Article

ವ್ಯವಸ್ಥೆಗೆ ಕೀಲೆಣ್ಣೆಯಾಗಿ 'ವಿಮುಕ್ತೆ'

ತೆಲುಗಿನ ಪ್ರಮುಖ ಸ್ತ್ರೀವಾದಿ ಚಿಂತಕಿಯಾದ ಓಲ್ಗಾ ಎಂಬ ಕಾವ್ಯನಾಮದಿಂದ ಖ್ಯಾತಿ ಪಡೆದ ಪಿ.ಲಲಿತಕುಮಾರಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ವಿಮುಕ್ತೆ’ ಕೃತಿಯನ್ನು ಕನ್ನಡಕ್ಕೆ ತಂದ ಅಜಯ್ ವರ್ಮಾ ಅವರ ಅನುವಾದದ ಶ್ರಮ ಸಾರ್ಥಕವಾದುದೆಂಬುದು ನನ್ನ ಭಾವನೆ. ಹೊಸ ಓದುಗರಿಗೆ ಲೇಖಕರೂ ಹಾಗೂ ಕೃತಿ ಅಪರಿಚಿತವಾದರೂ ಕೂಡ ಈ ಕೃತಿ ಓದಿದ ನಂತರ ಇನ್ನು ಮುಂದೆ ನೆನಪಿಡಲೇಬೇಕಾದ ಪ್ರಮುಖ ಲೇಖಕರಲ್ಲಿ ತೆಲುಗಿನ ಓಲ್ಗಾ ಹಾಗೂ ಅನುವಾದಗೈದ ಅಜಯ್ ವರ್ಮಾ ಅಲ್ಲೂರಿ ಅವರ ಯಾವುದೇ ಕೃತಿಗಳು ಬಂದರೂ ಓದುವಾಸೆ ಓದುಗರಲ್ಲಿ ಇಮ್ಮಡಿಗೊಳ್ಳುವುದಂತೂ ಖಂಡಿತ.

'ವಿಮುಕ್ತೆ' ಪೌರಾಣಿಕ ಹಿನ್ನಲೆಯಲ್ಲಿ ರಚಿತವಾದ ಸ್ತ್ರೀ ಸಂವೇದನೆ ಹೊತ್ತ ಕೃತಿಯಾಗಿದೆ‌. ರಾಮಾಯಣ ಕಾಲದಲ್ಲಿ ಅಮುಖ್ಯವಾದ ಹೆಣ್ಣುಪಾತ್ರಗಳನ್ನು ಮಾತನಾಡಿಸುವ ಪ್ರಯತ್ನ ಇಲ್ಲಿದೆ. ಆ ಹೆಣ್ಮನಗಳ ಮನದ ಭಾವನೆಗಳನ್ನು ಕೇಳಿಸುವ, ಆ ಮನಸ್ಸುಗಳ ದುಗುಡು ದುಮ್ಮಾನಗಳನ್ನು ಒಟ್ಟು ಆರು ಕಥೆಗಳಲ್ಲಿ ಬಿತ್ತರಗೊಂಡಿವೆ. ಇಲ್ಲಿ ಸೀತೆ ಪ್ರತಿ ಕಥೆಯ ಜೀವನಾಡಿಯಾದರೂ ಶೂರ್ಪಣಕಿ, ಅಹಲ್ಯೆ, ರೇಣುಕೆ, ಊರ್ಮಿಳೆ, ಮಂಡೋದರಿ ಈ ಎಲ್ಲ ಸ್ತ್ರೀ ಪಾತ್ರಗಳ ಜೊತೆಗೆ ರಾಮನ ಮೂಲಕವೂ ಅನಾದಿಕಾಲದಿಂದಲೂ ಹೆಣ್ಣಿನ ಸುತ್ತಲೂ ಸುತ್ತಿಕೊಂಡಿರುವ ಶೃಂಖಲೆಗಳಿಂದ ವಿಮುಕ್ತಗೊಂಡು ಹೊರಬರುವಂತೆ ಪ್ರತಿ ಕಥೆಗಳಲ್ಲೂ ಬಿತ್ತರವಾದ ಸಂಭಾಷಣೆ ಅಂದಿನ ಕಾಲಘಟ್ಟವಷ್ಟೇ ಅಲ್ಲ ಇಂದಿಗೂ ಸತ್ಯವೆನ್ನುವಂತೆ ಮೂಡಿಬಂದಿದೆ. ಎಲ್ಲ ಕಥೆಗಳೂ ಸೀತೆಯ ಶಾಂತಮನಸ್ಸನ್ನು ಅಬ್ಬರಿಸುವ ಅಲೆಗಳಂತೆ ಮಾಡುತ್ತವೆ ಹಾಗೂ ಪ್ರಕ್ಷುಬ್ದಗೊಂಡ ಮನಸ್ಸನ್ನು ಶಾಂತಗೊಳಿಸುತ್ತ ಬಿಡುಗಡೆಯ ಹಾದಿಯನ್ನು ತೋರಿಸುತ್ತವೆ.

ರಾಮಾಯಣ ಕಾಲಘಟ್ಟವನ್ನು ತೆಗೆದುಕೊಂಡು ನೋಡಿದರೂ ಕೂಡ ಪ್ರತಿಪಾತ್ರಗಳು ಆ ಕಾಲದ ಹೆಣ್ಣುಮನಸ್ಸಿನ ತಳಮಳಗಳನ್ನು ಚಿತ್ರಿಸುತ್ತವೆ. ಸುರಸುಂದರಿಯಾದ ಶೂರ್ಪಣಕಿ ರಾಮನನ್ನು ಇಷ್ಟಪಟ್ಟು ಕಿವಿಮೂಗುಗಳನ್ನು ಕಳೆದುಕೊಂಡು ಕುರೂಪಿಯಾಗಿ ಬದುಕನ್ನು ಸಾಗಿಸಿದಳು. ಅವಳ ಕುರೂಪಿತನದ ಬದುಕಿನ ಕಥನ ಯಾರಾದರೂ ಕೇಳಿದರೇ? ಇಲ್ಲ. ಗೌತಮ ಮಹರ್ಷಿಗಳ ರೂಪತಾಳಿ ಅಹಲ್ಯೆಯನ್ನು ಅನುಭವಿಸಿ ಹೋದ ಇಂದ್ರ ಎಂದಿಗೂ ಕೆಟ್ಟವನಾಗಲೇ ಇಲ್ಲ, ಅಹಲ್ಯೆಯೇ ಗೌತಮಮಹರ್ಷಿಯ ಶಾಪಕ್ಕೆ ಬಲಿಯಾಗಿ ಎಷ್ಟೋ ವರುಷ ಕಲ್ಲಾಗಿ ಹೋದಳಲ್ಲ ಆ ನೋವಿನ ಕಥನವನ್ನೂ ಯಾರೂ ಕೇಳಲಿಲ್ಲ. ಗಂಡ ಮಕ್ಕಳು ಎಂದು ನೆಚ್ಚಿಕೊಂಡ ರೇಣುಕೆ ತನ್ನ ಮನದಲ್ಲಿ ಪರಪುರುಷನನ್ನು ನೆನೆದ ಕಾರಣಕ್ಕೆ ಗಂಡನ ಆಜ್ಞೆ ಹಾಗೂ ಮಗನ ಪಿತೃವಾಕ್ಯ ಪರಿಪಾಲನೆಗೆ ಬಲಿಯಾದಾಗ ಆಕೆಉ ಅಳಲನ್ನು ಕೂಡ ಯಾರೂ ಆಲಿಸಲೇ ಇಲ್ಲ. ಅಣ್ಣನೊಡನೆ ವನವಾಸಕ್ಕೆ ಹೊರಟಿರುವೆ ಎಂಬುದಾಗಲಿ, ಮಡದಿಯ ಅನುಮತಿ ಪಡೆಯದೇ ಹೊರಟುಹೋದನಲ್ಲ ಲಕ್ಷ್ಮಣ ಮರಳಿ ನಿಂತು ತನ್ನ ಮಡದಿ ಊರ್ಮಿಳೆಯ ಮನಸ್ಸನ್ನು ಅರಿತನೇ? ಇಲ್ಲವಲ್ಲ. ಹದಿನಾಲ್ಕು ವರುಷ ಕತ್ತಲಕೋಣೆಯಲ್ಲಿ ಕಳೆದ ಊರ್ಮಿಳೆಯ ಮನದ ಸಂಕಟವನ್ನೂ ಯಾರೂ ಕೇಳಲಿಲ್ಲ. ಹೀಗೆ ಮಾತನಾಡದ ಪಾತ್ರಗಳ ಕಣ್ಣೀರ ಕಥನವನ್ನು ಸೀತೆ ತನ್ನ ಬದುಕಿಗೆ ತಾಳೆಹಾಕಿಕೊಂಡು ನೋಡುತ್ತಾ ಕಣ್ಣೀರು ಹಾಕುತ್ತಲೇ ಎಲ್ಲ ಬಂಧನಗಳಿಂದ ವಿಮುಕ್ತೆಗೊಳ್ಳುತ್ತಾಳೆ.

'ವಿಮುಕ್ತೆ' ಕಥಾ ಸಂಕಲನವಾದರೂ ಅವುಗಳು ಕಥೆಗಳೆಂದು ಏನಿಸುವುದೇ ಇಲ್ಲ. ಒಂದರಿಂದ ಒಂದು ಪಾತ್ರಗಳು ಸೀತೆಯ ಮನಸ್ಸನ್ನು ಮುಕ್ತಗೊಳಿಸಲು ತಮ್ಮದೆಯಾದ ಅನುಭವದ ಕಥನವನ್ನು ಹೇಳುತ್ತಾ ಸಾಗುತ್ತವೆ. ಇದೊಂದು ಕಾದಂಬರಿಯಂತೆಯೇ ಓದಿಸಿಕೊಂಡು ಹೋಗುತ್ತದೆ. ಪ್ರತಿ ಪಾತ್ರಗಳು ತಮ್ಮ ತಮ್ಮ ನೋವುಗಳನ್ನು ಹೇಳುವಾಗಲೆಲ್ಲ ಸೀತೆ ಹನಿಗಣ್ಣಾಗುತ್ತಿದ್ದಳಷ್ಟೇ ಅಲ್ಲ ಓದುಗರಾದ ಪ್ರತಿಯೊಬ್ಬರೂ ಹನಿಗಣ್ಣಾಗುವರು.

ಅನಾದಿಕಾಲದಿಂದಲೂ ಒಂದಿಲ್ಲೊಂದು ಶೋಷಣೆಗೆ ಒಳಗಾಗುತ್ತಲೇ ಬಂದ ಸ್ತ್ರೀಕುಲದ ಸಂಕಟಗಳನ್ನು, ಅನುಭವಿಸಿದ ನೋವುಗಳನ್ನು ನೋವೆಂದು ಭಾವಿಸದೇ ಮುನ್ನಡೆದೆವು. ಆಯಾ ಕಾಲಘಟ್ಟದಲ್ಲಿ ಬದಲಾವಣೆಯ ದಾರಿ ತುಳಿದರೂ ಇಂದಿನ ಕಾಲಘಟ್ಟದಲ್ಲೂ ಬದಲಾವಣೆಯ ಹೊಸದಾರಿ ತುಳಿಯೋಣ ಎನ್ನುವಂತ ದಿಟ್ಟ ನಿಲುವಿನ ವಿಚಾರಧಾರೆಗಳು ಇಷ್ಟವಾದವು. ಎಂದೋ ಬದಲಾಣೆಯ ಹೊಸದಾರಿ ಕಾಣಬೇಕಿದ್ದ ತುಕ್ಕು ಹಿಡಿದ ವ್ಯವಸ್ಥೆಗೆ ಕೀಲೆಣ್ಣೆಯಂತೆ 'ವಿಮುಕ್ತೆ'ಯ ವಿಚಾರಧಾರೆಗಳು ಅತ್ಯವಶ್ಯಕ ಎಂದೆನಿಸುತ್ತದೆ.

ಪ್ರತಿಕಥೆಗಳಲ್ಲೂ ಮಾತನಾಡಿದ ಪಾತ್ರಗಳು ಓದು ಮುಗಿದರೂ ನನ್ನೊಳಗೆ ಗುಂಯ್ ಗುಡುತ್ತಲೇ ಮಾತುಕಥೆಗೆ ಇಳಿದಿವೆ. ಅಷ್ಟೂ ಪಾತ್ರಗಳು ಕಷ್ಟದಲ್ಲಿ ನಲುಗಿದವೆಂದು ಕಂಡರೂ ಅವುಗಳೆಲ್ಲವೂ ಮುಕ್ತ ಸ್ವಾತಂತ್ರ್ಯದ ಸ್ಪಷ್ಟದಾರಿಕಂಡುಕೊಂಡು ನಗುತ್ತಿದ್ದಂತೆ ಗೋಚರಿಸುತ್ತಿವೆ. ಓದಲೇಬೇಕಾದ ಕೃತಿಗಳಲ್ಲಿ 'ವಿಮುಕ್ತೆ' ಇದ್ದರೆ ತಪ್ಪಿಲ್ಲ ಎಂಬುದು ನನ್ನ ಅಭಿಮತ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜು ಹಗ್ಗದ