Article

ಉತ್ತಮ ಕಥಾಗುಚ್ಛ ’ದೇವರ ಕುದುರೆ’

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯವರಾದ ಗಂಗಾಧರಯ್ಯ ಅವರ ಮೂರನೇ ಕಥಾಸಂಕಲನವಿದು. ನವಿಲ ನೆಲ, ಒಂದು ಉದ್ದನೆಯ ನೆರಳು- ಈ ಹಿಂದಿನ ಕಥಾಸಂಕಲನಗಳು.

ಅವರ ವೈಕಂ ಕಥೆಗಳು ಅನುವಾದಕ್ಕಾಗಿ ಇವರು 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದವರು. ದೇವರ ಕುದುರೆ ಕೃತಿ ಬೆಸಗರಹಳ್ಳಿ ರಾಮಣ್ಣ ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಪ್ರಶಸ್ತಿಗೆ ಭಾಜನವಾಗಿದೆ. ಇಲ್ಲಿನ ಕತೆಗಳು ಅವರು ಹುಟ್ಟಿ ಬೆಳೆದ ಮಣ್ಣಿನಿಂದ ಎದ್ದುಬಂದ ಕತೆಗಳು. ಈ ಕತೆಗಳನ್ನು ಪಾಠವಾಗಿ ಓದಿಕೊಂಡಾಗ ಗಮನಿಸಿದ ಅಂಶಗಳೆಂದರೆ ’ಬಳಸಿರುವ ಭಾಷೆಯ ಘಮಲು, ಕತೆಗಳ ಆಳದಲ್ಲಿ ಇರುವ ಧ್ವನಿ, ಕತೆಗಳು ಕರೆದುಕೊಂಡು ಹೋದಹಾಗೆ ಕತೆಗಾರ ಹಿಂಬಾಲಿಸಿದ ರೀತಿ. ಗಂಗಾಧರರು ಇಲ್ಲಿ ಯಾವುದೇ ಜಿದ್ದಿಗೆ ಬಿದ್ದು ಕತೆಗಳನ್ನು ಕಟ್ಟಿಲ್ಲ.ಕಥೆಗಳಲ್ಲಿ ಬರುವ ಪಾತ್ರಗಳ ಹೆಸರು ವಿಶಿಷ್ಟವಾಗಿವೆ’.

ಹಳ್ಳಿಗಳ ಅಂತರಂಗವು ಅಸುನೀಗುತ್ತಿರುವ ಭಯದ ಸಮಯದಲ್ಲಿ ವೇದನೆ ಮತ್ತು ಕಸಿವಿಸಿಯಲ್ಲಿ ಗಂಗಾಧರಯ್ಯ ಈ ಕಥೆಗಳನ್ನು ಹೇಳಿದ್ದಾರೆ. ಕರ್ಪಾಲು ಎಂಬ ಪದ್ಧತಿಯೇ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಈ ಕರ್ಪಾಲು ಎಂಬ ಕಥೆ ಎದುರಾಗುತ್ತದೆ.ಕೊನೆಕಾರಿಕೆಯ ಈರ್ಕಾಟ ಮತ್ತು ಚಂದ್ರಪ್ಪನೆಂಬ ಜಮೀನ್ದಾರನ ಕಥೆಯಿದು.ಗೌರಿ ಎಂಬ ಹಸು,ಈರ್ಕಾಟನ ಹೆಂಡತಿ ಸಣ್ಣಾಲಿ,ಮಗ ಮಲ್ಲೇಶಿ, ಮತ್ತು ಊರಿನ ನೈಜ ಚಿತ್ರಣ ಕಾಡುತ್ತವೆ. ಪದುಮದೊಳಗೆ ಬಿಂಬ ಸಿಲುಕಿ ಕಥೆಯು ನಮ್ಮನ್ನು ಆರ್ದ್ರಗೊಳಿಸಿ ಬಿಡುತ್ತದೆ. ಅವ್ವನನ್ನು ಬಿಡಲಾಗದ, ಓದನ್ನು ಮುಂದುವರಿಸಲು ಛಲವಿರುವ ರಾಮಾಂಜಿ ಎಂಬ ಬಾಲಕನ ಸುತ್ತ ಸುತ್ತುವ ಕಥೆಯಿದು. ಮಕ್ಕಳಾಗದ ವೆಂಕಟಗಿರಿ ಮತ್ತು ಕೆಂಪೀರಿ ಕೂಡ ನಮ್ಮ ದುಃಖಕ್ಕೆ ಕಾರಣರಾಗುತ್ತಾರೆ.

ಶೀರ್ಷಿಕೆ ಕಥೆ ದೇವರ ಕುದುರೆ ಬಹಳ ಚೆನ್ನಾಗಿದೆ. ಸೂಚ್ಯವಾಗಿ ಅದು ಕೊಡುವ ಸಂದೇಶ ಅಪೂರ್ವ. ನವೀನ ಎಂಬ ಹುಡುಗನಿಗೆ ಹುಟ್ಟುವ ಕುದುರೆ ಸಾಕುವ ಆಸೆ, ಅದರ ಹಿನ್ನೆಲೆ. ಪುಡ್ಕಯ್ಯನೆಂಬ ಅಪ್ಪ ಮತ್ತು ಅವನ ತಲೆಮಾರು, ಅಡವೀಶ ಮೇಷ್ಟ್ರು, ಕಾಬುಳ್ಳ ಮತ್ತು ಅವನ ಹೆಂಡತಿಯ ವ್ರತ ಹೀಗೆ ಈ ಕಥೆಯು ವಿಸ್ತಾರವನ್ನು ಪಡೆದುಕೊಂಡಿದೆ. ಕೋರು - ಬಿಲ್ಲೂರ ಮತ್ತು ಸಣ್ಣಾಲಜ್ಜಿಯ ತಿಕ್ಕಾಟದ ವ್ಯಥೆಯ ಕಥೆ. ಹೌಳಿಚಿಕ್ಕ ಎಂಬ ಗೆಳೆಯ, ಕಾಟ್ರಂಗಪ್ಪ, ಅಜ್ಜಿಯ ಗಂಡ ಕೆಂಜಡ್ಯಪ್ಪ, ಬಿಲ್ಲೂರನ ಅಪ್ಪ ದುಗ್ಗಾಲಪ್ಪ ಪಾತ್ರಗಳಾಗಿ ಹರಿದು ಬರುವ ರೀತಿ ಅನನ್ಯ. ವಿಶ್ವನಾಥ ಎಂಬ ಯುವಕನ ಕೃಷಿ ಪ್ರಯೋಗಗಳ ಕಥೆ ಜೇನುಬೇಲಿ. 'ಗುಡ್ಡದ ಕೂಸು '- ಹಾಳಾಗುತ್ತಿರುವ ಪರಿಸರದ ಬಗ್ಗೆ ಕಾಳಜಿ ತೋರುವ ಗ್ಯಾರಜ್ಜ ಮತ್ತು ಆ ನೋವಿನ ಸಂಗತಿಗೆ ಸಂಬಂಧಿಸಿದಂತೆ ಕನ್ನಡಿಯನ್ನು ಹಿಡಿಯುವುದು.

ಅಜ್ಜಿಯ ಕೋಲು - ಸಂಜೀವ ಮತ್ತು ಅವನ ಮಗಳು ಸುದೇಹಿಯನ್ನು ಇಟ್ಟುಕೊಂಡು ವಿರಾಟರೂಪ ಪಡೆಯುವ ಕಥೆ. ಚಿಕ್ಕನ ನವಿಲು ಮರಿಗಳು ನಮ್ಮ ಕಣ್ಣಲ್ಲಿ ನೀರು ಹನಿಸುತ್ತವೆ. ಓದಿಯೇ ಆ ಭಾವವನ್ನು ಅನುಭವಿಸುವುದು ಒಳಿತು. ಚಿತ್ರದ ಗೊತ್ತ ಮುಟ್ಟದೆ ಕಥೆಯ ನಾಕಾಲಯ್ಯ, ಅವನ ತಾಯಿ ಗುರುವಮ್ಮ, ಅದು ಕಾರಣ ಎಂಬ ಕಥೆಯ ಚನ್ವೀರ ; ಇವರೆಲ್ಲ ನಮ್ಮ ಪಕ್ಕ ಕುಳಿತು ಕಥೆ ಹೇಳುತ್ತಿರುವಂತೆ ಭಾಸವಾಗುವುದು ದಿಟ. ಇದು ಕಥೆಗಾರನ ಗೆಲುವೂ ಹೌದು. ಮುರ್ಕಲಸಿನ ಮರ ಕಥೆಯಲ್ಲಿ ಮರ ಉಳಿಸಿಕೊಳ್ಳಲು ಹೋರಾಡುವ ಬಾಳಪ್ಪ, ಇಂದಿನ ಕಾಲದ ಧರ್ಮಪ್ಪ ಮತ್ತು ಬುಡೇನ ಸಾಬ್ರ ಕಥೆ ಪ್ರತೀ ಹಳ್ಳಿಯಲ್ಲೂ ಇದೆ. ಆದರೆ ಅಂತ್ಯ ಮಾತ್ರ ಬೇರೆಯಾಗಿರಬಹುದು. ಬೇರಿಲ್ಲದ ಗಿಡ - ಓದುವ ಹಂಬಲದ ಕಪಿನಿ ಎಂಬ ಅನಾಥ ಹುಡುಗ, ಅಲ್ಕೂರಯ್ಯ ಎಂಬ ಮಾವ, ಸಣ್ಣೀರಮ್ಮ ಎಂಬ ಅತ್ತೆ. ಈ ಸಂಕಲನದ ಕೊನೆಯ ಕಥೆಯಲ್ಲಿ ಬರುವ ಪಾತ್ರಗಳು. ಇದೂ ಸಹ ದುಃಖದ ಅನುಸಂಧಾನದಲ್ಲಿ ಮುಗಿಯುತ್ತದೆ. ಗಂಗಾಧರಯ್ಯ ಅವರ ಕಥೆಗಳಲ್ಲಿ ಸಾಕುಪ್ರಾಣಿಗಳಿವೆ, ಅನಾಥ ಮಕ್ಕಳಿದ್ದಾರೆ, ಮಕ್ಕಳಾಗದ ದಂಪತಿಗಳಿದ್ದಾರೆ ಅದೆಲ್ಲವುಗಳ ಜೊತೆಗೆ ಅತಿ ಸಾಮಾನ್ಯ ಹಳ್ಳಿಗರಿದ್ದಾರೆ. ಗ್ರಾಮೀಣ ಸೊಗಡಿನ ಭಾಷೆ ಮತ್ತು ವಾತಾವರಣ ಸಂಕಲನದ ಉದ್ದಕ್ಕೂ ಹೇರಳವಾಗಿ ಹರವಿಕೊಂಡಿದೆ.

ಒಂದೇ ಕಥಾಸಂಕಲನದಲ್ಲಿ ಹಲವು ಉತ್ತಮ ಕಥೆಗಳು ಸಿಗುವುದು ಅಪರೂಪ. ಆದರೆ ಇಲ್ಲಿ ಬಂಪರ್ ಕೊಡುಗೆ ಇದೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ದೇವರ ಕುದುರೆ

ಅಜಿತ ಹೆಗಡೆ