Article

ತಾಜಾತನದಲ್ಲಿ ಮಿಂದೇಳುವ ‘ವರ್ಜಿನ್ ಮೊಹಿತೊ’

ನಮ್ಮ ಮನೆಯ ಲ್ಯಾಂಡ್ ಲೈನಿಗೆ ನಾ ಚಿಕ್ಕವಳಿದ್ದಾಗ ಬರುತ್ತಿದ್ದ ತಾತನ ಸಹೋದ್ಯೋಗಿ ಪತ್ರಕರ್ತರ ಕರೆ, ಅಥವಾ ಅಪ್ಪನ ಅಂಕಣ ಡೆಡ್ ಲೈನ್ ಬಂದಿದೆ ಎಂದು ಬರುತ್ತಿದ್ದ ಕರೆಗಳಲ್ಲಿ ನನಗೆ ವಿಶಿಷ್ಟವೆನ್ನಿಸುತ್ತಿದ್ದ ಹೆಸರುಗಳು ನನಗೆ ಇನ್ನೂ ನೆನಪಿದೆ. ವೈಎನ್ಕೆ, ಗರುಡನಗಿರಿ, ಶಾಮ್, ಜೋಗಿ, ಶರತ್ ಕಲ್ಕೋಡ್, ಈಶ್ವರ ದೈತೋಟ ಮುಂತಾದವುಗಳು. ಹೀಗೆ ಪತ್ರಕರ್ತರಾದವರೆಲ್ಲ ವಿಶಿಷ್ಟವಾಗಿ ಹೆಸರಿಟ್ಟುಕೊಳ್ಳಬೇಕೆಂದು ನಾನು ಅಂದುಕೊಂಡಿದ್ದೆ. ಆದರೆ ಸತೀಶ್ ಚಪ್ಪರಿಕೆಯವರ ಹೆಸರನ್ನ ಪೇಪರಿನಲ್ಲಿ ನೋಡುತ್ತಿದ್ದರೂ ಅವರು ಯಾಕೆ ಕರೆ ಮಾಡಿಲ್ಲ ಎಂಬುದನ್ನ ಯೋಚನೆ ಮಾಡುತ್ತಿದ್ದೆ. ನಿಜವಾಗಿಯೂ ಚಪ್ಪರಿಕೆ ಎಂಬ ಊರಿದೆಯಾ ಎಂದು ವಿಸ್ಮಯಗೊಂಡಿದ್ದೆ. ಈಗ ಅವರ ಪುಸ್ತಕವನ್ನೇ ಓದಿದ್ದು ನನಗೆ ಖುಷಿಯಾಯಿತು. ಈ ಲಾಕ್ ಡೌನ್ 1.0 ರಲ್ಲಿ ಬಿಡುಗಡೆಯಾಗಬೇಕಿದ್ದ ಈ ವರ್ಜಿನ್ ಮೊಹಿತೋ , ಲಾಕ್ ಡೌನ್ 4.0ರಲ್ಲಿ ನನ್ನ ಮನೆಗೆ ತಲುಪಿ, ಲಾಕ್ ಡೌನ್ 5.0ರಲ್ಲಿ ನಾ ಓದುವ ಹಾಗಾಯಿತು.

ನನಗೆ ಬೊಂಬಾಯಿ ಪೆಟ್ಟಿಗೆಯೆಂಬ ಪದವೇ ಹೊಸತು. ಒಂದು ಊರು ಬಾಂಬೆಗೆ ಇಷ್ಟೆಲ್ಲಾ ಬಿಲ್ಡಪ್ ಇದೆಯಾ ಎಂದು ಗೊತ್ತಾಗಿದ್ದು ನನಗೆ ಇದರಲ್ಲೇ. ಪತ್ರಕರ್ತರು ಅವರ ಉದ್ಯಮದಲ್ಲಿ ಆಗಿತ್ತಿರುವ ತಲ್ಲಣಗಳನ್ನ ಒಂದು ವರದಿಯನ್ನಾಗಿಸದೆ ಕತೆಯಾಗಿಸಿದ್ದೇ ಬಹಳ ಮೆಚ್ಚುವಂಥದ್ದು. ಇಲ್ಲಿ ಮುಖ್ಯ ಪಾತ್ರದಾರಿ ಪತ್ರಕರ್ತನೇ ಆಗಬೇಕೆಂದಿಲ್ಲ ಅವನು ಬೆಂಗಳೂರಿನಲ್ಲಿ ಮ್ಯಾನೇಜರಿನ ಹತ್ತಿರ ಉಗಿಸಿಕೊಳ್ಳುವ ಐಟಿ ಉದ್ಯಮಿಯೇ ಆಗಿರಬಹುದು ಅಥವಾ ಸ್ಕೂಲಿನಲ್ಲಿ ವಿಪರೀತ ಪ್ರೆಷರ್ ಇರುವ ಟೀಚರೇ ಆಗಿರಬಹುದು. ಸದಾ ವಿಸ್ಮಯವನ್ನೇ ಹುಡುಕುವ ಬೊಂಬಾಯಿ ಪೆಟ್ಟಿಗೆಯ ಕೊನೆಯಲ್ಲಿ ವಿಷಾದವಿರುವುದು ಸತ್ಯ.

ಹೈಡ್ ಪಾರ್ಕ್ ಕತೆ ಲಂಡನ್ನನ್ನ ಚೆನ್ನಾಗಿ ಸುತ್ತು ಹಾಕಿಸಿತು. ಇದೊಂಥರಾ ಆ ಜಾಗಕ್ಕೆ ಹೋದರೆ ಈ ಪಾತ್ರಗಳು ನೆನಪಾಗಬೇಕು ಅನ್ನೋ ಹಾಗೆ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ತಾಯಿ ಮಗನ ಸಂಬಂಧವನ್ನ ಚೆನ್ನಾಗಿ ಚಿತ್ರಿಸಿದ್ದಾರೆ. ತಾಯಂದಿರನ್ನ ಮಮತಾಮಯಿ ಅದು ಇದೂ ಎಂದು ಹೇಳಿ ಅಟ್ಟಕೇರಿಸುವ ಬದಲು ಅವರು ಕೆರಿಯರ್ ಓರಿಯೆಂಟಡ್ ಆಗಿರುವ ಅಮ್ಮನ ಪಾತ್ರ ಬಹಳ ಹಿಡಿಸುವಂಥದ್ದು. ಸ್ನೇಹ, ಪ್ರೀತಿ, ಗೌರವ ಮತ್ತು ಸ್ವಾತಂತ್ರ್ಯ ಎಲ್ಲಾ ಸಂಬಂಧಗಳಲ್ಲೂ ಇರಬೇಕೆಂಬುದು ಸುಳ್ಳಲ್ಲ. ಅದು ಇರಬೇಕು. ಈ ಕತೆಯ ಕೊನೆಯಲ್ಲಿ ಇದೇ ಆಚೆ ಬರೋದು.

ದಾಸ ಕತೆ ಒಂದು ದೊಡ್ಡ ಪಯಣ. ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ಮೆಂಟಿನಿಂದ, ಚಹಾ ಮಾಡುವ ವಿಧಾನದಿಂದ ಚಪ್ಪರಿಕೆ, ಮಂಗಳೂರು, ಕೋಲಾರ ಮತ್ತೆ ಬೆಂಗಳೂರು. ಈ ಪಯಣದಲ್ಲಿ ಅವರೊಡನೆ ಇರುವ ನಾಯಿ ಮಧ್ಯದಲ್ಲಿ ಬರುವ ಡಾನ್ ಪಾತ್ರ ಎಲ್ಲವೂ ಒಂದು ಸಕ್ಕತ್ ಮದುವೆ ಊಟದ ಐಟಮ್ಸಿನ ಹಾಗಿದೆ. ಒಬ್ಬ ಡಾನ್ ಬಂದು ಸಣ್ಣ ಹುಡುಗನಿಗೆ ಸಾರಿ ಕೇಳುವುದು ಕೆಲವೊಮ್ಮೆ ಆಶ್ಚರ್ಯ ತರಿಸಿದರೂ ಅದು ಸಹಜವಾಗಿ ಬಂದಿದೆ.

ಗರ್ಭ ತೀರಾ ಹತ್ತಿರದವರ ಆಸ್ಪತ್ರೆಯ ನೋವು ಅರಿವಾಗಿಸಲು ಪ್ರಯತ್ನಿಸುತ್ತದೆ. ನನ್ನ ತಾತನ ಆಸ್ಪತ್ರೆಯ ವಾಸ ನನಗೆ ನೆನಪಾಯಿತು. ಪ್ರತಿ ಸಲ ಐ ಸಿ ಯೂ ಗೆ ವೈದ್ಯರು ಹೋದಾಗ ನನ್ನ ತಾತನಿಗೆ ಏನೋ ಆಗಿದೆ ಎಂದು ಪದೇ ಪದೇ ಎದ್ದು ನೋಡುತ್ತಿದ್ದ ನನ್ನ ಅಮ್ಮನ ಮುಖ, ವೈದ್ಯರು ಚೆಕ್ ಅಪ್ ಆದ ಮೇಲೆ ಆಚೆ ಬಂದರೆ ಅಮ್ಮ ಕೇಳುತ್ತಿದ್ದ “ಪರ್ವಾಗಿಲ್ವಾ” ಎಂಬ ಪದ ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ನಿಜವಾಗಿಯೂ ಆಸ್ಪತ್ರೆ ರೋಗಿಗೆ ಹಿಂಸೆಯಾದರೆ ರೋಗಿಯ ಮನೆಯವರಿಗೆ ಆಗುವ ಹಿಂಸೆ ಅಷ್ಟಿಷ್ಟಲ್ಲ. ಎಲ್ಲವೂ ಸರಿಯಾಗುತ್ತದೆ ಎಂದು ಹೋಗುವ ಜಾಗ ಏನೂ ಸರಿಯಾಗಿಸುವುದಿಲ್ಲ ಎಂದು ತಿಳಿದಾಗ ಆಗುವ ಆಘಾತ ಇದೆಯಲ್ಲ ಅದನ್ನ ತಡೆದುಕೊಳ್ಳೋದಕ್ಕೆ ಸಾಧ್ಯವೇ ಇಲ್ಲ.

ಮೂರು ಮುಖಗಳು ಈ ಪುಸ್ತಕದ ಪ್ರಮುಖ ಕತೆ. ಈ ಮುಖಗಳು ನನ್ನ ಪೀಳಿಗೆಯದ್ದು. ಈ ಪೀಳಿಗೆಗೆ ಇರೋದು ಮೂರೇ ಫ್ರೆಂಡ್ಸ್ ಅಷ್ಟೆ. ಆ ಮೂವರು ಸೇರೋದು ಯಾರದ್ದೋ ಅಪಾರ್ಟ್ಮೆಂಟಿನ ಎಣ್ಣೆ ಕಾರ್ಯಕ್ರಮದಲ್ಲೇ. ಅಲ್ಲೇ ಅವರ ಸುಖ ದುಃಖ ನೋವು ನಲಿವು ಎಲ್ಲವೂ ಆಚೆ ಬರುವುದು. ಮೂವರು ಸ್ನೇಹಿತರಿಗೂ ಒಂದೇ ದುರಂತವಾಗಿರೋದು ಕೆಲವೊಮ್ಮೆ ಆಶ್ಚರ್ಯ ತರಿಸಿದರೂ ಅದರಲ್ಲಿ ಹುರುಳು ಖಂಡಿತಾ ಇದೆ. ಸೆಕ್ಸಿಯಲ್ ಅಬ್ಯೂಸ್ ಅನ್ನೋದು ಕೆಲವೊಮ್ಮೆ ಅದು ಅಬ್ಯೂಸ್ ಎಂದು ಅರ್ಥವಾಗೋದೆ ಎಷ್ಟೋ ವರ್ಷಗಳ ನಂತರ ಆ ಎಳೆಯನ್ನ ತೋರಿಸಿದ ಕತೆ ನನಗೆ ಇನ್ನೂ ಇದೆ ಎಂದೆನಿಸಿತು. ಅಂದರೆ ಇನ್ನೂ ಎಳೆ ಎಳೆಯಾಗಿ ಬರಬಹುದಾದ ಕತೆ ಎಂದು ನನಗನಿಸಿತು.

ಕಾಣದ ಕೈಗಳ ಆಟದಲ್ಲಿ ಸಾವು ಮತ್ತು ರೋಗ ಯಾವ ದುಡ್ಡು, ಕಾಸು, ದರ್ಪ ಮತ್ತು ಪವರಿಗೆ ಸೋಲೋದಿಲ್ಲ ಎಂದು ಬಹಳ ಚೆನ್ನಾಗಿ ತೋರಿಸಿದ್ದಾರೆ. ತಾನೇ ಹಾನಿ ಮಾಡಿದ್ದ ಜನರು ಕೆಲವೊಮ್ಮೆ ಎಲ್ಲವನ್ನು ಮರೆತು ಅವರನ್ನ ಸೇವ್ ಮಾಡುತ್ತಾರಲ್ಲ ಅದನ್ನ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಒಬ್ಬ ಮನುಷ್ಯನಿಗೆ ಪ್ರಾಯಃಶ್ಚಿತವಾಗುವುದು ಕೆಲವೊಮ್ಮೆ ಶಿಕ್ಷೆಯಿಂದಲ್ಲ ಅವರ ಶತ್ರುವಿನ ಒಳ್ಳೆತನದಿಂದ ಎಂದು ಹೇಳುವ ಕತೆಯಿದು.

ಇನ್ನು ವರ್ಜಿನ್ ಮೊಹಿತೋ ಈ ಪುಸ್ತಕದ ಮುಖ್ಯ ಕತೆ. ಅದರಲ್ಲೂ ನನ್ನ ಫೀಲ್ಡ್ ಆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸು, ಎನ್ ಎಲ್ ಪಿ ಎಲ್ಲಾ ಬಂದದ್ದು ಕತೆಯನ್ನ ಕುತೂಹಲಕಾರಿಯಾಗಿಸಿತು. ನಮ್ಮ ಫೀಲ್ಡಿನಲ್ಲಿ ಒಂದು ಮಾತಿದೆ ಆರ್ಟಿಫಿಶಿಯಲು ಇಂಟಿಲಿಜೆನ್ಸೇನೋ ಬಂತು ನಮ್ಮ ನ್ಯಾಚುರಲ್ ಸ್ಟುಪಿಡಿಟಿಗೆ ಏನು ಮಾಡೋದು ಎಂದು. ಈಗಿನ ಪೀಳಿಗೆಗೆ ಓದು, ಅವರ ವ್ಯವಹಾರ ಮತ್ತು ಟ್ರಾವೆಲ್ ಅವರ thought process ನಲ್ಲಿ ಸಣ್ಣ ಬದಲಾವಣೆಯನ್ನೂ ಮಾಡದೇ ಇನ್ನೂ ಅದೇ ಅದೇ ಸ್ಟುಪಿಡಿಟಿಗೆ ಥಳಕು ಹಾಕಿಕೊಂಡಿರುವುದು ಇವತ್ತಿನ ವಾಸ್ತವ. ಅದನ್ನ ಸರಿಯಾಗಿ ಕಟ್ಟಿಕೊಟ್ಟಿದ್ದಾರೆ.

ಈ ಪುಸ್ತಕದಲ್ಲಿ ನನಗೆ ಸಿಟಿ, ಹಳ್ಳಿಯನ್ನ ಅತೀ ಸಹಜವಾಗಿ ತೋರಿಸಿದ್ದಾರೆ. ಯಾವುದನ್ನೂ ಹೋಲಿಕೆ ಮಾಡದೇ ಅದು ಚೆನ್ನಾಗಿತ್ತು ಇದು ಚೆನ್ನಾಗಿತ್ತು ಎಂದು ನಾಸ್ಟಾಲ್ಜಿಯಾಗೆ ಮರಳಿ ಈಗಿನ ವಾಸ್ತವವನ್ನು ಠೀಕೆ ಮಾಡುವ ಕೆಲಸ ಯಾವ ಕತೆಯಲ್ಲೂ ನಡೆದಿಲ್ಲ ಎಂಬುದು ನನಗೆ ಖುಷಿ ಕೊಟ್ಟ ವಿಷಯ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ವರ್ಜಿನ್ ಮೊಹಿತೊ

ಮೇಘನಾ ಸುಧೀಂದ್ರ