Article

ವರ್ತಮಾನದ ತಲ್ಲಣಗಳ 'ಬಯಲಿಗೂ ಗೋಡೆಗಳು’

ಸಾಮಾಜಿಕ ನ್ಯಾಯ, ಪ್ರಗತಿಪರ ಚಿಂತನೆ, ಮಹಿಳಾಪರ ಹೋರಾಟಗಾರ್ತಿ ಸೌಮ್ಯಾ ಕೆ. ಆರ್. ರಾಮನಗರದ ಕನಕಪುರದವರಾದರೂ ಬೆಂಗಳೂರೇ ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿ ಹೋರಾಟದ ಧ್ವನಿಯಾಗಿದ್ದಾರೆ. ಒಂದು ಅಧ್ಯಾಯ ಮುಗಿದೇ ಹೋಯಿತು ಅನ್ನುವಷ್ಟರಲ್ಲಿ ಈ ಬದುಕಿನ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ ಎಂಬ ಆಶಾಭಾವದ ಇವರು, ವರ್ತಮಾನದ ತಲ್ಲಣಗಳಿಗೆ ಸದಾ ಮುಖಾಮುಖಿಯಾಗಿರುವರು. ಹೆಣ್ಣು ಹಾಗೂ ಆಕೆಯ ಮನಸ್ಸಿನ ಭಾವಗಳಿಗೆ ಕಾವ್ಯದ ಸ್ಪರ್ಶನೀಡುವದೇ ಇವರ ಕವನದ ಮೂಲ ಮಂತ್ರ. ಈಗ ಮಹಿಳೆಯರ ಅಸ್ತಿತ್ವಕ್ಕೆ ಬೀಗ ಹಾಕಿದ್ದಾರೆ, ಕನಸಿಗೂ ಬೇಲಿ ಕಟ್ಟಿದ್ದಾರೆ. ಇದು ಇಲ್ಲೇ ಕೊನೆಗಾಣಬೇಕು ಎಂಬ ಒಳದನಿಯ ಇವರ ಹೋರಾಟ, ಜನಪರ ಕಾಳಜಿಯದ್ದಾಗಿದೆ. ಕಾವ್ಯ ಎಂದರೆ ಜನರ ಧ್ವನಿಯಾಗಬೇಕು; ಮಾತಾಗಬೇಕು ಎನ್ನುವ ಇವರ ಎರಡನೇ ಕವನ ಸಂಕಲನ 'ಬಯಲಿಗೂ ಗೋಡೆಗಳು' ಬೆಂಗಳೂರಿನ ಪ್ರಬುದ್ಧ ಪ್ರಕಾಶನ ಪ್ರಕಟಿಸಿದ್ದು, 104 ಪುಟದ ಈ ಸಂಕಲನದಲ್ಲಿ 50 ಕವನಗಳಿವೆ.

ಬಣ್ಣದ ಮಾತುಗಳಲ್ಲಿ
ಸುಳ್ಳು ಬೊಗಳುತ್ತಾ
ನಿಮ್ಮ ಮೃಗ ತೃಷೆಗೆ
ತೊಗಲ ಕಾಯ ಬಯಸಿದಿರಷ್ಟೆ
ಯಾರದ್ದಾದರೂ ಎದೆಯಾಳದ
ಪದವನ್ನು ಎಂದಾದರೂ
ಕೇಳಿಸಿಕೊಂಡಿರುವಿರೇನು ?

ಎಂದು 'ಬಜಾರಿನಲ್ಲಿ ನಿಂತು ಅಕ್ಕ ಕೇಳುತ್ತಿದ್ದಾಳೆ' ಕವನದಲ್ಲಿ ಹೆಣ್ಣಿನ ಎದೆಯಂತರಾಳದ ನೋವನ್ನು ಅಕ್ಕನ ಮೂಲಕ ಕವಿ ಧ್ವನಿಯಾಗಿರುವರು. ಹೆಣ್ಣಿನ ಶೋಷಣೆ, ಅತ್ಯಾಚಾರ, ಆಕ್ರಮಣಗಳು ತಲೆ ತಲಾಂತರಗಳಿಂದ ನಡೆಯುತ್ತಲೇ ಬಂದಿದೆ. ಹೆಣ್ಣೆಂದರೆ ಭೋಗದ ವಸ್ತು ಎಂದು ಬಿಂಬಿಸಲಾಗಿದೆ. ಅಂತರಂಗದ ಭಾವನೆಗಳಿಗೆ ಎಂದೂ ಬೆಲೆ ಇಲ್ಲ. ಬರೀ ಬಣ್ಣದ ಮಾತು ಸುಳ್ಳು ಬೊಗಳುವಿಕೆ. ಇಂತವರ ದೃಷ್ಟಿಯಲ್ಲಿ ಹೆಣ್ಣೆಂದರೆ ಕಾಮದ ಕೂಪ. ಹೆಣ್ಣಿಗೂ ಒಂದು ಮನವಿದೆ, ಬೇಕು ಬೇಡಗಳಿವೆ. ಅವಳಿಗೂ ಆಸೆ ಆಕಾಂಕ್ಷೆಗಳಿವೆ ಎಂದು ತಿಳಿಯಲೇ ಇಲ್ಲ. ಹಸಿದ ಹೊಟ್ಟೆಗೆ ಅನ್ನ, ವಾಸಿಸಲು ಮನೆಗಳಿಗಾಗಿ ವಿಚಾರಿಸದ ಈ ಜನ, ಬಡ ಹೆಣ್ಣುಮಕ್ಕಳೆಂದರೆ ತಮ್ಮ ತೀಟೆಯ ಕುರಿತಾಗಿಯೇ ಯೋಚಿಸುವರು. ಬೆಚ್ಚಗಿನ ಚಾದರದೊಳಗಿರುವ ಇಂತಹ ಜನಕ್ಕೆ ಸಾಮಾನ್ಯರ ನೋವು ಹೇಗೆ ಅರ್ಥವಾಗಬೇಕು? ಇಂತಹ ದಿನಗಳೆಲ್ಲಾ ಮುಗಿತದ ಹಂತದಲ್ಲಿದೆ. ಮುಂದೊಂದು ದಿನ ನಿಮ್ಮ ಪಾಪ ಕರ್ಮಗಳಿಗೆ ನೀವೇ ಉತ್ತರ ಕೊಡಬೇಕಾಗುವದು ಎಂಬ ಎಚ್ಚರಿಕೆಯ ಮಾತನ್ನು ನೀಡಿರುವರು.

" ನಮ್ಮದೊರೆ ದೇವರು " ಕವಿತೆಯಲ್ಲಿ

ಬದುಕು ನೀಗಿಸಿಕೊಳ್ಳಲು ಹಡಬೆ ಗಂಡಸರ
ತೊಡೆಗಳ ಸಂದಿಗೆ ಈಡಾದವರು
ಸೂಳೆಯ ಪಟ್ಟ ಕಟ್ಟಿಕೊಂಡರೆ
ಒಡಲ ಚೀಲ ತುಂಬಿದ ಅನ್ನದಾತ
ಸಾವಿಗೆ ಶರಣು

ಎನ್ನುತ್ತಾ ಇಂದಿನ ಬದುಕಿನ ದಾರುಣ ಚಿತ್ರವನ್ನು ಚಿತ್ರಿಸಿರುವರು. ದುರಂತವೆಂಬಂತೆ ಬಡವ ಶ್ರೀಮಂತರ ನಡುವಿನ ಕಂದಕ ಪಾತಾಳಕ್ಕಿಳಿದಿದೆ. ದುಡಿಯುವವರು ದುಡಿಸಿಕೊಳ್ಳುವವರು ಎಂಬ ಎರಡೇ ಜಾತಿ. ಇಂದು ಬಡವರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಆಳುವ ಈ ಜನ ಸಿಗರೇಟು, ವಿಸ್ಕಿಯಲ್ಲೇ ಕಾಲಕಳೆಯುತ್ತಾ ನಮ್ಮ ನಮ್ಮಲ್ಲೇ  ಜಾತಿ, ಧರ್ಮಗಳಲಿ ಒಡೆದು, ಸುಳ್ಳು ಮೋಸ, ವಂಚನೆಗಳಲಿ ಐಷಾರಾಮಿಯಾಗಿರುವರು. ಬಡತನದ ತಾಂಡವದಾಟದಲಿ ಎಷ್ಟೋ ಹೆಣ್ಣುಗಳು ಇಂತವರ ಕಾಮದಾಟಕ್ಕೆ ಬಲಿಯಾಗಿರುವರು. ಬದುಕು ನೀಗಿಸಿಕೊಳ್ಳಲಾಗದೇ ಇಂತಹ ಅಮಾಯಕ ಜೀವಿಗಳು ಸೂಳೆಯ ಪಟ್ಟ ಕಟ್ಟಿಕೊಳ್ಳುವ ದುರ್ಗತಿ ನಮಗೊದಗಿ ಬಂದಿದೆ. ಸಾಲದಲಿ ಸಿಲುಕಿದ ನಮ್ಮ ಅನ್ನದಾತ ನೇಣಿಗೆ ಶರಣಾಗುವದು ದೇಶದ ದುರಂತವಾಗಿದೆ. ಈ ದೊಡ್ಡವರೇ ಹೀಗೆ, ವಿಮಾನ ಕಂಡರೆ ಈ ಜಗತ್ತನ್ನೇ ಮರೆತು ಹಾರಾಡುವರು, ಬರೀ ಬಡವರ ಹೆಸರಲ್ಲಿ ಬೊಗಳೆಗಳು ಇವರ ಬಾಯಲ್ಲಿ ಸದಾ ಎಂಬ ಆತಂಕದ ನುಡಿಯನ್ನು ಕವಿ ವ್ಯಕ್ತಪಡಿಸಿರುವರು.

ಹಿರಿಯ ವಿದ್ವಾಂಸ ಡಾ.ಜಿ.ರಾಮಕೃಷ್ಣ ಈ ಕವನಗಳಿಗೆ ಮುನ್ನುಡಿ ಬರೆಯುತ್ತಾ "ಸೌಮ್ಯಾ ಅವರ ಕವನದಲ್ಲಿ ನಮ್ಮ ವರ್ತಮಾನದ ತಲ್ಲಣಗಳು ಕುದಿಯುತ್ತದೆ. ಅವರ ಹೆಸರು ಸೌಮ್ಯಾ ಆದರೂ ಕವನಗಳಲ್ಲಿ ಅವರು ವ್ಯಗ್ರರಾಗಬಲ್ಲರು. ಮನಸು ಮುರುಟಿಹೋಗಿದೆ, ಇಲ್ಲವೇ ಮುರುಟಿಹೋಗುತ್ತಿದೆ ಎಂಬುದು ಇವರ ಕವಿತೆಗಳಲ್ಲಿ ಒಂದು ಪ್ರಮುಖ ಕಾಳಜಿ. ಇವರ ಕವನಗಳು ಓದುಗರನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ. ಓದುಗರನ್ನು ಚುಚ್ಚುವ ಮತ್ತು ಹೊಡೆದೆಬ್ಬಿಸುವ ಅವರ ಕವನ ಕಾಯಕವು ಯಶಸ್ವಿಯಾಗಿ ಮುಂದುವರಿಯಲಿ ಎಂದು ಆಶಿಸುತ್ತೇನೆ" ಎಂದಿರುವರು.

ನೀವು ಕೂಡ
ಹಸಿದ ಚೀಲಕ್ಕೆ ಅನ್ನ
ಬಿಸಿಲು ಬಿರುಗಾಳಿಗೆ
ಸೂರು ಕೇಳಬೇಡಿ
ನಿಮ್ಮ ದೌರ್ಭಾಗ್ಯಗಳಿಗೆ
ದೇವರನ್ನು ನಿಂದಿಸದಿರಿ

ಎಂದು ’ದೇಶ ದ್ರೋಹಿಯಾಗಿದ್ದೇನೆ’ ಕವಿತೆಯಲ್ಲಿ ಜನಪರ ಕಾಳಜಿ ಹೊಂದಿದ ನಾವೆಲ್ಲರೂ ಇಂದು ದೇಶದ್ರೋಹಿಗಳೇ ಎಂಬ ಇಂಗಿತವನ್ನು ವಿಷದೀಕರಿಸಿರುವರು. ಮಂದಿರ ಮಸೀದೆಗಳ ಬಿರುಕಿಗೆ ಬೆರಳಿಟ್ಟರೂ ನಾವು ದ್ರೋಹಿಗಳೆ. ನಾವೀಗ ಇಲ್ಲಿ ಪ್ರೀತಿಯ ಬೀಜವನ್ನು ಬಿತ್ತಬಾರದು, ದುಃಖಕೆ ಕಣ್ಣೀರೂ ಹಾಕಬಾರದು.ಕರುಣೆ ತುಂಬಿಕೊಂಡು ಕನವರಿಸುವಂತಿಲ್ಲ. ಅನ್ನ ಕೇಳುವಂತಿಲ್ಲ, ಬದುಕಲು ಮನೆಯಂತೂ ಕೇಳಲೇ ಬಾರದು. ಯಾಕೆಂದರೆ, ಏನನ್ನು ನಾವು ವ್ಯಕ್ತಪಡಿಸಿದರೂ ನಮಗೆ ದೇಶದ್ರೋಹಿ ಪಟ್ಟ. ಹಾಗಂತ ನಾವೇಕೆ ಮತ್ತೊಬ್ಬರಿಗೆ ಅಂಜಿ ಕಾಲಕಳಿಯಬೇಕು ? ಮಾನವತೆಯ ದೀವಿಗೆಯಲ್ಲಿ ಎಲ್ಲರೆದೆಯಲೂ ಬೆಳಕಿನ ಬೀಜ ಬಿತ್ತೋಣ ಎಂದು ಕವಿ ಆಶಾಜೀವಿಯಾಗಿರುವರು.

’ಏನು ತುಂಬಿಕೊಂಡಿರಯ್ಯ’ ಕವನದಲ್ಲಿ

ಇನ್ನಾದರೂ, ಮಂದಿರ ಮಸೀದೆ
ಇಗರ್ಜಿಗಳ ವ್ಯಾಜ್ಯ ತೊರೆದು
ವಿಶ್ವಮಾನವನ ಸಾರ ಅರಿಯಲು
ನಿಮ್ಮ ಕಣ್ಣು, ಕಿವಿ, ಹೃದಯ ತೆರೆದಿಡಿರಯ್ಯ.....

ಎಂದು ಮನವಿ ಮಾಡಿರುವರು. ಈ ಮತಾಂಧತೆಯ ಕುರುಡು ಜನಗಳಿಗೆ. ಈಗ ಇಲ್ಲಿ ಮನುಷ್ಯ ಮನುಷ್ಯರ ನಡುವೆ ವಿಶ್ವಾಸ ಇಲ್ಲ, ಪ್ರೀತಿ ಸತ್ತು ಹೋಗಿದೆ. ಅಹಂ ನಿಂದ ಗಾಢಾಂಧಕಾರದ ದಾರಿಗೆ ನುಸುಳುತ್ತಿದ್ದೇವೆ. ತಮ್ಮ ಭದ್ರತೆಗೆ ಆಳುವ ಈ ಜನಗಳು ನಮ್ಮನ್ನು ಜಾತಿ ಜಾತಿ ಗಳಾಗಿ ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವರು. ಧರ್ಮಾಂಧತೆ ತಾಂಡವವಾಡುತ್ತಿದೆ. ಮನುಷ್ಯತ್ವವು ಮಸಣದ ದಾರಿಯಲ್ಲಿದೆ . ಹೃದಯ ಕಲ್ಮಶತೆಯಲಿ ಪ್ರೀತಿ, ಪ್ರೇಮ ಬೆಳಕಿನ ಕರುಣೆ ಕಾಣುವದೇ ಇಲ್ಲ. ಅಲ್ಲಮ, ಕಬೀರ, ಶರೀಫರ ಯಾವ ತತ್ವಕ್ಕೂ ಬೆಲೆಯೇ ಇಲ್ಲ. ಅನ್ನದಾತನ ಬಾಳಿಗೇ ನೆಮ್ಮದಿ ಇಲ್ಲವಾಗಿದೆ. ಇವೆಲ್ಲವನ್ನೂ ದಾಟಿ ವಿಶ್ವಮಾನವತೆಯ ಸಂದೇಶವನ್ನು ಸಾರಿ ಮನುಷ್ಯರಾಗಿ ಬದುಕುವಾ ಎಂದು ಕವಿ ಕಳಕಳಿಸಿರುವರು.

ಮಹಿಳಾ ಹೋರಾಟಗಾರ್ತಿ ಡಾ. ಕೆ. ಷರೀಫಾ ಬೆನ್ನುಡಿಯ ತಮ್ಮ ಮಾತಿನಲಿ ’ಸೌಮ್ಯಾರ ಅಭಿವ್ಯಕ್ತಿಯಲ್ಲಿ ಅಪ್ಪಟ ಪ್ರಾಮಾಣಿಕತೆ ಮತ್ತು ಸರಳತೆಗಳೊಂದಿಗೆ ಬದುಕಿನ ಕಂಡುಂಡ ಅನುಭವಗಳು ಮಡುಗಟ್ಟಿವೆ. ಬದುಕು ಬರಹಗಳ ಮಧ್ಯೆ ಸುಟ್ಟು ಹೋಗದೇ ಫಿನಿಕ್ಸ ಹಕ್ಕಿಯಂತೆ ಕ್ರಿಯಾಶೀಲವಾಗುವುದೇ ಇವರ ವಿಶೇಷತೆ. ಇಲ್ಲಿಯ ಕವಿತೆಗಳು ವಿಕೃತ ವ್ಯವಸ್ಥೆ ಯಲ್ಲಿನ ಅಸಮಾನತೆಯ ಗೋಡೆಗಳನ್ನು ಕೆಡವಿ, ಸ್ವಸ್ಥ ಸಮಾಜವನ್ನು ಕಟ್ಟುವ ಕನಸು ಕಾಣುತ್ತಿವೆ. ಬೆಂಕಿಯಲ್ಲೂ ಬಾಡದ ಈ ಹೂವು ಅಸಮತೆಯ ಗೋಡೆಗಳನ್ನಳಿಸುತ್ತಾ ಸಮಾಜಮುಖಿಯಾಗಿ ಹರಿಯಲಿ’ ಎಂದು ಹಾರೈಸಿರುವರು .

ಹೆಣ್ಣುಟ್ಟಿ ಮೊರಕ್ಕೆ ಬಿದ್ದರೆ ಸಾಕು
ಹಡೆದಪ್ಪನ ಕಣ್ಣಲಿ ಕಾನೂನಿನ ಕೋಟೆ
" ನಕ್ಕೀಯ ಜೋಕೆ ಜೋರಾಗಿ "
" ಬಿಕ್ಕಳಿಕೆಯ ಸದ್ದು ಬರದಿರಲಿ ಎಚ್ಚರ "
" ನೆಲಕ್ಕೆ ನೆಟ್ಟಿರಲಿ ಕಣ್ಣು "
" ಮನೆಯ ಮಹಾಲಕ್ಷ್ಮಿ ಅಳಬಾರದು
ಮಗಳೇ " ಅನ್ನುವ ಪ್ರೀತಿಯ ಈಟಿ.

ಎಂದು ’ಸರ್ವಂ ಪುರುಷಮಯಂ’ ಎಂಬ ಕವಿತೆಯಲ್ಲಿ ಲಿಂಗ ತಾರತಮ್ಯದ ಬಿರುಕನ್ನು ಬೆರಗಿನಿಂದ ಧ್ವನಿಸಿರುವರು. ಹೆಣ್ಣು ಗಂಡುಗಳಲ್ಲಿ ಯಾಕೆ ಈ ಭೇದ ? ಅದೂ ನಮ್ಮ ಹೆತ್ತು ಹೊತ್ತ ಪಾಲಕರಿಂದಲೇ. ಗಂಡು ಮಕ್ಕಳಿಗಾದರೆ ಎಲ್ಲದಕೂ ರಾಜೋಪಚಾರ. ಹೆಣ್ಣಿಗೆ ಎಲ್ಲಲ್ಲೋ ಅಡೆತಡೆಗಳೇ. ವಸ್ತ್ರ, ಒಡವೆ , ಶಿಕ್ಷಣ ಎಲ್ಲದರಿಂದಲೂ ಹೆಣ್ಣು ವಂಚಿತಳೇ. ಮೇಲಾಗಿ ಅವಮಾನ ಅಪಮಾನಗಳ ಸುರಿಮಳೆ. ಹುಟ್ಟಿದನಿಂದ ಸಾಯೋತನಕ ಮತ್ತೊಬ್ಬರ ಅಧೀನವೇ ಇವರಿಗೆ ಗತಿ. ಹುಟ್ಟೂ ಪಾಲಕರ ಆದೇಶ ಒಂದಾದರೆ ಮದುವೆಯ ನಂತರ ಗಂಡನ ಬಿಗಿಮುಷ್ಟಿಯಲ್ಲಿ ಹೆಣ್ಣು ನಲುಗಿ ಹೋಗುವುದು. ಮುಂದೋ, ಮಕ್ಕಳ ರಾಜ್ಯ ನಿಜವಾಗಿಯೂ ಯಮರಾಜ್ಯವೇ ಸೈ . ಬದುಕಿದರೂ ತೀರಿಕೊಂಡರೂ ಗಂಡಸಿನ ಹಂಗೇ ಹೆಣ್ಣಿಗೆ ಎಂದು ಅಸಹಾಯಕರಾಗಿ ಒಳಗೊಳಗೇ ಕುದಿಯುತ್ತಾ ಅಕ್ಷರಗಳ ಕುದಿಸಿರುವರು ಕವಿ ಸೌಮ್ಯಾ.

’ನನ್ನ ದೇಶವೆಂದರೆ’ ಕವಿತೆಯಲ್ಲಿ

ಹಾಸಿಗೆಯ ಭೋಗದ ಸರಕಾಗಿಸಿ
ಹೆಣ್ಣನ್ನು ಹಿಂಡುವರು
ಒಮ್ಮೊಮ್ಮೆ ಪ್ರೀತಿಸಿ
ಅಸಹಾಯಕ ಸ್ಥಿತಿಗೆ ನೂಕಿ
ಅತ್ಯಾಚಾರ, ದೌರ್ಜನ್ಯ, ಶೋಷಣೆ ಎಸಗುವರಲ್ಲ
ಅದೇ ನನ್ನ ದೇಶ

ಎನ್ನುತ್ತಾ ಮತ್ತೆ ಮತ್ತೆ ಹೆಣ್ಣಿನ ದೌರ್ಜನ್ಯ ಕುರಿತಾಗಿ ತಮ್ಮ ಆಕ್ರೋಶವನ್ನು ತಣ್ಣನೆಯ ಧ್ವನಿಯಲ್ಲಿ ವ್ಯಕ್ತಪಡಿಸಿರುವರು. ಈ ದೇಶದ ಹೆಣ್ಣಿನ ದುರಂತವೇ ಹೀಗೆ, ಹುಟ್ಟುವಾಗಲೇ ಗೊತ್ತಾದರೆ ಗರ್ಭದಲ್ಲೇ ಚಿವುಟಿ ಬಿಡುವರು. ಅರಿವಿಗಿಂತ ಮೊದಲೇ ಮದುವೆಯ ಶಾಸ್ತ್ರ ಮುಗಿಸಿ ಕೈ ತೊಳೆದುಕೊಂಡು ಬಿಡುವರು. ಹೆಣ್ಣೆಂದರೆ ಕೇವಲ ಭೋಗದ ವಸ್ತು, ಹಾಸಿಗೆಯಲ್ಲೇ ಹಿಂಡಿಬಿಡುವರು. ಪ್ರೀತಿಯ ನಾಟಕವಾಡಿ ಎಲ್ಲವನ್ನೂ ಪಡೆದು ಸಮಯ ಸಾಧಕರಾಗಿ ಅತ್ಯಾಚಾರ ಅನಾಚಾರಗಳಿಂದ, ಮಾನಸಿಕ ಕ್ಷೋಭೆಗಳಿಂದ ಮುಗಿಸಿಯೇ ಬಿಡುವರು ಎನ್ನುತ್ತಾ ಇಷ್ಟೆಲ್ಲಾ ದುರ್ಘಟನೆಗಳ ಮೂಲ ಸ್ಥಾನವೇ ನನ್ನ ದೇಶ ಎಂದು ಓದುಗರ ಕಣ್ಣೀರಾಗುವರು.

ಹೋರಾಟದ ಮನದ ಕವಿ ಸೌಮ್ಯಾ "ಮಕ್ಕಳನ್ನು, ಮಹಿಳೆಯರನ್ನು, ಬಡವರನ್ನು, ನಿರ್ಗತಿಕರನ್ನು ದುರ್ಬಲಗೊಳಿಸುತ್ತಾ ಪ್ರತೀ ಕ್ಷಣವು ಬದಲಾಗುತ್ತಿರುವ ಕ್ರೂರ ವ್ಯವಸ್ಥೆಯನ್ನು ಕಾಡುವುದಿದೆಯಲ್ಲ ; ಅದು ನನಗೆ ನನ್ನ ಖಾಸಗೀ ಬದುಕೂ ಕಾಡುವದಿಲ್ಲ. ಹೀಗೆ ಹಲವಾರು ಸಂಗತಿಗಳು ಕಾಡಿದಾಗಲೆಲ್ಲ ನನಗೆ ನಾನೇ ಸಂತೈಸಿಕೊಳ್ಳಲು ಬರೆದು ಕೊಂಡಿದ್ದೇ ಈ ನನ್ನ ಸಂಕಲನ. ಕಾವ್ಯವೆಂದರೆ ಜನರ ದನಿಯಾಗಬೇಕು, ಮಾತಾಗಬೇಕು ಎಂದು ನಂಬಿಕೊಂಡಿದ್ದೇನೆ.ಹಾಡಿ ಕೊಂಡರೆ ಹಾಡಾಗಬಹುದು, ಆಡಿದರೆ ಮಾತೂ ಆಗಬಹುದು" ಎಂದಿರುವರು.

’ಮುಖವಾಡ’ ದ ಕವಿತೆಯಲ್ಲಿ

ಬಂದಾಗಲೆಲ್ಲಾ ನಿನ್ನ ಬಿಗಿ ಹಿಡಿತಕ್ಕೆ ನಾನು ನಲುಗಿ ಹೋಗುತ್ತೇನೆ ನೀನೋ ನಿನ್ನ ಕಸು ತೊಟ್ಟಿಕ್ಕಿದೊಡನೆ ನರ ನಾಡಿಗಳು ಸಡಿಲುಗೊಂಡು ನಿರಾಳವಾಗುತ್ತೀ ಎನ್ನುತ್ತಾ ಗಂಡಿನ ಮುಖವಾಡ ಮತ್ತು ಸಮಯ ಸಾಧಕತೆಯನ್ನು ಬಯಲಿಗೆಳೆದಿರುವರು. ಪ್ರೇಮವೋ ಕಾಮವೋ ಅದೇನೇ ಆದರೂ ಅವರು ಹೇಳಿದಾಗಲೆಲ್ಲಾ ಮೈಮನವ ತೆರೆದು ಅರ್ಪಿಸಿಕೊಳ್ಳಬೇಕು. ತೀಟೆ ತೀರಿದೊಡನೆ ಮತ್ತೆ ಅದೇ ದೌರ್ಜನ್ಯ. ಮತ್ತೆ ಬೆಳಗಾದರೆ ಪುನಃ ಹೊಸ ಹೊಸ ಮುಖಗಳ ಹುಡುಕಾಟ ಇದೇ ಮುಖವಾಡದಡಿ ಸಾಗುವದು ನಿರಂತರ.

ಸೌಮ್ಯಾ ತಾವೇ ಹೇಳಿಕೊಂಡಂತೆ, ತಮ್ಮ ಕವಿತೆಗಳು ಕಾವ್ಯ ಮೀಮಾಂಸೆಯ ಚೌಕಟ್ಟಿನಲ್ಲಿ ಇರದಿದ್ದರೂ ಅಸಹಾಯಕರ, ದೀನ ದಲಿತರ, ಶೋಷಿತ ಹೆಣ್ಣಿನ ಧ್ವನಿಯಾಗಿ ಜನರ ಹಾಡಾಗಬೇಕು ಎಂದಿರುವರು. ಇವರ ಕವಿತೆಯಲ್ಲಿ ಗುಡುಗು ಸಿಡಿಲುಗಳಿಲ್ಲದಿದ್ದರೂ ಶಾಂತವಾಗಿ ಶೋಷಿತರ ಧ್ವನಿಯಾಗಿ ಜನಪರ ಮನದಾಳದಲ್ಲಿ ನೆಲೆನಿಲ್ಲುವುದು. ಮಾನವೀಯ ನೆಲಗಟ್ಟಿನಡಿ ಕವಿತೆ ರೂಪುಗೊಂಡಿದೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಕಾಶ ಕಡಮೆ