Article

ಸ್ಟೈಲಿಂಗ್ ಅಟ್ ದಿ ಟಾಪ್

ಶಿವರಾಮ ಭಂಡಾರಿಯವರು ಕಳೆದ ಬಾರಿ ಉಜಿರೆಗೆ ಬಂದಾಗ ತಮ್ಮ ಕತೆಯನ್ನು ಸಂಕ್ಷಿಪ್ತವಾಗಿ ಹಂಚಿಕೊಂಡಿದ್ದರು. ಅದನ್ನು ಕೇಳುವಾಗಲೇ ನಮಗೆ "ಅಬ್ಬಬ್ಬಾ" ಎನ್ನಿಸಿತ್ತು. ಬದುಕು ನಡೆಸಲೆಂದು ಕ್ಷೌರಿಕ ವೃತ್ತಿಯನ್ನು ಅವಲಂಬಿಸಿಕೊಂಡು ಕೊನೆಗೆ ಅದೇ ಕ್ಷೇತ್ರದಲ್ಲಿ ಸ್ಟಾರ್ ಪಟ್ಟ ಗಳಿಸಿಕೊಂಡ ಶಿವರಾಮ ಭಂಡಾರಿಯವರ ಜೀವನಗಾಥೆ ಎಂಥವರಲ್ಲೂ ಅಚ್ಚರಿ ಮೂಡಿಸಲೇಬೇಕು!

ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು, ಸಹೋದರಿಯ ಅಕಾಲಿಕ ಸಾವನ್ನು ಅರಗಿಸಿಕೊಂಡು, ಬಂಧುಗಳೆನಿಸಿಕೊಂಡವರಿಂದಲೇ ಅವಮಾನಕ್ಕೊಳಗಾಗಿ, ಬದುಕು ತಂದೊಡ್ಡಿದ್ದ ಸಕಲ ರೀತಿಯ ಕಷ್ಟಗಳಿಗೂ ಸಾಕ್ಷಿಯಾಗಿ.. ಕೊನೆಗೆ "ಶಿವಾಸ್" ಎಂಬ ಸಾಮ್ರಾಜ್ಯವನ್ನು ಕಟ್ಟಿದ ಶಿವರಾಮ ಭಂಡಾರಿಯವರ ಜೀವನ ಪಯಣವನ್ನು ಓದುವಾಗ ಮನಸ್ಸು ಭಾರವಾಗುತ್ತಲೇ ಹೋಗುತ್ತದೆ.

ದಕ್ಷಿಣ ಕನ್ನಡದ ಕುಗ್ರಾಮವೊಂದರಲ್ಲಿ ಹುಟ್ಟಿ, ಬೆಳೆದ ಶಿವರಾಮ ಭಂಡಾರಿ ಇವತ್ತು ಮುಂಬೈನಂಥ ಮಾಯಾನಗರಿಯಲ್ಲಿ "ಶಿವಾಸ್" ಸಮೂಹದ ಒಡೆಯ. ಇವರ ಕೈಚಳಕಕ್ಕೆ ಮಾರುಹೋದ ಬಾಲಿವುಡ್, ಕ್ರಿಕೆಟ್, ಪಾಲಿಟಿಕ್ಸ್ ಹೀಗೆ ಅನೇಕ ಕ್ಷೇತ್ರಗಳ ಸೆಲೆಬ್ರಿಟಿಗಳು ಇವರನ್ನರಸಿಕೊಂಡು ಬರುತ್ತಾರೆ.ವಿಪರ್ಯಾಸವೆಂದರೆ ಇಂದು ಪ್ರಸಿದ್ಧ ಕೇಶವಿನ್ಯಾಸಕರೆನಿಸಿಕೊಂಡಿರುವ ಇವರ ವೃತ್ತಿ ಜೀವನ ಆರಂಭವಾಗಿದ್ದು ವಿಧವೆಯೊಬ್ಬರ ಕೇಶಮುಂಡನ ಮಾಡುವುದರೊಂದಿಗೆ. ಶಿವರಾಮ ಭಂಡಾರಿಯವರೇ ಹೇಳಿಕೊಳ್ಳುವಂತೆ ಅವರು ತಮ್ಮ ಮೊದಲ ಗಿರಾಕಿಯನ್ನು ಕುರೂಪುಗೊಳಿಸಿದ್ದರು!

ಹೀಗೆ..."ಸ್ಟೈಲಿಂಗ್ ಅಟ್ ದಿ ಟಾಪ್" ಪುಸ್ತಕದುದ್ದಕ್ಕೂ ಶಿವರಾಮ ಭಂಡಾರಿಯವರ ದುಃಖ-ಸುಖ, ಕಷ್ಟ-ಇಷ್ಟ, ಸೋಲು-ಗೆಲುವು, ನೋವು-ನಲಿವುಗಳ ಕತೆ ಪ್ರಕಟಗೊಂಡಿವೆ.ಈ ಪುಸ್ತಕದ ಕುರಿತು ದೇವೇಂದ್ರ ಫಡ್ನವಿಸ್, ಉದ್ಧವ್ ಠಾಕ್ರೆ, ಸಿ.ವಿದ್ಯಾಸಾಗರ್ ರಾವ್, ಡಾ| ಡಿ‌.ವೀರೇಂದ್ರ ಹೆಗ್ಗಡೆ, ರವೀನಾ ಟಂಡನ್, ಸೋನೂ ಸೂದ್ ಅವರೆಲ್ಲಾ ಮಾತನಾಡಿದ್ದಾರೆ. ಕರ್ನಾಟಕ ಮೂಲದ ಒಬ್ಬ ಕೇಶ ವಿನ್ಯಾಸಕಾರ ಈ ಮಟ್ಟಿಗೆ ಬೆಳೆದು ನಿಂತಿರುವುದು ನಿಜಕ್ಕೂ ಸಂತಸದ ಸಂಗತಿ.ಇಂಗ್ಲಿಷ್‌ನಲ್ಲಿ ಜಯಶ್ರೀ ಶೆಟ್ಟಿ ಅವರು ಬರೆದಿರುವ ಈ ಕೃತಿಯನ್ನು ಡಾ| ಶಿವಾನಂದ ಬೇಕಲ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾಷಾಂತರಗೊಂಡರೂ ಅದರಲ್ಲಿ ವ್ಯಕ್ತವಾಗುವ ಭಾವನೆಗಳಿಗೆ ಧಕ್ಕೆ ಉಂಟಾಗಿಲ್ಲ. ಈ ಪುಸ್ತಕವನ್ನೊಮ್ಮೆ ಓದಿ ನೋಡಿ

ಸ್ಕಂದ ಆಗುಂಬೆ