Article

ರಾಧೆಯ ಮಾಯದ ಗಾಯಗಳು ‘ದಾಹಗಳ ಮೈ ಸವರುತ್ತಾ’

ಛಂದ, ಬಂಧ, ಪ್ರಾಸ, ಧೋರಣೆ, ಆಶಯಗಳಂತಹ ಸಿದ್ಧ ಫ್ರೇಮುಗಳಲ್ಲಿ ಕವಿತೆಯನ್ನಿಟ್ಟು ನೋಡುವುದು ಹಳೇ ಫ್ಯಾಶನ್. ಅದಿಲ್ಲ ಇದಿಲ್ಲ, ಹಾಗಿರಬೇಕು, ಹೀಗಿರಬೇಕುಗಳ ಪೂರ್ವಾಗ್ರಹದ ಕನ್ನಡಕ ಹಾಕಿಕೊಂಡೇ ಒಂದು ಕವಿತೆಯನ್ನು ನೋಡುವುದು ಸಲ್ಲ. ಅಭ್ಯಾಸ, ಅಧ್ಯಯನಗಳಂತಹ ಭಾರವಾದ ಶಬ್ದಗಳೂ ಯಾಕೋ ಕವಿತೆಯನ್ನು ಸಹೃದಯನಿಂದ ದೂರ ಮಾಡುತ್ತವೆಂಬ ಅನುಮಾನವೂ ನನಗೆ. ಕವಿತೆ ಅದು ಕವಿತೆ. ಅದನ್ನು ಸುಮ್ಮನೇ ಓದಬೇಕು ಮತ್ತು ಅನುಭವಿಸಬೇಕು ಎಂಬ(ಹಗುರವೆಂದರೂ ಸರಿಯೇ)ತೆರೆದ ಮನಸ್ಥಿತಿಯಲ್ಲಿ ಶ್ರದ್ಧೆಯಿಂದ  ರಮ್ಯ ಕೆ. ಜಿ. ಮೂರ್ನಾಡು ಅವರ “ ದಾಹಗಳ ಮೈ ಸವರುತ್ತ” ಕವನ ಸಂಕಲನವನ್ನು ಓದಿದಾಗ ಅನಿಸಿದ ಎರಡು ಮಾತುಗಳು.

ರಮ್ಯ ಅವರ ಕವಿತೆಗಳನ್ನು ನಾನು ಆಗಾಗ ಪತ್ರಿಕೆಗಳಲ್ಲಿ, ವಾಟ್ಸಾಪ್ ಗ್ರುಪ್ ಗಳಲ್ಲಿ ಓದಿ ಆನಂದಿಸಿದ್ದೇನೆ, ಆಶರ್ಯಪಟ್ಟಿದ್ದೇನೆ, ಕಣ್ತುಂಬಿಕೊಂಡಿದ್ದೇನೆ. ಅವರು ತಮ್ಮ ಈ ಮೊದಲ ಸಂಕಲನದಲ್ಲೇ ತಮ್ಮ ಕವಿತೆಗಳ ಮೂಲಕ ಓದುಗರನ್ನು ತೀವ್ರವಾಗಿ ತಟ್ಟಿ ಗಾಢವಾಗಿ ಆವರಿಸಿಬಿಡುತ್ತಾರೆ. ಅವರ ಒಟ್ಟು ಕಾವ್ಯದ ಮೂಲ ಸ್ರೋತ ಹೆಣ್ಣೊಬ್ಬಳೊಳಗಿನ ನೋವು ಮತ್ತು ಆಕ್ರೋಶ. ಆ ನೋವನ್ನು ಅವರು ತುಂಬಾ ನಿರ್ಭೀತವಾಗಿ ನಿರ್ಭಿಡೆಯಿಂದ ಕವಿತೆಗಳಲ್ಲಿ ಅಭಿವ್ಯಕ್ತಿಸಿದ್ದಾರೆ. 

ಸಮಾಜವು ಹೆಣ್ಣನ್ನು ಕಾಣುತ್ತಿರುವ ರೀತಿಗೆ ಅವಳೊಳಗಾಗಬಹುದಾದ ತಲ್ಲಣ, ತಾಕಲಾಟಗಳನ್ನೇ ಅವರ ಕವಿತೆಗಳು ಪ್ರಾಮಾಣಿಕವಾಗಿ ಮಿಡಿಯುತ್ತವೆ. ಅವರದೇ ಕವಿತೆಯೊಂದರ ಸಾಲು “ಪ್ರತಿ ರಾಧೆಯೊಳಗೂ ಮಾಯದ ನೋವಿದೆ” ಎಂಬ ತಣ್ಣನೆಯ ವಿಷಾದವೇ ಅವರ ಕವಿತೆಗಳ ಸ್ಥಾಯಿ.

“ ಅಶಕ್ತವಾದ ಖಾಲಿ ಪರ್ಸಿಗೆ ಕಣ್ಣೀರ ಬಿಸಿ ಸೋಕುವಾಗ ಮೆಲ್ಲಗೆ ಕೈ ಸವರಿಬಿಡುವ ಉದಾರ ಮನಸಿಗರು ನಗ್ನರಾಗುತ್ತಾರೆ”

“ ಚಿಗುರುಗಳೆಲ್ಲ ನರಳುತ್ತಿರುವ ಹೊತ್ತಿದು”

“ ಕತ್ತಲ ಕೋಣೆಯೊಳಗೆ ಬಿಕ್ಕುವ ಸದ್ದಿಗೆ ರಾಗವೊಂದು ಲಯ ತಪ್ಪಿದ ಸುಳಿವು ಸಿಕ್ಕಿದೆ”

“ಹಸಿ ಮಾಂಸಕೆ ತೀರದ ದಾಹ………. ಅರಿವಿಗೂ ಜಾಣ ಮಂಪರು”

“ ಬಿರಿಯಲು ಕಾದ ಬಿಳಿ ಎಸಳುಗಳ ಮೇಲೆಲ್ಲಾ ನೆತ್ತರ ಕಲೆ”

“ಕಣ್ಣೀರನ್ನು ಬಸಿದು ಪರೀಕ್ಷಿಸುವ ಕುಟಿಲತೆ ನಿನ್ನೊಳಗೆ ಗಹಗಹಿಸಿರುವಾಗ”

“ ಮೈಯೊಳಗೇ ಮುಗಿದು ಹೋಗುವ ಸಂತೆ, ಗಿರಾಕಿಯಾಗದ ನಾನು…….”

“ ಕಣ್ಣು ತಪ್ಪಿಸಿ ಸವರಿ ಹೋದವರನು  ಸೆರೆ ಹಿಡಿಯಲು ಸೋತ ಗಾಳಿ ನಂಜನ್ನೇ ನಿಡುಸುಯ್ಯುತ್ತಿದೆ”

ಈ ಎಲ್ಲ ಸಾಲುಗಳಲ್ಲಿ ಹೆಣ್ಣನ್ನು ಹಗುರವಾಗಿ ಕಾಣುವ ಪುರುಷ ಸಂಕುಲದ ಮೇಲಿನ ಆಕ್ರೋಶ ಕೆನೆಗಟ್ಟಿದಂತಿದೆ. ಅದಕ್ಕೇ ನಾನು ಹೇಳಿದ್ದು ಇವು “ರಾಧೆಯ ಮಾಯದ ಗಾಯದ ಸ್ವಗತಗಳು” ಎಂದು. 

“ ನೀನೂ ಬರಲೇಬೇಕು ನಿನ್ನ ಕತೆಗಳನ್ನೆಲ್ಲ ನನಗೆ ಹೇಳಲು, ಕೇಳಲು ನಾನಿದ್ದೇ ಇರುತ್ತೇನೆ”

ಎಂದು ಕವಯಿತ್ರಿ ಸ್ನೇಹ ಮತ್ತು ಪ್ರೀತಿಗಳ ಮಧ್ಯದ ಗೆರೆಯನ್ನು ಅಳಿಸಿ ಹಾಕುತ್ತಾರೆ. 

“ಒಳಗಿನ ಬೆತ್ತಲೆಗೂ ಬಿತ್ತರಿಸಿಕೊಳ್ಳುವ ಬದುಕಿದೆ” ಎಂದು ಮಡಿ ಮೈಲಿಗೆಯ ಬೇಲಿ ಕಿತ್ತೊಗೆದು ಒಳಗಿಗೂ ಒಂದು ಅರ್ಥವಿಸ್ತಾರವನ್ನು ಕೊಡುತ್ತಾರೆ. 

“ಆಕಾಶಕ್ಕೂ ತೆರೆದಿರಲಿ ಬಾಗಿಲೊಂದು” ಎಂದು ಹೇಳುತ್ತ ದಾರ್ಶನಿಕನಂತೆ ಕಾಣುತ್ತಾರೆ.

“ಜಾತ್ರೆಯೊಂದು ನಿಡುಸುಯ್ಯುತ್ತ ಕಳೆದೇ ಹೋಗಿದೆ, ಬಯಲೀಗ ತುಂಬಾ ಸ್ವಚ್ಛ ಮತ್ತು ಸುಳ್ಳೇ ಬರಿದಾಗಿದೆ” ಎಂದು ನೀರವ ಮೌನವನ್ನೂ ಕವಿತೆಯಾಗಿಸಬಲ್ಲ ಜಾಣೆ ರಮ್ಯ.

ಮೊದಲ ಕವಿತೆಗಳಲ್ಲಿರಬಹುದಾದ ಆವೇಶದ ತೀವ್ರತೆ ಇದೆಯಾದರೂ ಅದು ಸಂಯಮದ ಕೊರತೆಯೆಂದೆನಿಸುವುದಿಲ್ಲ. ಮತ್ತೊಮ್ಮೆ, ಇನ್ನೊಮ್ಮೆ ಓದಬೇಕೆನಿಸುವ, ಹೊಟ್ಟೆಕಿಚ್ಚಾಗುವಷ್ಟು ಚೆಂದ ಬರೆಯುವ ರಮ್ಯ ಅವರ ಕವಿತೆಗಳು ತಮ್ಮ ಆರ್ದ್ರತೆಯಿಂದ ತುಂಬಾ ಕಾಡುತ್ತವೆ. ಬಹುಶಃ ಇದೇ ಕವಿತೆಯ ನಿಜವಾದ ಶಕ್ತಿ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರುತಿ ದಾಸಣ್ಣವರ