Article

ನಾನು ಸನ್ಯಾಸಿಯಾಗಲು ಹೊರಟಿದ್ದೆ

ಸುವರ್ಣಾ ನದಿ ತೀರದಲ್ಲಿ ದೀಪ ಬೆಳಗಿದ ಮೇಲೆ ಕತ್ತಲೆಯಲ್ಲಿ ಮಂಜುನಾಥ್ ಕಾಮತ್ ಸಿಕ್ಕರು. ಹೆಸರು ಹೇಳಿದಂತೆ ಗುರುತಿಸಿ ಕೈಕುಲುಕಿದರು.ಇಲ್ಲದಿದ್ದರೆ ನಾವೂ ಬರೀ ಕತ್ತಲೆಯಲ್ಲೇ ಕಾರ್ಯಕ್ರಮ ಮುಗಿಸಿ ಹೊರಡಬೇಕಿತ್ತು. ನನಗೆ ಇಡೀ ಪುಸ್ತಕ ಬಿಡುಗಡೆಯ ಕಾರ್ಯಕ್ರಮವೇ ಅನನ್ಯ ಅನಿಸಿತು. ನನ್ನ ಪ್ರಕಾರ,ಇಂತಹ ಸೃಜನಶೀಲ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಪ್ರಯತ್ನ ಕನ್ನಡ ಸಾಹಿತ್ಯದಲ್ಲಿ ಬಹುಶಃ ಇದೇ ಮೊದಲು. ಸಾವಿರ ಹಣತೆಗಳೊಂದಿಗೆ ನಮ್ಮೊಳಗೊಂದು ಹಣತೆ ಬೆಳಗಳು ಯಶಸ್ವಿಯಾದರು. "ನಾನು ದಾರಿ ತಪ್ಪಿಸು ದೇವರೇ" ಪುಸ್ತಕ ಓದಿದ ಬಳಿಕವಷ್ಟೇ ಮಂಜುನಾಥರನ್ನು ಪರಿಚಯಗೊಂಡವನು. ಜೀವ ಪರ , ಮನುಷ್ಯತ್ವದ ಕಡೆ ಹೆಚ್ಚು ಬಾಗುವ ಈ ಮನಸ್ಸು ಎರಡೂ ಪುಸ್ತಕಗಳಲ್ಲೂ  ಅನುಭವಗಳೊಂದಿಗೆ ದಾಖಲಾಗಿದೆ. ನಾನು "ದಾರಿ ತಪ್ಪಿಸು ದೇವರೇ" ಪುಸ್ತಕಕ್ಕಿಂತ ಹೆಚ್ಚು " ನಾನು ಸನ್ಯಾಸಿಯಾಗಲು ಹೊರಟಿದ್ದೆ" ಪುಸ್ತಕವನ್ನೇ ನೆಚ್ಚಿಕೊಂಡೆ. 

ಬಿಡುಗಡೆಯ ಸಂದರ್ಭ ಯಾವುದೇ ಸ್ಕೂಟರೊಂದು ಬ್ಯಾರಿಕೇಡ್ಗೆ ಬಡಿದಾಗ, ಕಾರ್ಯಕ್ರಮದ ಮಧ್ಯೆಯಿಂದಲೇ ಮಂಜುನಾಥ್ ಕಾಮತ್ ದೌಡಾಯಿಸಿದ್ದರು. ಸಾಹಿತಿಗಳು ಬರೆದಂತೆ ಬದುಕುವುದಿಲ್ಲವೆಂಬುವುದು ಹೆಚ್ಚಿನವರ ಅಭಿಪ್ರಾಯ. ಆದರೆ ಬರೆದಂತೆ ಬದುಕುವವರೂ ಇರುತ್ತಾರೆಂಬುವುದಕ್ಕೆ ಮಂಜುನಾಥ್ ಕಾಮತ್ ಮಾದರಿಯಾದರು. ಜೀವ ಪರವಾಗಿ ತುಡಿಯುವ ಅವರ ವ್ಯಕ್ತಿತ್ವಕ್ಕೆ ಈ ಘಟನೆಯೂ ಶೋಭೆಯಾಯಿತು. ಆತ್ಮಹತ್ಯೆಗೆ ಹೊರಟಿದ್ದ ಹುಡುಗನನ್ನು ಮತ್ತೆ ಬದುಕಿನ ಹಳಿಗೆ ಮರಳಿಸಿದ ಕಥೆ, ಹುಡುಗಿಯ ಮೊಬೈಲ್ ಕಥೆ, ಯಾತ್ರಾರ್ಥಿಗಳಿಗೆ ಸಹಾಯ ಹಸ್ತ ಚಾಚಿದ ಬಗೆ ಇವೆಲ್ಲಾ ಮಂಜುನಾಥರ ಬಗ್ಗೆ ಇನ್ನಷ್ಟು ಗೌರವ ತರುವಂಥದ್ದು. ಗುಲಾಬಿಯ ಕಥೆಯೊಂದು ಟವರಿನ ಮೇಲೆ ಕಾಪ್ಚರ್ ಮಾಡಿಕೊಂಡು ಇಂದಿರಾ ನಗರ ದಿಂದ ಪ್ರಾರಂಭವಾಗುವ ಶೈಲಿ, ಲೇಖಕನ ಅಕ್ಷರ ಚಾಕಚಕ್ಯತೆಯನ್ನು ಕೊಂಡಾಡುತ್ತದೆ . ಪ್ರೀತಿಸಿದ 'ಅವಳುಗಳು' ಸಿಗದ ವಿರಹಿಯಂತೆ ಮಂಜುನಾಥರು ತೀವ್ರವಾಗಿ ಕಾಣುತ್ತಾರೆ. 'ಅವಳು ಹೊಗೆಯಾದಳು' ಎಂಬ ಶೀರ್ಷಿಕೆ ನಿಜಕ್ಕೂ ಏನೋ ಹೇಳ ಹೊರಟಂತಿದ್ದರೂ, ಆ ಕಥೆಯನ್ನು ಮಾಂತ್ರಿಕವಾಗಿ‌ ಬಳಸಿಕೊಂಡ ವೈಖರಿ ಮೆಚ್ಚಬೇಕಾದದ್ದು. ಯಾರನ್ನೂ ಮೆಚ್ಚಿಸಿಕೊಳ್ಳಬೇಕೆಂದೂ ಎಲ್ಲೂ ಬರೆದಂತೆ ಕಾಣುವುದಿಲ್ಲ. ಶುದ್ಧ ನೈಜತೆ ಮತ್ತು ಅನುಭವಗಳು ಇಷ್ಟವಾಗುತ್ತದೆ. ಗುಲಾಬಿಯ ಕಥನ ಕ್ರೈಂ ಸ್ಟೋರಿಯಂತೆ ದಾಖಲಾದರೂ , "ಪಾಪ ಅನ್ಯಾಯವಾಗಿ ಮಂಜುನಾಥರು ಕಥೆ ಬೇಧಿಸಲು ಹೋಗಿ ಸುಮ್ಮನೆ ಪೋಲಿಸರಿಗೆಲ್ಲಾ ಸಿ‌.ಬಿ.ಐಗಳಂತೆ ಸಹಾಯ ಮಾಡಬೇಕಾದ ಫಜೀತಿಗೆ ಸಿಲುಕುತ್ತಾರಲ್ವಾ" ಎಂದನಿಸಿದ್ದುಂಟು. ಕಥೆಗಳು ಖಂಡಿತಾ ನಿಮ್ಮನ್ನೂ ಆವರಿಸಿಕೊಂಡು ಓದಿಸುತ್ತದೆಯೆಂಬ ಗ್ಯಾರಂಟಿ ನಾನು ಕೊಡಬಲ್ಲೆ. ಒಟ್ಟಾರೆ , ಪುಸ್ತಕ ಓದಿ ಮುಗಿಸಿದಂತೆ ಕನ್ನಡಕ್ಕೊಬ್ಬ ಪ್ರತಿಭಾವಂತ ಬರಹಗಾರರು ಸಿಕ್ಕಿದರೆಂಬ ಖುಷಿ‌ಯೊಂದು ಆವರಿಸುತ್ತದೆ. ಕೊನೆಗೊಮ್ಮೆ ಈ ಶೂನ್ಯತೆ ನಿಮಗೂ‌ ಕಾಡಬಹುದೇನೋ, ನಾನು ಸನ್ಯಾಸಿಯಾಗಲು ಹೊರಟಿದ್ದೆ ಎಂಬ ಕಥೆ ಕೇವಲ ಮುನ್ನುಡಿಯಂತೆ ಭಾಸವಾದರೂ, ಎಲ್ಲೂ ಕಥೆಯ ಮೂಲವಾಗುವುದೇ ಇಲ್ಲ. ಬಹುಶಃ ಅದನ್ನೇ ನಿರೀಕ್ಷಿಸಿ ಓದಲು ಪ್ರಾರಂಭಿಸುವವರಿಗೂ, ವಿರಹವನ್ನೇ ಯಾಕೆ ಓದ ಬೇಕೆಂದು ಪೂರ್ವಾಗ್ರಹವನ್ನು ಹೊಂದುವವರನ್ನೂ ಓದುಗರಾಗಿ ಸಮ ಪ್ರಮಾಣದಲ್ಲಿ  ಸೆಳೆಯುವ ಲೇಖಕರ ತಂತ್ರವಾಗಿರಲೂ ಬಹುದು.

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ- https://www.bookbrahma.com/book/naanu-sanyasiyagalu-horatidde

ಮುನವ್ವರ್ ಜೋಗಿಬೆಟ್ಟು