Article

“ಸರಸಮ್ಮನ ಸಮಾಧಿ”ಯ ಒಂದು ಮರುಚಿಂತನೆ

ಸರಸಮ್ಮನ ಸಮಾಧಿ ಹಲವು ವರ್ಷಗಳ ಹಿಂದೆ ಓದಿ ಮುಗಿಸಿದ್ದೆ, ಅದನ್ನು ಸಂಕ್ಷಿಪ್ತವಾಗಿ ದಾಖಲಿಸಿಟ್ಟಿದ್ದೆ ಆ ಸಮಯದಲ್ಲಿ ಸರಸಮ್ಮ ಅದ್ಯಾಕೊ ಕಾಡಿರಲಿಲ್ಲ ಅದಕ್ಕೆ ನನ್ನ ಸೀರಿಯಸ್ ಓದು ಕಾರಣವಾಗಿರಬಹುದು, ಇದೀಗ ಸರಸಮ್ಮನನ್ನು ಮತ್ತೊಮ್ಮೆ ಓದಿ ಗ್ರಹಿಸುತ್ತಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ.

ಇದೀಗ ತಾನೆ ಸಾಹಿತ್ಯ ಲೋಕ ಅರ್ಥಮಾಡಿಕೊಳ್ಳಲು ಹೊರಟವರಿಗೆ ಈ ಕಾದಂಬರಿ ಕ್ಲಿಷ್ಟಕರ ಎನಿಸುತ್ತದೆ. ನೀವು ಸಮಯದ ಒತ್ತಡದಲ್ಲಿ ಓದಿಮುಗಿಸುವ ಕಾದಂಬರಿ ಇದಲ್ಲ. ನೀವು ತೆಂಗಿನಕಾಯಿ ಎಳನೀರು ಕುಡಿದಿರುತ್ತೀರಿ ಮೊದಲು ಬಾಯಿಗೆ ಒಗರು ಎನಿಸಿದರೆ ಮುಂದೆ ಹೋದಂತೆ ತನ್ನ ನಿಜವಾದ ರುಚಿ ಮತ್ತು ಆರೋಗ್ಯ ಎರಡನ್ನು ಕೊಡುವಂತಹ ಅನುಭವ ಕಾದಂಬರಿ ನೀಡುತ್ತದೆ.  ಸರಸಮ್ಮ ಮೂಡಂಬೈಲಿನ ದೇವತೆ. ಆ ಊರಿನ ಜನ ಮತ್ತು ಸುತ್ತಮುತ್ತಲಿನ ಊರಿನ ಜನ ಸರಸಮ್ಮನ ಗುಡಿಗೆ ರಾತ್ರಿಯಲ್ಲಿ ಬಂದು ತೆಂಗಿನ ಕಾಯಿಯನ್ನು ಕೆರೆಗೆ ತೇಲಿ ಬಿಟ್ಟು ಯಾರು ಕಾಣದ ಹಾಗೆ ಹೋಗುತ್ತಾರೆ. ಈ ರೀತಿ ಮಾಡಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ. ಕಾದಂಬರಿಯಲ್ಲಿ ಬರುವ ಜಾನಕಿ ಗಂಡನ ಉದಾಸೀನ, ಸುನಾಲಿ ಗಂಡನ ನಿರ್ಲಕ್ಷ್ಯ, ಭಾಗೀರಥಿ ಮಾವನ ಕೆಟ್ಟ ಧೋರಣೆಯಿಂದ ಸರಸಮ್ಮ ಸಮಾಧಿಗೆ ಬಂದವರೇ. ಇಲ್ಲಿ ಬರುವ ಮುಖ್ಯ ಪಾತ್ರ ಚಂದ್ರಯ್ಯ  ಬೆಳ್ಯಮ್ಮನ ಭೂತಾಸಕ್ತಿಯಿಂದ ಸರಸಮ್ಮನ ಸಮಾಧಿ ಹತ್ತಿರ ಹೋದರು, ಭಾಗೀರಥಿಯಾ ಮತ್ತು ಜಲಜಾಕ್ಷಿಯಾ ಪ್ರೀತಿಯ ಮಧ್ಯೆ ಮನಸ್ಸು ತೊಳಲಾಡುತ್ತದೆ. ಈ ಕಾದಂಬರಿ ಕೆಲವು ಮೂಢನಂಬಿಕೆಯನ್ನ ಹೊರ ಹಾಕಿದರು ಅದರಲ್ಲಿನ ಸತ್ಯ ಮತ್ತು ಅಸ್ಮಿತೆಯನ್ನು ಬಿಟ್ಟು ಕೊಡುವುದಿಲ್ಲ. ಮೂಢತೆಯನ್ನು ಬಿತ್ತುವುದರ ಜೊತೆಗೆ ಕಾಲ್ಪನಿಕ ಕಥೆ ಕಟ್ಟುವಾಗ ಅದೆಷ್ಟು ಕಟ್ಟುಪಾಡುಗಳನ್ನು ಸಾಹಿತಿ ಎದುರಿಸಬೇಕಾಗುತ್ತದೆ ಎಂಬುವುದು ಕಾದಂಬರಿ ಓದುತ್ತಾ ಹೋದಂತೆ ನಮಗೆ ಭಾಸವಾಗುತ್ತದೆ.

ಕಾದಂಬಿರಿಯುದ್ದಕ್ಕೂ ಒಬ್ಬ ಹಳ್ಳಿಯವರು ಹೇಗೆ ಈ ದೆವ್ವ ಭೂತಗಳ ಕಲ್ಪನೆ ಕಟ್ಟಿಕೊಳ್ಳುತ್ತಾರೆಂಬ ವಿವರವನ್ನು ಸಾಹಿತಿ ಬಿಟ್ಟುಕೊಡುತ್ತಾನೆ. ಇದರೊಂದಿಗೆ ಒಂದು ಹೆಣ್ಣಿನ ಶೋಷಣೆ ಗಂಡಸಿನ ಉದಾಸೀನತೆ, ಸಮಾಜದಲ್ಲಿ ಬೇರೆ ಬೇರೆ ವರ್ಗದ, ಮನೆಯ ಮತ್ತು ಗಂಡುಗಳ ಮನೆಯಲ್ಲಿನ ಹೆಣ್ಣಿನ ಸ್ವಾತಂತ್ರ್ಯ, ಅವರ ಮನಸ್ಸಿನ ವ್ಯಥೆ, ಅವರು  ಅನುಸರಿಸುವ ಪದ್ಧತಿ, ಕಷ್ಟ ನಿವಾರಣೆಗೆ ಮಾಡುವ ಕಾರ್ಯಗಳು ನಿಜ ಜೀವನಕ್ಕೆ ಹತ್ತಿರವಾದ ರೀತಿಯಲ್ಲಿ ವಿವರಿಸುತ್ತಾರೆ. ಈ ವಿವರಣೆಯಲ್ಲಿ ಸಾಹಿತಿ ಪ್ರಸ್ತುತ ಜೀವಮಾನದಲ್ಲಿ ಮೂಢನಂಬಿಕೆಯ ಗೂಡನ್ನು ಜನರಮೇಲೆ ಹೇರಲು ಪ್ರಯತ್ನಿಸುತ್ತಾನೊ ಎಂಬ ಅಪನಂಬಿಕೆ ಬರದೆ ಇರಲಾರದು. ಇಂದು ಬೆಳೆದುನಿಂತ ಯುಗದಲ್ಲಿ ಈ ಕಾದಂಬರಿ ಒಂದು ಕಡೆ ತಪ್ಪು ಎನಿಸಿದರೆ ಕಾದಂಬರಿ ಕಟ್ಟುವ ರೀತಿಯನ್ನು ಮಾರ್ಗದರ್ಶಿ ತತ್ವಗಳನ್ನು ಒತ್ತಿ ಹೇಳುತ್ತದೆ. ಪ್ರಸ್ತುತದಲ್ಲಿ ಮಹಿಳೆ ತುಂಬಾ ಬೆಳೆದಿದ್ದು ಈ ಕಾದಂಬರಿಯ ಒಂದು ನೋಟವು ಕಾರಣವೇ ಎನಿಸುತ್ತದೆ. ಭಾರತದ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಅಚರಣೆಯಲ್ಲಿದ್ದ ’ಸತಿ ಸಹಗಮನ’ ಎಂಬ ಕುರುಡು ಆಚರಣೆಗೆ ಬಲಿಯಾದವಳು ಸರಸಮ್ಮ. ಸಮಾಜ ಸುಧಾರಣೆಯ ಸಮಯದಲ್ಲಿ ಈಕೆಯ ಬಲಿದಾನ ಈಕೆಗೆ ಪತಿವ್ರತೇ ಎಂಬ ಪಟ್ಟವನ್ನು ತಂದುಕೊಡುತ್ತದೆ. ಅದರ ಫಲವಾಗಿ ಈಕೆಯ ಸಮಾಧಿ ಇರುವ ಸ್ಥಳ ಒಂದು ಪೂಜಾ ಸ್ಥಳವಾಗಿ ಮಾರ್ಪಡುತ್ತದೆ. ಸಂಸಾರದಲ್ಲಿ ಗಂಡ ಹೆಂಡತಿಯ ನಡುವೆ ಜಗಳವಿದ್ದರೆ, ಕೋಪ, ಹಠದಿಂದ ಇಬ್ಬರ ನೆಮ್ಮದಿ ಕೆಡುತ್ತಿದ್ದರೆ, ಸರಸಮ್ಮನ ಸಮಾಧಿಯ ಬಳಿ ಪ್ರತಿ ಗುರುವಾರ ರಾತ್ರಿ ಬಂದು ಪೂಜೆ ಸಲ್ಲಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆ ಬೆಳೆದಿರುತ್ತದೆ. ತಮ್ಮ ಸಂಸಾರ ತಾಪತ್ರಯಗಳಿಗೆ ಪರಿಹಾರ ಹುಡುಕಿಕೊಂಡು ಸರಸಮ್ಮನ ಸಮಾಧಿಯ ಬಳಿ ಬರುವವರ ಸುತ್ತವೇ ಕತೆ ಅರಳುತ್ತದೆ.

ತವರುಮನೆ ಸೇರಿರುವ ಹೆಂಡತಿ ಭಾಗೀರಥಿಯನ್ನು ಮತ್ತೆ ತನ್ನ ಮನೆಗೆ ಕರೆತರಲು ಬಯಸುವ ಹಿರಣ್ಯ….ಕೇವಲ ದುಡ್ಡು, ದೇಹ ಬಯಸುವ ಗಂಡನನ್ನು, ಸೊಸೆ ಓದು-ಬರಹ ಕಲಿತಿರುವುದೇ ಅಪರಾಧವೆಂಬಂತೆ ನಡೆದುಕೊಳ್ಳುವ ಅತ್ತೆಯನ್ನೂ ಪಡೆದಿರುವ ಸುನಾಲಿನಿ…ಮಗಳ ಮದುವೆ ತಡವಾಗುತ್ತಿದೆ, ಗಂಡು ಸಿಗುತ್ತಿಲ್ಲ ಎಂದು ಚಿಂತಿಸುವ ಜಾನಕಿ, ಹೀಗೆ ಎಲ್ಲರೂ ಸರಸಮ್ಮನ ಸಮಾಧಿಯ ಮೊರೆ ಹೋಗುವವರೆ. ಜೊತೆಗೆ, ದೆವ್ವ, ಭೂತಗಳ ಅಸ್ತಿತ್ವದ ಬಗ್ಗೆ ಸದಾ ಪ್ರಶ್ನಿಸುತ್ತಾ, ಸರಸಮ್ಮನ ಸಮಾಧಿಯನ್ನೇ ಒಂದು ರೀತಿ ತನ್ನ ಅಧ್ಯಯನ ಕೇಂದ್ರ ಮಾಡಿಕೊಳ್ಳುವ, ವಿದ್ಯಾವಂತ, ವಿಚಾರವಂತ ಯುವಕ ಚಂದ್ರು ಒಂದು ಕಡೆಯಾದರೆ, ಸಮಾಧಿಯ ಬಳಿ ಪೂಜೆಗೆ ಬರುವ ಗಂಡಸರ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಮಾಡಲೆತ್ನಿಸುವ ಬೆಳ್ಳಕ್ಕ ಹಾಗೂ ಅವಳ ಸಾಕು ಮಗಳು ಗುಲಾಬಿ ಮತ್ತೊಂದು ಕಡೆ. ಇಷ್ಟು ಪಾತ್ರಗಳ ನಡುವೆ ಹೇಗೆ ನಂಟು ಉಂಟಾಗುತ್ತದೆ. ಅವರ ಸಂಸಾರದಲ್ಲಿನ ತೊಂದರೆಗಳು ಕರಗುತ್ತವೆಯಾ..? ಸರಸಮ್ಮನ ಸಮಾಧಿ ನಿಜಕ್ಕೂ ಒಂದು ಶಕ್ತಿ ಕೇಂದ್ರವಾ ಅಥವಾ ಭೂತ ಪ್ರೇತಗಳ ಕೊಂಪೆಯಾ..? ಇವುಗಳಿಗೆಲ್ಲ ಕಾದಂಬಿರಿಯಲ್ಲಿ ಉತ್ತರವಿದೆ. ಸಮಾಜದ ಕಟ್ಟುಪಾಡುಗಳಿಂದ, ಅರ್ಥವಿಲ್ಲದ ಆಚರಣೆಗಳಿಂದ ಬಂಧಿತಳಾಗಿದ್ದ ಸರಸಮ್ಮ, ತಾನು ಬದುಕಿದ್ದ ವೇಳೆ ಜೀವಂತ ಶವದಂತಿದ್ದವಳು. ಆದರೆ, ತಾನು ಸತ್ತ ನಂತರ ಇತರರ ನಂಬಿಕೆಗಳಿಂದ ಇನ್ನೂ ಬದುಕಿರುವವಳು. ಈ ಒಂದು ಹಿನ್ನೆಲೆಯೊಂದಿಗೆ ಕಥೆಯನ್ನು ಗಮನಿಸಿದಾಗ, ಇಲ್ಲಿ ಬರುವ ಹೆಣ್ಣು ಪಾತ್ರಗಳೆಲ್ಲಾ ಜೀವಂತ ಪ್ರೇತಗಳೆ! ತಮ್ಮ ಭಾವನೆಗಳನ್ನು, ಅನಿಸಿಕೆಗಳನ್ನು ವ್ಯಕ್ತಪಡಿಸಲಾಗದೆ, ಬದುಕಿದ್ದು ಸತ್ತಂತೆ ಇರುವ ಅತೃಪ್ತ ಜೀವಾತ್ಮಗಳು. ಈ ಪಾತ್ರಗಳು  ಹೆಣ್ಣು ಅರ್ಥವಿಲ್ಲದ ಸಮಾಜದ ಈ ಬಂಧನದಿಂದ ಹೊರಬಂದು, ತಮ್ಮ ತೃಪ್ತಿಯನ್ನು, ತಮ್ಮ ಸ್ಥಾನವನ್ನು ಪಡೆಯಲಿ ಎಂಬುದೇ ಆಶಯ.

ಕಾದಂಬರಿ ನಲವತ್ತರ ದಶಕದಲ್ಲಿ ಬರೆದಿದ್ದು  ದೂರದರ್ಶನದಲ್ಲಿ ಧಾರವಾಹಿಯಾಗಿಯೂ ಯಶಸ್ವಿ ಪ್ರದರ್ಶನ ಕಂಡಿದೆ. ಅಲ್ಲದೆ ಚಲನಚಿತ್ರವಾಗಿ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿಕೊಂಡಿದೆ. ಜನರು ತಲೆಮಾರುಗಳಿಂದ ಪೋಷಿಸಿಕೊಂಡು ಬಂದ ಮೂಡನಂಬಿಕೆಗಳನ್ನು ಪ್ರಶ್ನಿಸುವುದಲ್ಲದೆ, ಅದರ ನಂಬಿಕೆಗಳ, ಆಚರಣೆಗಳ ಕುರಿತಂತೆ ಸತ್ಯಾಸತ್ಯತೆಗಳನ್ನು ಪರಿಶೋಧಿಸುವ ಕೆಲಸ ಮಾಡುತ್ತದೆ.  ಅಂದು ಜಾರಿಯಲ್ಲಿದ್ದ ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಗೆ ತನ್ನದಾದ ಸ್ವತಂತ್ರ ಅಸ್ತಿತ್ವವಿರಲಿಲ್ಲ. ಅವಳ ಭಾವನೆಗಳಿಗೆ ಬೆಲೆ ಇರಲಿಲ್ಲ. ಭಾರತೀಯ ಪರಂಪರೆ, ಸಂಸ್ಕೃತಿಗಳು ತಾವು ಹೆಣ್ಣಿನ ಮನಸ್ಸಿನ ಮೇಲೆ ಹೇರುತ್ತಾ ಬಂದ ಪಾಪ-ಪುಣ್ಯ, ನ್ಯಾಯ-ನೀತಿ, ಸ್ವರ್ಗ-ನರಕಗಳೆನ್ನುವ ನಂಬಿಕೆಗಳು ಅವರನ್ನು ಒಂದು ಬಗೆಯ ಮನೋದಾಸ್ಯದಿಂದ ಬಂಧಿತರನ್ನಾಗಿಸಿದ್ದವು. ಹೀಗಾಗಿ ಅವರಾರೂ ಸಹ ಅವುಗಳನ್ನು ಪ್ತಶ್ನಿಸುವ ಧೈರ್ಯವನ್ನು ಬೆಳೇಸಿಕೊಂಡಿರುವುದಿಲ್ಲ. ಮಾನವನು ಬದುಕುವ ರೀತಿಯೇ ತೀರಾ ವೈಚಿತ್ರ್ಯದಿಂದ ಕೂಡಿದೆ. ಪರರ ವಿಚಾರಗಳಲ್ಲಿ ತಾವು ತೋರಿಸುವ ಆಸಕ್ತಿಯನ್ನು ತಮ್ಮನ್ನು ತಾವು ತಿದ್ದಿಕೊಳ್ಳುವುದಕ್ಕೂ ಸರಿ ದಾರಿಯಲ್ಲಿ ನಡೆಯುವುದಕ್ಕೂ ಅವನು ತೋರಿಸಲಾರ. ಅಲ್ಲದೆ ಪರರ ವಿಷಯಗಳಲ್ಲಿ ಯಾವೆಲ್ಲಾ ದೋಷಾರೋಪಣೆ, ತರ್ಕಗಳನ್ನು ಮಾಡಲೂ ಹೇಸದ ಮಾನವನು ತನ್ನದೇ ವಿಚಾರ ಬಂದಾಗ-ಎಂದರೆ ಅದೇ ವಿಷಯಗಳನ್ನು ತನಗೇ ಅಳವಡಿಸಿಕೊಳ್ಳಬೇಕಾದಾಗ ಮಾತ್ರ ಹಿಂಜರಿಯುತ್ತಾನೆ, ಅಲ್ಲದೆ ತಾನದರಿಂದ ಪಾರಾಗುವ ಸಲುವಾಗಿ ಯಾವ ಕೆಲಸಗಳಾನ್ನು ಮಾಡಲೂ ತಯಾರಾಗುತ್ತಾನೆ. ಇಂಥಹ ಮನಸ್ಥಿತಿಯ ಗಂಡು-ಹೆಣ್ಣುಗಳ ಜೀವನದಲ್ಲಿ ನಡೆಯಬಹುದಾದ ಘಟನೆಗಳು ಅವರುಗಳ ಬದುಕನ್ನು ಎಲ್ಲಿಗೆ ಹೋಗಿ ತಲುಪಿಸುತ್ತವೆ ಎಂಬುದನ್ನು ಲೇಖಕರು ನೈಜವಾಗಿ ಚಿತ್ರಿಸಿದ್ದಾರೆ.

‘ಸರಸಮ್ಮನ ಸಮಾಧಿ’ ಕಾದಂಬರಿಯಲ್ಲಿ ಗಂಡ-ಹೆಂಡತಿಯರ ನಡುವಣ ಸಂಬಂಧಗಳ ಪರಿಶೀಲನೆ ನಡೆದಿದ್ದು, ಈ ಕುರಿತು ಕಾರಂತರೇ ಮುನ್ನುಡಿಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ- "ದಾಂಪತ್ಯ ವಿರಸಗಳ ದೊಡ್ಡ ಸಮಸ್ಯೆಯನ್ನು ಕುರಿತು ನಮ್ಮ ಮನಸ್ಸು ವಿಚಾರಗ್ರಸ್ತವಾಗಲಿ ಎಂಬುದೇ ನನ್ನ ಉದ್ದೇಶ. "ಈ ಉದ್ದೇಶದ ಈಡೇರಿಕೆಗಾಗಿ ಅವರು ತಿಮ್ಮಪ್ಪಯ್ಯ ಮತ್ತು ಜಾನಕಿ ಎಂಬ ದಂಪತಿಗಳನ್ನು ಸೃಷ್ಟಿಸಿದ್ದಾರೆ. ಗಂಡನಿಂದ ನಿರಂತರವಾದ ಶೋಷಣೆಗೆ ಒಳಗಾದ ಜಾನಕಿ, ಸುನಾಲಿನಿ ಮೊದಲಾದವರು ತಮ್ಮ ಸಮಸ್ಯೆ ಪರಿಹಾರಕ್ಕೆ ಮಹಾಸತಿ ಸರಸ್ವತಿಯಮ್ಮ ಅಥವಾ ಮಾಸ್ತಿ ಸರಸಮ್ಮನ ಮೊರೆ ಹೋಗುತ್ತಾರೆ. ಭಾಗೀರಥಿಯ ಗಂಡ ಹಿರಣ್ಯನೂ ಮಾಸ್ತಿಯ ಸಹಾಯ ಬೇಡುತ್ತಾನೆ. ಇದೇ ರೀತಿ ಕಾದಂಬರಿಯಲ್ಲಿ ಸೀತಾರಾಮ-ನಾಗವೇಣಿಯವರ ಇನ್ನೊಂದು ಬಗೆಯ ವಿರಸ ದಾಂಪತ್ಯವೂ ಸೇರಿಕೊಂಡು ದಾಂಪತ್ಯ ಸಮಸ್ಯೆಗಳ ಅನೇಕ ಮುಖಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಇಲ್ಲಿ ನಾವು ನೋಡಬೇಕಾದ ಅಂಶ, ಇಲ್ಲಿ ಸಾಮಜದ ಹೆಣ್ಣಿನ ಮೇಲಿನ ಮೌಡ್ಯತೆ ಮತ್ತು "ಹೆಣ್ಣಿನ ಮನಸ್ಸು ಮತ್ತು ಶರೀರಗಳೆರಡು ಪುರುಷನ ಸ್ವಂತ ಸ್ವತ್ತು" ಎಂಬ ದೋರಣೆ ಎಷ್ಟು ಕಠೋರ ಶಿಕ್ಷೆ ಹೆಣ್ಣಿನ ಪಾಲಿಗೆ ಅಂತ ವಿವರಿಸಿದ್ದಾರೆ. ಈ ಕಾದಂಬರಿಯಲ್ಲಿ ಹೇಲ ಹೊಡಟಿರುವ ಸ್ಥಿತಿ ಈಗಿನ ನಗರಗಳಲ್ಲಿ ಇಲ್ಲವಾದರೂ, ಕೆಲ ಹಳ್ಳಿಗಳ ಕಡೆ ಇದೆ.

ಈ ನಡುವೆ ಅವಿವಾಹಿತ ಚಂದ್ರಯ್ಯನು ಅನ್ಯರ ಸಂಸಾರದ ಒಡಕುಗಳನ್ನು ಸ್ವಲಾಭಕ್ಕೆ ಬಳಸಿಕೊಳ್ಳಲು ಕೆಲಸ ಮಾಡುವ ಸಂದರ್ಭದಲ್ಲಿ ಆತನಿಗೆ ವೇಶ್ಯೆ ಬೆಳ್ಳಮ್ಮನ ದರ್ಶನವಾಗುತ್ತದೆ. ಈ ನಡುವೆ ಪ್ರೇತ ಬೆಳ್ಳಕ್ಕ ತಾನು ಜನರಿಂದ ಶೋಷಣೆಗೊಳಗಾದ ಕತೆಯನ್ನೂ ನಿರೂಪಿಸುತ್ತಾಳೆ. ಹೀಗೆ ಕಾರಂತರು ದಾಂಪತ್ಯದ ಸಮಸ್ಯೆಗಳನ್ನು ಅವುಗಳ ಪರಿಹಾರಕ್ಕಾಗಿ ಜನರು ಆತುಕೊಳ್ಳುವ ಹುಸಿ ನಂಬಿಕೆಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದಾರೆ. ಭ್ರಮೆ ಮತ್ತು ವಾಸ್ತವಗಳನ್ನು ಕಲಸಿದ ನವೀನ ತಂತ್ರವೊಂದು ಈ ಕಾದಂಬರಿಯಲ್ಲಿರುವುದರಿಂದ ಕೃತಿ ಆಕರ್ಷಕವಾಗಿದೆ. ಚಂದ್ರಯ್ಯನು ಪ್ರೇತರಾಜ್ಯವನ್ನು ಹೊಕ್ಕು ಬರುವಾಗಲೂ ವಾಸ್ತವಲೋಕವನ್ನು ಮರೆಯದೇ ಇರುವಲ್ಲಿ ಕಾರಂತರ ಪ್ರಖರ ವೈಚಾರಿಕತೆ ಕೆಲಸ ಮಾಡಿದೆ. ಇಂಥ ವೈಚಾರಿಕತೆಯಿಂದಾಗಿಯೇ ಚಂದ್ರಯ್ಯನಿಗೆ ಭಾಗೀರಥಿ-ಹಿರಣ್ಯರ ದಾಂಪತ್ಯದ ನಡುವೆ ಪ್ರವೇಶಿಸದಿರಲು ಸಾಧ್ಯವಾಗಿದೆ. ಚಂದ್ರಯ್ಯನ ಪ್ರಜ್ಞೆಯ ಮೂಲಕ ವಾಸ್ತವಿಕ ಘಟನೆಗಳನ್ನು ನಿರೂಪಿಸಲು ಕಾರಂತರಿಗೆ ಸಾಧ್ಯವಾದರೆ, ಪ್ರೇತದ ವಿವರಣೆಯ ಮೂಲಕ ಜನರ ಮೌಖಿಕ ನಿರೂಪಣೆಗಳ ಪ್ರಯೋಜನವನ್ನು ಪಡೆಯಲು ಕಾರಂತರಿಗೆಸಾಧ್ಯವಾಗಿದೆ. ಎಂದು ನುಡಿಯುತ್ತಾರೆ ಖ್ಯಾತ ಅಂಕಣಕಾರ - ಡಾ||ಪುರುಷೋತ್ತಮ ಬಿಳಿಮಲೆ. ಒಟ್ಟಾರೆ ಕಾರಾಂತರು ಬರೆದ ಸಮಾಜದಲ್ಲಿನ ಮಹಿಳೆಯರ ಬದುಕಿನ ಚಿತ್ರಣವನ್ನು ನಮ್ಮ ಕಣ್ಮುಂದೆ ತರುವ ಈ  ಚಿಕ್ಕ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ ಸರಸಮ್ಮನ ಸಮಾಧಿ

ಕೆ. ಎಂ. ವಿಶ್ವನಾಥ ಮರತೂರ