Article

ಮಮತಾರ ಮೇಣದ ಬತ್ತಿ ’ಸಂತೆ ಸರಕು’

ಸಾಧಾರಣ ಹಿನ್ನೆಲೆಯ ಕುಟುಂಬವಿದ್ದರೇನಂತೆ- ಅಲ್ಲಿನ ಜೀವವೊಂದು ಕವಿಯಾಗಿ ಅಕ್ಷರಗಳ ಮೂಲಕವೇ ಕವಿಯುವುದು ಸಾಮಾನ್ಯದ ವಿಷಯವೇನಲ್ಲ. ಆಕಾಂಕ್ಷೆಯ ಪುಟ್ಟ ಗೂಡೊಳಗೆ ಕುಳಿತುಕೊಂಡು ಜಗವಿಸ್ತಾರದ `ಸಂತೆ ಸರಕ’ನ್ನು ಸೃಷ್ಟಿಸುವುದಕ್ಕೆ ನಿಜವಾದ ಛಾತಿ ಬೇಕು, ರೀತಿ ನೀತಿಯೂ ಬೇಕು. ಎಲ್ಲದರ ಜೊತೆ ಅಕ್ಷರವನ್ನು ಹೃದಯದ ಪದವಾಗಿಸುವ ಪ್ರೀತಿಯೂ ಬೇಕು. ಇಲ್ಲಿ ಹೇಳ ಹೊರಟಿರುವುದು ಬಿ.ಎ.ಮಮತಾ ಅರಸೀಕೆರೆಯವರ `ಸಂತೆ ಸರಕು’ ಕವಿತೆಗಳ ಸಂಕಲನದ ಬಗ್ಗೆ. ಇದು ಅವರ ಪ್ರಥಮ ಕೃತಿ ಕೂಡ.

ಸೇರುವ ಸಂತೆಯಲ್ಲಿ ಸರಕೇ ಸರಿಯಿಲ್ಲದಿದ್ದರೆ ಅದಕ್ಕೆ ಬೆಲೆಯಾದರೂ ಎಲ್ಲಿರುತ್ತೆ? ಆದರೆ, ಮಮತಾ ಬಹಳ ಎಚ್ಚರಿಕೆಯಿಂದ, ಸೂಕ್ಷ್ಮತೆಯಿಂದ ಕವಿತೆಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಪ್ರದಾಯ ಮೀರುವ ಮೂಲಕ ತಮ್ಮದೇ ಆಜಾಂದಿತನ ಹುಡುಕಿಕೊಳ್ಳುವ ಮಮತಾರಂತೆಯೇ ಅವರ ಕವಿತೆಗಳು ಕಂಡುಬರುತ್ತವೆ. ಇಲ್ಲಿ ಒಟ್ಟು 40 ಕವಿತೆಗಳಿವೆ. ಹೃದಯ ಪಿಸುಗುಟ್ಟಿದಂತೆ ಕವಿತೆ ಆರಂಭಿಸಿ, ಜಿಗಿಜಿಗಿಯೆ ಬಾಲೆ ಎಂದು ಜಿಗಿಜಿಗಿಯುತ್ತಾ ಕೃಷ್ಣನಿಂದ ಕಿತ್ತುಕೊಂಡಂತೆ ರಾಧೆ ಕೊಳಲನು ತಾನೇ ನುಡಿಸುತ್ತಾ ಸಾಗುವಂತೆ ಮಮತಾರ ಪದ್ಯಗಳ ಜರ್ನಿ ಸಾಗುತ್ತದೆ. ಮಹತ್ವದ ಕವಿ ಚಂಪಾ ಕೂಡ ಹಿಂದಕ್ಕೊಂದು ನುಡಿ ಬರೆದು ಮಮತಾ ಮಹತ್ವವನ್ನು ಸಾರಿದ್ದಾರೆ- `ಕಾಲ ಕೆಳಗಿನ ಕೆಂಡ, ಕಾಲು ಪುಟಿಯುತ್ತಿದ್ದರೆ ಎಂದೂ ಸುಡಲಾರದು. ಅಂತಹ ಲುಟುಪುಟು ನಡಿಗೆ ಮಮತಾ ಕಾವ್ಯಕ್ಕೆ ಇದೆ’. ಹೌದು, ನಾವು ಹೆಜ್ಜೆಯಿಡುತ್ತಿರುವ ಹಾದಿಯಲ್ಲೆಲ್ಲ ಕೆಂಡವೋ ಕೆಂಡ; ಅಸಮಾನತೆಯ ಕೆಂಡ, ಕೋಮುವಾದದ ಕೆಂಡ, ಅತೀ ಜಾತೀಯತೆಯ ಕೆಂಡ. ಕವಿ ಈ ಕೆಂಡಗಳ ಮೇಲೆ ಕಾಲಿಟ್ಟುಕೊಂಡೇ, ಕೆಂಡ ತಾಕದಂತೆ ಪುಟಿಪುಟಿಯುತ್ತಲೇ ಕಾವ್ಯ ಜಗತ್ತಿನ ತಂಗಾಳಿಯನ್ನು ಹರಡಬೇಕಿದೆ. ಮಮತಾ ಇಲ್ಲಿ ಆ ಪ್ರಯತ್ನ ಮಾಡಿದ್ದಾರೆ.

ದೇಶ ಸುತ್ತುವುದು, ಹಾಗೆ ಸುತ್ತುತ್ತಲೇ ರಂಗಭೂಮಿಯಲ್ಲಿ ತಲ್ಲೀನವಾಗೋದು, ಬೀದಿ ಬೀದಿಗಳಲ್ಲಿ ನಾಟಕ ಪ್ರದರ್ಶನ ಮಾಡೋದು ಮಮತಾರ ಜೀವನ ಶೈಲಿ. ಕವಿಗೆ ತಾನು ಬರೆದಿದ್ದೆಲ್ಲ ಕವಿತೆನಾ? ತಾನು ಕವಿಯಾ? ಎಂಬ ಅನುಮಾನ ಕಾಡುವುದು ಸಹಜ. ಈ ಸಹಜ ಅನುಮಾನ ಕವಿಯಾಗಲು ಹೊರಟ ಮಮತಾರಿಗೂ ಕಾಡುತ್ತಿದೆ. ಆ ಕಾಡುವಿಕೆಯಿಂದಲೇ ಕವಿತೆಗಳು ಗರ್ಭಕಟ್ಟಿ ಫಲದಾಯಕ ಫಲಿತಾಂಶ ನೀಡಿದಂತಿವೆ. ನವ್ಯ, ನವೋದಯ, ದಲಿತ, ಬಂಡಾಯಗಳ ವರ್ತುಲಗಳಾಚೆ ಮಮತಾ ನಿಂತಂತಿದೆ. ಇಲ್ಲಿನ ಬಹುತೇಕ ಕವಿತೆಗಳಿಗೆ `ವರ್ತುಲ’ ಬಂಧನಗಳಿಲ್ಲ; ಹಾಗಂತ, ಸ್ವೇಚ್ಛಾಚಾರವೂ ಕಾಣುವುದಿಲ್ಲ. ಸಾಮಾಜಿಕವಾಗಿ ಚಿಂತಿಸುವುದೇ ಒಂದು ಮುಖವಾಡವಾಗಿರುವ ಈ ಹೊತ್ತಿನಲ್ಲಿ ಆ ಸಮಾಜದ್ದೇ ಒಂದು ನಿಜಮುಖವಾಗಿಬಿಡುವ ತಹತಹದಲ್ಲಿ ಮಮತಾ ಕವಿತೆಯಿಂದ ಕವಿತೆಗೆ ಸಾಗುತ್ತಾರೆ.

`ಎದೆಯ ಮೇಲೆ ಮಲಗಿಬಿಡು
ಒಳ್ಳೆ ನಿದ್ದೆ ಬರಲಿ
ಕಣ್ಣಂಚಿನ ಹನಿಯು ಕರಗಿ
ಕನಸ ಹೆಣೆದು ತರಲಿ’ – ಇದು ಮಮತಾ ಕವಿತೆಗಳಲ್ಲಿ ಕಾಣಬರುವ ಮಮಕಾರ, ಮಮಕಾರದಂತೆಯೇ ಹಾಹಾಕಾರವಿದೆಯಿಲ್ಲಿ.

`ಕಳ್ಳ ನೋಟಗಳು ಹುಸಿ ಅಹಂಗಳು ಒಪ್ಪುವುದಿಲ್ಲ ನಮಗೆ’ – ಎಂದು ನೇರವಾಗಿ ಹೇಳಿಬಿಡುವ ಎದೆಗಾರಿಕೆಯ ಪದ್ಯಗಳು ಇಲ್ಲಿ ಹೆಚ್ಚಾಗಿಯೇ ಓದಲು ಸಿಗುತ್ತವೆ. ಕವಿತೆ ನಾಲಿಗೆಗೆ ದಕ್ಕುವಂತಿರಬೇಕೋ? ಹೃದಯಕ್ಕೆ ಹೊಕ್ಕುವಂತಿರಬೇಕೋ? ಎಂಬ ಪ್ರಶ್ನೆಗೆ ಮಮತಾರ ಒಟ್ಟಾರೆ ಕವಿತೆಗಳು ಹೇಳುವ ಉತ್ತರ- ನಾಲಿಗೆಗೆ ದಕ್ಕಿದಂತೆಯೂ, ಹೃದಯಕ್ಕೆ ಹೊಕ್ಕಿದಂತೆಯೂ ಇರಬೇಕು ಎಂದು!

ರಂಗಭೂಮಿಯ ಸಖ್ಯದಲ್ಲಿ ಕವಿ ಮಮತಾ ಇರುವುದರಿಂದ ಅವರ ಕವಿತೆಗಳು ಪ್ರೇಕ್ಷಕಮುಖಿಯಾಗಿಯೂ, ವಾಚ್ಯತೆಯ ಭಾರದೊಂದಿಗೆ ಕೆಲವೊಮ್ಮೆ ನರಳುತ್ತವೆ; ಸೆಗಣಿ ಗೂಡು ಕಲ್ಲಿನ ಮನೆಯು- ಕವಿತೆಯ `ಸಿದ್ಧ ಸೂತ್ರ ಬದಲಾಗಬೇಕು ಅಜ್ಜಿ ಕತೆಯಲ್ಲಿ ಅರಿವು ಜೊತೆಯಾಗಬೇಕು ಹೊಸ ಕತೆಗಳ ಬರೆಯಬೇಕು ಅಕ್ಷರ ಲೋಕದಲ್ಲಿ’ – ಇಲ್ಲಿ ಕಾವ್ಯ ತನ್ನ ಗುಣವನ್ನು ಋಣದತ್ತ ವಾಲಿಸಿಬಿಡುತ್ತದೆ. ಇಂಥ ಕಡೆಗಳಲ್ಲಿ ಕವಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ಸಾಮಾನ್ಯ ಎಂಬುದನ್ನು ಅಸಾಮಾನ್ಯ ಮಾಡುವುದೇ ಕಾವ್ಯದ ಗುಣವಾಗಿರುವಾಗ ಸಂತೆಗೆಂದು ಮೊಳ ಕವಿತೆ ಹೆಣೆಯಲು ಹೋಗಲೇಬಾರದು. ಕಾವ್ಯವೆಂಬುದು ಮಹಾಮಯೆ, ಅದೊಂದು ಹುಣ್ಣಿಮೆ ಇದ್ದಂಗೆ; ಅದೊಂದು ಅಮಾವಾಸ್ಯೆ ಇದ್ದಂಗೆ ಎಂದೆಲ್ಲಾ ಬಣ್ಣಿಸುವುದರಿಂದ ಕೆಂಗೆಟ್ಟಿರುವ ದಾರಿಯನ್ನು ಸರಿದಾರಿಗೆ ತರಲು ಸಾಧ್ಯವಾಗುವುದಿಲ್ಲ. ಕೂಡಿಟ್ಟ ಹಕ್ಕಿಯನ್ನು ಹೊರಬಿಟ್ಟೇ ನೋಡಬೇಕು. ಗಾಢ ಒಂಟಿತನದ ಭಾವಗಳನ್ನು, ರೆಕ್ಕೆಪುಕ್ಕ ಕಟ್ಟಿಕೊಂಡು ಏರಿ ದಾಟುವ ಪ್ರಯತ್ನವೇ ಈ ಒಟ್ಟಾರೆ ಕವಿತೆಗಳ ಗುರಿ- ಅದುವೇ `ಸಂತೆಯ ಸರಕು’. ಚಂಪಾರವರು ಈ ಕೃತಿಯ ಹಿನ್ನುಡಿಯಲ್ಲಿ ಮಾತೊಂದು ಬರೆದಿದ್ದಾರೆ. ಅದು ಮಮತಾ ಅರಸೀಕೆರೆಯವರಿಗೆ ಮಾತ್ರ ಸೀಮಿತವಾಗಿ ಹೇಳಿದಂತೆ ಕಾಣುವುದಿಲ್ಲ. ಈಗೀಗ ಬರೆಯುತ್ತಿರುವ ಕವಿಗಳಿಗೆ ಅವರ ಮಾತುಗಳು ಕೈಮರದಂತಿವೆ;


`ಕಳೆದ ಒಂದು ದಶಕದಲ್ಲಿ ಬರುತ್ತಿರುವ ಹೊಸ ಪೀಳಿಗೆಯ ಕಾವ್ಯ ಒಂದು ಬಗೆಯ ಮೇಘ ಸ್ಫೋಟದ ರೀತಿಯಲ್ಲಿ ಸುರಿಯುತ್ತ ಒಂದು ಗೊಂದಲದ ಪರಿಸರ ನಿರ್ಮಿಸುವಂತೆ ತೋರುತ್ತಿದೆ. ರಾಜಮಾರ್ಗಗಳು ಕುಸಿದು ಹೋಗಿ ಕವಿಗಳು ತಮ್ಮ ತಮ್ಮ ಮೇಣದ ಬತ್ತಿಗಳೊಂದಿಗೆ ತಮ್ಮ ದಾರಿಗಾಗಿ ತಡಕಾಡುತ್ತಿದ್ದಾರೆ...’ ಹೌದಲ್ಲವೇ !

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ  

 

ಶಿ.ಜು ಪಾಶ