Article

ರೋಚಕತೆಯನ್ನು ಮುಂದಿಡುವ ‘ಇಂದಿರೆಯ ಮಗ ಸಂಜಯ’

ಹಾಯ್ ಬೆಂಗಳೂರು ಪತ್ರಿಕೆಯ ಮೂಲಕ, ನಂತರ ಪುಸ್ತಕ ರೂಪದಲ್ಲಿ ಲಕ್ಷಾಂತರ ಓದುಗರ ಮೆಚ್ಚುಗೆ ಪಡೆದ 'ಇಂದಿರೆಯ ಮಗ ಸಂಜಯ'  ಇಂದು ಓದಲು ಸಾಧ್ಯವಾಯಿತು.  'ಬರೆಯುವ ಉಮೇದಿನಲ್ಲಿ ಓದುವುದು ಯಾಕೋ ಕಡಿಮೆಯಾಗಿದೆ' ಎಂದು ನಿನ್ನೆ ಅಂದುಕೊಂಡು ಒಂದಿಷ್ಟು ಮಹತ್ವದ ಪುಸ್ತಕಗಳನ್ನು ಹತ್ತಿರ ಎಳೆದುಕೊಂಡೆ. ಅನಿರೀಕ್ಷಿತವಾಗಿ ಡಾ.ಜಿ.ಬಿ. ಹಿಡಿದುಕೊಂಡು ಬಂದ ನನ್ನ ಖಾಸಾ  ಲೇಖಕ ರವಿ ಬೆಳಗೆರೆ ಅವರ ಸಂಜಯ ಕೈಗೆತ್ತಿಕೊಂಡೆ. ಓದುವ,ಬರೆಯುವ ಧಾವಂತ ಹೊಸದಲ್ಲ. ಒಂದೆರಡು ಕಾಲ್ ಮುಗಿಸಿ ಓದಲಾರಂಭಿಸಿದೆ. ನಾನು ಕಾಲೇಜು ಸೇರುವ ಹೊತ್ತಿಗೆ ಎಮರ್ಜೆನ್ಸಿ ಕತೆ ಕೇಳತೊಡಗಿದ್ದೆ. ಆಗ ಜನತಾ ಪರಿವಾರ ಚಿಗುರೊಡೆದು ಮುರುಟಿ ಹೋಗಿತ್ತು.

ಇಂದಿರಾಗಾಂಧಿ ಮತ್ತೆ ಪ್ರಧಾನಿಯಾಗಿದ್ದರು. ರಾಜ್ಯದಲ್ಲಿ ಅರಸು ಅಧಿಕಾರ ಕಳೆದುಕೊಂಡು ಅಸಹಾಯಕರಾಗಿದ್ದರು. ಮತ್ತೆ ಇಂದಿರಾ ಯುಗ ಆರಂಭವಾಗಿ ಇಲ್ಲಿ ಸಂಜಯ ಗಾಂಧಿ, ಗೆಳೆಯ ಗುಂಡುರಾಯರು ರಾಜ್ಯ ಆಳುತ್ತಿದ್ದರು. ಪದವಿ ಓದುತ್ತಿರುವಾಗ ಇಂದಿರಾಗಾಂಧಿ ಅವರ ಹತ್ಯೆಯಾಯಿತು. ನಂತರ ರಾಜೀವ್ ಗಾಂಧಿ ಹೀಗೆ ಅನೇಕ ದುರಂತಗಳ ಸರಮಾಲೆ. ಫಿರೋಜ್, ನೆಹರು, ಸಂಜಯ ಮತ್ತು ಇಂದಿರಾಗಾಂಧಿ ಹತ್ಯೆಯವರೆಗಿನ ಘಟನೆಗಳೊಂದಿಗೆ 250 ಪುಟಗಳ ಪುಸ್ತಕ ಮುಗಿಯುತ್ತದೆ. 

ಅನೇಕ ಕುತೂಹಲಕರ ಸಂಗತಿಗಳು, ಕೇಳಿರದ ಸತ್ಯಗಳ ಬೆರಗು ಓದಿಸಿಕೊಂಡು ಹೋಗುತ್ತವೆ. ಕಾಲ ಸರಿದಂತೆಲ್ಲ ಅನೇಕ ಸತ್ಯಗಳು ಹೆಚ್ಚು ನಿಚ್ಚಳವಾಗಿ ಹೊರ ಬೀಳುತ್ತವೆ. ಹೇಳುವಾಗ ಹಿಂಜರಿಕೆ ಕೂಡ ಕಡಿಮೆಯಾಗುತ್ತದೆ.  ವಿನೋದ ಮೆಹ್ತಾ ಬರೆದ ಕೃತಿಯ ಅನುವಾದ ಅನ್ನಲಾಗದು, ರವಿ ಅನುವಾದ ಅನ್ನೋ ಹಾಗಿರಲ್ಲ, ಅದರದೇ ಆದ ಸೊಗಡಿರುತ್ತದೆ.  ಕನ್ನಡದ ಅತ್ಯಂತ ಮಹತ್ವದ ಬರಹಗಾರ ರವಿ ಬೆಳಗೆರೆ ಸೃಷ್ಟಿಸಿಕೊಂಡಿರುವ ಲಕ್ಷಾಂತರ ಓದುಗ ಪಡೆಗೆ ಅವರನ್ನು ಓದುವ ಮತ್ತು ಮಾತುಗಳನ್ನು ಆಲಿಸುವ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ. 

ಸದರಿ ಪುಸ್ತಕ ದೇಶದ ಎಮರ್ಜೆನ್ಸಿ ಚಿತ್ರಣ ಕಟ್ಟಿಕೊಡುವುದಲ್ಲದೇ ತಾಯಿಯ ಮನಸ್ಥಿತಿ ಮತ್ತು ಪುಢಾರಿ ಮಗನ ಅಪ್ರಬುದ್ಧ ಅಪಾಯಗಳನ್ನು ನೆನಪಿಸುತ್ತದೆ. ನಮ್ಮ ದೇಶದ ದುರಂತವೇ ಇದು ರಾಮಾಯಣ, ಮಹಾಭಾರತ ಓದಿ ಬೆಳೆದ ಭಾರತೀಯರಾದ ನಾವು ಅರಿವಿಲ್ಲದಂತೆ ಅವೇ ಪಾತ್ರಗಳಾಗಿಬಿಡುತ್ತೇವೆ. ರಾಜಕಾರಣದಲ್ಲಿ ಈ ದೃತರಾಷ್ಟ್ರರ ದಂಡೇ ಹುಟ್ಟಿಕೊಂಡಿರುವದು ಅಷ್ಟೇ ದುರಂತ! ಪುತ್ರ ವ್ಯಾಮೋಹ ಮತ್ತು ಸ್ವಜನಪಕ್ಷಪಾತ ನಮ್ಮ ರಾಜಕಾರಣದ ಬಹು ದೊಡ್ಡ ದೌರ್ಭಾಗ್ಯ. ಅದಕ್ಕೆ ಅಡಿಪಾಯ ಹಾಕಿದ್ದು  ನೆಹರು ಕುಟುಂಬ ಮತ್ತು ಅದನ್ನು ವಿರೋಧಿಸಿ ಅಧಿಕಾರ ಹಿಡಿದ ಇತರ ಪಕ್ಷಗಳ ನಾಯಕರ ವಿತಂಡ ನಿಲುವು ಅದೇ ಆಗಿದೆ. 

ಆಧುನಿಕ ರಾಜಕಾರಣದ ಈ ಬಹು ದೊಡ್ಡ ರೋಗಕ್ಕೆ ಕರ್ನಾಟಕ ಕೂಡ ಸಾಕ್ಷಿಯಾಗಿ ನರಳಿದೆ ಇನ್ನೂ ನರಳುತ್ತಿದೆ. ಎಲ್ಲರೂ ಅವರೇ ಅನಿಸಿದ ಹೊತ್ತಿನಲ್ಲಿ ಈ ಪುಸ್ತಕ History repeats ಅನ್ನೋ ಮಾತು ಸತ್ಯ ಅನಿಸುತ್ತದೆ.  ನಾಲ್ಕು ದಶಕಗಳ ಹಿಂದಿನ ಇತಿಹಾಸವನ್ನು ಮತ್ತೊಮ್ಮೆ ಸುಂದರವಾಗಿ ಕಟ್ಟಿ ಕೊಡಲಾಗಿದೆ. ರವಿ ಭಾಷೆಯ ತಾಕತ್ತೇ ಅಂತಹದ್ದು, ಓದಿಸಿಕೊಂಡು ಹೋಗುವ ಅಪ್ಯಾಯಮಾನ ಸೆಕ್ಸಿ ನಿರೂಪಣೆ.  ಪಟ್ಟು ಹಿಡಿದು ಬರೆಯಲು ಪತ್ರಿಕೆ ಕಾರಣ ಇರಬಹುದು ಆದರೆ ಧ್ಯಾನಸ್ಥ ಮನಸ್ಥಿತಿ ಕೆಲವರಿಗೆ ಮಾತ್ರ ಸಾಧ್ಯ. ಅವರ ಬಹು ಪಾಲು ಅನುವಾದಗಳು ಯಶಸ್ಸು ಪಡೆಯಲು ಆಕರ್ಷಕ ಶೈಲಿಯೇ ಕಾರಣ.  ರವಿ ಭಜನೆ ಸಾಕು ಮಾಡಿಕೊಳ್ಳೋಣ ಅಂದರೂ ಮತ್ತೆ ರವಿ ಶೈಲಿ ನಮ್ಮನ್ನು ಕಟ್ಟಿ ಹಾಕುತ್ತದೆ. 

ಸಂಜಯಗಾಂಧಿ ಮತ್ತು ಇಂದಿರಾಗಾಂಧಿ ಅವರ ಸಂಬಂಧದ ಹಲವು ಆಯಾಮಗಳು ಮತ್ತು ಅಧಿಕಾರದ ಮದ ತಂದೊಡ್ಡುವ ಅಪಾಯಗಳ ಭಯಾನಕತೆ ಇಲ್ಲಿದೆ.  ಈಗಲೂ ಅದೇ ಕತೆ ಪುನರಾವರ್ತನೆ ಆಗುತ್ತದೆ ಅನ್ನುವ ಬೇಗುದಿ.  ಉಕ್ಕಿನ ಮಹಿಳೆ ಇಂದಿರಾ ಮಗನ ಮೇಲಿನ "ಪುತ್ರ ವ್ಯಾಮೋಹ" ಮತ್ತು "ಅಂಧಕಾರ" ದೇಶದ ಹತ್ತಾರು ದುರಂತಗಳಿಗೆ ಸಾಕ್ಷಿ. 

ವಿನೋದ್ ಮೆಹ್ತಾ ಅವರ  "ಸಂಜಯ್ ಸ್ಟೋರಿ" ಅದ್ಭುತ. ಇಲ್ಲಿ ನಿಷ್ಪಕ್ಷಪಾತದ ಸೂಕ್ಷ್ಮ ಸಂವೇದನೆ ಮತ್ತು ಪ್ರಾಮಾಣಿಕತೆ ಎದ್ದು ಕಾಣುತ್ತದೆ. ಹೇಳಲಾಗದ ಅನೇಕ ರಹಸ್ಯಗಳನ್ನು ಹೇಳಿಯೂ ಹೇಳದಂತೆ ಹೇಳಿ ಬಿಡುತ್ತಾರೆ. ದೆಹಲಿ ರಾಜಕೀಯ ಅಂಗಳದ ಅನೇಕ ಹಾದರದ ಕತೆಗಳಿಗೆ ಕೈ ಕಾಲು ಇರುವುದಿಲ್ಲ, ಅವೆಲ್ಲ ನಾವು ತಿಳಿದುಕೊಂಡ ಅರ್ಧ ಸತ್ಯಗಳು. ಫಿರೋಜ್ ಗಾಂಧಿ ಮತ್ತು ಕಮಲಾ ನೆಹರು, ಇಂದಿರಾಗಾಂಧಿ ಮತ್ತು ಧೀರೇಂದ್ರ ಬ್ರಹ್ಮಚಾರಿಯ ಖಾಸಗಿ ಸಂಬಂಧಗಳ ವಿವರಣೆಗಳು ಕೊಡುವ ರೋಚಕ ಅನುಭವಗಳನ್ನು ಹೆಂಗೆಂಗೋ ಅರ್ಥ ಮಾಡಿಕೊಳ್ಳಬಹುದು. 

ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಬದುಕಿನ ಅನೇಕ ನಿಗೂಢ ಸತ್ಯಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಸಾರ್ವಜನಿಕ ಜೀವನದಲ್ಲಿ ವ್ಯಕ್ತಿ ಎಷ್ಟೇ ದೊಡ್ಡವನಾದರೂ ವೈಯಕ್ತಿಕ ಬದುಕಿನ ಘಟನೆಗಳು ವಿಕ್ಷಿಪ್ತ ಮತ್ತು ವಿಲಕ್ಷಣ.ಅವುಗಳನ್ನು ಬದಿಗಿರಿಸಿ  ಸಾಧನೆಯ ಸಂಗತಿಗಳನ್ನು ಮಾತ್ರ ಕಾಲ ಸ್ವೀಕರಿಸುತ್ತದೆ, ಹಾಗೆ ಸ್ವೀಕರಿಸಬೇಕು!

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿದ್ದು ಯಾಪಲಪರವಿ