Article

ಪೋರ್ಚುಗಲ್ ಐತಿಹಾಸಿಕತೆಯ ಅನಾವರಣ ‘ತೇಜೋ ತುಂಗಭದ್ರಾ’

ಇತ್ತೀಚೆಗೆ ನಾನು ಓದಿದ ಪುಸ್ತಕಗಳಲ್ಲಿ ಹೆಚ್ಚು ಸಮಯವನ್ನು ತೆಗೆದುಕೊಂಡ ಪುಸ್ತಕವಿದು. ನಾನೂರೈವತ್ತು ಪುಟಗಳನ್ನುಳ್ಳ ಈ ಕೃತಿಯನ್ನು ವೇಗವಾಗಿ ಓದಲು ಸಾಧ್ಯವಾಗಲಿಲ್ಲ. ಕಾರಣ ಪ್ರತಿ ಪುಟದಲ್ಲಿಯೂ ಇರುವ ಬಿಗಿಯಾದ ನಿರೂಪಣೆ ಮತ್ತು ಕಥೆಯ ಜಾಡು.

1492 -1518 ರ ಕಾಲಘಟ್ಟದಲ್ಲಿ ಎರಡು ದೇಶಗಳಲ್ಲಿ, ಎರಡು ನದಿಗಳ ಪಾತ್ರದಲ್ಲಿ ನಡೆಯುವ ಕಥನವನ್ನು ಅತ್ಯಂತ ಸಾವಧಾನವಾಗಿ, ಸುಂದರವಾಗಿ ವಸುಧೇಂದ್ರ ಹೇಳಿದ್ದಾರೆ.
ಇದಲ್ಲದೇ ಗೋವಾದ ಕಡಲತೀರದಲ್ಲಿ ನಡೆಯುವ ಕಥನವೂ ರೋಚಕವಾಗಿದೆ.

ಪೋರ್ಚುಗಲ್ ನ ಲಿಸ್ಬನ್ ನಿಂದ ಆರಂಭವಾಗುವ ಕತೆ ತೇಜೋ ನದಿಯ ದಂಡೆಯ ಮೇಲೆ ನಿಧಾನವಾಗಿ ಹರಿಯುತ್ತದೆ. ಅಲ್ಲಿನ ಜನಪದ ಕತೆ ಸ್ವಾರಸ್ಯಕರವಾಗಿದೆ. ಪೋರ್ಚುಗಲ್ ನ ರಾಜ ಮ್ಯಾನ್ಯುಯಲ್, ಸ್ಪೇನಿನ ರಾಣಿ, ಯಹೂದಿಗಳ ಮೇಲೆ ಆಕ್ರಮಣ; ಹೀಗೆ ರಾಜಕೀಯ, ಧಾರ್ಮಿಕ ಮತ್ತು ಪ್ರಭುತ್ವದ ಮುಖಗಳನ್ನು ನಿರೂಪಕ ಅನಾವರಣ ಮಾಡಿದ್ದಾರೆ.

ಗೇಬ್ರಿಯಲ್ ಎಂಬ ಕ್ಯಾಥೋಲಿಕ್ ಕ್ರೈಸ್ತ ಮತ್ತು ಬೆಲ್ಲಾ ಎಂಬ ಯಹೂದಿ ಹುಡುಗಿಯ ಪ್ರೀತಿಯ ಜೊತೆ ಜೊತೆಗೆ ಕ್ರೈಸ್ತ ಮತ್ತು ಯಹೂದಿ ಧರ್ಮಗಳ ಆಚರಣೆಗಳು, ಮತಾಂತರ, ಧಂಗೆ ಇವೆಲ್ಲ ಕಾಣಸಿಗುವುದು. ವಸುಧೇಂದ್ರ ಅವರ ಹೋಂ ವರ್ಕ್ ಮತ್ತು ನಿರ್ಲಿಪ್ತವಾಗಿ ಕಥೆ ಹೇಳುವ ಶೈಲಿ ಇಲ್ಲಿ ವಿಶಿಷ್ಟವಾಗಿದೆ. ಭಾರತ ದೇಶ ಶ್ರೀಮಂತ ರಾಷ್ಟ್ರವಾಗಿತ್ತು ಎಂಬ ಸಂದೇಶ ಕೂಡ ಇಲ್ಲಿ ಗಮನಾರ್ಹವಾಗಿದೆ.

ಯಹೂದಿಗಳ ವ್ಯಾಪಾರಿ ಬುದ್ಧಿವಂತಿಕೆ, ರಾಜಕಾರಣದ ಆಳ, ಅಗಲ ಮತ್ತು ಆರ್ಥಿಕತೆಯ ಕುರಿತ ಆಲೋಚನೆ ಬಗ್ಗೆ ವಸುಧೇಂದ್ರ ಅವರು ಕಾದಂಬರಿಯ ಮುಖೇನ ಚರ್ಚಿಸಿರುವ ವಿಷಯ ಎಂದಿಗೂ ಪ್ರಸ್ತುತವಾಗಿದೆ. ಈ ಕಾದಂಬರಿಯಲ್ಲಿ ಕ್ರೈಸ್ತ, ಮುಸ್ಲಿಂ ಮತ್ತು ಹಿಂದೂ ಧರ್ಮದ ನಕಾರಾತ್ಮಕ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅಂತಿಮವಾಗಿ ಅಧಿಕಾರದಲ್ಲಿ ಇದ್ದ ಎಲ್ಲಾ ಧರ್ಮಗಳ ನಡುವಳಿಕೆಗಳನ್ನು ಚರ್ಚೆಗೆ ತಂದಿದ್ದಾರೆ.

ಯಹೂದಿಗಳ ಅಭದ್ರತೆ, ಅಲೆಮಾರಿ ಸ್ಥಿತಿ, ಬೆಲ್ಶಾಮ್ ರ ನುಡಿಗಳು ಕಾಡುತ್ತವೆ. ' ಜೀವನ್ಮರಣದ ಪ್ರಶ್ನೆ ಎದುರಾದಾಗ ಜೀವ ಉಳಿಸಿಕೊಳ್ಳುವುದೇ ಶ್ರೇಷ್ಠ ಧರ್ಮ' ಎಂಬ ಮಾತು ಬೆಲ್ಶಾಮರದು ಮತ್ತು ಹಂಪಮ್ಮನದೂ ಆಗುತ್ತದೆ.

ವಾಸ್ಕೋ ಡ ಗಾಮ, ಅಲ್ಬುಕರ್ಕ್ ಅವರ ಕ್ರೌರ್ಯದ ಭೀಕರತೆ ನಮ್ಮ ಮನಸ್ಸನ್ನು ಕದಡುತ್ತದೆ. ಒಂದು ಚಾಲೆಂಜಿಂಗ್ ಸನ್ನಿವೇಶದಲ್ಲಿ ಗೇಬ್ರಿಯಲ್ ಭಾರತಕ್ಕೆ ನಾವೆಯಲ್ಲಿ ಹೊರಡುವ ನಿರ್ಧಾರ ಮಾಡುತ್ತಾನೆ.

ತುಂಗಭದ್ರಾ ನದಿ ದಡದ ತೆಂಬಕಪುರದ ಕಥೆ ಬಹಳ ಭಿನ್ನವಾಗಿ ಏನೂ ಇಲ್ಲ. ಆದರೆ ಈ ಮಣ್ಣಿನ ಕಥೆಯನ್ನು ಹೇಳುವಾಗ ವಸುಧೇಂದ್ರ ವಿಜೃಂಭಿಸುತ್ತಾರೆ. ಇದು ಅವರನ್ನು ಮೊದಲಿನಿಂದಲೂ ಓದಿದವರಿಗೆ ಗೊತ್ತಾಗುತ್ತದೆ. ಇಲ್ಲಿಯೂ ಕಥೆ ಜನಪದದೊಂದಿಗೇ ತೆರೆದುಕೊಳ್ಳುತ್ತದೆ. ಅಂಣಂಭಟ್ಟ, ಹಂಪಮ್ಮ, ಚಂಪಕ, ಗುಣಸುಂದರಿ, ಕೇಶವ, ಮಾಪಳನಾಯಕ, ತೆಂಬಕ್ಕ, ಈಶ್ವರಿ, ಅಡವಿಸ್ವಾಮಿ ; ಹೀಗೆ ಪ್ರತಿಯೊಂದು ಪಾತ್ರವೂ ಬಹಳ ಕಾಲ ಕಾಡುವಂತೆ ಕೃತಿಕಾರ ಚಿತ್ರಿಸಿದ್ದಾರೆ.

ನಾವೆಯಲ್ಲಿ ಗೇಬ್ರಿಯಲ್ ನಿಗೆ ಸಿಗುವ ಆನ್ರಿಕ್ ಮತ್ತು ಜಾಕೋಮ್ ರ ಕಥೆಯನ್ನು ಓದಿಯೇ ಅನುಭವಿಸಬೇಕು. ಕೇಶವನ ಲೆಂಕನ, ನಾವೆಯಲ್ಲಿ ಹಸಿವು ಕಂಗೆಡಿಸಿದಾಗ ಗೇಬ್ರಿಯಲ್ ಅನಿವಾರ್ಯವಾಗಿ ಸೇವಿಸುವ ಆಹಾರ; ಓದಿ ನಮ್ಮ ಕರುಳು ಕಿತ್ತು ಬಂದಂತಾಗುತ್ತದೆ.

ಕಾದಂಬರಿಯ ಆರಂಭದಲ್ಲಿ ಹೀಗೆ ಬಂದು ಹಾಗೆ ಹೋಗುವ ಅಹಮದ್ ಖಾನ್ ನ ಪಾತ್ರ ಪೋಷಣೆಯಲ್ಲಿ ವಸುಧೇಂದ್ರರ ಸೃಜನಶೀಲತೆಯ ಶೃಂಗದ ಅರಿವಾಗುತ್ತದೆ. ಪುರಂದರದಾಸರ ಆಗಮನ ಕಥನವನ್ನು ಇನ್ನೊಂದು ಮಜಲಿಗೆ ಒಯ್ಯುತ್ತದೆ. ಇನ್ನಷ್ಟು ಹೇಳಿದಲ್ಲಿ ಕಾದಂಬರಿಯನ್ನು ಓದುವ ಸ್ವಾರಸ್ಯ ಹೋಗಬಹುದು.

ಒಂದು ಅದ್ಭುತವಾದ ಕಾದಂಬರಿಯನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ವಸುಧೇಂದ್ರರಿಗೆ ನಮನಗಳು. ಪುಸ್ತಕ ಪ್ರಿಯರು ಮುದ್ದಾಂ ಓದಲೇಬೇಕಾದ ಕೃತಿಯಿದು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಜಿತ ಹೆಗಡೆ