Article

ಶಿಕ್ಷಕರ ಭವಣೆಯನ್ನು ತೆರೆದಿಡುವ ‘ರಂಗಣ್ಣನ ಕನಸಿನ ದಿನಗಳು’

ನಮ್ಮ ದೇಶದ ಪ್ರಾಥಮಿಕ ವಿಧ್ಯಾಭ್ಯಾಸ ಕ್ರಮದಲ್ಲಿರುವ ಲೋಪದೋಷಗಳು, ಅವುಗಳಿಗೆ ಪರಿಹಾರೋಪಾಯಗಳು, ಅಂದಿನ ಕಾಲಘಟ್ಟ (1949) ದಲ್ಲಿಯ ಸಾಮಾಜಿಕ ಬದುಕಿನ ಚಿತ್ರಣ, ಗ್ರಾಮದ ರಾಜಕೀಯ ಚಿತ್ರಣ, ಶಾಲೆಗಳ ಹುಟ್ಟುಹಾಕುವ ಆ ಕಾಲಘಟ್ಟದಲ್ಲಿ ಮಾಸ್ತಾರರ ಸ್ಥಿತಿಗತಿ, ಅಂದಿನ ಕಡಿಮೆ ಸಂಬಳದ ಕುರಿತು, ಮೇಲಾಧಿಕಾರಿಗಳ ದರ್ಪದ ಆರ್ಡರಗಳು, ಕೆಳಹಂತದ ನೌಕರರ ಪಾಡು ಹೀಗೆ ಒಟ್ಟಾರೆಯಾಗಿ ಶಿಕ್ಷಣ ವ್ಯವಸ್ಥೆಯ ಅಂದಿನ ಏರುಪೇರುಗಳನ್ನು ಸಮಗ್ರವಾಗಿ ರಂಗಣ್ಣನ ಕನಸಿನ ದಿನಗಳು ಪುಸ್ತಕದಲ್ಲಿ ಕಾಣಬಹುದು.

ಎರಡು ಮೂರು ರೂಪಾಯಿ ವೇತನದಲ್ಲೇ ಎಲ್ಲವನ್ನು ನಿಭಾಯಿಸಿ ಶಾಲೆಯ ಖರ್ಚುವೆಚ್ಚಗಳನ್ನು ನಿಭಾಯಿಸಿ ಮೇಲಾಧಿಕಾರಿಗಳಿಗೆ ವರದಿ ಒಪ್ಪಿಸುವುದರೊಳಗೆ ಶಿಕ್ಷಕರು ಸೋತು ಸುಣ್ಣವಾಗುತ್ತಿದ್ದರು. ಅಂದಿನ ಕಾಲಘಟ್ಟಕ್ಕೆ ಆ ವೇತನ ಅಷ್ಟು ಕಡಿಮೆಯಾಗಿದ್ದು ಒಂದು ಕಡೆಯಾದರೆ ಪ್ರಸ್ತುತ ಶೈಕ್ಷಣಿಕ‌ ವ್ಯವಸ್ಥೆಯಲ್ಲೂ ಕೂಡ ಹಣದುಬ್ಬರದ ಕಾಲಘದಲ್ಲಿಯೂ ಇಂದಿನ‌ ವೇತನವೂ ಮಡದಿಮಕ್ಕಳಾದಿಯಾಗಿ ಹೆತ್ತವರನ್ನು ನೋಡಿಕೊಳ್ಳಲು ಒಬ್ಬ ಶಿಕ್ಷಕನಿಗೆ ಕಷ್ಟಸಾಧ್ಯವಾದಂತ ಪರಿಸ್ಥಿತಿ ಇಂದಿಗೂ ಇದೆ.

ಒಟ್ಟು ಮೂವತ್ತು ಬಿಡಿ ಬಿಡಿ ತಲೆಬರಹಗಳ ಅಧ್ಯಾಯಗಳಿದ್ದು ಒಟ್ಟು 223 ಪುಟಗಳಲ್ಲಿ ರಂಗಣ್ಣನ ಕನಸಿನ ದಿನಗಳ ಚಿತ್ರಣವನ್ನು ಕಾಣಬಹುದು. ಬರಹದ ಶೈಲಿ, ಬಳಸಿದ ಭಾಷೆ, ಅಧ್ಯಾಯವಾರು ಪ್ರಕರಣಗಳ ರೂಪದಲ್ಲಿ ತಲೆಬರಹಕೊಟ್ಟು ಪ್ರತಿ ಅಧ್ಯಾಯಗಳು ಮುಂದಿನ ಅಧ್ಯಾಯದೊಡನೆ ಬೆರೆತು ಓದುಗನಿಗೆ ಕಾದಂಬರಿ ಓದಿದ ಅನುಭವವಾಗುತ್ತದೆ.

ಪುಸ್ತಕದ ಕಥಾನಾಯಕ ರಂಗಣ್ಣ ಅಂದಿನ ಶಿಕ್ಷಣವ್ಯವಸ್ಥೆಯಲ್ಲಿ ಇನ್ಸ್ಪೆಕ್ಟರ್ ಆಗಿ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಬೇಟಿ ನೀಡಿದಾಗ ಅಲ್ಲಿಯ ಶಾಲೆಯ ಚಿತ್ರಣ, ಶಿಕ್ಷಕರಲ್ಲಿ ಎದ್ದು ಕಾಣುವ ಕಲಿಕೆಯ ಪ್ರಯೋಗಗಳ ಕೊರತೆ, ಅಂದಿನ ಗ್ರಾಮೀಣ ಜೀವನದಲ್ಲಿ ಶಾಲೆಗೆ ಜಾಗೆಯನ್ನು ನೀಡುವ ಊರ ಮುಖಂಡರ ಮನಸ್ಥಿತಿ, ಅವರ ದರ್ಪ ದೌಲತ್ತು, ಅಂದಿನ‌ ಕಾಲಕ್ಕೆ ರಾಜಕೀಯದಲ್ಲಿ ಗುರುತಿಸಿಕೊಂಡು ಗ್ರಾಮಸ್ಥರನ್ನು ಹೆದರಿಸಿ ಬದುಕುತ್ತಿದ್ದ ಮುಖಂಡರ ಮನಸ್ಥಿತಿ, ಹಳ್ಳಿ ಬದುಕಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕಾದರೆ ಶಾಲೆಗೆ ಒದಗಿಸಬೇಕಾದ ಮೂಲಭೂತ ಸೌಲಭ್ಯಗಳ ಕೊರತೆ, ಶಿಕ್ಷರ ಕಡಿಮೆ ವೇತನದ ಸಮಸ್ಯೆಗಳು ರಂಗಣ್ಣನನ್ನು ಬಹಳ ಕಾಡಿದವು. ಅವುಗಳ ಪರಿಹರಿಸುವ ನಿಟ್ಟಿನಲ್ಲಿ ಇನ್ಸ್ಪೆಕ್ಟರ್ ಆಗಿ ರಂಗಣ್ಣನವರು ಕೈಗೊಂಡ ಕ್ರಮಗಳು, ಶಿಕ್ಷಕರನ್ನು ಪ್ರೀತಿಯಿಂದ ಕಂಡ ಬಗೆ, ಮಕ್ಕಳ ಕಲಿಕೆಯ ಹೊಸ ವಿಧಾನಗಳನ್ನು ಸೂಚಿಸಿದ ರೀತಿ, ಹಳ್ಳಿಯ ವ್ಯಾಜ್ಯಗಳನ್ನು ಪರಿಹರಿಸಿದ್ದು, ಕೆಂಡಖಾರುವ ಮುಖಂಡರನ್ನು ಸ್ನೇಹಗಳಿಸಿದ ವಿಧಾನ, ರಂಗಣ್ಣನ ಮಡದಿಯ ವೈಚಾರಿಕತೆಯ ಚಿತ್ರಣ ಹೀಗೆ ಹತ್ತಾರು ಹಳ್ಳಿಗಳ ಹಲವಾರು ಶಿಕ್ಷಕರ ಬದುಕಿನ ಕಥೆ, ಹಳ್ಳಿಗಳ ಕಥನವನ್ನು ಇಲ್ಲಿ ಕಾಣಬಹುದು.

'ಬೋರ್ಡ್‌ ಒರೆಸುವ ಬಟ್ಟೆ' ತಲೆಬರಹದಡಿಯಲ್ಲಿ ಹಾಸ್ಯದ ಜೊತೆಗೆ ಬಡತನದ ದರ್ಶನವಾಗುವ ಪರಿ ಓದುಗರನ್ನು ಆರಂಭದಲ್ಲಿ ಹಾಸ್ಯದಿಂದ ಆರಂಭಗೊಂಡರೂ ಆ ಅದ್ಯಾಯ ಮುಗಿದಾಗ ಚಿಂತನೆಗೆ ಹಚ್ಚುವಂತಿದೆ. 'ಗರುಡನಹಳ್ಳಿ ಮತ್ತು ಹನುಮನಹಳ್ಳಿಯ' ವ್ಯಾಜ್ಯವನ್ನು ತುಂಬಾ ಚಾಣಾಕ್ಷತನದಿಂದ ಪರಿಹರಿಸಿದ ಎರಡೂ ಹಳ್ಳಿಗೆ ಗೌರವದ ವ್ಯಕ್ತಿತ್ವ ಮೆರೆದ ಚಿತ್ರಣ, 'ಉಗ್ರಪ್ಪನ ವಾದ', 'ಶಾಂತವೀರಸ್ವಾಮಿಗಳ ಆತಿಥ್ಯ' 'ಸಮಯೋಪಾಯ ಸರಸ್ವತಿ' ಅಧ್ಯಾಯಗಳು ಓದುಗರನ್ನು ಆಕ್ರಮಿಸಿಕೊಳ್ಳುವ ಹಾಗೂ ಬಹಳಷ್ಟು ವಿಚಾರಧಾರೆಗಳ ಮೇಲೆ‌ ಬೆಳಕು ಚೆಲ್ಲುತ್ತವೆ.

ರಂಗಣ್ಣನ ಮಡದಿ ಸರಸ್ವತಿ ಗಂಡನಿಗೆ ಕೆಲವು ಸಲಹೆ ರೂಪದಲ್ಲಿ ಆಗಾಗ ಬೇಸರದಿಂದಲೇ ಹೇಳುತ್ತಿದ್ದಳು. ಗಂಡ ಕೈಗೊಂಡ ನಿರ್ಧಾರಗಳಿಂದ ಏನೆಲ್ಲ ಅವಾಂತರಗಳಾದವು, ನೀವು ಅವುಗಳನ್ನು ಹೇಗೆಲ್ಲ ಪರಿಹರಿಸಬಹುದಿತ್ತು ಎಂಬುದನ್ನು ಬಿಡಿಬಿಡಿಯಾಗಿ ಹೇಳಿ ಗಂಡನ ಅಂತರಂಗದ ಕಣ್ಣು ತೆರೆಸುತ್ತಾಳೆ. ಪದೇ ಪದೇ ಹೆಣ್ಣುಮಕ್ಕಳು ಅಡುಗೆ ಮನೆಗೆ ಸೀಮಿತ ಎನ್ನುತ್ತಿದ್ದ ರಂಗಣ್ಣ ಆ ದಿನ ಮಡದಿಯ ಮಾತುಗಳಿಂದ ಹೌದು ಹೆಂಡತಿಯಾಡಿದ ಮಾತುಗಳಲ್ಲಿ ಸತ್ಯವಿದೆ ನಾನೇ ಎಡವಿದೆ ಎಂದು ಹೆಂಡತಿಯನ್ನು ಹೊಗಳಿದನು. ಅಂದಿನ ಕಾಲಕ್ಕೆ ಹೆಣ್ಣುಮಕ್ಕಳು ಏನೇ ಹೇಳಿದರೂ ಅಸಡ್ಡೆಯಿಂದ ಕಾಣುವುದು ಹಾಗೂ ಸಾಮಾಜಿಕ‌ ಜೀವನದಲ್ಲಿ ಹೆಣ್ಣುಮಕ್ಕಳಿಗೆ ಪ್ರವೇಶವಿಲ್ಲದಿರುವ ಎಂಬ ಸೂಕ್ಷ್ಮ ಅಂಶ ಎದ್ದು ಕಾಣುವುದನ್ನು ಇಲ್ಲಿ ಕಾಣಬಹುದು. ಅಂತಹ ಕಾಲಘಟ್ಟದಲ್ಲೂ ಸರಸ್ವತಿಯ ಮೂಲಕ ಹೆಣ್ಣುಮಗಳ ಚಿಂತನಾ ಲಹರಿ ಮೇಲ್ಮಟ್ಟದ್ದು ಎಂದು ನಿರೂಪಿಸಿದ ಲೇಖಕರ ಬರಹ ಶೈಲಿ ಇಷ್ಟವಾಗುವಂತಹುದು.

ಓದು ಮುಗಿದಾಗ ಮೇಷ್ಟ್ರುಗಳು ಮುನಿಸ್ವಾಮಿ, ರಂಗಪ್ಪ, ವೆಂಕಣ್ಣ, ಸೀತಮ್ಮ, ಕೆಂಚಪ್ಪ ಇವರೆಲ್ಲರ ಬದುಕಿನ ಚಿತ್ರಣ ಕಣ್ಣುಮುಂದೆ ಹಾದುಹೋದಂತಾಯ್ತು. ಅವರ ಬದುಕಿಗೆ ಬೆಳಕಾದ ರಂಗಣ್ಣ ಎಲ್ಲರೂ ಮೆಚ್ಚುವಂತಹ ವ್ಯಕ್ತಿಯಾದ. ಗ್ರಾಮಸ್ಥರಾದ ಕಲ್ಲೇಗೌಡ, ಕರಿಯಪ್ಪ, ಗರುಡನಹಳ್ಳಿಯ ಪಟೇಲ, ಹನುಮನಹಳ್ಲಿಯ ಶಾನುಭೋಗ, ಶಂಕರಪ್ಪ, ತಿಮ್ಮರಾಯಪ್ಪ ವ್ಯಕ್ತಿಗಳು ನೆನಪುಳಿಯುತ್ತಾರೆ. ರಸಬಾಳೆಹಣ್ಣಿನ ಗೊನೆಯೂ ಹಲವಾರು ಪ್ರಸಂಗಗಳಲ್ಲಿ ಮೇಲಾಧಿಕಾರಿಗಳನ್ನು ಮೆಚ್ಚಿಸುವುದಕ್ಕಾಗಿ ಗ್ರಾಮದ ಪ್ರಮುಖ ವ್ಯಕ್ತಿಗಳು ನೀಡುವ ಉಡುಗೊರೆಯ ರೂಪದಲ್ಲಿ ಪ್ರಮುಖ ಪಾತ್ರವಹಿಸಿರುವುದರಿಂದ ಅದೂ ಕೂಡ ವಾಸ್ತವ ಸಮಾಜದಲ್ಲಿ ಯಾವ ರೀತಿಯಿಂದ ತಳುಕುಹಾಕಿಕೊಂಡಿದೆ ಎಂಬುದನ್ನು ಓದುಗರು ನಿರ್ದರಿಸಬಹುದು.

ಇಂದಿನ ಕಾಲಘಟ್ಟದಲ್ಲಿ ಈ ಕೃತಿಯನ್ನು ಇಟ್ಟು ಅವಲೋಕಿಸಿದರೆ ಇಂದಿನ ಶಿಕ್ಷಣ ವ್ಯವಸ್ಥೆಯ ಹುಳುಕುಗಳು, ಮುಖಂಡರ ಕೈಕೆಳಗೆ ತಲೆತಗ್ಗಿಸಿ ನಿಲ್ಲುವ ಶಿಕ್ಷಕವರ್ಗ, ಸ್ವಾರ್ಥದ ಆಲೋಚನೆಯಿಂದ ಮೇಲಾಧಿಕಾರಿಗಳ ನಿರ್ಲಕ್ಷ್ಯ ನಡೆ, ವರ್ಗಾವಣೆಯಿಂದಾಗುವ ತೊಂದರೆಗಳು, ಅತ್ಯಾಧುನಿಕ ಕಾಲದಲ್ಲೂ ಶೈಕ್ಷಣಿಕವಾಗಿ ನಾವೆಲ್ಲ ಇಷ್ಟು ಮುಂದುವರೆದಿದ್ದರೂ ಬದಲಾಗಬೇಕಾದ ಶಿಕ್ಷಣವ್ಯವಸ್ಥೆ, ಶೈಕ್ಷಣಿಕ ರಂಗವನ್ನು ಸರಕಾರ ಬಲಪಡಿಸಿ ದೇಶವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಯೋಚಿಸುವಂತಹ ನೂರಾರು ಆಲೋಚನೆಗಳನ್ನು ಈ ಕೃತಿಯಿಂದ ನಾವು ಕಾಣಬಹುದು.

ಪ್ರತಿಯೊಬ್ಬರೂ ಓದಲೇಬೇಕಾದ ಕೃತಿಗಳಲ್ಲಿ ಇದೂ ಒಂದಾಗಿದೆ. ಶಿಕ್ಷಕ ಬಂಧುಗಳು ಓದಲೇಬೇಕಾದ ಕೃತಿ ಇದು. ಸಾಹಿತ್ಯಾಸಕ್ತರ ಅಚ್ಚುಮೆಚ್ಚಿನ ಪುಸ್ತಕದ ಪಟ್ಟಿಯಲ್ಲಿರಬೇಕಾದ ಪುಸ್ತಕವೂ ಇದಾಗಿದೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ