Article

ವಿ.ಆರ್. ಕಾರ್ಪೆಂಟರ್ ಅವರ 'ಬ್ರಾಹ್ಮಿನ್ ಕೆಫೆ'ಯಲ್ಲಿ

ವಿ.ಆರ್. ಕಾರ್ಪೆಂಟರ್ ಅವರ ಕಥಾ ಸಂಕಲನ "ಬ್ರಾಹ್ಮಿನ್ ಕೆಫೆ" ಈಗಷ್ಟೇ ಓದಿ ಮುಗಿಸಿದೆ. ನಾನು ಓದಿದೆ ಎನ್ನುವುದಕ್ಕಿಂತ ಇಲ್ಲಿನ ಎಲ್ಲಾ ಕಥೆಗಳು ಒಂದೇ ಗುಕ್ಕಿಗೆ ತಂತಾನೆ ಓದಿಸಿಕೊಂಡವು. ಕಾರ್ಪೆಂಟರ್ ಕಥೆಗಳನ್ನು ಓದುವಾಗ ಅಲ್ಲಿನ ಪರಿಸರ, ಪಾತ್ರಗಳು, ಸಂಭಾಷಣೆಗಳು ಪ್ರಸಕ್ತ ಕಾಲಘಟ್ಟದಲ್ಲಿ ಘಟಿಸುತ್ತಿರುವ ವಿದ್ಯಾಮಾನಗಳನ್ನು ನೆನಪಿಸುತ್ತವೆ. ಕಾರ್ಪೆಂಟರ್ ಅವರ ಇಲ್ಲಿನ ನಿರೂಪಣೆ ಖ್ಯಾತ ಐರ್ಲೆಂಡ್ ಕವಿ, ನಾಟಕಕಾರ ಹಾಗೂ ಕಥೆಗಾರ ಆಸ್ಕರ್ ವೈಲ್ಡ್‍ನನ್ನು ನೆನಪಿಸುತ್ತದೆ. ಆಸ್ಕರ್ ವೈಲ್ಡ್‍ನಂತೆ thoughtful imagery ಮತ್ತು realistic dialect ಎರಡನ್ನೂ ಬಳಸಿಕೊಂಡು ನಿರೂಪಿಸುವ ಚಾಕಚಕ್ಯತೆ ಕಾರ್ಪೆಂಟರ್ ಅವರಿಗೆ ಸಿಧ್ಧಿಸಿದೆ. ಇಲ್ಲಿನ ಕಥೆಗಳು ಕೇವಲ ಕಥೆಗಳಾಗದೆ ಅಥವಾ ಈ ದುರಿತ ಕಾಲದ ವೃತ್ತಾಂತಗಳಲ್ಲದೆ ಈ ವಿಷಮ ಕಾಲಘಟ್ಟದಲ್ಲಿ ನಮಗೆ ಎಚ್ಚರಿಕೆಯ ಘಂಟೆಯಾಗಿದೆ.

‘ಕೀ ಚೈನ್' ನ ವಸು, "ಬ್ರಾಹ್ಮಿನ್ ಕೆಫೆ"ಯ ಎಲ್ಲಾ ಪಾತ್ರಗಳು, ಹುಚ್ಚುಹನುಮಿ, ಸಾವಂತ್ರಿ, "ಒಂದು ಸಂದರ್ಶನ"ದ ಲೇಖಕ ಹೀಗೆ ಎಲ್ಲಾ ಪಾತ್ರಗಳು ನಮ್ಮ ಸಮಾಜದ ಹಾಗೂ ಅಲ್ಲಿನ ಜೀವಿಗಳ ಹಲವು ಮಜಲುಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿವೆ, ಸಾಹಿತ್ಯವನ್ನು ಸಸ್ಯಹಾರಕ್ಕೆ ಸೀಮೀತಗೊಳಿಸಿ, ಅತೀವ ಮಡಿವಂತಿಕೆ ಪ್ರದರ್ಶಿಸುವ ಸಮಕಾಲೀನ ಹುಸಿ ಬರಹಗಾರರ ನಡುವೆ ಕಾರ್ಪೆಂಟರ್ ಅವರ ನಿರೂಪಣಾ ಶೈಲಿ ಸಹಜವು, ನೈಜವೂ ಹಾಗೂ ಸಾಮಾನ್ಯ ಓದುಗರ ಮನದಲ್ಲಿ ನೆನಪಲ್ಲುಳಿಯುವಂತದ್ದಾಗಿದೆ. ಇಲ್ಲಿನ ಕಥೆಗಳಲ್ಲಿ ಕಥೆಗಾರ ತನ್ನ ಪಾಂಡಿತ್ಯವನ್ನೋ ಅಥವಾ ಯಾವುದೇ ಖ್ಯಾತನಾಮರ ಶೈಲಿಯನ್ನೋ ಅನುಸರಿಸಲು ಹೋಗದೆ ತೀರಾ ಸರಳವಾಗಿ ಹಾಗೂ ಅಷ್ಟೇ ಪರಿಣಾಮಕಾರಿಯಾಗಿ ತನ್ನ ಕಥೆಗಳ ಸಾರವನ್ನು ಓದುಗರಿಗೆ ಅರ್ಪಿಸಿದ್ದಾರೆ. ಇಲ್ಲಿ ಆಶ್ಲೀಲವೆನ್ನುವಂತದ್ದೇನೂ ಇಲ್ಲ. ಸಮಾಜದ ಆಗುಹೋಗುಗಳೆಗೆ ತನ್ನ ಬರಹದ ಮುಖಾಂತರ ಸ್ಪಂದಿಸುವ ಸೂಕ್ಷ್ಮತೆ ಕಾರ್ಪೆಂಟರ್ ಅವರಿಗೆ ಇರುವುದು ಇಲ್ಲಿನ ಎಲ್ಲಾ ಕಥೆಗಳಲ್ಲಿ ಗೋಚರಿಸುತ್ತದೆ. ಸಮಕಾಲೀನ ಕನ್ನಡ ಸಾಹಿತ್ಯದ ಮಟ್ಟಗಂತೂ ಕಾರ್ಪೆಂಟರ್ ಅವರ ಕೃತಿ "ಬ್ರಾಹ್ಮಿನ್ ಕೆಫೆ" ಒಂದು ವಿಶಿಷ್ಟ ಕೃತಿ.

ಅಜಯ್ ರಾಜ್