Article

ಶುಷ್ಕ ಓದಿಗೆ ಯೋಗ್ಯವಲ್ಲದ ‘ಕನಸುಗಳು ಖಾಸಗಿ’

ನರೇಂದ್ರ ಪೈ ಅವರು ಅಂತಹಾ ಅದ್ಭುತ ಕತೆಗಾರರೇನಲ್ಲ, ಅದಕ್ಕೂ ಕಾರಣ ಇದೆ. ಆನೆಗಳು ಹೋದ ಮಾರ್ಗದಲ್ಲಿ ಅದರ ಮರಿಯಾಗಿ ಸಾಗಿದ್ದರೆ ಯಾವುದೇ ಆತಂಕವಿಲ್ಲದೇ ಆನೆಮರಿಯಾಗಿ ಸಾಗಬಹುದಿತ್ತು. ಆದರೆ ಇವರು ಹಾಗೆ ಮಾಡದೇ ತನ್ನದೇ ಆದ ದಾರಿ ಕಂಡುಕೊಂಡು ಮುಳ್ಳು ಕಂಟಿ ತುಂಬಿದ ಆ ಹಾದಿಯಲ್ಲಿ ಅದರ ಒಳ ಹೊಕ್ಕು ಹಾವಿನಂತೆ ಸರಸರ ಸರಿದರು ಮತ್ತು ಸದ್ದಿಲ್ಲದೇ ಸಾಗಿದರು. ಅದಕ್ಕೇ ಅವರ ಬರವಣಿಗೆ (ಹಿರಿಯರ ಆಶೀರ್ವಾದದ ಮೂಲಕ) ಮೆರವಣಿಗೆಯಾಗದೇ ಬರೀ ಸಾಮಾನ್ಯ ನಡಿಗೆಯಷ್ಟೇ ಆಗಿ ಉಳಿಯಿತು. ಸೂಕ್ಷ್ಮವಾಗಿ ಇಲ್ಲಿ ಗ್ರಹಿಸಬೇಕಾದ ಅಂಶವೆಂದರೆ ಆಡಂಬರವಿಲ್ಲದ ಅನುಭೂತಿಯ ಅನುಭವದ ಹೆಜ್ಜೆಗಳನ್ನು.

ನರೇಂದ್ರ ಪೈ ನನ್ನ ಖಾಸಾ ಗೆಳೆಯನಾಗಲಿ, ಚಡ್ಡಿದೋಸ್ತನಾಗಲಿ ಅಲ್ಲಾ. ಕ್ಲಾಸ್ ಮೇಟ್ ಕೂಡಾ ಅಲ್ಲ. ಒಂಥರಾ ಅಪರಿಚಿತ ಪರಿಚಿತ. ಫೋನ್ ಫ್ರೆಂಡ್. ಮಂಗಳೂರಿನಲ್ಲಿ ಪ್ರಜಾವಾಣಿ ದೀಪಾವಳಿ ಸ್ಪರ್ಧೆಯ ಬಹುಮಾನ ವಿತರಣೆಯಲ್ಲಿ ಎದುರಾಗಿ ಕೈಕುಲುಕಿದ ಕೈ ಈ ಪೈ. ಅಮೇಲೆ ಫೇಸ್ ಬುಕ್‌ನಲ್ಲಿ ಗೊತ್ತಾದದ್ದು ಇವರು ವಿಮರ್ಶಕ ಎಂದು. ಅವರ ವಿಮರ್ಶೆ ಓದಿದಾಗ ಗೊತ್ತಾದದ್ದು ಅವರು ಒಬ್ಬ ಒಳ್ಳೆಯ ಓದುಗನೆಂದು. ಅದಕ್ಕೆ ಕಾರಣ ಸಿದ್ದ ಮಾದರಿಗೆ ಒಳಪಡದ ಅವರ ವಿಮರ್ಶೆ. ಹಾಗೆ ಇವರು ಮುಲಾಜಿಲ್ಲದೇ ಪ್ರತಿಕ್ರಿಯಿಸುವ ವ್ಯಕ್ತಿ. ಒಮ್ಮೊಮ್ಮೆ ಕಣ್ಣು ಮೂಗಿಗೆ ರಾಚಿದಂತೆ ಬರೆದರೆ ಇನ್ನು ಕೆಲವು ಸಲ ತಣ್ಣಗೆ ಮುಖಕ್ಕೆ ಕನ್ನಡಿ ಹಿಡಿದಂತೆ ಬರೆಯುವುದು ಇವರ ವೈಖರಿ. ಅದೇನೆ ಇರಲಿ ಇವರ ಕತೆಗಳ ಮೇಲೆ ಕಣ್ಣಾಡಿಸಿದಾಗ ಅನಾವರಣವಾದದ್ದು ಮಾತ್ರ ಅಪ್ಪಟ ಬದುಕಿಗೆ ಮುಖಾಮುಖಿಯಾಗುವ ಸ್ವಭಾವ ಮತ್ತು ತನ್ನ ಸುತ್ತ ತಾನೇ ಒಂದು ಬಿತ್ತಿ ಕಟ್ಟಿಕೊಳ್ಳುವ ಪರಿ. ಇದು ಸರಿ ಎಂದರೆ ಸರಿ ಮತ್ತು ತಪ್ಪೆಂದರೆ ತಪ್ಪು. ಹಾಗೆಂದ ಮಾತ್ರಕ್ಕೆ ಇವು ಹೊರಜಗತ್ತಿಗೆ ತೆರೆದುಕೊಳ್ಳುವುದಿಲ್ಲ ಎಂದಲ್ಲಾ. ಬದಲಾಗಿ ಅಗಲಕ್ಕೆ ಹರಡಿಕೊಳ್ಳದೇ ನೇರವಾಗಿ ದೂರಸಾಗುವ ಬಿಟ್ಟ ಬಾಣದ ಗುಣವುಳ್ಳದ್ದು. ಈ ಅಂಶವನ್ನು ಅವರ ಕನಸುಗಳು ಖಾಸಗಿ ಕತೆಯ ‘ನನ್ನ ವೈಯಕ್ತಿಕಗಳು ಕೊನೆಗೂ ನಿಮ್ಮದೂ ಆಗದೇ ಹೋಗುವುದಾದರೆ ನಿಮಗೆ ನನ್ನ ವೈಯಕ್ತಿಕಗಳನ್ನೆಲ್ಲಾ ಬರೇ ಖುಶಿಗೆ ಓದಿಕೊಳ್ಳುವ ಹಕ್ಕು ಕೂಡಾ ಇರುವುದಿಲ್ಲ. ಅಲ್ವಾ..? ಎಂಬ ಸಾಲುಗಳು. ಇವು ಕಡಿವಾಣ ಹಾಕಿದಂತೆ ಅನ್ನಿಸುವ ಆದರೆ ಆಪ್ತತೆ ಬೇಡುವ ಸಾಲುಗಳು. ದೂರ ದೂಡಿದ ಮಾತುಗಳಲ್ಲಿ ಹತ್ತಿರಕ್ಕೆ ಬರಸೆಳೆವ ಸಾಲುಗಳ ಮಧ್ಯದಲ್ಲೇ ಕತೆಯ ಕೊನೆಯಲ್ಲಿ’ಒಂದು ಚೂರೂ ಪ್ರತಿಭಟಿಸದೇ ಯಾಕೆ ಸತ್ತಳು ಅವಳು..?’ ಪ್ರಶ್ನೆಗೆ ಉತ್ತರ ಹುಡುಕಬೇಕಾದ ಅನಿವಾರ್ಯತೆಗೆ ಏನೆನ್ನುವುದು.

ಇನ್ನು ಕೆಂಪು ಹಾಲು ಕತೆಯಲ್ಲಿ ‘ಮುಂದೆ ಅಪ್ಪನ ಪಂಚೆಯನ್ನು ಮುದ್ದೆ ಮಾಡಿ ಹಿಡಿದು ಅಳುತ್ತಾ ನಡೆಯುತ್ತಿದ್ದ ನಾನು, ಹಿಂದೆ ಅಸಡ್ದಾಳ ಪದ ಹಾಡುತ್ತಿದ್ದ ಅಪ್ಪ.’ ಎಣ್ಣೆಯ ಏಟಿನಲ್ಲಾದರೂ ಅಪ್ಪ ಮುಲಾಜಿಗೆ ಒಳಪಡೆದ ಉಟ್ಟ ಪಂಚೆಯ ಹಂಗನ್ನೇ ತೊರೆದು ಸಾಗಿದ ದಾರಿಯಲ್ಲೇ ಸಾಗುವ ಅನಿವಾರ್ಯತೆಯ ಮಗ ಅಪ್ಪನ ಮರ್ಯಾದೆಯ ರೂಪವಾದ ಪಂಚೆಯನ್ನೇ ಮುದ್ದೆ ಮಾಡಿ ಕೈಯಲ್ಲಿ ಹಿಡಿದು ಸಾಗುತ್ತಾನೆ ಮತ್ತು ಅಪ್ಪ ತಿರಸ್ಕರಿಸಿದ ಹಂಗುಮೀರಿದ ಜಗತ್ತಿನ್ನಲ್ಲೇ ತನಗೊಂದು ಬದುಕು ಕಟ್ಟಿಕೊಳ್ಳುವ ಅಗತ್ಯತೆ ಅವನದ್ದು. ಇಲ್ಲಿ ಅಪ್ಪನ ಸಾಮಾಜಿಕ ಬದುಕಿಗೆ ಬೆನ್ನು ಹಾಕಿದ ಶಾಶ್ವತವಾದದ್ದಲ್ಲ. ನಾಳೆ ಮತ್ತೆ ಇದೇ ವ್ಯವಸ್ಥೆಯಲ್ಲಿ ಬದುಕಬೇಕು ಎಂಬ ಅರಿವು ಅಪ್ಪನ ಹೆಜ್ಜೆಯನ್ನು ಅಸಡ್ಡಾಳ ಹೆಜ್ಜೆಯನ್ನಾಗಿಸಿದ್ದು. ಮತ್ತು ಅದು “ಈ ಅಪ್ಪನಿಗೆ ಯಾಕೆ ಹೀಗೆಲ್ಲಾ ಮಾಡಬಾರದು ಅಂತ ಗೊತ್ತಾಗುವುದಿಲ್ಲವೋ..” ಎಂಬ ಮಾತಿನಲ್ಲಿ ಅಪ್ಪನ ಬಗೆಗಿನ ಕಳಕಳಿಗಿಂತ ತನ್ನ ಬದುಕಿನ ನಿಟ್ಟಿನ ಅಗತ್ಯತೆಯಾಗಿ ಹೊರ ಹೊಮ್ಮುತ್ತದೆ. ಅದೆ ಕತೆಯಲ್ಲಿನ “ ಬಾಣಾಂತಿ ಬೆಕ್ಕಿಗೂ ಕಣ್ಣಮ್ಗೆ ರಕ್ತ ಇಲ್ಲಾ ಕಾಣಿ. ತಂದೂ ಮರಿ ಅದ್ರದ್ದೂ ಮರಿ ಅಂದೇಳಿ ಇತ್ತಾ ಅದ್ಕೆ..?” ಕೂಡಾ ಇಂಥದ್ದೇ ಚಿಂತನೆಗೆ ಹಚ್ಚುತ್ತವೆ. ಇಲ್ಲಿ ಬೆಕ್ಕು ಹಕ್ಕಿಯ ಮರಿಗಳನ್ನು ತಿನ್ನುವಾಗ ತನ್ನ ಮರಿಗಳ ನೆನೆಪು ಕಾಡಲಿಲ್ಲವೇ..? ತಟ್ಟನೆ ಉದ್ಬವಿಸುವ ಮಾತೃತ್ವದ ಭಾವಕ್ಕೆ ಸವಾಲು ಎಸೆದಂತಹ ಪ್ರಶ್ನೆ ಹಕ್ಕಿಯ ಮರಿಗಳು ಬೆಕ್ಕಿನ ಆಹಾರ ಎಂಬ ಸಹಜ ಕಟು ಸತ್ಯದೆದುರು ಅದೇ ವೇಗದಲ್ಲಿ ಮಾಯವಾಗದೇ ಇರುವುದು ಮತ್ತು ‘ಮುನ್ನಿ ಈಗ ಅಳುತ್ತಿರುವುದು ಗುಬ್ಬಚ್ಚಿ ಮರಿಗೋ ಪೆಟ್ಟು ತಿಂದ ಆ ಬೆಕ್ಕಿಗೋ..?’ ಎಂಬ ಸಾಲುಗಳು ಎದುರಾಗುವುದು ಈ ಬದುಕಿನ ಅಗತ್ಯತೆ ಎನ್ನುವುದನ್ನು ಪ್ರಶ್ನಿಸುವ ಸಾಲಾಗಿ ಆದಿ ಅಂತ್ಯಗಳಿಗೆ ಒಳಪಡದೆ ನಿರಂತರತೆಗೆ ಕಾರಣವಾಗುತ್ತದೆ.

ಕತೆ ‘ರುಕ್ಕುಮಣಿ’ ಬದುಕು ಖಾಸಗಿಯಾಗಿಸುವ ಕ್ಷಣಗಳದ್ದು. ಕನಸು ಖಾಸಗಿ ಎಂದ ಕತೆಗಾರ ಇಲ್ಲಿ ಬದುಕು ಖಾಸಗಿ ಎಂಬ ನಿಲುವಿಗೆ ಬರುತ್ತಾನೆ . ಆಪ್ಪಿಯಮ್ಮ ಅವಳ ಬಯಾಲಾಜಿಕಲ್ ಮಗಳಲ್ಲದ ಮಗಳು ರುಕ್ಕುಮಣಿ , ಅಪ್ಪಿಯಮ್ಮನ ಬದುಕಿಗಿಂತ ಬಿನ್ನವೇ ಆದ ರುಕ್ಕುಮಣಿ ಬದುಕು ಮತ್ತು ಸಹಜವಾದ ತನ್ನ ಬದುಕು ತನ್ನದೆಂಬ ಅವಳ ಹಂಬಲ. ಇವುಗಳ ನಡುವೆ ಎಲ್ಲವನ್ನೂ ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಹವಣಿಸುವ ಇತರ ಬದುಕಿಗೆ ಬೆಲೆಯನ್ನೇ ಕೊಡದ ಹುಡುಗರು ಮತ್ತು ಅವರ ದಾಷ್ಯ. ಇದನ್ನು ಮೀರುವ ಪ್ರಯತ್ನದಲ್ಲಿ “ಅದೆಲ್ಲಾ ನಿಮಗ್ಯಾಕೆ ಅದು ನನ್ನ ಸ್ವಂತ ವಿಷಯ” ಅಂತ ಹೇಳುವುದಕ್ಕೆ ಮುಂದಾಗಿದ್ದಳೋ ಇಲ್ಲವೋ ಅವರಲ್ಲೊಬ್ಬ ಅವಳ ಎದೆಗೆ ಕೈ ಹಾಕಿ “ ಯಾವುದು ಸ್ವಂತದ್ದು ಇದಾ..?”ಎಂದ.’ ಇಂತಹ ಸಾಲುಗಳು ಹೈವೇ ರಸ್ತೆಯಲ್ಲಿನ ರಸ್ತೆತಡೆಯಂತೆ ನಮ್ಮನ್ನು ಕ್ಷಣ ಹಿಡಿದಿಟ್ಟೇ ಮುಂದಕ್ಕೆ ಬಿಡುತ್ತದೆ. ಮುಂದೆ ಇದೇ ಕತೆಯ ಅಂತ್ಯದಲ್ಲಿ ರುಕ್ಕುಮಣಿಯ ಸಾವು ಮತ್ತು ಅಪ್ಪಿಯಮ್ಮನ ದುಗುಡ ಓದುಗನ ಎದೆಯ ಕದ ತಟ್ಟುವ ‘ಅವರ ಕಂಗಳ ಬಟ್ಟಲಲ್ಲಿ ತುಂಬಿ ನಿಲ್ಲುವ ನೀರಿನಂತೆ ‘ಅತ್ತ ಜಾರುವುದೂ ಇಲ್ಲ, ಇತ್ತ ಸುರಿಯುವುದೂ ಇಲ್ಲಾ’ ಎಂಬ ಸಾಲಿನಲ್ಲಿ.

ರಿಕವರಿಯ್ ದುಗ್ಗಪ್ಪ ಕಾಸು ಹೊಂದಿಸಲು ಪಡುವ ಪಾಡು, ಮೊಮ್ಮಗನ ಬೇಡಿಕೆಯಾದ ಬೇಬ್ಲೇಡು. ಒಟ್ಟಿಗೆ ಬದುಕೆಂದರೆ ಎಂದು ಏಗುತ್ತಿರುವಾಗಲೇ ಲೇಖರು ಅವನಿಗೆ ಎದುರಾಗಿಸುವ ಸಾವು..! ತಲೆ ತುಂಬಿದ ಹಣ ಹೊಂದಾಣಿಕೆ ರಸ್ತೆಯ ಸಿಗ್ನಲ್ಲಿ ನಿಂತ ಶವಯಾತ್ರೆಯಲ್ಲಿ ಹೆಣ ಹೊತ್ತು ನಿಂತವರ ಹೆಗಲಿನ ಮೇಲಿನ ಹೆಣವೇ..? ಎಂದುಕೊಳ್ಳುತ್ತಿರುವಾಗಲೇ ನೋವಷ್ಟೇ ಬದುಕಲ್ಲಾ ಮತ್ತು ಬದುಕು ಸಾವಿನಲ್ಲಿ ಮನೆ ಮಾಡಿಲ್ಲ ಎನ್ನುವ ಅಂಶಕ್ಕೆ ಪುರೋಹಿತ ಸಿಡಿಸುವ ಜೋಕು ಮತ್ತು ಅದಕ್ಕೆ ಹೆಣ ಹೊತ್ತು ನಿಂತವರಿಗೆ ಒತ್ತರಿಸುವ ನಗು. “ಎಲ್ಲರೂ ಕದ್ದು ಕದ್ದುನಗತೊಡಗಿದರು..” ಇಲ್ಲಿ ನಗುವಿನ ಮುಕ್ತ ಅಭಿವ್ಯಕ್ತತೆಗೆ ತಡೆಯಾದದ್ದು ಯಾವುದು..? ಹೆಣವೇ..? ಹೆಣ ಹೆಗಲಿನ ಮೇಲಿರುವಾಗ ನಗು ನಿಷಿದ್ದ ಎಂಬ ಸಾಮಾಜಿಕ ಬದ್ಧತೆಯೇ..?.

ಕಥನ ಕುತೂಹಲದಲ್ಲಿ ಎದುರಾಗುವ ಎರಡು ಸಾಗುವಾನಿ ಮರಗಳಿಗೆ ಸಂಬಂಧಿಸಿದ ‘ಒಂದು ತನ್ನ ಜಾತಿ ಮರ್ಯಾದೆಗೆ ಸರಿಯಾಗಿ ನೆಟ್ಟಗೆ ಪೊಗದಸ್ತಾಗಿ ಬೆಳೆದರೆ ಇನ್ನೊಂದು ಸೂರ್ಯನ ಬೆಳಕಿಗಾಗಿ ಯಾವ್ಯಾವ ಭಂಗಿಯಲ್ಲಿ ಬಾಗಿ ಬಳುಕಿ ಕೃಶವಾಗಬಹುದೋ ಅದನ್ನೆಲ್ಲಾ ಪ್ರಯತ್ನಿಸಿ ಪಾಪ ಅರ್ಧ ಒಣಗಿಯೇ ಹೋಗಿತ್ತು.’ ಈ ಸಾಲುಗಳು ಹುಟ್ಟು ಹಾಕಿದ ಅತೀತ ಅನುಭವವನ್ನು ಅಕ್ಷರಕ್ಕಿಳಿಸುವಲ್ಲಿ ನಾನು ಸೋತು ಮುಂದೆ ಸಾಗುತ್ತಿದ್ದೇನೆ. ಇಂಥ ಗಿಡಮರಗಳ ರಾಶಿಯಲ್ಲಿನ ಗೊಂದಲ ಅಧ್ವಾನಗಳ ಅಡಿಯಲ್ಲಿ ಬದುಕುವಾಗ ‘ಉಪೇಕ್ಷೆ..’ ಒಂದೇ ನಮ್ಮನ್ನು ಕೈ ಹಿಡಿದು ನಡೆಸಬಲ್ಲುದು ಎಂಬ ಅರಿವನ್ನು “ಅದರಲ್ಲಿ ಯಾರೇ ಹೊಕ್ಕು ಕೂತರೂ ಇನ್ನೊಬ್ಬರಿಗೆ ಗೊತ್ತಾಗುವುದೇ ಇಲ್ಲಾ. ಹಾಗಿದ್ದೂ ಅಲ್ಲಿ ಯಾರೇ ಇದ್ದರೂ ಅದು ನಾಯೋ ಇಲಿಯೊ ಅಂದ್ಕೊಳ್ಳುವುದು ಎಲ್ಲರಿಗೂ ಕ್ಷೇಮ” ಎಂಬ ಸಾಲುಗಳು ಕಟ್ಟಿಕೊಡುತ್ತವೆ. ಹೆದರುವುದು ಬದುಕಲ್ಲಾ.. ಎದುರಿಸುವುದು ಬದುಕು.. ಬೇಡವಾದದ್ದನ್ನು ಉಪೇಕ್ಷಿಸಿ ನಿರಮ್ಮಳನಾದೆ ಎನ್ನುವಾಗಲೇ ‘ “ಅಲ್ಲಾ ಸುಮ್ಮನೆ ಹೇಳಿದ್ದು. ನೀವೇನೂ ಹೆದರಬೇಡಿ”ಎಂದೂ ಹೆದರಿಸಿದರು’ ಎಂಬ ಸಾಲುಗಳು ಎದುರಾಗುತ್ತವೆ.

ಹಿಂಸಾರೂಪೇಣ ಕತೆಯಲ್ಲಿನ ‘ಪೇಪರಿನಲ್ಲಿ ಹೆಂಡ್ತಿ ಮಕ್ಕಳಿಗೆ ವಿಷಕೊಟ್ಟು ಸತ್ತವರು, ನೇಣು ಹಾಕ್ಕೊಂಡವರು,ಕೆರೆಯಲ್ಲಿ ಮುಳುಗಿದವರು, ಎಲ್ಲಾ ಹೇಗೆ ಸತ್ತರು? ಮೊದಲು ಅವರಿಗೆ ಸಾಲ ಇತ್ತಾ ನೋಡಿ ನೀವು! ‘ ಸಾಲುಗಳು ಗಮನ ಸೆಳೆಯುತ್ತವೆ. ಈ ಕತೆ ಓದುವಾಗ ನೆನಪಿಗೆ ಬರುವುದು ತಲೆ ನೋವಿಗೆ ಕಾಲಿಗೆ ಔಷಧಿ ಹಚ್ಚಿದರು ಎಂಬ ಮಾತು. ಬೇಕಾದದ್ದನ್ನ ಬಿಟ್ಟು ಬಾಕಿ ಎಲ್ಲಾ ಮಾಡುವ ನಮ್ಮ ಜನ ಇತರರ ಸಾವಿನಲ್ಲೂ ತಮ್ಮ ಬೇಳೆ ಬೇಯಿಸುವ ಅಂಶಗಳನ್ನೇ ಹುಡುಕುತ್ತಾರೆ ಎಂಬ ಅಂಶದೊಂದಿಗೆ ವಿಷಯಾಂತರದ ಅಪಾಯಗಳನ್ನೂ ಕಣ್ಣಮುಂದಿಟ್ಟಿದ್ದಾರೆ.

ಸಂಕಲನದ ಕೊನೆಯ ಕತೆಯ ಶೀರ್ಷಿಕೆ ‘ಇದಕ್ಕೆಲ್ಲಾ ಅರ್ಥ ಎನ್ನುವುದಿಲ್ಲ’ ಎನ್ನವುದೇ ಸತ್ಯವಾಗಿ ನನಗೆ ಕಾಣಿಸಿದ್ದು.ಅರ್ಥೈಸಿಕೊಳ್ಳಬೇಕಾದ ಅರ್ಥಕಂಡುಕೊಳ್ಳಬೇಕಾದ ಜವಾಬ್ದಾರಿ ಓದುಗನದ್ದು ಎಂಬ ಸಾಹಿತ್ಯ ಜಗತ್ತಿನ ಸತ್ಯ ನಮ್ಮ ಮುಂದಿಡುತ್ತಾರೆ.

ನರೇಂದ್ರ ಪೈ ಅವರ ಕತೆ ಶುಷ್ಕ ಓದಿಗೆ ಜಾಳಾಗಿ ಅನುಭವವಾದಲ್ಲಿ ಆಶ್ಚರ್ಯವಿಲ್ಲ. ಅದು ತೊಡಗಿಸಿಕೊಳ್ಳುವ ಓದುಗನನ್ನು ಕೇಳುತ್ತದೆ ಮತ್ತು ಅವನನ್ನು ಓದಿನ ಹಾದಿಯಲ್ಲಿ ಜೊತೆಗಾರನಾಗಿ ಬಯಸುತ್ತದೆ. ಈ ನಿಟ್ಟಿನ ನಿರೂಪಣೆಗೆ ನರೇಂದ್ರ ಪೈ ಬದುಕನ್ನು ಕಂಡ ಅವರದ್ದೇ ಆದ ಮನಸ್ಥಿತಿಯ ಜೊತೆಗೆ ಅವರ ಅಗಾಧ ಓದೂ ಒಂದು ಕಾರಣವಿರಬಹುದು. ಆದ್ದರಿಂದ ಇದು ಶುಷ್ಕ ಓದಿಗೆ ಯೋಗ್ಯವಲ್ಲದ ಪುಸ್ತಕ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಂಜುನಾಥ ನಾಯ್ಕ್

Comments