Article

ಓದು ಮತ್ತು ಅನುಭವಗಳೆರಡರ ಹದವಾದ ಮಿಶ್ರಣ ನರೇಂದ್ರ ರೈ ದೇರ್ಲಾ ಬರವಣಿಗೆ

ಪತ್ರಕರ್ತರಾಗಿ ,ಸಾಹಿತಿಯಾಗಿ, ಪ್ರಾಧ್ಯಾಪಕರಾಗಿ, ಕೃಷಿಕರಾಗಿ, ಒಳ್ಳೆಯ ಮಾತುಗಾರರಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆಯ ನರೇಂದ್ರ ರೈ ದೇರ್ಲ ಅವರ ಇತ್ತೀಚಿನ ಮೂರು ಪುಸ್ತಕಗಳಲ್ಲಿ ಎರಡು ಪುಸ್ತಕಗಳನ್ನು ನಿನ್ನೆಯಷ್ಟೇ ಓದಿ ಮುಗಿಸಿದೆ.

ಸಾವಯವ ಕೃಷಿಯಲ್ಲಿ ಆಸಕ್ತಿ ಇರುವ ಪರಿಸರದ ಮಡಿಲಲ್ಲೇ ಹುಟ್ಟಿ ಬೆಳೆದು ವಾಸಿಸುತ್ತಿರುವ ದೇರ್ಲ ಅವರ ಬರಹಗಳು ನಿಜ ಅರ್ಥದಲ್ಲಿ ಮಣ್ಣಿನ ವಾಸನೆಯುಳ್ಳವು. ದೇರ್ಲರ ಹಳ್ಳಿಯ ಆತ್ಮಕಥೆ ಏಕಕಾಲದಲ್ಲಿ ಅವರ, ಅವರ ಹಳ್ಳಿಯ ಮತ್ತು ಸಮಸ್ತ ಗ್ರಾಮಭಾರತದ ಕಥೆಯಾಗಿರುವುದು ಇಲ್ಲಿ ಸೋಜಿಗವಲ್ಲ, ಸಹಜ.

ನರೇಂದ್ರ ಎಂದು ತನಗೆ ತಾನೇ ಹೆಸರಿಟ್ಟುಕೊಂಡು ಶಾಲೆಗೆ ಸೇರಿದ ಹುಡುಗ ಮನೆಯಲ್ಲಿ ಓದುವ ವಾತಾವರಣ ಇಲ್ಲದಿದ್ದರೂ ಪಿಎಚ್‌ಡಿ ಮಾಡಿ ಬದುಕು ಕಟ್ಟಿಕೊಂಡ ಪರಿ ನಿಜಕ್ಕೂ ಅಭಿನಂದನಾರ್ಹ. ಮಣ್ಣಿನ ನಂಟನ್ನು ಅಂಟಿಸಿಕೊಂಡೇ ಇರುವವರು ಇವರು. ಓದು ಮತ್ತು ಅನುಭವಗಳೆರಡರ ಹದವಾದ ಮಿಶ್ರಣ ಅವರ ಬರವಣಿಗೆ. ಅವರ ಬರಹಗಳು ನಮ್ಮನ್ನು ದೇರ್ಲದ ಗದ್ದೆ ತೋಟಗಳಲ್ಲಿ ಓಡಾಡಿಸುತ್ತವೆ, ಮಾಳದಲ್ಲಿ ಕೂತು ಕಾಡುಪ್ರಾಣಿಗಳನ್ನು ಬೊಬ್ಬೆ ಹಾಕಿ ಓಡಿಸುವಂತೆ ಮಾಡುತ್ತವೆ, ರಾಜನ ಪಾತ್ರದಾರಿ ಚೌಕಿಯಲ್ಲಿ ಬೀಡಿ ಸೇದುವುದನ್ನು ತೋರಿಸಿ ನಗಿಸುತ್ತವೆ, ರಬ್ಬರ್ ತೋಟ ತಂದ ಸಂಕಟಗಳನ್ನು ಅನುಭವಿಸುವಂತೆಯೂ ಮಾಡುತ್ತವೆ. ಇಂತಹ ಅನುಭವಗಳ ಖಜಾನೆಯೇ ಇಲ್ಲಿದೆ.

ಬುಟ್ಟಿ ಹೆಣೆಯುವ ಕಾಯಕವನ್ನು ಧ್ಯಾನವಾಗಿಸಿಕೊಂಡ ಅಜ್ಜಿಯ ಆತ್ಮೀಯ ಚಿತ್ರಣ ಎದೆಯನ್ನು ಹಸಿಯಾಗಿಸುವಂಥದ್ದು. ಮಂಗಗಳ ಜೊತೆಗಿನ ಅನುಭವ ನಗು ಉಕ್ಕಿ ಸುವುದರ ಜೊತೆಗೆ ರೈತರ ಸಂಕಷ್ಟಗಳನ್ನೂ ಅರ್ಥ ಮಾಡಿಸುತ್ತದೆ.

ಹಳೆಯ ಕಾಲದಲ್ಲಿ ಕೆರೆ ಕಟ್ಟೆ, ರಸ್ತೆಗಳನ್ನು ಯಾವ ಯಂತ್ರಗಳ ಸಹಾಯವಿಲ್ಲದೆ ಕೇವಲ ಮನುಷ್ಯ ಶ್ರಮದಿಂದ ಕಟ್ಟಿದ ಕಡೆಗೂ ದೇರ್ಲರ ಗಮನ ಹರಿದಿದೆ. ಮಮ್ಮದೆ ಬ್ಯಾರಿಯ ಸಂಚಾರಿ ಅಂಗಡಿಯ ವರ್ಣನೆಯಂತೂ ಕಣ್ಣೆದುರೆ ಅನುಭವವನ್ನು ಕಟ್ಟಿಕೊಡುತ್ತದೆ. ಒಟ್ಟಿನಲ್ಲಿ ಹಳ್ಳಿಯ ಆತ್ಮಕಥೆ ನಮ್ಮೊಳಗೂ ನಮಗೆ ಗೊತ್ತಿಲ್ಲದಂತೆ ಬೆಳೆಯುತ್ತ ಹೋಗುತ್ತದೆ.

ಈ ಪುಸ್ತಕದ ಜೊತೆಯೇ ಪ್ರಕಟವಾದ 'ಕೊರೋನಾ ನಂತರದ ಗ್ರಾಮಭಾರತ', ಹೆಸರೇ ಹೇಳುವಂತೆ ಕೊರೋನ ಎಂಬ ಅನಿರೀಕ್ಷಿತ ಕಾಯಿಲೆ ಬಂದ ನಂತರದ ಗ್ರಾಮೀಣ ಭಾರತದ ಸ್ಥಿತಿಯನ್ನು ಕಟ್ಟಿಕೊಡುತ್ತದೆ. ಮುಂಬೈನಲ್ಲಿ ದುಡಿಯುತ್ತ ಸಂಸಾರಕ್ಕೆ ಹಣ ಕಳುಹಿಸುತ್ತಾ ಕೊರೋನಾ ಬಂದ ನಂತರ ಊರಿಗೆ ಬಂದು ಕ್ವಾರಂಟೈನ್ ಮುಗಿಸುತ್ತಿದ್ದಂತೆಯೆ ಪತ್ನಿಯಿಂದ ನೀವು ಮನೆಗೆ ಬರುವುದು ಬೇಡ ಎಂದು ಹೇಳಿಸಿಕೊಂಡು ನೊಂದ ಆಧುನಿಕ ವಾಲ್ಮೀಕಿಯ ಕಥೆಯನ್ನು ಲೇಖಕ ಅರವಿಂದ ಚೊಕ್ಕಾಡಿಯವರು ಮುನ್ನುಡಿಯಲ್ಲಿ ಹೇಳುತ್ತಾರೆ. ಇಂತಹ ಮನಕಲುಕುವ ಸಂಗತಿಗಳ ಜತೆಗೆಯೇ, ಅವುಗಳ ಸಂಕಟವನ್ನು ಮರೆಸುವಂತೆ ದೇರ್ಲರ ಲೇಖನಗಳಲ್ಲಿ ಕೊರೋನಾ ವೈರಸ್ ಅನ್ನು ಹಳ್ಳಿಗಳೇ ಪಟ್ಟಣಗಳಿಗಿಂತ ನೂರುಪಾಲು ಪರಿಣಾಮಕಾರಿಯಾಗಿ ಎದುರಿಸಿದ ಕಥೆಗಳಿವೆ.

ಅಷ್ಟೇ ಅಲ್ಲ, "ಯಾವ ಗುತ್ತಿನ ಮನೆಯಂಗಳದಲ್ಲಿ ಕಂಬಳದ ಎತ್ತು, ಅಂಕದ ಕೋಳಿ, ಬೈಹುಲ್ಲಿನ ಬಣವೆ, ವಿಶಾಲವಾದ ಹಟ್ಟಿ, ಜಗಲಿಯಲ್ಲಿ ಪೇರಿಸಿಟ್ಟ ಅಕ್ಕಿಮುಡಿ ಇವೆಲ್ಲ ಪ್ರತಿಷ್ಠೆಯ ಭಾಗವಾಗಿದ್ದವೋ ಅವೆಲ್ಲ ಈಗ ಹಿಂದೆಸರಿದು ಕಾರು, ರಸ್ತೆ ಭಾಗಗಳಾಗಿವೆ" ಎಂಬ ವಿಷಾದವೂ ಇದೆ.

ನಗರಗಳಲ್ಲಿ ಮಾತ್ರವಲ್ಲದೆ ಕೊರೋನಾ ಹಳ್ಳಿಗಳಲ್ಲೂ ಕಂಪನ ಉಂಟು ಮಾಡಿದೆ ಆದರೆ ಅದರ ನಡುವೆಯೂ ಕಾರ್ಮೋಡದ ನಡುವಿನ ಬೆಳ್ಳಿರೇಖೆಯಂತಹ ಭರವಸೆಯನ್ನು ಎತ್ತಿ ಹಿಡಿಯುವುದು ಈ ಪುಸ್ತಕದ ವಿಶೇಷತೆ. ಗ್ರಾಮಗಳು ಯಾವತ್ತೂ ನಿಷ್ಕ್ರಿಯವಾಗಲೆ ಇಲ್ಲ, ಅಲ್ಲಿ ಯಾವತ್ತೂ ಒಂದು ಚಲನೆ ಇದೆ ಎನ್ನುವ ಲೇಖಕರು ಅಕಸ್ಮಾತ ನಗರಗಳಂತೆ ಹಳ್ಳಿಗಳು ಲಾಕ್ಡೌನ್ ಆಗಿದ್ದರೆ ಏನಾಗುತ್ತಿತ್ತು ಎಂಬುದನ್ನು ಊಹಿಸಲು ಹೇಳಿ ವಿಚಾರಕ್ಕೆ ಹಚ್ಚುತ್ತಾರೆ.

ನಗರದ ಅನುಕರಣೆ ಹಳ್ಳಿಗಳಲ್ಲಿ ಉಂಟುಮಾಡಿರುವ ಸಮಸ್ಯೆಗಳನ್ನು ಸಮರ್ಥವಾಗಿ ವಿಶ್ಲೇಷಿಸಿದ್ದಾರೆ. ಹಳ್ಳಿಗಳಲ್ಲಿ ಸಹಜವಾಗಿದ್ದ ಸರಳ ಜೀವನಶೈಲಿ ಸಮಾಜದ ದೊಡ್ಡಸ್ತಿಕೆಯ ಒತ್ತಡಕ್ಕೆ ಮಣಿದು ಸಂಕೀರ್ಣವಾಗುತ್ತಿರುವುದನ್ನು ದೇರ್ಲ ಗಮನಿಸಿದ್ದಾರೆ. ಹಳ್ಳಿಯ ಸಂಕಟಗಳ ಕುರಿತು ಹೇಳುತ್ತಲೇ ಅಲ್ಲಿನ ಅವಕಾಶಗಳ ಕುರಿತೂ ಹೇಳುತ್ತಾರೆ.

ಹಳ್ಳಿಯಲ್ಲಿ ಇದ್ದವರು ಪೇಟೆಯವರ ದೃಷ್ಟಿಯಲ್ಲಿ ಎಲ್ಲೂ ಇಲ್ಲದಂತಾಗುವ ಮೂರ್ಖ ಮಾತುಗಳ ಕುರಿತು ದೇರ್ಲ ವಿಷಾದ ವ್ಯಕ್ತಪಡಿಸುತ್ತಾರೆ. ಇಂತಹ ಮಾತುಗಳು, ಯೋಚನೆಗಳು ನಾವು ನಾಗರಿಕತೆಯನ್ನು, ಅಭಿವೃದ್ಧಿಯನ್ನು ಎಷ್ಟು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿ. ವಿಚಾರ ಯಾವುದೇ ಇರಲಿ ಅದರ ಎಲ್ಲಾ ಮುಖಗಳನ್ನೂ ವಸ್ತುನಿಷ್ಠವಾಗಿ ವಿಮರ್ಶಿಸಿ ಬರೆಯುವ ಸಾಮರ್ಥ್ಯ ರೈ ಅವರಿಗಿದೆ. ಈ ಮೇಲೆ ಹೇಳಿರುವಂತಹ ಬಹಳಷ್ಟು ವಿಚಾರಗಳನ್ನು ತಮ್ಮ ಸೂಕ್ಷ್ಮ ಗ್ರಹಿಕೆಯ ಮೂಲಕ ಸಮರ್ಥವಾಗಿ ಅನಾವರಣಗೊಳಿಸುವ ನರೇಂದ್ರ ರೈ ದೇರ್ಲ ಅವರಿಗೆ ಅಭಿನಂದನೆಗಳು.

 

 

ದೀಪಾ ಹಿರೇಗುತ್ತಿ

Comments