Article

ಸಮಾಜಮುಖಿ ಸುಂದರ ’ಅಸ್ಪಷ್ಟ’ತೆ...!

ಕ್ಷಿತಿಜ್ ಬೀದರ್ ರವರು ಬೀದರ್ ಜಿಲ್ಲೆಯ ಸಾಹಿತ್ಯ ಮಣ್ಣಿನಲ್ಲಿ ಅರಳಿದ ವಿಶೇಷ ಹೂವು .  ಪ್ರತಿಯೊಂದಕ್ಕೂ ಪ್ರಶ್ನಿಸುವ, ತನ್ನೊಳಗೆ ಏನೋ ಹುಡುಕುವ ಸ್ವಭಾವ....! ರೇಷ್ಮೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಉನ್ನತ ಅಧಿಕಾರಿಯಾಗಿ ನಿವೃತ್ತಿಯಾದರೂ ಪ್ರವೃತ್ತಿಯಲ್ಲಿ ಅದೇ ದೈವತ್ವದ ಜಿಜ್ಞಾಸೆ ...! ತನಗೆ ತೋಚಿದ ರೀತಿಯಲ್ಲಿ ಬದುಕು ಕಟ್ಟಿಕೊಂಡ ಅಪರೂಪದ ವ್ಯಕ್ತಿತ್ವ .

ಕಾಲಗರ್ಭದಲ್ಲಿ ವರ್ಷಗಳು ಮಾಸಿಹೋದ ಹಾಗೆ ಉದ್ಯೋಗಿಯಾಗಿ ಬೇರೆ ಬೇರೆ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಾ  ತನ್ನತನ ಮಾತ್ರ ಬಿಟ್ಟು ಕೊಡದ ಅಪ್ಪಟ ಸ್ವಾಭಿಮಾನಿ.‌ ತಮ್ಮ ಕಾವ್ಯನಾಮದ ಮುಂದೆ ಬೀದರ್ ಅನ್ವರ್ಥಕ ನಾಮ ಇರುವುದು ಅಕ್ಷರಶಃ ಸತ್ಯ. ಕಥೆಗಳ ಮೂಲಕ ರಾಜ್ಯ ಮಟ್ಟದಲ್ಲಿ ವಿಶೇಷ ಹೆಸರು ಮಾಡಿದನ್ನು ಯಾರಿಂದಲೂ ಅಳಿಸಲಾಗದು. ಕ್ಷಿತಿಜ್ ಬೀದರ್ ಬರೆಯದ ಕನ್ನಡದ ಪತ್ರಿಕೆಗಳಿಲ್ಲ.ರಾಜ್ಯ ಮಟ್ಟದ ಬಹುತೇಕ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟಗೊಂಡಿವೆ. ಅಭಿಶಾಪವೆಂಬಂತೆ ಇವರು ಬೀದರಿಗೆ ಮಾತ್ರ ಅಪರಿಚಿತರಾಗಿಯೇ ಉಳಿದಿರುವುದು ದುರ್ದೈವದ ಸಂಗತಿ.

ಇವರ ನೇರ ನುಡಿ, ಸ್ಪಷ್ಟ ನಿಲುವು, ತಾನು ನಂಬಿಕೊಂಡು ಬಂದ ವಿಷಯಗಳಿಗೆ ಸೀಮಿತವಾಗಿರುವುದು, ಯಾರೊಂದಿಗೂ ತನ್ನನ್ನು ವೈಭವಿಕರಿಸಿಕೊಳ್ಳದಿರುವುದು ಅವರ ಅಂತಃಸ್ವಭಾವ. ಶ್ರೇಷ್ಠ ಕತೆಗಾರರ ಸಾಲಿನಲ್ಲಿ ನಿಲ್ಲುವ ವಿಶಿಷ್ಟ ಕತೆಗಾರರು.

ಬೀದರ್ ಜಿಲ್ಲೆಯು ಕರ್ನಾಟಕ ರಾಜ್ಯದ ತುತ್ತ ತುದಿಯ ಜಿಲ್ಲೆ. ನಕಾಶೆಯಲ್ಲಿ ಕಿರೀಟಪ್ರಾಯದಂತಿರುವ ಈ ಜಿಲ್ಲೆ ಸಾಹಿತ್ಯಕವಾಗಿ ಇತ್ತೀಚೆಗೆ ಪ್ರಗತಿ ಹೊಂದಿದ್ದರೂ ಕಾದಂಬರಿಯ ಕ್ಷೇತ್ರ ಮಾತ್ರ ಇವತ್ತಿಗೂ ಬಡವಾಗಿರುವುದು ವಿಚಾರಯೋಗ್ಯ. ಜಿಲ್ಲೆಯಲ್ಲಿ ಬೆರಳೆಣಿಕೆಯ  ಜನ ಮಾತ್ರ ಕಾದಂಬರಿಕಾರರು. ಅವರಲ್ಲಿ ಬೀದರ್ ಜಿಲ್ಲೆಯವರಾದ ಕ್ಷಿತಿಜ್ ಬೀದರ್ ಮೇಲ್ಕಾಣಿಸಿದ ಎಲ್ಲ ಕಾದಂಬರಿಕಾರರಿಗಿಂತಲೂ ಅತಿ ಹೆಚ್ಚು 14 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಮತ್ತೆ ಪ್ರಥಮ ಬಾರಿಗೆ ಇವರ ಕಾದಂಬರಿಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿರುವುದು ಗಮನಾರ್ಹ ಸಂಗತಿ.

ಕ್ಷಿತಿಜ್ ಬೀದರ್  ಇತ್ತೀಚೆಗೆ ತಾತ್ವಿಕ ನೆಲೆಯಲ್ಲಿ ಬಾಳಲು ಪ್ರಯತ್ನಿಸುತ್ತಿದ್ದಾರೆ. ಬಯಲಿನ ಜಿಜ್ಞಾಸೆಯತ್ತ ಒಲವು ತೋರಿರುವ ಇವರ ಬರಹಗಳಲ್ಲಿ ಈಗಲೂ ಗಟ್ಟಿತನವಿದೆ. ಶಬ್ದ ಭಂಡಾರವಿದೆ. ಅಧ್ಯಯನವಿದೆ. ಶರಣರ ವಚನಗಳ ಗೂಡಾರ್ಥದಲ್ಲಿ ಅಧ್ಯಯನಶೀಲರಾದಂತೆ ಕಾದಂಬರಿಯಲ್ಲಿಯೂ ಚಿಂತನ ಮಂಥನ ನಡೆದಿರುವುದು ಕಾಣಬಹುದು. ಒಟ್ಟಿನಲ್ಲಿ ಹೇಳುವುದಾದರೆ ಶ್ರೀ ಕ್ಷಿತಿಜ್ ಬೀದರ್  ಓರ್ವ ಯಶಸ್ವಿ ಕಾದಂಬರಿಕಾರ, ಕತೆಗಾರ ಎಂದು ನಿಸ್ಸಂದೇಹವಾಗಿ ಹೇಳಬಹುದು.

’ಅಸ್ಪಷ್ಟ’ ಕಾದಂಬರಿ ಕುರಿತಂತೆ, ವಾಚಕರು ಈ ಕಾದಂಬರಿ ಓದುತ್ತಿದ್ದಂತೆ ಅನೇಕ ಅಸ್ಪಷ್ಟ ವಿಚಾರಗಳು ಬಂದರೆ ಅಚ್ಚರಿಪಡಬೇಕಿಲ್ಲ. ಬೀದರ್ ಜಿಲ್ಲೆಯ ನಿರ್ಣಾ ಮತ್ತು ಮುತ್ತಂಗಿ ವಾಸ್ತವ  ತಾಣಗಳನ್ನು ಬಳಸಿರುವುದು ಮುದ ನೀಡುವಂತಿದೆ. ಮಾಣಿಕ್ ಮತ್ತು ಕಾವೇರಿ ವ್ಯಕ್ತಿತ್ವಗಳು ಒಂದು ರೀತಿಯಾದರೆ ಹರೀಶ್ ಮತ್ತು ಪ್ರಕಾಶರ ಜೀವನ ಶೈಲಿಗಳು ಭಿನ್ನ ಭಿನ್ನ ರೀತಿ. ಇಷ್ಟೇ ಅಲ್ಲದೇ ಹೆಣ್ಣುಗಳಾದರೂ ಜಯಂತಿ ಮತ್ತು ಜ್ಯೋತಿ ಒಂದು ದಕ್ಷಿಣ ದ್ರುವವಾದರೆ ಇನ್ನೊಂದು ಉತ್ತರ ದ್ರುವವಾಗಿ ಇನ್ನೊಂದು ರೀತಿಯಲ್ಲಿ ತೆರೆದುಕೊಳ್ಳುತ್ತವೆ.

ಪ್ರಾರಂಭದಲ್ಲಿ ಪತ್ರಿಕೆ ವಿತರಿಸುವ ಮಾಣಿಕ್ ಕಾವೇರಿ ಮೇಲೆ ಅನುರಕ್ತನಾಗುತ್ತಾನೆ. ಎಂತಹದೋ ಸಂದರ್ಭಗಳಲ್ಲಿ ಅನೇಕ ವಿಷಯಗಳಲ್ಲಿ ಈರ್ವರೂ ಸಮಾಲೋಚಿಸಿಕೊಂಡರೂ ಕಾವೇರಿಯ ಹೆಣ್ತನಕ್ಕೆ ಧಕ್ಕೆಯಾಗದಂತೆ ಮಾಣಿಕ್ ನೋಡಿಕೊಳ್ಳುತ್ತಾನೆ. ಮತ್ತೆ ಮದುವೆಯಾಗುವ ತನ್ನೊಳಗಿನ ಅಭೀಷ್ಟೆಯನ್ನು ವ್ಯಕ್ತಪಡಿಸುತ್ತಾನೆ. ಮತ್ತೆ ಕಾವೇರಿಗೆ ತನ್ನ ಪ್ರೀತಿಸುವಂತೆ ಮಾಡುತ್ತಾನೆ. ಕಾವೇರಿ ತಂದೆ ರಾಮಚಂದ್ರಪ್ಪನ ಆಕ್ಷೇಪಣೆಯ ಮಧ್ಯಯೂ ' ನರ್ಸಿಂಗ್‌ ' ಶಿಕ್ಷಣ ಮುಂದುವರೆಸುತ್ತಾಳೆ. ಇತ್ತ ಅಪ್ಪಾರಾವರ ಮಕ್ಕಳಾದ ಪ್ರಕಾಶ ಮತ್ತು ಹರೀಶ್ರ ಭಿನ್ನ ಸ್ವಭಾವ ಎಂದರೆ ಒಂದಕ್ಕೊಂದು ವೈರುಧ್ಯ. ಪ್ರಕಾಶನು ಸದಾ ಶರಣರ ಬಗ್ಗೆ ಜಿಜ್ಞಾಸೆಯುಳ್ಳವನಾದರೆ ಹರೀಶ್ ಶಿಕ್ಷಣದಲ್ಲಿ ವೈದ್ಯಕೀಯ ಉನ್ನತ ವ್ಯಾಸಂಗ ಮಾಡುತ್ತಿದ್ದರೂ ಹೆಣ್ಣುಗಳ ಬಗ್ಗೆ ಲಾಲಸೆಯುಳ್ಳವನು. ಕಾದಂಬರಿಕಾರರು ಇಲ್ಲಿ ಹೇಳುವಂತೆ' ಬುದ್ಧಿವಂತರು ಎಂದು ಹೇಳಿಕೊಳ್ಳುವವರೆಲ್ಲಾ ಸಾಮಾನ್ಯವಾಗಿ ಬದುಕಿನ ನಿಯಮಗಳಿಗೆ ಅಂಟಿಕೊಳ್ಳುವುದೇ ಇಲ್ಲ. ನೈತಿಕತೆಯನ್ನು ಗಾಳಿಗೆ ತೂರಿಬಿಟ್ಟಿರುತ್ತಾರೆ. ಸ್ವೇಚ್ಛಾಚಾರವೇ ಅವರ ಸ್ವಭಾವವಾಗಿರುತ್ತದೆ. ತಪ್ಪು ಮಾಡಿಯೂ ಪಾಠ ಕಲಿಯುವುದಿಲ್ಲ. ’ಹೀಗೆಂದು ಏಕೆ ಹೇಳಿದರೋ ಗೊತ್ತಿಲ್ಲ. ಅದೇ ರೀತಿ ಹರೀಶ್‌ನ ಬಾಳು ಪೂರ್ವಕ್ಕೆ ಓಡುತ್ತಿದ್ದರೆ ಈತನ ಮನಸ್ಸು ಪಶ್ಚಿಮದತ್ತ ಧಾವಂತ. ಉಗ್ರಪ್ಪನ ಪುತ್ರಿ ಜಯಂತಿ ಧಡೂತಿ ಹೆಣ್ಣು. ಹರೀಶ್‌ನು ಜಯಂತಿಯಲ್ಲಿಯೇ ಪ್ರೀತಿ ಹಚ್ಚಿಕೊಂಡವನ ಬದುಕು ಛಿದ್ರ ಛಿದ್ರವಾಗುತ್ತದೆ. ಜಯಂತಿ ಪತ್ನಿ ಇದ್ದಾಗಲೇ ಹರೀಶ್‌ನು ಬೆಂಗಳೂರಿನಲ್ಲಿ ತನ್ನೊಂದಿಗೆ ವ್ಯಾಸಂಗ ಮಾಡುತ್ತಿರುವ ಅಶ್ವಿನಿಯೊಂದಿಗೆ ಪ್ರೇಮ ಪಾಶದಲ್ಲಿ ಬೀಳುತ್ತಾನೆ. ಈ  ಕಾರಣಕ್ಕೆ ವಿಷಯ ತಿಳಿದ ಜಯಂತಿ ರಾದ್ಧಾಂತ ಮಾಡಿ ತಂದೆ ಉಗ್ರಪ್ಪನ ಮನೆಗೆ ಹೋಗುತ್ತಾಳೆ. ಉಗ್ರಪ್ಪನ ಮಾನಸಿಕ ಕುಬ್ಜತೆಯಿಂದಾಗಿ ಮಗಳ ಬಾಳು ಹಾಳಾಗುತ್ತದೆ. ಜಯಂತಿ ತನ್ನ ಹಿಂದಿನ ಬದುಕನ್ನು ನೆನಪಿಸಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಾಳೆ. ಹೀಗೆ ಹರೀಶ್ನ ಬದುಕು ಮೂರಾಬಟ್ಟೆಯಾಗಿ ಹೊಸದೊಂದು ತಿರುವು ತೆರೆದುಕೊಳ್ಳುತ್ತದೆ. ಇದ್ದಕ್ಕಿದ್ದಂತೆ ಕಾವೇರಿಯ ಪ್ರಿಯಕರ ಮಾಣಿಕ್ ಕಾಣೆಯಾಗುತ್ತಾನೆ. ಕಾವೇರಿ ಮುಂದಿನ ದಿನಗಳಲ್ಲಿ ಹರೀಶ್ನ ಕ್ಲಿನಿಕ್ನಲ್ಲಿ ಕಾರ್ಯನಿರ್ವಹಿಸುತ್ತಾ ಯಾವುದೋ ಸಂದರ್ಭ ಒದಗಿ ಬಂದು ಹರೀಶ್ನೊಂದಿಗೆ ವಿವಾಹವಾಗುತ್ತಾಳೆ. ಕಮಲನಾಥರ ಪುತ್ರಿ ಜ್ಯೋತಿಯೊಂದಿಗೆ ಪ್ರಕಾಶನು ಮದುವೆಯಾಗುತ್ತಾನೆ. ಪ್ರಕಾಶನ ವ್ಯಕ್ತಿತ್ವಕ್ಕೆ ತದ್ವಿರುದ್ಧವಾಗಿ ಜ್ಯೋತಿಯ ನಡೆ ಸಾಗುತ್ತದೆ .

ಇತ್ತ ಕಾವೇರಿಯ ಪ್ರಿಯಕರ ಮಾಣಿಕ್ ಗ್ರಾಮಕ್ಕೆ ಬಂದು ಕಾವೇರಿಗೆ ಭೇಟಿಯಾಗಿ ಅವಳಿಗೆ ಬಲಾತ್ಕಾರ ಮಾಡುತ್ತಾನೆ. ನಂತರ ಕಾವೇರಿಯು ರಾಜಕಾರಣಿ ಉಗ್ರಪ್ಪನ ಕಾಮತೃಷೆಗೆ ಬಲಿಯಾಗುವುದಷ್ಟೆ ಅಲ್ಲದೆ ಅವನ ಹಿಂಬಾಲಕರಿಂದ ಬಲಾತ್ಕಾರಗೊಂಡು ಸಾವನಪ್ಪುತ್ತಾಳೆ. ಜ್ಯೋತಿಯ ಅಸಭ್ಯ ವರ್ತನೆ ಹಾಗೂ ಅವಳ ಕಾಟಕ್ಕೆ ಪ್ರಕಾಶ ರೋಸಿ ಮನೆ ಬಿಟ್ಟು ಪಲಾಯನವಾದಿಯಾಗುತ್ತಾನೆ. ಬೇರೆ ಬೇರೆ ಸಂದರ್ಭಗಳಲ್ಲಿ ಅಪ್ಪಾರಾವ್ ಕಮಲನಾಥ, ರಾಮಚಂದ್ರಪ್ಪರೆಲ್ಲಾ ಸಾವನಪ್ಪುತ್ತಾರೆ. ಯಾವೊಂದು ಕುಟುಂಬಗಳು ಯಶಸ್ವಿಯಾಗದೇ ಎಲ್ಲವೂ ಅಸ್ಪಷ್ಟ .

ಲೇಖಕರು ಈ ಕಾದಂಬರಿಯಲ್ಲಿ ಅನೇಕ ಕಡೆಗಳಲ್ಲಿ 'ಅಸ್ಪಷ್ಟ 'ಶಬ್ದ ಉಚ್ಛರಿಸಿದ್ದಾರೆ. ವಿವಿಧ ಕಡೆ ಕಾದಂಬರಿಯಲ್ಲಿ ಸಾಕಷ್ಟು ಅನುಭವದ ಮಾತುಗಳು ಗಾದೆಯ ಮಾತುಗಳು ಬಳಸಿದ್ದಾರೆ. ಕಮಲನಾಥ ಮತ್ತು ಪ್ರಕಾಶನ ಮಧ್ಯೆ ನಡೆಯುವ ಶರಣರ ವಚನಗಳ ಅಂತರಂಗದ ಮತ್ತು ಸಿದ್ಧಾಂತದ ಚರ್ಚೆ, ಜಿಜ್ಞಾಸೆ ವಾಚಕರಿಗೂ ಹೌದೇ ಹೀಗೆ...! ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಇಲ್ಲಿ ಪ್ರಸ್ತುತ ಸಮಾಜದಲ್ಲಿ ಧರ್ಮದ ಆಗುಹೋಗುಗಳು ಮತ್ತು ವಚನಗಳ ತಿರುಚುವಿಕೆ ಎಲ್ಲವೂ ಓದುಗರ ಚಿಂತನೆಗೆ ಗ್ರಾಸವಾಗುತ್ತದೆ. ಅಲ್ಲಲ್ಲಿ ಕಥೆಯ ತಿರುವಿನಲ್ಲಿ ಶರಣರ ವಚನಗಳನ್ನು ಪ್ರಕಾಶ ಮತ್ತು ಕಮಲನಾಥರ ಮೂಲಕ ಸಮರ್ಥವಾಗಿ ಚರ್ಚೆಗೆ ಬಳಸಿಕೊಂಡಿದ್ದು ಮೆಚ್ಚಲೇ ಬೇಕಾದುದು. ಈ ಮೂಲಕ ಲೇಖಕರು ಆ ಧರ್ಮದ ಬಗ್ಗೆ ಚಿಂತನೆ ಮತ್ತು ವಚನಗಳ ಬಗ್ಗೆ ತಮ್ಮೊಳಗೆ ನಡೆದಿರುವ ಆಳವಾದ ಚಿಂತನೆಗಳು ಓದುಗರಿಗೆ ಸ್ಪಷ್ಟವಾಗಿ ಗೋಚರಿಸುತ್ತವೆ. ಸಾಹಿತಿ ಕಮಲನಾಥರು ವಚನಗಳ ಬಗ್ಗೆ ವಿಪುಲವಾದ ಅಧ್ಯಯನ ಮಾಡಿದವರಲ್ಲದೆ ಆ ಧರ್ಮದ ಬಗ್ಗೆ ಅಪಾರ ನಂಬಿಕೆ ಇಟ್ಟವರಿಗೆ ತಂದೆಯೊಂದಿಗೆ ಮತ್ತು ಪತಿಯೊಂದಿಗೆ ಜ್ಯೋತಿ ಅಸಭ್ಯವಾಗಿ ವರ್ತಿಸುವುದು ಕಂಡರೆ ಅವಳೇಕೆ ಬದಲಾಗಲಿಲ್ಲ ಎಂಬುದು ಓದುಗರಿಗೆ ಕಾಡುತ್ತದೆ.ಅವಳ ವಿಚಾರಗಳಿಗೆ ಸಾಕ್ಷಿಯಂತೆ ಜ್ಯೋತಿಯ ಮಗಳು ದೀಕ್ಷಾಳ ಬಾಳ ಪುಟಗಳು ತೆರೆದು ಕೊಳ್ಳುತ್ತವೆ. ಆದರೆ ಮುಂದೆ ಜ್ಯೋತಿಯ ಕಿರಿಯ ಪುತ್ರಿ ಪಲ್ಲವಿಯ ಧಾರ್ಮಿಕ ಪ್ರವೃತ್ತಿಯಿಂದಾಗಿ ಜ್ಯೋತಿ ಬದಲಾಗುತ್ತಾಳೆ. ಆದರೆ ಆಗಲೇ ಜ್ಯೋತಿಯ ಬದುಕು ಕೊನೆಯ ಹಂತಕ್ಕೆ ತಲುಪಿರುತ್ತದೆ.

ಕಾದಂಬರಿಯು ಹೀಗೆ ಅನೇಕ ಸಂದರ್ಭ ಮತ್ತು ಅನೇಕ ಘಟನಾವಳಿಯೊಂದಿಗೆ ಅಸ್ಪಷ್ಟತೆಯಲ್ಲಿ ಮುಕ್ತಾಯ ಹಂತಕ್ಕೆ ತಲುಪುತ್ತದೆ . ಇಡೀ ಕಾದಂಬರಿಯ ತುಂಬಾ ಪಾತ್ರಗಳ ವಿಚಿತ್ರ ಮನೋಭಾವಗಳು. ಎಲ್ಲಿಯೂ ಯಾವ ವ್ಯಕ್ತಿಗೆ ಪೂರಕವೆನಿಸುವ ಸಂದರ್ಭಗಳು ಒದಗಿ ಬರದೇ ಕಾದಂಬರಿ ದುರಂತ ಸಾಗರದತ್ತ ಉರುಳುತ್ತದೆ. ಕೊನೆ ಕ್ಷಣಗಳಲ್ಲಿ ಪಲ್ಲವಿಯಿಂದಾಗಿ ಒಂದಷ್ಟು ಸಮಾಧಾನವೆನಿಸಿದರೂ ಅದು ಓದುಗರ ಮನಸ್ಸಿನಲ್ಲಿ ಬಹಳ ವೇಳೆಯವರೆಗೆ ಮೆಲುಕು ಹಾಕುವುದಿಲ್ಲ. ಒಟ್ಟಿನಲ್ಲಿ ಲೇಖಕರು 'ಅಸ್ಪಷ್ಟ ' ಕಾದಂಬರಿಯ ಹೆಸರು ಸಾರ್ಥಕ ಮಾಡಿದಂತಿದೆ. ಹೊರಗೆ ಅಸ್ಪಷ್ಟ ಅನ್ನಿಸಿದರೂ ವೈಜ್ಞಾನಿಕ ವಿಶ್ಲೇಷಣೆಯಲ್ಲಿ ಸ್ಪಷ್ಠತೆ ಕಾಣುತ್ತದೆ . ಇಲ್ಲಿ ನಾಯಕ ನಾಯಕಿಯರ ಆದರ್ಶಗಳನ್ನು ಜಾಲಾಡಿದರೆ ಒಂದೆಡೆ ಪ್ರಕಾಶ, ಇನ್ನೊಂದೆಡೆ ಕಾವೇರಿಯ ವಿಚಾರಗಳಲ್ಲಿ ಅದನ್ನು ಕಾಣುತ್ತೇವೆ . ಕಾದಂಬರಿ ವಾಚಿಸಿದ ವಾಚಕರಿಗೆ ಕೆಲವು ವಿಚಾರಗಳು ಮಾತ್ರ ಅಸ್ಪಷ್ಟವಾಗಿ ಗೋಚರಿಸುತ್ತವೆ . ಇಂದು ಸಮಾಜದಲ್ಲಿ ನಡೆಯುವ ಸಹಜತೆಗಳಿಗೆ ದರ್ಪಣವಿಟ್ಟಂತೆ ಸುಂದರವಾಗಿ ಕಾದಂಬರಿ ಕಟ್ಟಿಕೊಟ್ಟಿದ್ದಾರೆ. ಇಂಥ ಸಮಾಜಮುಖಿ ಕಾದಂಬರಿ ಬರೆದ ಕ್ಷಿತಿಜ್ ಬೀದರ್  ಅಭಿನಂದನಾರ್ಹರು.

ಪುಸ್ತಕದ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಂ. ಜಿ. ದೇಶಪಾಂಡೆ