Article

ಸಂಗೀತ ಲೋಕಕ್ಕೆ ಕರೆದೊಯ್ಯುವ ಅದ್ಭುತ ಕೃತಿ `ಏನು ಜನ! ಎಂಥ ಗಾನ!

ಅರವಿಂದ ಗಜೇಂದ್ರಗಡಕರ ವಿವಿಧ ರೇಡಿಯೋ ಆಕಾಶವಾಣಿ ಕೇಂದ್ರಗಳಲ್ಲಿ ಸತತವಾಗಿ 56 ವರ್ಷಗಳ ಕಾಲ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದವರು. ಜೊತೆಗೆ ಸಂಗೀತ ಸಂಯೋಜನೆ, ಸಂಗೀತ ವಿಮರ್ಶಕ, ನಿರೂಪಕರಾಗಿ ಕೆಲಸ ಮಾಡಿದಲ್ಲದೆ ಸ್ವತಃ ತಾವು ಕೊಳಲು ವಾದಕರಾಗಿ ಪ್ರಸಿದ್ಧಿ ಪಡೆದಿದ್ದರು. ಸಂಗೀತದ ಆಳವಾದ ಅಧ್ಯಯನ ಮಾಡಿದ್ದ ಇವರು ಸಂಗೀತದ ಬಗ್ಗೆ ನಿರ್ಗಳವಾಗಿ ಮಾತಾಡಬಲ್ಲವರಾಗಿದ್ದರು. ಎಲ್ಲಾಕ್ಕಿಂತ ಹೆಚ್ಚಾಗಿ ಅತ್ಯಂತ ಮಾನವೀಯ ಮೌಲ್ಯವುಳ್ಳ ಸಹೃದಯಿಯಾಗಿದ್ದ ಅರವಿಂದ ಗಜೇಂದ್ರಗಡಕರರವರು ಸಂಗೀತದ, ಸಂಗೀತಗಾರರ ಕುರಿತಾಗಿ 25ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವರು. 

ಇನ್ನು ಇವರು ಬರೆದ ಏನು ಜನ! ಎಂಥ ಗಾನ! ಸಂಗೀತ ಲೋಕಕ್ಕೆ ಕರೆದೊಯ್ಯುವ ಅದ್ಭುತ ಕೃತಿ. ಪ್ರಾರಂಭದಲ್ಲಿ ಇವರು ಬರೆದ “ಹೇ ಸ್ವರಧಮಲ ಧಾರವಾಡ” ಧಾರವಾಡ ಜಿಲ್ಲೆಯವಳಾದ ನನಗೆ ತುಂಬಾ ಅಪ್ಯಾಯಮಾನವಾಗಿ ಕಂಡಿತು. ಮೊದಲೇ ಧಾರವಾಡದ ಬಗ್ಗೆ ಅತೀವ ಪ್ರೀತಿ, ಅಭಿಮಾನವಿರುವ ನನಗೆ ಈ ಕೃತಿ ಓದಿದ ಮೇಲೆ ಮತ್ತಷ್ಟು ಅಭಿಮಾನ ,ಹೆಮ್ಮೆ ಮೂಡಿತು. ಕಾರಣ ಗಜೇಂದ್ರಗಡಕರರವರು ಧಾರವಾಡದ ಪ್ರತಿಭಾವಂತ, ಜಗತ್ಪ್ರಸಿದ್ಧ ಸಂಗೀತಗಾರರಾದ ಭೀಮಸೇನ ಜೋಸಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗೂರು ಮಲ್ಲಿಕಾರ್ಜುನ ಮನ್ಸೂರ್, ಅಲ್ಲದೆ ವರಕವಿ, ಚಿಂತಕ, ದ.ರಾ.ಬೇಂದ್ರೆಯವರ ಬಗ್ಗೆ ನಮಗೆ ಗೊತ್ತಿಲ್ಲದ ಅಪರೂಪದ ಘಟನೆಗಳ ಜೋತೆಗೆ ವ್ಯಕ್ತಿ ಶ್ರೇಷ್ಟತೆ, ಗುಣ ವಿಶೇಷತೆಗಳನ್ನು ಬರೆದಿರುವುದನ್ನು ಈ ಕೃತಿಯಲ್ಲಿ ಕಾಣುತ್ತೇವೆ. ಅಲ್ಲದೆ ಈ ಎಲ್ಲ ಪ್ರಸಿದ್ಧ ಗಾಯಕರು ಹಾಡುವ ರಾಗಗಳ ಬಗ್ಗೆ ಜೀವನ ಶೈಲಿ ಬಗ್ಗೆ ಮನೋಜ್ಞವಾಗಿ ಬರೆದಿದ್ದಾರೆ. 

ಇಷ್ಟೇ ಅಲ್ಲದೆ ಗಜೇಂದ್ರಗಡಕರ ಧಾರವಾಡ, ಪಾಟ್ನಾ, ಪುನಾ, ನಾಗಪುರ, ಮುಂಬಯಿ, ವಾರಣಾಸಿ ಮುಂತಾದ ಕಡೆಗಳಲ್ಲಿ ಬಾನೂಲಿ ಕೇಂದ್ರಗಳಲ್ಲಿ ಪತ್ರಿಕೆಗಳಲ್ಲಿ ಸಂಗೀತದ ಬಗ್ಗೆ, ಸಂಗೀತಗಾರರ ಬಗ್ಗೆ ಸಾಕಷ್ಟು ಒಲವು ಹೊಂದಿದ್ದರಿಂದ ನಮ್ಮ ದೇಶದ ಪ್ರಸಿದ್ಧ ಸಂಗೀತಗಾರರ, ವಾದಕರ ಪರಿಚಯ, ಒಡನಾಟ ಅವರಿಗೆ ಲಭಿಸಿತ್ತು. ಸ್ವಭಾವತ ಸಹೃದಯಿ, ಗುಣ ಸಂಪನ್ನರಾಗಿದ್ದ (ಅವರು ಈ ಕೃತಿಯಲ್ಲಿ ವಿವಿಧ ಪ್ರಸಂಗಗಳಲ್ಲಿ ವರ್ತಿಸಿದ ಅನುಭವಗಳಿಂದ ಗೊತ್ತಾಗಿದೆ) ಕಲಾವಿಧರನ್ನು, ಕಲೆಯನ್ನು ತುಂಬಾ ಪ್ರೀತಿಸಿ, ಗೌರವಿಸುವ ಸ್ವಭಾವದವರಾಗಿದ್ದ ಗಜೇಂದ್ರಗಡರರವರು ಬೇಗನೆ ಸಂಗೀತಗಾರರಿಗೆ, ವಾದಕರಿಗೆ ಆತ್ಮೀಯರಾಗಿ ಅವರ ಗುಣ ಸ್ವಭಾವಗಳನ್ನು ಗುರ್ತಿಸುತ್ತಿದ್ದರೆಂಬುದು ಈ ಕೃತಿಯಿಂದ ತಿಳಿಯುತ್ತದೆ. '

ಅಬ್ಬಾ, ಎಂತಹ ಅದ್ಭುತ ಕಲಾವಿದರು. ನಮ್ಮ ದೇಶದ ಪುಣ್ಯವು ಈ ನೆಲದ ಮಹಿಮೆಯೂ ಸಲೀಸಾಗಿ, ಸುಲಲಿತವಾಗಿ ಸಂಗೀತದ ತರಂಗಗಳನ್ನು ಏಬ್ಬಿಸಿ ಕೇಳುಗರನ್ನು ಸಂಗೀತ ಲೋಕದಲ್ಲಿ ವಿಹರಿಸುವಂತೆ ಮಾಡುವ ಕಲಾವಿದರು. ವಿವಿಧ ಘರಾಣೆಯ ತಮ್ಮದೆ ಶೈಲಿಯ ವಿವಿಧ ರಾಗಗಳನ್ನು ಕರಗತ ಮಾಡಿಕೊಂಡು ಹಾಡುವ, ನುಡಿಸುವ ಕಲಾವಿದರು. ಈ ಕೃತಿಯ ಇನ್ನೊಂದು ವಿಶೇಷವೆಂದರೆ ಕಲೆಯಲ್ಲಿ ತಮ್ಮ ಮಹಿಮೆ ತೋರುವ, ಚಮತ್ಕಾರ ತೊರುವ ಕಲಾವಿದರ ವೈಯುಕ್ತಿಕ ಜೀವನ ಹೇಗೆ ಇರುತ್ತದೆಂಬುದಕ್ಕೆ ಒಂದು ಉತ್ತಮ ಉದಾಹರಣೆ ಶಿವರಾಮ ಬುವ. ಬೆಳಗಾವಿಯ ಟಾಪ್‍ಗ್ರೇಡ್ ಆರ್ಟಿಸ್ಟ್.-ಸರ್ವೋಚ್ಚ ದರ್ಜೆ ಸಂಗೀತ ಕಲಾವಿದರಾದ ಶಿವರಾಮು ಬುವಾ ವಝೆ ಎಂತಹ ವಿಕ್ಷಿಪ್ತ ಕಲಾವಿದರಾಗಿದ್ದರೆಂದರೆ ತಿಂಗಳಿಗೊಮ್ಮೆ ಅವರಿಗೆ ವಹಿಸಿದ್ದ ರೇಡಿಯೋ ಕಾರ್ಯಕ್ರಮ ಕೊಟ್ಟರಾಯಿತು. ಅದರಿಂದ ಬರುವ ದುಡ್ಡನ್ನು ಆ ತಿಂಗಳ ಕಿರಾಣಿ ದಿನಸಿಗೆ, ಮನೆಮುಂದಿನ ಹೊಟೆಲ್ಲಿಗೆ ಕಟ್ಟುವುದು. ಅವರು ಮನಸ್ಸು ಮಾಡಿದ್ದರೆ ಜಗತ್ಪ್ರಸಿದ್ದ ಕಲಾವಿದರಾಗುತ್ತಿದ್ದರು. ಬೆಳಗಾವಿಯ ಪ್ರಸಿದ್ಧ ‘ಆರ್ಟ್ ಸರ್ಕಲ್’ ಸಂಸ್ಥೆಗೆ ಬರುವ ದೇಶದ ಪ್ರಸಿದ್ಧ ಕಲಾವಿದರು. ಇವರನ್ನು ಭೇಟಿಯಾಗಿ ಇವರ ಆಶಿರ್ವಾದ ತೆಗೆದುಕೊಳ್ಳದೆ ಹೋಗುತ್ತಿದ್ದಿಲ್ಲ. ಅಂತಹ ಪ್ರತಿಭಾವಂತ ಮೇರು ಕಲಾವಿದ ದಟ್ಟ ದಾರಿದ್ರದಲ್ಲಿ, ಹೆಂಡತಿ ಮಕ್ಕಳನ್ನು ಕಷ್ಟ ಕಾರ್ಪಣ್ಯದಲ್ಲಿರಿಸಿ ಸ್ಥಿತಪ್ರಜ್ಞರಂತೆ, ವಿರಾಗಿಯಂತೆ ಬಾಳುತ್ತಿದ್ದದ್ದು ಕಂಡು ಆಶ್ಚರ್ಯವಾಗುವುದು. ಅವರಿಗೆ ಕಲೆ ಆತ್ಮತೃಪ್ತಿಗಾಗಿ ಇತ್ತೆ ವಿನಃ ಹಣ, ಕೀರ್ತಿಗೆ ಇರಲಿಲ್ಲ. ಹಾಗಿದ್ದರೆ ಅವರೂ ಎಷ್ಟೊ ಗಳಿಸುತ್ತಿದ್ದರೂ ಏನೂ! ಹೀಗೆ ಈ ಕೃತಿ ಓದಲೇಬೇಕಾದ ಅತ್ಯಂತ ಮನತಟ್ಟುವ ಘಟನೆಗಳನ್ನು ಒಳಗೊಂಡಿದೆ. 

ಧಾರವಾಡದ ಕಲಾವಿದರಲ್ಲದೆ ದೇಶದ ಪ್ರಸಿದ್ಧ ಕಲಾವಿದರಾದ ಬಡೆ ಗುಲಾಮ ಅಲಿಖಾನ, ಬಿಸ್ಮಿಲ್ಲಾಖಾನ, ವಿಲಾಯತಖಾನ, ರವಿಶಂಕರ, ಕಿಶೋರಿ ಅಮೋನಕರ್ ,ಹರಿಪ್ರಸಾದ ಚೌರಾಸಿಯಾ, ಯಹೋದಿ ಮೆನುಹಿನ್ ಮುಂತಾದ ಅದ್ಬುತ ಕಲಾವಿದರ ಕಲೆ, ಶೈಲಿ, ಜೀವನಕ್ರಮ, ಅವರ ದೊಡ್ಡತನ (ಕೆಲವೊಮ್ಮೆ ಸಣ್ಣತನ) ಅವರ ಸಂಗೀತ ಮಾಂತ್ರಿಕತೆಯ ಬಗ್ಗೆ ಈ ಕೃತಿ ಓದಿಯೇ ತಿಳಿಯಬೇಕು. 

ಹೀಗೆ ಅನೇಕ ಕಲಾವಿದರ ಬಗ್ಗೆ ತಿಳಿಸುತ್ತಾ ನಮ್ಮ ದೇಶದ ಸಂಗೀತ ಪರಂಪರೆಯ ಸವಿಸ್ತಾರವಾದ ಪರಿಚಯವನ್ನು ಗಜೇಂದ್ರಗಡರವರು ಮಾಡಿಕೊಟ್ಟಿದ್ದಾರೆ. ಸಂಗೀತದಿಂದ ಆಗುವ ಆನಂದ, ಶಾಂತಿ ಯಾವುದರಿಂದಲೂ ಸಿಗದು. ಅಷ್ಟೊಂದು ಶಕ್ತಿ, ತಾಕತ್ತು ಸಂಗೀತಕ್ಕಿದೆ ಎಂಬುದು ನನಗರಿವಾಯಿತು. ಈ ಕೃತಿ ಓದಿದ ಮೇಲೆ ನಾನು ಶಾಸ್ತ್ರೀಯ ಸಂಗೀತ, ಕೊಳಲು ವಾದನ ಕೇಳುವ ಅಭಿರುಚಿ ಬೆಳೆಸಿಕೊಂಡಿದ್ದೇನೆ. ಅಂತಹ ಪ್ರಭಾವ ಈ ಕೃತಿಯಿಂದ ನನಗಾಗಿದೆ. ಎಲ್ಲರಿಗೂ ಖಂಡಿತಾ  ಪ್ರಭಾವ ಬೀರುತ್ತದೆ ಎಂದು ನನ್ನ ಭಾವನೆ. ಮತ್ಯಾಕೆ ತಡ ಎಲ್ಲರೂ ಈ ಕೃತಿ ತಪ್ಪದೇ ಓದಿ.

ಲಕ್ಷ್ಮೀದೇವಿ ಪತ್ತಾರ

Comments