Article

ಒಳಿತಿನ ಕಡೆಗಿನ ನಡೆ: ವರ್ಜಿನ್ ಮೊಹಿತೊ ಯಶಸ್ಸಿಗೆ ಮೂಲ ಕಾರಣ

ಸತೀಶ್ ಚಪ್ಪರಿಕೆ ಅವರ ’ವರ್ಜಿನ್ ಮೊಹಿತೊ’ ಕತಾಸಂಕಲನವನ್ನು ಈವತ್ತು ಓದಿದೆ. ಹಿಂದೆಯೇ ಅವರು ’ಗರ್ಭ’ ಕತೆಯನ್ನು ನನಗೆ ಕಳುಹಿಸಿದ್ದರು. ಆದರೆ ನನಗೆ ಓದಲು ಆಗಿರಲೇ ಇಲ್ಲ. ಸಂಕಲನದಲ್ಲಿ ನಮೂದಿಸಲು ಅಭಿಪ್ರಾಯ ಸಂಗ್ರಹಿಸುತ್ತಿದ್ದರು ಎಂದು ನನಗೆ ಆಗ ಹೊಳೆಯಲೇ ಇಲ್ಲ. ಈಗ ಒಂದೇ ನಿಟ್ಟಿನಲ್ಲಿ ಇಡೀ ಪುಸ್ತಕವನ್ನು ಓದಿದ್ದರಿಂದ ಸಮಾಧಾನವಾಗಿದೆ.

ಹದಿನೆಂಟು ವರ್ಷ ಕತೆಗಳನ್ನು ಎದೆಯೊಳಗೆ ಇಟ್ಟುಕೊಂಡ ಅವರ ತಾಳ್ಮೆ ದೊಡ್ಡದು. ವಸ್ತುವೊಂದು ಮನಸ್ಸಿನಲ್ಲಿ ಮಾಗದೆ ಅದನ್ನು ಕತೆಯಾಗಿಸಲಾರೆ ಎನ್ನುವ ಹಟ ಅವರದ್ದು. ಆದ್ದರಿಂದ ಕತೆಗಳಿಗೆ ಬಹಳ ವಿಭಿನ್ನ ಸಂಗತಿಗಳು ವಸ್ತುಗಳಾಗಿವೆ. ಕನ್ನಡ ಭಾಷೆಯ ಬಳಕೆಯಲ್ಲಿ ಯಾವುದೇ ದೋಷವಿಲ್ಲದ ನಿರೂಪಣೆ, ಅವರಲ್ಲಿರುವ ಪ್ರಬುದ್ಧ ಪತ್ರಕರ್ತನನ್ನು ನಮಗೆ ಪರಿಚಯಿಸುತ್ತವೆ.

ಬೊಂಬಾಯಿ ಪೆಟ್ಟಿಗೆ, ಹೈಡ್ ಪಾರ್ಕ್, ಮೂರು ಮುಖಗಳು, ಕಾಣದ ಕೈಗಳ ಆಟ - ನಾಲ್ಕೂ ಕತೆಗಳಲ್ಲಿ ಭೂತ-ವರ್ತಮಾನಗಳು ಥಳಕು ಹಾಕಿಕೊಳ್ಳುವ ಪರಿ ಇಷ್ಟವಾಯ್ತು. ಭೂತದಲ್ಲಿ ನಡೆದ ಯಾವುದೋ ಘಟನೆ ಇಂದಿನ ಬದುಕಿಗೆ ಹೆಣಿಗೆ ಹಾಕಿಕೊಂಡು ತಲ್ಲಣ ಮೂಡಿಸುವ ಕ್ರಮ ನಾಲ್ಕರಲ್ಲೂ ಯಶಸ್ವಿಯಾಗಿ ಬಳಕೆಯಾಗಿದೆ.

ಕಾಣದ ಕೈಗಳ ಆಟಕತೆಯು ನನಗೆ ಎಲ್‌ಎಸ್ಶೇಷಗಿರಿರಾವ್ ಅವರ "ಮುಯ್ಯಿ" ಕತೆಯನ್ನು ಜ್ಞಾಪಿಸಿತು. ಹಳೆಯ ಬೇರಿನ ಜೊತೆಗೆ ಹೊಸ ಚಿಗುರು ಸೇರುವುದೆಂದರೆ ಇದೇ ಇರಬೇಕು. "ಬೊಂಬಾಯಿ ಪೆಟ್ಟಿಗೆ" ತಂಗಿಯನ್ನು ಕಳೆದುಕೊಂಡ ನಾಯಕನ ಅವಸ್ಥೆ ನನ್ನನ್ನು ಯಾವತ್ತೂ ಕಾಡುತ್ತದೆ. ನಾನೂ ಬಾಲ್ಯದಲ್ಲಿ ಹೀಗೆ ಬೊಂಬಾಯಿ ಪೆಟ್ಟಿಗೆ ನೋಡುವ ಭರದಲ್ಲಿ ದಾರಿ ತಪ್ಪಿಸಿಕೊಂಡಿದ್ದೆ. ಬಳ್ಳಾರಿಯ ಪೋಲೀಸರಿಗೆ ಸಿಕ್ಕು, ಅವರು ನನ್ನನ್ನು ಕ್ಷೇಮವಾಗಿ ಮನೆಗೆ ಒಪ್ಪಿಸಿದ್ದರು. ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿಯರನ್ನು ನನಗೆ ಈಗಲೂ ಎದುರಿಸಲು ಸಾಧ್ಯವಾಗುವುದಿಲ್ಲ. ಅಂತಹ ನೋವಿನ ಎಳೆಯನ್ನು ಕತೆ ಹೊಂದಿದೆ. ಹಿಂದೆ ಚಿತ್ತಾಲರು ತಮ್ಮ ಶಿಕಾರಿ ಕಾದಂಬರಿಯಲ್ಲಿ, ನಾಯಕನು ತನ್ನ ತಂಗಿಯೊಬ್ಬಳನ್ನು ಕಳೆದುಕೊಂಡ ಸಂಗತಿಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನೋಯುವ ಚಿತ್ರಣವನ್ನು ಕೊಟ್ಟಿದ್ದರು. ಅದರ ಮತ್ತೊಂದು ರೂಪ ಕತೆಯಲ್ಲಿ ನನಗೆ ಕಂಡಿತು. ಆದರೆ ಮೇಲಿನ  ನಾಲ್ಕೂ ಕತೆಗಳಲ್ಲೂ ಕೊನೆಯಲ್ಲಿ ಮನುಷ್ಯನ ಒಳ್ಳೆಯತನಕ್ಕೆ ಗೆಲುವಾಗಿದೆ. ಒಳತಿನ ಕಡೆಗೆ ಮುಖ್ಯಪಾತ್ರ ಧೈರ್ಯದಿಂದ ನಡೆಯುತ್ತದೆ. ಅದು ಕತೆಗಳ ಯಶಸ್ಸು ಎಂದು ನಾನು ಭಾವಿಸುವೆ.

"ಗರ್ಭ" ಮತ್ತು "ಕಾಣದ ಕೈಗಳ ಆಟ" ಕತೆಗಳಲ್ಲಿ ಆಧುನಿಕ ಆರೋಗ್ಯ ಕೇಂದ್ರಗಳ ಸುಲಿಗೆ ಮನೋಭಾವ ಸೊಗಸಾಗಿ ನಮೂದಾಗಿದೆ. ಆದರೆ ಕತೆಯ ಉದ್ದೇಶ ಮಾತ್ರ ಎರಡಕ್ಕೂ ಬೇರೆ. "ಗರ್ಭ"ದಲ್ಲಿ ನಾಯಕನು ತಾಯಿಯ ಆರೋಗ್ಯಕ್ಕಾಗಿ ಪರಿತಪಿಸುವ ಕ್ರಮವನ್ನು ಹೃದಯಸ್ಪರ್ಶಿಯಾಗಿ ಮೂಡಿಸಲು ಪ್ರಯತ್ನ ಮಾಡಿದ್ದಾರೆ. ಕೆಲವು ದೃಶ್ಯಗಳು ನನ್ನನ್ನು ಆರ್ದ್ರಗೊಳಿಸಿದವು.

"ದಾಸ" - ಕತೆಯನ್ನು ನಾನು ಒಂದು ಒಳ್ಳೆಯ ಲಲಿತ ಪ್ರಬಂಧವಾಗಿ ಸ್ವೀಕರಿಸಲು ಇಷ್ಟಪಡುತ್ತೇವೆ. ನಾಯಿಯ ಒಡನಾಟ, ಅದರ ಪ್ರೀತಿ, ಅದರಿಂದಾಗಿ ನಾಯಕನು ಸಾವಿನಿಂದ ಪಾರಾಗುವ ಕ್ರಮ ಎಲ್ಲವೂ ಚೆನ್ನಾಗಿವೆ. ಕನ್ನಡದಲ್ಲಿ ನಾಯಿಯ ಕುರಿತು ಸಾಕಷ್ಟು ಕತೆ-ಪ್ರಬಂಧಗಳು ಬಂದಿವೆ. ಎಲ್ಲವೂ ಅನನ್ಯವಾಗಿಯೇ ಇವೆ.

ಸಂಕಲನಕ್ಕೆ ಹೆಸರು ತಂದುಕೊಟ್ಟ ಕತೆ "ವರ್ಜಿನ್ ಮೊಹಿತೋ" ತನ್ನ ಹೊಸತನದಿಂದ ಇಷ್ಟವಾಯ್ತು. ನಗರದ ಅತ್ಯಾಧುನಿಕ ಬದುಕನ್ನು ಅನಾವರಣಗೊಳಿಸುವ ಪ್ರಯತ್ನ ಕನ್ನಡದಲ್ಲಿ ಕಡಿಮೆ. ಹೆಣ್ಣಿನ ಶೋಷಣೆಗೆ ಕಾರಣವಾಗುವ ಗಂಡಿನ ಸೂಕ್ಷ್ಮ ದಬ್ಬಾಳಿಕೆ ಕತೆಯಲ್ಲಿ ಚಿತ್ರಿತವಾಗಿದೆ. ನಾಯಕಿಯ ದಿಟ್ಟ ನಿಲುವು ನಮ್ಮ ಮೆಚ್ಚುಗೆ ಗಳಿಸುತ್ತದೆ.

“ಮೂರು ಮುಖಗಳು” ಕತೆಯಲ್ಲಿ ಲೌಂಗಿಕ ದೌರ್ಜನ್ಯದ ಹಲವು ಮುಖಗಳ ಅನಾವರಣವಾಗಿದೆ. ಹೊಸತಂತ್ರದಲ್ಲಿ ಮೂಡಿದ ಕತೆ ಸದ್ಯ ಜಗತ್ತಿನಾದ್ಯಾಂತ ಚರ್ಚೆಯಲ್ಲಿರುವ ಸಂಗತಿಯೂ ಹೌದು. ಲೈಂಗಿಕ ದೌರ್ಜನ್ಯವೆಂದರೆ ಶೋಷಿತ ಪಾತ್ರವಾಗಿ ಕೇವಲ ಹೆಣ್ಣು ಮಾತ್ರ ನಮ್ಮ ಕಣ್ಣ ಮುಂದೆ ಬರುತ್ತಾಳೆ. ಆದರೆ ಅದು ಗಂಡೂ ಆಗಿರಬಹುದು, ಚಿಕ್ಕ ಬಾಲಕನೂ ಆಗಿರಬಹುದು ಎನ್ನು ವಿಶಾಲಾರ್ಥದಲ್ಲಿ ಕತೆ ವಸ್ತುವನ್ನು ತೆರೆದಿಡುತ್ತದೆ.

ಒಟ್ಟಾರೆ ಖುಷಿ ಕೊಟ್ಟ ಓದುಅಭಿನಂದನೆಗಳು. ಮುಂದಿನ ಕತಾಸಂಕಲನ ಒಂದೆರಡು ವರ್ಷಗಳಲ್ಲಿ ಬಂದು ಬಿಡಲಿ. ರೀತಿ ಕಾಯಿಸುವುದು ಬೇಡ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಬುಕ್ ಬ್ರಹ್ಮಗೆ ಭೇಟಿ ನೀಡಿ : ವರ್ಜಿನ್ ಮೊಹಿತೊ

ವಸುಧೇಂದ್ರ