Article

’ಸರಸಮ್ಮನ ಸಮಾಧಿ’ ನಾ ಕಂಡಂತೆ

ಈ ಕಾದಂಬರಿಯಲ್ಲಿ ಬರುವಂತಹ ಪ್ರತಿಯೊಂದು ಪಾತ್ರವೂ ಸಹೃದಯನಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತವೆ. ಸ್ತ್ರೀಯ ಮನಸ್ಸು ಮತ್ತು ಶರೀರಗಳೆರಡೂ ತನ್ನ ಅಡಿಯಾಳಾಗಿರಲು ಬಯಸುವ ಗಂಡು ಆಕೆಯ ಸ್ವತಂತ್ರ ಅಸ್ತಿತ್ವದ ಕಲ್ಪನೆಯನ್ನೂ ಸಹಿಸಲಾರದಷ್ಟು ಸ್ವಾರ್ಥಿಯಾಗಿರುತ್ತಾನೆ ಎಂಬುದನ್ನು ಇಲ್ಲಿ ಚಿತ್ರಿಸಲಾಗಿದೆ. ಕಾದಂಬರಿಯಲ್ಲಿ ನಾಯಕ, ನಾಯಕಿ ಎಂದು ಯಾವೊಂದು ಪಾತ್ರವನ್ನೂ ನಿಖರವಾಗಿ ಹೇಳಲಾಗದು. "ಇಲ್ಲಿ ಯಾರೂ ಮುಖ್ಯರಲ್ಲ,ಯಾರೂ ಅಮುಖ್ಯರಲ್ಲ" ಎಂಬ ಕುವೆಂಪು ಅವರ ಮಾತು ಪ್ರಸ್ತುತವೆನಿಸುತ್ತದೆ. ಸರಸಮ್ಮ, ನೀಲಾಚಲಯ್ಯ, ಅಡಾಉಡಿ ಚಂದ್ರಯ್ಯ, ಬೆಳ್ಯಕ್ಕ, ಸುನಾಲಿನಿ, ಜಲಜಾಕ್ಷಿ ಹಿರಣ್ಯ, ಭಾಗೀರಥಿ, ನಾಗವೇಣಿ, ಸೀತಾರಾಮ ಈ ಎಲ್ಲ ಪಾತ್ರಗಳೂ ತಮ್ಮದೇ ಆದ ಸ್ವತಂತ್ರ ಅಸ್ತಿತ್ವದ ವ್ಯಕ್ತಿಗಳಾಗಿ ಕಾಣಿಸುತ್ತವೆ. ಹಾಗೆ ನೋಡಿದರೆ ಚಂದ್ರಯ್ಯ ನನಗೆ ಅತ್ಯಂತ ಆಪ್ಯಾಯಮಾನವಾಗಿ ಕಾಣಿಸುತ್ತಾನೆ. ಚಂದ್ರಯ್ಯನ ಪಾತ್ರಕ್ಕೂ ಮುಂಚಿನ ಕಥೆ ಸಪ್ಪೆ ಎನಿಸಿದರೆ ಆತನ ಪ್ರವೇಶದ ನಂತರವೇ ಕಥೆ ಹೆಚ್ಚು ಕುತೂಹಲವಾಗಿ ಓದಿಸಿಕೊಳ್ಳುತ್ತದ್ದೆ. ಮನುಷ್ಯರಷ್ಟೇ ಅಲ್ಲದೇ ಅಸಂಗತ ದೆವ್ವದ ಪಾತ್ರವೂ ಬರುತ್ತದೆ. ಪ್ರೇತವಾದ ಬೆಳ್ಯಕ್ಕನ ರೂಪು ಸೌಂದರ್ಯವನ್ನು ವಿವರಿಸುವ ಈಶ್ವರ ಭಟ್ಟರು ಮನಸ್ಸು, ದೇಹ ಹಾಗೂ ದಾಂಪತ್ಯದ ಕುರಿತು ಮಾತನಾಡುತ್ತಾರೆ. ಆ ಮಾತುಗಳು ಈಗಲೂ ಬದುಕಿಗೆ ಹತ್ತಿರವಾದುವುಗಳಾಗಿವೆ. ಮನುಷ್ಯನೂ ಒಂದು ರೀತಿಯ ಗೂಳಿಯೇ ಎಂದು ಹೇಳಿ ಚಂದ್ರಯ್ಯ "ಭಟ್ಟರೇ ಸಿಟ್ಟು ಮಾಡಬೇಡಿ ನಿಮ್ಮನ್ನೇ ನೀವು ಕೇಳಿ ಎಷ್ಟು ಒಲವಿನಿಂದ ನಿಮ್ಮವಳೊಂದಿಗೆ ಬಾಳಿದ್ದೀರಿ.ಅವರಿಗೆ ನಿಮ್ಮಲ್ಲಿ ಎಷ್ಟು ಒಲವಿದೆ, ಶಾಸ್ರ್ತದ ಅಥವಾ ನರಕದ ಹೆದರಿಕೆಯಿಂದಲೋ ನೀವು ದಾಂಪತ್ಯದ ಆಚೆ ಕಾಲಿಟ್ಟಿರಲಾರಿರಿ" ಎಂದಾಗ ಭಟ್ಟರು ಕೂಡ ಅದು ಸಹಜ ಎನ್ನುವಂತೆ ಮದುವೆಯಾದೊಡನೆಯೇ ಮನಸ್ಸು ಕೂಡುತ್ತದೆಯೇ? ದೇಹ ಕೂಡಬಹುದು ಆದರೆ ಮನಸ್ಸು? ಎಂದು ಪ್ರಶ್ನಿಸುವ ಮೂಲಕ ಒದುಗನ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. 

ಮನಸ್ಸು ಎಂದಾಕ್ಷಣ ನೆನಪಾಗುವುದು ಸುನಾಲಿನಿಯ ಮಾತುಗಳು. ಎರಡು ಜೀವಿಗಳ ಮಿಲನವೇ ದಾಂಪತ್ಯ, ಅಲ್ಲಿ ಮನಸ್ಸುಗಳು ಬೆಳೆದು ಪರಸ್ಪರ ಅರ್ಥೈಸಿಕೊಳ್ಳಬೇಕು. ಇಲ್ಲದಿದ್ದರೆ ಮನಸ್ಸಿಗಿಂತ ಮಾಂಸಕ್ಕೆ ಬೆಲೆ ಕೊಡುವ ಮನುಷ್ಯನೂ ಇದ್ದಾನೆ ಕಸಾಯಿಖಾನೆಯಲ್ಲಿ ಎನ್ನುವ ಮಾತುಗಳು ಅಕ್ಷರಶಃ ನಿಜ. ಸುಖ ದಾಂಪತ್ಯಕ್ಕೆ ಯಾವುದು ಮುಖ್ಯ ಮನಸ್ಸೊ ಅಥವಾ ಮಾಂಸವೋ ಎಂಬ ನಿರ್ಣಯ ಓದುಗನಿಗೆ ಬಿಟ್ಟದ್ದು.ಆದರೆ ಮನಸ್ಸು ಗೌಣವಾಗಿರೆ ಅದು ಬಹುಶಃ ಯಶಸ್ವಿ ದಾಂಪತ್ಯವೆನಿಸಬಹುದೇ ಹೊರತು ಸುಖೀ ದಾಂಪತ್ಯವೆನಿಸಲಾರದು ಎಂಬುದು ಮಾತ್ರ ಸ್ಪಷ್ಟ.ಹಾಗಾಗಿಯೇ ಇಂದಿಗೂ ಕೂಡ ಈ ಕಾದಂಬರಿ ಮುಖ್ಯವೆನಿಸುತ್ತದೆ.

ಭಾರತೀಯ ಸಂಪ್ರದಾಯದ ಪ್ರಕಾರ ವಿವಾಹ ವೈಯಕ್ತಿಕ ಆಸಕ್ತಿಗಿಂತಲೂ ಕೌಟುಂಬಿಕ ಆಸಕ್ತಿಯಾಗಿದೆ. ಆದರೆ ಜೊತೆಗೂಡಿ ಬದುಕು ಸಾಗಿಸಬೇಕಾಗಿದ್ದು ಎರಡು ಜೀವಗಳೇ ಎಂಬ ಮಾತನ್ನು ಹಿರಣ್ಯ ಮತ್ತು ಭಾಗೀರಥಿಯರ ಸಂಬಂಧದಿಂದ ಸಾಬೀತಾಗುತ್ತದೆ. ಭಾಗೀರಥಿಯ ಸ್ವಾಭಿಮಾನ ಮೆಚ್ಚತಕ್ಕದ್ದು. ಒಂದು ವರ್ಷ ತಡವಾದರೂ ಸರಿಯೇ ಹಿರಣ್ಯ " ಕಾಲಿನದು ಕಾಲಿಗೇ,ತಲೆಗಲ್ಲ" ಎಂಬ ಧೋರಣೆಯ ತಂದೆಯನ್ನು ತೊರೆದು ಹೊಸ ಜೀವನ ಪ್ರಾರಂಭಿಸುವನು. 

ಅವಿವಾಹಿತನಾದ ಚಂದ್ರಯ್ಯನ ಯೌವ್ವನ ಮೈ ಮನಸ್ಸುಗಳ ಸುಳಿಯಲ್ಲಿ ಸುಳಿದಾಡಿತ್ತದೆ .ಜಲಜಾಕ್ಷಿ, ಭಾಗೀರಥಿ, ಬೆಳ್ಯಕ್ಕರು ಅವನನ್ನು ಕಾಡುತ್ತಾರೆ. ಒಂಟಿತನದ ಸಿನಿಕತನದಿಂದಾಗಿ ಜೊತೆಗಾತಿಗಾಗಿ ಮನಸ್ಸು ಹಾತೊರೆಯುತ್ತದೆ. ಶರೀರದ ಬಯಕೆಗಿಂತ ಮನಸ್ಸಿನ ತೃಪ್ತಿ ಚಂದ್ರಯ್ಯನಿಗೆ ಮುಖ್ಯ. ವೇಶ್ಯೆಯಾದ ಬೆಳ್ಯಮ್ಮ, ಗುಲಾಬಿಯಂಥವರಿಂದ ಶರೀರದ ಬಯಕೆ ತೀರಬಹುದು.ಆದರೆ ಮನಸ್ಸಿನ ತೃಪ್ತಿ? 

ಮನಸ್ಸುಗಳೊಂದಾದರೆ ಮಾತ್ರ ದಾಂಪತ್ಯದ ಮೊದಲ ರಾತ್ರಿ ಹಿತ, ಇಲ್ಲವಾದರೆ ಅದು ಘೋರ ರಾತ್ರಿಯೇ ಸರಿ ಎಂಬುದು ನಾಗವೇಣಿಯ ಸಂದರ್ಭದಲ್ಲಿ ನಿಜವಾಗಿದೆ. ಪರಿಚಯವಿಲ್ಲದೆ ಸ್ನೆಹ, ಪ್ರೀತಿಯಿಲ್ಲದೇ ಪತಿ ಎಂಬ ಅಧಿಕಾರಕ್ಕೆ ಬಗ್ಗಿ ಆತನ ಪ್ರೇಮಕ್ಕಿಂತ ಕಾಮಕ್ಕೆ ಗುರಿಯಾಗಿ ಜಿಗುಪ್ಸೆ, ಕೋಪ, ವ್ಯಥೆ, ತಿರಸ್ಕಾರಗಳು ಮೂಡಿ ಏಕಾಂಗಿಯಾಗಿ ಅಳುವಳು. ಪತ್ನಿಯನ್ನು ಒಲಿಸಿಕೊಳ್ಳುವ ಬದಲು ಅನುಭವಿಸುವತ್ತ ಹೆಚ್ಚಿನ ಗಮನ ವಹಿಸಿದ ಸೀತಾರಾಮನಿಂದಾಗಿ ನಾಗವೇಣಿಗೆ ಆ ರಾತ್ರಿ ಘೋರವೆನಿಸುತ್ತದೆ. ಇನ್ನು ಮಂಗನ ಕೈಯಲ್ಲಿ ಮಾಣಿಕ್ಯವಿಟ್ಟಂತೆ ಅಣ್ಣಪ್ಪ ಕಮ್ತಿಯ ಸ್ಥಿತಿ. ಸುನಾಲಿನಿಯಂತಹ ಅಪ್ಸರೆಯೇ ಜೊತೆಯಿದ್ದರೂ ಸಹಿಸಲಾಗುತ್ತಿಲ್ಲ. ಗಂಡನ ನಿಂದೆಗಳನ್ನು ಸಹಿಸಿಕೊಂಡ ಸ್ತ್ರೀಯು ಪುರುಷ ದೇವನಿಗೆ ರಾತ್ರಿ ಕಾಲಕ್ಕೆ ಅನಿವಾರ್ಯ.ಭೂತಕ್ಕೆ ಬಲಿಕೊಡುವ ಕೋಳಿಯಂತೆ ಕಾಮಕ್ಕೆ ಬಲಿಕೊಡಿವ ಕೋಳಿ ಹೆಣ್ಣಲ್ಲವೇ,,,! ಪತಿಗೆ ಆಕೆಯ ಮನಸ್ಸಿಗಿಂತ ತನ್ನ ಕಾಮಕ್ಕೆ ಬಲಿ ಕೊಡಲು ಆಕೆಯ ಮಾಂಸ ಬೇಕು ಇಂತಹ ಸುನಾಲಿನಿಯ ಸ್ವಗತಗಳು ದೌರ್ಜನ್ಯಕ್ಕೊಳಗಾದ ಸ್ರ್ತೀಯರ ಮಾತುಗಳಾಗಿ ಪ್ರಸ್ತುತವೆನಿಸುತ್ತವೆ. 

ಮಹಾಸತಿ ಸರಸಮ್ಮನಲ್ಲಿಗೆ ದಾಂಪತ್ಯದ ಅಸುಖಿಗಳೇ ಬರುವುದನ್ನು ಕಂಡ ಚಂದ್ರಯ್ಯನಿಗೆ ವಿವಾಹದ ಬಗ್ಗೆ ಜಿಗುಪ್ಸೆ ಉಂಟಾಗುತ್ತದೆ. ಭಾಗೀರಥಿ ಇಂದ ದೂರಾದ ಚಂದ್ರಯ್ಯನಿಗೆ ಪ್ರೇಮ ಭಿಕ್ಸೆ ಬೇಡಿದ ಪ್ರೇತ ಕನ್ಯೆಯನ್ನು ನಿರಾಕರಿಸಲಾಗುತ್ತಿಲ್ಲ. ಈ ಎಲ್ಲವನ್ನೂ ಅರಿತ ಅವನಿಗೆ ಇಬ್ಬರು ವ್ಯಕ್ತಿಗಳು ಚಿರ ನರಕ ಅನುಭವಿಸಲು ತಾವಾಗಿ ತೊಟ್ಟುಕೊಳ್ಳುವ ಶೃಂಖಲೆಯೇ ವಿವಾಹ ಎಂದನಿಸಿ ದಾಂಪತ್ಯದ ಬಗ್ಗೆ ನಿರಾಸೆಯಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳ ಹೋದ ಸುನಾಲಿನಿಯನ್ನು ಉಳಿಸಿಕೊಂಡ ಚಂದ್ರಯ್ಯ ಲೋಕಾಪವಾದಕ್ಕೆ ಸೆಡ್ಡುಹೊಡೆದು ಅವಳನ್ನು ವರಿಸಲು ಮುಂದಾದನು.ಆದರೆ ಬೆಳ್ಯಕ್ಕನ ಪ್ರೇಮ ಭಿಕ್ಷೆಯನ್ನು ಪೂರೈಸಲು ಮುಂದಾದ. ಈ ಸಂದರ್ಭದಲ್ಲಿ ಬೆಳ್ಯಕ್ಕ ಹಾಗೂ ಚಂದ್ರಯ್ಯನ ಮಧ್ಯೆ ನಡೆದ ಮನಸ್ಸು ಮತ್ತು ಶರೀರದ ಸಂವಾದ ಮೌಲ್ಯಯುತವಾದದ್ದು. ಪ್ರೇತಕ್ಕೆ ಆತ್ಮ ಸುಖ, ಮನಸ್ಸಿನ ತೃಪ್ತಿ ಸಾಕು, ಆದರೆ ಮನುಷ್ಯನಾದವನಿಗೆ ಆ ಮನಸ್ಸಿನ ಜೊತೆ ಶರೀರವೂ ಇದೆ, ಆತನಿಗೆ ಪ್ರೇಮ ಕಾಮಗಳೆರಡೂ ಬೇಕು.

ಬೆಳ್ಯಕ್ಕನ ದೈನ್ಯತೆ ಕಂಡು ಆಕೆಯನ್ನು ವಿವಾಹವಾಗಲು ಒಪ್ಪಿದ ಚಂದ್ರಯ್ಯ ಆಕೆಯ ಕೈ ಹಿಡಿದು ಸರಸಮ್ಮನ ಗುಡಿಯೊಳಗೆ ಕರೆದೊಯ್ಯುವನು. ಕೂಡಲೇ ಹೊರಗೋಡಿ ಬಂದ ಬೆಳ್ಯಕ್ಕನನ್ನು ಕಂಡು ಅವನಿಗೆ ಆಶ್ಚರ್ಯವಾಯಿತು.ಆಗ ಅವಳು ಅದು ನನ್ನ ಮನೆ, ನನ್ನ ಪತಿ ನೀಲಾಚಲಯ್ಯನ ಪ್ರೇತ ಅಲ್ಲಿದೆ, ನಾನೇ ಮಹಾಸತಿ ಸರಸಮ್ಮ ಎಂಬ ಸತ್ಯವನ್ನು ಅರುಹುತ್ತಾಳೆ. ಪತಿಗೆ ಬೇಡವಾದರೂ ಶಾಸ್ತ್ರ, ಸಮಾಜಕ್ಕಂಜಿ ಕೊನೆಗೆ ಮಹಾಸತಿಯಾದ ಸರಸಮ್ಮನಂಥವರು ಇಂದಿಗೂ ಹಲವರಿದ್ದಾರೆ. ದಾಂಪತ್ಯ ಕೌಟುಂಬಿಕ ಪ್ರತಿಷ್ಟೆಯಾದರೆ ಮನಸ್ಸುಗಳು ಗೌಣವಾಗುತ್ತವೆ,ಆತ್ಮಗಳು ಪ್ರೇತವಾಗುತ್ತವೆ. ಶಾಸ್ತ್ರ, ಸಮಾಜಗಳಿಗೆ ಪ್ರಶ್ನಿಸುವ ವ್ಯಕ್ತಿತ್ವಗಳು ನಿಜಕ್ಕೂ ಅಪರೂಪ. ಅಂತಹ ಅಪರೂಪದ ವ್ಯಕ್ತಿತ್ವವೇ ಶಿವರಾಮ ಕಾರಂತರು. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಲತಾ ಗೌನಳ್ಳಿ