Article

ಒಂದೇ ಗುರಿ ಬೇರೆ ದಾರಿ!

ಕಥೆಗಾರರಾದ ಕೇಶವ ಮಳಗಿ ಅವರು ಒಳ್ಳೆಯ ಅನುವಾದಕರು ಹೌದು. ಇತ್ತೀಚೆಗೆ ಅವರು ಕಥೆಗಳ ಹೊರತಾಗಿ ಬೇರೆ ಬೇರೆ ಆಯಾಮದ ವಿಚಾರ –ಕಾವ್ಯಗಳನ್ನು ಆಯ್ದು ಅನುವಾದಿಸುತ್ತಿದ್ದಾರೆ. ಕಮೂ ತರುಣ ವಾಚಿಕೆ, ಮಧ್ಯಕಾಲೀನ ಭಕ್ತಿ ಕಾವ್ಯ ( ಸಂಕಥನದಿಂದ ಪ್ರಕಟವಾಗುತ್ತಿದೆ), ಹಾಲನ ‘ಗಾಥಾ ಸಪ್ತಶತಿ’ ಮತ್ತು ಭಾರತೀಯ ಸಂವಾದ ಪರಂಪರೆ ಕುರಿತಾಗಿ ‘ಒಂದೇ ಗುರು ಬೇರೆ ದಾರಿ’.. ಮತ್ತಷ್ಟು ಕೆಲಸ ನಡೆಯುತ್ತಿರುವ ಗುಮಾನಿ ಕೂಡ ನಂಗಿದೆ 

ಹೆಚ್ಚು ಹೆಚ್ಚು ಯುವ ತಲೆಮಾರಿನ ಬರಹಗಾರರು ಮತ್ತು ಓದುಗರೊಂದಿಗೆ ಸ್ನೇಹ ಸಂಬಂಧ ಇಟ್ಟುಕೊಂಡಿರುವ ಕಾರಣವೋ ಏನೋ ಮಳಗಿ ಅವರಿಗೆ ಇವತ್ತಿನ ಹುಡುಗರ ಓದಿನ ಸಮಸ್ಯೆ ಏನು ಎಂಬುದು ಅರ್ಥವಾಗಿಬಿಟ್ಟಿದೆ. ಇವತ್ತಿನ ಓದು, ಬರಹ ಮತ್ತು ವಾದಗಳು ಏಕಮುಖ ದಾಟಿಯವು. ಇದಕ್ಕೆ ಎಡ, ಬಲ, ನಡು ಎಂಬ ಭೇದವಿಲ್ಲ. ಒಂದಕ್ಕೊಂದು ಎದುರಾಗುತ್ತಾ ಎಲ್ಲವೂ ಒಂದೇ ತೆರೆನಾದ ಅರಿವಿನ ಅಹಮ್ಮು ಮತ್ತು ಅಂಧಕಾರಕ್ಕೆ ಒಳಗಾಗುತ್ತಿರುವ ಹೊತ್ತು ಇದು. ಇಂತಹ ಹೊತ್ತಿನಲ್ಲಿ ಹಲವು ಭಿನ್ನ ತಾತ್ವಿಕಮಾರ್ಗಗಳಲ್ಲಿ ನಮ್ಮ ಪೂರ್ವಿಕರು ಮತ್ತು ಸುಧಾರಕರು ಹೇಗೆ ಬದುಕಿದ್ದರು ಎಂಬುವುದನ್ನು, ಅವರ ನಡುವಿನ ಸಂವಾದವನ್ನು ಆರಿಸಿ ಆರಿಸಿ ಅನುವಾದಿಸಿ ನಮಗೆ ಕೊಟ್ಟಿದ್ದಾರೆ ಮಳಗಿಯವರು.

ಈ ಪುಸ್ತಕದಲ್ಲಿ ಮುಮ್ಮಾತು (ಅದು ಕೂಡ ಓದಲೇ ಬೇಕಾದ್ದು) ಸೇರಿಸಿ ಒಟ್ಟು ಏಳು ಮುಖ್ಯ ಅಧ್ಯಾಯಗಳಿವೆ. ಅವೆಲ್ಲವೂ ವಿಸ್ತಾರವಾದ ಪೀಠಿಕೆ ಮತ್ತು ಸಂವಾದಗಳ ಅನುವಾದಗಳಿಂದ ಕೂಡಿವೆ. ಆದರೆ ನನ್ನ ಓದಿಗೆ ಅವನ್ನು ಎರಡು ಭಾಗಕೊಂಡಿದ್ದೇನೆ ; 
೧. ಮೂರು ಆರ್ಷೇಯ ಸಂಕಥನಗಳು 
೨. ಐದು ಗಾಂಧೀಯ ಸಂವಾದಗಳು

ಮೊದಲನೆಯದಾಗಿ ನಮ್ಮ ವೈದಿಕ ಮತ್ತು ಅವೈದಿಕ ವಿಭಾಗಗಳು ಗುರುತಿಸುವುದು ತಿಳಿಯುವಳಿಕೆಗೆ ಪರಂತು ನಿಷೇಧಿಕೊಳ್ಳಲಿಕ್ಕೆ ಅಲ್ಲ. ಎಷ್ಟೋ ಬಾರಿ ಇದು ವೈದಿಕ ಮತ್ತು ಇದು ಅವೈದಿಕ ಎನ್ನುವ ಕಾರಣಗಳಿಂದಲೇ ಓದಬೇಕಾದ, ತಿಳಿಯಬೇಕಾದ ಹಲವು ಸಂಗತಿಗಳನ್ನು ನಾವು ಕಳೆದುಕೊಳ್ಳುತ್ತೇವೆ. ಅರಿವಿಗೆ ಅಂತಹ ಯಾವ ಮಿತಿಗಳು ಇರಬಾರದು. ಇಲ್ಲಿರುವ ಮೂರು ಆರ್ಷೇಯ ಸಂಕಥನಗಳು. ಅವುಗಳಲ್ಲಿ ಉಪನಿಷತ್ತಿನಿಂದ ಆರಿಸಿದ ಅರುಣಿ ಉದ್ದಾಲಕ, ನಚಿಕೇತ, ಮೈತ್ರೇಯಿ – ಯಾಜ್ಞವಲ್ಕ ಹಾಗೂ ಬುದ್ದ – ಅಜಾತ ಶತ್ರು ಸೇರಿದಂತೆ ಹಲವು ಅವೈದಿಕರ ಸಂಕಥನಗಳಿವೆ. ಹೇಗೆ ವಿರುದ್ದ ನೆಲೆಯ ತಾತ್ವಿಕತೆಗಳು ಸಂವಾದವನ್ನು, ಅದೇ ಕಾಲಕ್ಕೆ ಸಾಮರಸ್ಯವನ್ನು ಜೊತೆಯಾಗಿ ನಡೆಸಿಕೊಳ್ಳುತ್ತಿದ್ದವು ಎಂಬುದಕೆ ಉತ್ತಮ ನಿದರ್ಶನಗಳಾಗಿವೆ.

ಎರಡನೆಯದಾಗಿ ಗಾಂಧಿಯ ಕುರಿತು ಎಲ್ಲ ವಾದ, ಪಂಥ ಮಾರ್ಗದವರು ಟೀಕೆಯನ್ನು ಮಾಡುತ್ತಿರುತ್ತಾರೆ, ಅದು ಒಳ್ಳೆಯದೇ. ಆದರೆ ಒಂದಷ್ಟನ್ನು ಬೇರೆ ಬೇರೆ ನೆಲೆಯಿಂದ ಓದಿ ತಿಳಿದು ತರ್ಕಿಸಿ ಮಾಡಿದರೆ ಮತ್ತಷ್ಟು ಒಳಿತು ಎಂದು ನನ್ನ ನಂಬುಗೆ. ಇಲ್ಲಿ ಗಾಂಧಿಯೊಂದಿಗೆ ಟಾಗೂರ್, ನೆಹರು, ಬೋಸ್ ಮತ್ತು ಅಂಬೇಡ್ಕರ್ ಅವರು ನಡೆಸಿದ ಪತ್ರ ಸಂವಾದಗಳಿವೆ. ಇವತ್ತಿನ ಕಾಲದ ಯಾರೋ ಸಿದ್ದ ಮಾಡಿದ ಸ್ಕ್ರೀನ್ ಶಾಟ್ ಗಳನ್ನ ಓದಿ ಒದ್ದಾಡುವ ಬದಲು ಸ್ವತಃ ವ್ಯಕ್ತಿಗಳೇ ಬರೆದಿರುವ ಪತ್ರಗಳನ್ನು, ಅದರಲ್ಲಿನ ಭಾಷೆಯನ್ನು ಮತ್ತು ವಿಚಾರಗಳನ್ನು ಓದುವುದು ಮತ್ತಷ್ಟು ಒಳಿತಿನ ಸಂಗತಿ. ಭಿನ್ನತೆ ಸಹಜವಾದುದು ಆದರೆ ಅದು ಅಸಂಗತವಾದುದಲ್ಲ. ಆ ಭಿನ್ನತೆಯ ನಡುವೆಯೂ ನಾವೆಲ್ಲ ಜೊತೆಯಾಗಿ ಹೇಗೆ ನಡೆಯಬೇಕು, ನುಡಿಯಬೇಕು ಎಂಬುದಕೆ ಗಾಂಧೀ ಮತ್ತು ಇತರರ ಮಹನೀಯರು ಮಾತುಕತೆಗಳು ನಮಗೆ ಬಹುದೊಡ್ಡ ನಿದರ್ಶನಗಳು. ಅದರಲ್ಲಿಯೂ ಈ ಹೊತ್ತಿನ ರಾಜಕೀಯ ನಡೆಗಳು, ಕೀಳು ಮಟ್ಟದ ಪ್ರಚಾರಗಳು, ನೈತಿಕತೆ ಬಿಟ್ಟ ಸುಳ್ಸುದ್ದಿಗಳು, ಅಧಿಕಾರದ ಲೋಲುಪತೆಗಳನ್ನೂ ಕಾಣುತ್ತಿರುವ ನಮಗೆ ಈ ಪತ್ರ ಸಂವಾದಗಳನ್ನು ಓದಿದಾಗ ನಾವೆಷ್ಟು ನೈತಿಕ ಅಧಃಪತನಕ್ಕೆ ಕುಸಿದಿದ್ದೇವೆ ಎಂಬುದನ್ನು ಮನಗಾಣಿಸುತ್ತವೆ.

ಹಾಗೆ ಸುಮ್ಮನೆ ಗಮನಿಸಿದೆ; ಗಾಂಧಿ, ಸುಭಾಷ್ ಅವರಿಗೆ ಬರೆದ ಪ್ರತಿ ಪತ್ರದ ಕೊನೆಯಲ್ಲೂ ಅವರ ಆರೋಗ್ಯದ ಕಾಳಜಿಯ ಮಾತುಗಳು ತಪ್ಪುತ್ತಿರಲಿಲ್ಲ. ಎಲ್ಲದಕ್ಕಿಂತ ಆಸಕ್ತಿಕರವಾದದ್ದು ಗಾಂಧಿ ಪದೇ‌ ಪದೇ ಪ್ರಶ್ನೆಗಳನ್ನು ಎತ್ತಿ ಅದಕ್ಕೆ ಅಂಬೇಡ್ಕರ್ ಅವರಿಂದ ದೀರ್ಘ ವಿವರಣೆಗಳ ಉತ್ತರಗಳನ್ನು ಪಡೆಯುತ್ತಿದ್ದು ಮತ್ತು ಅಷ್ಟೇ ಕಾಳಜಿ, ಕರಾರುವಕ್ಕಾಗಿ ಅಂಬೇಡ್ಕರ್ ಉತ್ತರಗಳನ್ನು ಕೊಡುತ್ತಿದ್ದುದು. ಇದೇ ತೆರೆನಾದ ಇನ್ನಷ್ಟು ಸಂಗತಿಗಳು ಟಾಗೋರ್, ನೆಹರು ಅವರ ಪತ್ರಗಳಲ್ಲೂ ನಮಗೆ ಸಿಗುತ್ತವೆ.

ಭಾರತದ ಸಂವಾದ ಪರಂಪರೆ ಬಹಳ ವಿಸ್ತಾರವು ಮತ್ತು ಸಂಕೀರ್ಣವೂ ಆದುದು. ಇದು ನನ್ನ ಸಂಕ್ಷಿಪ್ತ ಪ್ರತಿಕ್ರಿಯೆ ಮಾತ್ರ.. ಇಲ್ಲಿನ ವಸ್ತು ವಿಷಯವು ನನಗೆ ಬಹಳ ಪ್ರಿಯವಾದ ಸಂಗತಿಯಾದ್ದರಿಂದ ಈ ಪುಸ್ತಕ ಕುರಿತಾಗಿ ಇನ್ನೊಮ್ಮೆ ದೀರ್ಘವಾದ ವಿಮರ್ಶೆಯನ್ನು ಬರೆಯಬೇಕಾದೀತು.

ನನ್ನ ಗೆಳೆಯರು ಈ ಪುಸ್ತಕವನ್ನು ಓದಬೇಕೆಂದು ಒತ್ತಾಯಪೂರ್ವಕವಾಗಿ ಶಿಫಾರಸ್ಸು ಮಾಡುತ್ತೇನೆ.

ರಾಜೇಂದ್ರ ಪ್ರಸಾದ್