Article

ವಿಸಂಗತಿಗಳನ್ನು ವಿಡಂಬಿಸುವ 'ಮೂರನೇ ಕಣ್ಣು’

"ಕನ್ನಡ ಸಾಹಿತ್ಯ ಎತ್ತ ಸಾಗುತ್ತಿದೆ!?" ಇದು ಈ ಹೊತ್ತಿನ ವಿಮರ್ಶಾ ಸಂಕಟ! ವರುಷವೊಂದಕ್ಕೆ ದಂಡಿಯಾಗಿ ಬರುತ್ತಿರುವ ಪುಸ್ತಕಗಳು, ಅದರಲ್ಲೂ ಭರಪೂರ ಕಾವ್ಯ ಈ ಜಿಜ್ಞಾಸೆಯನ್ನು ಮೂಡಿಸಲು ಸಶಕ್ತವಾಗಿವೆ. ಹಾಗೆ ರಾಶಿಯಲ್ಲಿ ಬಂದರೂ ಕಾಳ ಕಣಜದ ಕಿರೀಟವಾಗುವ ಬರಹಗಳೂ ಇಲ್ಲದಿಲ್ಲ. ಅಂತಹ ತುರಾಯಿಯ ಕೊಟ್ಟ ಕಿರೀಟಿ ನನ್ನ ಜೀವದ ಗೆಳೆಯ ಚಿದಾನಂದ ಸಾಲಿ. 

ಈ ಸಾಲಿ ಎಂಬುವವ ಸವ್ಯಸಾಚಿ. ಆಡು ಮುಟ್ಟದ ಸೊಪ್ಪು ಇಲ್ಲವೆಂಬಂತೆ, ಸಾಲಿ ಬರೆಯದ ಪ್ರಕಾರಗಳೂ ಇಲ್ಲವೇ ಇಲ್ಲ! ಕವಿತೆ, ಕತೆ, ನಾಟಕ, ಜೀವನ ಚಿತ್ರ, ಕಾದಂಬರಿ, ಶಿಶು ಬರಹ,ಅನುವಾದ. . . ಹೀಗೆ ಎಲ್ಲಾ ಪ್ರಕಾರಗಳಲ್ಲೂ ಕೈಯಾಡಿಸುವ ಇವನ ಲೇಖನಿಗೆ ಪ್ರಬಂಧವೂ ಸಿಕ್ಕಿದ್ದು ಹೊಸತಲ್ಲ. 

ಕನ್ನಡದಲ್ಲಿ ಪ್ರಬಂಧ ಬರವಣಿಗೆ ಹೊಸತಲ್ಲ. ಮಾಹಿತಿ ಪೂರ್ಣ ಪ್ರಬಂಧಾತ್ಮಕತೆ, ವೈಚಾರಿಕತೆ, ವೈನೋದಿಕತೆ, ಲಾಲಿತ್ಯ, ಲಘು ಬಗೆ, ಹರಟೆ. . ಮೊದಲಾದ ಸಾಧ್ಯತೆಗಳು ಈಗಾಗಲೇ ಗೊರೂರು ರಾಮಸ್ವಾಮಿ ಅಯ್ಯಂಗಾರ್ ರಿಂದ ನಮ್ಮ ನಡುವಿನ ವಸುಧೇಂದ್ರರ ವರೆಗೆ ವಿಫುಲವಾಗಿ ದಾಖಲಾಗಿವೆ. ಆದರೆ ಪ್ರಬಂಧಗಳ ಈ ಎಲ್ಲಾ ವಿಶೇಷತೆಗಳು ಒಬ್ಬರೇ ಲೇಖಕರ ಒಂದು ಸಂಕಲನದಲ್ಲಿ ಸಿಗುವುದು ಅತ್ಯಪರೂಪದ ಸಾಧ್ಯತೆ. ಅದು ಸಾಧ್ಯವಾಗಿರುವುದು ಚಿದಾನಂದ ಸಾಲಿಯ "ಮೂರನೆಯ ಕಣ್ಣು" ಸಂಕಲನದಲ್ಲಿ.

ಹಾಸ್ಯಕ್ಕೆ ವಸ್ತುವಾಗಿ ಅಪಹಾಸ್ಯವನ್ನೋ ಅಶ್ಲೀಲತೆಯನ್ನೋ ಬಳಸುತ್ತಿರುವ ಈ ದಿನಗಳಲ್ಲಿ ಈ ಸಂಕಲನದ ವಸ್ತು ವೈವಿಧ್ಯ, ವಿವಿಧತೆಯಲ್ಲೂ ಏಕವಾದ ಪ್ರಬಂಧಾತ್ಮಕತೆ ಮತ್ತು ಮನವರಿಸುವ ಮೋಹಕ ನಿರೂಪಕತೆಯೇ ಕೃತಿಯನ್ನು ಹಗುರವಾಗಿ ನೋಡದಂತೆ ಮಾಡಿವೆ. ಈ ಹಗುರವಲ್ಲದ ಸಂಗತಿಗಳನ್ನ ಹಗೂರವಾಗಿ ಚಿತ್ರಿಸುವ ಸಾಲಿಯ ಈ ಪ್ರಬಂಧಗಳನ್ನು ನಾನಂತೂ ಗಂಭೀರವಾಗಿ ಓದಿ ಮನದಣಿದು ಹಗುರಾಗಿದ್ದೇನೆ!!

ಹನ್ನೆರಡು ಪ್ರಬಂಧಗಳಿರುವ ಈ ಸಂಕಲನಕ್ಕೆ ಮುನ್ನುಡಿ ಬರೆದ ನಾಗೇಶ ಹೆಗಡೆಯವರು ಇದರ ವೈಶಿಷ್ಟ್ಯತೆಯನ್ನು ಬಹುವಾಗಿ ಚರ್ಚಿಸಿದ್ದಾರೆ.‌ ಆದರೆ ಸಾಲಿಯ ಕಥನ ಭಿತ್ತಿ ನನ್ನ ಮನೋ ಭಿತ್ತಿಯೂ ಆಗಿರುವಾಗ ನಾನೇ ಇದರ ನಿರೂಪಕನ ಪಕ್ಕದ ಪಾತ್ರಧಾರಿಯಂತೆ ಪರಿಭಾವಿಸುವುದು ಸಾಧ್ಯವಾಗಿದೆ. ಅದು ಎಲ್ಲಾ ಓದುಗರಿಗೂ ಲಭಿಸುವ ಸಾಧ್ಯತೆ. ಏಕೆಂದರೆ ಎಲ್ಲರಿಗೂ ಪರಿಚಯವಿರುವ ಬದುಕು ಇಲ್ಲಿದೆ. ಬಾಲ್ಯವಿದೆ ಬೆರಗಿದೆ ಬಯಲಿದೆ ಬಯಲೇ (ಶೌಚ)ಆಲಯವಾದ ನೆನಪ ಧೀಮಂತಿಕೆಯೂ ಇಲ್ಲಿದೆ.

ಈ ಪ್ರಬಂಧಗಳಲ್ಲಿರುವುದು "ಮಾತು ಮಾತು ಮಾತು ಮಾತು"!! ಆದರೆ ಅದು ಬರಿಯೇ ಮಾತಲ್ಲ! ಮಾತ ಬದ್ಧತೆಯಂತೆ 'ಮಲ ಬದ್ಧತೆಯ' ಸಂಗತಿಯೂ ಇಲ್ಲಿದೆ. ಮಾತಿನಂತೇ ಮುಗಿಯದ ಹಾಡುಗಳ ಹಾದಿಯೇ ಇಲ್ಲಿದೆ. ಹಾಗೆಂದು ಇದು ಬರಿಯೇ ಮಾತು ಕತೆ ಅಲ್ಲ, " ಮೀಂಗುಲಿಗನ ಈಸಿನ ಕನಸೂ" ಇಲ್ಲಿದೆ.  ಕನಸು ಕಂಡ ಕಣ್ಣು ಬರೆದ ಮತ್ತೊಂದರ ಚಿತ್ರವಿದೆ. ರಸ್ತೆ ಮೇಲೆ ಸಾಗುವಾಗಿನ ಬಸ್ಸಿನ ಮೂಲಕವೇ ಕಾಣಸಿಗುವ ದೃಶ್ಯ ವೈಭವವೇ ಇಲ್ಲಿದೆ. ಬಾಲ್ಯದ ಸುಖ, ಬೆಂಬಿಡದೇ ಕಾಡುವ ಜಾತಿ ಎಂಬ ಸೂತಕ, ಮುಗಿಯದ ಆಟ, ಗುರು ಕಾರುಣ್ಯ. . ಹೀಗೇ ಹತ್ತು ಹಲವು ವಿಷಯ ವೈವಿಧ್ಯತೆಯಂತೇ ಬರಹದ ಬೀಸು ಮತ್ತು ಬಾಹುಳ್ಯವೂ ವಿಸ್ತಾರವಾದುದು.

ಸಾಲಿಯ ಈ ಪ್ರಬಂಧ ಸಂಕಲನ ಬರಿಯೇ ನಗಿಸುವುದಿಲ್ಲ. ನೇಹಿಗನಂತೆ ನವಿರಾಗಿ ನೇವರಿಸಿ ಎಚ್ಚರಿಸುತ್ತದೆ. ಸಾಮಾಜಿಕ ಸಂರಚನೆಯಲ್ಲಿರುವ ವಿಸಂಗತಿಗಳನ್ನು ವಿಡಂಬಿಸುತ್ತದೆ. ಸಾಂಸ್ಕೃತಿಕ ಬಿಕ್ಕಟ್ಟುಗಳ ಬಗ್ಗೆ ಇಲ್ಲಿ ಚಿಕಿತ್ಸಕ ನೋಟವಿದೆ, ಚಿಕಿತ್ಸೆಯೂ ಇದೆ. ಸರಳವಾಗಿ ಓದಿಸಿಕೊಳ್ಳುವ, ಸುರಳೀತ ನಮ್ಮೊಳಗೆ ದಾಖಲಾಗುವ, ನಮ್ಮ ಒಳಗೆ ಕೋಲಾಹಲ ಸೃಷ್ಟಿಸದೆಯೂ 'ಮೂರನೆಯ ಕಣ್ಣು' ತೆರೆಸುವ ವೈದ್ಯಕೀಯ ಜವಾಬ್ದಾರಿಯನ್ನೂ ನಿರ್ವಹಿಸುತ್ತದೆ! ಆದರೆ ಓದಿನ ಸುಖ - ಇದನ್ನು ಓದದೆಯೇ ಸಿಗದು!!

ಅಭಿನಂದನೆಗಳು ಇಂತಹ ಪ್ರಬಂಧಗಳ ಬರೆದು ಕೊಟ್ಟ ಚಿದಾನಂದ ಸಾಲಿಗೆ. ಹಾಗೇ ಅಭಿನಂದನೆಗಳು ಇವನ್ನು ಸಂಕಲಿಸಿ ಪ್ರಕಟಿಸಿದ ಪಲ್ಲವ ಪ್ರಕಾಶನದ ಮಿತ್ರ ವೆಂಕಟೇಶರಿಗೆ. ಪುಸ್ತಕದ ಕುರಿತಾದ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆನಂದ್ ಋಗ್ವೇದಿ