Article

‘ಪರ್ವ’ಕ್ಕೊಂದು ಪತ್ರ…

ನಿನ್ನ ಕೊನೆಯ ಕೆಲವು ಪುಟಗಳನ್ನೋದುವಾಗ, ಕಥೆಯು ಮುಗಿವ ಪರಿಯ ಬಗ್ಗೆ ಸಹಿಸಲಾರದ ಕುತೂಹಲ, ಕಥೆ ಮುಗಿದುಹೋದರೆ ಅಂತ್ಯವೊಂದರ ಸೂತಕ ಆವರಿಸಿಕೊಳ್ಳುವುದೆಂಬ ಖಚಿತ ಭಯ ಆವರಿಸಿತ್ತು. ನನ್ನೊಳಗಾದ ಇಂಥ ಭಾವಘರ್ಷಣೆಗೆ ಅಕ್ಷರರೂಪ ಕೊಡುವ ದುಸ್ಸಾಹಸಕ್ಕೆ ಮುಂದಾಗುತ್ತಿದ್ದೇನೆ.

ಮಹಾಭಾರತದ ಪಾತ್ರಗಳನ್ನು ಅತ್ಯಂತ ಮಾನವೀಯವಾಗಿ ವಿಷದೀಕರಿಸಿರುವ ದಿಟ್ಟತನಕ್ಕೆ ಮೊದಲು ನನ್ನ ನಮನ. ಪ್ರತಿಯೊಂದು ಪಾತ್ರವೂ ಆತ್ಮಗತದಲ್ಲಿ ತೊಡಗಿರುವಾಗ ನಮ್ಮದೇ ಮನಸ್ಸಿನ, ವ್ಯಕ್ತಿತ್ವದ ವಿವಿಧ ಸೂಕ್ಷ್ಮ ವಿವರಗಳು ಒಂದೊಂದು ವ್ಯಕ್ತಿ-ಪಾತ್ರವೇ ಆಗಿ ನಾವೇ ಆಗಿಬಿಡುತ್ತವೆ, ಅಥವಾ ನಾವೇ ಆ ಪಾತ್ರವಾಗಿಬಿಡುತ್ತೇವೆಯೇನೋ. ಆತ್ಮಾಲಾಪ ಮುಗಿಯುವ ಹೊತ್ತಿಗೆ ನೀನು ಸಮದರ್ಶಿಯಾಗಿ, ಶುಭ್ರದರ್ಪಣವಾಗಿ ನಿಲ್ಲುತ್ತೀಯ. ಅಲ್ಲಿಯ ಪ್ರತಿಬಿಂಬ ನಾನಲ್ಲದ ನಾನು, ನಾನೆನ್ನುವ ಭ್ರಮೆಯ ‘ನಾನು’ಗಳ ನಡುವೆ ಅಸಂಖ್ಯ ಪದರಗಳನ್ನು ಹುಟ್ಟುಹಾಕಿದಂತಾಗಿ ಕಲ್ಪನೆ-ವಾಸ್ತವಗಳ ನಡುವೆ ಚಿತ್ತ ಚಿತ್ತಾಗಿ ತೊಳಲಾಡುತ್ತದೆ. ಎಂಥಾ ಸುಖ! ಕ್ಷಮಿಸು, ಮರುಳೆನಿಸಿದರೆ ನಕ್ಕುಬಿಡು, ಆದರಿದನ್ನು ಹೇಳಲೇಬೇಕು. ಮಹಾಭಾರತದ ನನ್ನ ಕೆಲವು ಅತ್ಯಂತ ಪ್ರಿಯವಾದ ಪಾತ್ರಗಳು ನಿನ್ನ ಮೂಲಕ ಮತ್ತಷ್ಟು ಸಮೀಪವಾಗಿವೆ.

ನಿನ್ನ ‘ಭೀಮ'ನ ಅಂತರಾರ್ಥ ನಿರೂಪಣೆ ನನ್ನನ್ನು ಕಡೆವರೆಗೂ ಕಲಕಿ, ಕಾಡುವುದು ಸನ್ನಿಹಿತ. ಕರ್ಣ ನನ್ನ ಕನವರಿಕೆಯಾಗಿದ್ದಾನೆ. ಅರ್ಜುನನ ಮೇಲೆ ವ್ಯಥೆಯಾಗುತ್ತದೆ. ಧರ್ಮರಾಯನ ಬಗ್ಗೆ ಅದೇ ಅನಾಸಕ್ತಿ, ಯಾಕೋ ಆ ಪಾತ್ರವನ್ನು ಶೋಧಿಸಲೂ ಆಲಸಿಯಾಗುತ್ತದೆ ಮನಸ್ಸು. ಇನ್ನು ದುರ್ಯೋಧನ. ಕಥೆಯ ಸಮತೋಲನಕ್ಕೆ, ಧರ್ಮದ ಪ್ರತಿರೂಪವಾಗಿ ಅಧರ್ಮ ಬೇಕು. ದುರ್ಯೋಧನ ಬೇಕು. ಆದರೂ ಅಲ್ಲಲ್ಲಿ ಅವನ ಪಾತ್ರದ ವ್ಯಾಖ್ಯಾನ ಆತ ಸಂಪೂರ್ಣ ದುರಾತ್ಮನಲ್ಲವಲ್ಲ ಎಂದು ಮರುಕಪಡುತ್ತಲೇ ಒಳಗಿವಿಗೆ ಉಸುರುವಂತೆ ಭಾಸವಾಗುತ್ತದೆ.

ಭೀಷ್ಮ-ದ್ರೋಣರ ಬಗ್ಗೆ, ಅವರ ಧರ್ಮ-ಅಧರ್ಮದ ಜಗ್ಗದ ನಿಲುವುಗಳೇ ಕಡೆಗೆ ಗೊಂದಲಗಳಾಗಿ ಅಟ್ಟಹಾಸ ನಡೆಸುವಾಗ ಖೇದವಾಗುತ್ತದೆ. ಹೀಗೆ ಬಂದು ಹಾಗೆ ಹೋಗುವ ಏಕಲವ್ಯ ನನ್ನ ದಿನಚರಿ ಪುಸ್ತಕದಲ್ಲೊಂದು ಕವಿತೆಯೇ ಆಗಿಬಿಟ್ಟ. ನಿನ್ನ ಪುಟಗಳಲ್ಲಿ ಕುಂತಿ, ತನ್ನ ಸ್ವಾರ್ಥಗಳ ಬಗ್ಗೆ ಸತ್ಯ ನುಡಿಯುತ್ತಾ ಪ್ರಾಮಾಣಿಕಳಾಗುತ್ತಾಳೆ.  ಓಹ್, ದ್ರೌಪದಿಯ ವೇದನೆ, ಅಳಲು, ನಿಟ್ಟುಸಿರು ಸುಡುತ್ತವೆ. ಈಗಲೂ. ಅವಳೀಗ ಸಾಂತ್ವನ ನೀಡುತ್ತಾ-ಪಡೆಯುತ್ತಾ ಮನದಲ್ಲಿ ಸೋದರಿಯಾಗಿ ವಿರಾಜಮಾನ. ಸಾಲಕಟಂಕಟಿ, ಆಹ್, ತನ್ನ ಹೆಸರಿನಿಂದ ಹಿಡಿದು ಕಡೆಯ ಪಾತ್ರದರ್ಶನದವರೆಗೂ ತನ್ನ ಉಪಸ್ಥಿತಿಯನ್ನು ಸಮರ್ಥವಾಗಿ, ಶ್ರಮರಹಿತಳಾಗಿ ಮೆರೆಯುತ್ತಾಳೆ.

ಅಯ್ಯೋ, ಅಭಿಮನ್ಯು, ನಮ್ಮೆಲ್ಲರ ಅಸಹಾಯಕ ಹೋರಾಟಗಳ ಪ್ರತೀಕ ನೀ. ಸ್ವರವೊಂದು ಮಂದ್ರ-ತಾರಗಳ ರೂಪಾಂತರಗಳನ್ನೇ ಅನುಭವಿಸಿ ಅನುರಣಿಸದೇ, ಆದಿಯಲ್ಲೇ ಅಶ್ರುತವಾದಂತೆ ಮಡಿವೆ. ಧೃತರಾಷ್ಟ್ರ-ಗಾಂಧಾರಿಯರ ಕತ್ತಲು ಈ ಲೋಕದ ಮೇಲೆ ತನ್ನ ಛಾಯೆ ಬೀರದಿರಲಿ. ಯುಯುಧಾನನಂತಹ ಸಖಿ-ಸಖರು ಕೆಲವರು ತಮ್ಮ-ತಮ್ಮ ನೆಲೆಯಲ್ಲೇ ಹಿರಿಮೆ ಮೆರೆಯುತ್ತಾರೆ. ಇನ್ನೆಷ್ಟು ಮತ್ತೆಷ್ಟು ಪಾತ್ರಗಳು ಹೀಗೆ ಆಗಾಗ ನೆನಪಿನಿಂದ ನೇಯ್ದ ಅರಿವಿನ ಪದರದಿಂದ ಆಗಾಗ ಇಣುಕಿ, ಹೊಸ ಹೊಳಹುಗಳನ್ನು, ಬೆಳಕನ್ನು ತರುತ್ತಲೇ ಇರುತ್ತವೆ.

ಕುರುಕ್ಷೇತ್ರ ಯುದ್ಧದ ಪೂರ್ವತಯಾರಿ, ಯುದ್ಧ ಕಣ್ಣೆದುರಿಗೇ ನಡೆಯುತ್ತದೆ. ರಕ್ತ ಹೆಪ್ಪುಗಟ್ಟುವಂತೆ ಆ ಇಡೀ ಅಧ್ಯಾಯ ಹೆಪ್ಪುಗಟ್ಟಿ ನಿಂತಿದೆ ಸ್ಮೃತಿಯಲ್ಲಿ. ಪುರಾತನ ಭಾರತದ ಪ್ರಾದೇಶಿಕ ಭೂಗೋಳ ನನ್ನ ಕೋಣೆಯ ಗೋಡೆಯೊಂದರ ಮೇಲೆ ತಾನು-ತಾನಾಗೇ ರೂಪಪಡೆಯುತ್ತದೆ.

ಕೃಷ್ಣ. ಕೃಷ್ಣಾ. ಶ್ರೀಕೃಷ್ಣ ವಾಸುದೇವಾ. ಬೆಳಕು ನೀ, ಅರಿವು ನೀ, ಅರಿವಿನ ಹಿಂದೆ-ಹಿಂದೆ ಬರುವ ನಮ್ರತೆ ನೀ. ಸಖ ನೀ, ಈ ಘಳಿಗೆ ನೀ, ಅನವರತ ನೀ. ಸಲ್ಲಾಪ ನೀ, ಮೌನ ನೀ. ಕಣ್ಮುಚ್ಚಿದರೂ ಕೈಹಿಡಿಯುತ ಮುನ್ನಡೆಸುವ ಆತ್ಮಬಂಧು ನೀ. ರಕ್ಷಕ ನೀ, ನಿನ್ನ ಲೀಲೆಗಳ ಮರೆಯಲ್ಲಿ ನೋಡುತ್ತಾ ನಿನ್ನವಳಾಗುತ್ತಾ, ನಿನ್ನ ಏಕಾಂತದಲ್ಲಿ ಮಾತ್ರ ನಿನ್ನ ಮುಂದೆ ಬಂದುನಿಲ್ಲಬೇಕು, ನಿನ್ನಲ್ಲೇ ಲೀನವಾಗಬೇಕು ಎಂಬ ಹಂಬಲ ಹುಟ್ಟುಹಾಕುವ ಗಂಡು ನೀ. 'ಪರ್ವ'ದ ಕರ್ತೃವೇ ಹೇಳುವಂತೆ, ನಿನ್ನ ಅಸ್ತಿತ್ವದ ಪೂರ್ತಿ ಅನ್ವೇಷಣೆ ಸಾಧ್ಯವೇ ಇಲ್ಲವಲ್ಲ. ಈ ಅಲ್ಪಮತಿಯ ಪಾಲಿಗೆ ಆ ವೈಫಲ್ಯವೇ ಪರ್ವ.

ಓದು ಮುಗಿದಾಯಿತು. ಹಬ್ಬವೊಂದು ಮುಗಿದು, ಪಾತ್ರಗಳೆಂಬ ಬಂಧುಗಳನ್ನೆಲ್ಲಾ ಬೀಳ್ಕೊಟ್ಟು ಮನೆಯ ಹೆಬ್ಬಾಗಿಲ ಚಿಲಕ ಭದ್ರಪಡಿಸಿ ಖಾಲಿ ಮನೆಯಂಗಳದಲ್ಲಿ ತುಂಬಿ ತುಳುಕುವ ಮ್ಲಾನತೆಯನ್ನು ಚಿತ್ತಭ್ರಂಶಳಾಗಿ ನೋಡುತ್ತಾ ನಿಂತಿದ್ದೇನೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೌರಭಾ ರಾವ್