Article

'ವರ್ಜಿನ್ ಮೋಹಿತೋ': ಸವಿದವರಿಗೆ ರುಚಿಕರ, ರಸಿಕರಿಗೆ ಪ್ರಿಯಕರ

ನನ್ನ ಎಂಬಿಎ ಕಾಲೇಜ್ ಪ್ರೊಫೆಸರ್ ಆಗಿ, ದಿಗ್ವಿಜಯ ಕಾಲದ ಎಡಿಟರ್ ಬಾಸ್ ಆಗಿ, ಸದ್ಯ ನನ್ನ ಶ್ರೇಯೋಭಿಲಾಶಿಗಳಾದ ಶ್ರೀ ಸತೀಶ್ ಚಪ್ಪರಿಕೆ ಅವರ ವರ್ಜಿನ್ ಮೋಹಿತೋ ಪುಸ್ತಕ, ಓದಲು ಸಾಕಷ್ಟು ಉತ್ಸುಕನಾಗಿದ್ದೆ. ಅಂತೂ ಲಾಕ್ಡೌನ್ ನಿಯಮ ಸಡಿಲವಾದ ಮೇಲೆ ನನ್ನ ಕೈ ಸೇರಿತುಓದಿದ ಮೇಲೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ಒಂದು ವಾರದ ನಂತರ ಪ್ರಾಯಶಃ ನನ್ನ ಮೊದಲ ಪುಸ್ತಕ ವಿಮರ್ಶೆಯ ಸಮಯ ಬಂದಿದೆ.

ಇದೂ ಕೂಡ ಪುಸ್ತಕದಷ್ಟೇ ಸರಳವಾಗಿ ಬರೆಯುವ ಪ್ರಯತ್ನ ಆದರೆ ಅನುಭವಿಗಳ ಅನುಭಾವದ ಮರುಸೃಷ್ಟಿ ಸ್ವಲ್ಪ ಕಷ್ಟವೇ. ಲೇಖಕರ ಮೆದುಳಲ್ಲಿ, ಹೃದಯದಲ್ಲಿ, ಹೇಗೆ ಕತೆ ಹುಟ್ಟುತ್ತದೆ ಎಂಬ ಗುಟ್ಟಿನ ಸ್ವಾನುಭವದಿಂದ ಮಳೆಯಲ್ಲಿ ಮಿಂದೇಳುವ ಕಥನ, ಅಲ್ಲ ಮುನ್ನುಡಿ ಅಲ್ಲ ಕಥೆಯೇ, ಪುಸ್ತಕ ಹೀಗೆ ಇರಬಹುದು ಎಂಬುದರ ಇಣುಕು ನೋಟ ಕೊಡುತ್ತದೆ.

ಆನಂತರದ ಏಳೂ ಕತೆಗಳು, ಜೀವನವನ್ನು ಬದಲಾಯಿಸುವ ನೀತಿ ಪಾಠಗಳಲ್ಲ, ಜೀವನದ ಪ್ರತಿಬಿಂಬ. ಪಾಠ ಕಲಿಯುವುದು ನೀತಿ ಹುಡುಕುವುದು ಓದುಗರಿಗೆ ಬಿಟ್ಟಿದ್ದು.

ಬೊಂಬಾಯ್ ಮಿಠಾಯ್ ಪೆಟ್ಟಿಗೆ, ನಮ್ಮ ದಿಗ್ವಿಜಯ ದಿನಗಳ ಕನಸು ಬೇಸರಗಳನ್ನು ನೆನಪಿಸಿತು. ಸ್ವತಃ ಪತ್ರಕರ್ತರಾದ ಲೇಖಕರು, ಉದ್ಯಮದಲ್ಲಿರುವವರ ತೊಳಲಾಟವನ್ನು ಸುಲಭವಾಗಿ ವಿವರಿಸಿದ್ದಾರೆ. ಮೊದಲಿಗೆ ಮುನ್ನಡಿಯ ಸ್ವ-ಅನುಭವದ ಮುಂದಿನ ಭಾಗ ಎನಿಸಿದರೂ, ಅಲ್ಲ ಎಂದು ನಿರ್ಧರಿಸಿ, ಪಾತ್ರಗಳಲ್ಲಿ ಲೇಖಕರನ್ನು ಹುಡುಕಬಾರದೆಂದು ತೀರ್ಮಾನಿಸಿ ಮುಂದುವರೆದರೆ, ಹೈಡ್ ಪಾರ್ಕ್ ಕಾಣಿಸುತ್ತದೆ.

ಲಂಡನ್ ವ್ಯಾಸಂಗದ ಬಗ್ಗೆ ಮುನ್ನುಡಿಯಲ್ಲಿ ತಿಳಿದು ಅಲ್ಲಿ ಕಂಡಿರಬಹುದಾದ ಕತೆ ಇರಬಹುದು ಎನಿಸಿದರೂ, ಓದಲು ಶುರುಮಾಡಿದಮೇಲೆ ಇದು ಕಾಲ್ಪನಿಕ ಅಥವಾ ಯಾರದ್ದೋ ಅನುಭವಗಳ ಗ್ರಹಣ ಚಿತ್ರಣದ ನೈಜ ಪ್ರಬುದ್ಧ ಕಥೆ ಎನಿಸಿತು. ಏಳೂ ಕಥೆಗಳಲ್ಲಿ ಅತಿಹೆಚ್ಚು ಕಾಡಿದ ಕಥೆಯೂ ಹೌದು.

ದಾಸ , ಸ್ವಾನುಭವದ ಕಥೆ. ದಾಸನು ಇಷ್ಟವಾದರೂ, ಲೇಖಕರು ಮಧ್ಯೆ ಓದುಗರ ಜೊತೆ ಮಾತನಾಡಿ ಕತೆ ಮುಂದುವರೆಸಲು ಅನುಮತಿ ಕೇಳಿದ್ದು ಇಷ್ಟವಾಗಲಿಲ್ಲ. ಪ್ರಶ್ನೆಗೆ ಹೌದು ಎಂದರೆ, ಲೋಕದಿಂದ ಹೊರಬಂದಂತಾಗುತ್ತದೆ. ಇಲ್ಲ ಎಂದರೆ, ಕಥೆ ಬಿಟ್ಟು ಮುಂದೆ ಹೋಗಲು ಮನಸಾಗುವುದಿಲ್ಲ.

ಗರ್ಭ, ಲೇಖಕರ ಒಡನಾಟದಲ್ಲೇ ಇದ್ದ ನನಗೆ ಅವರ ಮನಸ್ಸಿನ ನೋವಿನ ಸಹಜ ಚಿತ್ರಣ ಮನಸ್ಸಿಗೆ ನಾಟಿತು. ತಾಯಿ ಅನ್ನೋ ಭಾವವೇ ಹಾಗೆ, ಎಷ್ಟು ಸಿಕ್ಕರೂ ಸಾಲದು.

ಮೂರು ಮುಖಗಳು ಕ್ಲೈಮ್ಯಾಕ್ಸ್ ತನಕ ನಮ್ಮ ನಡುವಿನ ಕಾಲೇಜ್ ಗೆಳೆಯರ ಕಥೆ ಎನಿಸಿದರೂ, ಅಂತ್ಯ ಸ್ವಲ್ಪ ಆಘಾತಕಾರಿ ಎನಿಸಿತು. ಕಾಮಕ್ಕೆ ಕಣ್ಣಿಲ್ಲ ಎಂದು ಗೊತ್ತಿತ್ತು ಆದ್ರೆ ಕಾಮಕ್ಕೆ ಹೃದಯವೂ ಇಲ್ಲ ಎಂದು ಎನಿಸಿತು.

ಕಾಣದ ಕೈಗಳ ಆಟ ಬಹುಶಃ ಗರ್ಭದ ಸಮಯದಲ್ಲಿ ಅದ ಅನುಭವಗಳೂ ಸೇರಿ ವೈದ್ಯಕೀಯ ಕ್ಷೇತ್ರದ ಮೇಲಿನ ಎಲ್ಲರ ಕೋಪದ ಕೈಗನ್ನಡಿ ಎನಿಸುತ್ತದೆ.

ಕೊನೆಯಲ್ಲಿ ಬರುವ 'ಟೈಟಲ್ ಸ್ಟೋರಿ' ನನ್ನ ಅರೇಂಜ್ಡ್ ಮ್ಯಾರೇಜ್ ಮಾರುಕಟ್ಟೆ ದಿನಗಳನ್ನು ನೆನಪಿಸಿದವು. ಹುಡುಗ ಹುಡುಗಿ ಭೇಟಿಗಳ ಕಾಮಿಡಿ ಒಂದರೆಡಲ್ಲ. ವರ್ಜಿನಿಟಿ ಪ್ಯೂಬರ್ಟಿ ಮುಂಚೆಯೇ ಮಾಯವಾಗುತ್ತಿದೆಯ ಎಂಬ ಆತಂಕ ಇಂದಿನ ದಿನಗಳಲ್ಲಿ ಒಂಥರ ಅಸಹಜ ಮಜ ಎನಿಸಿತು.

ಒಟ್ಟಾರೆ ಮೋಹಿತೋ ಆರೋಗ್ಯಕರವೇಎಲ್ಲಕ್ಕಿಂತ ವಿಭಿನ್ನವೇ? ಹಿಂದೆಂದೂ ಕಂಡು ಕೇಳರಿಯದ ಕಥೆಗಳೇ? ಪ್ರಶ್ನೆಗಳಿಗೆ ಉತ್ತರ ಹುಡುಕಿ ಓದುವ ಬದಲು, ಹೆಚ್ಚು ಓದದೇ ಇರುವವರಿಗೂ ಇಷ್ಟವಾಗುವ ಆರಾಮದಾಯಕ ಅನುಭವಕ್ಕಾಗಿ ಒಮ್ಮೆ ಓದಿ ನೋಡಿ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : ವರ್ಜಿನ್ ಮೊಹಿತೊ

ಆರ್. ಜೆ. ಪ್ರದ್ಯುಮ್ನ ನರಹಳ್ಳಿ