Article

ಸಾಹಿತ್ಯದ ಅಭಿಜಾತ ಗ್ರಂಥ “ನುಡಿ ಬಾಗಿನ”

ನುಡಿ ಬಾಗಿನ ಎಂಬ ಹೆಸರಿನಲ್ಲಿಯೇ ಸಾಹಿತ್ಯ ಅಡಗಿದೆ. ಇಲ್ಲಿ ಬರೆದಿರುವ ಅನೇಕರು ಸಾಹಿತ್ಯ ಲೋಕದೊಳಗೆ ಅಪಾರವಾದ ಅನುಭವಿಗಳು. ಎಚ್. ಎಸ್. ಆರ್ ಅವರನ್ನು ಓದಿಕೊಳ್ಳುವುದರ ಜೊತೆಗೆ ಅವರೊಂದಿಗೆ ಒಡನಾಡಿಯಾಗಿದ್ದವರು, ಅವರೊಂದಿಗೆ ಸಾಹಿತ್ಯದ ಪಯಣ ಮಾಡುತ್ತಿರುವರು, ಇದನ್ನು ಅಭಿನಂದನಾ ಗ್ರಂಥವೆನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಕಾರಣ  ನಾನು ಓದಿರುವ ಅನೇಕ ಗ್ರಂಥಗಳಲ್ಲಿ ಒಳಗಿರುವ ವ್ಯಕ್ತಿಯನ್ನು ಹೊಗಳಿ ಅಟ್ಟಕ್ಕೇರಿಸಿ, ವರ್ಣನೆ ಮಾಡುತ್ತಾರೆ. ಅವರ ದೈಹಿಕ ಮಾನಸಿಕ ಸೌಂದರ್ಯವನ್ನು ಮೆಚ್ಚಿಸಿ, ದೊಡ್ಡದೊಡ್ಡ ಪದ ಬಳಕೆಯ ಮೂಲಕ ಮೇಲೇರಿಸುತ್ತಾರೆ. ಸಾಮಾನ್ಯವಾಗಿ ಅಭಿನಂದನಾ ಗ್ರಂಥಗಳು ವ್ಯಕ್ತಿಯ ಪರಿಚಯ ಹೆಚ್ಚಾಗಿರುತ್ತದೆ ಆದರೆ ನುಡಿಬಾಗಿನದಲ್ಲಿ ಇಂತಹದ್ದು ಯಾವುದು ಕಾಣುವುದಿಲ್ಲ ಬದಲಿಗೆ ಎಚ್. ಎಸ್.  ಆರ್ ಅವರ ಸಾಹಿತ್ಯದ ನೈಜ ಅನುಭವ ಕೊಡುತ್ತಾ ಹೋಗುತ್ತದೆ. ಅವರ ಸಾಹಿತ್ಯದಲ್ಲಿನ ನಾಡಿನ ಸೇವೆ, ಪ್ರಾಮಾಣಿಕತೆ ಕಾಣುತ್ತದೆ. ಅವರ ಬಹುರೂಪಿ ಚಿಂತನೆ, ಸ್ತ್ರೀವಾದಿ ಚಿಂತನೆ, ಸಾಹಿತ್ಯದ ಭಿನ್ನವಾದ ಲೋಕ, ಅವರ ಅಪಾರವಾದ ಓದಿನ ಅನುಭವ, ವಿರಳ ವಿಮರ್ಶೆ, ಸಮುದಾಯಿಕ ರಾಜಕೀಯ ಹೋರಾಟ, ಅವುಗಳ ಹಿಂದಿರುವ ಅಸ್ಮಿತೆ ಇವುಗಳನ್ನು ಕಾಣಬಹುದು. 

ಡಾ. ಬಿ. ಎನ್. ಸುಮಿತ್ರಾಬಾಯಿ ಅವರು ಕಣ್ಣ ಹನಿಗಳ ಕಾಣಿಕೆಯ ಬಗ್ಗೆ ಬರೆಯುತ್ತಾ ಎಚ್. ಎಸ್. ಆರ್ ಅವರಿಗೆ ಮಹಿಳೆಯರ ಬದುಕಿನ ಮಹತ್ವವನ್ನು, ಯಾರೂ ಬರೆಯದಂತಹ ಸಾಹಿತ್ಯವನ್ನು ತಮ್ಮ ಸಾಮಾಜಿಕ, ಸಾಂಸ್ಕೃತಿಕ  ಜವಾಬ್ದಾರಿಯನ್ನು ಮೆರೆದಿದ್ದು ಸ್ಮರಿಸುತ್ತಾರೆ. ಮಹಿಳೆಯನ್ನು ವಿಮರ್ಶೆಗೊಳಪಡಿಸಿ ಸಾಹಿತ್ಯದಲ್ಲಿ ಮಹಿಳಾ ಪ್ರಧಾನವಾದ ಸಾಹಿತ್ಯವೂ ಅನೇಕ ಬಾರಿ ಕಡೆಗಣಿಸುತ್ತೆ ಆದರೆ ಎಚ್. ಎಸ್. ಆರ್ ಅದಕ್ಕೆ ವಿರುದ್ಧ ಧ್ವನಿಯನ್ನು ಕಟ್ಟಿಕೊಡುವ  ಸಾಹಿತ್ಯದ ವಿಭಿನ್ನ ಪ್ರಯತ್ನ ಮಾಡಿದ್ದು ಕಾಣುತ್ತದೆ. ಅವರು ಬರೆದ ಹಾಗೆ ಬದುಕಿನಲ್ಲಿಯೂ ಇದ್ದಾರೆ ಎಂಬ ಉಲ್ಲೇಖ ಪುಸ್ತಕದ ಅನೇಕ ಲೇಖನಗಳಲ್ಲಿ ಓದಿ ಅನುಭವಿಸಲು ಸಿಗುತ್ತದೆ. ‘ನವ್ಯರಾಗಿದ್ದೂ ನವ್ಯರಂತಿರದೆ’ ಸಿ. ಎನ್. ರಾಮಚಂದ್ರನ್ ಅವರು ಹೆಡಲೈನ್‌ನಲ್ಲಿಯೇ ಎಚ್.ಎಸ್.ಆರ್ ಯಾರು ಎಂಬುವುದನ್ನು ಹೇಳುತ್ತಾರೆ.ಸಾಹಿತ್ಯದ ಹಲವು ಘಟ್ಟಗಳನ್ನು ಭೇಟಿಯಾಗಿ ಓದಿಕೊಂಡು ಸದಾ ಅನುಭವಿಸಿದ ಲೋಕವನ್ನು ಅಕ್ಷರಕ್ಕೀಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. “ಕಾಣುವ ದೃಷ್ಟಿಕೋನದಲ್ಲೂ ಅವರ ಅನುಭವಗಳಲ್ಲೂ ಭಿನ್ನವಾಗಿರುತ್ತಾರೆ” ಈ ಮಾತು ಪುಸ್ತಕದ ಒಂದು ಭಾಗದಲ್ಲಿ ನಮಗೆ ಓದಲು ಸಿಕ್ಕು ಬದುಕಿಗೆ ಹತ್ತಿರವಾದ ವಿಚಾರವನ್ನು ಈ ಸಾಲು ಸಾರಿ ಸಾರಿ  ಹೇಳುತ್ತದೆ. ಎಲ್ಲೊ ಒಂದು ಕಡೆಗೆ ಇವತ್ತಿನ ಸಮಕಾಲಿನ ಸಾಹಿತಿಗಳನ್ನು ಕಂಡು ಹೇಳಿರಬಹುದೆ ಎಂಬ ಅನುಮಾನ ಮೂಡುತ್ತದೆ. ಇದನ್ನು ಓದುಗರು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.

ಕಾಡಿಗೆ ಬಂದ ರಾಜ ಋಷಿ -ಆನಂದ ಝಂಜರವಾಡ, ಸಂಗಡ: ಸಾಹಿತ್ಯ ವಿಮರ್ಶೆಯ ಲೋಕದರ್ಶನ- ಡಾ. ಚಿಂತಾಮಣಿ ಕೊಡ್ಲೆಕೆರೆ, ಹೀಗೆ ಸಾಲು ಸಾಲು ಸಾಹಿತಿಗಳು ಎಚ್. ಎಸ್. ಆರ್ ಅವರ ಸಾಹಿತ್ಯದ ಒಳಹರೆವು ಸಾಮಾಜಿಕ  ಜವಾಬ್ದಾರಿಯನ್ನು ಬಿಚ್ಚಿಡುತ್ತಾರೆ. ಇನ್ನು ಈ ಕೃತಿಯಲ್ಲಿ ಹಲವು ವಿಚಾರಗಳನ್ನು ಮಾತನಾಡುತ್ತಾರೆ ಹಲವು ಲೇಖಕರು. ಹಕ್ಕೊತ್ತಾಯಿಸಲೇ ಬೇಕಾಗಿರುವಂತೆ ಮಾಡಿರುವ ಪರಿಸರವನ್ನು ತೆರೆದ ಮನದ ಉದಾರ ಭಾವದಿಂದ ಅರ್ಥಮಾಡಿಕೊಂಡವರು. ಆದರೆ ರಾಜಕೀಯ ಹೋರಾಟತತ್ವಗಳ ಮೂಲಕವೇ ಸಾಹಿತ್ಯವನ್ನು ಅರ್ಥೈಸುವುದೇ ವಿಮರ್ಶೆಯ ಗುರಿ ಎನ್ನುವವರಲ್ಲ. ಅಂಥ ಹೋರಾಟಗಳಲ್ಲಿ ಭಾಗಿಯಾಗುವ ಇರಾದೆ ಇಲ್ಲವಾದರೂ ಮುಂದಿಟ್ಟು ವಿವರಿಸುವುದೂ ವಿಮರ್ಶೆಯ ಜವಾಬ್ದಾರಿ ಆಗಿರುವುದಿಲ್ಲವೆ? ಎಂಬಿತ್ಯಾದಿ ಪ್ರಶ್ನೆಗಳನ್ನು ವಿಮರ್ಷಕರೂ ಕೇಳುತ್ತಾರೆ ಹಾಗೆ ಎಚ್. ಎಸ್. ಆರ್ ಅವರ ಸಾಹಿತ್ಯವೂ ಕೇಳುತ್ತದೆ.

ಮಹಿಳೆಯರ ಬಗ್ಗೆ ಮಾತನಾಡುವ ಗ್ರಂಥ ಕೇಳುತ್ತಿರುವವರೂ ಮಹಿಳೆಯರೇ ಆಗಿದ್ದಲ್ಲಿ, ಮೊದಲೇ ಮೂಕವಾಗಿಸಲ್ಪಟ್ಟ ಆಸಂಕುಲವನ್ನು ಪ್ರಶ್ನೆಗಳ ಸರಮಾಲೆಯನ್ನು ರಾಶಿ ಹಾಕಿ, ಇನ್ನಷ್ಟು ಮೌನಕ್ಕೆ ವಿಚಾರಗಳ ಪ್ರಶ್ನೆಗಳನ್ನು ಎರಚಿಬಿಟ್ಟರೆ ಅವು ಸುಪ್ತ ಪ್ರಜ್ಞೆಗೆ ಇಳಿದು ತಮ್ಮಷ್ಟಕ್ಕೆ ಮೊಳೆತು ಫಲಿಸಿ ಬಿಡುತ್ತವೆನ್ನಲು ಗ್ಯಾರಂಟಿ ಏನಾದರೂ ಇದೆಯೆ?.... ಎಂಬಿತ್ಯಾದಿ. ಅಂದರೆ ’ಪ್ರಶ್ನೆ ಕೇವಲ ಪ್ರಶ್ನೆಯಾಗಿಯೇ ಪರ್ಯಾವಸಾನ ಹೊಂದಲು ಸಾಧ್ಯ’ ಎನ್ನುವ ಸಾಲುಗಳು ಪ್ರಭುದ್ಧವಾದ ಸಾಹಿತ್ಯದ ಮಾತಾಗಿದೆ. ನನಗೆ ಅತ್ಯಂತ ಕಾಡಿದ ಸಾಲುಗಳಲ್ಲಿ ಇದು ಕೂಡ. ಗಂಡಸಿನ ಉತ್ಪನ್ನವೆನ್ನುವ ಪರಂಪರೆ ‘ಹೇಳತೇನ ಕೇಳ’ ಪರಂಪರೆಯಾಗಿರುತ್ತದೆ. ನಾವು ಹೇಳುವಂತವರಾಗುತ್ತೇವೆ, ನೀವು ಕೇಳುವಂತವರಾಗಿ’ ಎನ್ನುವ ಈ ಪರಂಪರೆಯಲ್ಲಿ ಮಾತು ಗಂಡಿನ ಅಧಿಕಾರವಾದರೆ ಅದನ್ನು ಕೇಳುವುದು ಹೆಣ್ಣಿನ ಕರ್ತವ್ಯ. ಈ ಸಂಗತಿಯ ಬಗ್ಗೆ ತೀವ್ರ ಎಚ್ಚರ ಇರುವುದರಿಂದ ಎಚ್.ಎಸ್.ಆರ್‌ ಸ್ಪಷ್ಟವಿದೆ. ಆದರೆ ‘ಪ್ರಶ್ನೆ-ಉತ್ತರ’ದ ಈಡಿಯಂ ಬದಲಾಗಿ ‘ಪ್ರಶ್ನೆ-ಪ್ರಶ್ನೆ’ ಯೆನ್ನುವ ಅಭಿವ್ಯಕ್ತಿಯನ್ನು ಆರಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬ ಪ್ರಶ್ನೆಯನ್ನುಕೇಳಿಕೊಳ್ಳಬೇಕಾಗುತ್ತದೆ.

'ಒಂದಾದ ಮೇಲೆ ಒಂದರಂತೆ ಪಾಸಿಂಗ್ ಸಮಾನತೆ’ ಹಾಗೂ ‘ಬಿಡುಗಡೆ’ ಪರಿಕಲ್ಪನೆಗಳು ನಮ್ಮ ಪುರುಷ ಜಗತ್ತಿನ ಕೆಲಸ ಮಾಡಿ ದಿಢೀರನೆ ಫಲಿಸಿ ಬಿಡುವಂತ ಸವಲತ್ತಿನ ನೆಲೆ ಅವರದಲ್ಲವೆ? ಪುನಃ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಆಧುನಿಕತೆಯ ಫಲವಾದ ಶಿಕ್ಷಣ ಮತ್ತುಉದ್ಯೋಗಗಳು ಹೆಂಗಸರಿಗೆ ಬಿಡುಗಡೆಯನ್ನು ಒದಗಿಸಿವೆಯೆ ಅಥವಾ ಮನೆಯ ಹಿಂದಿರುವ ಧ್ವನಿ ನಮ್ಮ ಮಹಿಳಾ ಬರಹಗಾರರನ್ನು ಹೇಗೆ ಪ್ರೇರೇಪಿಸುತ್ತದೆ ಎಂದರೆ ಮನೆಯೊಳಗೆ ಗೃಹಿಣಿಯಾಗಿ ಉಳಿದಿರುವಿಕೆ ಒಂದು ಬಂಧನವೇಕೆ ಆಗಬೇಕು? ವೇತನ ರಹಿತ ದುಡಿಮೆ ಎಂಬುದೇನಿಲ್ಲ. ನಾವು ನಮ್ಮ ಆಪ್ತರಿಗಾಗಿ, ಕುಟುಂಬಕ್ಕಾಗಿ ದುಡಿಯುವಲ್ಲಿ ಆನಂದವೂ ಇರುತ್ತದಲ್ಲ ಎಂದೂ ಅವರು ವಾದಿಸಿಯಾರು.ಹಾಗೆ ನೋಡಿದರೆ ಚಿಂತನಾ ಸರಣಿಯೊಂದನ್ನು ಗಂಡಸಿನ ಪ್ರಜ್ಞೆಯಲ್ಲೇ ಹೋಗುವುದು ದುರದೃಷ್ಟಕರ. ಉಳಿದಂತೆ ಸ್ತ್ರೀ ಸಾಹಿತ್ಯ ಚರಿತ್ರೆ ಕೂಡ ಪುರುಷ ಚಿಂತನೆ ಮೂಲಕವೇ ಚಿಂತಿತವಾಗುತ್ತಿರುತ್ತದೆ.

ಲಿಂಗ ಮುಕ್ತವಾದ ಚಿಂತನೆಯ ಸಾಧ್ಯತೆಯನ್ನು ಚರ್ಚಿಸುವ ಬಗೆಯನ್ನು ಈ ಗ್ರಂಥ ಒಳಗೊಂಡಿದೆ. “ನಮ್ಮ ಲೇಖಕಿಯರು ಸಾಹಿತ್ಯವನ್ನು ಕುರಿತ ಯಾವುದೇ ಸಂಗತಿಯನ್ನುಲಿಂಗ ತಟಸ್ಥವಾದ ಅಥವಾ ಅಂತಹ ಆಯಾಮವನ್ನು ಬಯಸದ ನೆಲೆಯಲ್ಲಿ ನಿಂತು ಪರಿಶೀಲಿಸಲು ಸಾಧ್ಯವೇ ಇಲ್ಲವೆ? ಇಲ್ಲ ಎನ್ನುವುದಾದರೆ ಪುರುಷ ನಿರ್ಮಿತ ಮತ್ತು ಉಳಿಯುವುದು ಅನಿವಾರ್ಯವಾಗುತ್ತದೆ. ಅದೂ ಅಲ್ಲದೆ ಸಾಹಿತ್ಯ ಚರಿತ್ರೆಯಲ್ಲಿಎಳೆ ಉಳಿದೇ ಇರುತ್ತದೆಯೆ? ಉಳಿದಿರಬೇಕೆ? ಲಿಂಗಾಧಾರಿತವಾದ ವಿಚಾರಗಳನ್ನುಮಾತ್ರ ಪ್ರಸ್ತಾಪಿಸುವೆನೆಂಬ ಲೇಖಕಿಯರು ತಮಗೆ ತಾವೇ ಕಟ್ಟುಪಾಡುಗಳನ್ನುಹಾಕಿಕೊಂಡಂತೆ ಆಗುವುದಿಲ್ಲವೆ? ಅದು ದಲಿತ ಸಾಹಿತಿಯೊಬ್ಬರು ದಲಿತ ಬರವಣಿಗೆಯನ್ನು ಕುರಿತಂತೆ ಮಾತ್ರವೇ ಬರೆಯುವೆನೆಂದು ಹಟ ತೊಟ್ಟಂತೆ ಅಸಹಜವಾಗುವುದಿಲ್ಲವೆ? ಅಥವಾ ಸಾಮಾಜಿಕ ಸಂಬಂಧಗಳ ಜಗತ್ತು ಒಂದನ್ನುಬಿಟ್ಟು ಇನ್ನೊಂದು ಇರಲಾರದು ಎನ್ನುವಷ್ಟು ಜಟಿಲವಾಗಿ ಹೆಣೆದುಕೊಂಡಿವೆಯೆ?” ವಾಸ್ತವದಲ್ಲಿ ಲಿಂಗ ನಿರ್ಲಿಪ್ತವಾದ ಚಿಂತನ-ಮಂಥನ, ಅದೂ ಒಂದು ಕೂಡ ಕಾವ್ಯವನ್ನು ಹೆಣ್ಣೆಂದೂ, ಕಥೆಯನ್ನು ಗಂಡೆಂದೂ ಅರ್ಥೈಸುವ ಧಾಟಿಯಲ್ಲಿ ಲಿಂಗ ಇಲ್ಲದಿರುವ ಒಂದು ಸಂಸ್ಕೃತಿಯ ಯಾವ ಜಾಗ ಇದೆಯೆನ್ನಬಹುದು? ಇಂತಹ ಪ್ರಶ್ನೆಗಳಿಗೆ ಅತ್ಯಂತ ಮೇರು ಓದಿನ ಅತೀವ ಅಗತ್ಯವನ್ನು ಇಂದಿನಯುವ ಪೀಳಿಗೆ ಸಾಹಿತಿಗಳಿಗೆ ಕಿವಿಮಾತು ಎನಿಸುತ್ತದೆ.

ಎಚ್. ಎಸ್. ಆರ್ ಅವರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿರುವ ಹೊಸ ಲೇಖಕರಲ್ಲಿ, ಅರ್ಧದಷ್ಟು ಲೇಖಕರಾದರೂ ತಮ್ಮ ಪ್ರಸ್ತಾವನೆಗಳಲ್ಲಿ ರಾಘವೇಂದ್ರರಾವ್ ತಮ್ಮ ಹಸ್ತಪ್ರತಿಯನ್ನು ನೋಡಿ, ಚರ್ಚೆ ಮಾಡಿ, ಸಲಹೆ-ಸೂಚನೆಗಳನ್ನುಕೊಟ್ಟು, ಕೆಲವಕ್ಕೆ ಮುನ್ನುಡಿಗಳನ್ನೂ ಬರೆದುಕೊಟ್ಟುದನ್ನು ಕೃತಜ್ಞತಾ ಪೂರ್ವಕ ದಾಖಲಿಸಿರುವುದು ಕಂಡುಬರುತ್ತದೆ.

ಇದು ಎಚ್.ಎಸ್.ಆರ್. ಅವರ ಒಟ್ಟಾರೆಸಾಹಿತ್ಯ-ಪ್ರೀತಿಯನ್ನು ಹಾಗೂ ತಾವು ಲೇಖಕರಾಗಿ ಕಿರಿಯರಿಗೆ ಮಾರ್ಗದರ್ಶನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಿರುವುದನ್ನು ಪ್ರತಿಫಲಿಸುತ್ತದೆ. ಇವರು ಹೊಸ ಲೇಖಕ-ಲೇಖಕಿಯರ ಬಗ್ಗೆ ತೋರಿಸುವ ಉತ್ಸಾಹ, ಪೂರ್ಣ ಪ್ರಮಾಣದಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಅವರೊಡನೆ ಚರ್ಚೆಯಲ್ಲಿ ಕಳೆಯುವ ಸಮಯ ಹಾಗೂ ತೋರಿಸುವ ತಾಳ್ಮೆ ಇಂದಿನ ಕನ್ನಡ ಲೇಖಕರಲ್ಲಿ ಬಹು ಅಪರೂಪ.

ಎಚ್. ಎಸ್. ಆರ್. ವೈವಿಧ್ಯಪೂರ್ಣ, ಪ್ರಗತಿಶೀಲತೆ, ವಾಸ್ತವವಾದ, ಅತಿ ವಾಸ್ತವವಾದ ಇತ್ಯಾದಿ ತಾತ್ವಿಕ ಮೀಮಾಂಸೆ; ಮಹಿಳಾ ವಾಙ್ಮಯ, ಸಂಸ್ಕೃತಿಚಿಂತನೆ, ಜನಪ್ರಿಯ ಸಾಹಿತ್ಯ, ಇತ್ಯಾದಿ ವರ್ಗಗಳನ್ನು ಕುರಿತ ವಾದ-ವಿವಾದಗಳು ಪ್ರಾಚೀನ ಕನ್ನಡ ಕವಿಗಳ ಹಾಗೂ ಮಾಸ್ತಿ ಅವರಪ್ರಾಚೀನ ಕವಿಗಳಿಗೆ ಭಿನ್ನವಾಗಿ ಕಾಣುವ ಮಾಸ್ತಿಯವರ “ನಿರುದ್ವಿಗ್ನ ಶೈಲಿ” ಸಂಪೂರ್ಣವಾಗಿ ಅವರದೇ ಎನ್ನುವ ಮಾತೂ ಕೂಡಾ.

ನುಡಿಬಾಗಿನ ಪುಸ್ತಕವು ಎಚ್.ಎಸ್.ಆರ್ ಅವರ ಒಟ್ಟು ಪುಸ್ತಕಗಳ ಸಾಹಿತ್ಯದ ಆಶೆಯ, ಸಾಮಾಜಿಕ ಕಳಕಳಿ, ಭಾವನೆ,ಸಾಹಿತ್ಯ  ಸಂವೇಧನೆ,ನಡೆದುಬಂದ ಹಾದಿ,ಸಾಹಿತ್ಯದ ಒಳಹರೆವು,ನವ್ಯ ಕಾಲದ ಸಾಹಿತ್ಯದ ಪಕ್ಷಿನೋಟ, ಹೀಗೆ ಹತ್ತು ಹಲವು ವಿಚಾರಗಳು ಓದಲು ಅದರ ಸ್ವಾದವನ್ನು  ಅನುಭವಿಸಲು ದೊರೆಯುತ್ತವೆ.

ಒಬ್ಬ ಲೇಖಕರ ಒಟ್ಟು ಕೃತಿಗಳ ವಿಮರ್ಶೆ ಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಏಕಕಾಲಕ್ಕೆ ದೊರೆಯುವ ಗ್ರಂಥವಿದು. ನುಡಿಬಾಗಿನದ ಪ್ರತಿ ಲೇಖನವು ಅಮೂಲ್ಯ. ಸಾಹಿತ್ಯದ ಮಹತ್ವ ಪಡೆಯುತ್ತಾ ಮುಂದೆ ಸಾಗುತ್ತವೆ. ಒಂದೊಂದು ಲೇಖನವು ಕೃತಿಯೂ ಸಂಪೂರ್ಣ ಓದಿನ ಅನುಭವ ನೀಡುತ್ತವೆ. ಸಾಹಿತ್ಯವನ್ನು ಎಚ್.ಎಸ್.ಆರ್ ಗ್ರಹಿಸುವ ರೀತಿ ವಿವರಿಸುತ್ತವೆ. ನವ್ಯೋತ್ತರ ಘಟ್ಟದಲ್ಲಿ ಹೇಗೆ ಎಚ್.ಎಸ್.ಆರ್. ಮುಖ್ಯರು ಎಂಬುದು ಬಿಂಬಿಸುತ್ತದೆ.

ಈ  ಪುಸ್ತಕದಲ್ಲಿ ಇನ್ನೊಂದು ವಿಷಯ ನನಗೆ ಆಪ್ತವೆನಿಸಿದ್ದು ಎಂದರೆ ಅಜೋ ಅವರ ನೇರವಾದ ಮಾತುಗಳು. ಬಿಳಿಮಲೆ ಅವರ ಬಿಚ್ಚು ಮನಸ್ಸಿನ ಅನಿಸಿಕೆಗಳು. ಇಲ್ಲಿ ಯಾರನ್ನು ಮೆಚ್ಚಿಸುವ ಮಾತಿನ ಬದಲಿಗೆ ಖಾರವಾದ ವಿಮರ್ಶೆಯ ಜೊತೆಗೆ ಸಾಹಿತ್ಯದಲ್ಲಿನ ಸತ್ಯಾಂಶ ಹಿಡಿದಿಡಲು ಪ್ರಯತ್ನ ತುಂಬಾ ಖುಷಿಕೊಡುತ್ತದೆ. ಸದ್ಯ ಸಾಹಿತ್ಯದೊಳಗೆ ಹೊಗಳಿಕೆಗೆ ಬೆಲೆ ಹೆಚ್ಚಾಗಿದೆ  ಆದರೆ ಗ್ರಂಥ ಅದನ್ನು ನಿರಾಕರಿಸುವ ಅನುಭವ ನೀಡುತ್ತದೆ. ಸಾಹಿತ್ಯ ಜನಪರವಾದವಾಗಿದ್ದರೆ ಜನರು ಒಪ್ಪಿ ಅಪ್ಪುತ್ತಾರೆ ಎಂದ ಸರಳ ಪ್ರಯೋಗ ಈ ಪುಸ್ತಕ ಮಾಡುತ್ತದೆ ಮತ್ತು ಯಶಸ್ವಿಯಾಗುತ್ತದೆ. ಲೇಖನದೊಳಗೆ ಅಡಗಿರುವ ಸಾಹಿತ್ಯವು ಪ್ರತಿಕಾಲಕ್ಕೂ ಸಲ್ಲಬಲ್ಲಂತಹ ಸಾಹಿತ್ಯ ಭಾಷೆಯಾಗಿದೆ. ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಬಲ್ಲ ಸಾಮರ್ಥ್ಯ ಹೊಂದಿದೆ ಎನ್ನಬಹುದು. ನನಗೂ ಇಲ್ಲಿನ ಅನೇಕರ ಭಾಷೆಯ ಮೇಲಿನ ಹಿಡಿತ ಜೀರ್ಣಿಸಿಕೊಳ್ಳಲು ಅಸಾಧ್ಯವಾಯಿತು ನಾವಿನ್ನೂ ಸಾಹಿತ್ಯದ ಹಲವು ಕಾಲಘಟ್ಟ ಸಾಹಿತ್ಯ ಓದುವ ಅಗತ್ಯವಿದೆ ಎಂಬ ಅರಿವು ಮೂಡಿಸಿತು.

ಪುಸ್ತಕ ಓದುತ್ತಾ ಹೋದಂತೆ ಸಾಹಿತ್ಯದ ಹೊಸ ಅನುಭವ ನೀಡುತ್ತದೆ. ಮಹಿಳಾ ಸಾಹಿತ್ಯದ ಕಾಳಜಿ ಮತ್ತು ಕಕುಲಾತಿಯನ್ನು ಧಾರೆ ಎರೆಯುತ್ತದೆ. ನವ್ಯ ಮತ್ತು ನವ್ಯೋತ್ತರ  ಕಾಲಘಟ್ಟದ ಸಾಹಿತ್ಯ ಅನುಭವದ ರಸಾನುಭವ ನೀಡುತ್ತದೆ. ಜ್ಞಾನಧಾರೆಯ ಒಳಗೆ ಸಾಹಿತ್ಯ ಅಡಗಿದೆ. ಪ್ರಪಂಚದ ಸಮಕಾಲಿನ ವಿಷಯಗಳಿಗೆ ಸ್ಪಂದಿಸಬೇಕಾದುದ್ದು ಸಾಹಿತ್ಯದ ಜವಾಬ್ದಾರಿಯೆಂಬ ಸಂದೇಶ ರವಾನಿಸುತ್ತದೆ. ಇವೆಲ್ಲ ಕಾರಣಗಳಿಂದ “ನುಡಿ ಬಾಗಿನ” ಒಂದು ಅಭಿನಂದನಾ ಗ್ರಂಥವಲ್ಲ ಬದಲಿಗೆ ’ಅಭಿಜಾತ ಗ್ರಂಥ’ ಎಂದು ಸಾಹಿತ್ಯದ ಧೈರ್ಯ ಹೇಳಲಿಚ್ಚಿಸುತ್ತೇನೆ. 

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕೆ. ಎಂ. ವಿಶ್ವನಾಥ ಮರತೂರ