Article

'ನೆಲೆ' ಕಾಣುವುದು

'ನೆಲೆ' ಎಂದರೇನು ? 20-ವರ್ಷಗಳ ಪೋಷಕ, ಶಿಕ್ಷಕ ಮತ್ತು ಶೋಷಕರಿಂದ ಶಿಕ್ಷಣ ಪಡೆದು ಒಂದು ನಿರ್ದಿಷ್ಟ ಬದುಕನ್ನು ರೂಢಿಗತವಾಗಿಸಿಕೊಳ್ಳುವುದೇ? ನಂತರ ನಮ್ಮ ಮುಂದಿನ ಪೀಳಿಗೆಯನ್ನೂ ಇದೇ ರೀತಿ ಪಾಲನೆ ಪೋ(ಶೋ)ಷಣೆ ಒಳಪಡಿಸಿ ಅದೇ ಅದೇ ವರ್ತುಲವನ್ನು  ಪುನರಾವರ್ತಿಸುವುದೇ?,  ಅಥವಾ ಸತ್ತ ನಂತರವೂ ನಮ್ಮ ಅಸ್ತಿ, ಆಸ್ತಿ, ಅಸ್ತಿತ್ವವನ್ನು ಮುಂದುವರಿಸಿಕೊಂಡು ಹೋಗಲು ಮಾಡಿಕೊಳ್ಳುವ ಮರಣೊತ್ತರ ವ್ಯವಸ್ಥೆಯೂ ನೆಲೆಯೇ ?, ಇಂತಹ  ಇತ್ತ ಯಾವ ನೆಲೆಯನ್ನೂ ಕಾಣದೆ ಅತ್ತ ಯಾವ ನೆಲವನ್ನೂ ಕಾಣದ ಮಾನವನ ಪ್ರಶ್ನೆಗಳ ಜಿಜ್ಞಾಸೆಯನ್ನು ದೈನಂದಿನ ಪಾತ್ರಗಳ ಮೂಲಕ ಇಲ್ಲಿ ವಿಶ್ಲೇಷಿಸಿದ್ದಾರೆ ಭೈರಪ್ಪನವರು.

'ನೆಲೆ' ಕಾಣುವುದು ಎಂದರೇನು ? ತಮ್ಮ ಪಾತ್ರವೊಂದರ ಮೂಲಕ ಭೈರಪ್ಪ ಉತ್ತರಿಸುತ್ತಾರೆ... ’ಧ್ವನಿ ತಿಳಿದಾಗಲೇ ನಾವು ಯಾವುದನ್ನೂ ಗ್ರಹಿಸುವುದು. ಅರ್ಥ ತಿಳಿದಾಗ ಏನೂ ಸಿಕ್ಕಿರುವುದಿಲ್ಲ, ಸಿಕ್ಕಿತೆಂಬ ಭ್ರಮೆಯನ್ನು ಬಿಟ್ಟು, ಇನ್ನೂ ಮುಂದೆ ಹೋದರೆ ಭಾವಗ್ರಹಣವಾದಾಗಲೇ ನಮಗೆ ಪೂರ್ತಿ ಸಿಕ್ಕುವುದು...’ ಮೃತ್ಯುವಿನ ಅಂಚಿಗೆ ಪ್ರಜ್ಞೆಯು ತಲುಪಿದಾಗ ಮಾತ್ರ ಜೀವನದ ನಿಜವಾದ ಮಾಪನವು ಸಾಧ್ಯವೆಂಬ ಮೂಲಭೂತ ಆಶಯವನ್ನು ಈ ಕೃತಿಯು ಸಾಕಾರಗೊಳಿಕೊಂಡಿದೆ" ಎಂಬ ಅರ್ಥಪೂರ್ಣ ಮುನ್ನುಡಿಯಲ್ಲಿ ಭೈರಪ್ಪನವರು ಹೇಳಿದ್ದಾರೆ.

ಭೈರಪ್ಪನವರ ಅಭೂತಪೂರ್ವ ಕೃತಿಯಾದ ’ಯಾನ’ದಲ್ಲಿನಂತೆ ತಮ್ಮ ಖಗೋಳಶಾಸ್ತ್ರದ ಅಭಿರುಚಿಯೆನ್ನುವ ಅಧ್ಯಯನಶೀಲತೆಯನ್ನು ಇಲ್ಲಿಯೂ ಕೆಳಕಂಡಂತೆ ಚರ್ಚಿಸಿರುವುದು ಈ ಪುಸ್ತಕವನ್ನು ಕೇವಲ ಕಾದಂಬರಿಯ ಕಥಾವಸ್ತುವನ್ನಾಗಿಸದೇ, ಇದನ್ನೊಂದು ಆಸಕ್ತಿದಾಯಕ ವಿಷಯ ಸಂಪನ್ಮೂಲವನ್ನಾಗಿಸಿದೆ.

"ನಕ್ಷತ್ರಗಳ ಹೊಳಪು ಜಾಸ್ತಿಯಾಗಿತ್ತು. ಮುಚ್ಚಿದ ಕಣ್ಣುಗಳನ್ನು ತಕ್ಷಣ ತೆರೆದದ್ದಕ್ಕೋ ಅಥವಾ ಭೂಮಿಯ ಈ ಭಾಗದಲ್ಲಿ ಕತ್ತಲು ಸಂಪೂರ್ಣವಾಗಿರುವುದಕ್ಕೋ ಎಂದುಕೊಳ್ಳುವಾಗ ಮನುಷ್ಯನ ಕಣ್ಣಿನ ಶಕ್ತಿಯ ಮಾನದಿಂದ ವಿಶ್ವದಲ್ಲಿ ಕತ್ತಲಿನ ಪ್ರದೇಶ ಹೆಚ್ಚೋ ಬೆಳಕಿನ ಪ್ರದೇಶ ಹೆಚ್ಚೋ ಎಂಬ ಪ್ರಶ್ನೆ ಹುಟ್ಟಿತು. ಅಳತೆ ಮಾಡಿ ಉತ್ತರ ದೊರಕಿಸಬಹುದಾದ ಪ್ರಶ್ನೆ...."

ಭೈರಪ್ಪನವರು ಭೌತಶಾಸ್ತ್ರವನ್ನೂ ವ ಭೌತಿಕತೆಯನ್ನೂ ಮೀರಿದ ಅನುಭವವನ್ನು ತಮ್ಮ ಅಲೌಕಿಕ ’ನೆಲೆ’ಗಟ್ಟಿನಲ್ಲಿ ಕಟ್ಟಿಕೊಡುತ್ತಾರೆ....

"ಮನಸ್ಸು ಹರಿಯುವುದು ನಿಂತರೂ ಕಾಲ ಹರಿಯುವ ಅರಿವು. ‌ ಎಲ್ಲೋ ದೂರದಲ್ಲಿ ಹತ್ತಿರದಲ್ಲಿ ಒಳಗೆ ಹೊರಗೆ ತಡೆಯಲು ಪ್ರಯತ್ನಿಸಿದರೂ ನಿರರ್ಥಕಗೊಳಿಸಿ ಅಪರಿಹಾರ್ಯವೆಂಬಂತೆ ಕಾಲ ಹರಿಯುತ್ತಿದೆ. ಎಲ್ಲವೂ ದೂರದೂರ ಹೋಗುತ್ತಿದೆ. ಇಲ್ಲದ್ದು ಹೊಸದಾಗಿ ಹುಟ್ಟಿ ಹತ್ತಿರ ಬರುತ್ತಿದೆ. ಆದರೆ ಯಾವುದನ್ನೂ ಮೆತ್ತಿಸಿಕೊಳ್ಳದೆ ನಾನು ಯಾವುದೋ ಅನಿರ್ದಿಷ್ಟ ಬಿಂದುವಿನಂತೆ ನಿಂತಿದ್ದೇನೆ. ಈ ಬದಲಾವಣೆಯ ಝರಿ ಭಾಗವೂ ಆಗಿ ಅದರ ಹೊರದಡವೂ ಆಗಿ ಎಂಬ ಅರಿವು ವ್ಯಾಪಿಸುತ್ತದೆ. ಖೇದ ವ್ಯಸನ ಉದ್ವೇಗ ಆಸೆ ಆಕಾಂಕ್ಷೆ ಮೊದಲಾದ ಸಂವೇಗಗಳೆಲ್ಲ ತೊಳೆದುಹೋಗಿ ನಾನು ನನ್ನೊಳಗೇ ಭಿನ್ನವಾದ ನಿರ್ಲಿಪ್ತ ಬಿಂದುವಾದಂತಹ , ನನ್ನ ಇತರ ಮುಖಗಳನ್ನು ನಾನೇ ಬೇರೆಯಾಗಿ ನೋಡಬಲ್ಲಂತಹ ಭಾವ, ಮಾತಿಲ್ಲದ, ಹಿನ್ನೆಲೆಯ ಸದ್ದುಗದ್ದಲವಿಲ್ಲದ ಕಣ್ಣಿಗೆ ಹಿಂಸೆಯಾಗುವ ಅತಿ ಪ್ರಕಾಶವಿಲ್ಲದ ಮೌನ ಚಲನಚಿತ್ರದಂತೆ ಬರತೊಡಗಿದ ಸ್ಮೃತಿ ಚಿತ್ರಗಳನ್ನು ಕಣ್ಣು ಮುಚ್ಚಿ ಸಾಕ್ಷಿಯಂತೆ ನೋಡತೊಡಗಿದೆ.."

" ಸಾವೆಂದರೆ ಏನೂ ಇಲ್ಲದ ಶೂನ್ಯವಲ್ಲ. ಅದೇ ನಿಜವಾಗಿ ಅನುಭವಕ್ಕೆ ಸಿಗಬಹುದಾದ ಸಂಗತಿ. ಹುಟ್ಟೆಂಬುದು ಅನುಭವಕ್ಕೆ ಸಿಕ್ಕದ ಖಾಲಿ ಕಲ್ಪನೆ.... "

" ಒಟ್ಟಿನಲ್ಲಿ ಸಮರ್ಥನೆಯು ತಮ್ಮ ಸ್ವಾರ್ಥದ ಬೇರೆ ಬೇರೆ ಸ್ವರೂಪಗಳೇ..."

ಅಂತಿಮವಾಗಿ " ಈ ಜೀವನದ ಬೇಕು ಬೇಡಗಳನ್ನು, ಪ್ರೀತಿ ಸ್ಥಾನಗಳನ್ನು ಸತ್ತ ನಂತರದ ಸ್ಥಿತಿಗೂ ವರ್ಗಾಯಿಸಿ ಆಲೋಚಿಸುವುದೇ ಅಲ್ಲವೇ ಮಾಯೆ ಎಂದರೆ? " ಎಂದು ಪ್ರಶ್ನಿಸುವ ಮೂಲಕ ಭೈರಪ್ಪನವರು ಮಾನವನ ಮನೋಭಾವದ ’ನೆಲೆ’ಯನ್ನು ಇಲ್ಲಿ ಮಾರ್ಮಿಕವಾಗಿಸಿದ್ದಾರೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಗರಾಜ ಷಣ್ಮುಖಪ್ಪ ರಂಗನ್ನವರ