Article

ನಮಗಷ್ಟೇ ಏಕೆ:  ನುಡಿ ಮತ್ತು ವಿಕಾಸ 

ಫ್ಯಾಕಲ್ಟಿ ಆಫ್ ಲ್ಯಾಂಗ್ವೇಜ್ ಎಂಬ ಕಲ್ಪನೆಯು ಜೈವಿಕ ನೆಲೆಗಳ ಬಗೆಗೆ ಅತ್ಯಂತ ಮಹತ್ವದ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಉದಾ.ಗೆ ಭಾಷೆಯ ಸ್ವರೂಪವೇನು? ಇದು ಹೇಗೆ ಕ್ರಿಯಾಶೀಲವಾಗಿರುತ್ತದೆ? ಹಾಗೂ ಇದು ವಿಕಾಸಗೊಂಡದ್ದು ಹೇಗೆ? ಆದರೆ ಪ್ರಸ್ತುತ ಪುಸ್ತಕವು ಕೊನೆಯ ಪ್ರಶ್ನೆ, ಭಾಷೆಯ ವಿಕಾಸವನ್ನು ಕುರಿತು ಕುರಿತು ಚರ್‍ಚಿಸುತ್ತದೆ. ಕಳೆದ ಶತಮಾನದ ಐವತ್ತರ ದಶಕದಲ್ಲಿ ಚಾಮ್‌ಸ್ಕಿ ಜನರೇಟಿವ್ ಗ್ರ್ಯಾಮರ್ ಸಿದ್ಧಾಂತವನ್ನು ಹುಟ್ಟುಹಾಕಿದ ಆರಂಭದಿಂದಲೇ ಭಾಷೆಯ ವಿಕಾಸದ ಬಗೆಗಿನ ಇಂತಹವೊಂದು ಗಹನವಾದ ಪ್ರಶ್ನೆಯು ಮುಂಚೂಣೆಗೆ ಬಂದಿದೆ.  ಪರಿಮಿತ ನಿಯಮಗಳ ವ್ಯವಸ್ಥೆಯನ್ನು ಹೊಂದಿರುವ ಭಾಷೆಗೆ ಅಸಂಖ್ಯಾತ ಅಭಿವ್ಯಕ್ತಿಗಳನ್ನು ಉತ್ಪಾದಿಸಲು ಸಾಧ್ಯವಾದದ್ದು ಹೇಗೆ ಎಂಬುದನ್ನು ಈ ಜನರೇಟಿವ್ ಗ್ರ್ಯಾಮರ್ ಸಿದ್ಧಾಂತವು ನಮಗೆ ಮನವರಿಕೆ ಮಾಡಿದೆ.   
ಕಳೆದ ವರುಷದ ಆರಂಭದಲ್ಲಿ ವೈ ಓನ್ಲಿ ಅಸ್: ಲಾಂಗ್ವೇಜ್ ಆಂಡ್ ಈವಲೂಶನ್ (ಎವಲೂಶನ್) (೨೦೧೭) ಎಂಬ ಮಹತ್ವದ ಪುಸ್ತಕವನ್ನು ನೋಮ್ ಚಾಮ್‌ಸ್ಕಿ ಹಾಗೂ ರಾಬರ್‍ಟ್ ಸಿ. ಬೆರ್‍ವಿಕ್ ಎಂಬ ವಿದ್ವಾಂಸರು ಸೇರಿ ಬರೆದಿರುತ್ತಾರೆ. ಇದು ಯಾಕೆ ಮಹತ್ವದ ಪುಸ್ತಕವೆಂದರೆ ನುಡಿ ಬಗೆಗಿನ ಗ್ರಹಿಕೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ಹಾಗೂ ತಾತ್ವಿಕವಾಗಿ ವಿವರಿಸುತ್ತದೆ. ನುಡಿಯನ್ನು ಕುರಿತ ಅಧ್ಯಯನಗಳು ಹಲವು ತಾತ್ವಿಕ ಚೌಕಟ್ಟುಗಳಲ್ಲಿ ನಡೆದಿರುತ್ತವೆ. ಮುಖ್ಯವಾಗಿ ಡಾರ್‍ವಿನ್‌ನ ವಿಕಾಸವಾದವನ್ನು ಅನುಸರಿಸಿಕೊಂಡು ನುಡಿಯನ್ನು ವಿಶ್ಲೇಷಿಸಿರುವ ಬರಹಗಳನ್ನು ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ನೋಡಿರುತ್ತೇವೆ. ಈ ತಾತ್ವಿಕ ಚೌಕಟ್ಟಿನಿಂದ ಭಿನ್ನವಾದ ನುಡಿ ಚಿಂತನೆಗಳನ್ನು ಬೆಳಸಿದವರಲ್ಲಿ ಚಾಮ್‌ಸ್ಕಿ ಹಾಗೂ ಗ್ರಹಿಕಾ ಭಾಷಾಶಾಸ್ತ್ರ (ಕಾಗ್ನಿಟಿವ್ ಲಿಂಗ್ವಿಸ್ಟಿಕ್ಸ್) ಮತ್ತು ಗ್ರಹಿಕಾ ಮನಶಾಸ್ತ್ರವನ್ನು ಅನುಸರಿಸಿದ ಚಿಂತಕರೇ ಮೊದಲಿಗರು. 
ಬಹುಶ ಧರ್‍ಮ ಮತ್ತು ವಿಜ್ಞಾನದ ನಡುವಣ ಸಂಪರ್‍ಕದ ಸೂಕ್ಷ್ಮ ಎಳೆಗಳಿಗೆ, ಮನುಷ್ಯರಲ್ಲಿ ಅಂತಸ್ಥವಾಗಿರುವ ಈ ಭಾಷಿಕ ವೈಶಿಷ್ಟ್ಯವೇ ಕಾರಣವಾಗಿದೆ ಎಂಬ ಅಭಿಪ್ರಾಯಗಳು ಬಲವಾಗಿವೆ. ಆದರೆ ಈ ವೈಶಿಷ್ಟ್ಯತೆಯನ್ನು ಕ್ರಿಶ್ಚಿಯನ್ ಥಿಯಾಲಜಿಯು ಬೇರೊಂದು ಬಗೆಯಲ್ಲಿ ಪ್ರತಿಪಾದಿಸುತ್ತದೆ. ಏಕೆಂದರೆ, ಮಾನವರಿಗೂ ಮತ್ತು ಇತರೆ ಪ್ರಾಣ ಗಳ ನಡುವೆ ವೈಚಾರಿಕ ಸ್ಥಗಿತತೆ ಏರ್‍ಪಟ್ಟಿದೆ ಎಂಬುದನ್ನು ಪ್ರಬಲವಾಗಿ ಮಂಡಿಸಿದೆ. ಹಾಗಾಗಿ ಮನುಷ್ಯರು ತಮಗೆ ದತ್ತವಾಗಿರುವ ವೈಚಾರಿಕತೆ ಮತ್ತು ಸ್ವಾತಂತ್ರ್ಯದ ಕಲ್ಪನೆಗಳನ್ನು ಈ ಲೋಕದ ಬಹುತೇಕ ಧರ್‍ಮಗಳು ಆಧ್ಯಾತ್ಮಿಕಗೊಳಿಸಿವೆ. ಈ ಆಧ್ಯಾತ್ಮಿಕ ಅಧಿಕಾರದ ಬಲದಿಂದ ಮನುಷ್ಯರನ್ನು ದೈವಗಳಾಗಿ ಕಲ್ಪಿಸಿಕೊಳ್ಳುವ ಮತ್ತು ಅಂತಹ ಆತ್ಮಗಳನ್ನು ಅಮರತ್ವಗೊಳಿಸಲು ಸಾಧ್ಯವಾಗಿದೆ. ಧರ್‍ಮಶಾಸ್ತ್ರಗಳ ಪ್ರಕಾರ, ಮೊದಲ ಮನುಷ್ಯ ಜೀವಿ ಇಲ್ಲವೇ ಜೀವಿಗಳ ಗುಂಪೊಂದು ಅಸ್ತಿತ್ವದಲ್ಲಿತ್ತು. ಆದರೆ ಇವರಿಗೆ ಯಾವುದೇ ಪೂರ್‍ವಿಕರ ಚರಿತ್ರೆ ಇರುವುದಿಲ್ಲ. ಆದ್ದರಿಂದ ಈ ವೈಚಾರಿಕ ಸ್ಥಗಿತತೆಯು ಐತಿಹಾಸಿಕವೂ ಹಾಗೂ ಸೈದ್ಧಾಂತಿಕವಾಗಿಯೂ ಇವತ್ತು ಚರ್‍ಚೆಗೆ ಒಳಪಟ್ಟಿದೆ.  
ಮಾನವರು ಹಾಗೂ ಪ್ರಾಣ ಗಳ ನಡುವೆ ತತ್ವಶಾಸ್ತ್ರೀಯ ಸ್ಥಗಿತತೆ (ಓಂಟಾಲಜಿಕಲ್ ಡಿಸ್‌ಕಂಟಿನ್ಯುಟಿ) ಇದೆಯೇ? ಎಂಬೀ ಪ್ರಶ್ನೆಗೆ ಬೆರ್‍ವಿಕ್ ಮತ್ತು ಚಾಮ್‌ಸ್ಕಿ ಅವರು ಅಪಾರವಾದ ಸಾಕ್ಷ್ಯಾಧಾರಗಳ (ಎಂಪರಿಕಲ್) ಆಧಾರದ ಮೇಲೆ ತಮ್ಮ ತೀರ್‍ಮಾನಗಳನ್ನು ಮಂಡಿಸುತ್ತಾರೆ. ಹೌದು ಎಲ್ಲ ಬಗೆಯ ಪ್ರಾಣ ಗಳು ಸಂವಹನ ಮಾಡುತ್ತವೆ. ಆದರೆ ಮಾನವರು ಮಾತ್ರ ವೈಚಾರಿಕತೆಯನ್ನು ಪಡೆದಿರುತ್ತಾರೆ. ಚಾಮ್‌ಸ್ಕಿ ಮತ್ತು ಬೆರ್‍ವಿಕ್ ಅವರ ಪ್ರಕಾರ, ವೈಚಾರಿಕತೆಗೆ ಭಾಷೆಯೇ ಅತ್ಯಂತ ಪ್ರಾಥಮಿಕ ಸಾಧನವಾಗಿದೆ. ಅತ್ಯಂತ ಪ್ರಖರವಾಗಿ ಹಾಗೂ ವಿಸ್ಮಯಕಾರಿಯಾಗಿಯೂ ತಮ್ಮೀ ವಾದಗಳನ್ನು ಇವರು ಮಂಡಿಸುತ್ತಾರೆ. ಅಂತಿಮವಾಗಿ ಭಾಷೆ ಎಂಬ ಕಸುವು ಮನುಷ್ಯರಲ್ಲಿ ಮಾತ್ರ ಅಂತಸ್ಥವಾಗಿರುತ್ತೆ ಎಂಬ ವೈಜ್ಞಾನಿಕ ವಾಸ್ತವವು ಇಂದು ನೆಲೆಗೊಂಡಿದೆ. ಈ ಪ್ರಬಲವಾದ ವಾದಕ್ಕೆ ಕಾರಣವೇನೆಂದರೆ, ವಿಕಸನಶೀಲ ಚರಿತ್ರೆಯಲ್ಲಿ ಹೋಮೋ ಸೇಪಿಯನ್ ಬಳಗಕ್ಕೆ ಸೇರಿದ ಒಬ್ಬ ಇಲ್ಲವೇ ಕೆಲವು ಸದಸ್ಯರಲ್ಲಿ ತಟ್ಟನೇ ಈ ಭಾಷಿಕ ಕಸುವು ಸಂಭವಿಸಿತು. ಅಂದರೆ ಫಾಕ್ಸ್‌ಪಿ೨ ಎಂಬ ವಂಶವಾಹಿನಿಯಲ್ಲಿ ವಿಕಲ್ಪವೊಂದು (ಜೀನ್ ಮ್ಯುಟೇಶನ್) ಏರ್‍ಪಟ್ಟಿತು. ಪರಿಣಾಮವಾಗಿ ಭಾಷೆಯೆಂಬೀ ಪ್ರಕ್ರಿಯೆ ನೆಲೆಗೊಂಡಿತು. ಮಾನವ ಜೀವಿಗಳ ಮಾನಸಿಕ ತಂತ್ರಗಾರಿಕೆಯಲ್ಲಿ ಸಾಕಷ್ಟು ಬೆಳವಣ ಗೆಯಾಯಿತು. ಬೆರ್‍ವಿಕ್ ಮತ್ತು ಚಾಮ್‌ಸ್ಕಿ ಅವರ ಸೈದ್ಧಾಂತಿಕ ನಿಲುವುಗಳು ಇತರೆ ಸೈದ್ಧಾಂತಿಕ ನಿಲುವುಗಳಿಂದ ಭಿನ್ನವೂ ಹಾಗೂ ವಿಭಿನ್ನ ಅಧ್ಯಯನಶಿಸ್ತುಗಳ ಸಾಕ್ಷಾಧಾರಗಳ ಮೂಲಕ ಈ ಬೆಳವಣ ಗೆಯನ್ನು ಪ್ರತಿಪಾದಿಸುತ್ತವೆ. ಮಾನಸಿಕ ತಂತ್ರಗಾರಿಕೆಗೆ ಹೊರತಾದ ವಿಶೇಷ ಸಾಮರ್‍ಥ್ಯವೊಂದು ಈ ಭಾಷಿಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದನ್ನು ಇವರು ಸಮರ್‍ಥಿಸುತ್ತಾರೆ. ಭಾಷೆಯ ಮೂಲ ವಿಷಯ ಹಾಗೂ ಅರ್‍ಥಗಳು, ಮಾನವನ ಆಲೋಚನಾಕ್ರಮಕ್ಕೆ ಆಳವಾದ ಅಂಶಗಳಾಗಿವೆ. ಪದಗಳಂತಹ ಆದರೆ ಪದಗಳಲ್ಲ ಎಂಬಂತಹ ಭಾಷಿಕ ವಿನ್ಯಾಸಗಳು ಮನಸ್ಸಿನಲ್ಲಿ ಅಂತಸ್ಥಗೊಂಡಿವೆ. ಆರಂಭ ಕಾಲದಲ್ಲಿ ವಿಶ್ಮಯಕಾರಿ ಹಾಗೂ ನಿಗೂಢವಾಗಿ ನೆಲೆಗೊಂಡಿರಬೇಕು ಎಂಬ ಸಂಗತಿಗಳು ಈ ಪುಸ್ತಕದ ವಿಶ್ಲೇಷಣೆಯಲ್ಲಿ ಕಾಣುತ್ತವೆ. 
ಮಾನವನ ವೈಚಾರಿಕತೆಯ ಜಾಡನ್ನು ಕಂಡುಹಿಡಿಯುವಲ್ಲಿ ಅತ್ಯಂತ ಭರವಸೆಯ ವಿಧಾನವಾಗಿ ಈ ಬಗೆಯ ಭಾಷಾಧ್ಯಯನಗಳು ಮುಂಚೂಣೆಗೆ ಬಂದಿವೆ. ಇದೊಂದು ವಿರೋಧಭಾಸದ ನೆಲೆಯಾಗಿ ಕಾಣುತ್ತದೆ. ಏಕೆಂದರೆ ಆಡುಮಾತಿನ ನುಡಿಯ ಮೂಲಕ ಈ ನಿಲುವನ್ನು ರುಜುವಾತುಪಡಿಸಲು ಬೇಕಾದ ಯಾವುದೇ ಪಳೆಯುಳಿಕೆಗಳು ಸಿಗುವುದಿಲ್ಲ. ಆದಾಗ್ಯೂ ಭಾಷೆಯ ನರವ್ಯೂಹದ ತಂತ್ರಗಾರಿಕೆ, ಆ ತಂತ್ರಗಾರಿಕೆಯ ಆನುವಂಶಿಕತೆ ಹಾಗೂ ಭಾಷೆಯ ಅಂತರ್‍ನಿಹಿತ ರಚನಾ ವಿನ್ಯಾಸಗಳನ್ನು ಇಲ್ಲಿ ಪರಿಶೀಲಿಸಬಹುದು. ಭಾಷಾಶಾಸ್ತ್ರ, ನರವಿಜ್ಞಾನ, ತಳಿವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ವಿಕಸನೀಯ ಸಿದ್ಧಾಂತ ಮತ್ತು ಪ್ರಾಣ  ಸಂವಹನಗಳ ಕುರಿತಾದ ಆವಿಷ್ಕಾರಗಳ ಆಧಾರದ ಮೇಲೆ ಅತ್ಯಾಧುನಿಕವಾದ ವಾದಗಳ ಎಳೆಗಳನ್ನು ಬಳಸಿಕೊಂಡು, ಮಾನವ ಭಾಷೆಯ ಸ್ವರೂಪ ಮತ್ತು ಮೂಲದ ಪ್ರಶ್ನೆಗಳಿಗೆ ಸಂಬಂಧಿಸಿದ ಪ್ರಮೇಯಗಳನ್ನು ಈ ವಿದ್ವಾಂಸರು ಅತ್ಯಂತ ವೈಜ್ಞಾನಿಕವಾಗಿ ಮಂಡಿಸಿದ್ದಾರೆ. ಅತ್ಯಂತ ದೂರದ್ರುಷ್ಟಿ ಪರಿಣಾಮಗಳನ್ನು ಈ ಪುಸ್ತಕವು ಹೊಂದಿದೆ. ಈ ಪುಸ್ತಕದಲ್ಲಿ ಸೇರ್‍ಪಡೆಗೊಂಡ ಎಲ್ಲ ಸಂಗತಿಗಳನ್ನು ಇವರು ಪರಿಣಾಮಕಾರಿಯಾಗಿ ವಿಶ್ಲೇಷಣೆ ಮಾಡಿದ್ದಾರೆ. ಈ ಪುಸ್ತಕದ ತಲೆಬರಹವೇ ಸೂಚಿಸುವಂತೆ, ಕೇವಲ ಮನುಷ್ಯರು ಮಾತ್ರ ಭಾಷೆಯನ್ನು ಹಾಗೂ ಅಂತಹವೊಂದು ಮಾನಸಿಕ ಕಸುವನ್ನು ಪಡೆದಿರುತ್ತಾರೆ ಎಂಬುದನ್ನು ಈ ಪುಸ್ತಕ ಖಚಿತಪಡಿಸುತ್ತದೆ. ಆದರೆ ಈ ಚಿಕ್ಕ ಟಿಪ್ಪಣ ಯಲ್ಲಿ ಈ ಪುಸ್ತಕದ ತಾತ್ವಿಕತೆಯ ಹರವು ಮತ್ತು ಆಳವನ್ನು ಕುರಿತು ಚರ್‍ಚಿಸುವುದು ದುಸ್ತರವೇ ಸರಿ. 
 

ಮಲ್ಲಿಕಾರ್ಜುನ ಮೇಟಿ