Article

ಸ್ತ್ರೀವಾದಿ ನೆಲೆಯಲ್ಲಿ ಸಾಹಿತ್ಯ ಪರಂಪರೆಯ ಅಧ್ಯಯನ

ಕಲಬುರಗಿಯ ಡಾ. ಪ್ರೇಮಾ ಅಪಚಂದ ಅಪರೂಪದ ವಿದ್ವತ್ತು ಇರುವ ಸಂಶೋಧಕಿ. ಹೈದರಾಬಾದ್ ಕರ್ನಾಟಕದ ಪ್ರಮುಖ ಕವಿಯಿತ್ರಿಯರ ಕಾವ್ಯವನ್ನು ತೌಲನಿಕವಾಗಿ ಅಧ್ಯಯನ ನಡೆಸಿ `ಬಿಸಿಲ ನಾಡಿನ ಮಹಿಳಾ ಕಾವ್ಯ' ಎಂಬ ಪ್ರೌಢ ಪ್ರಬಂಧ ರಚಿಸಿ ಗುಲಬರ್ಗ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ.

ಓದು, ಅಧ್ಯಾಪನ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಡಾ. ಪ್ರೇಮಾ ಅಪಚಂದ ಅವರ ಹತ್ತು ಲೇಖನಗಳ ಸಂಕಲನ `ಅಂತರಂಗ ಅರುಹಿದಾಗ'. ಪ್ರಾಚೀನ ಕಾಲದಿಂದ ಆಧುನಿಕ ಕಾಲದ ಸಾಹಿತ್ಯದವರೆಗೆ ಇರುವ ತಮ್ಮ ಆಸಕ್ತಿಯನ್ನು ಇಲ್ಲಿ ದಾಖಲಿಸಿದ್ದಾರೆ. ಸಾಹಿತ್ಯ ಸಂಶೋಧನೆಯ ಕ್ಷೇತ್ರದಲ್ಲಿ ಅವರಿಗೆ ಇರುವ ಪರಿಶ್ರಮ ಮತ್ತು ಅಭಿರುಚಿಯ ದ್ಯೋತಕವಾಗಿ ಇಲ್ಲಿನ ಲೇಖನಗಳನ್ನು ಗಮನಿಸಬೇಕು. ಮಹಿಳೆಯರು ಸಾಹಿತ್ಯ ಸಂಶೋಧನೆಯ ಕ್ಷೇತ್ರದಲ್ಲಿ ಕೃಷಿ ಮಾಡುವುದು ಅಪರೂಪವಾಗುತ್ತಿರುವ ಈ ದಿನಗಳಲ್ಲಿ ಪ್ರೇಮಾ ಅವರು ಆಸಕ್ತಿಯಿಂದ ಪ್ರವೇಶಿಸಿರುವುದು ಮೆಚ್ಚುಗೆಯ ಅಂಶ. ಇಲ್ಲಿನ ಲೇಖನಗಳನ್ನು ಗಮನಿಸಿದರೆ ಅವರು ಇದರಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿರುವುದು ಕಂಡುಬರುತ್ತದೆ.

ಪ್ರೇಮಾ ಅವರು ಸ್ತ್ರೀವಾದಿ ನೆಲೆಯಲ್ಲಿ ಸಾಹಿತ್ಯ ಪರಂಪರೆಯನ್ನು ಕಂಡಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಪ್ರಜಾಸತ್ತಾತ್ಮಕ ಅಭಿವ್ಯಕ್ತಿಯ ವೇದಿಕೆಯಾಗಿ ಅಸ್ತಿತ್ವಕ್ಕೆ ಬಂದಿದ್ದ `ಅನುಭವ ಮಂಟಪ' ಬಸವಾದಿ ಶರಣರ ಉದಾತ್ತ ನಡವಳಿಕೆಯಲ್ಲಿ ಹೇಗೆ ಲಿಂಗ ತಾರತಮ್ಯವನ್ನು ನಿವಾರಿಸಿದ ಅದ್ಭುತ ವೇದಿಕೆಯಾಗಿತ್ತು ಎಂಬುದನ್ನು ಅವರು ಆ ಕಾಲದ ವಚನಕಾರ್ತಿಯರ ಉಲ್ಲೇಖಗಳಿಂದ ದೃಢಪಡಿಸುತ್ತಾರೆ. ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದ ಶರಣೆಯರ ವಚನಗಳನ್ನು ಆಧರಿಸಿ ಆ ದಿನಗಳಲ್ಲಿ ಸಮಾಜದ ತಳ ವರ್ಗಗಳ ಶ್ರಮಿಕ ಮಹಿಳೆಯರು ತಮ್ಮ ಸ್ವಂತಿಕೆಯನ್ನು ಸಾಮಾಜಿಕವಾಗಿ ಪ್ರತಿಪಾದಿಸುವ ಸ್ವಾತಂತ್ರ್ಯ ಪಡೆದಿರುವುದನ್ನು ಆಧಾರಗಳಿಂದ ನಿರೂಪಿಸುತ್ತಾರೆ. ಈ ವಿಷಯ ಕುರಿತಾಗಿ ಪ್ರಕಟವಾಗಿರುವ ಕೃತಿಗಳನ್ನು ಆಧರಿಸಿ ತಮ್ಮ ವಿಶ್ಲೇಷಣೆಯನ್ನು ವಿಶದಪಡಿಸುತ್ತಾರೆ. ಹಿಂದಿನ ಆಕರಗಳ ಬುನಾದಿಯ ಮೇಲೆ ತಮ್ಮ ಚಿಂತನೆಯನ್ನು ಹರಳುಗಟ್ಟಿಸುವ ಈ ಕ್ರಮ ಸಂಶೋಧನೆಯಲ್ಲಿ ಒಪ್ಪಿಕೊಂಡಿರುವ ಮಾರ್ಗವೇ ಆಗಿದೆ.

ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕವಾಗಿ ಉಂಟಾಗಿದ್ದ ಶರಣ ಚಳವಳಿಯ ಹಿನ್ನೆಲೆಯಲ್ಲಿ ಸ್ತ್ರೀವಾದಿ ಚಿಂತನೆಯನ್ನು ಇನ್ನಷ್ಟು ವಿಸ್ತರಿಸಿದ ಲೇಖನ `ಮುಕ್ತಾಯಕ್ಕ ಮತ್ತು ಅನುಭವ', `ಮಹಿಳೆ-ಅಂದು ಇಂದು', `ಜನಪದ ಸಾಹಿತ್ಯದಲ್ಲಿ ಮಾತೃತ್ವದ ಪರಿಕಲ್ಪನೆ', `ವಚನ ಸಾಹಿತ್ಯ ಮತ್ತು ಜಾತಿ ಪದ್ಧತಿ' ಲೇಖನಗಳು ಅಪಾರ ಓದಿನ ಹಿನ್ನೆಲೆಯಲ್ಲಿ ನಿರೂಪಿತವಾಗಿವೆ. ಈ ಒಂದೊಂದು ವಿಷಯದ ವ್ಯಾಪ್ತಿ ಅಗಾಧವಾಗಿದ್ದರೂ ತಮ್ಮ ಉದ್ದೇಶಕ್ಕೆ ಬೇಕಿರುವಷ್ಟನ್ನು ಅಡಕವಾಗಿ ಸಂಗ್ರಹಿಸಿಕೊಳ್ಳುವ ಕೌಶಲ್ಯವನ್ನು ಲೇಖಕಿ ಇಲ್ಲಿ ಪ್ರದರ್ಶಿಸಿದ್ದಾರೆ. ಮಹಿಳೆಯ ಕುರಿತಾಗಿ ಭಾರತೀಯ ಪ್ರಾಚೀನ ಸಾಹಿತ್ಯದಲ್ಲಿನ ಉಲ್ಲೇಖಗಳನ್ನು ಆಧರಿಸಿದ್ದಲ್ಲದೆ, ಇಂಗ್ಲಿಷ್ ಶಿಕ್ಷಣದ ನಂತರ ದೇಶದಲ್ಲಿ ಈ ನಿಟ್ಟಿನಲ್ಲಿ ಆಗಿರುವ ಬೆಳವಣಿಗೆಗಳನ್ನು ಗುರುತಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದಷ್ಟು ಹಿಂದೆಯೇ ಮಹಿಳೆಯರ ಸ್ಥಿತಿ ಸುಧಾರಣೆಗೆ ನಡೆದ ಪುನರುಜ್ಜೀವನದ ಪ್ರಯತ್ನಗಳನ್ನು ದಾಖಲಿಸಿದ್ದಾರೆ. ಮಹಿಳೆಯರನ್ನು ಸಮಾನರಂತೆ, ಅವರನ್ನು ಸಶಕ್ತಗೊಳಿಸಲು ಆರಂಭಿಸಿದ ವಿಧಾಯಕ ಕ್ರಮಗಳನ್ನು ಗುರುತಿಸಿದ್ದಾರೆ. ಸತಿ ಪದ್ಧತಿಯನ್ನು ನಿಷೇಧಿಸಲು ಕಾನೂನು ರೂಪಿಸಲು ಒತ್ತಾಯಿಸಿದ ರಾಜಾ ರಾಮ ಮೋಹನರಾಯ್, ಈಶ್ವರಚಂದ್ರ ವಿದ್ಯಾಸಾಗರ ಮೊದಲಾದ ಸಮಾಜ ಸುಧಾರಕರ ಚಟುವಟಿಕೆಗಳು, ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರ ಮಹಿಳಾ ಶೋಷಣೆಯನ್ನು ತಡೆಯುವುದಕ್ಕೆ ಸರ್ಕಾರಗಳು ರೂಪಿಸಿದ ಹಲವಾರು ಕಾನೂನುಗಳ ವಿವರಗಳನ್ನೂ ಲೇಖಕಿ ಕಲೆ ಹಾಕಿದ್ದಾರೆ. ಜನಪದ ಸಾಹಿತ್ಯದಲ್ಲಿ ಮಾತೃತ್ವದ ಪರಿಕಲ್ಪನೆಯನ್ನು ಗುರುತಿಸುವುದಕ್ಕೆ ಆಕರ್ಷಕವಾದ ಹತ್ತಾರು ಜನಪದ ಗೀತೆಗಳ ಭಾಗಗಳನ್ನು ಆಯ್ದುಕೊಂಡಿರುವ ಜಾಣ್ಮೆ ಮೆಚ್ಚುವಂಥದ್ದಾಗಿದೆ. ಹೆಣ್ಣು ಸಮಾಜದ ವ್ಯವಸ್ಥೆಯಲ್ಲಿ ನಿರ್ದಿಷ್ಟ ಪಾತ್ರ ನಿರ್ವಹಣೆಗೆ ನಿಯೋಜಿತವಾಗಿದ್ದರೂ ಆಕೆಯ ಕುಟುಂಬ ಪ್ರೀತಿ, ತಾಯ್ತನಕ್ಕೆ ತುಡಿಯುವ ವ್ಯಕ್ತಿತ್ವವನ್ನು ರಮ್ಯವಾದ ರಚನೆಗಳ ಮೂಲಕ ಕಟ್ಟಿಕೊಡುವ ಜನಪದರ ಕಾರ್ಯ ಪ್ರತಿಭೆಯನ್ನು ಇಲ್ಲಿ ಲೇಖಕಿ ಗುರುತಿಸಿ ಉಲ್ಲೇಖಿಸಿದ್ದಾರೆ. ಭಾವಪುಷ್ಟಿಗೆ ಪೂರಕವಾದ ಜನಪದ ಗೀತೆಗಳ ಉಲ್ಲೇಖದಿಂದ ಲೇಖನಗಳು ಹೃದಯಸ್ಪರ್ಶಿ ಗುಣವನ್ನು ಪಡೆದಿವೆ. `ಸೌಂದರ್ಯ ಸಮೀಕ್ಷೆ', `ಭಾರತೀಯ ಕಾವ್ಯಮೀಮಾಂಸೆ'ಯಂಥ ಆಚಾರ್ಯ ಕೃತಿಗಳನ್ನು ಆಧರಿಸಿ ರಚಿಸಿದ ಈ ಕೆಲವು ಲೇಖನಗಳು ಸಾಹಿತ್ಯಿಕವಾಗಿಯೂ ಮೌಲ್ಯಯುಕ್ತವಾಗಿವೆ.

`ಲೈಂಗಿಕ ಅನುಭವ ಪುರುಷರಿಗೆ ದೇಹ ಮೂಲದ್ದಾದರೆ, ಸ್ತ್ರೀಯರಿಗೆ ಮನೋಮೂಲವಾದದ್ದು. ಹೊರ ಪ್ರಪಂಚಕ್ಕೆ ಸದಾ ತೆರೆದುಕೊಂಡ ಪುರುಷನಿಗೆ ದೇಹದ ಬಯಕೆಯನ್ನು ತೀರಿಸುವ ಸಾಧನೆಯಾಗಿ ಮಹಿಳೆಯನ್ನು ನೋಡಲಾಗುತ್ತದೆ. ಆದರೆ ಮನೆ, ಸಂಸಾರ, ಇವನ್ನು ಏಕತ್ರಗೊಳಿಸಿ ಅಂತಿಮವಾಗಿ ಭಾವಿಸುವ ಮಹಿಳೆಗೆ ಪುರುಷನೊಂದಿಗಿನ ದೈಹಿಕ ಸಮಾಗಮ ಮನಸ್ಸಿಗೆ ಸಂಬಂಧಿಸಿದ್ದಾಗಿದೆ. ಇದಕ್ಕೆ ಕಾರಣ ಅವಳ `ಗೃಹಾಭಿಮುಖ ಜೀವನವೇ ಆಗಿದೆ'. ದಾಂಪತ್ಯದ ಪರಿಣಾಮಗಳು ಮಹಿಳೆಯನ್ನು ಬಾಧಿಸುವಷ್ಟು ಪುರುಷರನ್ನು ಬಾಧಿಸಲಾರವು...' ಎಂಬುದು ಲೇಖಕಿಯ ಸ್ತ್ರೀವಾದಿ ಚಿಂತನೆ. ಇದಕ್ಕೆ ಪೂರಕವಾದ ವಾದಸರಣಿಯಲ್ಲಿ ಲೇಖನಗಳು ವಿಸ್ತರಣೆಯಾಗಿವೆ.

`ವಚನ ಸಾಹಿತ್ಯ ಮತ್ತು ಜಾತಿ ಪದ್ಧತಿ', `ಬೀದರ್ ಜಿಲ್ಲೆಯ ಒಕ್ಕಲಿಗನ ಹಾಡು' ಲೇಖನಗಳಲ್ಲಿ ವಿಭಿನ್ನ ಆಶಯಗಳ ನಿರೂಪಣೆ ಇದ್ದರೂ ಲೇಖಕಿಯ ಸಾಮಾಜಿಕ ಪ್ರಜ್ಞೆ ಈ ಆಶಯದ ಹಿಂದೆ ತುಡಿಯುವುದನ್ನು ಕಾಣಬಹುದಾಗಿದೆ. ನಾಗರಿಕ ಸಮಾಜದಲ್ಲಿ ಲಿಂಗ ಆಧರಿಸಿದ ತಾರತಮ್ಯಕ್ಕೆ ಅವಕಾಶವಿಲ್ಲ ಎಂಬ ಮನಃಸ್ಥಿತಿಯನ್ನು ಸಾಂದರ್ಭಿಕವಾಗಿ ಪ್ರತಿಪಾದಿಸುವ ಲೇಖಕಿ ತಮ್ಮದು ಸಾಂಸ್ಕೃತಿಕ ದೃಷ್ಟಿಯೂ ಆಗಿದೆ ಎಂಬುದಕ್ಕೆ ಜನಪದೀಯ ಆಕರಗಳನ್ನು ಬಹುವಾಗಿ ಉಲ್ಲೇಖಿಸುತ್ತಾರೆ. ಸಂಶೋಧನೆಯ ಹಾದಿಯಲ್ಲಿ ಆಕರಗಳನ್ನು ಒಂದೆಡೆ ಜೋಡಿಸುವ ತಂತ್ರಗಾರಿಕೆಯ ಜೊತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮನೋಧರ್ಮವನ್ನೂ ಮೇಳೈಸುವಂಥ ಕೆಲಸವನ್ನು ಅವರು ಇಲ್ಲಿ ಮಾಡಿದ್ದಾರೆ.

`ಕನ್ನಡ ಸಾಹಿತ್ಯಕ್ಕೆ ಅಮೋಘವರ್ಷ ನೃಪತುಂಗನ ಕೊಡುಗೆ', `ಗೀತಾ ನಾಗಭೂಷಣರ `ಧುಮ್ಮಸ್ಸು' ಕಾದಂಬರಿಯಲ್ಲಿ ಮಹಿಳಾ ಸಂಘರ್ಷ' ಲೇಖನಗಳ ಲೇಖಕಿಯ ಬಹುಮುಖ ಆಸಕ್ತಿಯ ನಿದರ್ಶನಗಳು. ಸಾಹಿತ್ಯ ಚರಿತ್ರೆಯ ಒಂದು ಪ್ರಮುಖ ಘಟ್ಟವನ್ನು ಆಧುನಿಕ ಓದುಗರಿಗೆ ಪರಿಚಯಿಸುವ ಕೆಲಸ `...ನೃಪತುಂಗನ ಕೊಡುಗೆ' ಲೇಖನದಲ್ಲಿ ಆಗಿದೆ. ಆಧುನಿಕ ಬರಹಗಾರರಲ್ಲಿ ಹೈದರಾಬಾದ್ ಕರ್ನಾಟಕದ ಪ್ರಮುಖ ಪ್ರತಿನಿಧಿಯಾದ ಗೀತಾ ನಾಗಭೂಷಣ ಅವರ ಒಂದು ಕಾದಂಬರಿಯನ್ನು ವಿಶ್ಲೇಷಿಸುವ ಮೂಲಕ ತಾವು ಎಲ್ಲ ಕಾಲದ ಸಾಹಿತ್ಯದ ಬಗ್ಗೆಯೂ ಆಸಕ್ತಿ ಹೊಂದಿದವರೆಂಬುದನ್ನು ಪ್ರಕಟಿಸಿದ್ದಾರೆ. ಪ್ರಾಚೀನ ಸಾಹಿತ್ಯ, ಸಾಮಾಜಿಕ ವಿದ್ಯಮಾನಗಳು, ಜನಪದ ಸಾಹಿತ್ಯದ ಆಶಯಗಳು ಮತ್ತು ಆಧುನಿಕ ಸಾಹಿತ್ಯದ ವಿಷಯಗಳಲ್ಲಿ ತಮ್ಮದೇ ಅನಿಸಿಕೆಯನ್ನು ಪ್ರತಿಪಾದಿಸುವ ವಿದ್ವತ್ತು ಮತ್ತು ಪ್ರತಿಭೆಯನ್ನು ಲೇಖಕಿ ಹೊಂದಿರುವುದು ಈ ಎಲ್ಲಾ ಹತ್ತು ಸಂಶೋಧನಾ ಲೇಖನಗಳಲ್ಲಿಯೂ ಕಾಣಬಹುದಾಗಿದೆ.

ಸರಳವಾದ ವಾಕ್ಯಗಳಲ್ಲಿ ವಿಷಯ ನಿರೂಪಣೆ ಲೇಖಕಿಯ ವಿಶೇಷ. ಸಂವಹನಕ್ಕೆ ಯೋಗ್ಯವಾದ ನಿರೂಪಣಾ ಶೈಲಿ ಇಲ್ಲಿದೆ. ಸಂಶೋಧನೆಯ ವಿಶಿಷ್ಟ ಕ್ಷೇತ್ರದಲ್ಲಿ ಅಡಿ ಇಟ್ಟು ಎಲ್ಲ ಬಗೆಯ ಸವಾಲುಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಈ ಲೇಖನಗಳಲ್ಲಿ ತೋರಿಸಿರುವ ಡಾ. ಪ್ರೇಮಾ ಅಪಚಂದ ಅವರಿಂದ ಕನ್ನಡ ಸಂಶೋಧನೆಯ ಕ್ಷೇತ್ರಕ್ಕೆ ಮತ್ತಷ್ಟು ಕೊಡುಗೆ ಸಾಧ್ಯವಾಗಲಿದೆ ಎಂದು ನಿರೀಕ್ಷೆ ಮಾಡಬಹುದಾಗಿದೆ.

 

ಲಕ್ಷ್ಮಣ ಕೊಡಸೆ