Article

ವಿಶಿಷ್ಟ ಮತ್ತು ವಿಭಿನ್ನ ಶೈಲಿಯ ಅದ್ವಿತೀಯ ಕೃತಿ 'ನಾನು ಕಸ್ತೂರ್'..!

ಗಾಂಧಿಯೊಂದಿಗೆ ಸುಮಾರು 62 ವರ್ಷಗಳ ಕಾಲ ಸಂಸಾರ ನಡೆಸಿದ ಕಸ್ತೂರಬಾ ಅವರ ಬದುಕು ಹೇಗಿತ್ತು, ಸ್ವಾತಂತ್ಯ್ರ ಹೋರಾಟದಲ್ಲಿ ಅವರ ಭಾಗವಹಿಸುವಿಕೆ ಹೇಗಿತ್ತು ಮುಂತಾದ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ...  

ಗಾಂಧೀ ಪ್ರಯೋಗಗಳಲ್ಲಿ ಪಾಲುಗೊಂಡು, ಆಶ್ರಮವಾಸದ ಕಾಠಿಣ್ಯವನ್ನು ಅನುಭವಿಸಿ, ಹಲವು ಬಾರಿ ಸೆರೆವಾಸ ಅನುಭವಿಸಿದವರು. ಇತಿಹಾಸದ ಈ ಹಂತದ ಮಧ್ಯಭೂಮಿಕೆಯಲ್ಲಿದ್ದರೂ ಅವರ ವ್ಯಕ್ತಿತ್ವ ಮಹಾತ್ಮ ಗಾಂಧಿಯ ನೆರಳಿನಲ್ಲಿ ಮಸುಕಾಗಿದೆ..ಮಹಾತ್ಮನ ಮಡದಿಯ ಹುಡುಕಾಟ ಕಠಿಣವಾದದ್ದು. ಆಕೆಯ ಕಾಲದ ಬಹುಪಾಲು ಮಹಿಳೆಯರಂತೆ ಆಕೆಯೂ ನಿರಕ್ಷರಸ್ಥೆ. ಅನಿಸಿದ್ದನ್ನು ಅಕ್ಷರಕ್ಕೆ ಇಳಿಸಲಾಗಲಿಲ್ಲ ಇಲ್ಲಿ. ಕಸ್ತೂರಬಾ ಅವರನ್ನು ಕುರಿತು ಬೇರೆಯವರು ಬರೆದದ್ದು ಮಾತ್ರವೇ ಲಭ್ಯ. ಪತಿಯ ಆತ್ಮಚರಿತ್ರೆಯ ಪದಗಳನ್ನು ಸೋಸಿ ಸೋಸಿ ಆಕೆಯನ್ನು ಸಮೀಪಿಸಬೇಕಿದೆ ಎನ್ನುತ್ತಾರೆ ಐರೋಪ್ಯ ಬರೆಹಗಾರ್ತಿ ಎಮ್ಮಾ ಟಾರ್ಲೋ...

ತಮ್ಮ ತವರಿನಿಂದ ದೊರೆತ ಬಾಗಿನಗಳನ್ನು ದೇಶಸೇವೆಗೆ ಒಪ್ಪಿಸುವಂತೆ ಕಸ್ತೂರಬಾ ಅವರನ್ನು ಬಲವಂತ ಮಾಡಿದ್ದರು ಗಾಂಧೀ. ಮಕ್ಕಳನ್ನು ಸಾಧುಗಳನ್ನು ಮಾಡಿ ಅವರ ಹೆಂಡತಿಯರನ್ನು ಆಭರಣಗಳಿಂದ ದೂರ ಇರಿಸಿದ್ದ ಬಾಪೂ ಅವರ ಮೇಲೆ ಸಿಡಿದಿದ್ದರು ಕಸ್ತೂರಬಾ. ಇಂತಹ ಹಲವಾರು ವಿಷಯಗಳ ಕುರಿತು ಈ ಕೃತಿಯಲ್ಲಿ ಲೇಖಕಿ ಬರೆದಿದ್ದಾರೆ ಎಚ್.ಎಸ್. ಅನುಪಮಾ... 

ವಿಶಿಷ್ಟ ಮತ್ತು ವಿಭಿನ್ನ ಶೈಲಿಯ ಕೃತಿ 'ನಾನು ಕಸ್ತೂರ್'. ಎಂಬ ಡಾ.ಎಚ್.ಎಸ್.ಅನುಪಮಾ ಅವರು ಬರೆದಿರುವ ಕಸ್ತೂರಬಾ ಗಾಂಧಿ ಜೀವನ ಕಥನದ ಅಪರೂಪದ ಕೃತಿ ಇದು...ಮಹಾತ್ಮ ಗಾಂಧಿ ಜಗತ್ತಿನ ಹತ್ತು ಹಲವು ರಾಷ್ಟ್ರಗಳ ಗೌರವಕ್ಕೆ ಪಾತ್ರವಾಗಿರುವ ಮೇರುವ್ಯಕ್ತಿತ್ವದ ಮೋಹನದಾಸ ಕರಮಚಂದ್ ಗಾಂಧಿಯವರ ಬಾಳಸಂಗಾತಿ ಕಸ್ತೂರ್ ಬಾರವರು. ಮಹಾತ್ಮ ಗಾಂಧೀಜಿಯ  ಪತ್ನಿಯಾಗಿ ಅವರನ್ನು ಅನುಸರಿಸುತ್ತಲೇ ಜೊತೆ ಜೊತೆಯಲ್ಲಿಯೇ ಹೆತ್ತಮಕ್ಕಳು, ಕುಟುಂಬ, ದೇಶ, ಹೋರಾಟ, ಆಶ್ರಮ ಎಲ್ಲವನ್ನೂ ಸಾಮಾನ್ಯ ಹೆಣ್ಣುಮಗಳೊಬ್ಬಳು ಸಮನ್ವಯಗೊಳಿಸುತ್ತ, ಗಾಂಧೀಜಿಯ ಆದರ್ಶಗಳನ್ನು ಅರಿತು,ಅರಗಿಸಿಕೊಂಡು ಆಚರಿಸುತ್ತ,  ತನ್ನ ಗಂಡನೊಂದಿಗೆ ತನ್ನ ಬದುಕನ್ನೂ ದೇಶಕ್ಕಾಗಿ ತಾನು ಕಂದೀಲಾಗಿ ಮಹಾತ್ಮ ಗಾಂಧಿ ಮತ್ತು ದೇಶಕ್ಕೆ ಬೆಳಕು ನೀಡಿದ  ಗಾಂಧೀಜಿ ಎಂಬ ಹಣತೆಗೆ ಎಣ್ಣೆಯಾಗಿ ಮಹಾತ್ಮ ಗಾಂಧಿ ಮತ್ತು ಇಡೀ ರಾಷ್ಟ್ರಕ್ಕೆ ಶಕ್ತಿ ನೀಡಿದ ಮಹಾನ್ ಚೇತನ 'ಕಸ್ತೂರ ಬಾ' ಅವರು.  ಇಂತಹ ಮಹಾತ್ಮನ ಬಾಳ ಸಂಗಾತಿಯಾಗಿ ಮತ್ತು ಇಡೀ ರಾಷ್ಟ್ರಕ್ಕೆ ಬೆಳಕಾದ ಮಹಾಸಾದ್ವಿ ಕಸ್ತೂರಬಾ...

ಸುಮಾರು 150 ವರ್ಷಗಳ ಹಿಂದೆ 1869 ರಲ್ಲಿ  ಮೋಹನದಾಸ್ ಕರಮಚಂದ್ ಗಾಂಧಿ ಅವರಿಗಿಂತಲೂ ಸುಮಾರು ಆರು ತಿಂಗಳ ಹಿಂದೆ ಗುಜರಾತಿನ ಇದೇ ಪೋರ್ಬಂದರಿನ ವಜ್ರಕುಂವರ್ ಹಾಗೂ ಗೋಪಾಲ ದಾಸ್ ಕಪಾಡಿಯಾ ಅವರ ಮಗಳಾಗಿ ಜನಿಸಿದ ಕಸ್ತೂರ್, ಅಗಲಿ ಈಗ 75 ವರ್ಷಗಳಾಗಿವೆ. ಇಷ್ಟು ದೀರ್ಘ ಕಾಲದ ನಂತರವೂ ಗಾಂಧೀಜಿ, ಕಸ್ತೂರಬಾ ಅವರ ಹೋರಾಟ,ತ್ಯಾಗ ಚಕಿತಗೊಳಿಸುತ್ತಿವೆ ಎಂದರೆ ಅದರ ಹಿಂದೆ ಆ ಹಿರಿಯ ಜೀವಗಳು ನಮ್ಮೆಲ್ಲರಿಗಾಗಿ ತಮ್ಮ ವೈಯಕ್ತಿಕ ಎಲ್ಲಾ  ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ಪ್ರಾಮಾಣಿಕ, ನಿಸ್ವಾರ್ಥ ಬದುಕನ್ನೇ ತ್ಯಾಗಗಳನ್ನು ನಮ್ಮ ‌ಕಣ್ಣಮುಂದೆ ಹಣತೆಯಂತೆ ಬೆಳಕು ಚೆಲ್ಲುತ್ತಿದೆ.

ಚಿಂತಕಿ ಕೃತಿಯ ಕರ್ತೃ ಡಾ.ಎಚ್.ಎಸ್.ಅನುಪಮಾ, ಪೀಠಿಕಾ ಭಾಗದಲ್ಲಿ ಸ್ವತಃ ಹೇಳಿಕೊಂಡಿರುವಂತೆ, ತಮ್ಮೊಳಗಿನ ವಿಚಾರವಾದಿಯನ್ನು ಅಪಾರ ಅಧ್ಯಯನ, ಸಂಶೋಧನೆ, ಪ್ರವಾಸದ ಕಥನದ ಜೊತೆಗೆ , ಬರಹ,ವಾಸ್ತವಿಕ ಘಟನೆಗಳು, ಪತ್ರ ಉಲ್ಲೇಖಗಳ ಆಧಾರದಲ್ಲಿ ಕೃತಿ ರಚನೆ ಮಾಡಿದ್ದಾರೆ. ಕೃತಿ ರಚನೆ ಸಂದರ್ಭದಲ್ಲಿ ಲೇಖಕಿಗೆ ಪರಕಾಯ ಪ್ರವೇಶ ಮಾಡಿದ ಅನುಭವ ಆದ ಹಾಗೆಯೇ, ಸಹೃದಯನನ್ನು ಹಿಡಿದಿಟ್ಟುಕೊಂಡು ಓದಿಸಿಕೊಳ್ಳುತ್ತ ಸಾಗುವ 'ನಾನು ಕಸ್ತೂರ್' ಕೃತಿ ನಮ್ಮೆಲ್ಲರ ಭಾವನೆಯನ್ನು ಆವರಿಸಿಕೊಂಡು ಬಿಡುತ್ತದೆ.

ಪೋರಬಂದರಿನ  ಮಹಾತ್ಮ ಗಾಂಧಿ ಮನೆ ಎಲ್ಲರಿಗೂ ಗೊತ್ತು. ಆದರೆ, ಅದರ ಬಳಿಯೇ ಇರುವ ಕಸ್ತೂರಬಾ ಹುಟ್ಟಿದ ಕಪಾಡಿಯಾ ಕುಟುಂಬದ ಮನೆ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಅವರ ಬದುಕು ಕೂಡ ಹಾಗೆಯೇ,  ಗಾಂಧೀಜಿ ಬಗ್ಗೆ ಸಿಕ್ಕಷ್ಟು ಮಾಹಿತಿ, ವಿವರಗಳು ಕಸ್ತೂರಬಾ ಬಗ್ಗೆ ಸಿಗುವುದೇ ಅಸಾಧ್ಯ... ಕಸ್ತೂರಬಾ ಅರಿಯಲು ಲೇಖಕಿ ಪಟ್ಟಶ್ರಮ, ತೋರಿದ ಕಾಳಜಿ ಕೃತಿಯ ಪ್ರತಿ ಪುಟಗಳಲ್ಲಿಯೂ ಕಾಣಸಿಗುತ್ತವೆ. ಹಿರಿಯರ ನಿರ್ಧಾರದಂತೆ 1883 ರ ಮೇ ತಿಂಗಳಿನಲ್ಲಿ 14 ವರ್ಷದ ವಯಸ್ಸಿನ ಮೋಹನ್ ದಾಸ ಕರಮಚಂದ ಗಾಂಧಿ  ಹಾಗೂ ಕಸ್ತೂರ್ ಅವರ ಮದುವೆಯ ಸಂದರ್ಭ ವಿವರಿಸುತ್ತ, ಆ ಕಾಲಘಟ್ಟದಲ್ಲಿ ಸಹಜವಾಗಿದ್ದ ಬಾಲ್ಯವಿವಾಹ, ವಧು ಮತ್ತು ವರನ ಪಾಲಕರ ನಿರ್ಣಯಗಳು ಮತ್ತು  ನಮ್ಮ ಪರಂಪರೆಯನ್ನು ಸೂಕ್ಷ್ಮವಾಗಿ ಸೊಗಸಾಗಿ ಪರಿಚಯಿಸುತ್ತಾರೆ ಎಚ್.ಎಸ್. ಅನುಪಮಾ. 

ಎಲ್ಲ ಭಾರತೀಯ ಪುರುಷರಂತೆ ಗಾಂಧಿಯೂ ಕಸ್ತೂರಬಾ ಅವರನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುವದು, ಕಟ್ಟಳೆಗಳನ್ನು ಹಾಕುವುದು,  ಮದುವೆಯಾದ ಹೊಸತರಲ್ಲಿ ಗಂಡ -ಹೆಂಡತಿಯರಂತೆ ಆಟದಂತೆ ಸಂಸಾರ ಶುರುವಾಗುವುದು, ಯೌವನದ ದಿನಗಳ ಪರಸ್ಪರರ ನಡುವಿನ ಸಹಜ ಸೆಳೆತ, ಶೃಂಗಾರಭಾವಗಳನ್ನು ಸೂಚ್ಯವಾಗಿ, ಪರಿಣಾಮಕಾರಿಯಾಗಿ ನೀಡಿರುವುದು. ಎಳೆಯ ಮತ್ತು ಯುವಕ ಮೋಹನದಾಸ್ ಕರಮಚಂದ್ ಗಾಂಧಿಯನ್ನೂ ಪರಿಚಯಿಸುತ್ತದೆ... ಹಿರಿಯ ಮಗ ಹರಿಲಾಲ್ ಜನಿಸಿದ ಒಂದು ವಾರದಲ್ಲಿ, ಸ್ವಜಾತಿಯ ಜನರ ವಿರೋಧವನ್ನು ಲೆಕ್ಕಿಸದೇ  ಲಂಡನ್ ಗೆ ಬ್ಯಾರಿಸ್ಟರ್ ಪದವಿ ಪಡೆಯಲು ತೆರಳಿದ ಮೋಹನದಾಸ್ ಕರಮಚಂದ್ ಗಾಂಧಿ ಅಲ್ಲಿಂದ ಲೆಕ್ಕವಿದಷ್ಟು ಪತ್ರಗಳನ್ನು ಪತ್ನಿ ಕಸ್ತೂರ್ ಗೆ ಬರೆಯುತ್ತಾರೆ. ಪತ್ರಗಳು ದಂಪತಿಗಳ ನಡುವಿನ ಪ್ರೀತಿ, ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆ, ಹಣಕಾಸಿನ ಹೊಂದಾಣಿಕೆಯ ಮಾತುಕತೆ ಮತ್ತು ಗಾಂಧೀಜಿಯ ಅಣ್ಣ ಲಕ್ಷ್ಮೀದಾಸ್ ಅವರ ನೆರವು, ತಾಯಿ ಪುತಲೀಬಾಯಿಯ ಸಾವು ಎಲ್ಲವೂ ಚಾರಿತ್ರಿಕ ಘಟನೆಗಳು ಸರಳವಾಗಿ ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾರೆ ಎಚ್.ಎಸ್.ಅನುಪಮಾ...

ಬ್ಯಾರಿಸ್ಟರ್ ಪದವಿ ಪಡೆದು ಮೂರು ವರ್ಷಗಳ ನಂತರ ಭಾರತಕ್ಕೆ ಮರಳುವ ಗಾಂಧಿ ಅವರ ವ್ಯಕ್ತಿತ್ವದಲ್ಲಾದ ಬದಲಾವಣೆಗಳನ್ನು ಕಸ್ತೂರಬಾ ಅವರ ಮಾತುಗಳಲ್ಲಿ ದಾಖಲಿಸಿದ್ದಾರೆ ಎಚ್. ಎಸ್. ಅನುಪಮಾ...  ದಕ್ಷಿಣ ಆಫ್ರಿಕಾಕ್ಕೆ ಗಾಂಧೀಜಿ ತೆರಳಿದ್ದು,ನಂತರ ಸಂಸಾರ ಸಮೇತರಾಗಿ ಅಲ್ಲಿಗೆ ಹೋಗಿ ಬಂದ ನಂತರ ಟಾಲ್ ಸ್ಟಾಯ್ ಆಶ್ರಮಗಳನ್ನು ಸ್ಥಾಪಿಸಿ ಗಾಂಧಿ ಭಾಯಿಯಾಗಿ ರೂಪುಗೊಳ್ಳುವ ಜೊತೆಗೆ, ಭಾರತದಲ್ಲಿದ್ದಾಗ ತನ್ನ ಮನೆಯ ಮಲದ ಗುಂಡಿ ಶುಚಿಗೊಳಿಸಲು ಬರುತ್ತಿದ್ದ ಭಂಗಿಯ ಮುಖ ನೋಡಲೂ ಅಸಹ್ಯ ಪಟ್ಟುಕೊಳ್ಳುತ್ತಿದ್ದ ,ಮೇಲ್ವರ್ಗದ ಸಂಪ್ರದಾಯಿ ಕುಟುಂಬದ ಮನೆಯ ಕಸ್ತೂರ್, ಸ್ವತಃ ಕ್ರೈಸ್ತರ, ಪಂಚಮರ ಮಲದ ಗಡಿಗೆಗಳನ್ನು ತೊಳೆಯುವ ಮಟ್ಟಿಗೆ ಬದಲಾದ ದಿನಗಳು, ರಾಮದಾಸ್ , ದೇವದಾಸ್, ಮಣಿದಾಸ್ ಜನನ... ದಕ್ಷಿಣಾ ಆಫ್ರಿಕಾದ ಫೀನಿಕ್ಸ್‌ ಆಶ್ರಮಕ್ಕೂ  ಬರುವ ಆರ್ಯಸಮಾಜದ ಸ್ವಾಮಿ ಶಂಕರಾನಂದ ಅಲ್ಲಿನ ಎಲ್ಲ  ಜಾತಿ,ಧರ್ಮಗಳ ಜನ ಸಮಾನರಾಗಿ ಬದುಕುವುದನ್ನು ಇಷ್ಟಪಡದೇ, ಗಾಂಧಿಯ ಅಣ್ಣನ ಮಗ ಮಗನ್ ಲಾಲ್ ನಿಗೆ ಜನಿವಾರ ಹಾಕಿಕೊಳ್ಳುವಂತೆ ಮನವೊಲಿಸಲು ಮಾಡುವ ಪ್ರಯತ್ನ ನಡೆಸುವ ಸಂಗತಿ , ಜನಿವಾರಕ್ಕೆ ಅರ್ಥವಿದೆ ಆದರೆ ಅದು ಕೇವಲ ಜಾತಿ,ಅಹಂಕಾರದ ಸಂಕೇತ. ಅದರ ಪ್ರಯೋಜನವಿಲ್ಲ ಎಂದು ಉತ್ತರಿಸುವಷ್ಟು ಆಶ್ರಮವಾಸಿಗಳು ಪ್ರಬುದ್ಧರಾದುದನ್ನು ಕೃತಿ ಗಾಂಧಿತನದ ಬೆಳವಣಿಗೆಯ ಬಗೆಯನ್ನು ಪ್ರತಿಬಿಂಬಿಸುತ್ತದೆ...

ಸತ್ಯಾಗ್ರಹದ ಪರಿಕಲ್ಪನೆ, ಅಹಿಂಸೆ, ಸತ್ಯ, ನಿರ್ಭಯ, ಬಡತನ, ಸರಳತೆಯ ಮೌಲ್ಯಗಳು 'ಆತ್ಮಶುದ್ಧಿ' ಉಪವಾಸ ಆಚರಣೆಗಳು ವಿಕಸನವಾದುದನ್ನು ಹೇಳುತ್ತ, ಮೋಕನೆಂಬ ಬೀಡು ಕಬ್ಬಿಣವನ್ನು ಲಂಡನ್ ಕಾಯಿಸಿತು, ದಕ್ಷಿಣ ಆಫ್ರಿಕಾ ಬಡಿಯಿತು ಎಂಬ ಸಾಲು ಮೋಹನದಾಸ ವ್ಯಕ್ತಿತ್ವದಲ್ಲಿ  ಕಾಲ ಕ್ರಮೇಣ ಉಂಟಾದ ಬದಲಾವಣೆಗಳು, ವಿದೇಶದ ಬದುಕು, ಅಧ್ಯಯನಗಳು ಉಂಟು ಮಾಡಿದ ಪರಿಣಾಮಗಳನ್ನು ಬಿಚ್ಚಿಡುತ್ತದೆ. ಗಾಂಧಿಯಷ್ಟೇ ಅಲ್ಲ ಕಸ್ತೂರಬಾ ಅವರಲ್ಲಿಯೂ ಆದ ಬದಲಾವಣೆಯ ಬಗ್ಗೆ ಹೇಳುವಾಗ ಮೊಸರು ಕಡೆಗೋಲಿಗೆ ಸಿಕ್ಕು ಬೆಣ್ಣೆಯಾದಂತೆ, ಬೆಣ್ಣೆ ಉರಿಗೆ ಸಿಕ್ಕಿ ತುಪ್ಪವಾದಂತೆ ಆದ ಬದಲಾವಣೆ" ಎನ್ನುವ ಸಾಲುಗಳು ಎರಡೂ ಜೀವಗಳೂ ತಮ್ಮನ್ನು ತೇಯ್ದುಕೊಂಡು,ರೂಪಿಸಿಕೊಂಡ ಬಗೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿವೆ ಎಚ್.ಎಸ್ ಅನುಪಮಾರವರ ಈ 'ನಾನು ಕಸ್ತರ್' ಪುಸ್ತಕದಲ್ಲಿ...

ಭಾರತಕ್ಕೆ ಮರಳಿದ ಮೇಲೆ ಸಬರಮತಿ ಹಾಗೂ ನಂತರ ವಾರ್ಧಾದಲ್ಲಿ ಆಶ್ರಮ ಕಟ್ಟಿಕೊಂಡು ವ್ಯಕ್ತಿಗತವಾದ ಎಲ್ಲಾ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ ಲೋಕಸಂಸಾರಿಯಾಗುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ  ಬ್ರಹ್ಮಚರ್ಯ ಸ್ವೀಕರಿಸಿದ ನಂತರವೂ ಈ ಇಬ್ಬರು ಮಹಾನ್ ಚೇತನಗಳ ನಡುವೆ ಕಾಯ ಮೋಹಗಳನ್ನು ಮೀರಿದ ಪ್ರೇಮ,ವಿಶ್ವಾಸಗಳು ಇಮ್ಮಡಿಯಾಗುತ್ತವೆ. ಇದೇ ಬ್ರಹ್ಮಚರ್ಯ ತತ್ವ ಗಾಂಧೀಜಿ ತನ್ನ ಮಕ್ಕಳೂ ಆಚರಿಸಲಿ ಎಂದು ಬಗೆವುದನ್ನು ಕಸ್ತೂರ್ ಚಿಕಿತ್ಸಕ ದೃಷ್ಟಿಯಿಂದ ವಿಮರ್ಶಿಸಿದ್ದಾರೆ.. ಸರಳಾದೇವಿ ಚೌಧುರಾನಿ ಅವರ ಆಕರ್ಷಣೆಗೆ ಒಳಗಾದ ಗಾಂಧೀಜಿ ಬಗ್ಗೆ, ಕಸ್ತೂರಬಾ ಮಗನಲಾಲ್, ಛಗನಲಾಲ್ ಸೇರಿದಂತೆ  ಆಶ್ರಮವಾಸಿಗಳಲ್ಲಿ ಎದ್ದ ಗಾಳಿಮಾತುಗಳು ರಾಜಾಜಿಯವರ ಪ್ರವೇಶದಿಂದ ಬಿರುಗಾಳಿಯಾಗದೇ ತಣ್ಣಗಾದ ಚಾರಿತ್ರಿಕ ವಿದ್ಯಮಾನವನ್ನು ಕಸ್ತೂರಬಾ ಅವರ ಮೂಲಕ ತಣ್ಣಗಿನ ಭಾಷೆಯಲ್ಲಿ ಲೇಖಕಿ ಎಚ್.ಎಸ್.ಅನುಪಮಾ ಹೇಳಿಸಿದ್ದು ಕೃತಿಯ  ಗಮನ ಸೆಳೆಯುವ ಪ್ರಮುಖ ಅಂಶಗಳು...

ಎಲ್ಲರ ಅಮ್ಮ ಆಗೋದು, ಗಂಡನಿಗೂ ಅಮ್ಮ ಆಗೋದು ಒಂಟಿತನ ಕಡಿಮೆ ಮಾಡುವ ದಾರಿ ಅಂದುಕೊಂಡೇ ಕಸ್ತೂರಬಾ ಬದುಕಿದವರು. ಕಸ್ತೂರಬಾ ತಮ್ಮಿಷ್ಟದ ಹಾಗೆ ಇರಲಿಕ್ಕೆ ಬಾಪೂ ಗಾಂಧೀಜಿಯ ಮನವೊಲಿಸಲು ಉಪವಾಸ ಕೂತಿದ್ದರೆ ಆಗ ಪೋರಬಂದರದಲ್ಲಿ ಮತ್ತು ಆಶ್ರಮದಲ್ಲಿ ಪ್ರಳಯವಾಗುತ್ತಿತ್ತು, ಕಸ್ತೂರಬಾ ಗಾಂಧಿ,ಕಸ್ತೂರಬಾ ಆಗದೇ ಜಗತ್ತು ತನ್ನನ್ನು ನೋಡುವ ರೀತಿಯೇ ಬೇರೆಯಾಗುತ್ತಿತ್ತು ಎಂದು ಕಸ್ತೂರಬಾ  ಅಂತರಾಳದ ಧ್ವನಿಯಾಗಿ ಹೊರಡುವ ಮಾತುಗಳು ಯಾರನ್ನು ಕಲಕದೇ ಇರಲಾರವು...

ಬಾಪೂ ಬದುಕಿನ ಪಯಣದಲ್ಲಿ, ಕಸ್ತೂರಬಾ ಓರ್ವ ಹೆಣ್ಣಾಗಿ ನಿರ್ವಹಿಸಿದ ಪಾತ್ರ ಅಮೂಲ್ಯ. ಭಾರತದ ಸ್ವಚ್ಛಂದ ಬದುಕಿಗಾಗಿ ತಮ್ಮ ವೈಯಕ್ತಿಕ ಬದುಕು, ಕುಟುಂಬ ಎಲ್ಲವನ್ನೂ ಮುಡಿಪಾಗಿಟ್ಟ ಕಸ್ತೂರಬಾ ಮತ್ತು ಬಾಪೂ ಅವರ 150 ನೇ ಜನ್ಮ ವರ್ಷಾಚರಣೆ ಅರ್ಥಪೂರ್ಣಗೊಳಿಸಲು  ನಾನು 'ನಾನು ಕಸ್ತೂರ್' ಕೃತಿ ಸಕಾಲಿಕ ಸಾಂದರ್ಭಿಕವಾಗಿ ಹೊರಬಂದಿದೆ. ಹೀಗೆ ಕಸ್ತೂರಬಾರವರ 'ನಾನು ಕಸ್ತೂರ್' ಎಂಬ ಎಚ್.ಎಸ್.ಅನುಪಮಾ ಅವರ ಪುಸ್ತಕ ಸಾರ್ಥಕತೆ ಪಡೆದುಕೊಳ್ಳುತ್ತದೆ..!

ಆಧಾರ-- ಮಂಜುನಾಥ.ಡೊಳ್ಳಿನ

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವು ಕೆ. ಲಕ್ಕಣ್ಣವರ