Article

 ತತ್ಕಾಲದ ದರ್ಶನ ಮಾಡಿಸುವ ‘ಜೀವರೇಶಿಮೆ’ ಕತೆಗಳು

ಚೀಮನಹಳ್ಳಿ ರಮೇಶಬಾಬು ಅವರು ಹೊರ ತಂದಿರುವ ‘ಜೀವರೇಶಿಮೆ’ ಎಂಬ ಕತಾಸಂಕಲನವು ಅನೂಹ್ಯವಾದ ಮತ್ತು ಓದುಗನಿಗೆ ವಿಶಿಷ್ಟವಾದ ಅನುಭವಗಳನ್ನು ನೀಡಬಹುದಾದಂಥ ಕತೆಗಳನ್ನು ಒಳಗೊಂಡಿವೆ. ದಿನನಿತ್ಯದ ಬದುಕಿನಲ್ಲಿ ನಮ್ಮ ಅನುಭವಕ್ಕೆ ಬಂದಿರಬಹುದಾದ, ಆದರೆ ನಮ್ಮ ನಿರ್ಲಕ್ಷ್ಯಕ್ಕೊಳಪಟ್ಟ ಅನೇಕ ಸಂಗತಿಗಳ, ವಿದ್ಯಮಾನಗಳ ಕುರಿತಾಗಿ ಮಾತನಾಡಬಲ್ಲ ಹಲವಾರು ಕತೆಗಳು ಈ ಸಂಕಲನದಲ್ಲಿವೆ. ಅವುಗಳಲ್ಲಿ ಬಹುಮುಖ್ಯವಾಗಿ ಕಾರ್ಪೋರೇಟ್ ಜಗತ್ತು ಸೃಷ್ಟಿಸಿರುವ ಯಾಂತ್ರಿಕ ಬದುಕಿನ ಶೈಲಿ, ನಗರ ಜೀವನ ರೂಢಿಸಿರಬಹುದಾದ ವಿಚಿತ್ರವಾದ ಮನುಷ್ಯ ಸ್ವಭಾವ, ಮನುಷ್ಯನ ಆಶೆ ಮತ್ತು ದುರಾಶೆಗಳು ಆತನ ಆಲೋಚನಾಕ್ರಮದಲ್ಲುಂಟು ಮಾಡುವ ಪಲ್ಲಟವು ತಂದೊಡ್ಡುವ ಅಪಾಯ, ಅನೈತಿಕ ಸಂಬಂಧಗಳ ಹಿಂದಿನ ಕಾರಣಗಳು, ಭ್ರಷ್ಟ ರಾಜಕಾರಣದ ಒಳಸುಳಿಗಳು, ಬದುಕಿಗಾಗಿ ಮನುಷ್ಯ- ಮನುಷ್ಯರ ನಡುವೆ ನಡೆಯುವ ಹೋರಾಟ- ಹೀಗೆ ಅನೇಕ ವಿಚಾರಗಳನ್ನು ಓದುಗನಿಗೆ ಮುಖಾಮುಖಿಯಾಗಿಸುತ್ತ, ನಾವು ನಿರ್ಲಕ್ಷಿಸಿರಬಹುದಾದ ಲೋಕವೊಂದನ್ನು ಅಷ್ಟೇ ಪ್ರಾಮಾಣಿಕವಾಗಿ ಕಾಣಿಸಲು ಪ್ರಯತ್ನಿಸುತ್ತವೆ. ಅಷ್ಟರ ಮಟ್ಟಿಗೆ ಇಲ್ಲಿನ ಒಂದಿಷ್ಟು ಕತೆಗಳು ರಮೇಶಬಾಬು ಅವರೊಳಗಿನ ಹರಿತವಾದ ಕಥನಗಾರಿಕೆಗೆ ಸಾಕ್ಷಿಯಾಗಿ ನಿಲ್ಲುತ್ತವೆ ಎನ್ನಬಹುದು.

ಇನ್ನು, ಈ ಸಂಕಲನಕ್ಕೆ ಕತೆಗಾರರು ಇಟ್ಟಿರುವ ‘ಜೀವರೇಶಿಮೆ’ ಎಂಬ ಶೀರ್ಷಿಕೆ ಅದೆಷ್ಟು ಆಪ್ಯಾಯಮಾನವಾಗಿದೆಯೆಂದರೆ ಮನುಷ್ಯ ಬದುಕಿನೊಂದಿಗೆ ಬೆಸೆದುಕೊಂಡಿರುವ ಸಂಬಂಧದ ಎಳೆಗಳು ರೇಶಿಮೆ ಎಳೆಗಳಂತೆ ಸೂಕ್ಷ್ಮವಾಗಿದ್ದು, ತುಸು ಧಕ್ಕೆಯಾದರೂ ಸಾಕು ಆ ಸಂಬಂಧದ ಎಳೆಗಳು ತುಂಡರಿಸಿ ಹೋಗಿ ಆತನ (ಮನಷ್ಯನ) ಬದುಕಿನಲ್ಲಿ ಇನ್ನಿಲ್ಲದ ಸ್ಥಿತ್ಯಂತರವನ್ನು ತಂದೊಡ್ಡುತ್ತವೆ ಎಂಬ ಮಾತನ್ನು ಸಾಕ್ಷೀಕರಿಸುವಂತಿದೆ! ಈ ಹಿನ್ನೆಲೆಯಲ್ಲಿ ಇಲ್ಲಿನ ಕತೆಗಳನ್ನು ಅವಲೋಕಿಸಿದಾಗ ನಮ್ಮ ಬದುಕಿನಲ್ಲಿ ಬೆಸೆದುಕೊಂಡಿರುವ ಬೇರೆ ಬೇರೆ ರೀತಿಯ ಸಂಬಂಧಗಳು ಹೊಂದಿರಬಹುದಾದ ಸಂಕೀರ್ಣವಾದ ಹಲವಾರು ಮುಖಗಳನ್ನು ಪರಿಚಯಿಸುತ್ತ ಹೋಗುತ್ತವೆ ಎನ್ನಬಹುದು. ಈ ಹಿನ್ನೆಲೆಯಲ್ಲಿ, ಇಲ್ಲಿನ ಕತೆಗಳಲ್ಲಿ ಬರುವ ತುಂಡರಿಸಿ ಹೋದ ಸಂಬಂಧದ ಎಳೆಯನ್ನು ಅರಸಿ ಮತ್ತೇ ಹಳ್ಳಿಗೆ ಬರುವ ಪ್ರಭಾಕರ ಎಂಬ ಪಾತ್ರವಾಗಲಿ, ಮನುಷ್ಯೇತರ ಜೀವಿ ಎಮ್ಮೆಯೊಂದಿಗೆ ಭಾವನಾತ್ಮಕವಾದ ಸಂಬಂಧವನ್ನು ಹೊಂದಿದ್ದ ಸುಬ್ಬಕ್ಕನಂಥ ಅಜ್ಜಿಯ ಪಾತ್ರವಾಗಲಿ ಮತ್ತು ಅನೈತಿಕವಾದ ದೇಹ ಸಂಬಂಧದ ಮೂಲಕ ಧರ್ಮದ ಹಿನ್ನೆಲೆಯನ್ನು ಶೋಧಿಸಲು ಕಾರಣವಾಗುವ ಶಶಿರೇಖಾ ಮತ್ತು ರಾಮೇಗೌಡ ಎಂಬ ಪಾತ್ರಗಳಾಗಲಿ- ಇವರೆಲ್ಲರನ್ನು ನಾವು ವಾಸ್ತವದ ಬದುಕಿನಲ್ಲಿ ಒಮ್ಮೆಯಾದರೂ ಮುಖಾಮುಖಿಯಾಗಿಯೇ ಇರುತ್ತೇವೆ. ಹಾಗು ಆ ಮೂಲಕ ನೈತಿಕತೆಯ ಪಾಠವನ್ನು ಖಂಡಿತ ಕಲಿತಿರುತ್ತೇವೆ ಎನ್ನಬೇಕು!

ಈ ಮಾತಿಗೆ ಪೂರಕ ಎನ್ನುವಂತೆ ಈ ಸಂಕಲನದಲ್ಲಿ ಬರುವ ‘ಹುಣಸೆಮರ’ ಕತೆಯನ್ನೇ ನೋಡಿ:

ಏನಕೇನ ಕಾರಣಗಳಿಂದಾಗಿ ಮನುಷ್ಯ ಯಾವತ್ತೋ ಒಮ್ಮೆ ಬದುಕಿನಲ್ಲಿ ಕಳೆದುಕೊಂಡ ಭೌತಿಕ ಮತ್ತು ಅಭೌತಿಕ ಸಂಬಂಧಗಳ ನೆಲೆಗಳನ್ನು ಶೋಧಿಸುವ ನಿಟ್ಟಿನಲ್ಲಿರುವ ಈ ಕತೆಯಲ್ಲಿ ಬರುವ ’ಹುಣಸೆಮರ’ದ ಮೂಲಕ ಮತ್ತೆ ಮತ್ತೆ ತನ್ನತ್ತ ಕೈ ಹಿಡಿದು ಕರೆ ತರುವ ಸಂಬಂಧಗಳ ಸೆಳೆತದ ಅಗಾಧತೆಯನ್ನು ಅನಾವರಣ ಮಾಡುತ್ತದೆ. ಇಲ್ಲಿ, ‘ಹುಣಸೆಮರ’ವನ್ನು ಕೇಂದ್ರವಾಗಿರಿಸಿಕೊಂಡು ಅದರ ಸುತ್ತಲೂ ರಕ್ತ ಸಂಬಂಧ ಮತ್ತು ಮನುಷ್ಯ ಸಂಬಂಧ- ಇವೆರಡರ ಮೇಲಿನ ಸಂಬಂಧಗಳ ಬಲೆಯನ್ನು ಹೆಣೆಯುತ್ತ ಹೋಗುವ ಕತೆಗಾರ, ಆ ಬಲೆಯೊಳಗೆ ಕತೆಯ ಮುಖ್ಯ ಪಾತ್ರ ಪ್ರಭಾಕರನು ಹೊಕ್ಕುವಂತೆ ಮಾಡಿ, ಅಂಥ ಸಂಬಂಧಗಳಿಂದ ದಕ್ಕಬಹುದಾದ ಜೀವಕಾರುಣ್ಯದ ದರ್ಶನ ಮಾಡಿಸುತ್ತಾನೆ, ಕತೆಗಾರ! ಬಾಲ್ಯದಲ್ಲಿ ತನ್ನ ಬದುಕಿನ ಒಂದು ಭಾಗವೇ ಆಗಿ ಹೋಗಿದ್ದ ಹುಣಸೆಮರದೊಂದಿಗಿನ ಭಾವನಾತ್ಮಕವಾದ ಸಂಬಂಧಗಳ ಕೊಂಡಿಯನ್ನು ಕಾಲಾಂತರದಲ್ಲಿ ತನ್ನ ಬದುಕಿನಲ್ಲುಂಟಾದ ಸ್ಥಿತ್ಯಂತರಗಳ ಕಾರಣವಾಗಿ ಕಳಚಿಕೊಂಡು ನಗರವನ್ನು ಸೇರುವ ಪ್ರಭಾಕರನನ್ನು ಇದ್ದಕ್ಕಿದ್ದಂಗೆ ಆ ಹುಣಸೆಮರ ಕನಸಲ್ಲಿ ಬಂದು ಆತನನ್ನು ತನ್ನತ್ತ ಸೆಳೆಯತೊಡಗುವ ಕ್ರಿಯೆಯು ವಾಸ್ತವದಲ್ಲಿ ಆ ಸಂಬಂಧಗಳ ನಡುವಿನ ಬಾಂಧವ್ಯದ ಅಗಾಧತೆಯನ್ನು ಅರಿವಿಗೆ ತರುತ್ತದೆ.

ಒಂದು ಕಡೆ ಸಂಬಂಧಗಳ ಕೃತ್ರಿಮತೆ ಮತ್ತು ಶಿಥಿಲತೆಗೆ ಕಾರಣವಾಗುವ ನಗರ ಜೀವನದ ಬದುಕಿನ ಶೈಲಿ, ಇನ್ನೊಂದೆಡೆ ಸಂಬಂಧಗಳೇ ನಮ್ಮ ಬದುಕನ್ನು ಕೈ ಹಿಡಿದು ಮುನ್ನಡೆಸುತ್ತವೆ ಎಂಬ ಮಾತಿನಲ್ಲಿ ನಂಬಿಕೆಯನ್ನಿಟ್ಟಿರುವ ಗ್ರಾಮ ಬದುಕಿನ ಜೀವನ ಶೈಲಿ- ಇವೆರಡನ್ನೂ ಒಂದೇ ಹಳಿಯ ಮೇಲೆ ತಂದು ನಿಲ್ಲಿಸಿ ಮುಖಾಮುಖಿಯಾಗಿಸಿರುವ ಪರಿ ಕತೆಯನ್ನು ಶ್ರೇಷ್ಠತೆಯತ್ತ ಕೊಂಡೊಯ್ಯುತ್ತದೆ. ಇಲ್ಲಿ, ನಗರ ಮತ್ತು ಗ್ರಾಮ- ಇವೆರಡೂ ವಿಸ್ಮಯಕಾರಿ ಜಗತ್ತಿನಲ್ಲಿ ಕಾಲಾನುಕ್ರಮದಲ್ಲಿ ಮನುಷ್ಯ ಬದುಕಿನಲ್ಲುಂಟಾಗುತ್ತಿರುವ ಪಲ್ಲಟಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅವುಗಳ ಹಿಂದಿನ ಕಾರಣಗಳನ್ನು ಮತ್ತು ಇರಬಹುದಾದ ಸಾಧ್ಯತೆಗಳನ್ನು ಶೋಧಿಸಿರುವ ಕತೆಗಾರ ರಮೇಶಬಾಬು ಅವರ ವಿಶಿಷ್ಟವಾದ ಕಥನಗಾರಿಕೆಗೆ ಈ ಕತೆ ಕನ್ನಡಿ ಹಿಡಿಯುತ್ತದೆ.

ಈ ಕತೆಯಲ್ಲಿ ಸಂಬಂಧಗಳು ಬೆಸೆಯುವ ಕ್ರಿಯೆ ಸಂಭವಿಸಿದರೆ, ಇದಕ್ಕೆ ವಿರುದ್ಧವಾಗಿ ನಗರ ಜೀವನ ರೂಪಿಸುವ ಮನುಷ್ಯ ಸ್ವಭಾವದ ಕಾರಣವಾಗಿ ಶಿಥಿಲಗೊಳ್ಳುವ ಅಂಥವೇ ಸಂಬಂಧಗಳ ಕುರಿತಾಗಿ ‘ನಡಿಗೆ’ ಎನ್ನುವ ಕತೆ ಮಾತನಾಡುತ್ತದೆ. ಅನಿವಾರ್ಯವಾಗಿ ನಗರ ಜೀವನವನ್ನು ಬದುಕುತ್ತಿರುವ ಈ ಕತೆಯ ಮುಖ್ಯ ಪಾತ್ರ, ತನ್ನ ಬದುಕನ್ನು ಒಂದು ಯಾಂತ್ರಿಕವಾದ ಚೌಕಟ್ಟಿನೊಳಗೆ ನಿರ್ವಹಿಸುತ್ತಲೇ ತನ್ನತನವನ್ನು ಕಳೆದುಕೊಂಡು ಬದುಕುವಾಗ ಸಂಬಂಧಗಳ ಬೆಲೆಯನ್ನು ಅರಿಯದೇ ಹೋಗುವುದಕ್ಕೆ ಆ ನಗರ ಜೀವನ ರೂಪಿಸಿರಬಹುದಾದ ಗುಣ ಸ್ವಭಾವಗಳೇ ಕಾರಣವಾಗುತ್ತವೆ! ಮಳೆ ಸುರಿಯುತ್ತಿದ್ದ ಆ ದಿನ ಸಂಜೆ ರಸ್ತೆಯಲ್ಲಿ ಬೈಕ್ ಮೇಲೆ ಬರುವಾಗ ತನ್ನ ಪರಿಚಯದ ಜೇಮ್ಸ್ ಲಿಪ್ಟ್ ಕೇಳಿದಾಗ ಕತಾನಾಯಕ ಕಂಡೂ ಕಾಣದಂತೆ ದಾಟಿಕೊಂಡು ಮುಂದೆ ಹೋಗುತ್ತಾನೆ. ಆದರೆ, ಮನೆಗೆ ಬಂದಾಗ ಆತನ ಹೆಂಡತಿ ಅದೇ ಜೇಮ್ಸ್ ಮನೆಗೆ ಆಡಲು ಹೋಗಿದ್ದ ಮಗನನ್ನು ಕರೆದುಕೊಂಡು ಬರಲು ಹೇಳಿದಾಗ ಆತ ಜೇಮ್ಸ್ ನನ್ನು ಎದುರುಗೊಳ್ಳುವುದು ಹೇಗೆಂದು ಮುಜಗರಕ್ಕೊಳಗಾಗುತ್ತಾನೆ. ಇದನ್ನೇ ನಾವು ನಗರ ಜೀವನ ಸೃಷ್ಟಿಸುವ ಸಂದಿಗ್ಧ ಎನ್ನಬಹುದು. ಇಲ್ಲಿ, ಕತೆಯನ್ನು ವೇಗವಾಗಿ ಒಂದೇ ಉಸುರಲ್ಲಿ ಹೇಳುತ್ತ ಹೋಗುವ ಭರದಲ್ಲಿ ಕತೆಗಾರ ಅದನ್ನೊಂದು ವರದಿಯಾಗಿಸಿರುವ ಅಪಾಯವನ್ನು ಎದುರಿಸಿದ್ದಾನೆ. ಈ ಕತೆಯಲ್ಲಿ ಬರುವ ಬೆಂಗಳೂರು ಎಂಬ ಮಹಾನಗರಿಯ ಕೆಳಸ್ತರದ ಜನರ ಬದುಕು, ಅಲ್ಲಿನ ಸ್ಲಮ್ ಗಳು, ಆ ಸ್ಲಮ್ ಗಳಲ್ಲಿ ವಾಸಿಸುವ ಜನರ ವರ್ತನೆ- ಇವೆಲ್ಲವನ್ನೂ ಕತೆಯೊಳಗೆ ಕಲಾಕೃತಿಯಂತೆ ಅರಳಿಸಬಹುದಿತ್ತು ಎಂದೆನಿಸುತ್ತದೆ! ಆದಾಗ್ಯೂ, ಕೃತ್ರಿಮ ಸಂಬಂಧಗಳ ವಿಕಾರತೆಯನ್ನು ಈ ಕತೆ ತೆರೆದಿಡುವಲ್ಲಿ ಯಶಸ್ವಿಯಾಗಿದೆ.

ಈ ಎರಡೂ ಕತೆಗಳು ನಗರವನ್ನು ಕೇಂದ್ರವಾಗಿರಿಸಿಕೊಂಡು ಸಂಬಂಧಗಳ ಮಹತ್ವದ ಕುರಿತಾಗಿ ವಿವರಿಸಿದರೆ, ಅದೇ ನಗರ ಜೀವನದ ಹಿನ್ನೆಲೆಯಲ್ಲಿ ಮನುಷ್ಯ ರೂಢಿಸಿಕೊಂಡಿರಬಹುದಾದ ಸ್ವಭಾವದಲ್ಲಿನ ವೈಚಿತ್ರ್ಯಗಳ ಬಗ್ಗೆ ‘ಬೆನ್ನ ಮೇಲಿನ ಚಿಟ್ಟೆ’ ಎನ್ನುವ ಕತೆ ವಿವರಿಸುತ್ತದೆ. ಈ ಕತೆಯಲ್ಲಿ ಕಾರ್ಪೋರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಒಂದೇ ಡಿವಿಜನ್ ಗೆ ಸೇರಿರುವ ಸುಮಾರು ನಲವತ್ತೈದರ ಆಸುಪಾಸಿನ ಸಹುದ್ಯೋಗಿಗಳು, ತಮ್ಮ ಕೌಟುಂಬಿಕ ವಿಚಾರಗಳ ಹಿನ್ನೆಲೆಯ ನೆಲೆಯಲ್ಲಿ ಅಳವಡಿಸಿಕೊಂಡಿರುವ ಗುಣ ಮತ್ತು ಸ್ವಭಾವದ ವಿವಿಧ ಮುಖಗಳನ್ನು ಚಿಟ್ಟೆಯೊಂದನ್ನು ಕೇಂದ್ರವಾಗಿರಿಸಿಕೊಂಡು ಕತೆಗಾರ ಶೋಧಿಸುತ್ತ ಹೋಗುತ್ತಾನೆ. ಈ ಸಂದರ್ಭದಲ್ಲಿ ಇಲ್ಲಿ ಪ್ರೇಮ, ಕಾಮ, ಲೋಭ, ಮೋಹ, ಭಯ, ಸಾವು- ಹೀಗೆ ಅನೇಕ ಸಂಗತಿಗಳ ಕುರಿತಾಗಿ ಕಾರ್ಪೋರೇಟ್ ವಲಯದ ಜನರು ನಗರ ಬದುಕಿನ ಕ್ರಮದ ಕಾರಣವಾಗಿ ಹೊಂದಿರಬಹುದಾದ ಧೋರಣೆಗಳನ್ನು ಕತೆ ಅನಾವರಣಗೊಳಿಸುತ್ತ ಹೋಗುತ್ತದೆ. ಯಾಂತ್ರಿಕ ಬದುಕಿನ ಪರೀಧಿಯೊಳಗೆ ಸಿಲುಕಿ ಸವಕಲಾಗಿ ಹೋಗಿರಬಹುದಾದ ಅಂಥ ಜನರ ಗುಣ ಸ್ವಭಾವಗಳು ರೇಜಿಗೆ ಹುಟ್ಟಿಸುತ್ತವೆ!

ರಮೇಶಬಾಬು ಅವರು ಎಲ್ಲ ಕಾಲಕ್ಕೂ ಸಲ್ಲಬಲ್ಲ ವಿಚಾರವೊಂದನ್ನು ಭೂತ ವರ್ತಮಾನಗಳೊಂದಿಗೆ ಬೆಸೆದು ರೋಚಕವಾಗಿ ಕತೆ ಹೇಳುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಈ ಸಂಕಲನದಲ್ಲಿ ’ಒಂದೆಂಬ ಊರಲ್ಲಿ’ ಎನ್ನುವ ಕತೆ ಇದೆ. ತನ್ನ ವಿಶಿಷ್ಟವಾದ ವಸ್ತು, ನಿರೂಪಣೆ ಮತ್ತು ಪ್ರಯೋಗಶೀಲತೆಯಿಂದ ಗಮನ ಸೆಳೆಯುವ ಈ ಕತೆ, ಎಲ್ಲ ಕಾಲದಲ್ಲಿ ಅನೂಚವಾಗಿ ಜಾರಿಯಲ್ಲಿರುವ ಗಂಡು ಹೆಣ್ಣಿನ ನಡುವಿನ ಅನೈತಿಕವಾದ ದೇಹ ಸಂಬಂಧದ ವಿಚಾರವನ್ನು ಲೌಕಿಕ ಮತ್ತು ಪಾರಲೌಕಿಕಕ್ಕೆ ಸಂಬಂಧಿಸಿದ ಧರ್ಮದ ಹಿನ್ನೆಲೆಯನ್ನು ಶೋಧಿಸಲು ಪ್ರಯತ್ನಿಸುತ್ತದೆ. ಕತೆಯಲ್ಲಿ ಬರುವ ಶಶಿರೇಖಾ ಮತ್ತು ರಾಮೇಗೌಡ- ಇವರಿಬ್ಬರೂ ರಾಮಾಯಣದ ಸೀತೆ ಮತ್ತು ರಾಮನನ್ನು ಪ್ರತಿನಿಧಿಸುವುದರ ಮೂಲಕ ಹೆಣ್ಣು ತನ್ನ ಶೀಲದ ವಿಚಾರದಲ್ಲಿ ಅನಾದಿಕಾಲದಿಂದಲೂ ಅಗ್ನಿಪರೀಕ್ಷೆಗೆ ಒಳಪಡುತ್ತಲೇ ಬಂದಿದ್ದಾಳೆ ಎಂಬ ಸತ್ಯವನ್ನು ಈ ಎರಡೂ ಪಾತ್ರಗಳು ಮತ್ತೊಮ್ಮೆ ದೃಢೀಕರಣಗೊಳಿಸುತ್ತವೆ.

ಹಾಗೆ ನೋಡಿದರೆ ರಾಮೇಗೌಡನು ಶಶಿರೇಖಾಳ ವಿಚಾರದಲ್ಲಿ ಶ್ರೀರಾಮನಂತೆಯೇ ನಡೆದುಕೊಳ್ಳುತ್ತಾನೆ. ತನ್ನ ದೇಹ ಸುಖವನ್ನು ಪೂರೈಸಿಕೊಳ್ಳಲೆಂದು ರಾಮಾಪುರದಲ್ಲಿ ತಂದಿಟ್ಟುಕೊಂಡಿದ್ದ ಗಂಡ ಬಿಟ್ಟು ಹೋದ ಶಶಿರೇಖಾಳಿಗೆ ರಾಮೇಗೌಡನಿಂದಲೇ ಹುಟ್ಟಿದ ಮಗಳು ‘ದಿವ್ಯ’ಳು ಆತನ ಸ್ವಂತ ಹೆಂಡತಿಗೆ ತನ್ನಿಂದಲೇ ಹುಟ್ಟಿದ ಮಗನೊಂದಿಗೆ ಪ್ರೀತಿಗೆ ಬಿದ್ದು ಊರ ಬಿಟ್ಟು ಓಡಿ ಹೋದಾಗ, ‘ದಿವ್ಯ’ ತನಗೆ ಹುಟ್ಟಿದ ಮಗಳೇ ಅಲ್ಲ ಎಂದು ವಾದಿಸುತ್ತಾನೆ. ಆತ, ಶಶಿರೇಖಾ ಯಾರ ಯಾರೊಂದಿಗೋ ಮಲಗಿ ಪಡೆದ ಮಗಳಿವಳೆಂದು ದೂರುವುದರ ಮೂಲಕ ಆಕೆಯ ಶೀಲವನ್ನು ಶಂಕಿಸಿ, ರಾಮಾಯಣದಲ್ಲಿನ ರಾಮ- ಸೀತೆಗೆ ಸಂಬಂಧಿಸಿದ ಇಂಥದೇ ಸನ್ನಿವೇಶವನ್ನು ಕತೆಗಾರ ಕಣ್ಮುಂದೆ ತಂದು ನಿಲ್ಲಿಸುತ್ತಾನೆ. ಹೀಗೆ ಕಲ್ಪಿತ ವಾಸ್ತವದ ನೆಲೆಯಲ್ಲಿ ರಾಮಾಯಣದ ಈ ಸಂದರ್ಭದ ಘಟನೆಯೊಂದಿಗೆ ಸಮೀಕರಿಸಿ ಹೇಳುವುದರ ಮೂಲಕ ತರ್ಕಬದ್ಧವಾದ ನಿರ್ಣಯವೊಂದನ್ನು ಓದುಗರ ಮುಂದೆ ತೆರೆದಿಡುತ್ತಾನೆ. ಕತೆ, ವಿಭಿನ್ನವಾದ ಪ್ರಯೋಗದ ಕಾರಣವಾಗಿ ಗಮನ ಸೆಳೆಯುತ್ತದೆ.

ಇನ್ನು, ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಜೀವರೇಶಿಮೆ’ ಕತೆಯ ವಿಚಾರದಲ್ಲಿ ಒಂದು ಮಾತು ಹೇಳಬೇಕು. ಅದು, ಕತೆಗಾರನಿಗೆ ಲೋಕ ನೋಡುವ ಕಲೆ ಗೊತ್ತಿರಬೇಕು. ಇಲ್ಲದಿದ್ದರೆ ಆತನ ಅನುಭವಕ್ಕೆ ಬಂದ ವಸ್ತು ಸಂಗತಿಯೊಂದನ್ನು ಕತೆಯೊಳಗೆ ತರುವಾಗ ಅದೊಂದು ಕಲೆಯಾಗಿ ಅರಳಲಾಗದ ಅಪಾಯವನ್ನು ಎದುರಿಸುವ ಸಾಧ್ಯತೆ ಇರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಜೀವರೇಶಿಮೆ’ ಎಂಬ ಕತೆ ಇದೆ. ಕತೆ ಬರೆಯಲೇಬೇಕು ಎಂಬ ಕತೆಗಾರನ ತುಡಿತದ ಕಾರಣವಾಗಿಯೊ ಏನೋ ಎಂಬಂತೆ ಈ ಕತೆಯ ವಸ್ತು ಒಂದು ಕಲಾಕೃತಿಯಂತಾಗಿ ಅರಳದೇ, ವರದಿಯಂತಾಗಿ ಕೇಳಿಸುತ್ತ ಹೋಗುವುದರ ಮೂಲಕ ಸೊರಗಿದಂತೆನಿಸುತ್ತದೆ! ಇಲ್ಲಿ, ಕತೆಯ ಮುಖ್ಯ ಪಾತ್ರ ರಂಗಪ್ಪನಿಗೆ ಒದಗಿ ಬರುವ ಸಂದಿಗ್ಧಗಳು ತಂದೊಡ್ಡುವ ವಿಕ್ಷಿಪ್ತ ಅನುಭವಗಳ ಕಾರಣವಾಗಿ ಉಂಟಾಗುವ ಮನೋತಲ್ಲಣಗಳು ಸ್ವಯಂ ಕತೆಗಾರನ ಅನುಭವಗಳಿವು  ಎಂದೆನಿಸದೆ ಕೇಳಿದ ವಿಚಾರವೊಂದನ್ನು ಕತೆಯಾಗಿಸಿದ್ದಾರೆ ಎಂದಿನಿಸುತ್ತದೆ! ಅದಕ್ಕೇ, ಕತೆಗಾರ ತನ್ನ ಅನುಭವಗಳನ್ನು ಕತೆಯೊಳಗೆ ತರಬೇಕು ವಿನಃ ಬರೀ ನೋಡಿದ ಮಾತ್ರದ, ಕೇಳಿದ ಮಾತ್ರದ ವಿಚಾರಗಳನ್ನು ತರುವುದಲ್ಲ. ಏಕೆಂದರೆ ಕತೆಗಾರ ನೋಡಿದ ಅಥವಾ ಕೇಳಿದ ಸಂಗತಿಗಳೆಲ್ಲವೂ ಕತೆಗೆ ಒದಗಿ ಬರುವುದಿಲ್ಲ.

ಆದರೆ, ಕತೆಗಾರ ತನ್ನ ಅನುಭವಕ್ಕೆ ಬಂದ ವಸ್ತುವಿನ ಕುರಿತಾಗಿ ತುಂಬಾ ತಾಳ್ಮೆ ಮತ್ತು ಸಂಯಮದಿಂದ ನಿರಂತರವಾಗಿ ಚಿಂತನೆ ಮಾಡಿ, ಕತೆಯಾಗಿಸಿದಾಗ ಅದೊಂದು ಸುಂದರವಾದ ಕಲಾಕೃತಿಯಾಗುತ್ತದೆ ಎಂಬ ಮಾತಿಗೆ ‘ಗಯ್ಯಾಳಿ’ ಎನ್ನುವ ಕತೆಯನ್ನು ಉದಾಹರಿಸಬಹುದು. ಇಲ್ಲಿ, ತನ್ನ ಒಡಲೊಳಗೆ ಅಗ್ನಿ ಕುಂಡವನ್ನೇ ಇಟ್ಟುಕೊಂಡು ಬದುಕುತ್ತಿದ್ದ ನಂಜಮ್ಮನೆಂಬ ಜೋರು ಬಾಯಿಯ ಹೆಣ್ಣು ಮಗಳಿದ್ದಾಳೆ. ಆಕೆ ತನ್ನ ಬಿರುಸಾದ ಮಾತುಗಳಿಂದ ಊರ ಜನರಿಂದ ಗಯ್ಯಾಳಿ ಹೆಂಗಸು ಎನಿಸಿಕೊಂಡಿದ್ದರೂ ಸಹ ಕರುಣೆಯ ಮಾತು ಬಂದಾಗ ಅಪ್ಪಟ ತಾಯಿಯಾಗಿ ಬಿಡುವ ಪರಿ ಓದುಗನ ಕರುಳನ್ನು ಕದಡಿ ಬಿಡುವಂತೆ ಆ ಪಾತ್ರವನ್ನು ರಮೇಶಬಾಬು ಕತೆಯೊಳಗೆ ಕೆತ್ತಿದ್ದಾರೆ. ಊರ ಜನರ ಹಂಗಿಲ್ಲದೇ ಬದುಕುತ್ತಿದ್ದ ನಂಜಮ್ಮ, ಗಂಡ ಸತ್ತ ಮೇಲೂ ನಾರಾಯಣಪ್ಪನೊಂದಿಗೆ ದೇಹ ಸಂಬಂಧವಿಟ್ಟುಕೊಂಡಿದ್ದ ಗಟ್ಟಿಗಿತ್ತಿ ನಂಜಮ್ಮ, ತನ್ನೊಳಗೆ ಮಾನವೀಯತೆಯನ್ನು ಜತನದಿಂದ ಕಾಪಿಟ್ಟುಕೊಂಡು ಬಂದ ಕಾರಣವಾಗಿಯೇ ಮಗ- ಸೊಸೆ ಇಬ್ಬರನ್ನೂ ಅವರ ಪಾಡಿಗೆ ಅವರನ್ನು ನಗರದಲ್ಲಿ ಬದುಕಲು ಬಿಟ್ಟು, ತಾನು ಮಾತ್ರ ಕೊನೆಯವರೆಗೂ ದಯನೀಯ ಬದುಕನ್ನೇ ಬಾಳುತ್ತಾಳೆ. ತನ್ನ ಆಸರೆಗಿದ್ದ ಮೂರೆಕರೆ ಜಮೀನನ್ನು ಮಾರಿ ಬಂದ ಹಣದಲ್ಲಿ ಮಗ- ಸೊಸೆಯ ನಗರದಲ್ಲಿ ಮನೆ ಕಟ್ಟಬೇಕೆಂಬ ಕನಸನ್ನು ನನಸು ಮಾಡುತ್ತಾಳೆ. ಕಡೆಗೆ ಮಂಜೇಗೌಡನ ದಾಬಾದಲ್ಲಿ ಕಸಮುಸುರೆ ಕೆಲಸ ಮಾಡಿ ಉಳಿಸಿದ ಹಣದಲ್ಲಿ ಮೊಮ್ಮಗಳ ಮದುವೆ ಮಾಡುವ ಕನಸು ಕಾಣುವುದರ ಮೂಲಕ ಉದಾತ್ತ ಗುಣವನ್ನು ಮೆರೆಯುತ್ತಾಳೆ. ಕತೆಗಾರ ರಮೇಶಬಾಬು ಅವರು ಕತೆಯುದ್ದಕ್ಕೂ ನಂಜಮ್ಮನ ಪಾತ್ರಕ್ಕೆ ಜೀವ ತುಂಬುತ್ತ ಹೋಗಿದ್ದಾರೆ.

ಹಾಗೆಯೇ, ಈ ಸಂಕಲನದಲ್ಲಿರುವ ’ಇಲಿಗಳು’ ಎನ್ನುವ ಕತೆ, ಮನುಷ್ಯನ ಆಂತರ್ಯದಲ್ಲಿ ಏನಕೇನ ಕಾರಣವಾಗಿ ರೂಪುಗೊಳ್ಳಬಹುದಾದ ಅಮೂರ್ತ ವಿಚಾರಗಳು ಬಾಹ್ಯದಲ್ಲಿ ಮೂರ್ತರೂಪ ಪಡೆದುಕೊಳ್ಳುವುದರ ಮೂಲಕ ಆತನ ಮನೋಭೂಮಿಕೆಯಲ್ಲುಂಟಾಗುವ ಪಲ್ಲಟದ ಪರಿಣಾಮವನ್ನು ಅನಾವರಣ ಮಾಡುತ್ತದೆ. ಇಲ್ಲಿ, ಇಲಿಗಳ ಮೇಲೆ ಪ್ರಯೋಗವನ್ನು ಕೈಗೊಂಡಿರುವ ಕತೆಯ ಮುಖ್ಯ ಪಾತ್ರ ಆನಂದನ ಆಂತರ್ಯದಲ್ಲಿ ನಡೆಯುತ್ತಿದ್ದ ಮನೋ ವ್ಯಾಪಾರ ಮಾತ್ರ ವಿಚಿತ್ರವಾದದ್ದು. ಆತನ ಕನಸಲ್ಲಿ ಬರುವ ಬಿಳಿ ಇಲಿಗಳು ದೇಹದ ಅಂಗಾಂಗಗಳನ್ನು ಕಿತ್ತು ತಿನ್ನುವ ಕ್ರಿಯೆ ಇದೆಯಲ್ಲ... ಅದು ವಾಸ್ತವದಲ್ಲಿ ನೆಲೆಯೇ ಇಲ್ಲದ ಒಂದು ವರ್ಗದ ಅಮಾಯಕ ಜನರ ಬದುಕನ್ನು ಇದೇ ಥರ ಇನ್ಯಾರೋ ಕಿತ್ತುಕೊಂಡಿರುವುದಕ್ಕೆ ರೂಪಕದಂತಿದೆ. ಈ ಕತೆಯ ಮೂಲಕ ಕತೆಗಾರ ರಮೇಶಬಾಬು ಹೇಳಬೇಕೆಂದಿರುವ ವಿಚಾರ ಅಮೂರ್ತ ರೂಪದಲ್ಲಿದ್ದು ಆರ್ಥಿಕ ಮತ್ತು ಸಾಮಾಜಿಕ ನೆಲೆಯಲ್ಲಿನ ಶ್ರೇಣೀಕೃತ ವ್ಯವಸ್ಥೆಯು ಮನುಷ್ಯ ಬದುಕಿನಲ್ಲಿ ಉಂಟುಮಾಡುವ ಸ್ಥಿತ್ಯಂತರಗಳು ಆಗಾಗ ಅಗ್ನಿಪರೀಕ್ಷೆಗೊಡ್ಡುತ್ತಲೇ ಇರುತ್ತವೆ ಎಂಬ ಮಾತನ್ನು ಸಾಕ್ಷೀಕರಿಸುತ್ತದೆ.

ಇವುಗಳೊಂದಿಗೆ ಓದುಗನನ್ನು ಬಹುವಾಗಿ ಕಾಡುವ ‘ಹಸ್ತಬಲಿ’ ಕತೆಯು ಮಳೆ, ಮನುಷ್ಯ ಬದುಕು, ನಂಬಿಕೆ ಮತ್ತು ಆಚರಣೆಗಳ ಕುರಿತಾಗಿ ವಿವರಿಸುತ್ತಲೇ ಈ ಎಲ್ಲವುಗಳ ಕಾರಣವಾಗಿಯೇ ಕತಾನಾಯಕಿ ನಾಗಿಯ ಬದುಕು ಹಾಗೂ ಆಕೆಯ ಮನೋಭೂಮಿಕೆಯಲ್ಲಿ ಇದ್ದಕ್ಕಿಂದ್ದಂಗೆ ಬದಲಾವಣೆಗಳ ಹಿಂದಿನ ಕಾರಣಗಳನ್ನು ಶೋಧಿಸಲು ಪ್ರಯತ್ನಿಸುತ್ತದೆ. ಅಂತ್ಯದಲ್ಲಿ ನಾಗಿಯ ಸಹನೆಯ ಕಟ್ಟೆಯೊಡೆಯುವ ಪರಿ ಹೆಣ್ಣಿನ ಸಹನೆಗೂ ಮಿತಿ ಇದೆ ಎಂಬುದನ್ನು ಅರಿವಿಗೆ ತರುತ್ತದೆ.

ಇದಲ್ಲದೇ ರಮೇಶಬಾಬು ಅವರು ಕತೆಬರೆಯಲೇಬೇಕೆಂಬ ಉಮ್ಮೇದಿಗೆ ಬಿದ್ದು ಬರೆದ ಕತೆಗಳು ಈ ಸಂಕಲನದಲ್ಲಿವೆ.ಅವುಗಳೆಂದರೆ ನೀರು, ಚುನಾವಣೆ ಮತ್ತು ಹೊರಳು ಕತೆಗಳು. ಈ ಕತೆಗಳು ಅವರೊಳಗಿನ ಕತೆಗಾರನ ಉತ್ಸಾಹಕ್ಕೆ ಉದಾಹರಣೆಯಾಗಿವೆ ಎನ್ನಬೇಕು.

ಕತೆಗಾರಿಕೆಯಲ್ಲಿ ತನ್ನದೇ ಆದ ಹೊಸ ದಾರಿಯೊಂದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ನಿರಂತರವಾಗಿ ಕತೆಗಳನ್ನು ಬರೆಯುವುರೊಳಗೆ ತೊಡಗಿಸಿಕೊಂಡಿರುವ ರಮೇಶಬಾಬು ಅವರಿಗೆ ಆ ನಿರಂತರತೆ ಎಂಬ ಅವಸರವೇ ಅವರಿಗೆ ದಕ್ಕಿಸಿಕೊಂಡ ಅನುಭವಗಳನ್ನು ಪಕ್ವವಾಗಿಸುವುದಕ್ಕೆ ಮಿತಿಯನ್ನು ಒಡ್ಡಿದೆ! ಹೀಗಾಗಿ, ಈ ಸಂಕಲನದಲ್ಲಿ ಕಾಣಿಸುವ ಕತೆಗಳೊಂದಿಗೆ ಕೇಳಿಸುವ ಕತೆಗಳೂ ಸೇರಿಕೊಂಡಿವೆ. ಏಕೆಂದರೆ, ಕತೆಗಾರನಿಗೆ ಲೋಕವನ್ನು ನೋಡುವ ಕಲೆ ಗೊತ್ತಿದ್ದರೂ ಸಹ, ಕತೆಗೆ ಅನುಭವಗಳನ್ನು ದುಡಿಸಿಕೊಳ್ಳುವ ವ್ಯವಧಾನವಿಲ್ಲದಿದ್ದರೆ ಆ ಕತೆ ವರದಿಯಾಗಬಹುದಾದ ಅಪಾಯವೂ ಇದೆ. ಓರ್ವ ಸಮರ್ಥ ಓದುಗ ಕತೆಯೊಳಗಿನ ಇಂಥ ಓರೆ ಕೋರೆಗಳನ್ನು ಗುರುತಿಸುತ್ತಾನೆ. ಇಂಥ ಅಪಾಯವನ್ನು ಮೀರುವ ಸಾಮರ್ಥ್ಯ ಕತೆಗಾರ ರಮೇಶಬಾಬು ಅವರಿಗಿದೆ ಎನ್ನುವುದು ಅಷ್ಟೇ ಸತ್ಯ. ಹೀಗಾಗಿ, ಭವಿಷ್ಯದಲ್ಲಿ ಅವರಿಂದ ಖಂಡಿತವಾಗಿಯೂ ಉತ್ತಮವಾದ ಕತೆಗಳನ್ನು ನಾವು ನಿರೀಕ್ಷಿಸಬಹುದು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಕಲ್ಲೇಶ್ ಕುಂಬಾರ್

Comments