Article

ಸುಡುವ ವರ್ತಮಾನದ ಕನ್ನಡಿ ‘ಹರಾಂ ಕತೆಗಳು’

ಮುಸ್ತಫಾ ಕೆ ಎಚ್ ಅವರ ಮೊದಲ ಕಥಾಸಂಕಲನ 'ಹರಾಂನ ಕಥೆಗಳು' ಹಲವು ಕಾರಣಗಳಿಗೆ ನನಗೆ ಇಷ್ಟವಾಯಿತು. ಕತೆಗಾರ ತನಗೆ ಕಂಡ, ಅನುಭವಕ್ಕೆ ನಿಲುಕಿದ, ತಾನು ಭವಿಷ್ಯದಲ್ಲಿ ಆಶಿಸುವ ಜಗತ್ತಿನ ಕಥೆಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ತನ್ನೆಲ್ಲ ಪ್ರಾದೇಶಿಕತೆ, ಭಾಷೆಯ ಸೊಗಡಿನ ಮೂಲಕ ಕಟ್ಟಿಕೊಟ್ಟ ಕಥೆಗಳು ನಮಗೆ ಈ ಸಂಕಲನದಲ್ಲಿ ದೊರೆಯುತ್ತವೆ. 'ಮುಳಿಹುಲ್ಲಿನ ಮೂಲೆ ಅಂಗಡಿ' ಯಶಸ್ವಿ ಕಥೆ. ಕಥಾನಾಯಕಿ ಮದುವೆಯಾಗಿ ಗಂಡನ ಮನೆ ಸೇರಿದಾಗ ಅಲ್ಲಿ ಮನೆ ಮತ್ತು ಹೋಟೆಲ್ ಆಗಿ ಬದಲಾಗುವ ನಾಣ್ಯದ ಎರಡು ಮುಖಗಳಂತಿರುವ ಮನೆ; ಶೌಚಾಲಯದ ಸಮಸ್ಯೆಯೊಂದನ್ನ ವರದಿಯಾಗಿಸದೆ ಹೇಳುವುದು; ತಪ್ಪು ಸರಿಗಳ ಎಚ್ಚರವನ್ನು ಅದರೆಲ್ಲ ಅಮೂಲಾಗ್ರ ಗ್ರೇ ಅಂಶಗಳ ಅರಿವಿದ್ದು ಕುಟುಂಬವನ್ನು ಬಿಟ್ಟುಕೊಡದೆ ಒಂದು ಪ್ರತಿಭಟನೆಯನ್ನ ದಾಖಲಿಸಿಬಿಡುವ ಹೆಣ್ಣುಮಗಳಾಗಿ ನಮಗೆ ಇಷ್ಟವಾಗುತ್ತಾಳೆ. 'ಕಂಚಿನಪುತ್ಥಳಿ' ತನ್ನ ವಿಭಿನ್ನ ಕಥಾ ತಂತ್ರದೊಂದಿಗೆ ಸುಡುವ ವರ್ತಮಾನದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿದ ಕಥೆ. ಕೋಮುವಾದ, ಪುತ್ಥಳಿ, ಧರ್ಮಸಾಮರಸ್ಯಗಳನ್ನು ಒಂದರೊಳಗೊಂದು ಹೆಣೆದುಕೊಂಡ ಕಥೆ. ಕಥೆಯ ಅಂತ್ಯ ಚೇತೋಹಾರಿಯಾಗಿದೆ. 'ಮಣ್ಣುಸೇರದ ಬೀಜ' ಕಥೆ ಧರ್ಮಾತೀತ ಪ್ರೇಮ ಹಾಗೂ ಅದಕ್ಕೆ ಧರ್ಮಗ್ರಂಥಗಳ ಅಡ್ಡಿಗಳನ್ನು ಮುಖಾಮುಖಿಯಾಗಿಸುವ ಕಥೆ.

ಸುಡುವ ವರ್ತಮಾನದ ಕನ್ನಡಿಯಾಗಿ, ಕಾಡುವ ಜ್ವಲಂತಗಳ ವಿರುದ್ಧದ ದನಿಯಾಗಿ, ಲೈಂಗಿಕ ಅಲ್ಪಸಂಖ್ಯಾತರ(ಗೇ, ಲೆಸ್ಬಿಯನ್, ಟ್ರ್ಯಾನ್ಸ್ಜೆಂಡರ್, ಬೈ ಸೆಕ್ಷುಯಲ್) ಬದುಕಿಗೆ ಕಿವಿಯಾದ ಕಥೆಗಳಿಲ್ಲಿವೆ. ನನಗೆ ಮೆಚ್ಚುಗೆಯಾದ ಮತ್ತೊಂದು ಅಂಶವೆಂದರೆ ಲೈಂಗಿಕ ಅಲ್ಪಸಂಖ್ಯಾತರ ಬದುಕನ್ನು ಹೇಳುವ ಕಥೆಗಳಲ್ಲಿನ ಕಥಾವಸ್ತುಗಳು ಬಹುಷಃ ಬೇರೆಯವರು ಆಯ್ಕೆ ಮಾಡಿಕೊಳ್ಳಲು ಹಿಂಜರಿಯುವ ಅಥವಾ ತುಂಬಾ ಯೋಚಿಸಬಹುದಾದವುಗಳನ್ನು ಬಹಳ ಸುಲಭವಾಗಿ ಮತ್ತು ಧೈರ್ಯದಿಂದ ಆರಿಸಿಕೊಂಡಿರುವುದು. ಉದಾಹರಣೆಗೆ 'ಕಾಡುವ ಕನಸುಗಳ ಜೊತೆ' ಕಥೆಯಲ್ಲಿ consent(ಒಪ್ಪಿಗೆ)ಯ ಹಲವು ಆಚೀಚೆಗಳನ್ನು ಯೋಚಿಸುವಂತೆ ಮಾಡುತ್ತವೆ. ಒಬ್ಬ ವ್ಯಕ್ತಿ ತನ್ನ ಲೈಂಗಿಕ ಅಭಿಮುಖತೆಯನ್ನ ಯಾವಾಗ ಸ್ಪಷ್ಟವಾಗಿ ಗುರುತಿಸಿಕೊಳ್ಳುತ್ತಾನೆ? ಅಥವಾ ಸಮಾಜದ ಕೆಲವೇ ಕೆಲವು ಒಪ್ಪಿತಗಳಿಗೆ, ಕಟ್ಟಳೆಗಳಿಗೆ ಒಗ್ಗಿಕೊಳ್ಳಲೇಬೇಕಾದಾಗ ತಾನು ಬೈ ಸೆಕ್ಷುಯಲ್ ಎಂಬುದು ಸುಲಭದ ಆಯ್ಕೆಯಾಗಿಬಿಡುತ್ತದ? ಹೀಗೆ ಹಲವು ಪ್ರಶ್ನೆಗಳನ್ನು ಮುಂದಿಡುತ್ತವೆ. 'ನೀಲಾಗಸದ ಹಕ್ಕಿಯ ರೆಕ್ಕೆ' ತನ್ನ ಪ್ರಬುದ್ಧತೆಯಿಂದ, ಪಾತ್ರಗಳು ತಳೆಯುವ ನಿಖರ ನಿಲುವಿನಿಂದ ಇಷ್ಟವಾಯಿತು. ಅಲ್ಲಿನ ಮುಖ್ಯಪಾತ್ರಕ್ಕೆ ತಾನೇನು ಎಂಬುದರ ನಿಖರತೆ ಇದೆ. ಗುರುತಿಸಲಾರದವರ ನೀರಿಳಿಸಿ ಸ್ವತಂತ್ರವಾಗಿಬಿಡುವ ಗಟ್ಟಿತನವೂ ಇದೆ.

ನನ್ನ ತಕರಾರಿರುವುದು 'ಬ್ಲೂ ಮೂನ್ ಎಕ್ಲಿಪ್ಸ್' ಕಥೆಯ ಬಗ್ಗೆ... 'ನೀಲಾಗಸದ ಹಕ್ಕಿಯ ರೆಕ್ಕೆ' ಎಂಬ ಚಂದದ ಕಥೆ ಕೊಟ್ಟ ಕತೆಗಾರರೇ ಶಶಿ ಪಾತ್ರವನ್ನು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಿ ಅವನ ಆತ್ಮಹತ್ಯೆಯ ನಂತರ ಮಣ್ಣಾಗುವಾಗ ಒಂದು ಕೇಡಿನ ಅಂತ್ಯದ ರೀತಿ ಪ್ರಕೃತಿಯೂ ಪ್ರತಿಕ್ರಿಯಿಸಿಬಿಡುವ ವಿವರಣೆ ಬರುತ್ತದೆ. ಮನುಷ್ಯರ ಹಲವು ಕ್ರೌರ್ಯದ ಸಾಧ್ಯತೆಗಳಿರುವುದು ಮತ್ತು ಅದಕ್ಕೆ ಗೇ ಆದವನು ಹೊರತಲ್ಲವೆಂದು ಗ್ರಹಿಸಬಹುದಾದರೂ ಲೈಂಗಿಕ ಅಲ್ಪಸಂಖ್ಯಾತರು ಅಥವಾ ಇನ್ಯಾವುದೇ ಅಲ್ಪಸಂಖ್ಯಾತ ವರ್ಗಗಳು ಈ ರೀತಿಯ ಖಳನಾಯಕತ್ವಕ್ಕೆ, ತಾತ್ಸಾರಕ್ಕೆ ಸುಲಭಕ್ಕೆ ದಕ್ಕಿಬಿಡುವ ಅಪಾಯವನ್ನು ಎದುರಿಸುತ್ತಲೇ ಬಂದಿರುವುದರಿಂದ ಆ ಪಾತ್ರವನ್ನು ಇನ್ನಷ್ಟು ಸಾವಧಾನದಿಂದ ಕಟ್ಟಬಹುದಿತ್ತು ಎನಿಸಿತು.

ಸಾವಿನ ಮೂಲಕ ಧುತ್ತೆಂದು ಕೊನೆಯಾಗುವ ದುಃಖಾಂತ್ಯಗಳು ಕಥೆಗೆ ಬೇಕಿರಲಿಲ್ಲವೇನೋ? Tragedy has its own impact ಎಂಬುದು ಸತ್ಯವೇ ಆದರೂ ನಾವು ಹೇಳಹೊರಟಿರುವ ಆಶಯವನ್ನು ಅಳ್ಳಕ ಮಾಡಿಬಿಡುವ ಅಥವಾ ಯಥಾಸ್ಥಿತಿವಾದವನ್ನು ಆಳದಲ್ಲಿ ಉಳಿಸಿಬಿಡುತ್ತದೇನೋ ಎನ್ನುವ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ. 'ಹೆಣ್ಣಾಗಬೇಕಿತ್ತು', 'ನಿಮ್ಮವಳಲ್ಲ' 'ಮಣ್ಣುಸೇರದ ಬೀಜ' ಇವುಗಳ ಅಂತ್ಯ ಚೂರು ಆಶಾದಾಯಕವಾಗಿರಬಹುದಿತ್ತೇನೋ ಎನ್ನುವ ಹಳಹಳಿಕೆ ಉಳಿದುಬಿಡುತ್ತದೆ. ಹಾಗೆ ಉಳಿದು ಕಾಡುವುದು ಕಥೆಯ ಧನಾತ್ಮಕ ಅಂಶವೂ ಇರಬಹುದೇನೋ? ಕಂಡದ್ದನ್ನ ಕಂಡ ಹಾಗೆ ಹೇಳುವ ನೇರ ಮಾದರಿ ಇಲ್ಲಿನ ಬಹುತೇಕ ಕಥೆಗಳಿಗಿವೆ.

ಮುನ್ನುಡಿಯಲ್ಲಿ ಹೇಳಿರುವಂತೆ 'ಇಲ್ಲಿನ ಎಲ್ಲ ಕಥೆಗಳನ್ನು ಕಟ್ಟಿ ಹಿಡಿದಿಟ್ಟಿರುವ ಎಳೆಯೆಂದರೆ ಹರಾಂ ಎಂಬ ಪರಿಕಲ್ಪನೆ. ಅದು ವ್ಯಕ್ತಿ ಮತ್ತು ಸಮುದಾಯಗಳ ಮೇಲೆ ಮಾಡುವ ಪರಿಣಾಮವನ್ನು ಹಲವು ಕೋನಗಳಿಂದ ಚಿತ್ರಿಸಲು ಪ್ರಯತ್ನಿಸಿದ್ದಾರೆ'. ಸತ್ಯ, ಸುಳ್ಳು, ಪ್ರೀತಿ, ಸಂಬಂಧಗಳು, ಲೈಂಗಿಕತೆಗಳ ಸಂಕೀರ್ಣತೆಗಳನ್ನು ಹೇಳುವ ಉತ್ತಮ ಪ್ರಯತ್ನ ಈ ಪುಸ್ತಕದಿಂದಾಗಿದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ನವಿರಾದ ಮತ್ತು ಸಶಕ್ತ ಕಥೆಗಳನ್ನು ಕತೆಗಾರರು ಬರೆಯಲಿ ಎಂದು ಆಶಿಸುವೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದಾದಾಪೀರ್‌ ಜೈಮನ್‌