Article

ರಾಜ ಮನೆತನದಲ್ಲೊಂದು ಪ್ರೀತಿಯ ಸಾಮ್ರಾಜ್ಯ ‘ಪ್ರೇಮ ಖಡ್ಗ’

ಪ್ರೇಮ ಎನ್ನುವ ಪದದ ಹಿಂದೆ ಅಡಗಿರುವ ಜೀವನವನ್ನು ಅದೆಷ್ಟು ಬಗೆದರೂ ಒಂದಿಲ್ಲೊಂದು ಗುಟ್ಟನ್ನು ತನ್ನುದರದಲ್ಲಡಗಿಸಿಕೊಂಡು ತಲ್ಲಣಗೊಳಿಸುವ, ನಿಬ್ಬೆರಗಾಗಿಗಿಸುವ, ಕಳವಳಗೊಳಿಸುವ, ಉತ್ಸಾಹದ ಬುಗ್ಗೆಯನ್ನೇ ಹೊಮ್ಮಿಸುವ ಹೀಗೆ ಬಗೆ ಬಗೆಯ ವೈವಿದ್ಯತೆಯನ್ನು ಹೊಂದಿರುವ ಪ್ರೇಮಕ್ಕೆ ಬಹುಕಾಲದ ಇತಿಹಾಸವಿದೆ‌. ಪುರಾತನಕಾಲದಿಂದ, ಪೌರಾಣಿಕ ಕಾಲದಿಂದ ಇಂದಿನವರೆಗೂ ಆಯಾ ಕಾಲಘಟಕ್ಕೆ ಪ್ರೇಮ ತನ್ನ ಸ್ವರೂಪದಲ್ಲಿ ಬದಲಾವಣೆ ತಂದುಕೊಂಡರೂ ಅದು ತನ್ನ ಮೂಲ ದ್ರವ್ಯವನ್ನು ಕಳೆದುಕೊಂಡಿಲ್ಲ. ಅಂತಹ ಪ್ರೇಮದ ಕುರಿತು ಪ್ರೇಮಿಯ, ಪ್ರೇಯಸಿಯ ಬದುಕಿನ ಹಿನ್ನಲೆಯ ಕುರಿತು ರಾಜಮನೆತನದ, ಆಸ್ಥಾನದ ಉಳಿವಿಗಾಗಿ ನಡೆಯುವ ಯುದ್ಧದ ಕುರಿತು ರೂಪುಗೊಂಡ ಕಾದಂಬರಿಯೇ ಪ್ರೇಮ ಖಡ್ಗ.

ಯುವನಾಶ್ವ, ನಾಗಶ್ರೀಯ ಪಾತ್ರದ ಸುತ್ತಲೂ ರೂಪುಗೊಂಡ ಪ್ರೇಮಕಥೆ ಒಂದು ಸಾಮ್ರಾಜ್ಯದೊಂದಿಗೆ ತಳುಕುಹಾಕಿಕೊಂಡು ಸಾಮ್ರಾಜ್ಯದ ರಾಜಕೀಯ ಏಳುಬೀಳಿಗೆ ಆ ರಾಜಮನೆತನಕ್ಕೆ ರಾಣಿಯ ಅಂಗರಕ್ಷಕನಾಗಿ ಸೇರಿಕೊಂಡ ಯುವನಾಶ್ವ ಕಾರಣನಾಗುವುದು. ಆ ರಾಜ್ಯಮನೆತನವನ್ನು ಕಾಪಾಡುವುದು, ರಾಣಿಯೊಡನೆ ಗೆಳೆತನ ಬೆಳೆಸಿ, ಗೆಳೆತನ ಪ್ರೇಮವಾಗಿ ಆ ಪ್ರೀತಿಯ ಸಫಲತೆಗಾಗಿ ಅರಬ್ಬರು ಚಂದ್ರವಂಶದ ಮೇಲೆ ಮಾಡಿದ ದಾಳಿಯನ್ನು ಹೋರಾಡಿ ವಿಫಲಗೊಳಿಸುವ ಯುವನಾಶ್ವನ ಶೌರ್ಯಗುಣ, ಅವನ ಸಾಹಸ ಎಲ್ಲರೂ ಮೆಚ್ಚುವಂತಹುದು.

ಕಾದಂಬರಿಯ ಆರಂಭ ಯುವನಾಶ್ವ ಹಾಗೂ ನಾಗಶ್ರೀಯ ಒಡನಾಟದ ಪರಿ, ಪ್ರೀತಿಯ ಬೆಳವಣಿಗೆ, ಯುವನಾಶ್ವನ ಸಹೋದರ ರಘುವೀರನ ಸಾವು, ತಂಗಿಯ ಮದುವೆ, ಬರರಾಜ್ಯದಲ್ಲಿ ಸಂಕ್ರಾಂತಿಯಂದು ರಾಜರ ಶೌರ್ಯಪ್ರತಾಪದೊಂದಿಗೆ ಮಳೆತರಿಸುವ ಪ್ರಸಂಗ ಎಲ್ಲವೂ ಕಾದಂಬರಿಯುದ್ದಕ್ಕೂ ಓದುಗರನ್ನು ಕುತೂಹಲ ಕೆರಳಿಸುತ್ತ ಓದಿಸಿಕೊಂಡು ಹೋಗುತ್ತದೆ. ಆದರೆ ಯುದ್ಧದ ವರ್ಣನೆ, ಮೇಲಿಂದ ಮೇಲಾಗುವ ಯುದ್ಧಗಳ ಬೆಳವಣಿಗೆಯಿಂದ ಓದುಗರಿಗೆ ಯಾವ ಯುದ್ದ, ಯಾರೊಡನೆ, ಏತಕ್ಕೆ ಹೀಗೆ ನಾನಾ ಗೊಂದಲ ಉಂಟಾಗುತ್ತದೆ. ಯುದ್ಧದ ವರ್ಣನೆ ಯುದ್ಧ ಸನ್ನಿವೇಶ ಆ ಕಥಗೆ ಬಹಳವೇ ಎಂದೆನಿಸಿತು.

ಕಾದಂಬರಿಯ ಕೊನೆಯಾರ್ಧದ ಮತ್ತೊಂದು ತಿರುವು ಪಡೆದುಕೊಂಡು ಯುವನಾಶ್ವನ ಪೂರ್ವ ಇತಿಹಾಸವನ್ನು ಕಾದಂಬರಿ ಹೇಳುತ್ತದೆ. ಅಲ್ಲಿ ಬರುವ ಅವನ ಗೆಳೆಯರು, ಅವರ ಗುರುಗಳ ಮಾತು ಹೀಗೆ ಪೌರಾಣಿಕ ಹಿನ್ನಲೆಯಲ್ಲಿ ಯುವನಾಶ್ವನ ಬದುಕು ಬಿಚ್ಚಿಕೊಳ್ಳುತ್ತದೆ. ಯುವನಾಶ್ವನ ಬದುಕಿನ ಹಿನ್ನಲೆಯಲ್ಲೂ ಓದುಗನಿಗೆ ಅಸ್ಪಷ್ಟತೆ ಉಂಟಾಗುತ್ತದೆ.

ಕಾದಂಬರಿಯು ಕಲ್ಪನೆಯಲ್ಲಿ ಚಿಗುರೊಡೆದರೂ ಯುದ್ಧ ಮತ್ತು ಪ್ರೇಮ ಇವೆರಡರ ನಡುವೆ ಸಾಮ್ರಾಜ್ಯದ ಉಳಿವಿಗಾಗಿ ಯುವನಾಶ್ವ ದೇವತಾಪುರುಷನಾಗಿ, ರಾಣಿಯ ಪ್ರಾಣ ಉಳಿವಿಗಾಗಿ ಹೋರಾಡಿದ ನಾಯಕನಾಗಿ ಕಾದಂಬರಿಯುದ್ದಕ್ಕೂ ವಿಜೃಂಭಿಸಲಾಗಿದೆ.

ಕಾದಂಬರಿಯಲ್ಲಿ ಬರುವ ಪ್ರಕೃತಿವರ್ಣನೆ, ಯುದ್ಧಸನ್ನಿವೇಷ, ಮಹಾರಾಣಿಯ ವರ್ಣನೆ ಹೀಗೆ ಹಲವಾರು ಸನ್ನಿವೇಷಗಳಲ್ಲಿ ಕಟ್ಟಿಕೊಟ್ಟ ಚಿತ್ರಣ ಓದುಗರನ್ನು ಖುಷಿಪಡಿಸುತ್ತದೆ‌. ಅವರ ಶಬ್ದಸಂಪತ್ತು, ಅಧ್ಯಯನವೂ ಗೋಚರಿಸುತ್ತದೆ‌. ಸತತ ಅಧ್ಯಯನ ಸಾಹಿತಿಯ ಬರಹಕ್ಕೆ ಪೌಷ್ಟಿಕ ಆಹಾರವಿದ್ದಂತೆ ಎಂದು ಹೇಳುವ ಎಂ.ಕುಮಾರ ಅವರ ಅಧ್ಯಯನ ಹೀಗೆ ಸಾಗಲಿ.
ಅಧ್ಯಯನ ಫಲ ಒಳ್ಳೆ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಬರಲಿ.

ಉದಯೋನ್ಮುಖ ಬರಹಗಾರರಾದ ಎಂ. ಕುಮಾರ ಅವರು ಕಾದಂಬರಿ ಬರಹಕ್ಕೆ ಪ್ರಯತ್ನಿಸಿರುವುದು ಸಂತಸ. ಕಾದಂಬರಿಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಅಕ್ಷರದೋಷಗಳು, ಚಿನ್ಹೆಗಳ ಬಳಕೆಯಲ್ಲಿ ಲೋಪದೋಷಗಳಾಗಿವೆ. ಇವುಗಳನ್ನು ಹೊರತುಪಡಿಸಿದರೆ ಅವರ ಮೊದಲ ಕಾದಂಬರಿ ಬರೆಯುವ ಪ್ರಯತ್ನ, ಅವರ ಪ್ರೇಮಖಡ್ಗ ಕಾದಂಬರಿ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಯಶಸ್ವುಯಾಗಿದೆ ಹಾಗೂ ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮೋತ್ತಮ ಕೃತಿಗಳನ್ನು ಸಾಹಿತ್ಯಕ್ಕೆ ನೀಡಲಿ ಎಂದು ಶುಭಹಾರೈಸುವೆನು.

 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ