Article

‘ಸದ್ಗುರು ನಾನಕ್ ದೇವ್’ ಸಮಗ್ರ ಜೀವನ ದರ್ಶನ

ಸಿಖ್ ಧರ್ಮ ಸಂಸ್ಥಾಪಕರಾದ ಗುರುನಾನಕರ ಜನ್ಮೋತ್ಸವದ 550ನೆಯ ವರ್ಷ, ಪಾಕಿಸ್ತಾನದ ಕರ್ತಾರ್ ಪುರದಲ್ಲಿ ನವೆಂಬರ್ 5ರಿಂದ 14ನೆಯ ತಾರೀಕಿನವರೆಗೆ ಜರುಗಿದ ವಾರ್ಷಿಕೋತ್ಸವದಲ್ಲಿ ಸಾವಿರಾರು ಸಿಖ್ ಯಾತ್ರಾರ್ಥಿಗಳು ಪಾಲ್ಗೊಂಡ ವಾರ್ತೆ ಓದಿದಾಗಿನಿಂದ ಸಿಖ್ ಧರ್ಮದ ಬಗ್ಗೆ, ಅದರ ಸಂಸ್ಥಾಪಕರ ಬಗ್ಗೆ ತಳೆದ ಕುತೂಹಲವನ್ನು ತಣಿಸಲೊಂದು ಪುಸ್ತಕ ಸಿಕ್ಕಿದೆ.

ಕಾರ್ತಿಕ ಮಾಸದ ಪೌರ್ಣಮಿಯ ದಿನವನ್ನು ಗುರುನಾನಕ್ ಅವರ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಗುರು ನಾನಕ್​​​ ಒಬ್ಬ ಸಂತ, ಶ್ರೇಷ್ಠ ಚಿಂತಕ, ದಾರ್ಶನಿಕ ಹಾಗೂ ಕವಿ. ಸಿಖ್ಖರ 10 ಗುರುಗಳಲ್ಲಿ ಗುರುನಾನಕ್ ಮೊದಲನೆಯವರು. ಪವಾಡಗಳನ್ನು ಮಾಡದ ಗುರುಗಳು. ಸಂಗೀತ, ಕವನ, ಹಾಡು ಮೂಲಕ ಅವರ ಜ್ಞಾನಪ್ರಚಾರ. ಮುಘಲ್​ ಕಾಲದ ದೌರ್ಜನ್ಯಯುತ ನೀತಿಗಳನ್ನು ಮತ್ತು ಹಿಂದೂ ಧರ್ಮದ ಜಾತಿವಾದದ ದಬ್ಬಾಳಿಕೆಯನ್ನು ಖಂಡಿಸಿದ್ದರು. ಮಹಿಳೆಯರಿಗೆ ಸಮಾನ ಸಾಮಾಜಿಕ ಸ್ಥಾನಮಾನ ನೀಡಬೇಕು ಎಂದು ಹೋರಾಡಿದವರು. ಹಿಂದೂ ಪುರೋಹಿತರು ಸಂಸ್ಕೃತದಲ್ಲಿ ಹಾಗೂ ಮುಸ್ಲಿಂ ಕ್ಲರ್ಜಿಗಳು ಅರೇಬಿಕ್ ಭಾಷೆಯಲ್ಲಿ ಬೋಧನೆ ಮಾಡುತ್ತಿದ್ದರೆ, ನಾನಕ್ ಸಾಮಾನ್ಯ ಜನರು ಮಾತಾಡುವ​​ ಪಂಜಾಬಿ ಭಾಷೆಯಲ್ಲಿ, ಎಲ್ಲರಿಗೂ ಅರ್ಥವಾಗುವಂತೆ ಬೋಧಿಸುತ್ತಿದ್ದರು. ಸಿಖ್ಖರ ಐದನೆಯ ಗುರು, ಗುರು ಅರ್ಜನ್ ಸಿಂಗ್ ಸಂಗ್ರಹಿಸಿದ ಗುರು ಗ್ರಂಥ ಸಾಹಿಬ್ ದಲ್ಲಿ ಗುರು ನಾನಕ್​ ಅವರ ಲಿಖಿತ ಬೋಧನೆಗಳಿವೆ.

ಸದ್ಗುರು ನಾನಕ್ ದೇವ್ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸುವ ಈ ಪುಸ್ತಕ ರಚಿಸಿದ ಎಸ್ ಸೀತಾರಾಮು ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್ ಗಳಿಸಿದವರು. ಕದಂಬ, ಮಂದಹಾಸ ಎಂಬೆರಡು ಕವನ ಸಂಕಲನಗಳನ್ನೂ, ಅಸಲು ಫಸಲು, ಕುರುಡು ಕಾಂಚಾಣ ಮೊದಲಾದ ಕಥಾ ಸಂಕಲನಗಳನ್ನೂ ರಚಿಸಿದ ಸಾಹಿತಿಗಳು. ಕಾಷ್ಠ ಶಿಲ್ಪ ಮತ್ತು ಪೇಪರ್ ಕೊಲಾಜಿನಲ್ಲಿ ಪರಿಣಿತರು. ಭಾರತೀಯ ಸಂಸ್ಕೃತಿ, ದರ್ಶನ ಶಾಸ್ತ್ರಗಳ ಕುರಿತು ’ಇದಮಿತ್ಥಂ ’ ಎಂದು ಮಾತನಾಡಬಲ್ಲರು.

’ಮ್ಯಾನೇಜಮೆಂಟ್ ಲೆಸನ್ಸ್ ಫ್ರಾಮ್ ಭರ್ತೃಹರಿ’ ಪುಸ್ತಕವನ್ನೂ ಬರೆದವರು. ’ಎತ್ತಣಿಂದೆತ್ತಣ ಸಂಬಂಧವಯ್ಯಾ!’ ಎಂದು ವಿಸ್ಮಯ ಪಡಬೇಡಿ. ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಜನರಲ್ ಮೆನೇಜರ್ ಆಗಿ, ಸಿಂಡಿಕೇಟ್ ಬ್ಯಾಂಕಿನಲ್ಲಿ ಸಿ.ವಿ.ಓ ಆಗಿದ್ದರು ಮಾತ್ರವಲ್ಲ, ಬ್ಯಾಂಕ್ ವಂಚನೆಗಳು - ಶೋಧನೆ ಮತ್ತು ನಿಯಂತ್ರಣ ಎಂಬ ಪುಸ್ತಕವನ್ನೂ ಬರೆದವರು.

ಗುರು ನಾನಕ್ ದೇವರ ಸಮಗ್ರ ಇತಿಹಾಸವನ್ನು, ಉಪದೇಶಗಳನ್ನು, ಅವರ ಐತಿಹಾಸಿಕ ಮಹತ್ವವನ್ನು ಓದಿ, ಸಂಗ್ರಹಿಸಿ ಕನ್ನಡಕ್ಕೆ ತಂದಿರುವ ಎಸ್. ಸೀತಾರಾಮು ಅವರ ಸಾಹಸಕ್ಕೆ ಐತಿಹಾಸಿಕ ಮಹತ್ವವೂ ಇದೆ. ಯಾಕೆಂದರೆ, ಗುರು ನಾನಕ್ ಬಗ್ಗೆ ಕನ್ನಡದಲ್ಲಿ ಇದಕ್ಕೂ ಹಿಂದೆ ಇಷ್ಟು ಮಾಹಿತಿಯನ್ನು ಒಳಗೊಂಡ ಪುಸ್ತಕ ಬಂದಂತಿಲ್ಲ. ನನಗೆ ತಿಳಿದಿರುವಂತೆ ಕೃಷ್ಣಮೂರ್ತಿ ಬೆಳೆಗೆರೆ ಅವರು ಬರೆದ ’ಗುರು ನಾನಕ್’ ಎಂಬ ಕಿರುಗ್ರಂಥವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಿಸಿತ್ತಷ್ಟೇ.

ಈ ಕೃತಿಗೆ ಮುನ್ನುಡಿ ಬರೆದವರು ಸ್ವತಃ ಸಿಖ್ ಧರ್ಮೀಯರೂ, ಪ್ರಾಜ್ಞರೂ, ಕನ್ನಡ ಚೆನ್ನಾಗಿ ಬಲ್ಲವರೂ, ಉತ್ತಮ ಬರಹಗಾರರೂ, ಕನ್ನಡಿಗರ ನೆಚ್ಚಿನ ಆಡಳಿತಗಾರರೂ ಆದ ಶ್ರೀ ಚಿರಂಜೀವಿ ಸಿಂಗ್. ಅವರೇ ಹೇಳಿದಂತೆ `ಈ ಪುಸ್ತಕ ಒಂದು ಶುಭ ಲಕ್ಷಣ'.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಳಗೋಡು ರಮೇಶ ಭಟ್