Article

ಸೊನಾಟಾ, ಧರ್ಮಪುತ್ರ, ವಾಸಾಂಸಿ ಜೀರ್ಣಾನಿ - ಎಲಕುಂಚವಾರರ ಮೂರು ನಾಟಕಗಳು

ಮರಾಠಿ ಸಾಹಿತ್ಯದಂತೆಯೇ ರಂಗಭೂಮಿಯೂ ಸಮೃದ್ಧ. ವಿಜಯ ತೆಂಡೂಲ್ಕರ್ ನಂತರದ ಮಹತ್ವದ ನಾಟಕಕಾರ ಮಹೇಶ ಎಲಕುಂಚವಾರ.  ವಸ್ತು, ವಿನ್ಯಾಸ, ತಂತ್ರಗಳ ಮೂಲಕ ಗಮನ ಸೆಳೆಯುವ ಅವರ ಮೂರು ನಾಟಕಗಳು ’ಸೊನಾಟಾ’, ’ ಧರ್ಮಪುತ್ರ’, ’ವಾಸಾಂಸಿ ಜೀರ್ಣಾನಿ’. ಈ ಮೂರನ್ನೂ ಕನ್ನಡಕ್ಕೆ ತಂದವರು ಗಿರೀಶ ಕಾರ್ನಾಡರು. 

ಮೂರೂ ಏಕಾಂಕ ನಾಟಕಗಳು ( one act plays).

'ಸೊನಾಟಾ' ಮುಂಬೈ ಮಹಾನಗರದಲ್ಲಿ ನೆಲೆಸಿದ ಮಧ್ಯಮವರ್ಗದ, ಆಧುನಿಕತೆಗೆ ತೆರೆದುಕೊಂಡ ಮೂವರು ಹೆಂಗಳೆಯರ ಕಥನ. ಉಡುಪು, ಆಹಾರ-ವಿಹಾರ, ವೃತ್ತಿ, ಹವ್ಯಾಸ ಒಂದೊಂದರಲ್ಲೂ ಅವರಿಗಿರುವ ವೈರುಧ್ಯ.. ಅವರ ಜೀವನದಲ್ಲಿ ಸುಳಿಯುವ ಪುರುಷರು.. ಮೂವರ ಮನೋಭೂಮಿಕೆಯ ತವಕ, ತಲ್ಲಣಗಳು.. ಕಳವಳಕಾರಿ ಸಂಗತಿಗಳು..ಏಕಾಂಗಿಯಾಗಿ ಬದುಕಿನ ಸವಾಲುಗಳನ್ನು ಮೆಟ್ಟುತ್ತಲೇ ಪರಸ್ಪರರನ್ನು ವಂಚಿಸುವ ಅನಿವಾರ್ಯತೆ.. ಬಿಡುಬೀಸು ಎನಿಸುವ ಅವರ ನಡೆನುಡಿ.. ಸದಾ ಗಿಜಿಗುಡುವ ಮಹಾನಗರದಲ್ಲಿ ಕಳೆದು ಹೋಗುವ ಬದುಕಿನ ಚಿತ್ರಣ. 

'ಧರ್ಮ ಪುತ್ರ'  ಕೇವಲ ಇಬ್ಬರು ಪಾತ್ರಧಾರಿಗಳಿರುವ ಮೂರು ಪಾತ್ರಗಳಿರುವ ನಾಟಕ. ಹೆಸರೂ ಇಲ್ಲದ ಪಾತ್ರಗಳು.. ಗೃಹಸ್ಥ,  ಮಹಿಳೆ ಮತ್ತು ಅವರು ದತ್ತು ತೆಗೆದುಕೊಂಡ ಅನಾಥ ಮಗು. ಅವರಿಬ್ಬರೂ ಒಬ್ಬರಾದ ನಂತರ ಒಬ್ಬರು ಮಗುವಿನ ಪಾತ್ರವನ್ನು ನಿರ್ವಹಿಸುವ ರೀತಿಯೇ ಅದ್ಭುತ. ಸಂಗಾತಿಯಲ್ಲಿ ಸಹಜ ನಿರೀಕ್ಷೆಗಳನ್ನು ಇರಿಸಿಕೊಂಡ ಪತಿ. ಆತನ ಕೈ ಸೋಕುವುದು ದೂರದ ಮಾತು; ಮಾತೆತ್ತಿದರೆ ಅಸಹ್ಯ ಎಂಬ ಮನೋಭಾವದ ಪತ್ನಿ. 

ಬಾಲಮಾನಸ ಶಾಸ್ತ್ರ (child psychology) ದ ಪ್ರಕಾರ ಮಗುವನ್ನು ಬೆಳೆಸುತ್ತಿದ್ದೇವೆಂಬ ಭ್ರಮೆಯಲ್ಲಿ ಕೊನೆವರೆಗೂ ತೇಲಾಡುವ ಪಾತ್ರಗಳು. ಅವರಿಬ್ಬರ ಅಸಹಜ ವರ್ತನೆ, ಆಂತರ್ಯದ ಕ್ರೌರ್ಯ.. ಸಮಾಜದೆದುರು ಅವರು ಹಾಕುವ ಸೋಗು.. ಕೊನೆಯಲ್ಲಿ ಅವರ ವಿಕೃತಿಗೆ ಬಲಿಯಾಗಿ ಜೀವ ತೆರುವ ಅನಾಥ ಮಗು. ಧರ್ಮ ಅಧರ್ಮಗಳ ಬಗೆಗಿನ ಅವರ ಹಸಿಬಿಸಿ ನಂಬಿಕೆಗಳು, ಮೌಡ್ಯ.. ಹುಸಿ ಆದರ್ಶಗಳು.. ಗೆದ್ದೆವೆಂದು ಬೀಗುವಾಗಲೂ ಸೋತು ಬಸವಳಿಯುವ ಪಾತ್ರಗಳು. ಮಿಥ್ಯೆಯೇ ಆದರ್ಶವಾಗಿ,  ವಿಕೃತಿಯೇ ಸಂಸ್ಕೃತಿಯಾಗಿ ನೆಲೆಗಾಣದ ಜೀವಗಳ ಹೃದಯವಿದ್ರಾವಕ ಕಥನ. 

'ವಾಸಾಂಸಿ ಜೀರ್ಣಾನಿ'  ಮರಣ ಶಯ್ಯೆಯ ಮೇಲಿರುವ ಅಪ್ಪ. ಅಸಹನೆಯಿಂದ ಆತನ ಅಂತ್ಯವನ್ನು ಕಾಯುತ್ತ ಕುಳಿತ ಹೆಂಡತಿ, ಮಕ್ಕಳು, ಸಂಬಂಧಿ.. ಫ್ಲ್ಯಾಶ್ ಬ್ಯಾಕ್ ರೀತಿಯಲ್ಲಿ ಬಿಚ್ಚಿಕೊಳ್ಳುವ ಕತೆ. ಓದುಗ ನಿರೀಕ್ಷೆಯನ್ನೇ ಮಾಡಿರದಂಥ ತಿರುವುಗಳು, ಪಾತ್ರಗಳ ಒಳತೋಟಿ.. ಗೀತೆಯ ಒಂದು ಶ್ಲೋಕದಿಂದ ಆರಿಸಿಕೊಂಡ ಸಾಲು ಕಥೆಯ  ಶೀರ್ಷಿಕೆ. ಜೀವಿಗೆ ಸಾವು ಖಚಿತ.. ಬಟ್ಟೆ ಬದಲಾಯಿಸಿದಂತೆ ಶರೀರ ಬದಲಾಯಿಸುವ ಆತ್ಮ ಎಂಬರ್ಥದ ಶ್ಲೋಕ.. ಶರೀರ ಕಳಚುವ ಆತ್ಮದ ಮಾತು ದೂರ,  ಮನುಷ್ಯ ಕಳಚುವ ಮುಖವಾಡಗಳೇ ಲೆಕ್ಕವಿಲ್ಲದಷ್ಟು ಎಂಬ ದಿಗ್ಭ್ರಮೆಗೆ ದೂಡುವ ಕಥನ. 

ನಾಟಕಕಾರರು ಬಳಸುವ ಆಧುನಿಕ ತಂತ್ರಗಳು ನೇರವಾಗಿ ನಿರೂಪಿಸದೇ ಪಾತ್ರಗಳ ಮನೋವ್ಯಾಪಾರದ ಮೂಲಕವೇ ಕಥನದ ಆಗುಹೋಗುಗಳನ್ನು ಸೂಚಿಸುತ್ತ ಹೋಗುವ ಕೃತಿಕಾರರ ಕೌಶಲ ಅನ್ಯಾದೃಶ. ಓದುಗರ ಕಲ್ಪನೆಯಲ್ಲಿ ಬಿಚ್ಚಿಕೊಳ್ಳುವ ಪಾತ್ರಗಳನ್ನು ರಂಗದ ಮೇಲೆ ನೈಜವಾಗಿ ನೋಡುವ ಅನುಭವ ವರ್ಣನಾತೀತ. 'ತಮ್ಮ ವಿಶಿಷ್ಟ ಶೈಲಿ,  ನಿರೂಪಣೆಯ ಮೂಲಕ ಸಾಮಾನ್ಯ ಮನುಷ್ಯನಲ್ಲಿ ಹುದುಗಿದ ಆತಂಕ-ಕ್ರೌರ್ಯ, ಆತ್ಮ ಭೀತಿ, ದುಸುಮುಸಿಗಳ ಆಂತರಿಕ ಜಗತ್ತನ್ನು ತೆರೆದಿಡುವ ಎಲಕುಂಚವಾರರ ನಾಟಕಗಳು ವಾಸ್ತವವಾದದ ಮಿತಿಯನ್ನು ದಾಟುತ್ತವೆ' ಎಂಬ ಮಾತು ಅಕ್ಷರಶಃ ಸತ್ಯ. 

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಂದ್ರಪ್ರಭಾ