Article

ವಾಸ್ತವ ಬದುಕಿನ ಕಥನ ‘ಬದುಕು ಬಣ್ಣ’

ಗ್ರಂಥಗಳ ಓದಿದವನು ಪಂಡಿತನಲ್ಲ ಖಂಡಿತ
ಪ್ರೇಮವೆಂಬ ಎರಡಕ್ಷರ ಅರಿತವನೆ ಪಂಡಿತ.!

ಕಬೀರಾ ಹೇಳಿದ ಈ ಮಾತುಗಳು ಅತೀವ ನೆನಪಾಗಿದ್ದು ಈ ಬದುಕು ಬಣ್ಣದ ಒಂದನೆ ಕಥೆ ಓದುವಾಗ. ಅಲ್ಲಿ ದೀಪಾ ಜೋಶಿ ಅವರು ಬರೆಯುತ್ತಾರೆ. “ಮನುಷ್ಯ ಬರೆದುದನ್ನು ಓದಿದರೆ ಪಂಡಿತನಾಗುತ್ತಾನೆ , ಬರೆಯದಿರುವುದನ್ನು ಓದಿದರೆ ಜ್ಞಾನಿಯಾಗುತ್ತಾನೆ , ಬರೆದುದನ್ನು ನೆನಪಿಟ್ಟುಕೊಂಡರೆ ಸೂಚನೆಗಳಿಂದ ತುಂಬಿ ಹೋಗುತ್ತಾನೆ, ಬರೆಯದಿದ್ದುದನ್ನು ನೆನಪಿಟ್ಟುಕೊಂಡರೆ ಆತ ಹಸಗೂಸಿನಂತೆ ಸರಳವಾಗುತ್ತಾನೆ” ಈ ಸರಳೀಕರಣ ಅಷ್ಟು ಸುಲಭಕ್ಕೆ ದಕ್ಕುವಂತದ್ದಲ್ಲ! ಅಲ್ಲಿ ಬದುಕಿನ ಮೇಲೆ ಅಗಾಧ ಪ್ರೇಮವಿರಬೇಕು! ಹೀಗೆ ಬದುಕಿನ ಬಗ್ಗೆ ರಸ - ವಿರಸಗಳನ್ನು ಒಂದೆಡೆ ಚೆಲ್ಲಿ ಹೊರಟಂತಹ ಅಕ್ಷರಗಳ ಸಾಲನ್ನೆ ಹಿಡಿದು ಹೆಣೆದು ಕಥೆಗೆ ಪೂರಕವಾಗಿಸಿದ್ದಾರೆ ಲೇಖಕರು! 

ಅರಿವು...

ಎನ್ನುವ ಶಿರ್ಷಿಕೆ ಇಟ್ಟು ಕಥೆ ಹೆಣೆಯುವಾಗ ಸಹಜವಾಗಿ ಒಂದಷ್ಟು ಬದುಕಿನ ಕುರಿತು ಮಾತುಗಳ ವಾಂಛೆ ಇದ್ದೆ ಇರುತ್ತೆ! “ ಮನುಷ್ಯ ವಿಚಿತ್ರ ಪ್ರಾಣಿ. ಆತ ತನ್ನ ಅಹಂ ಅನ್ನು ತಾನೇ ತಣಿಸಿಕೊಳ್ಳಲು ಹೊರಡುತ್ತಾನೆ. ಅಥವಾ ತನ್ನ ಅಹಂ ಅನ್ನು ಇತರರು ತಣಿಸಲಿ ಎಂದು ಬಯಸುತ್ತಾನೆ. ಈ ಎರಡೂ ಬಯಕೆಗಳೂ ಅಪಾಯಕಾರಿಯೇ. ಆತ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ , ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. ಜನರ ಗಮನ ಸೆಳೆಯಲು ತಂತ್ರಗಳನ್ನು ಹೂಡುತ್ತಾನೆ. ಇದು ಅತಿರೇಕಕ್ಕೆ ಹೋದಾಗಲೇ ಅಪರಾಧಗಳು ಸಂಭವಿಸುವುದು. ತನ್ನ ಅಹಂಕಾರ ತೃಪ್ತಿಗಾಗಿ ವ್ಯಕ್ತಿಯು ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಹೊರಡುತ್ತಾನೆ. ಇತರರೆದುರು ಅದನ್ನು ಮಾಡಲು ಆಗದೇ ಹೋದಾಗ ತನ್ನನ್ನು ತಾನೇ ತೃಪ್ತಿಪಡಿಸಿಕೊಳ್ಳಲು ಹೊರಡುತ್ತಾನೆ. ಎಲ್ಲ ವಿಕೃತಿಗಳ ಬೀಜ ಮೊಳೆಯುವುದು ಈ ಗಳಿಗೆಯಲ್ಲಿ. ನಮ್ಮನ್ನು ನಾವು ವಂಚಿಸಿಕೊಳ್ಳುತ್ತಾ ಇರುವಷ್ಟೂ ಸುಳ್ಳು ಜೀವನ ಜೀವಿಸುತ್ತೇವೆ, ಇರುತ್ತೇವೆ. ಮನದ ಕೊಳ ಕಲಕಿ ಅಶಾಂತಿಯ ಅಲೆಗಳೇಳುತ್ತಲೇ ಇರುತ್ತವೆ. ”ಎಷ್ಟೊಂದು ಅರ್ಥಪೂರ್ಣವಾಗಿ ಬದುಕಿನ ಕುರಿತು ಅನುಭವ ಬಿಚ್ಚಿಟ್ಟಿದ್ದಾರಲ್ಲವೆ ಲೇಖಕರು! 

ಭೇದ...

ಎಷ್ಟಂತ ಮಾಡ್ಲಿಕ್ಕಾಗ್ತದ. ಯಾವತ್ತರ ಕೆಂಪು ಬಾಟಲಿ ಮ್ಯಾಲ ಜಾತಿ - ಧರ್ಮದ ಹೆಸ್ರ ಬರ್ದು ರಕ್ತದಾನ ಮಾಡ್ಲಿಕಾಗ್ತದೇನ್? ಅನ್ನಿಸುವಷ್ಟು ಪಾತ್ರಗಳಿಗೆ ಜೀವ ತುಂಬಿ ಭಾವೈಕ್ಯತೆಯನ್ನು ಹೆಣೆದ ಕಥೆ ಭೇದ! “ ತಂತಿ ಒಮ್ಮೆ ಹರಿದಿಂದ ಗಂಟು ಹಾಕಿ ಬಾರಿಸಿದ್ರೂ ಸ್ವರಾ ಹೊಂಡಂಗಿಲ್ಲಾ ” ಎಷ್ಟು ಅರ್ಥಪೂರ್ಣ ಅಲ್ವಾ! ಏಕತಾರಿ ಕಥೆಯೊಳಗೂ ಅಂತಹದೊಂದು ಸಣ್ಣ ದನಿಯ ಅಗಾಧ ಸ್ವರವಿದೆ! ಇನ್ನುಳಿದಂತೆ  ಲೋಪಾಮುದ್ರಾ , ಪಾರ್ವತಿ , ಪಾವನಿ ,ವಿಸ್ಮೃತಿ ಕಥೆಗಳೂ ಸಹ ತೀರಾ ಹೆಣ್ಣನ್ನ ಕೇಂದ್ರಿಕರಿಸಿ ಅವಳ ತೊಳಲಾಟ - ಬದುಕು - ಬವಣೆ - ಕಣ್ಣೀರು - ತ್ಯಾಗ - ಪ್ರೀತಿ - ಅಸೂಯೆ - ಜಿಗುಪ್ಸೆ - ವಿರಕ್ತಿ - ವಿರಹದ ಕುರಿತಾಗಿ ತುಂಬಾ ಮೊನಚಾಗಿ ಹಾಳೆಯ ಎದೆಗೆ ಚುಚ್ಚಿ ಬರೆದಿದ್ದಾರೆ!

ಧಾರವಾಡ...

ನನ್ನಿಷ್ಟದ ಊರು! ಅಲ್ಲಿಯ ಒಂದಿಷ್ಟು ಜೀವನಾನುಭವಗಳು ಸಹ ಕಂಡುಂಡವನು ನಾನು. ಅಲ್ಲಿಯ ಜಿಟಿ ಜಿಟಿ ಮಳೆ , ಕೊರೆವ ಚಳಿ , ಕೆಸಿಡಿಯ ದೊಡ್ಡ ಗ್ರೌಂಡು , ಸಪ್ತಾಪೂರ ಬಾವಿ ಯ ಚಹಾ! ಎಲ್ಲವೂ ನನಗೆ ಹಳೆ ಪರಿಚಯವೆ! ಆದರೆ ದೀಪಾ ಜೋಶಿ ಅವರು ಬರೆದ “ವಿಶ್ವ ಮಾನವ” ಕಥೆ ಇದೆ ಅಲ್ವ ಅದು ಧಾರವಾಡ ಬದುಕಿನ ಇನ್ನೊಂದು ಚಿತ್ರಣ ಕಣ್ಣೆದುರಿಗೆ ಕಟ್ಟಿಸಿ ನಿಲ್ಲಿಸುತ್ತದೆ! ನಮ್ಮನಮ್ಮಲ್ಲಿಯ ವಾಸ್ತವದ ಬದುಕನ್ನೆ ಕತೆಯಾಗಿಸಿವುದಿದೆಯಲ್ಲಾ ಅದು ಕುಸುರಿ ಕೆಲಸವೂ ಹೌದು. ಇಲ್ಲಿ ಯಾವ ಪಾತ್ರಗಳು ಕಾಲ್ಪನಿಕವಲ್ಲ! ಅಸಲಿಗೆ ಅದು ಕಥೆಯೆ ಅಲ್ಲ! ಅದು ಬದುಕು. ಅಲ್ಲಿ ಉಡಾಳತನದಷ್ಟೆ ಬದುಕಿನ ಮೊಂಡುತನ ಅದರೊಟ್ಟಿಗೆಯೆ ಸ್ವಾಭಿಮಾನ ಜೊತೆ ಜೊತೆಗೆ ಬದುಕಿನ ತಿರುವುಗಳನ್ನು ಪರಿಚಯಿಸಿದ್ದು ನಿಜಕ್ಕೂ ರೋಮಾಂಚನ. ಒಂದೊಂದು ಪ್ಯಾರಾ ಮುಗಿಯುವಾಗಲೂ ಏನೊ ತುಡಿತ ಕೊನೆಕೊನೆಗೆ ಪ್ರತಿ ಅಕ್ಷರಗಳು ಎದೆಗೆ ಭಾರ ಎನಿಸುವಷ್ಟು ಹೊರಸಿದ್ದಾರೆ ಲೇಖಕರು! ಅದೇ ಧಾರವಾಡದ ಇನ್ನೊಂದು ಅನುಭವ ‘ಕಂಬರಗಟ್ಟಾ, ನವಿಲುಗರಿ ಮತ್ತು ಅವನು’ ಎನ್ನುವಂತಹ ಕತೆ ತುಂಬಾ ಆಪ್ತವಾಗುವಂತದ್ದು! ಬದುಕು ನಮ್ಮನ್ನು ಎಷ್ಟೆ ದೂರ ಕೊಂಡೊಯ್ದರು ಒಂದು ಸಣ್ಣ ಎಳೆ ಮತ್ತೆ ನಾವಿದ್ದಲ್ಲಿಗೆ ತಂದು ನಿಲ್ಲಿಸಿ ಮತ್ತದೆ ಬದುಕು ಬೇಕೆನಿಸುವಷ್ಟು ವಾಸ್ತವನ್ನು ದೂರತ್ತದೆ! ಬದುಕೆ ಹಾಗೆ ಎಲ್ಲಾ ಇದ್ದೂ ಅತೃಪ್ತರನ್ನಾಗಿಸಿಬಿಡುತ್ತದೆ!

ಬದುಕು ಬಣ್ಣ

ಎಷ್ಟು ಚೆಂದದ ಶಿರ್ಷಿಕೆ ಅಲ್ಲವಾ! ಬದುಕಿನ ಈ ಬಿಳಿ ಕ್ಯಾನ್ವಾಸ್ ಮೇಲೆ ಬರೆದಷ್ಟು ಬಣ್ಣಗಳು! ಅರೆ ಹೌದಲ್ಲವಾ..ಆದರೆ ಅದ್ಯಾವುದು ಸುಸಜ್ಜಿತ ಚಿತ್ರಗಳಲ್ಲ! ವಿರಕ್ತಿ ಹೆತ್ತು ಶೂನ್ಯಕ್ಕಾಗಿ ಒಂದೆ ಭಂಗಿಯಲ್ಲಿ ಬದುಕನ್ನು ಬೀಳ್ಕೊಡಲು ನಿಂತ ಅವ್ಯಕ್ತ ಭಾವಗಳು! ಯಾವುದನ್ನು ನಾವು ಬಿಳಿ - ಶುಭ್ರ - ಶ್ವೇತ ಎನ್ನುತ್ತೇವೆಯೊ ಅದರೊಳಗೂ ಸಪ್ತರಂಗುಗಳನು ಸಂಗ್ರಹಿಸಿಟ್ಟಿದ್ದು ಈ ಸೃಷ್ಟಿ! ಯಾವುದು ನಾವು ಕಪ್ಪು ಅಂತ ಒಪ್ಪಿಕೊಳ್ಳುತ್ತೇವೆಯೊ ಅದರಲ್ಲಿ ಆಗಾಧ ಭಾವ - ಬಣ್ಣಗಳ ಬಳಿದು ಮೆತ್ತಿದ ಕೀರ್ತಿ ಸೃಷ್ಟಿಯದ್ದು! ಒಂದು ಬದುಕನ್ನು ಅದರ ಮಜಲನ್ನು ಒಂದೊಂದಾಗಿ ಬಿಡಿಸುತ್ತ ಹೆಣೆದ ಕತೆ ಬದುಕು ಬಣ್ಣ! ಓದಲೇಬೇಕಾದ ಕಥಾಸಂಕಲನ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೌನೇಶ ಕನಸುಗಾರ