Article

ವಿಶಿಷ್ಟ ನೋಟಗಳ ಅಧ್ಯಯನ ಶೀಲತೆ ’ಕರ್ನಾಟಕದ ಆದಿಮ ಚಿತ್ರಕಲೆ’

ಕರ್ನಾಟಕದ ಆದಿಮ ಚಿತ್ರಕಲೆಯ ಕುರಿತು ಬೆರಳೆಣಿಕೆಯ ಪುಸ್ತಕಗಳು ಪ್ರಕಟಗೊಂದಿವೆ. ಇವು ಕನ್ನಡದಲ್ಲಿ ಪ್ರಕಟಗೊಂಡಿವೆ ಎಂಬುದು ಎಷ್ಟು ಮುಖ್ಯವೋ, ಆ ಪುಸ್ತಕಗಳ ಪ್ರಕಟಣಾ ಸಂದರ್ಭಗಳ ವಿಶಿಷ್ಟ ಹಿನ್ನಲೆಗಳಲ್ಲಿ ಅವುಗಳ ಉಪಯುಕ್ತತೆಯೂ ಅಷ್ಟೇ ಮುಖ್ಯವಾಗಿದೆ. ಯಾವುದೂ ಅಂತಿಮ ಅಲ್ಲ.  ಈ ಸಾಲಿನಲ್ಲಿ ಇದೀಗ ಮೋಹನ ಆರ್ ರವರ ’ಕರ್ನಾಟಕದ ಆದಿಮ ಚಿತ್ರಕಲೆ’ (2019) ಪುಸ್ತಕವು ಇತಿಹಾಸ ದರ್ಪಣ ಪ್ರಕಾಶನದ ಮೂಲಕ ಪ್ರಕಟಗೊಂಡಿದೆ. ಉತ್ತಮ ಗುಣಮಟ್ಟದ ಮುದ್ರಣದ ಈ ಪುಸ್ತಕ ಬಹುಶಃ ಕರ್ನಾಟಕದ ಆದಮಿ ಚಿತ್ರಕಲೆಯ ಇಡೀ ಇತಿಹಾಸವನ್ನು ತಾಂತ್ರಿಕವಾಗಿ ಬಿಂಬಿಸಿದೆ. ಯಾವುದೇ ಭಾರತೀಯ ಭಾಷೆಗಳಲ್ಲಿ ಇಂತಹ ಪುಸ್ತಕವೊಂದು ಹೀಗೆ ಪ್ರಕಟವಾಗುವುದು ಅಪರೂಪವೇ ಸರಿ. ಇಲ್ಲ ಮೋಹನ ಆರ್, ಈವರೆಗೆ ಪ್ರಕಟವಾಗಿರುವ ಕನ್ನಡ ಮತ್ತು ಇಂಗ್ಲಿಷಿನ ಬಹುತೇಕ ಆಕರಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಹಾಗೆಯೇ ಈಗಾಗಲೇ ಇತರರಿಂದ ಅನ್ವೇಷಣೆಗೊಂಡಿರುವ ಬಹುಸಂಖ್ಯೆಯ ಆದಿಮ ಚಿತ್ರನೆಲೆಗಳನ್ನು ಸಂದರ್ಶಿಸಿ ಅಧ್ಯಯನ ಮಾಡಿದ್ದಾರೆ. ಹೀಗೆ ಮಾಡುವಾಗ ಸಹಜವಾಗಿಯೇ ಸುತ್ತ ಮುತ್ತ 100ಕ್ಕೂ ಹೆಚ್ಚು ಹೊಸ ಚಿತ್ರನೆಲೆಗಳನ್ನು ಅನ್ವೇಷಿಸಿದ್ದಾರೆ ಎಂಬುದು ನಾವೆಲ್ಲರೂ ಸಂತೋಷಪಡುವ ವಿಷಯವೇ ಆಗಿದೆ. 

ಪುಸ್ತಕದ ಶೀರ್ಷಿಕೆಯಲ್ಲಿ ಚಿತ್ರಕಲೆಗೆ ಒತ್ತು ನೀಡಿರುವುದರಿಂದ ಮೂರು ಆಯಾಮಗಳ ಆದಿಮ ರೂಪ/ಶಿಲ್ಪಗಳನ್ನು ಲೇಖಕರು ಗಮನಿಸಿಲ್ಲ ಎಂದು ಭಾವಿಸಬಹುದಾದರೂ ಕುಟ್ಟು, ಗೀರು ಚಿತ್ರಗಳು, ಕಲ್ ಗುಳಿಗಳ ಬಗ್ಗೆ ಕಪ್ಪು ಬಿಳುಪು ರೇಖಾ ಚಿತ್ರಗಳ ಮೂಲಕ ಉತ್ತಮವಾಗಿ ದಾಖಲಿಸಿದ್ದಾರೆ. ಈ ಮೊದಲೇ ಹೇಳಿರುವಂತೆ ಯಾವುದೂ ಅಂತಿಮವಲ್ಲ, ಪರಿಪೂರ್ಣವೂ ಅಲ್ಲ. ಈ ವಿಶಿಷ್ಟ ಅಧ್ಯಯನಶೀಲ ಪುಸ್ತಕದಲ್ಲಿಯೂ ಹಲವಾರು ಆದಿಮನೆಲೆಗಳು ಕಾಣೆಯಾಗಿವೆ. ಹಾಗೆಯೇ ಈ ಹೊತ್ತಿಗೆ ಮೋಹನ ಅವರೇ ಇನ್ನೂ ಕೆಲವು ಚಿತ್ರನೆಲೆಗಳನ್ನು ಅನ್ವೇಷಿಸಿರಬಹುದಾದ ಮತ್ತು ಇತರ ಆಸಕ್ತರೂ ಅನ್ವೇಷಿಸಿರಬಹುದಾದ ಸಾಧ್ಯತೆಗಳು ಇದ್ದೇ ಇವೆ; ಇರಲಿ. 


’ಕರ್ನಾಟಕ ಆದಿಮ ಚಿತ್ರಕಲೆ’ ಪುಸ್ತಕದ 176ಕ್ಕೂ ಹೆಚ್ಚು ಪುಟಗಳಲ್ಲಿ ಮೋಹನ ಆರ್. ರವರು ಬಂಡೆಚಿತ್ರ ಅಧ್ಯಯನಗಳ ಪಕ್ಷನೋಟವನ್ನು ಮೊದಲ ಅಧ್ಯಾಯದಲ್ಲಿ ನೀಡಿದ್ದಾರೆ. ನಂತರದ ಅಧ್ಯಾಯಗಳಲ್ಲಿ ಬಂಡೆ ಚಿತ್ರಗಳ ವೈಜ್ಞಾನಿ ದಾಖಲೆಯ ಕ್ರಮಬದ್ಧ ವಿಧಾನಗಳನ್ನು ವಿವರಿಸಿದ್ದಾರೆ. ಅಧ್ಯಯನ ಸಾಮಗ್ರಿ, ಮಲಪ್ರಭಾ, ಕೃಷ್ಣಾ, ತುಂಗಾಭದ್ರಾ ಮತ್ತು ವೇದಾವತಿ ನದಿ ತೀರಗಳ ಆದಿಮ ಚಿತ್ರಗಳೇ ಅಲ್ಲದೆ ದಕ್ಷಿಣ ಕರ್ನಾಟಕ ಮತ್ತು ಕೊಂಕಣತೀರ ಪ್ರದೇಶಗಳ ಅನ್ವೇಷಣೆಗಳನ್ನುದಾಖಲಿಸಿದ್ದಾರೆ. 
ಬಹುಮುಖ್ಯವಾಗಿ ಬಂಡೆಚಿತ್ರಗಳ ಹಿನ್ನಲೆಯಲ್ಲಿ ಬಹುಸಂಸ್ಕೃತಿಗಳ ವಿಶ್ಲೇಷಣೆಯನ್ನು ಮಾಡಿದ್ದಾರೆ. ಇಲ್ಲೆಲ್ಲಾ ಅವರ ವೃತ್ತಿಪರತೆಯ ದರ್ಶನವಾಗುತ್ತದೆ. ಬಣ್ಣದ ಚಿತ್ರಗಳೇ 71 ಪುಟಗಳನ್ನು ಆಕ್ರಮಿಸಿರುವುದು ಅಪೂರ್ವ. 

ಪುಸ್ತಕದಲ್ಲಿ ವಿಶೇಷವಾಗಿ ಬಾದಾಮಿಯ ಉತ್ತರದ ಕುಟುಕನಕೇರಿ ಹಳ್ಳಿಯ ವ್ಯಾಪ್ತಿಯಲ್ಲಿರುವ ಅರೆಗುಡ್ಡದ ಹಲವು ಶಿಲಾಶ್ರಯ ಚಿತ್ರನೆಲೆಗಳಲ್ಲಿ ಈಗಾಗಲೇ ನ್ಯೂಮೆಯರ್, ಸುಂದರ ಮೊದಲಾದವರು  ಸುಂದರ ಮೊದಲಾದವರು ಅನ್ವೇಷಿಸಿರುವ ಆನೆ ಪಢಿಯ ಕೆಂಗಾವಿ ವರ್ಣಚಿತ್ರ ಸಂಕುಲವೊಂದನ್ನು (ಪುಟಗಳು 46-48) ಮೋಹನ ನಕಾಶೆ ವರ್ಣ ಚಿತ್ರ ಎಂದು ಗುರುತಿಸಿ ಹೊಸ ನೋಟ ನೀಡಿದ್ದಾರೆ. ಈ ಅರೆಗುಡ್ಡದ ೧೧ ಕಲ್ಲಾಸರೆಯ ಚಿತ್ರನೆಲೆಗಳನ್ನು ಆನೆಫಡಿಯ ಚಿತ್ರಸಂಕುಲದಲ್ಲಿ ಸಾಂಕೇತಿಕವಾಗಿ ಮೂರು ಸಾಲುಗಳಲ್ಲಿ ದಾಖಲಿಸಲಾಗಿದೆ. 5+5+1 ಹೀಗೆ ಕೆಂಗಾವಿ ಬಣ್ಣದ (Red Ochre) ವರ್ತುಲ/ದೊಡ್ಡ ಬಿಂದುಗಳಂತಹವು ಅವು. ಇದೊಂದು ಅಪೂರ್ವ ಗ್ರಹಿಕೆಯೇ ಸರಿ. ಇಂತಹ ನೋಟಗಳ ನಡುವೆಯೂ ಈ ಹಿಂದಿನ ಎಲ್ಲ ಪುಸ್ತಕಗಳಂತೆ ಈ ಪುಸ್ತಕದಲ್ಲಿನ ಚಿತ್ರಗಳನ್ನು ವೃತ್ತಿಪರತೆಯಿಂದ ನೋಡಿದ್ದು ಸೌಂದರ್ಯ ಪ್ರಜ್ಞೆಯ ಕೊರತೆಯ ಕಾಡುತ್ತದೆ. ವೃತ್ತಿಪರ-ತಾಂತ್ರಿಕ ಅಧ್ಯಯನಶೀಲತೆ, ಕ್ಷೇತ್ರ ಕಾರ್ಯಗಳ ಕಠಿಣ ಸಾಧ್ಯತೆಗಳ ಸಾಧನೆಗಳ ನಡುವೆಯೂ ಚಿತ್ರಗಳನ್ನು ಕಾಲ, ಬಣ್ಣ, ರೂಪ ಮತ್ತು ಶೈಲಿಗಳ ಅಧ್ಯಯನ ಮಾತ್ರವೇ ಅಲ್ಲದೆ ಆ ಚಿತ್ರಗಳನ್ನು ಸೌಂದರ್ಯಾತ್ಮಕವಾಗಿಯೂ ನೋಡುವ ಹಾಗೆಯೇ ಕ್ಯಾಮರಾದಿಂದ ಶ್ರಮವಹಿಸಿ ಕ್ಲಿಕ್ಕಿಸುವ, ಇತರರಿಗೆ ಅವನ್ನು ತೋರಿಸುವ ಉದ್ದೇಶಗಳೂ ಸೇಪರ್ಡೆಗೊಳ್ಳಬೇಕು. ಶಿಲಾಶ್ರಯಗಳಲ್ಲಿ ಚಿತ್ರಿತ ಇಡೀ ದೃಶ್ಯ/ ಚಿತ್ರಸಂಕುಲಗಳ ನಡುವೆಯೇ ಕೆಲವು ಬಿಡಿ ಬಿಡಿ, ವಿಶಿಷ್ಟ ರೂಪ, ವಿನ್ಯಾಸಗಳ ಚಿತ್ರಗಳನ್ನು ಸುಂದರವಾಗಿ ಕ್ಯಾಮರಾದಲ್ಲಿ ಗ್ರಹಿಸುವ ಪ್ರಯತ್ನಗಳೂ ಸಾಧ್ಯವಾಗಬೇಕು. 
ತೀವ್ರ ಶ್ರಮ ಮತ್ತು ಪ್ರೀತಿಗಳ ಜತೆಜತೆಗೇ ಲೇಖಕರ ಮತ್ತು ಪ್ರಕಾಶಕರ ಮಹತ್ವಾಕಾಂಕ್ಷೆಯೊಂದು ಈ ಪುಸ್ತಕದ ಹಿಂದೆ ಕೆಲಸ ಮಾಡಿದೆ. ನಮ್ಮ ಪರಂಪರೆಯ ಅರಿವು ಇತರರಿಗೂ ಆಗಬೇಕಾಗಿರುವುದರಿಂದ ಇಂತಹ ಪ್ರಕಟಣೆಗಳು ಇಂಗ್ಲಿಷಿನಲ್ಲಿಯೂ ಪ್ರಕಟಗೊಳ್ಳುವುದು ಇಂದಿನ  ಸಂದರ್ಭದಲ್ಲಿ ಅತಿ ಅಗತ್ಯವೇ ಆಗಿದೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆ.ವಿ. ಸುಬ್ರಹ್ಮಣ್ಯಂ