Article

ಸಾವಿನ ಪ್ರತಿಬಿಂಬದ ಕಥನ

ನನ್ನ ಬರವಣಿಗೆ ಮತ್ತು ಛಂದದ ಕೆಲಸಗಳಲ್ಲಿ ವಿಪರೀತವಾಗಿ ತೊಡಗಿಸಿಕೊಂಡಿರುವುದರಿಂದ ಯಾವುದೇ ಹೊಸ ಪುಸ್ತಕಗಳನ್ನು ಓದಲು‌ ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಈ ಕಾದಂಬರಿಯನ್ನು ವಿಶೇಷ ಕಾರಣಕ್ಕಾಗಿ ಓದಬೇಕಾಯ್ತು. ಮುನ್ನುಡಿ ಬರೆಯಲು ಕೇಳಿಕೊಂಡಿದ್ದರು. ಆದರೆ ಸಮಯದ ಅಭಾವದಿಂದ ನಿರಾಕರಿಸಿದ್ದೆ. ಕೊನೆಯ ಪಕ್ಷ ಪ್ರಕಟಣೆಯ ನಂತರ ಓದಬೇಕಲ್ಲವೆ? ಓದಿದ್ದು ವ್ಯರ್ಥವಾಗಲಿಲ್ಲ. ಈ ಪುಸ್ತಕ ವಿಶೇಷ ಅನುಭವವನ್ನು ಕೊಟ್ಟಿತು.

ಸಾವಿನ ಕುರಿತು ಅನೇಕರು ವಿಭಿನ್ನ ರೀತಿಗಳಲ್ಲಿ ಬರೆದಿದ್ದಾರೆ. ಸಾವಿನ ಕದ ತಟ್ಟಿ ಬಂದವರು ಆತ್ಮಕತೆಯನ್ನು ಹೇಳಿಕೊಂಡಿದ್ದಾರೆ. ಆದರೆ ಇಲ್ಲಿಯ ವಸ್ತು ತುಸು ವಿಭಿನ್ನವಾಗಿದೆ. ಒಂದು ಸಾವಿಗೆ ಸಲ್ಲಬೇಕಾದ ಶೋಕವನ್ನು ನಾವು ಸಲ್ಲಿಸದಿದ್ದರೆ, ಅದು ಮತ್ತೊಂದು ಸಾವಿನ ಪಯಣದಲ್ಲಿ ಅನುಭವಿಸುವಂತೆ ಮಾಡುತ್ತದಂತೆ. ಇಲ್ಲಿಯ ಕಥಾನಾಯಕ ತಂದೆಯ ಸಾವಿನ ಶೋಕವನ್ನು, ಪ್ರೀತಿ-ವೈರತ್ವ ಏಕಕಾಲಕ್ಕೆ ಇರುವ ಗೆಳೆಯನೊಬ್ಬನ ಸಾವಿನ ಸನ್ನಿಧಿಯಲ್ಲಿ ಆಚರಿಸುತ್ತಾನೆ. ಸಾವಿನ ಬಿಂಬಕ್ಕಿಂತಲೂ ಇಲ್ಲಿ ಅದರ ಪ್ರತಿಬಿಂಬಕ್ಕೆ ಹೆಚ್ಚು ಮಹತ್ವವಿದೆ. ಲವಲವಿಕೆಯ ಹರೆಯದ ವ್ಯಕ್ತಿಯೊಬ್ಬ ಕ್ಯಾನ್ಸರ್ ರೋಗದಿಂದ ಇಂಚಿಂಚಾಗಿ ಸಾಯುವ ವಿವರಗಳು ಗಾಭರಿಗೊಳಿಸುವಷ್ಟು ದಟ್ಟವಾಗಿ ಇಲ್ಲಿ ಬಂದಿವೆ. ಅದಕ್ಕೂ ದಟ್ಟವಾಗಿ ಅದರ ಸಾಮೀಪ್ಯದಿಂದ ವಿಚಿತ್ರ ಮಾನಸಿಕ ಸಂಘರ್ಷಕ್ಕೆ ಒಳಗಾಗುವ ಕಥಾನಾಯಕನ ಒಳಗುದಿಯ ಚಿತ್ರಣವಿದೆ.

ಕಾದಂಬರಿಕಾರರು ಹಿರಿಯ ಮನೋವೈದ್ಯರು. ಆದ್ದರಿಂದ ಮನಸ್ಸಿನ ವ್ಯಾಪಾರವನ್ನು ವಿಶೇಷವಾಗಿ ಹಿಡಿದಿಟ್ಟಿದ್ದಾರೆ. ಅಧ್ಯಾತ್ಮವು ಮನೋವೈದ್ಯಕೀಯಕ್ಕೆ ಅತ್ಯಂತ ಸನಿಹದ ಸಂಬಂಧಿ. ವಿಜ್ಞಾನವೆಂಬ ಲೌಕಿಕವು ಅಲೌಕಿಕದ ಜೊತೆಗೆ ಒಡನಾಡುವುದು ಮನೋವೈದ್ಯದಲ್ಲಿಯೇ‌ ಆಗಿದೆ‌. ಆ‌ ಕಾರಣಕ್ಕಾಗಿ ಇಡೀ ಕಾದಂಬರಿಯ ತುಂಬಾ ಸಾವು, ಬದುಕು, ಅದರ ಅರ್ಥ, ಗೌಪ್ಯತೆ, ಯಾವುದನ್ನೂ ನಿಯಂತ್ರಿಸಲಾಗದ ಮನುಷ್ಯನ ಅಸಹಾಯಕತೆ - ಎಲ್ಲವೂ ಮೈಗೆ ತಾಕುವಷ್ಟು ಸೂಕ್ಷ್ಮವಾಗಿ ಚಿತ್ರಣಗೊಂಡಿವೆ.

ಲೇಖಕರು ತುಮಕೂರಿನವರಾದ್ದರಿಂದ ಅಲ್ಲಿಯ ಭಾಷೆ ಯಥೇಚ್ಛವಾಗಿ ಕಾದಂಬರಿಯುದ್ದಕ್ಕೂ ಬಳಕೆಯಾಗಿದೆ. ಅದರ ಗ್ರಾಮ್ಯದ ಸೊಗಡು, ಪಡ್ಡೆ ಹುಡುಗರು ಬಳಸುವ ಸ್ಲಾಂಗ್‌ಗಳು, ಮುದುಕರು ಆಡುವ ತತ್ವದ ಮಾತುಗಳು - ಎಲ್ಲವೂ ಜೀವಂತವಾಗಿ ಬಂದಿವೆ.

ಕನ್ನಡದಲ್ಲಿ ಇತ್ತೀಚೆಗೆ ಓದಿದ ಅಪರೂಪದ ಕಾದಂಬರಿಯಿದು. ಯಾರಾದರೂ ಹೇಳದೆ‌ ಹೋದರೆ ಇಂತಹ ಪುಸ್ತಕಗಳು ಅಟ್ಟ‌ಸೇರಿಬಿಡುತ್ತವೆ. ನೀವಿದನ್ನು ಓದಬೇಕೆನ್ನುವುದು ನನ್ನ ಪ್ರೀತಿಯ ಒತ್ತಾಯ.

ಕಾದಂಬರಿಯ ಕರಡು ಸರಿಯಾಗಿ ತಿದ್ದಿರದ ಕಾರಣ ಪುಸ್ತಕದ ಪುಟ ಪುಟದಲ್ಲೂ ದೋಷಗಳು ಉಳಿದು ಬಿಟ್ಟಿವೆ. ಆದರೆ ಅವು ನಿಮ್ಮ ಓದಿಗೆ ಅಡ್ಡಿಗೊಳಿಸದಷ್ಟು ಕಥನ ಸಾಂದ್ರವಾಗಿದೆ. ಮೈಸೂರಿನ ಅಭಿರುಚಿ ಪ್ರಕಾಶನ ಇದನ್ನು ಪ್ರಕಟಿಸಿದೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಸಕ್ತರು 9980560013 ಗೆ ಕರೆಮಾಡಿ ಪುಸ್ತಕ ತರಿಸಿಕೊಳ್ಳಬಹುದು.

ವಸುಧೇಂದ್ರ