Article

ಸುಕ್ರಜ್ಜಿಯ ಸುಂದರ ಭಾವಚಿತ್ರಗಳ ‘ಹಾಲಕ್ಕಿ ಕೋಗಿಲೆ’

'ನಾನು ಬದುಕಿರುವುದು ಹಾಡಿಗಾಗಿ ,ಸಾಯುವುದು ಹಾಡಿಗಾಗಿಯೇ' ಎಂದು ಸ್ಪಷ್ಟ ಹೇಳುವ ಪದ್ಮಶ್ರೀ ಸುಕ್ರಜ್ಜಿಯವರು ಬಹುಮುಖ ವ್ಯಕ್ತಿತ್ವ ಹೊಂದಿದವರು. ಅವರ ಸಾಮಾಜಿಕ ಕಳಕಳಿ, ವನೌಷಧಿ ಜ್ಞಾನ, ಗಾಯನ, ಸರಳತೆ, ಎಲ್ಲರಿಗೂ ಮಾದರಿ.ಹಾಲು ಅಕ್ಕಿ ಎರಡು ವಿರಳವಾದ ಹಾಲಕ್ಕಿ ಜನಾಂಗದ ಕುರಿತು ದಿನಕರ ದೇಸಾಯಿಯವರು ಮನಮುಟ್ಟುವಂತೆ ಬರೆದಿದ್ದಾರೆ. ಅಂತೆಯೇ ನಿರಕ್ಷರತೆಯ ಬಡತನದ ಛಾವಣಿಯಲ್ಲಿ ಹುಟ್ಟಿ, ಬಾಲ್ಯವಿವಾಹವಾಗಿ ನಾನಾ ಕಷ್ಟಗಳಿಗೆ ಎದೆಗುಂದದೆ ನೆಲ ಸೀಳಿ ಹೊರಬಂದ ಚೈತನ್ಯ ಸುಕ್ರಜ್ಜಿಯವರದು. ಹಾಡಲ್ಲ ಇದು ನನ್ನ ಒಡಲ ಉರಿ ಎಂಬ ಮಾತಿನಂತೆ ಸಾವಿರಾರು ಹಾಡುಗಳನ್ನು ಹಾಡುತ್ತ ಬದುಕುತ್ತಿರುವ ಆಕೆಯದು 'ಹಾಡಿ ತೀರದ ಬದುಕು' ಎನ್ನಬಹುದು.ಅಂಕೋಲಾದ ಗಿಡಮರಗಳೆಲ್ಲ ಆಕೆಯ ಹಾಡು ಕೇಳುತ್ತ ಬದುಕಿವೆಯೇನೋ..!

`ಮಲ್ಲಿಗೆ ಹೂಂಗೆ ಎಲ್ಲಿ
ಇದ್ದರು ನೀನೆ ಪರಿಮಳವೆ'
ಎಂಬ ಅವರ ಹಾಡು ಅವರಿಗೆ ಅನ್ವಯವಾದಂತಿದೆ. ಅಷ್ಟೇ ಆಗಿದ್ದರೆ ಅವರ ವ್ಯಕ್ತಿತ್ವ ಭೂಮತೆಗೇರುತ್ತಿರಲಿಲ್ಲ. ದಿನಕರ ದೇಸಾಯಿಯವರ ಜೊತೆಗೆ ನಡೆಸಿದ ಉಳುವವನೇ ಹೊಲದ ಒಡೆಯ,
ಕುಸುಮಾ ಸೊರಬ ಅವರ ಜೊತೆ ನಡೆಸಿದ ಸೆರೆ ವಿರುದ್ಧದ ಚಳುವಳಿ,ಶಿಕ್ಷಣ ಕನ್ನಡದಲ್ಲಿರಲಿ ಎಂಬ ಆಂದೋಲನ ಮೈಗೂಡಿ ಬದುಕನ್ನು ಘನವಾಗಿಸಿವೆ. ಈ ಎಲ್ಲ ಹೋರಾಟಗಳು ಅಂತರಂಗ ನೀಡಿದ ಪ್ರೇರಣೆ ಹೊರತು, ಕಾಸಿಗಾಗಿ ಸುದ್ಧಿಗಾಗಿ ಅಲ್ಲ ಎಂಬುದು ಮಹತ್ವದ ಸಂಗತಿ. ಇಂತಹ ಮಾಗಿದ ಜೀವ ಸುಕ್ರಜ್ಜಿಯವರ ಕುರಿತಾಗಿ ಅಕ್ಷತಾ ಕೃಷ್ಣಮೂರ್ತಿ ಸಂಪಾದಿಸಿದ ಕೃತಿ ಹಾಲಕ್ಕಿ ಕೋಗಿಲೆ .ಇದರಲ್ಲಿ ಕೇವಲ ಪ್ರಶಂಸೆಗಳಿಲ್ಲ. ವಸ್ತು ಮತ್ತು ವ್ಯಕ್ತಿ ನಿಷ್ಠ ಬರಹಗಳಿವೆ.ಅವರ ಹೋರಾಟದ ಬದುಕಿನ ಚಿತ್ರವಿದೆ.ಲೇಖಕಿ ಉತ್ತರ ಕನ್ನಡದ ದೇಸಿ ಶಬ್ಧ ಹವಣಾಗಿ ಬಳಸಿದ್ದು ತುಂಬ ಇಷ್ಟವಾದ ಅಂಶ.
ಒಮ್ಮೆ ನನ್ನ ಪಿ.ಎಚ್ ಡಿ ಮಾರ್ಗದರ್ಶಕರಾದ ಸೋಮಶೇಖರ ಇಮ್ರಾಪುರರು ನನ್ನೊಂದಿಗೆ ಮಾತನಾಡುತ್ತ ನಾ ಹಳ್ಳಿ ಮನುಷ್ಯ. ಕುಂತ್ರು ಜಾನಪದ. ನಿಂತ್ರು ಜಾನಪದ ಎಂದಿದ್ದರು.ಸುಕ್ರಜ್ಜಿಯ ಬದುಕು ಹಾಗೆ . ವರ್ಣರಂಜಿತ.ಅವರ ಸೀರೆ, ಕೊರಳ ಮಣಿ ಹಾರ , ಎಣ್ಣೆ ಹಾಕಿ ಬಾಚುವ , ಎತ್ತಿ ಕಟ್ಟುವ ಕೇಶ ಶೈಲಿ ಎಲ್ಲವೂ ಚಿತ್ರಕಾರನಿಗೆ ಸ್ಪೂರ್ತಿ ತುಂಬುವಂತಹದ್ದು.ಇದು ಅವರ ಸಂಸ್ಕೃತಿ. ಸುಕ್ರಜ್ಜಿಯ ಸುಂದರ ಭಾವಚಿತ್ರಗಳನ್ನು ಗ್ರಂಥದುದ್ದಕ್ಕೂ ಬಳಸಿದ್ದು ವಿಶೇಷ ಸಂಗತಿ ಮತ್ತು ಆಕರ್ಷಣೆ. ಬೇಸಿಗೆಯ ಬೀಸಣಿಕೆಯಾಗಿರುವ ಸುಕ್ರಜ್ಜಿಯ ಧೀಮಂತ ವ್ಯಕ್ತಿತ್ವವನ್ನು ಸರಳ ಸುಂದರವಾಗಿ ಕಟ್ಟಿಕೊಡುವಲ್ಲಿ ಅಕ್ಷತಾ ಕೃಷ್ಣಮೂರ್ತಿ ಯಶಸ್ವಿಯಾಗಿದ್ದಾರೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಮಲಾ ಹೆಮ್ಮಿಗೆ