Article

ತೀರದ ತಲ್ಲಣಗಳ ಅಭಿವ್ಯಕ್ತಿ

ಇವ್ರು ನಂಗ 'ಸಹ ಸ್ಪಂದನ' ಅಂತ ವಾಟ್ಸಪ್ಪ್ ಬಳಗದಿಂದ ಪರಿಚಯ ಆಗಿದ್ದು, ಭಾಳ ನಾಜೂಕು ಸ್ವಭಾವದವರು, ಮೊದ್ಲೇ ಕರಾವಳಿಯವರು, ಆದ್ರ ಭಾರಿ ಒಳ್ಳೆ ಮನಶ್ಯಾ, ಒಂದಿನಾ ಫೋನಿನ್ಯಾಗ್ ಮಾತಾಡಬೇಕಾದ್ರ ಅವ್ರು ನಾನೊಂದು ಕಥಿ ಪುಸ್ತಕ ಬಿಡುಗಡೆ ಮಾಡಿನ್ರಿ ಅಂತ ಅಂದ್ರು, ನಾ ಅದನ್ನ ತರುಸ್ಕೊಂಡು ಓದಿದೆ.

ಅದ್ರಾಗ ವಿಶೇಷ ಅಂದ್ರ ಅದು ಸ್ವಲ್ಪ ಕರಾವಳಿಯ ಹವ್ಯಕ ಭಾಷೆಯ ಕಥೆಗಳನ್ನು ಹೊಂದಿದ ಪುಸ್ತಕ, ಓದ್ಲಿಕ್ಕ ಭಾಷೆ ಭಾಳ ಚಂದ ಇರ್ತಾದ, ಒಟ್ಟು 14 ಕಥೆಗಳನ್ನೊಳಗೊಂಡ ಪುಸ್ತಕವಿದು. ಒಂದೊಂದು ಕಥೆಯು ಅಲ್ಲಿನ ಜನಮನಗಳ ಬದುಕಿನ ಸ್ಥಿತಿ ಮತ್ತೆ ಅಲ್ಲಿನ ಪರಿಸರದ ಮುಖವಾಡವನ್ನೊಳಗೊಂಡ ಕಥಾ ಸಂಕಲನ, ಮತ್ತೆ ಪ್ರತಿಯೊಂದು ಕಥೆಯಲ್ಲಿಯೂ ಪ್ರತಿಯೊಂದು ಪಾತ್ರಗಳು ಅದರದ್ದೇ ಆದ ಭಾವವನ್ನು ನಮ್ಮ ಕಣ್ಣೆದುರಿಗೆ ಬರುವುದರಲ್ಲಿ ಬೇರೆ ಮಾತಿಲ್ಲ, ಭಟ್ಟರ ಕಥೆಗಳನ್ನೋದುತ್ತಾ ಹೋದಾಗ ದೃಢ ವಿಶ್ವಾಸದ ಕಥೆಗಾರರು ಅಂತ ಅನಿಸುತ್ತದೆ.

ಅಲ್ಲಿದ್ದ ಪ್ರತಿಯೊಂದು ಕಥೆಯು ತನ್ನದೇ ಆದ ಒಂದು ಶೈಲಿಯನ್ನು ಹೊಂದಿದೆ, ಅದರಲ್ಲಿ ನನಗಿಷ್ಟವಾದ ಕೆಲವು ಕಥೆಗಳ ಬಗ್ಗೆ ಹೇಳುವಾಸೆ, ಮೊದಲನೆಯದಾಗಿ 'ಚುಕ್ತಾ ಆದ ಲೆಕ್ಕ' ಅಲ್ಲಿ ಕಂಡದ್ದು ವ್ಯಾಪಾರೀ ಮತ್ತೆ ಗಿರಾಕಿಯ ನಡುವಿನ ಅಂತರ, ಅದನ್ನು ಬಹಳ ಚೆನ್ನಾಗಿ ವಿವರಿಸಿದ್ದಾರೆ. ರೈತರು ಒಂದ್ಕಡೆ ಮಳೆ ಇಲ್ಲದ ಕಾರಣ ಅವರುಗಳು ಅನುಭವಿಸುವ ಪರಿಯಾಗಲಿ, ಅದನ್ನು ನೋಡಿ ರಾಯರು ಸೋಮಪ್ಪನನ್ನು ಸಹಾಯ ಮಾಡುವುದಾಗಲಿ ಎಲ್ಲವು ಚಂದ, ಈಗಿನ ಕಾಲದಲ್ಲಿ ಅಷ್ಟು ನಿಷ್ಠಾವಂತ ಗೀರಕಿಯು ಸಿಗಲ್ಲ, ಅಷ್ಟು ನಂಬಿಕಸ್ತ ವ್ಯಾಪಾರಿಯು ಸಿಗಲ್ಲ.

ಎರಡನೆಯದಾಗಿ 'ಮತ್ತೆ ಬೆಳಗಾಯಿತು', ಇಲ್ಲಿಯೂ ಸಹ ವಠಾರ ಮತ್ತೆ ಅಲ್ಲಿನ ಮಂದಿಯ ಬಗ್ಗೆ ಭಾಳ ಚಂದ ಹೇಳಿದ್ದಾರೆ. ಅಲ್ಲಿನ ಮುದುಕಿಗೆ ಮಕ್ಕಳಿದ್ದು ನೋಡುವರಿಲ್ಲ, ಮುದುಕಿಗೆ ಅಲ್ಲಿಯ ಜನರ ಮೇಲಿದ್ದ ವಿಶ್ವಾಸವಾಗಲಿ, ವಠಾರದ ಜನರು ಮುದುಕಿಯನ್ನು ತಮ್ಮ ಮನೆಯವಳೆಂದೇ ನೋಡುವ ಪರಿ ತುಂಬಾ ಚಂದ, ಕೊನೆಗೊಂದು ದಿನ ಮುದುಕಿ ಜಿರಳೆ ಮತ್ತೆ ಇಲಿಯ ಕಾಟಕ್ಕಾಗಿ ಹೊಡೆದ ಔಷಧಿಯಿಂದ ಉಸಿರುಗಟ್ಟಿ ಸ್ವಲ್ಪ ಎಚ್ಚರವಾಗಲು ತಡವಾದಾಗ, ವಠಾರದ ಜನರಿಗೆ ಮುದುಕಿ ಬೆಳಗ್ಗೆ ಬೇಗನೆ ಏಳಲಿಲ್ಲವೆಂದು ಅವರು ಗಾಬರಿಪಡುವುದಾಗಲಿ, ಕೊನೆಗೆ ವಠಾರದ ವೈದ್ಯರು ಮುದುಕಿ ಹೀಗೆ ಮಾಡಿದುದ್ದರಿಂದ ಹೀಗಾಗಿದೆ ಎಂದು ಹೇಳಿದಾಗ, ಮತ್ತೆ ಎಲ್ಲರು ಒಂದಾಗಿ ಖುಷಿ ಪಟ್ಟು ಕೊನೆಗೆ ಮತ್ತೊಮ್ಮೆ ಬೆಳಗಾದಂತೆ ಅವರು ಕಂಡ ರೀತಿ ತುಂಬಾ ಚಂದ.

ಮೂರನೆಯದಾಗಿ 'ಪತ್ತೆಯಾಗದ ಪರಿಚಿತ' ಇದನ್ನೋದುತ್ತಾ ಹೋದಾಗ ನನಗು ನಮ್ಮ ಮನೆಯವರು ನೆನಪಾದದ್ದುಂಟು.  ಮನೆಯವರು ಮಕ್ಕಳ ಖರ್ಚಿಗೆ ದುಡ್ಡು ಕೊಟ್ಟಾಗ, ಅದು ಕೇಳುವುದು ಅವರ ಕರ್ತವ್ಯ ಹಾಗೆಯೇ ಈ ಕಥೆಯಲ್ಲಿಯೂ ಸಹ ಶಂಕರ ಭಟ್ಟರು ಸಹ ತನ್ನ ಮಗನಿಗೆ ದೀನಾಲು ಹಣದ ವಿಷಯದಲ್ಲಿ ವಿಚಾರಣೆ ಮಾಡುತಿದ್ದರು. ಆದರೆ ಇದನ್ನು ಕಂಡ ನರೇಶನಿಗೆ ಭಾಳ ಕೋಪ ಬಂದಂಗಾಯಿತು, ಒಂದು ದೀನ ಕೋಪಗೊಂಡು ಅವನ ತಂದೆಗೆ ಎದುರು ವಾದಿಸಿದಾಗ, ಶಂಕರಭಟ್ಟರು ತನ್ನ ತಮ್ಮಿನಿಗಾದ ಪರಿಯನ್ನು ಮಗನಿಗೆ ಹೇಳಿದಾಗ ನರೇಶನಿಗೆ ಕೊನೆಗೆ ಅರಿವಾಗತೊಡಗಿತು. ಆದರೆ ನರೇಶನಿಗೊಂದು ಕೊರಗು ಶುರುವಾಗತೊಡಗಿತು ನಮ್ಮ ಮನೆಯಲ್ಲಿಯೇ ಈ ತರಹದ ಘಟನೆಯೊಂದು ಆಗಿದೆ ಆದರೆ ನನಗೆ ಇದೆಲ್ಲ ಗೊತ್ತೇ ಇಲ್ಲವಲ್ಲ, ನನಗು ಸಹ ಹೀಗಾಗದಿರಲಿ ಅನ್ನುವ ಉದ್ದೇಶದಿಂದ ನನ್ನ ತಂದೆ ಬಯಸುತ್ತಿರುವುದು ನೀಜಕ್ಕೂ ಉತ್ತಮ ವಿಷಯ, ಕೊನೆಗೆ ಶಂಕರ ಭಟ್ಟರು "ಮಗನೆ ನೀನು ಎಲ್ಲಿ ಅಪರಿಚಿತರನ್ನೆಲ್ಲ ಕಂಡು ಹೆದರಿಕೊಳ್ಳುತ್ತಿಯೋ ಎಂದು ಭಾವಿಸಿದೆ. ಜಗತ್ತಿನಲ್ಲಿ ಎಲ್ಲರೂ ಮೋಸಗಾರರಲ್ಲ. ಮೋಸ ಮಾಡುವ ಜನರು ಕೆಲವರು ಇದ್ದೆ ಇರುತ್ತಾರೆ. ಹಾಗಾಗಿ ನೀನು ಎಲ್ಲಿಯೇ ಹೋಗಲಿ, ನಿನ್ನ ಜಾಗ್ರತೆಯಲ್ಲಿ ನೀನಿರಬೇಕು" ಎಂದಾಗ ನನಗಂತೂ ಕಣ್ಣಲ್ಲಿ ನೀರು ತುಂಬಿ ಬಂತು.

ನಾಲ್ಕನೆಯದಾಗಿ 'ಕುಲ ಕಸುಬು' ಇದರಲ್ಲೂ ಸಹ ತುಂಬಾ ಚೆನ್ನಾಗಿ ಬರೆದಿದ್ದಾರೆ ನಾವು ಬೆಳೆಯುತ್ತಿರುವ ಜಗತ್ತಿನಲ್ಲಿ ನಮ್ಮ ಹಳೆಯ ಕಸುಬು ಅಥವಾ ನಮ್ಮ ಮನೆಯಲ್ಲಿನ ಪೂರ್ವಜರ ಕಸುಬಾಗಲಿ ಅದನ್ನು ನಾವುಗಳು ಎಷ್ಟೇ ಓದಿದರೂ ಸಹ ಮರೀಬಾರ್ದು, ಇಲ್ಲಿನ ತಿಮ್ಮಪ್ಪ ಭಂಡಾರಿಯವರ ಮಗನು ಅನುಭವಿಸುತ್ತಿದ್ದ ರೀತಿಯಲ್ಲಿ ಅವರು ಮಗನಿಗಾಗಿ ಎಷ್ಟೆಲ್ಲಾ ಹೇಳಿದರು ಅವನು ಕೇಳದೆ ಇದ್ದಾಗ, ಮನೆಯಲ್ಲಿ ದೀನವು ಜಗಳವಾಗುತ್ತಿರಲು, ಕೊನೆಗೊಂದು ದೀನ ಮಗನ ಮೇಷ್ಟ್ರು ಮನೆಗೆ ಬಂದಾಗ  ಅವರಲ್ಲಿ ಈ ಎಲ್ಲಾ ವಿಷಯಗಳ ಚರ್ಚೆ ಮಾಡಿದಾಗ, ಅವರು ಕೊನೆಗೆ ತಮ್ಮ ಶಿಷ್ಯನನ್ನು ಹೇಗೆ ಹೇಳಬೇಕೆಂದು ತಿಳಿದುಕೊಂಡು ತಿಮ್ಮಪ್ಪ ಭಂಡಾರಿಗೆ ಆಶೀರ್ವದಿಸಿದಾಗ, ಅವರು ಹರ್ಷಚಿತ್ತರಾದುದು ಮೆಚ್ಚುಗೆಯ ವಿಷಯ.

ಐದನೆಯದಾಗಿ 'ಭೂತ' ಈ ಕಥೆಯಲ್ಲಿ ಕಥೆಗಾರನು ತಮ್ಮ ಸಮಾಜದಲ್ಲಿ ಅಂದರೆ ಹವ್ಯಕ ಸಮಾಜದಲ್ಲಿ ಅನುಭವಿಸುತ್ತಿರುವ ಪರಿಯನ್ನಿಟ್ಟುಕೊಂಡೇ ಸರಳವಾಗಿ ವಿವರಿಸಿದ್ದಾರೆ, ಇನ್ನೊಂದೆಂದರೆ ಇವರು ಗಡಿಭಾಗದವರು ಆದುದ್ದರಿಂದ ಅಲ್ಲಿನ ಗಡಿತಕರಾರು ಇರಬಹುದು ನೀರಿನ ಸಮಸ್ಯೆ ಆಗಿರಬಹುದು, ಇವೆಲ್ಲ ವಿಷಯಗಳ ಬೆಗ್ಗೆ ಈ ಕೆಥೆ ನವಿರಾಗಿ ಲೇವಡಿ ಮಾಡುತ್ತದೆ.

ಆರನೆಯದಾಗಿ 'ಯಾರಿಗೆ ಬುದ್ಧಿಯಿಲ್ಲ' ಉಳ್ಳವರ ಕ್ರೌರ್ಯವನ್ನು ಕತೆಗಾರನ ಕಣ್ಣು ವಿಷಾದ ಬೆರೆತ ವ್ಯಂಗ್ಯದಿಂದ ದಾಖಲಿಸಿದನ್ನು ಈ ಕಥೆಯಲ್ಲಿ ವಿವರವಾಗಿ ನೋಡಬಹುದು.

ಏಳನೆಯದಾಗಿ 'ಉಪಾಯ' ಎನ್ನುವ ಕಥೆಯಲ್ಲಿ ಎಲ್ಲರಂತಿಲ್ಲದ ಸಿಂಗಣ್ಣನೆಂಬವ ಎಲ್ಲರ ತಮಾಷೆಯ ಲೇವಡಿಯ ವಸ್ತುವಾಗಿದ್ದವ, ಅವನು ಕೂಡಿಟ್ಟ ಹಣದಿಂದ ಮಾಡಿಸಿದ ಉಂಗುರವನ್ನು ಲಪಟಾಯಿಸುವ ಬುದ್ಧಿತೋರಿದ ಮೇಷ್ಟ್ರು ಪೂರ್ವ ತಯಾರಿ ಮಾಡಿ ಕದ್ದದ್ದೇನೂ ಅಲ್ಲವಾದರೂ ಒದಗಿಬಂದ ಅವಕಾಶವನ್ನು ಬಳಸಿಕೊಂಡು ಧೂರ್ತತನವನ್ನು ಮೆರೆಯುತ್ತಾರೆ. ತುಂಬಾ ಸಹಜವಾದ ದಾರಿಯನ್ನು ಈ ಕಥೆಯಲ್ಲಿ ಹೇಳಿದ್ದಾರೆ.

ಇಲ್ಲಿ ಕಥೆಗಾರ ನೈಜ ಜೀವನಾನುಭವಕ್ಕೆ ನಿಷ್ಠೆಯನ್ನು ತೋರುವ ಕೃತಕವಾದ ಭ್ರಮಾಲೋಕವನ್ನು ಸೃಷ್ಟಿರಿರುವುದು ಇಲ್ಲಿಯ ಕಥೆಗಳಿಗೆ, ಇಲ್ಲಿನ ಕಥೆಗಳಿಂದ ಓದುಗರಿಗೆ ಸಕಾರಾತ್ಮಕ ಸಂದೇಶ ಸದಾ ಕೈಹಿಡಿದು ನಡೆಸುತ್ತದೆ, ಪ್ರತಿಯೊಂದು ಕಥೆಯು ನಮ್ಮ ಜೀವನದ ಏರುಪೇರಿನ ಬಿರುಕುಗಳನ್ನು ಎತ್ತು ಹಿಡಿದು ಕೊನೆಗೊಂದು ಧನಾತ್ಮಕ ಪರಿಹಾರ ಒದಗಿಸಿದ್ದು ಒಂದೊಳ್ಳೆ ಅಂಶಯ, ಜೀವನದಲ್ಲಿ ಸಮಸ್ಸೆಗಳು ಬರುವುದು ಸಹಜ ಆದರೆ ಅದನ್ನು ಎದುರಿಸದೆ ಕೂಡುವುದು ತಪ್ಪು, ಹಾಗಾಗಿ ನಮ್ಮ ಜೀವನದ ಪ್ರತಿಯೊಂದು ಘಟನೆಯನ್ನು ಪ್ರೀತಿಸುತ್ತ ಹೋದರೆ ಉತ್ತಮ. ಬದುಕು ನಾವಂದುಕೊಂಡಷ್ಟು ಸರಳವೇನಲ್ಲ. ಅದಕ್ಕೊಂದು ಸುಲಭ ಹಾದಿಯನ್ನುಡಿಕೊಂಡರೆ ಮಾನವೀಯತೆಯ ಸಹಬಾಳ್ವೆಯ ಮೌಲ್ಯವನ್ನು ಲೇಖಕರು ಮನಗಂಡಿಸಿದ್ದಾರೆ. ಸಾದಾ ಮತ್ತೆ ಸರಳತೆಯ ಪ್ರತೀಕರಾದ ಲೇಖಕರಿಂದ ಇನ್ನಷ್ಟು ಪುಸ್ತಕಗಳು ಹೊರಬರಲಿ ಎಂದು ಮನಸಾರೆ ಹಾರೈಸುವೆ.

ಸಂಗಮೇಶ ಸಜ್ಜನ