Article

ಸ್ತ್ರೀ ಸಂವೇದನೆ ಎಂದರೆ ಇಷ್ಟಲ್ಲದೇ ಮತ್ತಿನ್ನೇನು?

 

ಒಂದು ಪುಟ್ಟ ಸಂತೋಷದ ಘಳಿಗೆ...

ಹೇಳಹೆಸರಿಲ್ಲದೇ ಹೊರಟುಹೋಗಿದ್ದ ಕೊರೊನಾ ನನ್ನ ಜಿಲ್ಲೆಯಲ್ಲೀಗ ಶತಕ ಬಾರಿಸಿ ಮುನ್ನುಗ್ಗುತ್ತಿದೆ. ಮಾಧ್ಯಮ, ಪತ್ರಿಕೆ ಎಲ್ಲಿ ನೋಡಿದರೂ ಮತ್ತದೇ ನೋವು, ಸಾವು, ಬೆದರಿಕೆಗಳ ಸರಮಾಲೆ. ಬರೆಯಲು ಹೊರಟರೆ ಪೆನ್ನು ಕೈಜಾರುತ್ತದೆ. ಮನಸ್ಸು ಮುಷ್ಕರ ಹೂಡುತ್ತದೆ. ಸೂರ್ಯ ಮಾತ್ರ ಹಗಲು ವಾರಸುದಾರಿಕೆ ನಡೆಸಿ, ರಾತ್ರಿ ವಿಶ್ರಮಿಸುತ್ತಾನೆ. ಯಾಕೋ ಇತ್ತೀಚೆಗೆ ಓದಿದ ಸಾಲು, ಸಾಲು ಪುಸ್ತಕಗಳೂ ವಿಷಾದದ ಸರಮಾಲೆಯನ್ನೇ ಹೊದ್ದು ಮತ್ತಷ್ಟು ಬಳಲಿಸಿದವು. ಇಂದು ರಾತ್ರಿ ಜೊತೆಯಾದ ಈ ಪುಟ್ಟ ಪುಸ್ತಕ ಮನದೊಳಗೊಂದು ಖುಶಿಯ ಅಲೆಯನ್ನು ಹುಟ್ಟುಹಾಕಿತು.

ನೈಜೀರಿಯಾದ ಚಿಮುಮಾಂಡ ಪತ್ರಕರ್ತೆ, ಲೇಖಕಿ ಮತ್ತು ಮಹಿಳಾವಾದಿ. ಅವಳ ಗೆಳತಿ ಮಗಳಿಗೆ ಜನ್ಮ ನೀಡಿದಾಗ ತನ್ನ ಮಗಳನ್ನು ಸ್ತ್ರೀವಾದಿಯಾಗಿ ಬೆಳೆಸುವುದು ಹೇಗೆ? ಎಂದು ಪತ್ರಮುಖೇನ ಸಲಹೆ ಕೇಳುತ್ತಾಳೆ. ಅದಕ್ಕೆ ಉತ್ತರರೂಪವಾಗಿ ಚಿಮುಮಾಂಡ ಹದಿನೈದು ಸಲಹೆಗಳನ್ನು ಪತ್ರದಲ್ಲಿಯೇ ತಿಳಿಸುತ್ತಾಳೆ.

ಗಹನವಾದ ವಿಚಾರವನ್ನು ಸರಳವಾಗಿ ಹೇಳಲು ಸಾಧ್ಯವಾಗುವುದು ಅದು ನಮ್ಮ ಎದೆಯ ಮಾತುಗಳಾದಾಗ ಮಾತ್ರ ಎಂಬುದು ಇಲ್ಲಿಯ ಸಲಹೆಗಳನ್ನು ಓದುವಾಗ ನನಗನಿಸಿತು. ಇಲ್ಲಿ ಪ್ರಶ್ನೆ ಸ್ತ್ರೀವಾದಿಯಾಗಿ ಬೆಳೆಸುವುದು ಎಂದಾಗಬೇಕಿಲ್ಲ, ಮನುಷ್ಯಳಾಗಿ ಬೆಳೆಸುವುದು ಎಂದರೂ ಸಲಹೆಗಳು ಅವೇ ಆಗಿರುತ್ತವೆ. ಮಗಳನ್ನು ಬೆಳೆಸುವುದು ಹೇಗೆ? ಎಂದೂ ಆಗಬೇಕಿಲ್ಲ. ಮಗನನ್ನು ಬೆಳೆಸಬೇಕಾದದ್ದೂ ಹೀಗೆಯೆ. ನೂರು ಪುಟಗಳಲ್ಲಿ ಹೇಳಲಾಗದ್ದನ್ನು ಕೆಲವೇ ಮಾತುಗಳಲ್ಲಿ ಹೇಳುವ ಕಲೆ ಬಹುಶಃ ಚಿಮುಮಾಂಡ ಪತ್ರಕರ್ತೆಯಾಗಿರುವುದರಿಂದ ಅವಳಿಗೆ ಸಿದ್ಧಿಸಿರಬೇಕು.

ಒಂದು ಸಂವಾದ ಕಾರ್ಯಕ್ರಮದಲ್ಲಿ ಚಿಮುಮಾಂಡ ವಿದ್ಯಾರ್ಥಿಗಳಿಂದ ಎದುರಿಸಿದ ಮೊದಲ ಪ್ರಶ್ನೆ, "ನೀವು ನಿಮ್ಮ ಕೆಲಸ ಮತ್ತು ತಾಯ್ತನವನ್ನು ಒಟ್ಟಿಗೆ ಹೇಗೆ ಸಂಬಾಳಿಸುತ್ತೀರಿ?" ಅದಕ್ಕೆ ಉತ್ತರಿಸುವ ಮುನ್ನ ಚಿಮುಮಾಂಡ ಹೇಳುತ್ತಾಳೆ, "ಮುಂದೆ ಒಬ್ಬ ಎಳೆಯ ಮಗುವಿನ ತಂದೆ ನಿನ್ನೆದುರು ನಿಂತಾಗಲೂ ನೀನು ಇದೇ ಪ್ರಶ್ನೆಯನ್ನು ಕೇಳಬೇಕು." ಸ್ತ್ರೀ ಸಂವೇದನೆ ಎಂದರೆ ಇಷ್ಟಲ್ಲದೇ ಮತ್ತಿನ್ನೇನು?

ಕವಯತ್ರಿ ಕಾವ್ಯಶ್ರೀ ಈ ಪುಸ್ತಕವನ್ನು ಕನ್ನಡಕ್ಕೆ ಸುಂದರವಾಗಿ ಅನುವಾದಿಸಿದ್ದಾರೆ. ಇಲ್ಲಿರುವ ಹದಿನೈದರಲ್ಲಿ ಯಾವುದನ್ನೂ ಹೆಸರಿಸಲಾರೆ. ಯಾಕೆಂದರೆ ಅವೆಲ್ಲವೂ ನೈಜೀರಿಯಾಕ್ಕೆ ಎಂತೋ ಇಂಡಿಯಾಕ್ಕೂ ಅಷ್ಟೇ ಘನತೆಯಿಂದ ಸಲ್ಲಬೇಕಾದವುಗಳು. ಪುಟ್ಟ ಮಕ್ಕಳ ಪಾಲಕರು ಓದಲೇಬೇಕಾದ, ದೊಡ್ಡವರೆಲ್ಲರೂ ಓದಿ ಅನುಸರಿಸಬೇಕಾದ ಸಲಹೆಗಳಿವು. 

ಅನೇಕ ದಿನಗಳ ನಂತರ ಒಂದು ನಿರಾಳತೆಯನ್ನು, ಓದಿನ ಸಂತೋಷವನ್ನು ಕೊಟ್ಟ ಅಕ್ಷರಗಳಿಗೆ ಶರಣು. ಮಗುವಿನ ಬಗ್ಗೆ ಖಲೀಲ್ ಗಿಬ್ರಾನ್ ಬರೆದ "ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ......" ಎಂಬ ಸಾಲುಗಳಂತೆಯೇ ಮಕ್ಕಳನ್ನು ಬೆಳೆಸಲು ಚಿಮುಮಾಂಡಳ ಸಲಹೆಗಳನ್ನೂ ಪಟ್ಟಿಮಾಡಿಕೊಳ್ಳಬೇಕೆನಿಸಿತು.

ಸುಧಾ ಅಡುಕಳ