ್ನು ಮೆರೆದಿದ್ದಾನೆ. ಇವೆಲ್ಲವುಗಳನ್ನು ಮಲ್ಟಿಪರ್ಪಸ್ ಮಜಲುಗಳಿಂದ ಗ್ರಹಿಸಿದ್ದಾನೆ ಎನ್ನುವುದು ಅವನ ಅಭಿವ್ಯಕ್ತಿಯಿಂದಲೇ ಗೊತ್ತಾಗುತ್ತದೆ.

ಹುಲುಗೂರು ಸಂತೆಯನ್ನು ಭವದ ನೆಲೆಯಲ್ಲಿ ನೋಡಿ ಅದನ್ನು ಅಧ್ಯಾತ್ಮದ ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಶರೀಫರು. ಆದರೆ ವಿದ್ಯಾಪತಿ ಬರೆದ ಪೆಟೆಯ ವರ್ಣನೆ ಯಾವ ನವ್ಯಕವಿಗಿಂತಲೂ ಕಮ್ಮಿಯಿಲ್ಲ. ಆ ಭಾಷೆ, ಅನುಭವ, ಮತ್ತು ಖುದ್ದು ಕವಿಯ ಹಾಜರಾತಿ ಎಲ್ಲವೂ ಸೇರಿ ಪೆಟೆಯ ವರ್ಣನಿಗೆ ಇಳಿದಿವೆ ವಿದ್ಯಾಪತಿಯ ಕಾವ್ಯದಲ್ಲಿ.  ವಾಸ್ತವವಾದಿ ಬರಹವನ್ನು ಒಂದು ಸಂಶೋದನೆಯೆಂದೇ ಭಾವಿಸಿ ಅದನ್ನು ಸೃಜನ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾನೆ ಈ ಕವಿ. ಪೇಟೆಯ ವರ್ಣನೆ ನೋಡಿ ಹೇಗಿದೆ.

“ಮದ್ಯಾಹ್ನದ ಜನಸಮೂಹ ಇಡೀ ಭೂಮಂಡಲದ ವಸ್ತುವೆಲ್ಲ ಇಲ್ಲಿ ಮಾರಾಟಕ್ಕೆ ಬಂದಂತೆ ಕಾಣುತ್ತವೆ.

 ಜನರ ತೆಲೆಗೆ ತೆಲೆ ತಗುಲುತ್ತದೆ ಒಬ್ಬನ ಹಣೆಯ ನಾಮ ಮತ್ತೊಬ್ಬನ ಹಣೆಗೆ ಅಂಟಿಕೊಳ್ಳುತಿತ್ತು. 

ಹೆಂಗಸರ ಬಳೆ ಆ ಗುಂಪಿನಲ್ಲಿ ಒಡೆದು ಚೂರುಚೂರಾಗುತಿತ್ತು. 

ಬ್ರಾಹ್ಮಣನ ಜನಿವಾರ ಚಂಡಾಲನ ಎದೆಗೆ ಗೋಜಿಕೊಳ್ಳುತಿತ್ತು.

ವೆಶ್ಯೇಯರ ಪಯೋಧರಗಳು ಯತಿಯ ಎದೆಗೆ ಡಿಕ್ಕಿ ಬಡೆಯುತಿದ್ದವು. 

ಆನೆ ಕುದುರೆಯ ಗೊಂದಲವಂತೂ ಹೇಳತೀರದು. 

ಕೆಲವು ಬಡಪಾಯಿಗಳಂತು ಕಾಲ ತುಳಿತಕ್ಕೆ ಸಿಕ್ಕು ನಲುಗುತಿದ್ದರು.  

ಜನ ಸಂಚಾರದ ಗದ್ದಲದಿಂದ ಅದು ನಗರವಲ್ಲ ಜನ ಸಮುದ್ರ ಎನಿಸುತಿತ್ತು.

ತಿರುಗು ವ್ಯಾಪಾರಿ ತಿರುತಿರುಗಿ ಕ್ಷಣದಲ್ಲಿ ತನ್ನ ಸರಕನ್ನು ಮಾರಿಬಿಡುತ್ತಿದ್ದ.” 

ಒಂದು ಅತ್ಯಂತ ಅಗಾಧತೆಯನ್ನು ಎದುರುಗೊಂಡ ಕವಿಮನಸು ಹೀಗೆ ಮಿಡಿಯುತ್ತದೆ. ಇಲ್ಲಿ ಅಧ್ಯಾತ್ಮಿಕ ಅನ್ನಬಹುದಾದ ಅಂಶವಿಲ್ಲದಿದ್ದರು ಪೇಟೆಯ ನೈಜತೆ ಚಾರಿತ್ರಿಕ ಸತ್ಯವನ್ನು ಸಾರುವಂಥದ್ದು. ಯತಿಗೆ ವೇಶ್ಯಯರ ಪಯೋಧರ (ಸ್ತನ) ಡಿಕ್ಕಿ ಹೊಡೆಯುವ ಸಂಗತಿಯೇ ಒಂದು ತರಹದಲ್ಲಿ ಈ ಕವಿತೆಯ ಸೌಮ್ಯ ಕ್ರಾಂತಿಕಾರಕತೆಯನ್ನು ಎತ್ತಿ ಹಿಡಿದಿದೆ. ಪೇಟೆಯ ಎಲ್ಲಾ ಮಜಲುಗಳನ್ನು ಕವಿ ಇಲ್ಲಿ ಕವರ್ ಮಾಡಿದ್ದಾನೆ. ತನ್ನ ಕಾಲದ ಮಡಿವಂತಿಕೆಯನ್ನು ಅಣಕಿಸಲೆಂದೇ ಬ್ರಾಹ್ಮಣರ ಜನಿವಾರ ಚಾಂಡಾಲನಿಗೆ ತಾಕುತಿತ್ತು ಎನ್ನುವ ಸಾಲು ಕವಿತೆಯಲ್ಲಿ ಇಟ್ಟುಕೊಂಡಿರಬಹುದು. 

ಒಟ್ಟಿನಲ್ಲಿ ವಿದ್ಯಾಪತಿ ಒಬ್ಬ ಯೋಗಿಯಾಗಿಯೂ, ರಸಿಕನಾಗಿಯೂ, ಶೃಂಗಾರ ಮತ್ತು ವಾಸ್ತವಗಳನ್ನು ತನ್ನ ಕವಿತೆಯಲ್ಲಿ ಅಭಿವ್ಯಕ್ತಿಸಿದ್ದಾನೆ. ಆತ ಕವಿತೆಯನ್ನು ಎಂಜಾಯ್ ಮಾಡುವ ಸಂಗತಿಯೇ ಅನನ್ಯವಾದುದ್ದು. ತನ್ನ ಕಾಲದ ಭಯಾನಕತೆಯೋ ಏನೋ ಮುಸ್ಲ್ಮಾನರನ್ನು ಅತ್ಯಂತ ಕ್ರೂರವಾದ ಮಾತುಗಳಲ್ಲಿ ಟೀಕಿಸಿದ್ದಾನೆ. ತನ್ನ ವಾಸ್ತವದ ಮಿತಿಗಳನ್ನು ಹಾಗೆ ದಾಖಲಿಸಿದ ಕಾರಣಕ್ಕಾದರೂ ಇರಬಹುದು ಅಥವಾ ವಾಸ್ತವವೇ ಹಾಗೆ ಇರಬಹುದು. ಏನೆ ಇರಲಿ ವಿದ್ಯಾಪತಿ ಕವಿಯಾಗಿ ತನ್ನ ಕಾಲವನ್ನು ಜೀವಂತವಾಗಿರಿಸಿದ್ದಾನೆ. 

ಕೊನೆಗ ತನ್ನ ವೈಭವದ ಇತ್ಯಾತ್ಮಕತೆಯ ಬಗೆಗೆ ಒಂದು ಕವಿತೆಯಲ್ಲಿ ಮಾತಾಡಿದ್ದಾನೆ. 

ತೇಲ ಬಿಂದು ಜೈಸೇ ಪಾನಿಪಸಾರಿಏ

ಐಸನ ಮೋರ ಅನುರಾಗ|

ಸಿಕತಾ ಜಲ ಜೈಸೆ ಛನಹಿ ಸೂಕಏ

ತೈಸನ ಮೋರ ಸುಹಾಗ

(ನೀರಿಗೆ ಬಿದ್ದ ಎಣ್ಣೆಯಂತೆ ಪ್ರಸರಣಶೀಲ ನನ್ನ ಅನುರಾಗ. ಮರಳಿಗೆ ಬಿದ್ದ ನೀರಿನಂತೆ ಅಲ್ಲ ನನ್ನ ಸೌಭಾಗ್ಯ) ದುಖಃಗಳನ್ನೆ ಎಂಜಾಯ್ ಮಾಡಿದ ಕವಿ ಗಾಲೀಬ್ ಆದರೆ ವಾಸ್ತವ ಮತ್ತು ಸುಖ ಶೃಂಗಾರವನ್ನು ಸೆಲೆಬ್ರೇಟ್ ಮಾಡಿದ ಕವಿ ವಿದ್ಯಾಪತಿ ಎಂಬುದು ನನ್ನ ಅಂತಿಮ ನಿಲುವು.

ಶಿವಕುಮಾರ್ ಹಿರೇಮಠ