Article

ರುಲ್ಫೋನ ದುರ್ಬಲ ಅನುಕರಣೆ ‘ಹಾಣಾದಿ’

ವಿಮರ್ಶೆಯ ಬಗ್ಗೆ ಎಲ್ಲ ನಿಟ್ಟಿನಿಂದಲೂ ಅವಹೇಳನ, ತಿರಸ್ಕಾರ ಮತ್ತು ಟೀಕೆಗಳು ಕೇಳಿಬರುತ್ತಿರುವ ಕಾಲವಿದು. ಯಾವ ಕೃತಿಯ ಬಗ್ಗೆಯಾದರೂ ಮಾತನಾಡಲು ನಮಗೇನು ಹಕ್ಕಿದೆ ಎಂಬ ಪ್ರಶ್ನೆ ನನ್ನಂಥವರ ಎದುರಿಗಿದೆ. ಆದರೆ ಒಂದು ಸಾಹಿತ್ಯ ಕೃತಿ ಇರುವುದು ಓದುಗರಿಗಾಗಿ. ಓದುಗ ಅದನ್ನು ಹಣಕೊಟ್ಟು ಕೊಳ್ಳುತ್ತಾನೆ, ತನ್ನ ಸಮಯ ವ್ಯಯಿಸಿ ಓದುತ್ತಾನೆ. ಇವತ್ತು ಓದುವುದು ತೀರ ಸರಳವಾದ ಮನರಂಜನೆಯ ಮಾರ್ಗವಾಗಿ ಉಳಿದೇ ಇಲ್ಲ. ಹಾಗಾಗಿ, ಹಣ, ಸಮಯ ಮತ್ತು ಶ್ರಮ ವ್ಯಯಿಸಿ ಓದಿದ ಓದುಗನಿಗೆ ಒಂದು ಕೃತಿ ತನಗೆ ಇಷ್ಟವಾಯಿತೇ ಇಲ್ಲವೇ ಎಂದು ಹೇಳುವ ಹಕ್ಕು ಖಂಡಿತವಾಗಿಯೂ ಇದೆ ಎಂದುಕೊಳ್ಳುತ್ತೇನೆ.

ನಮ್ಮಲ್ಲಿ ಕೃತಿಯ ಬಗ್ಗೆ ಮಾತನಾಡುವ ಪಾತಳಿಯ ಕುರಿತೇ ಕೆಲವು ಸಂಪ್ರದಾಯಗಳಿವೆ. ಮುನ್ನುಡಿ ಹೇಗಿರಬೇಕು, ಬೆನ್ನುಡಿ ಹೇಗಿರಬೇಕು, ಪುಸ್ತಕ ಪರಿಚಯ ಹೇಗಿರಬೇಕು, ವಿಮರ್ಶೆ ಹೇಗಿರಬೇಕು ಎನ್ನುವ ಹಂತಗಳೆಲ್ಲ ಇವೆ. ಇವುಗಳನ್ನೆಲ್ಲ ಮೀರಿಸಿ ಇನ್ನೊಂದು ಉಪದೇಶವೂ ಸಿಗುತ್ತಿರುತ್ತದೆ. ಹೊಸಬರ ಕೃತಿಯೊಂದು ಇಷ್ಟವಾಗದೇ ಇದ್ದರೆ ಸುಮ್ಮನಿರಬೇಕು ಎನ್ನುವುದೇ ಆ ನಿಯಮ. ಈ ಉಪದೇಶವನ್ನು ನಾನು ದೊಡ್ಡ ಮನುಷ್ಯರೊಬ್ಬರು ಸಂಪಾದಕರಾಗಿದ್ದ ವೆಬ್‌ಪತ್ರಿಕೆಯಿಂದ ಪಡೆದೆ. ಕರಣಂ ಪವನ್ ಪ್ರಸಾದ್ ಅವರ ಕರ್ಮ ಕಾದಂಬರಿಯ ಬಗ್ಗೆ ನಾನು ಬರೆದ ಒಂದು ಲೇಖನವನ್ನು ‘ನಿಮ್ಮ ಲೇಖನವನ್ನು ಮೊದಲು ನಮಗೆ ಕೊಡಿ, ನಾವು ಹಾಕಿದ ಬಳಿಕ ನಿಮ್ಮ ಬ್ಲಾಗಿನಲ್ಲಿ ಬೇಕಾದರೆ ಹಾಕಿಕೊಳ್ಳಿ’ ಎಂದು ಕೇಳಿಕೊಂಡಿದ್ದ ವೆಬ್‌ಪತ್ರಿಕೆಗೆ ಕಳಿಸಿದಾಗ ಅದು ಸಿಕ್ಕಿತು. ನಮ್ಮ ಗೌರವ ಸಂಪಾದಕರು ಹೀಗೆ ಹೇಳಿದರು, ಹಾಗಾಗಿ ನಾವು ಹಾಕುತ್ತಿಲ್ಲ ಎನ್ನುವ ಉತ್ತರ. ಮುಂದೆ, ಕರಣಂ ಪವನ್ ಪ್ರಸಾದ್ ಅವರೇ ನನ್ನ ಬರಹಕ್ಕೆ ಪ್ರತಿಕ್ರಿಯಿಸಿ, ಒಬ್ಬ ಪ್ರಬುದ್ಧ ಕಾದಂಬರಿಕಾರ ನಡೆದುಕೊಳ್ಳಬಹುದಾದ ಅತ್ಯಂತ ಸೌಜನ್ಯದ ಮಾದರಿ ತೋರಿಸಿಕೊಟ್ಟರು. ಅಲ್ಲದೆ ಈ ‘ಹಾಣಾದಿ’ ಕೃತಿಯ ಬಗ್ಗೆ ಆಶೀರ್ವಚನ ನೀಡಿರುವ ಹಿರಿಯರೊಬ್ಬರು ನನಗೊಮ್ಮೆ ಹೇಳಿದ್ದರು, ‘ಹೊಸಬರ ಕೃತಿ ನಿಮಗೆ ಇಷ್ಟವಾಗದಿದ್ದರೆ ನೋಡಪ್ಪ, ಇಂಥಿಂಥ ತಪ್ಪು ಮತ್ತೆ ಮಾಡಬೇಡ, ತಿದ್ದಿಕೊ’ ಅಂತ ಅವನಿಗೆ ಗುಟ್ಟಾಗಿ ಹೇಳಬಹುದಿತ್ತು, ಅದನ್ನು ಢಣಾಢಂಗೂರ ಹೊಡೆದು ಡ್ಯಾಮೇಜ್ ಮಾಡಬಾರದು’ ಎಂದು. ಇದು ಸರಿಯಾದ ಮಾತು.

ಆದರೆ ಒಂದು ಅಷ್ಟೇನೂ ಅದ್ಭುತವಲ್ಲದ ಕೃತಿಯನ್ನು ತಲೆಯ ಮೇಲಿಟ್ಟು ಕೊಂಡಾಡುವ ಕೈಂಕರ್ಯದಲ್ಲಿ ನಾಡಿನ ಹಿರಿಯರೂ, ವಿಮರ್ಶಕರೂ, ಪ್ರಾಜ್ಞರೂ, ಪತ್ರಿಕಾ ಸಂಪಾದಕರೂ ತೊಡಗಿಕೊಂಡರೆ, ಬೇರೆ ಹೊಸಬರಿಲ್ಲವೆ, ಬರೆಯುತ್ತಿರುವವರು? ಅವರಿಗೆ ಡ್ಯಾಮೇಜು ಆಗುವುದಿಲ್ಲವೆ? ಪ್ರತಿ ಬಾರಿ ಯಾರೋ ಮೂವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಘೋಷಿಸುವಾಗಲೂ ಬಹುಮಾನವನ್ನು ನಿರೀಕ್ಷಿಸಿ ಕಳೆದುಕೊಂಡ ಉಳಿದ ಮೂರಕ್ಕಿಂತ ಹೆಚ್ಚು ಮಂದಿಗೆ ಡ್ಯಾಮೇಜಾಗಿರುತ್ತದೆ. ಒಂದು ಸಾಹಿತ್ಯ ಕೃತಿಯನ್ನು ಶ್ರೇಷ್ಠ ಮತ್ತು ಶ್ರೇಷ್ಠವಲ್ಲದ್ದು ಎಂದು ವಿಂಗಡಿಸುವಲ್ಲಿಯೇ ಅನ್ಯಾಯ ನಡೆದು ಬಿಟ್ಟಿರುತ್ತದೆ. ಎಲ್ಲ ಹೊಸಬರಿಗೂ ನ್ಯಾಯ ಸಿಗಬೇಕಲ್ಲವೆ?

ಈಗಲೂ ಹಾಣಾದಿ ಬಗ್ಗೆ ಬರೆಯುವಾಗ ಇಂಥದೇ ಸಮಸ್ಯೆ ಎದುರಿಗಿದೆ. ಕಪಿಲ ಹುಮನಾಬಾದೆ ಅವರ ಮೊತ್ತಮೊದಲ ಕಾದಂಬರಿಯಿದು. ಸ್ಪಷ್ಟವಾಗಿಯೇ ನನಗೆ ಇಷ್ಟವಾಗಿಲ್ಲ. ಸುಮ್ಮನಿರಬಹುದು. ಆದರೆ ಬಾಳಾಸಾಹೇಬ ಲೋಕಾಪುರ, ಕೇಶವ ಮಳಗಿ, ಎಚ್ ಎಸ್ ರಾಘವೇಂದ್ರ ರಾವ್ ಮತ್ತು ರಘುನಾಥ ಚ ಹ ಅವರ ಪ್ರತಿಸ್ಪಂದನ ಗಮನಿಸಿದರೆ ನನಗೇಕೆ ಈ ಕಾದಂಬರಿ ಇಷ್ಟವಾಗಿಲ್ಲ ಎನ್ನುವುದನ್ನು ದಾಖಲಿಸದೇ ಇರುವುದು ತಪ್ಪಾಗುತ್ತದೆ ಎಂದು ಸ್ಪಷ್ಟವಾಗುತ್ತದೆ. ಹೀಗೆ, ಈ ಬರಹ ಒಂದು ರೀತಿಯಲ್ಲಿ ವಿಮರ್ಶೆಯಿಂದಲೇ ಹುಟ್ಟಿದ್ದು, ಕಾದಂಬರಿ ಪ್ರೇರಿತ ಅಲ್ಲ.

ಹಾಗೆ ನೋಡಿದರೆ ಈ ಕಾದಂಬರಿ ಈಗಾಗಲೇ ಎರಡನೇ ಮುದ್ರಣ ಕಂಡಿದೆ, ಸಾಕಷ್ಟು ಪ್ರಶಂಶೆ, ಖ್ಯಾತಿ ಗಳಿಸಿದೆ. ಹಾಗಾಗಿ ನನ್ನ ಮಾತು ಅತ್ಯಂತ ಕ್ಷೀಣವೂ ನಗಣ್ಯವೂ ಆಗಿದ್ದು ಕಾದಂಬರಿಯ ಮಾರಾಟಕ್ಕೆ ತೊಡಕಾಗದು, ಬದಲಿಗೆ ಹೆಚ್ಚೇ ಆಗಬಹುದು. ಏಕೆಂದರೆ ನಮಗೆ ವಿವಾದಗಳೇ ಹೆಚ್ಚು ಇಷ್ಟ. ಇನ್ನು ಅದೇ ಕಾರಣಕ್ಕೆ ಇದು ಹೊಸ ಕಾದಂಬರಿಕಾರನ ಸೃಜನಶೀಲ ಉತ್ಸಾಹವನ್ನು ಕುಂದಿಸುವಂಥ ಸಾಧ್ಯತೆ ಇಲ್ಲ. ಪದ್ಮನಾಭ ಭಟ್ ಶೇವ್ಕಾರ ಅವರಿಗೆ, ಶಾಂತಿ ಕೆ ಅಪ್ಪಣ್ಣ ಅವರಿಗೆ ಈ ಹಿಂದೆ ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಲೇಖಕ ಪುರಸ್ಕಾರ ಬಂದಾಗ ತುಂಬ ಅಪಸ್ವರಗಳೆದ್ದಿದ್ದವು. ಕೆಲವೊಂದು ಪತ್ರಿಕೆಗಳು ಛಂದ ಪುಸ್ತಕದ ಪ್ರಕಾಶಕ ವಸುಧೇಂದ್ರ ಅವರ ಕೈವಾಡದ ಬಗ್ಗೆ ಬರೆದು ಕೆಸರೆರಚಿದ್ದೂ ನಡೆದಿತ್ತು. ಆಗಲೂ ಆ ಇಬ್ಬರು ಲೇಖಕರು ಹೊಸ ಬರಹಗಾರರೇ ಆಗಿದ್ದರು ಮಾತ್ರವಲ್ಲ ಅವರ ಮೊದಲ ಪ್ರಕಟಿತ ಪುಸ್ತಕಗಳಿಗೇ ಪ್ರಶಸ್ತಿ ಬಂದಿತ್ತು. ಶ್ರೀಧರ ಬನವಾಸಿ ಅವರ ಮೊತ್ತಮೊದಲ ಕಾದಂಬರಿಗೆ ಎಂ ಎಸ್ ಶ್ರೀರಾಮ ಅವರು ಸ್ವತಃ ಕಾದಂಬರಿಕಾರರಿಗೇ ಇಷ್ಟವಾಗದಂಥ ಮುನ್ನುಡಿ ಬರೆದು, ಅದನ್ನು ಕಾದಂಬರಿಕಾರರು ಪ್ರಕಟಿಸದೇ ಕೈಬಿಟ್ಟಾಗ ಎಂ ಎಸ್ ಶ್ರೀರಾಮ ಅವರೇ ಬೇರೆಡೆ ಪ್ರಕಟಿಸಿದ್ದರು. ಆದರೂ ಆ ಕಾದಂಬರಿಗೆ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳು ಬಂದವು. ಕೇಂದ್ರ ಸಾಹಿತ್ಯ ಅಕಾಡಮಿಯ ಯುವ ಲೇಖಕ ಪ್ರಶಸ್ತಿ ಕೂಡಾ ಬಂತು, ಯಾವ ವಿವಾದವಿಲ್ಲದೆ ಎನ್ನುವುದೇನೂ ಸಣ್ಣ ಸಂಗತಿಯಲ್ಲ. ಹಾಗಾಗಿ, ವಿಮರ್ಶೆಯಿಂದ ಆಗುವುದು ಹೋಗುವುದು ಏನೇನೂ ಇಲ್ಲ.

‘ಹಾಣಾದಿ’ ಕಾದಂಬರಿಯ ಐದಾರು ಪುಟಗಳನ್ನು ಓದುತ್ತಿದ್ದಂತೆ ಮನಸ್ಸಿಗೆ ಬಂದಿದ್ದು ಓ ಎಲ್ ನಾಗಭೂಷಣ ಸ್ವಾಮಿ ಅವರು ಅನುವಾದಿಸಿದ ಹ್ವಾನ್ ರುಲ್ಫೋನ ಕಾದಂಬರಿ ‘ಪೆದ್ರೊ ಪರಾಮೊ’. ನಾನು ಅದನ್ನೇ ಮತ್ತೆ ಓದುತ್ತಿದ್ದೇನಾ ಅನಿಸಿ ಆ ಕಾದಂಬರಿಯನ್ನು ಹೊರತೆಗೆದು ನೋಡಿದೆ. ‘ಹಣಾದಿ’ಯ ಮೊದಲ ನಲವತ್ತೈದು ಪುಟಗಳು ಈ ಅನುವಾದದ ದುರ್ಬಲ ಅನುಕರಣೆ. ಅಪ್ಪನನ್ನು ಹುಡುಕಿಕೊಂಡು ಹೊರಡುವ ಮಗ ಮತ್ತು ಅವನಿಗೆ ಸಿಗುವ ಅಜ್ಜಿ, ಪಾಳುಬಿದ್ದ ಊರು ಮಾತ್ರವಲ್ಲ, ಕಾದಂಬರಿಯ ಮೊದಲ ಪುಟದಲ್ಲೇ ಇರುವ ಕಪ್ಪುಬಿಳುಪು ಫೋಟೋದ ಕಲ್ಲುಗಳ ಚಿತ್ರವೂ ಓಎಲ್ಲೆನ್ ಅವರ ಪುಸ್ತಕದ ಮುಖಪುಟದ ಕಲ್ಲುಗಳಿಗೆ ಹೋಲುವಷ್ಟು ಅನುಕರಣೆಯೇ ಕಾಣಿಸುತ್ತದೆ. ಅನುವಾದದ ಅನುಕರಣೆ ಎಂದು ಸ್ಪಷ್ಟವಾಗಿ ಹೇಳುತ್ತಿರುವುದೇಕೆಂದರೆ, ಹಾಣಾದಿಯ ಅಜ್ಜಿ ಬಳಸುವ ಭಾಷೆ ಕೂಡ ಓಎಲ್ಲೆನ್ ತಮ್ಮ ಅನುವಾದಕ್ಕೆ ರೂಢಿಸಿಕೊಂಡ ಭಾಷೆಯೇ ಅಗಿರುವುದರಿಂದ. ದುರ್ಬಲ ಅನುಕರಣೆ ಏಕೆಂದರೆ, ಓಎಲ್ಲೆನ್ ಇಡೀ ಕಾದಂಬರಿಯಲ್ಲಿ ಅದೇ ಭಾಷೆಯ ಲಯವನ್ನು ಕಾಪಾಡಿಕೊಂಡು ಬಂದಿದ್ದರೆ ಇಲ್ಲಿ ಆ ಭಾಷೆ ಅಧ್ಯಾಯ 11 (ಪುಟ 61) ರಿಂದ ಹಳಿ ತಪ್ಪಿ ಶಿಷ್ಟ ಕನ್ನಡಕ್ಕೆ ಹೊರಳುತ್ತದೆ. ಕೆಲವು ಕಡೆ ಹೇಳಿದ್ದುಂಟು, ಮಾಡಿದ್ದುಂಟು, ಎಂಬ ನುಡಿಕಟ್ಟು ಬರುತ್ತದೆ. ಅದು ಅಪ್ಪಟ ಮಂಗಳೂರು ಕನ್ನಡದ್ದು.

ಒಂದು ಕಾದಂಬರಿಯ ಪಾತ್ರ ಬಳಸುವ ಭಾಷೆ ಕೂಡ ಅದರ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುತ್ತದೆ. ಅದು ಒಂದೊಂದು ಅಧ್ಯಾಯದಲ್ಲಿ ಒಂದೊಂದು ಲಯದಲ್ಲಿ ಮಾತನಾಡುತ್ತಿದ್ದರೆ ಅದು ನಿರೂಪಕನೇ ಮಾತನಾಡಿದಂತೆ ಕೇಳುತ್ತಿರುತ್ತದೆಯೇ ಹೊರತು ಪಾತ್ರ ಓದುಗನ ಮನಸ್ಸಿಗಿಳಿಯುವುದಿಲ್ಲ. ಓಎಲ್ಲೆನ್ ಸಾಧಿಸಿದ ಲಯವನ್ನು ಇಲ್ಲಿ ನಿರೀಕ್ಷಿಸುವುದು ತಪ್ಪಾದೀತು ಎಂದೇನಲ್ಲ. ಕಾದಂಬರಿಯ ಕನಿಷ್ಠ ಅಗತ್ಯಗಳಲ್ಲಿ ಅದೊಂದು. ಹಾಗಾಗಿ ಇಲ್ಲಿನ ಅನುಕರಣೆ ಕೂಡ ದುರ್ಬಲ ಎನ್ನಬೇಕಾಗಿದೆ.

ಆದರೆ, ಕಾದಂಬರಿಕಾರರಾಗಲಿ, ಬಾಳಾಸಾಹೇಬ ಲೋಕಾಪುರರಾದಿಯಾಗಿ ಕೇಶವ ಮಳಗಿ, ಎಚ್ ಎಸ್ ರಾಘವೇಂದ್ರ ರಾವ್ ಮತ್ತು ರಘುನಾಥ ಚ ಹ ಅವರಲ್ಲಿ ಯಾರೊಬ್ಬರಾಗಲಿ ಇದನ್ನು ಉಲ್ಲೇಖಿಸುವುದೇ ಇಲ್ಲ. ಅವರು ಓಎಲ್ಲೆನ್ ಅನುವಾದದ ರುಲ್ಫೋನ ಕಾದಂಬರಿಯನ್ನು ಓದಿಯೇ ಇಲ್ಲವೊ ಅಥವಾ ಅದು ಅವರಿಗೆ ಮರವೆಯಾಗಿದೆಯೋ ಎನ್ನುವ ಅನುಮಾನ ಬರುತ್ತದೆ. ಓದಿದ ಯಾರಿಗೇ ಆದರೂ ಈ ಕಾದಂಬರಿಯ ಆರಂಭದಲ್ಲೇ ಎಲ್ಲೋ ಓದಿದಂತಿದೆಯಲ್ಲ ಅನಿಸದೇ ಇರದು. ಆದರೆ ಇದನ್ನು ಯಾರೂ ಉಲ್ಲೇಖಿಸದೇ ಇರುವುದರಿಂದ ಈಗ ನಾನು ಹೇಳುವುದು ಸುಳ್ಳು ಎನಿಸುವುದು ಸಹಜ. ಹಾಗಾಗಿ ಈ ಕಾದಂಬರಿ ಓದಿದಿರಾ, ಹೇಗಿದೆ ಎಂದು ನನ್ನನ್ನು ಕೇಳುವವರ ಬಳಿ ಅಲ್ಲಿ ಇಲ್ಲಿ ಇಂಥ ಮಾತನ್ನು ನಾನು ಆಡುವುದಕ್ಕಿಂತ ಬಹಿರಂಗವಾಗಿ ನನ್ನ ಅನಿಸಿಕೆಯನ್ನು ದಾಖಲಿಸುವುದೇ ಸರಿಯಾದ ಮಾರ್ಗವೆಂದು ತಿಳಿದು ಬರೆಯಬೇಕಾಯಿತು. 

ಎರಡನೆಯದಾಗಿ ತಕ್ಷಣಕ್ಕೆ ಗಮನಕ್ಕೆ ಬರುವುದು ಈ ಕಾದಂಬರಿಕಾರರ ಕನ್ನಡ. ಬಾಳಾಸಾಹೇಬ ಲೋಕಾಪುರ ಅವರು ಒಂದೆಡೆ ಈ ಕಾದಂಬರಿಯ ಕತೆಯನ್ನು ಪ್ರಥಮಾ ವಿಭಕ್ತಿಯಲ್ಲಿ ಪ್ರಾರಂಭ ಮಾಡಿದ್ದಾರೆ ಎನ್ನುತ್ತಾರೆ. ವಿಭಕ್ತಿ ಪ್ರತ್ಯಯಗಳಲ್ಲಿ ಕಾದಂಬರಿ ಹೇಳಬಹುದು ಎನ್ನುವುದೇ ಒಂದು ಹೊಸ ವಿಚಾರ. ಅದಿರಲಿ, ಅವರು ಎರಡನೇ ವಿಭಕ್ತಿಯ ಕಡೇ ಅದೇ ಮಟ್ಟದ ಗಮನ ಕೊಟ್ಟಿಲ್ಲದಿರುವುದು ಆಶ್ಚರ್ಯವೇ. ಏಕೆಂದರೆ, ಈ ಕಾದಂಬರಿಯ ಲೇಖಕರಿಗೂ ದ್ವಿತೀಯಾ ವಿಭಕ್ತಿ ಒಂದಿದೆ ಎನ್ನುವುದೇ ಗೊತ್ತಿದ್ದಂತಿಲ್ಲ. ಇಲ್ಲಿನ ಕೆಲವು ಪ್ರಯೋಗಗಳನ್ನು ಗಮನಿಸಿ:

ನಿಮ್ಮಪ್ಪನಿಗೆ ಮಾತಾಡಿಸಿ ಬಾ

ಅಪ್ಪನ ಪಾದಗಳು ನೋಡಬೇಕೆನಿಸಿತು

ಅಪ್ಪನಿಗೆ ಭೇಟಿಯಾಗಿಯೇ ಹೋಗಬೇಕೆಂದು

ಅಪ್ಪನಿಗೆ ಭೇಟಿಯಾಗುತ್ತಿದ್ದೆ

ಮನೆಗಳು ನೋಡಿ ಗಾಭರಿಯಾಯಿತು

ಧುತ್ತನೆ ಅಂಗಳದಲ್ಲಿ ಬಂದು ನಿಂತವನಿಗೆ ಮಾತನಾಡಿಸುತ್ತಾನೋ ಇಲ್ಲವೋ!?

ಅಜ್ಜಿಗೆ ನೋಡಿದರೆ ಯಾವ ಪ್ರಶ್ನೆಗಳು ಕೇಳುವ ಮನಸ್ಸಾಗಲಿಲ್ಲ

ಇಳಿಜಾರ ಬಯಲಲ್ಲಿ ಗಿಡಗಳು ಸಾಲಾಗಿ ನೆಟ್ಟಿದ್ದರು

ಗುಬ್ಬಿ ಆಯಿಗೆ ನನ್ನೆಲ್ಲ ಪ್ರಶ್ನೆಗಳು ಕೇಳಿಬಿಡಬೇಕೆನ್ನುವ ಉತ್ಸಾಹದಲ್ಲಿದ್ದೆ

ಮಲಕೊಂಡ ಅಡಿ ಪ್ರಾಣಿಗಳಿಗೆಲ್ಲ ಎಬ್ಬಿಸುತಿಯೇನೋ?!

ಅಪ್ಪನಿಗೆ ನೋಡೋದೇ ಒಂದು ಕುತೂಹಲ.

ಆದರೂ ನೋಡು ನಾ ಹೆಚ್ಚು ಜನರಿಗೆ ನೋಡಿರುವೆ

ಎಳೆ ವಯಸ್ಸಲ್ಲೇ ನಿಮ್ಮಕ್ಕನಿಗೆ ಗಂಡನ ಮನೆಗೆ ತುರುಕಿದರು

ಈ ಜನರಿಗೊಂದು ಸುದ್ದಿ ಬೇಕು, ಹುಟ್ಟಿಸುತ್ತಾರೆ. ಇನ್ನೊಂದು ಬಂತೋ ಹಳೆಯದಕ್ಕೆ ಸಂದೂಕಿನಲ್ಲಿಟ್ಟಿರುತ್ತಾರೆ

ಅದೊಂದು ಗಿಡ ಕಡಿದು ಬಿಡು, ಬೇಕಾದರೆ ನಿನ್ನ ಹೊಲದ ಸುತ್ತ ಹಚ್ಚಿಕೋ. ಈ ಊರಿಗೆ ಬಲಿಕೊಡಬೇಡ

ನಾ ಅವಳಿಗೆ ಮಾತಾಡಿಸಿಕೊಂಡು ಬರಲು ಹೋಗಿದ್ದೆ

ನಿಮ್ಮಪ್ಪನಿಗೆ ನೋಡಿ ನನ್ನ ಕಣ್ಣಲ್ಲಿಯೂ ನೀರು ತಡಿಯಲಿಲ್ಲ

ಊರ ಮಂದಿಯೇ ಅವನಿಗೆ ನೋಡಿ ಮರುಗಿ ಹೋದರು

ನಮ್ಮಪ್ಪನಿಗೆ ನನ್ನೊಳಗೆ ಹುಡುಕುತ್ತಿದ್ದೆ

ಕಂಟಿಯ ಮಗನಿಗೆ ಕಳುಹಿಸಲು ನೋಡಿದೆ

ಭಾಷೆಯ ಕುರಿತು ಕಾದಂಬರಿಕಾರರಿಗೆ ಎಚ್ಚರ ಇದೆ ಎಂದು ವಿಕ್ರಮ ವಿಸಾಜಿಯವರು ಬರೆದಿದ್ದನ್ನು ನಂಬುವುದು ಕಷ್ಟವಾಗುತ್ತದೆ. ‘ಅನ್ನು’ ಎನ್ನುವ ವಿಭಕ್ತಿ ಪ್ರತ್ಯಯ ಕನ್ನಡದಲ್ಲಿದೆ ಎನ್ನುವುದೇ ಇವರಿಗೆ ಗೊತ್ತಿಲ್ಲವೇನೋ ಅಂದುಕೊಳ್ಳುತ್ತಿರುವಾಗಲೇ ಅದನ್ನು ಅಲ್ಲಗಳೆಯುವಂಥ ಒಂದು ಉದಾಹರಣೆಯೂ ಸಿಕ್ಕಿತು. ಅದು 23ನೆಯ ಪುಟದಲ್ಲಿದೆ. "ಇಷ್ಟು ನಿಶ್ಶಬ್ದತೆಯನ್ನು ನನ್ನೂರಲ್ಲಿ ಕಂಡಿರಲಿಲ್ಲ." 

ಮೂರನೆಯದಾಗಿ, ನಮಗೆಲ್ಲ ತಿಳಿದಿರುವಂತೆ ಎಲ್ಲ ಊರುಗಳಲ್ಲೂ ದೆವ್ವ ಇರುವ ಮರಗಳಿದ್ದೇ ಇರುತ್ತವೆ. ಚಂದಮಾಮದ ಕಾಲದಿಂದಲೂ ಇದು ಎಲ್ಲರಿಗೂ ಗೊತ್ತಿರುವಂಥದೇ. ಊರಿನ ಹುಣಸೆ ಮರ, ಆಲದ ಮರ, ನೇರಳೆ ಹಣ್ಣಿನ ಮರಗಳೆಲ್ಲ ಇಂಥವಕ್ಕೆ ಕುಖ್ಯಾತ. ಬ್ರಹ್ಮರಾಕ್ಷಸಗಳಿರುವುದೇ ಅರಳೀಮರದಲ್ಲಿ ಎನ್ನುವ ಪ್ರತೀತಿಯೂ ಇದೆ. ಸೂಕ್ಷ್ಮವಾಗಿ ಗಮನಿಸಿದರೆ ತಿಳಿದು ಬರುವ ಸತ್ಯವೆಂದರೆ, ಇಂಥ ವದಂತಿಗಳನ್ನು ಹಬ್ಬಿಸಿರುವುದೇ ಆ ಮರಗಳನ್ನು ಜನ ಕಡಿಯದಿರಲಿ ಎನ್ನುವ ಕಾರಣಕ್ಕಿದ್ದೀತು ಎಂಬುದು. ದೆವ್ವಗಳಿವೆ ಎನ್ನುವ ಕಾರಣಕ್ಕೇ ಯಾರಾದರೂ ಎಲ್ಲಾದರೂ ಯಾವುದಾದರೂ ಮರ ಕಡಿದು ಹಾಕಿದ ನಿದರ್ಶನ ನನಗಂತೂ ದೊರೆತಿಲ್ಲ. ಮರ ಕಡಿದ ಮಾತ್ರಕ್ಕೆ ಅದರಲ್ಲಿ ವಾಸವಿದ್ದ ದೆವ್ವಗಳು ಊರು ಬಿಟ್ಟು ಹೋಗುತ್ತವೆ ಎಂದು ಯಾರೂ ನಂಬಿದಂತೆಯೂ ಇಲ್ಲ. ಆದರೆ ಅಂಥ ವಿಪರೀತಗಳೆಲ್ಲ ಈ ಕಾದಂಬರಿಯಲ್ಲಿ ಘಟಿಸುತ್ತವೆ. ಮರದಲ್ಲಿ ದೆವ್ವವಿದೆ ಎಂಬ ಕಾರಣಕ್ಕೇ ಅದನ್ನು ಕಡಿಯುವುದು, ಅದನ್ನು ಕಡಿದಿದ್ದೇ ಊರು ನಾಶವಾಗುವುದು ಎರಡೂ ಇಲ್ಲಿ ಚಕಚಕನೆ ನಡೆದು ಬಿಡುತ್ತದೆ. ಊರು ನಾಶವಾಗುವುದು ರುಲ್ಫೋನ ಕಾದಂಬರಿಯಲ್ಲೂ ಇದೆ. ಆದರೆ ಅಲ್ಲಿ ಅದು ಘಟಿಸುವುದು ಅತ್ಯಂತ ಸಂಕೀರ್ಣ ಕಾರಣಗಳಿಂದ. ದಂಗೆ, ಯುದ್ಧ ಮುಂತಾದ ಮೆಕ್ಸಿಕನ್ ಇತಿಹಾಸದ ನೆರಳಲ್ಲಿ ನಡೆಯುವ ವಿದ್ಯಮಾನಗಳೆಲ್ಲ ‘ಪೆದ್ರೊ ಪರಾಮೊ’ದಲ್ಲಿವೆ. ಅಂಥ ಸಂಕೀರ್ಣತೆಯೆಲ್ಲ ಇಲ್ಲಿಲ್ಲ. ಇಲ್ಲಿರುವುದೆಲ್ಲಾ ಬಾದಾಮ ಗಿಡವೊಂದರಲ್ಲಿ ದೆವ್ವವಿದೆ ಎನ್ನುವ ವದಂತಿ ಮತ್ತು ಅದನ್ನು ಕಡಿಯುವುದರಿಂದ ಉಂಟಾದ ಅನಾಹುತ. ಆ ಅನಾಹುತವೆಂದರೆ ಊರ ಮಂದಿಯೆಲ್ಲಾ ತಮ್ಮ ತಮ್ಮ ಮನೆಯನ್ನು ತಾವೇ ಕೆಡವಿ ಹಾಕಿ, ಊರು ಬಿಟ್ಟು ಹೋಗುವುದು. ಹಾಗೆ ಮಾಡಬೇಕೆಂದು ಹೇಳುವುದು ಮೈಮೇಲೆ ದೇವರು ಬರುವ ಅನಸೂಯ ಎಂಬಾಕೆ. 

ಇನ್ನು ಇಲ್ಲಿ ಸಾವು ನೋವು, ದುರಂತಗಳ ಸರಮಾಲೆಯಿದೆ ಎಂದು ಕೆಲವರು ತಮ್ಮ ಪ್ರತಿಕ್ರಿಯೆ ದಾಖಲಿಸುತ್ತ ಬರೆದಿದ್ದಾರೆ. ನಿರೂಪಕನ ಅಪ್ಪ ಸುಟ್ಟುಕೊಂಡು ಸಾಯುವುದು ಮರ ಕಡಿದಾದ ನಂತರವೇ ಹೊರತು ಅದು ಮರ ಕಡಿಯುವುದಕ್ಕೆ ಕಾರಣವಾದ ದುರಂತವೇನಲ್ಲ. ಅದನ್ನು ಬಿಟ್ಟರೆ ಇನ್ನೊಬ್ಬ ಈ ಮರದ ತುದಿಯ ತನಕ ಏರಿ ಹೋಗಿ, ಅಲ್ಲಿ ಕುಣಿಯುತ್ತ ಆಯ ತಪ್ಪಿ ಕೆಳಗೆ ಬಿದ್ದು ಸಾಯುತ್ತಾನೆ. ಇದು ಯಾವ ಬಗೆಯ ದುರಂತ? ಇದನ್ನು ಹುಚ್ಚು ಸಾಹಸ ಅಥವಾ ಆತ್ಮಹತ್ಯೆ ಎನ್ನುತ್ತಾರಲ್ಲವೆ? ಆದರೆ ಬಹಳಷ್ಟು ಮಂದಿ ಬರೆದ ಸಾವು ನೋವು, ದುರಂತಗಳ ಸರಮಾಲೆ - ಸಾಮಾಜಿಕ ಆಯಾಮವುಳ್ಳದ್ದು - ಎಲ್ಲಿ ಸಿಕ್ಕಿತು ಅವರಿಗೆ?

ಮರದ ಕಟ್ಟೆಯ ಮೇಲೆ ಮಲಗಿದಾಗ ಮೈತುಂಬ ಇರುವೆ ಮುತ್ತಿಕೊಳ್ಳುವ ಒಂದು ಪ್ರಸಂಗವಿದೆ ಈ ಕಾದಂಬರಿಯಲ್ಲಿ. ಬಾದಾಮ ಮರದಲ್ಲಿ ದೆವ್ವವಿದೆ ಎನ್ನುವ ವದಂತಿ ಹುಟ್ಟುವುದೇ ಈ ಪ್ರಸಂಗದ ಬಳಿಕ. ಆದರೆ ಇರುವೆಗಳು ಪ್ರಜ್ಞಾಹೀನತೆ ಮತ್ತು ದೇಹದ ಮೇಲಿನ ಸ್ವಯ ತಪ್ಪಿದಂಥ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕೈಬೆರಳು, ಕಾಲ ಬೆರಳುಗಳನ್ನು ತಿನ್ನುವುದಿದೆ. ಇಲ್ಲವೆಂದಲ್ಲ. ಆದರೆ ಈ ಇರುವೆಗಳಿಗೆ ದೇಹ ಯಾವುದು, ಮರ ಯಾವುದು ಎನ್ನುವುದೇ ತಿಳಿಯಲಿಲ್ಲವೇನೋ ಎನ್ನುವುದು ಹಾಸ್ಯಾಸ್ಪದ ಮಾತು. ಕ್ರಿಮಿಕೀಟಗಳಿಗೆ ಅದು ಮನುಷ್ಯರಿಗಿಂತ ಚೆನ್ನಾಗಿ ತಿಳಿಯುತ್ತದೆ. ಮನುಷ್ಯ ದೇಹದ ರಕ್ತದ ವಾಸನೆಯನ್ನು ಸೊಳ್ಳೆಯೊಂದು ದೂರದಿಂದಲೇ ಗ್ರಹಿಸಬಲ್ಲದು ಎನ್ನುವುದು ನಮಗೆ ಗೊತ್ತಿಲ್ಲ ಎಂದರೆ ಒಪ್ಪಬಹುದು, ಅವುಗಳಿಗೆ ಗೊತ್ತಿಲ್ಲ ಎಂದು ಹೇಳುವುದು ಆ ಬಗ್ಗೆ ನಮಗಿರುವ ಅಜ್ಞಾನವನ್ನಷ್ಟೇ ತೋರಿಸುತ್ತದೆ. ಅಂತೂ ಇರುವೆ ಪ್ರಸಂಗದಿಂದ ಮನೆಬಿಟ್ಟು ಹೋದ ತಾಯಿಯ ಬಗ್ಗೆ ಒಂದು ಮಾತೂ ಈ ಕಾದಂಬರಿಯಲ್ಲಿಲ್ಲ. ‘ಅಪ್ಪನಿಗೆ’ ಕಂಡು ಬರಲು ಹೊರಟ ಮಗನಿಗೆ ಅಮ್ಮನ ಬಗ್ಗೆ ಕಾಳಜಿಯಿಲ್ಲ.

ರುಲ್ಫೋನ ಕಾದಂಬರಿಯ ದುರ್ಬಲ ಅನುಕರಣೆಯಿದು ಎಂದು ತಿಳಿಯುತ್ತಲೇ ದೆವ್ವಗಳ ಬಗ್ಗೆ, ಕತೆಯ ವಿವರಗಳಲ್ಲಿ ಮೂಡುವ ಹಂದರದ ಬಗ್ಗೆ ಇರುವ ಬೆರಗು, ಕುತೂಹಲ ತಣ್ಣಗಾಗುತ್ತದೆ. ಹೆಚ್ಚಿನ ವಿಮರ್ಶಕರು, ಓದುಗರು ‘ಉಧೋ ಉಧೋ’ ಎಂದು ಹೊಗಳಿರುವುದು ಇದನ್ನೇ. ಇಲ್ಲಿ ಒಂದು ಊರು ಹೇಗೆ ಕ್ರಮೇಣ ನಾಶವಾಗುತ್ತದೆ ಎನ್ನುವ ಚಿತ್ರಣ ಸಿಗುತ್ತದೆ ಎಂದೂ ಕೆಲವರು ಬರೆದಿದ್ದಾರೆ. ನನಗಂತೂ ಅಂಥವೆಲ್ಲ ಸಿಗಲಿಲ್ಲ. ಅದು ರುಲ್ಫೋನ ಕಾದಂಬರಿಯಲ್ಲಿದೆ ಎನ್ನುವುದು ನಿಜವೇ. 

ಇಷ್ಟಾಗುತ್ತ ನನಗೊಂದು ಹೊಸ ಅನುಮಾನವೂ ಬಂದಿದೆ. ನಾನು ಓದಿದ ‘ಹಾಣಾದಿ’ ಕಾದಂಬರಿಯೇ ಬೇರೆ ಇದ್ದು ಇದನ್ನು ಹಾಡಿ ಹೊಗಳಿದ ನೂರಾರು ಮಂದಿ ಓದಿದ ಕಾದಂಬರಿಯೇ ಬೇರೆ ಇರಬಹುದೆ? ಅದಾದರೆ ನಿಜವಾದ ಅಚ್ಚರಿ!

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನರೇಂದ್ರ ಪೈ