Article

ರಾಗ ವಿರಾಗದ ಭಾವ ತರಂಗದ ನಾದ ವಿಶಾರದ ತಂಬೂರಿ...

ಬರೆದು - ಓದಿದರೆ ಭೇಷ್ ಎನಿಸಿಕೊಳ್ಳಬೇಕು. ಕವಿತೆ ಬರೆದರೆ ಅಹುದಹುದೆನಬೇಕು. ಸಾಹಿತ್ಯ ಸಂಗೀತವಾಗಬೇಕು. ಕಟ್ಟಿದ ಪದ ಪದರು ಪದವಾಗಿ ಓದುಗನ ಪರವಾಗಿ ಪುಟಿದೆದ್ದು ಚಿರಕಾಲ ನಿಲ್ಲಬೇಕು. ಅಕ್ಷರ ಭಾವಕ್ಕೆ ಸಿಕ್ಕು ನಲುಗಬೇಕು. ಮಾತೆಲ್ಲಾ ಕಾವ್ಯವಾಗಿ ಬೇಕು. ಈ ಕಾಲಘಟ್ಟದಲ್ಲಿ ಇಂತಹ ಸಾಹಿತ್ಯ ಸೃಷ್ಟಿಸುವ ಸಾಲಿನಲ್ಲಿ ಗುರುನಾಥ ಬೋರಗಿ ಅವರು ಒಬ್ಬರು. ಇಲ್ಲಿ...

"ಆರಂಭ" ಎಂಬ ಕವಿತೆಯಿಂದ ಶುರುವಾಗುವ ಕಾವ್ಯ ಪಯಣ..

" ಮುರಿದುದನ್ನೆಲ್ಲವ ಸರಿದೂಗಿಸುತ

ಹರಸಾಹಸ ಪಡುತಿರಬೇಕು "

ಹೀಗೆ ಅಚ್ಚರಿ ಹುಟ್ಟಿಸುವ ಸಾಲುಗಳು ನಮ್ಮನ್ನು ಬೆರಗುಗೊಳಿಸುತ್ತಲೆ ಸಾಗಿಸುತ್ತವೆ!

"ತರವಲ್ಲ ತಗಿ ನಿನ್ನ ತಂಬೂರಿ

ಸ್ವರ ಬರದೆ ಬಾರಿಸದಿರು ತಂಬೂರಿ"

ಎನ್ನುವ ಶಿಶುನಾಳ ಶರೀಫರ ಹಾಡಿನಿಂದ ಹಿಡಿದು

" ಬಿಗಿದಿಟ್ಟ ತಂಬೂರಿಯ ತಂತಿಯಂತಾಗಿರುವೆ 

ತುಂಡು ಮಾಡೆನ್ನನು ಸೌಂಡಾದ್ರು ಬರಲಿ "

ಎನ್ನುವ ಆಧುನಿಕ ಕವಿ - ನಿರ್ದೇಶಕ ಯೋಗರಾಜ್ ಭಟ್ ಅವರ ಈ ಸಾಲುಗಳವರೆಗೂ ಅವಲೋಕಿಸಿದಾಗ ತಂಬೂರಿಯಲ್ಲೊಂದು ನಾದವಿದೆ.! ಸ್ವರವಿದೆ.! ತರಂಗವಿದೆ.! ಎನ್ನುವುದು ಅಪ್ಪಟ ಸತ್ಯ. ಅದನ್ನು ಬೋರಗಿ ಅವರು ತುಂಬಾ ಚೆನ್ನಾಗಿ ಕವಿತೆಯೊಳಗೆ ಕಟ್ಟಿಕೊಡಲು ಯತ್ನಿಸಿದ್ದಾರೆ.

ತಂಬೂರಿ

" ರಾಗ ವಿರಾಗದ ಭಾವ ತರಂಗದ 

ನಾದ ವಿಶಾರದ ತಂಬೂರಿ

ಸುಪ್ತ ನಿನಾದದ ಆಪ್ತ ಪ್ರಸಾರದ 

ಸಪ್ತ ಸ್ವರ ದೂರ ಸಂಚಾರಿ.! "

ಹೀಗೆ ತುಂಬಾ ತರ್ಕಬದ್ಧವಾಗಿ ಕವಿತೆಯ ತಂತಿ ಕಟ್ಟಿ ನಾದ ಮಿಡಿಸಿದ್ದಾರೆ. ಇಂತಹ ಅದ್ಭುತಗಳ ಸೃಷ್ಟಿಯನ್ನು ತದೇಕ ಚಿತ್ತದಿಂದ ಮಾಡುವ ಲೇಖಕ ಅದ್ಭುತ ತಲೆಬರಹದ ಕವಿತೆಯೊಂದು ಮುಂದಿಟ್ಟಿದ್ದಾರೆ.

" ಜಾರಿ ಬೀಳದ ಹಾಗೆ ಧರಣಿಗೆ 

ಹಲವು ಗ್ರಹಗಳು ಮುಗಿಲೊಳು

ಆರ ಬೆರಳಿನ ಆಸರಿಲ್ಲದೆ

ಚಲನೆ ಪಡೆಯುವ ಋತುಗಳು "

ಹೀಗೆ ಥಟ್ ಅಂತ ನಿಬ್ಬೆರಗಾಗಿಸುವ ಸಾಲುಗಳಿಂದ ಎದೆಗಿಳಿಯುತ್ತಾರೆ ಬೋರಗಿ. ಸಮಾಜದಲ್ಲಿಯ ಅಳಲನ್ನು ಅತಿ ಸೂಕ್ಷ್ಮವಾಗಿ ಎಳೆ ಎಳೆಯಾಗಿ ಬಿಚ್ಚಿಡುವ ಅವರ ಕವಿತೆಯ ಒಂದೆರಡು ಸಾಲುಗಳು ಹೀಗಿವೆ..

" ಎನಿತು ಭ್ರೂಣ ಗರ್ಭ ತೊರೆದು

ತೊಟ್ಟಿ ಸೇರಿ ಕೊಳೆತವೋ

ಮದುವೆ ಪೂರ್ವ ಪಾಪಕೆ..! "

ಹೀಗೆ ಸಮಾಜದ ಅಂಕುಡೊಂಕುಗಳನ್ನು ತಿಳಿಹೇಳುವ ಕವಿ ತನ್ನೊಳಗಡಗಿದ ಸ್ನೇಹ ಲಯವನ್ನು ಹೀಗೆ ಹೇಳುತ್ತಾರೆ.

" ಇಲ್ಲ ಸಲ್ಲದ ಮಾತು ಗ್ರಹಿಸಿ

ಕೊಲ್ಲಬಾರದು ಗೆಳೆತನ 

ಎದುರು ಬದುರು ಕೂತು ಚರ್ಚಿಸಿ

ಸಿಗದೆ ನಿಜದ ದರ್ಶನ ? "

ಹೀಗೆ ಬೋರಗಿ ಅವರು " ಸ್ನೇಹ ಯಾವುದೇ ಕಾರಣಕ್ಕೂ ಬಿಟ್ಟು ಕೊಡಬಾರದು " ಎನ್ನುವ ನಿಟ್ಟಿನಲ್ಲಿ ತಮ್ಮ ಸಾಲುಗಳನ್ನು ಸಮಾಜದೆದುರು ಇಡುತ್ತಾರೆ.!

ಬೇಂದ್ರೆ ಅವರು ತಮ್ಮ ಸಖೀಗೀತದೊಳಗೆ ಹೀಗೆ ಬರೆಯುತ್ತಾರೆ.

" ಪಟ್ಟ ಪಾಡೆಲ್ಲವು ಹುಟ್ಟು - ಹಾಡಾಗುತ 

ಹೊಸವಾಗಿ ರಸವಾಗಿ ಹರಿಯುತಿವೆ "

ಇದನ್ನೆ ಕವಿ ಇಲ್ಲಿ ತಮ್ಮ ಆಯಾದಲ್ಲಿ ಬರೆಯುತ್ತಾರೆ

" ನೋವೆ ಉಂಬದ ಜೀವ ಸಂಕುಲ 

ಭುವಿಯ ಮೇಲೆ ಇರುವುದೇ?

ನೋವ ಮರೆತು ಮಾವುಮರದ 

ಕೋಗಿಲೆಯು ತಾ ಉಲಿಯದೆ ? "

ಬೋರಗಿ ಅವರ ಸಾಕಷ್ಟು ಕವಿತೆಗಳಲ್ಲಿ ತುಂಬಾ ಪ್ರಶ್ನೆಗಳ ಭಾವವನ್ನು ಕಾಣುತ್ತೆವೆ. ಮತ್ತು ಅದಕ್ಕೆ ತಕ್ಕುದಾದ ಉತ್ತರದ ಸಾಲುಗಳು ಸಹ ಅದೆ ಪ್ರಶ್ನೆಯೊಳಗೆ ಅವಿತದ್ದನ್ನು ನಾವು ಕವಿತೆಯೊಳಗೆ ಕಾಣಬಹುದು. ಯಾವ ಕವಿಗೆ ಆಸೆ - ಆಕಾಂಕ್ಷೆಗಳಿರುವುದಿಲ್ಲ ಹೇಳಿ ? ಅಂತಹದೊಂದು ಆಸೆ ಇಲ್ಲೂ ಇವರಲ್ಲೂ ಕಾಣಬಹುದು ಆದರೆ ಈ ಆಸೆಯೆ ಅಷ್ಟೇಕೆ ಅನನ್ಯವಾಗಿ ಎದ್ದು ಕಾಣುತ್ತದೆ ಎಂದರೆ ಇಲ್ಲಿ ಇವರು ಭಿನ್ನವಾಗಿ ಬರೆಯುತ್ತಾರೆ. ಎಲ್ಲೆ ಮೀರಿ ಯೋಚಿಸುವಲ್ಲಿ ಯಶಸ್ವಿಯಾಗಿದ್ದಾರೆ ಹಾಗಾಗಿ ಇವರ ಕವಿತೆಗಳು ಓದುಗನನ್ನು ತಡೆದು ನಿಲ್ಲಿಸಿ ಓದಿಸಿ ತಲೆಗೆ ಹುಳ ಬಿಟ್ಟು ಕೂರುತ್ತವೆ.

" ಜಗದೆಲ್ಲಾ ಗಡಿಯಾರ

ಹಿಂತಿರುಗಿ ಚಲಿಸಲಿ

ನೀ ನನ್ನ ಸಂಧಿಸಿದ 

ಮರುಘಳಿಗೆಗೆ "

ಹೀಗೆ ಹೇಳುವ ಕವಿ ಥಟ್ಟನೆ ಮತ್ತೆ ವಾಸ್ತವಕ್ಕಿಳಿದು ಬೇರೆ ಸಾಲುಗಳಿಂದ ಆಕರ್ಷಿಸುತ್ತಾರೆ.

" ಮಾದ ಹೃದಯದ ಗಾಯ 

ಮತ್ತೆ ಕೆದರುವುದೇಕೆ ?

ನೆನಪಿನುಪ್ಪಿನ ಹರಳು 

ಸುರಿದು ನೋಯಿಸಲೇಕೆ ? "

ಹೀಗೆ ಬದುಕು ರಸ - ವಿರಸ - ಸಮರಸದ ತೆಕ್ಕೆಗೆ ಸಿಕ್ಕ ಭಾವಗಳನ್ನೆಲ್ಲಾ ಒಗ್ಗೂಡಿಸಿ ಬಿಳಿ ಹಾಳೆಯ ಎದೆಗೆ ಒರಗಿ ಬೆಚ್ಚಗೆ ಓದುಗನ ಕೈಸವರಿಸಿಕೊಂಡು ಜೋಗಳದಿ ಮಲಗುತ್ತವೆ.!

" ಯಾವ ನೆಲದ ಗಂಧ ಗಾಳಿ 

ಮಣ್ಣ ಕಂಪು ತೀಡಿತೋ 

ಯಾವ ಧರೆಗೆ ವರ್ಷಧಾರೆ 

ಫಲಸಿ ಚಿಗುರು ತಂದಿತೋ "

ಇಂಥಹ ಹಳೆಯ ಭಾವ ಗೀತೆಗಳನ್ನು ಗುಣುಗುವಾಗ ನವೋದಯದ ಕವಿತೆಗಳು ಇದರ ಲಯ - ತಾಳ - ನಾದಕ್ಕೆ ಪ್ರಭಾವಿತವಾಗಿ ಒಂದೊಂದು ಪದಗಳ ಗುಚ್ಚ ಬಿಡಿಸಿಕೊಳ್ಳುತ್ತಾ ಕವಿತೆ ತನ್ನ ತಾನೆ ಕವಿಯ ಕರದಿಂದ ಕಟ್ಟಿಸಿಕೊಳ್ಳುತ್ತದೆ. ಅಂತಹದೊಂದು ಕವಿತೆ ಗುರುನಾಥ ಅವರು ಹೀಗೆ ಬರೆಯುತ್ತಾರೆ.

" ಯಾವ ತೋಟವ 

ದಾಟಿ ಬಂದೆಯೋ

ತೇವನೀಯುತ ಮಾರುತ

ಆವ ಹೂವಿನ 

ಗಂಧ ತಂದೆಯೋ

ಭಾವವಿಂದು ಪುಳಕಿತ "

ಇಂತಹ ಸಾಲುಗಳು ಜಯಂತ ಕಾಯ್ಕಿಣಿ ಬರೆದ ಸಾಲುಗಳನ್ನು ನೆನಪಿಸುತ್ತದೆ.

" ಎಲ್ಲೊ ಮಳೆಯಾಗಿದೆ ಇಂದು 

ತಂಗಾಳಿಯು ಹೇಳುತಿದೆ " 

- ಜಯಂತ ಕಾಯ್ಕಿಣಿ

ವ್ಯಂಗ್ಯ ಎನ್ನುವುದು ಒಂದು ರೀತಿಯಲ್ಲಿ ಉತ್ಪ್ರೇಕ್ಷೆವಾದದ್ದು. ಹೇಳುವುದನ್ನು ತುಂಬಾ ಮಾರ್ಮಿಕವಾಗಿ ಎದೆಗೆ ಎರಚಿದ ಹಾಗೆ ಹೇಳುವುದು. ವ್ಯಂಗ್ಯ ಚಿತ್ರಕಾರರಂತೆ ವ್ಯಂಗ್ಯವಾಗಿ ಮಾತಾಡಿ ಸುಖಾಸುಮ್ಮನೆ ಇಲ್ಲದೆ ಇರುವೆ ಬಿಟ್ಟುಕೊಳ್ಳುವವರು ಈ ನವೋದಯದ ಕಾಲದಲ್ಲೇನು ಕಮ್ಮಿ ಇಲ್ಲ.

ಅಂತಹದ್ದೆ ಆದ ಒಂದು ವ್ಯಂಗ್ಯ ಭಾವ ಕವಿಯೊಳಗೆ ಅಡಗಿರುತ್ತೆ. ಅವಿತು ಕೂತ ಭಾವ ಸಮಾಜದ ಅಂಕುಡೊಂಕುಗಳನ್ನು ಸರಿದೂಗಿಸಿ ಹೇಳುವಾಗ ವ್ಯಂಗ್ಯಾತ್ಮಕವಾಗಿ ಬರೆದು ಹೇಳುವ ಕವಿ - ಲೇಖಕ ಈ ಪಿಳಿಗೆಯ ತುರ್ತು!

" ನಾವು ಕನ್ನಡಿಗರು " ಎಂಬ ಸಾಲುಗಳಿಂದಲೆ ಸಾಣೆ ಹಿಡಿಯುವ ಬೋರಗಿ ಅವರು ಕನ್ನಡಿಗನಿಗೆ ಸಣ್ಣದಾಗಿ ಕನ್ನಡತನದ ಬಗ್ಗೆ ಎಚ್ಚರಿಸಿದ್ದಾರೆ. ಇಂತಹ ಕಂದೀಲು ಬೆಳಕಿನ ದೀಪದಂತಹ ಕವಿತೆಗಳೆ ಕನ್ನಡವನ್ನು ಇನ್ನಷ್ಟು ಬೆಳಗಿಸುತ್ತವೆ!

ಬಿಟ್ಟು ಕೊಡದ ಒಂದಿಷ್ಟು ಗುಟ್ಟುಗಳನ್ನು ಕವಿ ತನ್ನ ಒಳಗಣ್ಣಿನಿಂದ ಸೂಕ್ಷ್ಮವಾಗಿ ಬಿಟ್ಟುಕೊಟ್ಟಿದ್ದಾರೆ.

" ಹೇಗೆ ಅರಳಿ ತೊನೆದರು 

ಅನುಭವಕೇ ಬಾರದು

ಮೊಗ್ಗು ಬೀರಿದ ಸದ್ದು "

ಥಟ್ ಅಂತ ಆಶ್ಚರ್ಯವಾಗಿ ಮುಖದಲ್ಲಿ ಹೌದಲ್ವಾ ಎನ್ನುವ ಪ್ರಶ್ನೆ ಹೊರಹಾಕಿ ಓದುಗನ ಹಿಡಿದು ಕೂರಿಸುವ ತಾಕತ್ತು ಇವರ ಕವಿತೆಗಳಿಗಿವೆ! ಬೇಂದ್ರೆ ಅಂದ್ರೆ ಅದೊಂದು ಭಾವ - ಅದೊಂದು ದೈವ ಮೇಲಾಗಿ ಜೀವ.! ಶಬ್ಧ ಗಾರುಡಿಗನಿಗೆ ಶಬ್ಧದಿಂದ ನಮನ ಸಲ್ಲಿಸುವುದಷ್ಟು ಸುಲಭದ ಮಾತಲ್ಲ ಅಂತಹದೊಂದು ಕೆಲಸ ಅತಿ ಸಲಿಸಾಗಿ ಮತ್ತೊಬ್ಬ ಕವಿಯೆ ಮಾಡಬಲ್ಲ ಎನ್ನುವುದಕ್ಕೆ ಪುರಾವೆ ಬೋರಗಿ.

" ಕನ್ನಡ ಹೊರತು

ಅನ್ಯರ ಭಾಷೆಗೆ 

ತರ್ಜುಮೆಗೊದಗದ ನುಡಿನಿಪುಣ 

ಮಣ್ಣಿನ ಭಾಷೆಯ 

ಮಹತಿಯನರಿದು

ಭಾವಿಸಿ ಬರೆದನು ಪ್ರತಿ ಚರಣ "

ಸರ್ವಕಾಲಿಕ ಸತ್ಯವನ್ನು ಸೂಕ್ಷ್ಮವಾಗಿ ಹೇಳುವ ಕಲೆಯನ್ನು ಕವಿ ಮಾಡಿದ್ದಾನೆ. ಒಬ್ಬ ಕವಿಯಾದವನು ತಾನೆಂದು ಕವಿ ಎಂದು ಹೇಳಿಕೊಳ್ಳಲಾರ ಒಬ್ಬ ಬರಹಗಾರನೂ ಅಷ್ಟೆ.! ತನ್ನೊಳಗಿನ ಒಂದು ಶಕ್ತಿ ಆ ಕೆಲಸ ಮಾಡುತ್ತದೆ ಎನ್ನುವುದೆ ಅವರು ಬಲವಾದ ನಂಬಿಕೆ! ಕವಿತೆ ಬರೆಸಿಕೊಳ್ಳುತ್ತದೆ ! ಕತೆ ಹೇಳಿಸಿಕೊಳ್ಳುತ್ತದೆ ! ಹೀಗೆ ಎಲ್ಲವೂ ಸರಿ ಆದರೆ ಅವೆಲ್ಲವೂ ಕೈಗೂಡಲು ಅವರ ಓದಿನ ಶ್ರಮ. ಅನುಭವದ ಪ್ರತಿಫಲ ಕಾರಣವಾಗಿರುತ್ತದೆ ಎನ್ನುವುದು ನಾವು ಅರಿಯಬೇಕು. ಬೋರಗಿ ಅವರು ತಮ್ಮ ಕೊನೆಯ ಕವಿತೆಯನ್ನು ನವರಸಗಳನ್ನು ತುಂಬಿ ಓದುಗನ ರಂಗಕ್ಕೆ ಪಾತ್ರದಾರಿಯಾಗಿ ಇಳಿಸುತ್ತಾರೆ.

" ಕರುಣ ಶೃಂಗಾರ

ಶಾಂತ ಭಯಂಕರ 

ವೀರ ರೌದ್ರಾದ್ಭುತ ಹಾಸ್ಯ ಭಿಭತ್ಸ

ನವರಸ ಭಾವದ

ಪಾತ್ರದ ನಡೆ - ನುಡಿ 

ಅವ ಗುರುತಿಸುವನು ಶ್ರೀವತ್ಸ "

ಹೀಗೆ ಅವರ 54 ಕವಿತೆಗಳೂ ಒಂದೆ ಗುಟುಕಿಗೆ ದಕ್ಕುವಂಥವಲ್ಲ.! ಮತ್ತೆ ಮತ್ತೆ ಓದಲೆಬೇಕು - ಗುನುಗಬೇಕು - ಹಾಡಬೇಕು - ಓದಿ ಓದಿ ಹೊಸದಾಗಿ ಹೊಸದೊಂದು ಹೊಸೆಯಬೇಕು.! ಪ್ರತಿ ಓದಿಗೂ ಹೊಸ ಆಯಾಮಕ್ಕೆ ಹೊರಳುವ ಕವಿತೆಗಳು ನಿಜಕ್ಕೂ ಅದ್ಭುತ.!

 

ಮೌನೇಶ ಕನಸುಗಾರ