Article

ಪ್ರಯೋಗಾತ್ಮಕ ಒಂದು ದೃಶ್ಯ ಮೂರು ಸ್ಪರ್ಶದ ‘ಕಾಗೆ’

‘ಕಾಗೆ ಒಂದು ದೃಶ್ಯ ಮೂರು ಸ್ಪರ್ಶ’ ಎಂಬ ಮೂರು ಕತೆಗಳ ಚಿಕ್ಕ ಕಥಾಸಂಕಲನ ಕನ್ನಡ ಸಾಹಿತ್ಯದಲ್ಲಿ ಒಂದು ರೀತಿಯ ವಿಶಿಷ್ಟ ಪ್ರಯೋಗವೆಂದೇ ಹೇಳಬೇಕು. ಏಕೆಂದರೆ ಇದನ್ನು ಬರೆದವರು ಕನ್ನಡದ ಮೂವರು ಬೇರೆ ಬೇರೆ ಕತೆಗಾರರಾದ ಅಮರೇಶ ನುಗಡೋಣಿ, ಮಹಾಂತೇಶ ನವಲಕಲ್ ಮತ್ತು ಚಿದಾನಂದ ಸಾಲಿ. ಈ ಮೂವರು ಕತೆಗಾರರು ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದು ಕನ್ನಡ ಸಾಹಿತ್ಯದಲ್ಲಿ ತಮ್ಮ ಛಾಪು ಮೂಡಿಸಿರುವವರು. ಜೊತೆಗೆ ಈ ಮೂವರು ಲೇಖಕರು ಆತ್ಮೀಯ ಗೆಳೆಯರು ಮತ್ತು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿಗೆ ಸೇರಿದವರು.

ಈ ಕಥಾಸಂಕಲನದ ಬಗ್ಗೆ ಹೇಳುವುದಕ್ಕಿಂತ ಮುಂಚೆ ಕಾಗೆಯ ಬಗ್ಗೆ ಹೇಳಬೇಕು. ಅದೇನೋ ಭಾರತದಲ್ಲಿ ಅದರಲ್ಲೂ ಕನ್ನಡಿಗರಿಗೆ ಕಾಗೆ ಒಂದು ರೀತಿ ಅಪಶಕುನದ ಹಕ್ಕಿಯೆಂದೇ ಹೇಳಬೇಕು. ಯಾರು ಈ ಹಕ್ಕಿಯನ್ನು ಇಷ್ಟಪಡುವುದಿಲ್ಲ. ಬಸವಣ್ಣನವರು "ಕಾಗೆಯೊಂದಗುಳ ಕಂಡರೆ ಕರೆಯದೇ ತನ್ನ ಬಳಗವೆಲ್ಲವ" ಎಂದು ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ. ಜಗದ್ವಿಖ್ಯಾತ ಲೇಖಕ ಅಮೆರಿಕಾದ ಎಡ್ಗರ್ ಅಲ್ಲೆನ್ ಪೋ "ರಾವರ್ನ್" ಎಂಬ ತನ್ನ ಕಥನ ಕವನದಲ್ಲಿ ಮಾತನಾಡುವ ಕಾಗೆಯೊಂದನ್ನು ಸೃಷ್ಟಿಸಿ ಅದರಲ್ಲಿ ಭಯ ಹುಟ್ಟಿಸುತ್ತಾನೆ. ಹೆಸರಾಂತ ಲೇಖಕರಾದ ಕೆ. ಸತ್ಯನಾರಾಯಣ ಅವರು ತಮ್ಮ "ಸಾವಿನ ದಶಾವತಾರ" ಕಾದಂಬರಿಯಲ್ಲಿ ತಿಥಿ ಕಾರ್ಯದಲ್ಲಿ ಕಾಗೆಯನ್ನು ಕರೆಯುವುದು ಮತ್ತು ಆ ಕಾಗೆಯು ತಿಥಿಯ ಪಿಂಡವನ್ನು ತಿನ್ನಲು ಕಾಯುವುದು ಒಂದು ಸಂಪ್ರದಾಯವಾಗಿ ಉಳಿದಿಲ್ಲ ಎಂದು ಪ್ರತಿಪಾದಿಸುತ್ತಾರೆ. ಅದಕ್ಕಾಗಿಯೇ ಕಾಗೆಯನ್ನು ಬಾಡಿಗೆಗೆ ಮಾರುವ ವ್ಯಾಪಾರಿಗಳು ಹುಟ್ಟಿಕೊಂಡಿದ್ದಾರೆ ಎಂದು ನಿರೂಪಿಸಿದ್ದಾರೆ.

ಕಾಗೆಗೆ ಸಂಬಂಧಿಸಿದ ಕನ್ನಡದ ಇನ್ನೊಂದು ಉತ್ತಮ ಕತೆ, ಕತೆಗಾರ್ತಿ ಜಯಶ್ರೀ ಕಾಸರವಳ್ಳಿಯವರ "ತಂತಿ ಬೇಲಿಯ ಒಂಟಿ ಕಾಗೆ'. ಇದರಲ್ಲಿ ನಿರೂಪಕಿ ಯಾವುದೋ ಊರಿಗೆ ಹೋಗಿರುವ ಗಂಡನ ಬರುವಿಕೆಗಾಗಿ ಒಬ್ಬಳೇ ಮನೆಯ ಮಹಡಿಯ ಬಾಲ್ಕನಿಯಲ್ಲಿ ಮೇಲೆ ಕುಳಿತು ಆಕಾಶ ನೋಡುತ್ತಿರುತ್ತಾಳೆ. ಅವಳು ಈಗ ಮಧ್ಯ ವಯಸ್ಸನ್ನು ದಾಟಿರುವ ಹಾಗೆ ಕಾಣಿಸುತ್ತದೆ. ಅವಳ ಎದುರಿಗೆ ತಂತಿಯ ಬೇಲಿಯ ಮೇಲೆ ಒಂದು ಕಾಗೆ ಕುಳಿತಿರುತ್ತದೆ. ಅವಳು ಯಾರ ಹತ್ತಿರವಾದರೂ ತನ್ನ ಭಾವನೆಯನ್ನು ಹೇಳಿಕೊಳ್ಳ ಬೇಕು ಎಂದು ಹಂಬಲಿಸುತ್ತಿರುವಾಗ ಕಾಗೆ ಕಾಣಿಸುತ್ತದೆ. ಅದೇ ವೇಳೆಗೆ ಗಂಡನ ನೆನಪುಗಳಿಂದ ಅವನ ಫೋನ್ ಈಗ ಬರಬಹುದೆಂದು ನಿರೂಪಕಿ ಕಾಯುತ್ತಿರುವಾಗ ಎಲ್ಲಿಂದಲೋ ಒಬ್ಬ ಎಳೆಯ ತರುಣಿ ಪ್ರತ್ಯಕ್ಷಳಾಗುತ್ತಾಳೆ. ಆ ಕಾಗೆಯೇ ಆ ತರುಣಿಯ ರೂಪದಲ್ಲಿ ಬಂದಿರಲು ಸಾಧ್ಯ. ಆ ತರುಣಿ ತನ್ನ ದುರಂತ ಬದುಕಿನ ಕತೆ ಹೇಳುತ್ತಾಳೆ. ಕೊನೆಗೆ ಅವಳು ಮಾಯವಾಗುತ್ತಾಳೆ. ಕಾಗೆ ಹಾರಿಹೋದ ಶಬ್ದ ಕೇಳುತ್ತದೆ. ನಿರೂಪಕಿಗೆ ತನ್ನ ಬದುಕಿನ ಸ್ಥಿತಿಯ ಬಗ್ಗೆ ಆ ತರುಣಿ ಯೋಚಿಸುವಂತೆ ಮಾಡುತ್ತಾಳೆ. ಮರುದಿನ ಕಾಗೆ ಮತ್ತೇ ಕಾಣಿಸಿಕೊಳ್ಳುತ್ತದೆ. ಮುಂದೆ ಏನಾಗುತ್ತದೆ ಎಂದು ತಿಳಿಯಲು ಕತೆಯನ್ನು ಓದಲೇ ಬೇಕು.

ಈ ಕಥಾಸಂಕಲನದಲ್ಲಿ ಮುನ್ನುಡಿಯ ರೀತಿ ಕೆ. ಸತ್ಯನಾರಾಯಣ, ತಾರಿಣಿ ಶುಭದಾಯಿನಿ ಮತ್ತು ಚ. ಹ. ರಘುನಾಥ ಬರೆದಿದ್ದಾರೆ. ಮೂವರು ಹೇಳುವ ಪ್ರಕಾರ ಇದೊಂದು ಪ್ರಯೋಗಾತ್ಮಕ ಕಥಾಸಂಕಲನ. ಇದು ಹೊಸದಾಗಿ ಕತೆಯನ್ನು ಬರೆಯಬೇಕು ಎಂದು ಬಯಸುವವರು ಓದಲೇ ಬೇಕಾದ ಸಂಕಲನ. ಕಾರಣ ಇಷ್ಟೇ ಇಲ್ಲಿ ಮೂರು ಜನ ಲೇಖಕರು ತಾವು ಕಲ್ಬುರ್ಗಿ ರೈಲ್ವೆ ಸ್ಟೇಷನಲ್ಲಿ ಕಂಡ ಒಬ್ಬ ವಿಲಕ್ಷಣ ಮನುಷ್ಯನ ಹೆಗಲಿನ ಮೇಲೆ ಇದ್ದ ಕಾಗೆಯನ್ನು ಕಾಣುತ್ತಾರೆ. ಆ ವ್ಯಕ್ತಿ ಹಿಂದಿ ಮತ್ತು ಉರ್ದು ಮಿಶ್ರಿತ ಅಥವಾ ಹೈದರಾಬಾದಿ ಹಿಂದಿಯಲ್ಲಿ ಮಾತನಾಡುತ್ತಿರುತ್ತಾನೆ. ಇದು ನಮಗೆಲ್ಲಾ ಗೊತ್ತು ಅಪರೂಪದಲ್ಲಿ ಕಾಣುವ ದೃಶ್ಯವೆಂದು. ಆ ದೃಶ್ಯವನ್ನು ಮೂರು ಜನ ಲೇಖಕರು ತಮ್ಮ ಸೃಜನಶೀಲ ಶಕ್ತಿಯಿಂದ ಮೂರು ಕತೆಗಳನ್ನು ಬರೆದು ಈ ಕಥಾಸಂಕಲನದ ರೂಪ ಕೊಟ್ಟಿದ್ದಾರೆ. ಕಂಡ ದೃಶ್ಯ ಒಂದೇ ಆದರೂ ಕತೆಗಳು ಮಾತ್ರ ಬೇರೆಯೇ ಆಗಿವೆ.

ಆ ಕತೆಗಳು ಈಗಿವ

1. ತಮಂಧದ ಅವಸಾನ-ಅಮರೇಶ ನುಗಡೋಣಿ 
2. ಪಡುವಣದ ಗುಡಿಯೊಳಗೆ ಯಡಮೂರಿ ಶಂಖಧ್ವನಿಯೂ-ಮಹಾಂತೇಶ ನವಲಕಲ್
3. ಕಾಗೆಯೊಂದಗುಳ ಕಂಡರೆ-ಚಿದಾನಂದ ಸಾಲಿ

ತಮಂಧದ ಅವಸಾನ-ಅಮರೇಶ ನುಗಡೋಣಿ

ಇಲ್ಲಿ ಅಮರೇಶ ನುಗಡೋಣಿಯವರು ಕತೆಯನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಆದರೆ ಕತೆಯ ಹಿನ್ನೆಲೆಯಲ್ಲಿ ಅವರ ತಮಂಧದ ಕೇಡು ಕತೆ ಮತ್ತು ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಮೂಡಿ ಬಂದ ನುಗಡೋಣಿಯವರ ಸವಾರಿ ಕಥೆ "ಕನಸೆಂಬ ಕುದುರೆಯನ್ನೇರಿ" ಯನ್ನು ನೆನಪಿಸುತ್ತದೆ (ಆ ಚಿತ್ರ ವೈಜಯಂತ್ ಬಿರಾದಾರ ಅವರಿಗೆ ತುಂಬಾ ಹೆಸರು ತಂದುಕೊಟ್ಟಿತು). ಕಾರಣ ತಮಂಧದ ಕೇಡುವಿನಲ್ಲೂ ಅದೇ ಮೇಲ್ಜಾತಿಯ ಜಮೀನ್ದಾರಿ ವ್ಯಕ್ತಿಯ ದೊಡ್ಡ ಮನೆ. ಅಲ್ಲೊಬ್ಬ ದಲಿತ ವ್ಯಕ್ತಿ ಬರುತ್ತಾನೆ. ತಮಂಧದ ಅವಸಾನದಲ್ಲೂ ಅದೇ ಮನೆ ಅದೇ ರೀತಿಯ ಜಮೀನ್ದಾರಿ ವ್ಯಕ್ತಿ. ಅವನ ಮಗಳು ಮತ್ತು ಮುಸ್ಲಿಂ ತಂದೆ ಮತ್ತು ಮಾದಿಗರ ತಾಯಿಗೆ ಮಗನಾಗಿ ಹುಟ್ಟಿದ ಕಥಾನಾಯಕ ಬರುತ್ತಾನೆ. ಸವಾರಿ ಕಥೆಯಲ್ಲೂ ಅದೇ ಮನೆ. ಆದರೆ ಆ ಶ್ರೀಮಂತ ಜಮೀನ್ದಾರಿ ವ್ಯಕ್ತಿ ರೋಗ ಪೀಡಿತನಾಗಿ ಹಾಸಿಗೆ ಮೇಲೆ ಮಲಗಿರುತ್ತಾನೆ. ಆ ಕಾರಣದಿಂದ ನುಗಡೋಣಿಯವರ ಹಿಂದಿನ ಕತೆಗಳು ಇಲ್ಲಿ ನಮಗೆ ಜ್ಞಾಪಕ ಬರುತ್ತವೆ. ಅವರ ಹಿಂದಿನ ಕತೆಗೆಳನ್ನು ಓದಿಲ್ಲದವರಿಗೆ ಆ ರೀತಿ ಅನ್ನಿಸದಿರಬಹುದು. ಆದರೆ ಇದು ಸ್ವತಂತ್ರ ಕತೆ. ನಿರೂಪಣೆಯೂ ಚೆನ್ನಾಗಿದೆ.

ಪಡುವಣದ ಗುಡಿಯೊಳಗೆ ಯಡಮೂರಿ ಶಂಖಧ್ವನಿಯೂ-ಮಹಾಂತೇಶ ನವಲಕಲ್

ಈ ಕತೆಯಲ್ಲಿ ಮಾರ್ಕ್ಸ್ ವಾದ, ಮಾವೋವಾದ, ವೈಚಾರಿಕತೆ ಎಲ್ಲಾ ಸೇರಿಕೊಂಡಿದೆ. ಇಲ್ಲಿ ನಕ್ಸಲರನ್ನು ಸೃಷ್ಟಿ ಮಾಡುವ ಗುರುಗಳು ಅದರಿಂದ ಆಗುವ ಅನಾಹುತ ಎಲ್ಲಾ ಬರುತ್ತದೆ. ಬೇರೆ ಪಕ್ಷಿಗಳಂತೆ ಕಾಗೆಯನ್ನು ಯಾರು ಇಷ್ಟಪಡುವುದಿಲ್ಲ. ಅದನ್ನು ತಿಥಿಯ ಸಮಯದಲ್ಲಿ ಮಾತ್ರ ಜ್ಞಾಪಕ ಮಾಡಿಕೊಳ್ಳುತ್ತಾರೆ. ಈ ರೀತಿ ತಿರಸ್ಕಾರಕ್ಕೆ ಒಳಪಟ್ಟ ಪಕ್ಷಿಯನ್ನು ಇಂದಿನ ಸಮಾಜದ ಆಗು ಹೋಗುಗಳಿಗೆ ರೂಪಕವಾಗಿ ಮಹಾಂತೇಶ ಅವರು ಬಳಸಿಕೊಂಡಿದ್ದಾರೆ. ಈ ಕತೆ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ.

ಕಾಗೆಯೊಂದಗುಳ ಕಂಡರೆ-ಚಿದಾನಂದ ಸಾಲಿ

ಕಾಗೆಯೊಂದಗುಳ ಕಂಡರೆ ಕತೆಯ ಶೀರ್ಷಿಕೆ ಬಸವಣ್ಣನವರ ವಚನದ್ದು ಎಂದು ಎಲ್ಲರಿಗೂ ತಿಳಿಯುತ್ತದೆ. ಇಲ್ಲಿ ಚಿದಾನಂದ ಸಾಲಿಯವರು ಕಲ್ಬುರ್ಗಿ ರೈಲ್ವೆ ಸ್ಟೇಷನಲ್ಲಿ ಕಂಡ ವ್ಯಕ್ತಿಯನ್ನು ತಮ್ಮ ಬಾಲ್ಯದ ಗೆಳೆಯನನ್ನು ಮತ್ತು ತಮ್ಮ ಸಹೋದ್ಯೋಗಿ ವ್ಯಕ್ತಿಯೊಬ್ಬನ ಬದುಕಿಗೆ ತಳುಕು ಹಾಕಿ ಒಂದು ಉತ್ತಮ ಕತೆಯನ್ನು ರಚಿಸಿದ್ದಾರೆ. ಕೊನೆಗೆ ಅವರ ಬದುಕಿನಲ್ಲಿ ಬಂದು ಹೋಗಿದ್ದ ವ್ಯಕ್ತಿಯೇ ಇಂದು ಈ ವ್ಯಕ್ತಿಯಾಗಿ ನಿಂತಿದ್ದಾನೆಯೇ ಎಂದು ಓದುಗ ಅಚ್ಚರಿ ಪಡಬೇಕು. ನಿರೂಪಣೆಯೂ ತುಂಬಾ ಉತ್ತಮವಾಗಿದೆ.

ಈ ಎಲ್ಲಾ ಕಾರಣದಿಂದ ಈ ಕಥಾಸಂಕಲನ ತುಂಬಾ ಪ್ರಯೋಗಾತ್ಮಕವಾದದ್ದು. ಹಿಂದೆ ಪುಟ್ಟಣ್ಣ ಕಣಗಾಲರು ಗಿರಡ್ಡಿ ಗೋವಿಂದರಾಜು, ವೀಣಾ ಶಾಂತೇಶ್ವರ ಮತ್ತು ಈಶ್ವರ ಚಂದ್ರರ ಮೂರು ಕತೆಗಳನ್ನು ಸೇರಿಸಿ ಕಥಾಸಂಗಮ ಎಂಬ ಚಲನಚಿತ್ರ ಮಾಡಿದ್ದರು. ಈ ಕಥಾಸಂಕಲನವು ನಮಗೆ ಆ ಪ್ರಯತ್ನವನ್ನು ಜ್ಞಾಪಕ ತರುತ್ತದೆ. ಇದು ಎಲ್ಲರೂ ಓದ ಬಹುದಾದ ಹೊಸದಾಗಿ ಕತೆ ಬರೆಯಬೇಕೆನ್ನುವರು ಓದಲೇ ಬೇಕಾದ ಪುಸ್ತಕ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಸನ್ನ ಸಂತೇಕಡೂರು