Article

'ಥಟ್ ಅಂತ ಬರೆದು ಕೊಡುವ ರಸೀದಿಯಲ್ಲ ಕವಿತೆ'- ಒಂದು ಓದು

ಇವು ವಿಪರೀತ ಕಾವ್ಯ ಮೋಹಿಯೊಬ್ಬನ ಕವಿತೆಗಳು. ಶಬ್ಧ, ನಿಶ್ಯಬ್ಧದ ಒಡಲೊಳಗೆ ಸ್ವಗತಗೊಳ್ಳುತ ಥಟ್ಟನೇ ಕೋಲ್ಮಿಂಚಿನಂತೆ ಗುನುಗುವ ಕವಿ; ತನ್ನ ಕಾಲದ ವರ್ತಮಾನದ ಬೆಂಕಿ ಉಂಡೆಗೆ ಉರಿಯದೆ ಬೆಳಗುವವನು. ಅಪಾರ ಸಮಚಿತ್ತತೆ, ತಾಳ್ಮೆ ಕಾವ್ಯದ ಸಾಲುಗಳಲ್ಲಿ ಎದ್ದು ಕಾಣುತ್ತವೆ. ಮಧುರಚೆನ್ನರ ನೆಲದ ಈ ಕವಿಯ ಕಾವ್ಯದಲ್ಲಿ ದೇಶಿಯ ಶಬ್ಧ ಲಯಗಳ ಬಗೆಬಗೆಯ ಪ್ರಯೋಗಶೀಲತೆ  ಕಾಣಬಹುದು. ವರ್ತಮಾನದ ಕಡು ಸಂಕಟವನ್ನು ಪುರಾಣ ಪ್ರತಿಮೆಗಳ ಮೂಲಕ ಹೇಳುವ ಕವಿ, ಪುರಾಣ ಹಾಗೂ ನಮ್ಮ ಹಿರಿಕರೊಂದಿಗೆ ಸ್ವಗತದ ಲಹರಿಯಲ್ಲಿ ವಾಗ್ವಾದಕ್ಕಿಳಿಯುವನು. ಪೂರ್ವ ಸೂರಿಗಳ ನೆನೆದು ಕಣ್ಣೀರು ತೊಡಿಕೊಳ್ಳುವನು. ಮುಗ್ಧ ಭಾವುಕತೆ ಕಾವ್ಯದ ಜೀವಸೆಲೆಯಂತೆ ಭಾಸವಾಗುತ್ತದೆ. ಅನುಭಾವದ ಹುಚ್ಚಿಗೆ ಬಿದ್ದವನ ತಳಮಳ, ಸಂಕಟ, ದ್ವಂದ್ವ, ಸ್ತಭ್ದಧತೆಯ ಕುರುಹು ಮಿಂಚಂತೆ ಮಿಣುಕುವುದು.

ಕನ್ನಡದ ಕವಿಗಳಂತೆ  ಗಾಲಿಬ್, ಮೀರಾ, ಬ್ರೇಕ್ಟರನ್ನು ಬೆನ್ನುಹತ್ತಿ ವಿಜ್ರಂಭಿಸುವ ಪಿಸುಗುಡುವ ಧ್ವನಿ, ಕಾವ್ಯ ಸೂಕ್ಷ್ಮಜ್ಞರ ಅರಿವಿಗೆ ಬಾರದೆ ಇರದು. ಈ ಸಮಾಜದ ಕ್ರೂರತನ, ಪ್ರಭುತ್ವ ಸೃಷ್ಟಿಸಿದ ಅಸಹಾಯಕತೆ ಕುರಿತು ನಯವಾಗಿ ಕವಿತೆಗಳು ಮಾತಾಡುತ್ತವೆ. ’ನಿರುದ್ಯೋಗಿ ದೇವರು’, ’ಜಾತಿಗಳು ಕೊಲೆಯಾಗುವುದಿಲ್ಲ’ ಮತ್ತು ’ಐಗೋಳ ಹುಸೇನ್’ ಮುಂತಾದ ಕವಿತೆಗಳು ಈ ಮೇಲಿನ ಅಂಶಗಳಿಗೆ ಸಾಕ್ಷಿ. ’ಆಕಾಶಕ್ಕೆ ಉಗಿಯುವುದನ್ನು ಬಿಡಬೇಕು’ ಎನ್ನುವ ಕವಿ, ’ಏಕಾಂಗಿಯೊಬ್ಬನ ಸ್ವಗತ’ದ ಮೂಲಕ ಈ ಕ್ಷೇತ್ರದ ನ್ಯೂನ್ಯತೆ ಕುರಿತು ವಿಡಂಬಿಸುವನು. ಹೊಸತನದ ದಾರಿ ತುಳಿಯುವ ಉತ್ಸಾಹದ ಸುಮಿತ್ ಮೇತ್ರಿ ಭರವಸೆ ಹುಟ್ಟಿಸಿರುವ ಕವಿ. ’ಥಟ್ ಅಂತ ಬರೆದು ಕೊಡುವ ರಸೀದಿಯಲ್ಲ ಕವಿತೆ’ - ಸಂಕಲನವು ಇದಕ್ಕೊಂದು ನಿದರ್ಶನ. ಸಾಗಬೇಕಾದ ದಾರಿ ಇನ್ನೂ ದೂರವಿರುವ ಕುರಿತು ಎಚ್ಚರವಿಟ್ಟುಕೊಂಡ ಕವಿಗೆ ಅಭಿನಂದನೆಗಳು. 

ಮಧು ಬಿರಾದಾರ